ಮೊದಲ ಮಳೆ

– ಚೇತನ್ ಪಟೇಲ್.

ಬಿರು ಬಿಸಿಲಿಗೆ ಸೂರ‍್ಯನ ಕಂಡು, ಬೆವರಿ ಒಣಗಿದ ಬಾಯಲ್ಲಿ ಉಗುಳಿ,  ನಿಟ್ಟುಸಿರು ಬಿಟ್ಟು, ಅದೆಂದು ಮಳೆರಾಯ ಬರುವನೋ ಅನ್ನೋ ಕೂಗು ಆತನಿಗೆ ಮುಟ್ಟಿರಬೇಕು. ಬೇಸಿಗೆ ಕಾಲ ಬೆನ್ನು ತಿರುಗಿಸಿ ಮಳೆಗಾಲಕ್ಕೆ ಆಹ್ವಾನಿಸಿದ ಸಮಯ ಅದು. ಎಲ್ಲ ಶಾಲೆಯ ವಿದ್ಯಾರ‍್ತಿಗಳಿಗೆ ಪರೀಕ್ಶೆ ಎಂಬ ಮಹಾಯುದ್ದ ಮುಗಿಸಿ ರಜೆಯೆಂಬ ಸಿಹಿಯ ಸವಿಯುವ ಕಾಲ. ಆದರೆ ಕಾಲೇಜು ವಿದ್ಯಾರ‍್ತಿಗಳಿಗೆ ಸೆಮಿಸ್ಟರ್ ಎಂಬ ಕಲಿಕೆ ವ್ಯವಸ್ತೆಯಿಂದಾಗಿ ಮುಚ್ಚದ ಕಾಲೇಜು ಬಾಗಿಲುಗಳು.

ಒಬ್ಬ ಯುವಕ ತನ್ನ ಪದವಿ ಪರೀಕ್ಶೆಯ ಯಾವುದೊ ಒಂದು ಮುಕ್ಯ ವಿಶಯದ ಪರೀಕ್ಶೆ ಮುಗಿಸಿ ಬಸ್ ನಿಲ್ದಾಣದತ್ತ ಸಾಗುತ್ತಾನೆ. ಅದೇ ಸಮಯಕ್ಕೆ ಒಗ್ಗೂಡಿದ ಕಾರ‍್ಮೋಡಗಳು ಕ್ಶಣಾರ‍್ದದಲ್ಲಿ ಕರಗಿ ನೀರಾಗಿ ಸುರಿಯಲಾರಂಬಿಸಿದವು. ನಿಲ್ದಾಣ ಸ್ವಲ್ಪ ದೂರವಿತ್ತು ಅಶ್ಟೇ, ಆದರೂ ಈ ಮಳೆಗಿಂತ ಚುರುಕಾಗಿ ಓಡಿ ನಿಲ್ದಾಣ ಸೇರುವ ಪ್ರಯತ್ನ ವ್ಯರ‍್ತವೆಂದು ತಿಳಿದು ಪಕ್ಕದಲ್ಲಿಯೇ ಇದ್ದ ಒಂದು ಟೀ ಅಂಗಡಿಯ ಬಳಿ ಬಂದುನಿಂತ. ಅದೇ ಸಮಯಕ್ಕೆ ಅಂಗಡಿ ಮುಂದೆ ಹತ್ತಾರು ಮಂದಿ ಜಮಾಯಿಸಿದರು. ತನ್ನ ಪಾಲಿಗೆ ಎಶ್ಟು ಆಶ್ರಯ ಬೇಕು ಅಶ್ಟು ಅನುಕೂಲವಾಗಿತ್ತು. ಅತಿಯಾದ ಮಳೆ ನಿಲ್ಲುವ ಯಾವ ಸೂಚನೆಯೂ ಇರಲಿಲ್ಲ. ಆತ ನಿಂತ ಸ್ವಲ್ಪ ದೂರದಲ್ಲಿ ಯಾರೋ ಓಡಿ ಬಂದು ನಿಂತ ಹಾಗೆ ಬಾಸವಾಯಿತು. ಜೋರು ಮಳೆಯಿಂದಾಗಿ ಅಸ್ಪಶ್ಟ ರೂಪ, ಯಾರೆಂಬುದು ತಿಳಿಯಲಿಲ್ಲ. ಮನಸಿನ ಕುತೂಹಲಕೆ ಪೂರ‍್ಣವಿರಾಮ ಅಶ್ಟು ಸುಲಬದ ಮಾತಲ್ಲ, ಕುತೂಹಲ ಮನುಶ್ಯನನ್ನು ಯಾವ ಮಟ್ಟಕ್ಕಾದರೂ ಕರೆದೊಯ್ಯಬಹುದು. ಯುವಕ ಕಾಣದೆ ಎದುರು ನಿಂತ ವ್ಯಕ್ತಿಯತ್ತ ನೋಡತೊಡಗಿದ. ಮೊದಲ ಮಳೆಗೆ ಮೈನೆನೆದು, ಯಾವುದೊ ಹರುಶ ಅರಸಿ ಬಂತು ಎನ್ನುವಂತೆ ಮುಗುಳ್ನಗುತ್ತ ತನ್ನ ಕೇಶರಾಶಿಯೊಂದಿಗೆ ನಿಂತಿದ್ದಳು ಯುವತಿ. ಈತ ಆ ದ್ರುಶ್ಯಗಳನ್ನು ನೋಡುತ್ತ ಮನಸಿನಲ್ಲೇ ಹಾಡತೊಡಗಿದ… “ಕಾಣದ ಕಡಲಿಗೆ ಹಂಬಲಿಸಿದೆ ಮನ…”

ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಆಕೆಯ ಚಹರೆಯನ್ನು ಸಂಪೂರ‍್ಣವಾಗಿ ನೋಡುವ ಹಂಬಲ ಹೊತ್ತು, ಮನಸಿನಲ್ಲಿಯೇ ನಗುತ್ತಾ ನಿಂತ. ತನ್ನ ಬದುಕಿನಲ್ಲಿ ಹಲವಾರು ಯುವತಿಯರನ್ನು ನೋಡಿದ್ದರೂ ಆ ಕ್ಶಣದಲ್ಲಾದ ಬದಲಾವಣೆಯಿಂದಾಗಿ ಕಳೆದುಹೋಗಿದ್ದು ಸತ್ಯ. ಅಕ್ಕ ಪಕ್ಕದಲ್ಲಿ ಇದ್ದವರು ಹೊರಡಲು ಸಿದ್ದರಾಗುತ್ತಿದ್ದಂತೆಯೇ ಇವನೂ ಅಲ್ಲಿಂದ ಕಾಲ್ಕಿತ್ತ, ಅಂದಾಜು 100 ಮೀಟರ್ ದೂರ ಇರಬೇಕು ಆಕೆ ನಿಂತ ಸ್ತಳ. ದುರದ್ರುಶ್ಟ, ಈತ ಅರ‍್ದ ದೂರ ಕ್ರಮಿಸುವಲ್ಲಿ ಅವಳಿದ್ದ ಜಾಗದ ಸಮೀಪ ಬಸ್ ಬಂದು ನಿಂತಿತು. ಅಶ್ಟರಲ್ಲಿ ಸ್ನೇಹಿತ ಸಿಕ್ಕು ಜೊತೆಯಾದ. ಬಾಲ್ಯದ ಸ್ನೇಹಿತನ ಕಂಡು ನಿಂತ. ಆದರೆ ಮನಸ್ಸಿನ ಗಮನ, ಹೊಸಬಾವನೆ ಹುಟ್ಟುಹಾಕಿದ ಆ ಕನ್ಯೆಯ ಕಡೆ…

ಈ ಕುಶಲೋಪರಿ ಮುಗಿಸುವಶ್ಟರಲ್ಲಿ ಬಸ್ಸು ಹೊರಟು ಹೋಯಿತು. ಕೈ ಕೈ ಮಿಲಾಯಿಸುತ್ತ “ಮತ್ತೆ ಸಿಗುವ ಗೆಳೆಯ, ತಡವಾಯಿತು. ಬೈ!” ಅಂತ ಹೇಳಿ ವಿರುದ್ದ ದಿಕ್ಕಿನಲ್ಲಿ ತಮ್ಮ ತಮ್ಮ ಪ್ರಯಾಣ ಆರಂಬಿಸಿದರು. ಈತ ಬಸ್ ನಿಲ್ದಾಣಕ್ಕೆ ಹೋಗಿ ನಿಂತ. ಕಿವಿಯಲ್ಲಿ ಬರಿ ಅದೇ ಗೆಜ್ಜೆಯ ಸದ್ದು, ಕಾಲಿಗೆ ಕಟ್ಟಿದ ಗೆಜ್ಜೆಯನಾದ ಗುಣುಗುತ್ತಿತ್ತು. ಅತಿಯಾಸೆ ಒಂದೇ, ಹತ್ತಿರದಿಂದ ಆಕೆಯ ಮುಕ ನೋಡಬೇಕಾಗಿತ್ತು. ಈ ಕಡೆ ಬರುತ್ತಾಳೋ? ಇಲ್ಲವೋ? ಆಕೆಯ ಹೆಸರೇನೋ? ಏನು ಮಾಡುತ್ತಿರುವಳೋ…? ಹತ್ತು ಹಲವು ಪ್ರಶ್ನೆಗಳು, ಉತ್ತರ ಸಿಗದೇ ಸಂತೋಶ ಮಾಯವಾಗಿ ಮೌನ ಆವರಿಸಿತು.

ಮೂರ‍್ನಾಲ್ಕು ದಿನಗಳ ನಂತರ ಯಾವುದೊ ಕೆಲಸಕ್ಕೆ ತಾ ಓದುತಿದ್ದ ಕಾಲೇಜಿಗೆ ಬಂದಿರುತ್ತಾನೆ, ಬಂದ ಕೆಲಸ ಮುಗಿಸಿ ವಾಪಸ್ ತೆರಳುವಾಗ ಮತ್ತೆ ಅದೇ ಮಳೆ, ಮುಂಗಾರು ಮಳೆ, ಒಗ್ಗೂಡಿದ ಕಾರ‍್ಮೋಡಗಳು, ಅತಿಯಾದ ಗಾಳಿಯ ನರ‍್ತನ. ಎಲ್ಲರ ಮನದಲಿ ಆತಂಕ ಎದುರಾದರೆ ಈತನ ಮನ, ಕಣ್ಗಳಲ್ಲಿ ಯಾವುದೋ ಸಂತಸ ಮನೆ ಮಾಡಿತು. ಕಳೆದ ಆ ದಿನ ನೆನೆದು ಹತ್ತಿರವಿದ್ದ ಟೀ ಅಂಗಡಿ ಬಳಿ ನಿಲ್ಲದೆ ಓಡಿ ಬಸ್ ನಿಲ್ದಾಣ ಮುಟ್ಟಿದ. ಅಲ್ಲಿಯೇ ನಿಂತಿದ್ದ ಕೆಲವು ಹುಡುಗಿಯರ ಮುಕ ಪರಿಚಯ ಕಣ್ಣಲೇ ಮಾಡುತ್ತ ಇರುವಾಗ ಆತನ ಕಣ್ಣಿಗೆ ಹುಡುಕುತಿದ್ದ ಆಕೆ ಕಾಣಲಿಲ್ಲ. ಬಿಸಿ ಆರಿದ ತಣ್ಣೀರಿನಂತೆ ತಣ್ಣಗಾಗಿ ಪಕ್ಕದ ನಿಲ್ದಾಣದ ಗೋಡೆ ಒರಗಿ ನಿಂತ. ಆಕೆಯ ಬರುವಿಕೆಗೆ ಕಾಯುತಿದ್ದ… ಕಣ್ಣುಗಳಲ್ಲಿ ಸ್ವಲ್ಪ ಒದ್ದೆಯಾಗಿದ್ದು ಮಳೆಹನಿಯ ನೀರಿನಿಂದಲ್ಲ…

ತೀರಾ ಬಾವುಕತೆ ಮುಗಿಲ ಮುಟ್ಟಿದ ಮೌನ, ಏನೋ ಕಳೆದುಕೊಂಡಂತೆ ಜಗತ್ತಿಗೆ ಬಾಸವಾಗುತಿತ್ತು ಈತನ ಮುಕ. ಮೇಲಿಂದ ಮರದ ಎಲೆ ಸೋಕಿಸಿ ಆತನ ತಲೆ ಮೇಲೆ ಹೂಗಳಂತೆ ಬೀಳುತಿದ್ದ ಹನಿಗಳು, ನಿಂತಲ್ಲೆ ಕನಸು ಕಾಣುತ್ತ ಕಲ್ಲಾಗಿ ನಿಂತ. ಕತ್ತಲೆಯಾಗಿದ್ದ ವಾತಾವರಣ ತಿಳಿಯಾಯಿತು. ಬಿಳಿ ಮೋಡದ ಜೊತೆಗೆ ಕಂಗೊಳಿಸುವ ಸೂರ‍್ಯ ಮತ್ತೆ ಹಾಜರಿಯಾದ.

ಯಾವುದೋ ಬಸ್ಸು ಬರುವುದನ್ನು ನೋಡಿ, ಬೇಗ ಹತ್ತಿ ಕಿಟಕಿ ಪಕ್ಕ ಸೀಟು ಗಿಟ್ಟಿಸುವ ಆಸೆ ಇಟ್ಟುಕೊಂಡು ತಯಾರಾಗಿ ನಿಂತ. ಕಿವಿಗೆ ಯಾವುದೊ ಪರಿಚಿತ ಗೆಜ್ಜೆಯ ಸದ್ದು ಕೇಳಿಸಿತು. ಪುಳಕಿತನಾದ, ಮಳೆಬಿಲ್ಲ ಕಂಡ ಮುಗಿಲಿನಂತೆ ಮುಕ ಅರಳಿ ಹಿಂತಿರುಗಿ ನೋಡುತ್ತಾನೆ. ಒಬ್ಬ ಯುವತಿ ಈತ ನಿಂತ ಕಡೆಗೇ ಓಡಿಬರುತ್ತಿದ್ದಾಳೆ, ಮೂಕವಿಸ್ಮಿತನಾದ. ಕಣ್ಮುಚ್ಚದೆ ಆಕೆಯ ಕಡೆಗೆ ನೋಡುತ್ತಾ ನಿಂತ. ದೂರದಲ್ಲಿದ್ದ ಬಸ್ಸು ಸನಿಹ ಬಂದಾಯಿತು, ಆಕೆ ಕೂಡಲೇ ಮುಂದಿನ ಬಾಗಿಲಿಂದ ಹತ್ತಿಕೊಂಡಳು . ತಕ್ಶಣ ಜಾಗ್ರುತನಾಗಿ ಹಿಂದಿನ ಬಾಗ್ಲಿಂದ ಅದೇ ಬಸ್ ಹತ್ತಿಕೊಂಡ.

ಕಾಡುಗತ್ತಲು ಕಳೆವ ಜೊತೆಯವಳು ಸಿಕ್ಕಂತೆ, ಕಿಕ್ಕಿರಿದು ತುಂಬಿದ ಬಸಿನಲ್ಲೂ ದೂರದರ‍್ಶಕದಿಂದ ಚಂದ್ರನನ್ನು ನೋಡುವ ಹಾಗೆ, ಕಣ್ಣರಳಿಸಿ ಆಕೆಯನ್ನು ಹುಡುಕುವಶ್ಟರಲ್ಲಿ ಕಂಡಕ್ಟರ್ ಬಂದು “ಟಿಕೆಟ್…” ಎಂಬ ಶಬ್ದ ಕಿವಿಗೆ ಬಿತ್ತು. ಜೇಬಿನಿಂದ 20 ರೂ ತೆಗೆದು ತನ್ನ ಊರಿನ ಹೆಸರೇಳಿದ, “ರೀ ಸ್ವಾಮಿ, ವಿದ್ಯಾರ‍್ತಿತರ ಕಾಣ್ತೀರಾ ಬೋರ‍್ಡ್ ನೋಡಿ ಬಸ್ಸು ಹತ್ತಬೇಕು. ಇದು ಆ ಕಡೆ ಹೋಗೋಲ್ಲ, ಬೇಗ ಕೆಳಗೆ ಇಳೀರಿ” ಎಂದ ಕಂಡಕ್ಟರ್ ಬಸ್ಸು ನಿಲ್ಲಿಸುವಂತೆ ಡ್ರೈವರ್ ಗೆ ಹೇಳ್ತಾನೆ.

ಮುಗುಳ್ನಗುತ್ತ ಕೆಳಗಿಳಿದು ಮತ್ತೆ ಗೆಜ್ಜೆ ಸದ್ದು ಯಾವ ಕಡೆಯಿಂದ ಬರುತ್ತದೋ ಅಂದುಕೊಂಡು ಮನೆಗೆ ಹೊರಟ… ಕುಶಿಯ ನೆನಪುಗಳ ಬುತ್ತಿಯೊಂದಿಗೆ…

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: