ಮ್ಯೂನಿಕ್ ನ ಸುತ್ತ ಒಂದು ಸುತ್ತು

– ಜಯತೀರ‍್ತ ನಾಡಗವ್ಡ.

ಮ್ಯೂನಿಕ್ ಜರ‍್ಮನಿಯ ದೊಡ್ಡ ಊರುಗಳಲ್ಲೊಂದು. ತೆಂಕಣ ಜರ‍್ಮನಿಯಲ್ಲಿ ಬವೇರಿಯಾ(Baveria) ಹೆಸರಿನ ನಾಡೊಂದಿದೆ. ಬವೇರಿಯಾ ನಾಡಿನ ನೆಲೆವೀಡು ಮ್ಯೂನಿಕ್. ಸಾವಿರಾರು ವರುಶಗಳ ಹಿನ್ನೆಲೆ ಹೊಂದಿರುವ ಮ್ಯೂನಿಕ್ , ಜಗತ್ತಿಗೆ ದೊಡ್ಡ ದೊಡ್ಡ ವಿಜ್ನಾನಿಗಳು, ಅರಕೆಗಾರರನ್ನು, ಹೆಸರಾಂತ ಆಟಗಾರರನ್ನು ಹಾಗೂ ಹೆಸರುವಾಸಿ ಕಲಿಕೆಮನೆಗಳನ್ನು ನೀಡಿದ ಊರು. ಬಿ.ಎಮ್‌.ಡಬ್ಲ್ಯೂ.(BMW), ಸೀಮೆನ್ಸ್(Siemens), ಅಲಾಯನ್ಜ್(Allianz) ಮುಂತಾದ ಕೂಟಗಳು ಇಲ್ಲಿ ಹುಟ್ಟಿ ಬೆಳೆದು ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿವೆ. ಮ್ಯೂನಿಕ್ ಊರಿಗೆ ಜರ‍್ಮನಿಯ ನುಡಿಯಲ್ಲಿ ಮ್ಯುನ್ಶೆನ್(Munchen) ಎಂದು ಕರೆಯುವರು. ಇಸಾರ್(Isar) ಹೊಳೆಯ ಸುತ್ತಲೂ ಮ್ಯೂನಿಕ್ ಊರು ನೆಲೆಗೊಂಡಿದೆ. ಮ್ಯೂನಿಕ್ ಊರನ್ನು ಒಂದು ಸುತ್ತು ಹಾಕೋಣ ಬನ್ನಿ.

ಪ್ರೌಯೆನ್‌ಕಿರ‍್ಶ್ ಮತ್ತು ನ್ಯುಯಸ್ ರಾಟ್‌ಹೌಸ್:

ಪ್ರೌಯೆನ್‌ಕಿರ‍್ಶ್ ಚರ‍್ಚ್‌

ಮ್ಯೂನಿಕ್ ಊರಿನ ಹಳೆಯ ಚರ‍್ಚ್‌ಗಳಲ್ಲಿ ಪ್ರೌಯೆನ್‌ಕಿರ‍್ಶ್ (FrauenKirsche) ಕೂಡ ಒಂದು. ಈ ಚರ‍್ಚಿಗೆ ಜರ‍್ಮನ್ ನುಡಿಯಲ್ಲಿ ಡೋಮ್ ಟ್ಜು ಉನ್ಸೆರೆರ್ ಲೀಬೆನ್ ಪ್ರೌ(Dom Zu Unserer Lieben Frau) ಇಂಗ್ಲಿಶ್‍ನಲ್ಲಿ ಕೆತೆಡ್ರಲ್ ಆಪ್ ಅವರ್ ಲೇಡಿ(Cathedral of Our Lady) ಎಂದು ಕರೆಯುತ್ತಾರೆ. ಇದರ ಕಟ್ಟುವಿಕೆ ಸುಮಾರು 1468 ರಲ್ಲಿ ಆರಂಬಗೊಂಡಿತು. 20 ವರುಶಗಳಲ್ಲಿ ಇದನ್ನು ಕಟ್ಟಿ ಪೂರ‍್ತಿಗೊಳಿಸಲಾಯಿತು. ಚರ‍್ಚಿನ ಮುಂಬಾಗದ ಎರಡು ಬದಿ ದೊಡ್ಡ ಗೋಪುರಗಳನ್ನು ನಿಲ್ಲಿಸಲಾಗಿದೆ. ಈ ಎರಡು ಗೋಪುರಗಳ ಮೇಲಿನ ಬಾಗದಲ್ಲಿ ಬುಡಮೇಲಾಗಿಸಿದ ಈರುಳ್ಳಿಯಂತೆ ಗುಮ್ಮಟ ಮಾಡಲಾಗಿದೆ. ಯುರೋಪಿನ ಹಲವೆಡೆ ಈ ತೆರನಾದ ಬೋರಲಾಗಿಸಿರಿದ ಈರುಳ್ಳಿಯಂತಹ ಗೋಪುರಗಳು ಕಂಡುಬರುತ್ತವೆ. ಚರ‍್ಚಿನ ಒಳಬದಿಯಲ್ಲಿ ಆವೊತ್ತಿನ ಕಲೆ, ಬಣ್ಣದ ಕಲೆ ಮತ್ತು ಕಟ್ಟುಗಾರಿಕೆಯ ಬಗೆಗಳನ್ನು ನೋಡಬಹುದು. ಈ ಚರ‍್ಚಿನಲ್ಲಿ ಕಂಡುಬರುವ ಇನ್ನೊಂದು ವಿಶೇಶವೆಂದರೆ ದೆವ್ವವೊಂದರ ಹೆಜ್ಜೆ. ಹಿಂದೊಮ್ಮೆ ದೆವ್ವವೊಂದು ಈ ಚರ‍್ಚ್ ಕಟ್ಟುತ್ತಿದ್ದವನೊಂದಿಗೆ, ಚರ‍್ಚಿನಲ್ಲಿ ಕಿಟಕಿ ಕಟ್ಟದಂತೆ ಒಪ್ಪಂದ ಮಾಡಿಕೊಂಡಿತ್ತಂತೆ. ಅದಕ್ಕೆ ಗೊತ್ತಿಲ್ಲದಂತೆ ಕಿಟಕಿ ಕಟ್ಟಿ, ಕಿಟಕಿಗಳು ಕಾಣದಂತೆ ದೊಡ್ಡ ಕಂಬಗಳನ್ನು ಆತ ಕಟ್ಟಿದ. ಇದಕ್ಕೆ ಬೆದರಿದ ದೆವ್ವ ಚರ‍್ಚ್ ಒಳಗೆ ಬರದೇ, ಮುಂಬಾಗದಲ್ಲೇ ಜೋರಾಗಿ ತನ್ನ ಹೆಜ್ಜೆ ಊರಿತಂತೆ. ಈ ಹೆಜ್ಜೆಯೇ “ಡೆವಿಲ್ಸ್ ಪೂಟ್” ಎಂದು ಚರ‍್ಚಿನ ಮುಂಬಾಗಿಲಲ್ಲಿ ಎದ್ದು ಕಾಣುತ್ತದೆ. ಮ್ಯೂನಿಕ್ ಊರಿನ ಹಳಮೆಯನ್ನು ಪರಿಚಯಿಸುವ ಇವೆರಡು ತಾಣಗಳು, ಮ್ಯೂನಿಕ್‌ನ ನೋಡಲೇಬೇಕಾದ ಸ್ತಳಗಳಾಗಿವೆ.

ಗ್ಲೋಕೆನ್‌ಸ್ಪೀಲ್

ಪ್ರೌಯೆನ್‌ಕಿರ‍್ಶ್ ನೆರೆಯಲ್ಲೇ ಮರಿಯಾನ್ ಪ್ಲಾಟ್ಜ್‌ದಲ್ಲಿ ನ್ಯುಯಸ್ ರಾಟ್‌ಹೌಸ್(Neues Rathaus) ಕಂಡುಬರುತ್ತದೆ. ಜರ‍್ಮನ್ ನುಡಿಯಲ್ಲಿ ರಾಟ್‌ಹೌಸ್ ಎಂದರೆ ಊರಾಡಳಿತದ ಕಚೇರಿ(City Muncipal Corporation) ಎಂದರ‍್ತ. ಸುಮಾರು 1874ರಲ್ಲಿ ಈ ಕಟ್ಟಡ ಪೂರ‍್ಣಗೊಳಿಸಲಾಗಿದೆ. ಈ ಕಟ್ಟಡವೂ ದೊಡ್ಡ ಗೋಪುರವೊಂದನ್ನು ಹೊಂದಿದ್ದು ಅದರ ಮೇಲ್ಬಾಗದ ಬಾಲ್ಕನಿಯಲ್ಲಿ ಗ್ಲೋಕೆನ್‌ಸ್ಪೀಲ್ (Glockenspiel) ಎಂಬ ನುಡಿಸುವ ವಾದ್ಯ ಜೋಡಿಸಲಾಗಿದೆ. ಈ ವಾದ್ಯಕ್ಕೆ 43 ಬಗೆಯ ಗಂಟೆಗಳನ್ನು ಮತ್ತು 32 ಬಗೆಯ ಬೊಂಬೆಗಳನ್ನು ಜೋಡಿಸಲಾಗಿದೆ. ಈ ಗ್ಲೋಕೆನ್‌ಸ್ಪೀಲ್ಅನ್ನು ಎರಡು ಬಾಗದಲ್ಲಿ ಬೇರ‍್ಪಡಿಸಲಾಗಿದೆ. ಮೇಲ್ಬಾಗದಲ್ಲಿ 16ನೇ ನೂರೇಡಿನ(Century) ಅಂದಿನ ಮ್ಯೂನಿಕ್‍ನ ಯುವರಾಜನ ಮದುವೆಯ ಸಂಬ್ರಮ ಆಚರಿಸುತ್ತ ಕುಣಿಯುವ ಬೊಂಬೆಗಳು ಕಂಡುಬಂದರೆ, ಅದರ ಕೆಳಬಾಗದಲ್ಲಿ ಕೂಪರ‍್ಸ್ ಕುಣಿತ ಮಾಡುವ ಬೊಂಬೆಗಳು ಕಂಡುಬರುತ್ತವೆ. ಪ್ರತಿದಿನ ಬೆಳಿಗ್ಗೆ 11 ಮತ್ತು ಮದ್ಯಾಹ್ನ 12 ಗಂಟೆಗೆ ಈ ವಾದ್ಯಮೇಳ ನಡೆಯುತ್ತದೆ. ಈ ರಾಟ್‌ಹೌಸ್ ಊರಿನ ನಡುಬಾಗದಲ್ಲಿರುವುದರಿಂದ ಇದನ್ನು ನೋಡಲು ಮಂದಿ ಕಿಕ್ಕಿರಿದು ಸೇರುತ್ತಾರೆ.

ನ್ಯುಯಸ್ ರಾಟ್‌ಹೌಸ್

ಇಂಗ್ಲಿಶರ್ ಗಾರ‍್ಟನ್(Englischer Garten):

ಈ ತೋಟದ ಹರವು 375 ಚದರ ಹೆಕ್ಟೇರ್. ಮ್ಯೂನಿಕ್‍ನ ಹೆಸರುವಾಸಿ ಪ್ರವಾಸಿ ತಾಣ. ಇಸಾರ್(Isar) ಹೊಳೆಯ ಪಡುವಣ ದಿಕ್ಕಿನಲ್ಲಿದೆ. ಈ ತೋಟ ಯುರೋಪ್‌ನಲ್ಲೇ ಅತಿ ದೊಡ್ಡ ತೋಟವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನ ಮ್ಯೂನಿಕ್ ಆಳ್ವಿಗ ಚಾರ‍್ಲ್ಸ್ ತಿಯೋಡರ್(Charles Theoder) ಮಂದಿಗಾಗಿ ದೊಡ್ಡದೊಂದು ತೋಟ ಮಾಡಲು ಮನಸ್ಸು ಮಾಡಿದ. 1789ರಲ್ಲಿ ಮಂದಿಯ ಓಡಾಟ, ಮಕ್ಕಳಾಟಕ್ಕೆಂದು ತಿಯೋಡರ್ ತೋಟ ಮಾಡಲು ಆದೇಶ ಜಾರಿಗೆ ತಂದ. 3 ವರುಶಗಳ ಬಳಿಕ 1792ರಲ್ಲಿ ಅವನಂದುಕೊಂಡಂತೆ ಇಂಗ್ಲಿಶರ್ ಗಾರ‍್ಟನ್ ಮ್ಯೂನಿಕ್‍ನ 40,000 ಜನತೆಗೆ ತೆರೆದುಕೊಂಡಿತು. ಆಗಾಗ ಬದಲಾವಣೆ ಕಾಣುತ್ತ ಸಾಗಿದ ಈ ತೋಟ ಇದೀಗ ಸಾಕಶ್ಟು ಮಂದಿಯ ನೆಚ್ಚಿನ ತಾಣವಾಗಿದೆ. ತೋಟಕ್ಕೆ ಇಸಾರ್ ಹೊಳೆ ಹೊಂದಿಕೊಂಡಂತೆ ಇರುವುದರಿಂದ ನೂರಾರು ಚಿಕ್ಕ ಪುಟ್ಟ ಸೇತುವೆಗಳು ಇಲ್ಲಿವೆ. ಚಿಕ್ಕ ನೀರಿನ ತೊರೆಗಳು ಅದರಲ್ಲೇ ಸಾಗುವ ಬಾತುಕೋಳಿಗಳು ತೋಟದ ಸೊಬಗನ್ನು ಇಮ್ಮಡಿಗೊಳಿಸುತ್ತವೆ.

ಯಾವಾಗಲೂ ಹಚ್ಚ ಹಸಿರಾಗಿರುವ ಈ ತೋಟದ ಹಲವೆಡೆ ನಡೆದಾಡಲು, ಓಡಾಡಲು ಬರುವವರು, ಆಟವಾಡಲು ಸೇರುವ ಚಿಕ್ಕಮಕ್ಕಳು ಇಲ್ಲಿ ಸೇರಿರುತ್ತಾರೆ. ಇಸಾರ್ ಹೊಳೆಯ ಎರಡು ಹಳ್ಳಗಳು ಈ ತೋಟದ ಎರಡು ಬದಿಯುದ್ದಕ್ಕೂ ಸಾಗುತ್ತವೆ. ಈ ಎರಡು ಹೊಳೆ ದಂಡೆಗೆ ಪಿಕ್‌ನಿಕ್ ಮಾಡಲು ಬರುವ ಯುವಕ-ಯುವತಿಯರಿಂದ ಈ ತಾಣ ಗಿಜಿಗಿಡುತ್ತಿರುತ್ತದೆ. ಬೇಸಿಗೆ ಬಂದರೆ ಹೊಳೆಯಲ್ಲಿ ಈಜಾಡುವವರು ಇಲ್ಲಿ ತುಂಬಿರುತ್ತಾರೆ. ಸರ‍್ಪಿಂಗ್‌ನಂತ(Surfing) ನೀರಾಟವಾಡುವ ಹವ್ಯಾಸಿಗಳಿಗೆಂದೇ ಐಸ್ಬಾಕ್(Eisbach) ಹೆಸರಿನ ಹಳ್ಳದ ನಡುವೆ ಮಾಳ್ಕೆಯ ತೆರೆಯೊಂದನ್ನು(Artificial Wave) ಮಾಡಲಾಗಿದ್ದು, ಇಲ್ಲಿ ಸಾಕಶ್ಟು ಸರ‍್ಪಿಂಗ್ ಆಡುವವರನ್ನು ನೋಡಬಹುದು.

ಮೊನೊಪ್ಟೆರೋಸ್ ಗುಮ್ಮಟ

ತೋಟದ ಒಂದು ಬದಿಯಲ್ಲಿ ಜಪಾನೀಯರ ಟೀ ಹೌಸ್ ಎಂಬ ಚಹಾದಂಗಡಿ ಇದೆ. ವರುಶಕ್ಕೊಮ್ಮೆ ಇಲ್ಲಿ ಜಪಾನೀನ ಬಗೆ ಬಗೆಯ ಚಹಾದ ತೋರ‍್ಪು(Tea Expo) ನಡೆಯುತ್ತದೆ. ಚಹಾದೊಲವಿಗರಿಗೆ ಇದು ತಕ್ಕುದಾದ ಜಾಗ. 1972ರಲ್ಲಿ ಮ್ಯೂನಿಕ್ ‍ನಲ್ಲಿ ನಡೆದ ಒಲಿಂಪಿಕ್ಸ್ ಆಟೋಟದ ಹೊತ್ತಿನಲ್ಲಿ ಇದನ್ನು ಜಪಾನೀಯರು ಕೊಡುಗೆಯಾಗಿ ನೀಡಿದ್ದರಂತೆ. ತೋಟದಲ್ಲಿ ಇದಕ್ಕಿಂತ ಕೊಂಚ ಮುಂದೆ ಸಾಗಿದರೆ ಅಲ್ಲಿ ನಿಮಗೆ ಬುದ್ದನ ಗುಡಿಯನ್ನೇ ಹೋಲುವ ಗೋಪುರವೊಂದು ಕಾಣಸಿಗುತ್ತದೆ. ಇದೇ ಚೈನೀಸ್ ಟುರ‍್ಮ್ (Chinese Turm) ಅಂದರೆ ಚೀನಿಯರ ಗೋಪುರ. ಬೌದ್ದರ ಪಗೋಡಾದಂತೆ ಇದನ್ನು ಕಟ್ಟಿಸಿದ್ದಾರೆ. ಚೀನಿ ಗೋಪುರದ ಬಲಬಾಗಕ್ಕೆ ಸಾಗಿದರೆ ಮೊನೊಪ್ಟೆರೋಸ್(Monopteros) ಎಂಬ ಗುಮ್ಮಟ ನೋಡಬಹುದು. ಗೋಡೆಗಳಿಲ್ಲದೇ, ಸುತ್ತಲೂ ಕಂಬಗಳ ಮೇಲೆ ನಿಂತಿರುವ ಗುಮ್ಮಟವನ್ನು ಗ್ರೀಕ್ ಮತ್ತು ರೋಮನ್ ಹೊತ್ತಿನಲ್ಲಿ ಮೊನೊಪ್ಟೆರೋಸ್ ಎಂದು ಕರೆಯಲಾಗುತ್ತಿತ್ತು. ತೋಟದ ದಿಬ್ಬದ ಮೇಲೆ ಈ ಗುಮ್ಮಟ ತಲೆಯೆತ್ತಿ ನಿಂತಿದೆ. ಇದನ್ನು ನೋಡಿದಾಗ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಹೂದೋಟದ ದಿಬ್ಬ ನೆನಪಾಗಬಹುದು. ಈ ತೋಟದಲ್ಲಿ ಆಂಪಿತಿಯೇಟರ್ ಕೂಡ ಇದ್ದು ಬಯಲು ನಾಟಕ, ಕಲೆ,ಹಾಡು-ಸಂಗೀತದ ಕಾರ‍್ಯಕ್ರಮಗಳು ಇಲ್ಲಿ ನಡೆಯುತ್ತಿರುತ್ತವೆ.

ಒಲಿಂಪಿಯಾ ಪಾರ‍್ಕ್(Olympia Park):

1972ರ ಒಲಿಂಪಿಕ್ಸ್ ಆಟೋಟ ನಡೆಸಿಕೊಡುವ ಕೆಲಸವನ್ನು ಮ್ಯೂನಿಕ್ ಊರು ವಹಿಸಿಕೊಂಡಿತ್ತು. ಇದನ್ನು ನಡೆಸಲು ಮ್ಯೂನಿಕ್ ಊರಾಡಳಿತ ಊರ ಹೊರಗಡೆ ದೊಡ್ಡದಾದ ಬಯಲೊಂದನ್ನು ಆರಿಸಿ ಅಲ್ಲಿಯೇ ಒಲಿಂಪಿಯಾ ಪಾರ‍್ಕ್‍ಅನ್ನು ಕಟ್ಟಿಸಿತು. ಸುಮಾರು 210 ಚದರ ಎಕರೆ ಜಾಗದಲ್ಲಿ ಎಲ್ಲ ಬಗೆಯ ಆಟೋಟದ ಏರ‍್ಪಾಟು ಮಾಡಲಾಗಿದೆ. ದೊಡ್ಡದಾದ ಕಾಲ್ಚೆಂಡಿನಾಟದ ಬಯಲು ನೋಡಲು ಬಲು ಅಂದವಾಗಿದೆ. ಬಯಲಿನ ಮೇಲ್ಚಾವಣಿಯನ್ನು ಟೆಂಟ್ ಆಕಾರದಲ್ಲಿ ಮಾಡಿದ್ದು ಇದರ ವಿಶೇಶ. ಪಾರ‍್ಕಿನ ನಡುವೆ ಕಾನೋ, ಕಯಾಕ್ ಮುಂತಾದ ದೋಣಿಯಾಟವಾಡಲು ದೊಡ್ಡದಾದ ಕೆರೆಯನ್ನು ಮಾಡಲಾಗಿದೆ. ಇನ್ನೊಂದೆಡೆ ದೊಡ್ಡದಾದ ಒಳಾಂಗಣದ ಈಜುಕೊಳವಿದೆ. ಈ ಕೊಳದಲ್ಲಿ ಹಲವು ಬಗೆಯ ಈಜಿನ ಪೋಟಿಗಳು ನಡೆಸಬಹುದಾಗಿದೆ. ಸೈಕ್ಲಿಂಗ್ ಆಟೋಟಕ್ಕೆಂದೇ ಮಾಡಿದ ದಾರಿಯೂ ಈ ಪಾರ‍್ಕಿನಲ್ಲಿ ಸಿಗುತ್ತದೆ. ಕಿರಿದಾದ ಹಸಿರು ಹಾಸಿನ ದಿಬ್ಬಗಳು ಒಲಿಂಪಿಯಾ ಪಾರ‍್ಕಿನಲ್ಲಿವೆ. ಬಿಲ್ಲು-ಬಾಣ ಮತ್ತು ಕೋವಿಯಿಂದ ಗುರಿಯಿಟ್ಟು ಹೊಡೆಯುವ ಪೋಟಿಗಳು ನಡೆಸಲು ಈ ದಿಬ್ಬಗಳು ತಕ್ಕುದಾಗಿವೆ.

ಒಲಿಂಪಿಯಾ ಪಾರ‍್ಕ್

1972ರ ಒಲಿಂಪಿಕ್ಸ್ ಆಟೋಟಗಳ ನಂತರ ಇಲ್ಲಿರುವ ಎಲ್ಲ ಆಟೋಟದ ಏರ‍್ಪಾಟುಗಳನ್ನು ಸ್ತಳೀಯ ಆಟೋಟಗಳಿಗೆ ಬಳಕೆ ಮಾಡಲಾಗುತ್ತಿದೆ. ಪಾರ‍್ಕಿನೆಲ್ಲೆಡೆ ಹಸಿರು ತೋಟ ಬೆಳೆಸಿರುವುದರಿಂದ ಜಾಗಿಂಗ್ ಮಾಡಲು, ಸುತ್ತಾಡಲೂ, ಪಿಕ್‍ನಿಕ್ ಮಾಡಲು ಇಲ್ಲಿ ಮಂದಿ ಸೇರಿರುತ್ತಾರೆ. ಒಲಿಂಪಿಯಾ ಪಾರ‍್ಕಿನ ಕೊನೆಯಲ್ಲಿ ಒಂದು ಒಲಿಂಪಿಯಾ ಗೋಪುರವನ್ನು ಕಟ್ಟಲಾಗಿದೆ. ಸುಮಾರು 291 ಮೀಟರ್ ಉದ್ದದ ಈ ಗೋಪುರ ಹತ್ತಿ, ಮೇಲಿಂದ ಮ್ಯೂನಿಕ್ ಊರಿನ ಸೊಬಗನ್ನು ಸವಿಯಬಹುದು. ಗೋಪುರದ ಸುಮಾರು 182 ಮೀಟರ್ ಎತ್ತರದ ಮೇಲೆ ದುಂಡಗೆ ತಿರುಗುವ ರೆಸ್ಟಾರೆಂಟ್ ಕೂಡ ಇದೆ. ಇಶ್ಟು ಎತ್ತರದ ಮೇಲೆ ತಿರುಗುವ ರೆಸ್ಟಾರೆಂಟ್ ನಲ್ಲಿ ಊಟ ಮಾಡಿ ವಿಶೇಶ ಅನುಬವ ಪಡೆಯಬಹುದು.

ಮ್ಯೂನಿಕ್ ‍ನಲ್ಲಿ ನೋಡಲು ಇನ್ನೂ ಹಲವು ಜಾಗಗಳಿವೆ. ಆ ಜಾಗಗಳ ಬಗ್ಗೆ ಮಾಹಿತಿ, ಮುಂದಿನ ಬರಹದಲ್ಲಿ.

(ಮುಂದುವರೆಯುವುದು…)

(ಮಾಹಿತಿ ಮತ್ತು ಚಿತ್ರ ಸೆಲೆ: muenchen.de, sacred-destinations.comwikipedia.org)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s