ಬಾನಲ್ಲಿ ಕುಣಿಯುವ ಬಣ್ಣದ ಬಲೆಗಳು!

– ಕೆ.ವಿ.ಶಶಿದರ.

ಲಂಡನ್, ಪೋನಿಕ್ಸ್ ನಂತಹ ದೊಡ್ಡ ನಗರಗಳ ಆಗಸದಲ್ಲಿ ಹೊಸಬಗೆಯ ನೀರಿನರೂಪದ ಕಲಾಕ್ರುತಿಗಳು ರಾರಾಜಿಸುತ್ತಿವೆ. ಈ ವಿನೂತನ ಕಲಾಕ್ರುತಿಗಳು ವಾತಾವರಣದ ಮಳೆ, ಚಳಿ, ಗಾಳಿ, ಬಿಸಿಲುಗಳ ಏರುಪೇರಿಗೆ ಸ್ಪಂದಿಸುತ್ತಾ ತನ್ನತನವನ್ನು ಉಳಿಸಿಕೊಂಡು ಜನರ ರಂಜನೆಗೆ ಪಾತ್ರವಾಗಿದೆ. ಮುಸ್ಸಂಜೆಯಲ್ಲಿ ಜಗಮಗಿಸುವ ವಿವಿದ ಬಣ್ಣದ ದೀಪಗಳ ಬೆಳಕಿನಲ್ಲಿ ಇದರ ನೋಟ ಮತ್ತೂ ಮನಮೋಹಕ. ಕುಳಿರ‍್ಗಾಳಿ ಬೀಸುವಾಗ ಗಾಳಿಯ ನ್ರುತ್ಯ ನಿರ‍್ದೇಶನದಂತೆ ನವಿರಾಗಿ ನರ‍್ತಿಸುವ ಹಾಗೂ ಅದರಿಂದ ಉಂಟಾಗುವ ಅಲೆಗಳ ದ್ರುಶ್ಯ ನೋಡಲು ಅತಿ ಆಹ್ಲಾದಕರ.

ಇಂತಹ ಕಣ್ಮನಸೆಳೆಯುವ ನೀರಿನರೂಪದ ಕಲಾಕ್ರುತಿಯನ್ನು ಹುಟ್ಟುಹಾಕಿದ್ದು ಯಾರು ಎಂಬ ಪ್ರಶ್ನೆ ಬುಗಿಲೆದ್ದು ಮನವನ್ನು ಕಾಡುವುದು ಸಹಜವಲ್ಲವೆ?

ಜೆನೆಟ್ ಇಚೆಲ್ಮನ್, 1966ರಲ್ಲಿ ಜನಿಸಿದ ಅಮೇರಿಕಾ ಸಂಜಾತೆ ಜೆನೆಟ್ ಇಚೆಲ್ಮನ್ ಇದನ್ನು ಹುಟ್ಟುಹಾಕಿದವರು. 7 ವರ‍್ಶಗಳ ಕಾಲ ಹಾರ‍್ವರ‍್ಡ್‍ನಲ್ಲಿ ಕಲಾ ಉಪನ್ಯಾಸಕ ವ್ರುತ್ತಿಯನ್ನು ಮುಗಿಸಿ ಪುಲ್ ಬ್ರೈಟ್ ಉಪನ್ಯಾಸ ಮಾಡಲು ಈಕೆ ಬಂದಿದ್ದು ಬಾರತ ದೇಶಕ್ಕೆ. ಜೆನೆಟ್ ಎಚೆಲ್ಮನ್ ಅಪ್ರತಿಮ ಕಲಾವಿದೆ. ತಾನು ರಚಿಸಿದ ಕಲಾಕ್ರುತಿಗಳ ಪ್ರದರ‍್ಶನವನ್ನು ಏರ‍್ಪಡಿಸುವುದು ಆಕೆಯ ಮಹತ್ವಾಕಾಂಕ್ಶೆ, ಅದೂ ಬಾರತದಲ್ಲಿ. ಅದಕ್ಕಾಗಿ ತಾನು ರಚಿಸಿದ ಎಲ್ಲಾ ಕಲಾಕ್ರುತಿಗಳನ್ನು ತಮಿಳುನಾಡಿನ ಮಹಾಬಲಿಪುರಕ್ಕೆ ವಿಮಾನದಲ್ಲಿ ತರಲು ಏರ‍್ಪಾಡು ಮಾಡತ್ತಾಳೆ. ಆದರೆ ದುರ‍್ದೈವವೆಂದರೆ ಅವಳ ಯಾವ ಕಲಾಕ್ರುತಿಯೂ ಮಹಾಬಲಿಪುರ ತಲಪುವುದೇ ಇಲ್ಲ.

ಕಲಾಕ್ರುತಿಗಳು ಹಾದಿಯಲ್ಲೇ ಕಣ್ಮರೆಯಾಗಿದ್ದು ಅವಳಿಗೆ ಬೇಸರ ತಂದ ಸಂಗತಿ. ಆದರೂ ಆಕೆ ದ್ರುತಿಗೆಡುವುದಿಲ್ಲ. ತನ್ನಲ್ಲಿದ್ದ ಚೈತನ್ಯ ಅವಳನ್ನು ಕಂಚಿನ ಕಲಾಕ್ರುತಿಯ ರಚನೆಗೆ ಪ್ರೇರೇಪಿಸುತ್ತದೆ. ಬಾರತೀಯ ಸಂಸ್ಕ್ರುತಿಯಿಂದ ಉತ್ತೇಜಿತಳಾದ ಅವಳು ಸ್ತಳೀಯರ ಜೊತೆಗೂಡಿ ಕಂಚಿನ ಕಲಾಕ್ರುತಿಗಳ ರಚನೆಗೆ ಕೈ ಹಾಕುತ್ತಾಳೆ. ಪುಲ್ ಬ್ರೈಟ್‍ನಿಂದ ದೊರಕುತ್ತಿದ್ದ ಅಲ್ಪ ಹಣ ದುಬಾರಿ ಕಂಚಿನ ಕಲಾಕ್ರುತಿಗಳ ತಯಾರಿಕೆ ಸಾಲದಾದಾಗ, ಅನಿವಾರ‍್ಯವಾಗಿ ಆ ಕೆಲಸವನ್ನು ಅಲ್ಲಿಗೇ ಕೈಬಿಡಬೇಕಾಗುತ್ತದೆ.

ಆದರೆ ಆಕೆ ಕೈಕಟ್ಟಿ ಕೂರುವುದಿಲ್ಲ. ಪ್ರತಿದಿನ ಮೀನುಗಾರರು ಮೀನು ಹಿಡಿಯಲು ದೊಡ್ಡ ದೊಡ್ಡ ಬಲೆಗಳನ್ನು ಹರಡುವ ರೀತಿ ಮತ್ತು ಅದರಲ್ಲಿ ಅವರಿಗಿದ್ದ ಕೌಶಲ್ಯವನ್ನು ಕಂಡು ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾಳೆ. ಪುಳಕಿತಳಾಗುತ್ತಾಳೆ. ಬಲೆಯಂತಹ ಕಡಿಮೆ ತೂಕದ ವಸ್ತುವಿನಿಂದ ದೊಡ್ಡ ಗಾತ್ರದ ಕಲಾಕ್ರುತಿಯ ನಿರ‍್ಮಾಣ ಸಾದ್ಯವೆಂಬ ವಿಚಾರ ಮೊಳಕೆಯೊಡದದ್ದೇ ತಡ ಅದನ್ನು ಕಾರ‍್ಯರೂಪಕ್ಕೆ ತರಲು ಬೇಕಿರುವ ಸೂಕ್ಶ್ಮ ವಿವರದತ್ತ ತನ್ನ ಗಮನವನ್ನು ಕೇಂದ್ರೀಕರಿಸುತ್ತಾಳೆ. ಆಗಸದಲ್ಲಿ ಮೂಡುವ ಜೆನೆಟ್ ಇಚೆಲ್ಮನ್‍ಳ ವಿನೂತನ ನೀರಿನರೂಪದ ಕಲಾಕ್ರುತಿಗಳಿಗೆ ಇದೇ ಮೂಲ ಪ್ರೇರಣೆ.

ಪುಲ್ ಬ್ರೈಟ್ ಉಪನ್ಯಾಸದ ಕೊನೆಯ ವೇಳೆಗೆ ತನ್ನ ಮನದಲ್ಲಿ ಮೂಡಿದ್ದ ಅಮೂರ‍್ತ ರೂಪಕ್ಕೆ ಮೀನುಗಾರರ ಸಹಾಯದಿಂದ ಮೂರ‍್ತ ಸ್ವರೂಪ ದೊರಕುತ್ತದೆ. ಬಲೆಯಿಂದ ಸರಣಿ ಕಲಾಕ್ರುತಿಗಳನ್ನು ರಚಿಸುತ್ತಾಳೆ. ಮೀನುಗಾರರ ಸಹಾಯದಿಂದ ಎತ್ತರದ ಕಂಬಗಳಿಗೆ ಕಟ್ಟಿ ಹಾರಾಡಿಸಿ ಸಂತೋಶಪಡುತ್ತಾಳೆ. ಬಲೆಯಲ್ಲಿ ಹಾಯುವ ಗಾಳಿಯ ಪ್ರತಿ ಅಲೆಯೊಂದಿಗೆ ಮೇಳೈಸಿ ಕುಣಿಯುವ ಬಲೆಯ ನವಿರಾದ ಪದರಗಳನ್ನು ಕಂಡು ಕನಸು ನನಸಾದಶ್ಟೇ ಸಡಗರ ಪಡುತ್ತಾಳೆ.

ಹೀಗೆ ಪ್ರಾರಂಬವಾದ ಜೆನೆಟ್ ಇಚೆಲ್ಮನ್‍ರ ವಿನೂತನ ಕಲಾಕ್ರುತಿಗಳು ವಿಶ್ವದ ಸುಪ್ರಸಿದ್ದ ನಗರಗಳ ಆಗಸಕ್ಕೆ ಅಪೂರ‍್ವ ಆಯಾಮವನ್ನು ನೀಡುತ್ತದೆ. ಸ್ತಳದ ಗಾತ್ರವನ್ನು ಗಮನಿಸಿ ಅದಕ್ಕೆ ಸರಿಹೊಂದುವ ಕಲಾಕ್ರುತಿಗಳನ್ನು ಹಾಗೂ ತಕ್ಕ ಆಕಾರವನ್ನು ನೀಡುವುದರಲ್ಲಿ ಈಕೆ ಎತ್ತಿದ ಕೈ.

ಬನ್ನಿ ಈಕೆಯ ಕೈಯಿಂದ ಅರಳಿದ ಹಲವು ಪ್ರಸಿದ್ದ ಕಲಾ ಕುಸುಮಗಳ ಬಗ್ಗೆ ತಿಳಿಯೋಣ.

‘ಹರ್ ಸಿಕ್ರೆಟ್ ಇಸ್ ಪೇಶನ್ಸ್’, ಪೋನಿಕ್ಸ್, ಅರಿಜೋನಾ, ಯುಎಸ್‍ಎ

ಪೋನಿಕ್ಸ್ ನ ನಗರಸಬೆಯ ಆಗಸದಲ್ಲಿ 145 ಅಡಿ ಎತ್ತರದಲ್ಲಿ ನೇತಾಡುತ್ತಿರುವ ‘ಹರ್ ಸಿಕ್ರೆಟ್ ಇಸ್ ಪೇಶನ್ಸ್’ ಕಲಾಕ್ರುತಿ ಡೌನ್‍ಟೌನ್ ಪುನರುಜ್ಜೀವನದ ಕೊಡುಗೆಯ ಸಂಕೇತವೆಂದೇ ಬಾವಿಸಲಾಗಿದೆ. ಮರಳುಗಾಡಿನ ಕಡೆಯಿಂದ ಬೀಸುವ ಗಾಳಿಯು ತನ್ನ ಲಯದಂತೆ ಈ ಕಲಾಕ್ರುತಿಯನ್ನು ಸದಾಕಾಲ ಕುಣಿಸುತ್ತದೆ. ಮೂರು ಆಯಾಮದ, ಬಹುಪದರದ ಈ ದೈತ್ಯ ಕಲಾಕ್ರುತಿಯ ಸ್ರುಶ್ಟಿಯಲ್ಲಿ ಕೈ ಜೋಡಿಸಿದವರು ಬಹಳ ಮಂದಿ. ಅಂತರರಾಶ್ಟ್ರೀಯ ಕ್ಯಾತಿಯ ವೈಮಾನಿಕ ಹಾಗೂ ಮೆಕಾನಿಕಲ್ ಇಂಜಿನಿಯರ್‍ಗಳು, ವಾಸ್ತು ಶಿಲ್ಪಿಗಳು, ಬೆಳಕಿನ ವಿನ್ಯಾಸಕರು, ಬೂ ಚಿತ್ರಣದ ವಾಸ್ತು ಶಿಲ್ಪಿಗಳು ಜೆನೆಟ್ ಇಚೆಲ್ಮನ್‍ರ ಜೊತೆ ಕಲಾಕ್ರುತಿಯ ರಚನೆಯಲ್ಲಿ ಶ್ರಮಿಸಿದ್ದಾರೆ.

ಹಗಲಿನ ಸಮಯದಲ್ಲಿ ಈ ಆಕ್ರುತಿಯು ಮರ, ಗಿಡ, ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಹಾರಾಡುತ್ತಿರುತ್ತದೆ. ಸೂರ‍್ಯನ ಬೆಳಕಿನಲ್ಲಿ ಈ ಕ್ರುತಿಯ “ಶ್ಯಾಡೋ ಡ್ರಾಯಿಂಗ್” ಅನ್ನು ಸ್ರುಶ್ಟಿ ಮಾಡುತ್ತದೆ ಎಂದು ಅಲ್ಲಿನ ಕಲಾಕಾರರು ಹೇಳುತ್ತಾರೆ. ಈ ರೀತಿಯ ರಚನೆಗೆ ಮೊದಲ ಬಾರಿ ಸ್ತಳ ಪರಿಶೀಲನೆಯ ಸಂದರ‍್ಬದಲ್ಲಿ ಕಂಡ ಮೋಡಗಳ ನೆರಳೇ ಸ್ಪೂರ‍್ತಿ ಎನ್ನುತ್ತಾಳೆ ಆಕೆ. ರಾತ್ರಿಯಲ್ಲಿ ವಿವಿದ ಬಣ್ಣಗಳ ಬೆಳಕಿನಲ್ಲಿ ಈ ಕಲಾಕ್ರುತಿ ಮಿಂದು ಕಣ್ಮನಗಳನ್ನು ತನ್ನತ್ತ ಸೆಳೆಯುತ್ತದೆ.

ವೇರ್ ವಿ ಮೆಟ್, ಗ್ರೀನ್ಸ್ ಬೊರೊ, ನಾರ‍್ತ್ ಕರೋಲಿನಾ, ಯುಎಸ್‍ಎ

ವೇರ್ ವಿ ಮೆಟ್ ಎಂಬ ದೊಡ್ಡ ಕಲಾಕ್ರುತಿ ಇರುವುದು ನಾರ‍್ತ್ ಕರೋಲಿನಾದ ಡೌನ್‍ಟೌನ್ ಗ್ರೀ‍ನ್ಸ್ ಬೊರೊದ ಲಿಬಾಯುರ್ ಸಿಟಿ ಪಾರ‍್ಕ್ ನಲ್ಲಿ. 35 ಮೈಲಿ ಉದ್ದದ ಟೆಕ್ನಿಕಲ್ ಪೈಬರ್ ಅನ್ನು ಉಪಯೋಗಿಸಿ 2,42,800 ಗಂಟುಗಳನ್ನು ಹಾಕಿ ಇದನ್ನು ತಯಾರಿಸಲಾಗಿದೆ. ಬೀಸುವ ತಂಗಾಳಿಯಲ್ಲಿ ನವಿರಾಗಿ ಕಂಪಿಸುವ ಈ ಕಲಾಕ್ರುತಿ ನೋಡಲು ಬಲು ಸುಂದರ. ವೇರ್ ವಿ ಮೆಟ್ ಕಲಾಕ್ರುತಿಯು 200 ಅಡಿಯಶ್ಟು ಅಗಲವಿದ್ದು 60 ಅಡಿ ಎತ್ತರದ ಕಂಬಗಳಿಗೆ ಬಿಗಿಯಲಾಗಿದೆ. ಪ್ರತಿಯೊಂದು ಕಂಬವೂ 6 ಟನ್‍ ತೂಕವನ್ನು ತಡೆಯುವಶ್ಟು ಬಲಯುತವಾಗಿದೆ. ಇದರಲ್ಲಿ ಉಪಯೋಗಿಸಿರುವ ಪೈಬರ್, ಉಕ್ಕಿಗಿಂತ ಹದಿನೈದು ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಬಿಸಿಲನ ಜಳ, ಮಳೆ ಗಾಳಿಯ ಹೊಡೆತವನ್ನು ಬರಿಸುವಶ್ಟು ಹಾಗೂ ನೂರಕ್ಕೆ ನೂರರಶ್ಟು ಕಡುನೇರಳೆ ಕದಿರನ್ನು(UV rays) ತಾಳುವಶ್ಟು ಬಲಶಾಲಿಯಾಗಿದೆ.

1.8 ಲಂಡನ್, ಯುಕೆ

180 ಅಡಿ ಗಾಳಿಯಲ್ಲಿ ಮೇಲಕ್ಕೇರಿರುವ ಮ್ರುದುವಾದ ಬ್ರುಹತ್ತಾದ ಬಲೆಯ ಕಲಾಕ್ರುತಿಯು ಆಕ್ಸಪರ‍್ಡ್ ಸರ‍್ಕಸ್ ಎಂಬ ಲಂಡನ್ನಿನ ಜನನಿಬಿಡ ಪಾದಚಾರಿಗಳ ಪ್ರದೇಶದಲ್ಲಿ ರಾರಾಜಿಸುತ್ತಿದೆ. ಗಾಳಿಯಲ್ಲಿ ತೇಲಾಡುವ ಈ ಅಗಾದವಾದ ಕಲಾಕ್ರುತಿಯನ್ನು ರೋಮಾಂಚಕ ವರ‍್ಣದ ಪೈಬರ್‍ಗಳಿಂದ ಹಣೆದು ಗಂಟುಹಾಕಿ ತಯಾರಿಸಲಾಗಿದೆ. ಗಾಳಿಯ ಹಾಗೂ ವಾತಾವರಣದ ಬದಲಾವಣೆಗೆ ತಕ್ಕಂತೆ ನ್ರುತ್ಯ ಮಾಡುವಾಗ ಬಣ್ಣಗಳು ನಾಟ್ಯವಾಡಿದಂತೆ ಕಾಣುವುದು ಉಲ್ಲಾಸಮಯ. ರಾತ್ರಿಯಲ್ಲಿ ಬಣ್ಣದ ದೀಪದ ಬೆಳಕಿನಿಂದ ಇದಕ್ಕೆ ಜೀವ ಬಂದಂತಾಗುತ್ತದೆ.

ಚೂಟಿಯುಲಿ(smartphone) ಹೊಂದಿರುವವರು ತಮ್ಮ ಇಶ್ಟದ ಬಣ್ಣಗಳನ್ನು ಆಯ್ಕೆ ಮಾಡಿ ಅದಕ್ಕೆ ಸರಿ ಹೊಂದುವ ಸ್ವರೂಪವನ್ನು ಟ್ಯಾಪ್ ಮಾಡಿ ನೀಡಿದಲ್ಲಿ ಇದನ್ನು ಬ್ರುಹತ್ ಕಲಾಕ್ರುತಿಯ ಮೇಲೆ ಹರಡುವಂತೆ ಮಾಡುವ ಏರ‍್ಪಾಟು ಸಹ ಇಲ್ಲಿದೆ. ಈ ದೊಡ್ಡ ಕಲಾಕ್ರುತಿಯ ಸ್ವರೂಪಕ್ಕೆ 2011ರ ಸುನಾಮಿಯ ಸಮಯದಲ್ಲಿ ಪೆಸಿಪಿಕ್ ಸಾಗರದಲ್ಲಿ ಎದ್ದ ಬಾರೀ ಗಾತ್ರದ ಅಲೆಗಳೇ ಜೆನೆಟ್‍ಗೆ ಸ್ಪೂರ‍್ತಿ. ಈ ಕಲಾಕ್ರುತಿಯನ್ನು 1.8 ಎಂದಿರುವುದು ಕೊಂಚ ಹೊಸತನದಿಂದ ತುಂಬಿದಂತೆ ಕಾಣುತ್ತದಲ್ಲವೆ? 2011ರ ಬೂಕಂಪ ಹಾಗೂ ಅದರಿಂದ ಸ್ರುಶ್ಟಿಯಾದ ಸುನಾಮಿಯಿಂದಾಗಿ ದಿನದ ಸಮಯ 1.8 ಮೈಕ್ರೋ ಕ್ಶಣಗಳಶ್ಟು ಕಡಿಮೆಯಾಗಿದ್ದರ ಸಂಕೇತವಾಗಿ ಇದಕ್ಕೆ 1.8 ಎಂದು ಹೆಸರಿಡಲಾಗಿದೆ.

1998ರಲ್ಲಿ ಮಹಾಬಲಿಪುರಂನಲ್ಲಿ ಅನಾವರಣಗೊಳಿಸಿದ ‘ಗಾರ‍್ಡನ್ ಆಪ್ ಅರ‍್ದ್ಲಿ ಡಿಲೈಟ್’ ಕೆಂಬ್ರಿಡ್ಜ್‍ನ ‘ಐ ಆಪ್ ದ ಸ್ಟಾರ‍್ಮ್’ ಪಿಲೆಡೆಲ್ಪಿಯಾದ ‘ಪಲ್ಸ್’ 2010ರ ವಾಂಕೋವರ್ ವಿಂಟರ್ ಒಲಂಪಿಕ್ಸ್ ನಲ್ಲಿ ಮೊದಲಬಾರಿಗೆ ಪ್ರದರ‍್ಶನವಾದ ‘ವಾಟರ್ ಸ್ಕೈ ಗಾರ‍್ಡನ್’, ಪೋರ‍್ಟೊ, ಪೊರ‍್ಚುಗಲ್‍ನಲ್ಲಿರುವ ‘ಶಿ ಚೆಂಜಸ್’ ಸ್ಯಾನ್‍ಪ್ರಾನ್ಸಿಸ್ಕೋದ ನೂತನ ಏರ್‍ಪೋರ‍್ಟ್ ನ ಎರಡನೆ ಟರ‍್ಮಿನಲ್ ನಲ್ಲಿರುವ ‘ಎವೆರಿ ಬೀಟಿಂಗ್ ಸೆಕೆಂಡ್’ ಈಕೆಯ ಇನ್ನಿತರೆ ನೀರಿನರೂಪದ ಮೇರುಕಲಾಕ್ರುತಿಗಳು.

ಕಲಾಕ್ರುತಿಗಳನ್ನು ನೆಲೆಗೊಳಿಸಬೇಕಾದ ಪ್ರದೇಶದ ಅಂದದರಿಮೆಗೆ ಹಾಗೂ ವಾತಾವರಣಕ್ಕೆ ಸರಿ ಹೊಂದುವಂತೆ ಹಾಗೂ ಯಾವುದೇ ರೀತಿಯ ದಕ್ಕೆ ಬರದಂತೆ ಕಲಾಕ್ರುತಿಯನ್ನು ರಚಿಸುವುದೇ ಜೆನೆಟ್‍ಳ ಹೆಗ್ಗಳಿಕೆ. ಈಕೆಯ ರಚನೆಗಳಲ್ಲಿ ಕೆಲವನ್ನು ಕಾಯಂ ಆಗಿ ಒಂದೇ ಸ್ತಳದಲ್ಲಿ ನೆಲೆಗೊಳಿಸಲಾಗಿದೆ. ಇನ್ನು ಕೆಲವು ತಾತ್ಕಾಲಿಕ. ಅವುಗಳನ್ನು ಬೇಕೆಂದಲ್ಲಿಗೆ ಬದಲಾಯಿಸಲು ಸಾದ್ಯ. ಅವಕ್ಕೆ ಬೇರೆ ರೂಪವನ್ನೂ ಕೊಡಲು ಸಾದ್ಯ.

ಈಕೆಯ ವಿಮರ‍್ಶಕರು ಇಂತಹ ಬ್ರುಹತ್ ಬಲೆಯ ರಚನೆಯಿಂದ ಆಗುವ ಆನಾಹುತಗಳನ್ನು ಪಟ್ಟಿಮಾಡಿ ಇದು ವಾತಾವರಣದ ಏರುಪೇರಿನ ಹೊಡೆತಕ್ಕೆ ಸಿಕ್ಕಿ ಕೆಲವೇ ದಿನಗಳಲ್ಲಿ ನಿಶ್ಕ್ರಿಯವಾಗುತ್ತದೆಂದು ಹಾಗೂ ಅದಕ್ಕಿಂತಾ ಹೆಚ್ಚಾಗಿ ಪಕ್ಶಿಗಳು ಸ್ವಚ್ಚಂದವಾಗಿ ಹಾರಾಡಲು ಸಾದ್ಯವಿಲ್ಲದಂತಾಗಿ ಅವುಗಳ ಸಂಕುಲಕ್ಕೆ ಮಾರಕವೆಂದು ಬವಿಶ್ಯ ನುಡಿದಿದ್ದರು. ಬಲೆಯನ್ನು ಹಣೆದಿರುವ ದಾರಗಳ ನಡುವಿನ ಅಂತರದಲ್ಲಿ ದೊಡ್ಡ ದೊಡ್ಡ ಪಕ್ಶಿಗಳೂ ಸಹ ಸರಾಗವಾಗಿ ತೂರಬಹುದಾದ ಕಾರಣ ಅವುಗಳಿಗಾಗಲಿ ಅವುಗಳ ರೆಕ್ಕೆಗಳಿಗಾಗಲಿ ಯಾವುದೇ ಅಪಾಯ ಇದುವರೆಗೂ ಸಂಬವಿಸಿಲ್ಲ. ಹಾಗೂ ಕಲಾಕ್ರುತಿಗಳಲ್ಲಿ ಉಪಯೋಗಿಸಿರುವ ಪೈಬರ್ ತಂತುಗಳು ಎಲ್ಲಾ ರೀತಿಯ ಪ್ರಾಕ್ರುತಿಕ ಏರುಪೇರುಗಳನ್ನು ಮೆಟ್ಟಿನಿಂತು ಪ್ರಾರಂಬದ ದಿನಗಳ ಸೊಬಗನ್ನೇ ಇಂದಿಗೂ ಪಸರಿಸುತ್ತಾ ತನ್ನದೇ ಆದ ಚಾಪನ್ನು ಮೂಡಿಸಿ ಬವಿಶ್ಯಕಾರರ ನುಡಿಯನ್ನು ಸುಳ್ಳಾಗಿಸಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: archdaily.comechelman.comamusingplanet.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: