ನಿಮ್ಮ ಮೆದುಳಿನ ಬಗ್ಗೆ ನಿಮಗೆಶ್ಟು ಗೊತ್ತು?

– ಕೆ.ವಿ.ಶಶಿದರ.

ಪ್ರಾಣಿಗಳೆಲ್ಲೆಲ್ಲಾ ಮಾನವ ಅತಿ ಬುದ್ದಿವಂತ ಪ್ರಾಣಿ. ಪ್ರಾಣಿಯಿಂದ ಮನುಶ್ಯನನ್ನು ಬೇರ‍್ಪಡಿಸುವುದು ಅವನಲ್ಲಿ ಹುದುಗಿರುವ ಆಲೋಚನಾ ಶಕ್ತಿ. ಆಲೋಚಿಸುವ ಹಾಗೂ ತಿಳುವಳಿಕೆಯುಳ್ಳ ಪ್ರಾಣಿಯಾದ್ದರಿಂದ ಮಾನವ ಬೇರೆಲ್ಲಾ ಪ್ರಾಣಿಗಳಿಗಿಂತ ತೀರ ಬಿನ್ನ. ಇದಕ್ಕೆಲ್ಲಾ ಮೂಲ ಮೆದುಳು.

ಮೆದುಳಿನಲ್ಲಿ 100 ಬಿಲಿಯನ್‍ಗೂ ಹೆಚ್ಚು ನರಕೋಶಗಳಿವೆ. ಸಾಮಾನ್ಯ ಮೆದುಳು ದಿನವೊಂದಕ್ಕೆ 70,000ಕ್ಕೂ ಮಿಗಿಲಾದ ಆಲೋಚನೆಗಳಿಗೆ ಹುಟ್ಟನ್ನು ನೀಡುತ್ತದೆ! ಲಕ್ಶಾಂತರ ನೆನಪುಗಳ ಸಂಗ್ರಹಾಗಾರ. ಅನುಬವಗಳನ್ನು ಗ್ರಹಿಸುವುದು, ದ್ರುಶ್ಟಿಕೋನಗಳನ್ನು ಕಾರ‍್ಯರೂಪಕ್ಕೆ ತರಲು ಇಂಬುಕೊಡುವುದು ಇದರ ಪ್ರಮುಕ ಕೆಲಸ. ಮೆದುಳಿನ ಬಗ್ಗೆ ಇಶ್ಟೆಲ್ಲಾ ವಿಚಾರಗಳನ್ನು ತಿಳಿದಿದ್ದರೂ, ನಾವು ಅರಿತಿರುವುದು ಮೆದುಳಿನ ಮೇಲ್ಮಯ್ ಪದರಿನಲ್ಲಿ ಸಣ್ಣ ತುಣಕಶ್ಟು ಮಾತ್ರ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಸಂಶೋದನೆಗಳನ್ನು ಗಮನಿಸಿದರೆ ಮೆದುಳಿನ ಅತ್ಯದ್ಬುತ ಶಕ್ತಿ ಹಾಗೂ ಸಂಕೀರ‍್ಣತೆಯ ಅಗಾದತೆ ಅರಿವಾಗುತ್ತದೆ.

ನರಗಳಿಂದ ಮೆದುಳಿಗೆ ತಲುಪಿಸುವ ಮತ್ತು ಮೆದುಳಿನಿಂದ ದೇಹದ ಇತರೆ ಬಾಗಗಳಿಗೆ ಬರುವ ವಿಚಾರಗಳು ಪ್ರತಿ ಗಂಟೆಗೆ 170 ಮೈಲಿ ವೇಗವಾಗಿ ಸಂಚರಿಸುತ್ತವೆ

ಕಾಲಿನ ಅಡಿಗೇನಾದರು ಆದರೆ ಕ್ಶಣ ಮಾತ್ರದಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿರುತ್ತೀವಿ. ಎಂದಾದರು ಇಶ್ಟು ಬೇಗನೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಹೇಗೆ ಸಾದ್ಯ ಎಂದು ಚಿಂತಿಸಿದ್ದೀರಾ? ಅತಿ ಹೆಚ್ಚು ಅಶ್ವಶಕ್ತಿಯನ್ನು ಹೊಂದಿರುವ ಲಕ್ಜುರಿ ಸ್ಪೋರ‍್ಟ್ಸ್ ಕಾರಿನ ವೇಗದಶ್ಟೇ ವೇಗವಾಗಿ ಪ್ರತಿಕ್ರಿಯೆ ನೀಡಲು ಸಾದ್ಯವಾಗಿರುವುದಕ್ಕೆ ಮೂಲ ಕಾರಣ ಮೆದುಳು. ಇದೇ ಅದರ ವಿಶೇಶ ಗುಣ.

ರಕ್ತಕ್ಕೆ ಸೇರುವ ಆಮ್ಲಜನಕದಲ್ಲಿ 20% ಅನ್ನು ಮೆದುಳೇ ಉಪಯೋಗಿಸಿಕೊಳ್ಳುತ್ತದೆ

ಮಾನವನ ದೇಹದ ತೂಕಕ್ಕೆ ಹೋಲಿಸಿದಲ್ಲಿ ಮೆದುಳಿನ ತೂಕ ನಮ್ಮ ತೂಕದ 2% ಮಾತ್ರ. ಆದರೂ ದೇಹದ ಯಾವುದೇ ಅಂಗಾಂಗಕ್ಕಿಂತ ಹೆಚ್ಚು ಆಮ್ಲಜನಕ ಮೆದುಳಿಗೆ ಬೇಕು. ಆಮ್ಲಜನಕದ ಸೇವನೆ ಕಡಿಮೆಯಾದಲ್ಲಿ ಮೊದಲ ಹೊಡೆತ ಮೆದುಳಿಗೆ. ಆದ್ದರಿಂದ ಮೆದುಳನ್ನು ಸುಸ್ತಿತಿಯಲ್ಲಿಡಲು ಹೆಚ್ಚು ದೀರ‍್ಗವಾಗಿ ಉಸಿರಾಡಿ ಮತ್ತು ಮೆದುಳನ್ನು ಆಮ್ಲಜನಕ ತುಂಬಿರುವ ಅಣುಕೋಶದಲ್ಲಿ ಕುಶಿಯಾಗಿ ಈಜಾಡಲು ಸಹಕರಿಸಿ!

ಎಚ್ಚರದ ಸಮಯಕ್ಕಿಂತ ನಿದ್ರಾವಸ್ತೆಯಲ್ಲಿ ಮೆದುಳಿನ ಕ್ರಿಯಾಶೀಲತೆ ಹೆಚ್ಚು

ತರ‍್ಕ ಬದ್ದವಾಗಿ ಚಿಂತಿಸಿದಲ್ಲಿ ಹಗಲಿನ ಸಮಯದಲ್ಲಿ ಅಂದರೆ ಎಚ್ಚರವಾಗಿದ್ದಾಗ ಮೆದುಳು ಒಂದು ಕ್ಶಣವೂ ಸುಮ್ಮನಿರದೆ ಸದಾ ಕಾಲ ಒಂದಲ್ಲಾ ಒಂದು ವಿಚಾರವಾಗಿ ಚಿಂತಿಸುತ್ತಿರುತ್ತದೆ. ಇದಕ್ಕೆಲ್ಲಾ ಮೆದುಳಿನ ಶಕ್ತಿ ಸಾಕಶ್ಟು ವ್ಯಯವಾಗುತ್ತದೆ. ನಿದ್ರಾವಸ್ತೆಯಲ್ಲಿ ಚಿಂತನೆ ಕಡಿಮೆಯಿರುವುದರಿಂದ ವ್ಯಯಿಸುವ ಶಕ್ತಿ ಕೂಡ ಕಡಿಮೆ ಎಂಬುದು ಸಾಮಾನ್ಯ ಅಬಿಪ್ರಾಯ. ಆದರೆ ಮೆದುಳಿನಲ್ಲಾಗುವುದು ಇದರ ವ್ಯತಿರಿಕ್ತ ಕ್ರಿಯೆ. ಮಾನವನ ದೇಹ ನಿದ್ರಾವಸ್ತೆಗೆ ಜಾರಿದಾಗ ಮೆದುಳು ಜಾಗ್ರತಾವಸ್ತೆಗೆ ಬರುತ್ತದೆ. ಇದು ಯಾಕಾಗಿ ಎಂಬ ಸರಿಯಾದ ಉತ್ತರಕ್ಕಾಗಿ ವಿಜ್ನಾನಿಗಳು ಇನ್ನೂ ಶ್ರಮಿಸುತ್ತಿದ್ದಾರೆ.

ಮಾನವನ ಮೆದುಳಿನಲ್ಲಿರುವ ಅಣುಕೋಶ ಎನ್‍ಸೈಕ್ಲೋಪಿಡಿಯಾ ಬ್ರಿಟಾನಿಕಾದಲ್ಲಿನ ವಿಶಯಕ್ಕಿಂತ ಹಲವಾರು ಪಟ್ಟು ಹೆಚ್ಚು ವಿಶಯವನ್ನು ಸಂಗ್ರಹಿಡಬಲ್ಲುದು

ಮಾನವನ ಮೆದುಳಿನಲ್ಲಿ ಸಂಗಹ್ರವಾಗುವ ವಿಶಯದ ಗಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಗಣಕಯಂತ್ರದ ಬಾಶೆಯಲ್ಲಿ ಅದನ್ನು ಅಳೆಯುವುದಾದರೆ ಮೆದುಳಿನ ವಿಶಯ ಸಂಗ್ರಹಣಾ ಸಾಮರ‍್ತ್ಯ 3 ರಿಂದ 1000 ಟೆರಾಬೈಟ್. ಇದರ ಅಗಾದತೆಯನ್ನು ಹೀಗೆ ಹೇಳಬಹುದು. ಬ್ರಿಟನ್ನಿನ ನ್ಯಾಶನಲ್ ಆರ‍್ಕೈನಲ್ಲಿರುವ 900 ವರ‍್ಶಗಳ ವಿಸ್ತ್ರುತ ಇತಿಹಾಸಕ್ಕೆ ಅವಶ್ಯವಿರುವುದು ಕೇವಲ 70 ಟೆರಾಬೈಟ್‍ಗಳು ಮಾತ್ರ ಎಂದಲ್ಲಿ ಮೆದುಳಿನ ಅಗಾದತೆಯ ಚಿತ್ರಣ ಕಲ್ಪಿಸಿಕೊಳ್ಳಬಹುದು.

ಐಕ್ಯು(IQ) ಹೆಚ್ಚಿದ್ದವರು ಹೆಚ್ಚು ಕನಸನ್ನು ನೆನಪಿಟ್ಟುಕೊಳ್ಳುತ್ತಾರೆ

ಕಂಡ ಕನಸನ್ನು ನೆನಪಿನಲ್ಲಿ ಇಟ್ಟುಕೊಳ್ಳುವವರ ಐಕ್ಯು ಹೆಚ್ಚು. ಈ ವಿಚಾರ ನಿಜವಾದರೂ ಸಹ ಕನಸ ಕಾಣದಿದ್ದರೆ, ಕಂಡ ಕನಸು ನೆನಪಿಂದ ಜಾರಿದರೆ ಐಕ್ಯು ಕಡಿಮೆಯೆಂದು ಕೊರಗದಿರಿ. ಇದಕ್ಕೆ ಮೂಲ ಕಾರಣ ನಿದ್ರೆಯಲ್ಲಿ ಕಾಣುವ ಕನಸು ಬಹಳ ದೊಡ್ಡದೆನಿಸಿದರೂ ನಿಜ ಸಮಯದಲ್ಲಿ 2-3 ಸೆಕೆಂಡುಗಳಶ್ಟು ಮಾತ್ರ ಇರುತ್ತದೆ. ಅದ್ದರಿಂದ ನೆನಪಿನಲ್ಲಿ ಉಳಿಯುವುದು ಕಡಿಮೆ.

ಮೆದುಳಿನಲ್ಲಿರುವ ನ್ಯುರಾನ್‍ಗಳು ತಮ್ಮ ಬದುಕಿನುದ್ದಕ್ಕೂ ಬೆಳೆಯುತ್ತಿರುತ್ತವೆ

ಬಹಳ ವರ‍್ಶಗಳವರೆಗೂ ವಿಜ್ನಾನಿಗಳು ಮತ್ತು ಡಾಕ್ಟರ್‍ಗಳು ಮೆದುಳು ಮತ್ತು ನ್ಯುರಾನ್ ಜೀವಕೋಶಗಳು ಬೆಳೆಯುವುದಿಲ್ಲ ಅತವಾ ಪುನರುತ್ಪಾದನೆ ಆಗುವುದಿಲ್ಲವೆಂದೇ ತಿಳಿದಿದ್ದರು. ಆದರೆ ನ್ಯುರಾನ್‍ಗಳು ಜೀವನ ಪೂರ‍್ತ ನಿರಂತರವಾಗಿ ಬೆಳೆಯುತ್ತಿರುತ್ತೆ. ದೇಹದ ಇತರೆ ಅಂಗಾಂಗಗಳಲ್ಲಿನ ಜೀವಕೋಶಗಳಿಗೆ ಹೋಲಿಸಿದಲ್ಲಿ ಇದು ತೀರ ಬಿನ್ನ. ಇದು ಮೆದುಳಿನ ಅದ್ಯಯನಕ್ಕೆ ಹಾಗೂ ತಿಳುವಳಿಕೆಗೆ ಹೊಸ ಆಯಾಮವನ್ನೇ ಸ್ರುಶ್ಟಿಸಿದೆ.

ನ್ಯುರಾನ್‍ಗಳಿಂದ ಹೋರಹೋಗುವ ಮಾಹಿತಿಯು ಬೇರೆ ಬೇರೆ ವೇಗದಲ್ಲಿ ಹೋಗುತ್ತದೆ

ದೇಹದಲ್ಲಿರುವ ಎಲ್ಲಾ ನ್ಯುರಾನ್‍ಗಳು ಒಂದೇ ರೀತಿಯಲ್ಲಿಲ್ಲ. ಹಲವು ಬಗೆಯ ನ್ಯುರಾನ್‍ಗಳು ದೇಹದಲ್ಲಿದೆ. ಮೆದುಳಿನಿಂದ ಇವುಗಳಿಗೆ ತಲುಪುವ ಮಾಹಿತಿಯ ವಿವಿದ ವೇಗದಲ್ಲಿ ಸಂಚರಿಸುತ್ತದೆ. ಅಂದರೆ ಅದರ ವೇಗ 0.5 ಮೀಟರ‍್/ಸೆಕೆಂಡ್‍ನಿಂದ 120 ಮೀಟರ‍್/ ಸೆಕೆಂಡ್‍ವರೆಗೂ ಬದಲಾಗುತ್ತದೆ.

ಮೆದುಳಿಗೆ ನೋವಿನ ಆನುಬವ ಆಗುವುದಿಲ್ಲ!

ದೇಹದ ಯಾವುದೇ ಬಾಗಕ್ಕೆ ಗಾಯವಾದರೂ ನೋವು ಅಲ್ಲಿಂದ ನೇರವಾಗಿ ಮೆದುಳಿಗೆ ಹೋಗುತ್ತದೆ. ಆದರೆ ಮೆದುಳಿಗಾದ ನೋವನ್ನು ಗ್ರಹಿಸುವ ಜೀವಕೋಶಗಳಿಲ್ಲ. ಅದ್ದರಿಂದ ಮೆದುಳು ನೋವನ್ನು ಅನುಬವಿಸುವುದಿಲ್ಲ. ಹಾಗಂದಲ್ಲಿ ತಲೆನೋವು ಬರುವುದಿಲ್ಲವೆಂದೆಲ್ಲಾ. ಬಹಳಶ್ಟು ಜೀವಕೋಶಗಳಿಂದ ನರಗಳಿಂದ ಹಾಗೂ ರಕ್ತನಾಳಗಳಿಂದ ಮೆದುಳು ಸುತ್ತುವರೆದಿದೆ. ಇವುಗಳಲ್ಲಿ ಬಹಳಶ್ಟಕ್ಕೆ ನೋವನ್ನು ಗ್ರಹಿಸುವ ಶಕ್ತಿ ಇದೆ. ಹಾಗಾಗಿ ಬಯಂಕರ ತಲೆ ನೋವಿನ ಸಾದ್ಯತೆ ಇದೆ.

ಮೆದುಳಿನ 80% ಪಾಲು ನೀರೆಂದರೆ ನಂಬುತ್ತೀರಾ?

ಪೋಟೋಗ್ರಾಪ್‍ಗಳಲ್ಲಿ ಕಂಡಂತೆ ಮೆದುಳು ಗಟ್ಟಿಯಾದ ಬೂದು ಬಣ್ಣದ ಮುದ್ದೆಯಲ್ಲ. ಬದುಕಿರುವ ಮೆದುಳು ಹಸಿಹಸಿಯಾದ ತೆಳು ಗುಲಾಬಿ ಬಣ್ಣದ ಲೋಳೆಯಂತಹ ಅಂಗ. ರಕ್ತದಿಂದಾಗಿ ಗುಲಾಬಿ ಬಣ್ಣ. ರಕ್ತವನ್ನು ತೆಗೆದರೆ ಮೆದುಳು ಬಿಳಿ ಮತ್ತು ಕಂದು ಬಣ್ಣದ ಮಿಶ್ರಣ. ಬಿಳಿ ಬಣ್ಣ ಕೊಬ್ಬಿನಂಶ. ಕಂದು ಬಣ್ಣ ನರಗಳ ಜೀವಕೋಶ. ಮೆದುಳಿನಲ್ಲಿ 80% ನೀರಿನ ಅಂಶ ಇದೆ.

(ಮಾಹಿತಿ ಸೆಲೆ: knowledgecharger )
(ಚಿತ್ರ ಸೆಲೆ: susanwhitcomb.com, listosaur.com, 25doctors.com, wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks