ಹುಣ್ಣಿಮೆಯ ದಿನ ನಿದ್ದೆ ಕಡಿಮೆ ಅಂತೆ!

– ವಿಜಯಮಹಾಂತೇಶ ಮುಜಗೊಂಡ.

sleep-and-full-moon

ಕೆಲವೊಮ್ಮೆ ನಿದ್ದೆಗೆ ಹಲವಾರು ಅಡಚಣೆಗಳು ಎದುರಾಗುತ್ತವೆ. ಗದ್ದಲ, ಗಾಡಿಗಳ ಸದ್ದು, ಜಗಳಗಳು, ಸಂಗೀತ – ಇವುಗಳು ಮಂದಿಯ ನಿದ್ದೆ ಕಡಿಮೆಯಾಗಲು ಕಾರಣವಾಗುತ್ತವೆ. ಆದರೆ ಸದ್ದು-ಗದ್ದಲ-ಜಗಳ ಮಾಡದ, ಯಾವ ಸಂಗೀತವನ್ನು ನುಡಿಸದ-ಕೇಳಿಸದ ಚಂದ್ರನು ಮಂದಿಯ ನಿದ್ದೆ ಕಡಿಮೆ ಮಾಡಬಲ್ಲ ಎಂಬುದು ಗೊತ್ತೇ? ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಹುಣ್ಣಿಮೆ ದಿನ ನಿದ್ದೆ ಕಮ್ಮಿ ಅಂತೆ! ಹವ್ದು, ಚಂದ್ರ ಪೂರ್ತಿ ಇರುವಾಗ ನಮ್ಮ ನಿದ್ದೆಯ ಹೊತ್ತು ಕಮ್ಮಿ ಎಂದು ಸ್ವೀಡನ್ ನಾಡಿನ ಅರಿಮೆಗಾರರು ಇತ್ತೀಚಿಗೆ ನಡೆಸಿದ ಅರಕೆಯೊಂದರ(research) ಮೂಲಕ ಕಂಡುಕೊಂಡಿದ್ದಾರೆ. ಅಲ್ಲದೇ ಅವರು ನಿದ್ದೆ ಮತ್ತು ತಿಂಗಳ ಸುತ್ತು(lunar cycle) ಹೇಗೆ ಒಂದಕ್ಕೊಂದು ನಂಟು ಹೊಂದಿವೆ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಈ ಅರಕೆ ಕುರಿತು ಕರೆಂಟ್ ಬಯಾಲಜಿ(Current Biology) ಎನ್ನುವ ಅರಿಮೆ ನಾಳ್ಕಡತದಲ್ಲಿ(journal) ಇತ್ತೀಚಿಗೆ ಮೂಡಿಬಂದಿದೆ.

ಈ ಅರಕೆ ನಡೆದದ್ದು ಹೇಗೆ?

ಈ ಅರಕೆಯ ಮುಂದಾಳು ಕ್ರಿಸ್ಟಿಯಾನ್ ಕೇಜೊಗೆನ್(Christian Cajochen) ಹೇಳುವಂತೆ ಸ್ವಿಟ್ಜರ್‍ಲೆಂಡಿನಲ್ಲಿ ಕಡಿಮೆಯೆಂದರೂ ಶೇಕಡ 40ರಶ್ಟು ಮಂದಿ ಹುಣ್ಣಿಮೆಯ ದಿನ ಕಡಿಮೆ ನಿದ್ದೆಯಿಂದ ಬಳಲುತ್ತಾರೆ. ಮತ್ತು ಇದಕ್ಕಾಗಿ ಚಂದ್ರನನ್ನು ದೂರುತ್ತಾರೆ. ಇವರು ಸ್ವಿಟ್ಜಜರ್‍ಲೆಂಡಿನ ಬೇಸೆಲ್ ಕಲಿಕೆಮನೆಯ ಮಾನಸಿಕ ಕಾಯಿಲೆ ಆಸ್ಪತ್ರೆಯಲ್ಲಿ ತಿಳಿವಿಗರಾಗಿದ್ದಾರೆ. ಈ ಕುರಿತ ಅರಕೆಯೊಂದನ್ನು ಇವರು ಜೊತೆಗಾರರೊಡಗೂಡಿ ಮಾಡಿದ್ದಾರೆ.

20 ರಿಂದ 74 ಮಂದಿ ಮಯ್ ಒಳಿತುಳ್ಳ(healthy) 33 ಮಂದಿಯನ್ನು ಈ ಅರಕೆಯಲ್ಲಿ ತೊಡಗಿಸಿಕೊಳ್ಳಲಾಯಿತು. ಅರಕೆಯ ಪಾಲುದಾರರನ್ನು ಅರಕೆಮನೆಯಲ್ಲಿ(laboratory) ಮಲಗಿಸಿ ಅವರ ನಿದ್ದೆಯ ಮೇಲೆ ಪರಿಣಾಮ ಬೀರಬಲ್ಲ ಅಂಶಗಳ ಬಗ್ಗೆ ಅರಕೆ ನಡೆಸಲಾಯಿತು. ಅವರು ಚಂದ್ರನನ್ನು ನೋಡಲಾಗದಂತೆ ಕಿಟಕಿಯಿಲ್ಲದ ಅರಕೆಮನೆಯನ್ನು ಬಳಸಿದ್ದರು. ತೇವ ಮತ್ತು ಬಿಸಿಯಳತೆಯ ಮೇಲೆ ಹಿಡಿತವಿಟ್ಟು ಅವರ ನಿದ್ದೆಯ ಹೊತ್ತು ಒಮ್ಮುವಿಕೆಯನ್ನು(consistency) ಪರಿಶೀಲಿಸಲಾಯಿತು. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಅರಿಮೆಗಾರರು ಸೇರಿದಂತೆ ಅರಕೆಯಲ್ಲಿ ಪಾಲ್ಗೊಂಡವರಿಗೆ ಈ ಅರಕೆಯು, ನಿದ್ದೆಯ ಹೊತ್ತು ಮತ್ತು  ತಿಂಗಳ ಸುತ್ತಿಗೆ ಸಂಬಂದಿಸಿದುದು  ಎಂದು ತಿಳಿದಿರಲಿಲ್ಲವಂತೆ!

ಹುಣ್ಣಿಮೆಯಂದು ಎಂದಿಗಿಂತ 20 ನಿಮಿಶ ಕಡಿಮೆ ನಿದ್ದೆ!

ಅರಿಮೆಗಾರರು ಹೇಳುವಂತೆ ಬೇರೆ ದಿನಗಳಿಗೆ ಹೋಲಿಸಿ ನೋಡಿದರೆ ತುಂಬಿದ ಚಂದ್ರ ಇರುವ ದಿನ ಅಂದರೆ ಹುಣ್ಣಿಮೆಯಂದು ನಿದ್ದೆ 20 ನಿಮಿಶಗಳಶ್ಟು ಕಡಿಮೆ ಆಗುತ್ತದೆ. ಹಾಗೆಯೇ, ನಿದ್ದೆಗೆ ಜಾರಲು ಸಾಮಾನ್ಯವಾಗಿ ತೆಗೆದುಕೊಳ್ಳುವ ಹೊತ್ತಿಗಿಂತಾ  ಸುಮಾರು 5 ನಿಮಿಶ ಹೆಚ್ಚು ಸಮಯ ಹುಣ್ಣಿಮೆಯ ದಿನ ಬೇಕಾಗುತ್ತದೆ. ಗಾಡನಿದ್ದೆ ಸರಾಸರಿ ನೂರಕ್ಕೆ ಮೂವತ್ತರಶ್ಟು ಕಡಿಮೆ ಆಗಿದ್ದು ಈ ಅರಕೆಯ ಇನ್ನೊಂದು ಅಚ್ಚರಿಯ ವಿಶಯ. ನಿದ್ದೆಗೆ ಕಾರಣ ಮೆಲಟನಿನ್(melatonin) ಎನ್ನುವ ಸುರಿವೊಯ್ಯುಕ(harmone). ಇದರ ಮಟ್ಟದಲ್ಲಿ ಆದ ಬದಲಾವಣೆ ನಿದ್ದೆಯ ಮೇಲೆ ಪರಿಣಾಮ ಬೀರಿದ್ದನ್ನು ಅರಿಮೆಗಾರರು ಕಂಡುಕೊಂಡಿದ್ದಾರೆ. ಹುಣ್ಣಿಮೆಯ ದಿನ ಮೆಲಟನಿನ್‍ ಮಟ್ಟ ಕಡಿಮೆಯಾಗುವುದರಿಂದ ನಿದ್ದೆ ಕಡಿಮೆಯಾಯಿತು ಎಂದು ಅರಿಮೆಗಾರರು ಹೇಳುತ್ತಾರೆ.

ಈ ಅರಕೆಯನ್ನು ನಿಜವಾಗಿ ನಿದ್ದೆಯ ಮೇಲೆ ಹುಣ್ಣಿಮೆ ದಿನಗಳ ಪರಿಣಾಮವನ್ನು ತಿಳಿಯಲು ಮಾಡಿದ್ದಲ್ಲ!

ಮನುಶ್ಯನ ಮಿದುಳಿನಲ್ಲಿ ಇರುವ ಗಡಿಯಾರಗಳು ಬೆಳಕಿನ ನೆರವು ಇಲ್ಲದೇ ಹಗಲು-ಇರುಳು ಮತ್ತು ನಿದ್ದೆಯ ಹೊತ್ತನ್ನು ಅರಿಯಬಲ್ಲವು. ಇದನ್ನು ಊಹಿಸಿ ಸುಮಾರು 10 ವರುಶಗಳ ಹಿಂದೆಯೇ ಕೆಜೋಗನ್ ಈ ಅರಕೆಯನ್ನು ಮಾಡಿದ್ದನಂತೆ. ಈ ಗಡಿಯಾರಗಳು ತಿಂಗಳ ಸುತ್ತುಗಳಿಗೆ ಹೇಗೆ ಸಂಬಂದಿಸಿರಬಹುದು ಎಂದು ತಿಳಿಯಲು ಅರಕೆ ನಡೆಸಲಾಗಿತ್ತು. ಅರಕೆ ನಡೆದು 10 ವರುಶಗಳ ನಂತರ, ಹುಣ್ಣಿಮೆ ಮತ್ತು ನಿದ್ದೆಯ ಹೊತ್ತಿನ ನಡುವಿನ ನಂಟಿನ ಕುರಿತು ಹೊಸ ವಿಶಯ ಹೊರಬಂದಿದ್ದು ಸೋಜಿಗವೇ ಸೈ!

ನೀವೂ ಮುಂದಿನ ಹುಣ್ಣಿಮೆಯ ದಿನ ನಿದ್ದೆಗೆ ಅಡ್ಡಿ ಆಗುವುದೇ ಎಂದು ಕಾದು ನೋಡಿ. ನಿಮ್ಮ ನಿದ್ದೆಗೆ ಅಡ್ಡಿಯಾದದ್ದೇ ಆದರೆ ಆಗ ಯಾರನ್ನು ದೂರುವುದು ಎಂದು ನಿಮಗೀಗ ಗೊತ್ತು.

(ಮಾಹಿತಿ ಮತ್ತು ಚಿತ್ರ ಸೆಲೆ: cnn.com, bbc.com, time.com, sleeprate.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: