ಮ್ಯೂನಿಕ್ ನ ಸುತ್ತ ಒಂದು ಸುತ್ತು(ಕಂತು-2)

– ಜಯತೀರ‍್ತ ನಾಡಗವ್ಡ.

ನೋಯಿಶ್‌ವಾನ್‌ಸ್ಟೀನ್

ಮ್ಯೂನಿಕ್ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಮ್ಯೂನಿಕ್‍ನಲ್ಲಿ ನೋಡತಕ್ಕ ಇನ್ನೂ  ಹಲವು ಜಾಗಗಳಿವೆ. ಅವುಗಳ ಕುರಿತು ಹೇಳದೇ ಹೋದರೆ ಮ್ಯೂನಿಕ್ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ.

ಬಿ.ಎಮ್‍.ಡಬ್ಲ್ಯೂ ಒಡವೆಮನೆ ಮತ್ತು ವೆಲ್ಟ್ (BMW Museum and Welt):

ಒಲಿಂಪಿಯಾ ಪಾರ‍್ಕಿನಿಂದ ಆಚೆ ಬಂದು ಸೇತುವೆಯೊಂದನ್ನು ದಾಟಿದರೆ ಕಾಣುವುದು ಬಿ.ಎಮ್‍.ಡಬ್ಲ್ಯೂ ಒಡವೆಮನೆ. ಹೆಸರುವಾಸಿ ಸಿರಿತನದ ಕಾರು ತಯಾರಿಸುವ ಬಿ.ಎಮ್‌.ಡಬ್ಲ್ಯೂ. ಕೂಟದವರ ದೊಡ್ಡದಾದ ಒಡವೆಮನೆ, ಮುಕ್ಯ ಕಚೇರಿ ಮತ್ತು ಬಾರಿ ದೊಡ್ಡ ಮಾರಾಟ ಮಳಿಗೆ ಎಲ್ಲವೂ ಒಲಿಂಪಿಯಾ ಪಾರ‍್ಕಿನಲ್ಲಿ ಇವೆ. ಬೆಳ್ಳಿಯ ಬಟ್ಟಲಿನಾಕಾರದ ಒಡವೆಮನೆ ಹಲವು ಮಹಡಿಗಳನ್ನು ಹೊಂದಿದೆ. ಬಿ.ಎಮ್‌.ಡಬ್ಲ್ಯೂ ಕೂಟದವರು ಬರೀ ಕಾರುಗಳನ್ನು ತಯಾರಿಸುವ ಮುಂಚೆ ಇಗ್ಗಾಲಿ ಬಂಡಿ ತಯಾರಕ ಕೂಟವಾಗಿ ಹೆಸರುವಾಸಿಯಾಗಿದ್ದರು. ಅಲ್ಲದೇ ಬಾನೋಡದ(Aeroplane) ಬಿಣಿಗೆಗಳನ್ನು ತಯಾರಿಸುವಲ್ಲಿ ಬಿ.ಎಮ್‌.ಡಬ್ಲ್ಯೂ ಕೂಟ ಮುಂದಿದೆ. ಇದೆಲ್ಲವನ್ನೂ ನೀವು ಒಡವೆಮನೆಯೊಳಗೆ ನೋಡಬಹುದು. ಕೂಟ ಹುಟ್ಟುಹಾಕಿದ ದಿನದಿಂದ ಇಲ್ಲಿವರೆಗೂ ಹೊರ ತಂದ ಹಲವಾರು ರೀತಿಯ ಕಾರು, ಇಗ್ಗಾಲಿ ಬಂಡಿಗಳು(Two-wheelers), ಬಂಡಿ ಬಿಣಿಗೆಗಳು(Car Engines), ಬಾನೋಡ ಮತ್ತು ಹಡಗಿನ ಬಿಣಿಗೆಗಳು ಮತ್ತು ವಿಶೇಶ ಈಡುಗಾರಿಕೆ(Design) ಇವೆಲ್ಲವನ್ನೂ ಹಂತ ಹಂತವಾಗಿ ತೋರ‍್ಪಡಿಸಲಾಗಿದೆ. ವಿಶೇಶವಾದ ಮತ್ತು ಹೆಸರುವಾಸಿಯಾದ ಕೆಲವು ಬಂಡಿಗಳ ಈಡುಗಾರಿಕೆಯ ಬಗ್ಗೆ ವಿಡಿಯೋ ತುಣುಕುಗಳನ್ನು ನೀವು ಕೇಳಬಹುದು. ಬಿಣಿಗೆ, ಕಾರುಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದು ನೋಡಲೇಬೇಕಾದ ಜಾಗ.

ಮಿನಿಕೂಪರ್(Mini Cooper) ಹೆಸರಿನ ಪುಟಾಣಿ ಕಾರುಗಳ ಬ್ರ್ಯಾಂಡ್ ಕೂಡ ಬಿ.ಎಮ್‌.ಡಬ್ಲ್ಯೂ ಕೂಟಕ್ಕೆ ಸೇರಿರುವುದರಿಂದ, ಮಿನಿ ಕೂಪರ್ ಬಂಡಿಗಳದ್ದೇ ಬೇರೆಯಾದ ಒಂದು ಕಟ್ಟಡವಿದೆ. ದುಂಡನೆಯ ಗೂಡಿನಂತಿರುವ, ಡಬಲ್ ಡೆಕ್ಕರ್ ಬಸ್‌ನಂತೆ ಜೋಡಿಸಲ್ಪಟ್ಟ ಮತ್ತು ಬಸ್ಸಿನಶ್ಟು ಉದ್ದನೆಯ ಮಿನಿಕೂಪರ್‌ಗಳು ನಿಜವಾದ ಪುಟಾಣಿ ಕಾರುಗಳ ಹೆಸರಿಗೆ ವಿರುದ್ದದಂತೆ ಕಂಡು ಬೆರಗು ಮೂಡಿಸುತ್ತವೆ. ನಿಮಗಿಶ್ಟವಾದ ಕಾರು, ಬೈಕ್ ಇಲ್ಲವೇ ಬಿಣಿಗೆಯ ಮುಂದೆ ಪೋಸು ಕೊಟ್ಟು ಪೋಟೊ ಕ್ಲಿಕ್ಕಿಸಿಕೊಳ್ಳಲಿಕ್ಕೆ ಯಾವುದೇ ಅಡ್ಡಿಯಿಲ್ಲ. ಹಲವಾರು ಮಹಡಿಯಲ್ಲಿ ಜೋಡಿಸಲ್ಪಟ್ಟ ಬಂಡಿ, ಬಿಣಿಗೆಗಳನ್ನು ನೋಡುತ್ತಾ ಚಿಕ್ಕವರು, ಹರೆಯದವರಶ್ಟೇ ಅಲ್ಲದೇ ದೊಡ್ಡವರು ಕೂಡ ಅಲ್ಲೇ ಕಳೆದುಹೋಗುತ್ತಾರೆ. ಈ ಒಡವೆಮನೆಯ ಇನ್ನೊಂದು ಬೆರಗುಗೊಳಿಸುವ ಅಂಶವೆಂದರೆ ಇಲ್ಲಿ ಹಲವಾರು ಇಗ್ಗಾಲಿ ಬಂಡಿಗಳನ್ನು ಗೋಡೆಗೆ ನೇತು ಹಾಕಿರುವುದು.

ಇದರ ಪಕ್ಕದಲ್ಲೇ ಹಲಮಹಡಿಯ ಬಿ.ಎಮ್‌.ಡಬ್ಲ್ಯೂ ವೆಲ್ಟ್ ಎಂಬ ಮಾರಾಟ ಮಳಿಗೆಯಿದೆ. ಇಲ್ಲಿ ಬಿ.ಎಮ್‌.ಡಬ್ಲ್ಯೂ, ಮಿನಿ ಕೂಪರ್ ಮತ್ತು ರೋಲ್ಸ್ ರಾಯ್ಸ್(Rolls Royce) ಕಾರುಗಳನ್ನು ವಿಚಾರಿಸಿ, ಕೊಂಡುಕೊಳ್ಳಬಹುದು. ಮಾರಾಟ ಮಳಿಗೆಯೂ ಒಡವೆಮನೆಯಂತೆ ಹಲವು ಮಹಡಿಯಲ್ಲಿ ಹರಡಿಕೊಂಡಿದೆ. ಮೇಲ್ಮಹಡಿಯಿಂದ ಕೆಳಗಿಳಿದು ಬರುವ ಬಂಡಿಗಳು ಮತ್ತು ಅಲ್ಲಿ ಅವುಗಳನ್ನು ಒಪ್ಪವಾಗಿ ಜೋಡಿಸಿಟ್ಟಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಬಂಡಿಗಳನ್ನು ಹೊರತು ಪಡಿಸಿ ಮಿಕ್ಕೆಲ್ಲ ಬಂಡಿಗಳಲ್ಲಿ ಕುಳಿತು ನೋಡುವ ಏರ‍್ಪಾಟು ಇಲ್ಲಿ ಒದಗಿಸಲಾಗಿದೆ.

ನಿಂಪೆನ್‌ಬರ‍್ಗ್ ಅರಮನೆ:

ಮ್ಯೂನಿಕ್‌ನ ಪಡುವಣ ದಿಕ್ಕಿಗೆ ನಿಂಪೆನ್‌ಬರ‍್ಗ್ ಅರಮನೆ(Nymphenburg Palace) ಇದೆ. ಈ ಅರಮನೆಯು ಮ್ಯೂನಿಕ್ ಆಳಿದ ದೊರೆಗಳ ಬೇಸಿಗೆಯ ಅರಮನೆ. ಈ ಅರಮನೆಯ ಆವರಣದಲ್ಲಿ ನೀರಿನ ಕಾರಂಜಿಗಳು, ಪುಟ್ಟದಾದ ಹೊಂಡವನ್ನು ಕಟ್ಟಿಸಿದ್ದು ನೋಡಿದರೆ ಇವೆಲ್ಲ ಬೇಸಿಗೆಯಲ್ಲಿ ತಂಪಾಗಿರಲೆಂದೇ ಮಾಡಿದ್ದು ಎನ್ನಿಸದಿರದು. ಅರಮನೆಗೆ ಕಾಲಿಡುತ್ತಿದ್ದಂತೆ ಎಲ್ಲೆಡೆ ಹಸಿರಿನ ತೋಟ ಅದರ ನಡುವೆ ತಕ್ಕುದಾದ ಕಾರಂಜಿಗಳು, ಉದ್ದನೆ ಸಾಗುವ ಬೀದಿ, ಬೀದಿಯ ಎರಡು ಬದಿಯಲ್ಲಿ ಅಂದಿನ ಅರಸ-ಅರಸಿಯರ ಮತ್ತು ಗಣ್ಯರ ಮೂರ‍್ತಿಗಳು ನಿಮ್ಮನ್ನು ಬರಮಾಡಿಕೊಳ್ಳುತ್ತವೆ.

ಅಮಾಲೀಯನ್‌ಬರ‍್ಗ್(Amalienburg), ಬಾಡೆನ್‌ಬರ‍್ಗ್(Badenburg) ಮತ್ತು ಪಗೋಡೆನ್‌ಬರ‍್ಗ್(Pagodenburg) ಎಂಬ 3 ಪುಟ್ಟ ಪುಟ್ಟ ಅರಮನೆಗಳಾಗಿ ನಿಂಪೆನ್‌ಬರ‍್ಗ್ ಅರಮನೆಯನ್ನು ಬೇರ‍್ಪಡಿಸಲಾಗಿದೆ. ಅರಮನೆಯ ಹಿಂಬಾಗದಲ್ಲಿರುವ ಕಿರಿದಾದ ಕೆರೆಯು ಈ ಮೂರು ಕಿರು-ಅರಮನೆಗಳನ್ನು ಸುತ್ತುವರೆದಿದೆ. ಸುತ್ತಲೂ ಗಿಡ ಮರದ ರಾಶಿ, ಕೆರೆ-ಕಾರಂಜಿಗಳನ್ನು ನೋಡುತ್ತಿದ್ದರೆ ಇಲ್ಲಿ ಹೊತ್ತು ಕಳೆಯುವುದೇ ಗೊತ್ತಾಗದು. ಅರಮನೆಯ ಹೆಚ್ಚಿನ ಬಾಗ ಬರೋಕ್(Baroque)ಮಾದರಿಯಲ್ಲಿ ಕಟ್ಟಲಾಗಿದೆ. ಅರಮನೆಯ ಆವರಣದಲ್ಲೇ 3 ವಿವಿದ ಒಡವೆಮನೆಗಳಿವೆ. ಅದರಲ್ಲಿ ಪೋರ‍್ಸಿಲಿನ್ ಒಡವೆಮನೆ(Porcelien Museum) ಬಲು ಮುಕ್ಯವಾದದ್ದು. 17-18ನೇ ನೂರೇಡಿನ ಹೊತ್ತಲ್ಲಿ ಇಲ್ಲಿ ಪೋರ‍್ಸಿಲಿನ್ ಅಂದರೆ ಪಿಂಗಾಣಿಯಿಂದ ತಯಾರಿಸಲ್ಪಡುವ ಕಾರ‍್ಕಾನೆ ಇತ್ತಂತೆ. ಅದೇ ಈಗ ಒಡವೆಮನೆಯಾಗಿ ಮಾರ‍್ಪಾಡುಗೊಂಡಿದೆ. ಅಂದಿನ ದಿನಗಳಲ್ಲಿ ಬವೇರಿಯನ್ ಮಂದಿ ಬಳಸುತ್ತಿದ್ದ ಪಿಂಗಾಣಿ ಹೂದಾನಿ, ಲೋಟ, ಕಪ್ ಮುಂತಾದ ಪಾತ್ರೆ-ಪಗಡಗಳು ಇಲ್ಲಿ ಕಾಣುತ್ತವೆ.

ಅಲಾಯನ್ಜ್ ಅರೇನಾ(Allianz Arena):

ಮ್ಯೂನಿಕ್‍‌ನ ಊರಾಚೆಯಿರುವ ಕಾಲ್ಚೆಂಡಿನಾಟದ ಬಯಲೇ ಅಲಾಯನ್ಜ್ ಅರೇನಾ. ಅಲಾಯನ್ಜ್ ಎಂಬ ಹೆಸರುವಾಸಿ ಮುಂಗಾಪು(Insurance) ಮತ್ತು ಹಣಕಾಸಿನ ಕೂಟದವರು ಈ ಬಯಲಿನ ಗುತ್ತಿಗೆಯನ್ನು ಪಡೆದು ಇದನ್ನು ನೋಡಿಕೊಳ್ಳುತ್ತ ತಮ್ಮ ಹೆಸರನ್ನೇ ಇರಿಸಿದ್ದಾರೆ. ಒಟ್ಟಿಗೆ ಸುಮಾರು 75,000 ಜನರು ಕುಳಿತು ಆಟ ಸವಿಯಬಹುದಾಗಿದೆ. ಕಾಲ್ಚೆಂಡಿನಾಟ ಜರ‍್ಮನಿಯಲ್ಲಿ ತುಂಬಾ ಮೆಚ್ಚಿನ ಮತ್ತು ಹೆಸರುವಾಸಿ ಆಟ. ಜಗತ್ತಿನ ಹೆಸರುವಾಸಿ ಕಾಲ್ಚೆಂಡಿನಾಟದ ಕ್ಲಬ್‌ಗಳಲ್ಲೊಂದಾದ ಎಪ್.ಸಿ.ಬಾಯರ‍್ನ್‌ಗೆ(FC Bayern) ಮ್ಯೂನಿಕ್ ತವರೂರು. ಜರ‍್ಮನಿಯ ಕಾಲ್ಚೆಂಡಿನಾಟ ತಂಡದ ಕ್ಯಾತ ಆಟಗಾರರಾದ ತಾಮಸ್ ಮುಲ್ಲರ್(Thomas Muller), ಪಿಲಿಪ್ ಲಾಹ್ಮ್(Philip Lahm), ಜೋಶುವಾ ಕಿಮ್ಮಿಶ್(Joshua Kimmich), ಮ್ಯಾನುವಲ್ ನ್ಯುಯರ್(Manuel Neuer) ಎಲ್ಲರೂ ಎಪ್.ಸಿ.ಬಾಯರ‍್ನ್ ಗಾಗಿ ಆಡುತ್ತಾರೆ. ‍ಟಿಎಸ್‌ವಿ 1860 ಮ್ಯೂನಿಕ್ (TSV1860 Munich) ಎಂಬ ಇನ್ನೊಂದು ಕ್ಲಬ್ ಕೂಡ ಮ್ಯೂನಿಕ್ ಊರನ್ನೇ ತವರು ನೆಲೆಯಾಗಿಸಿಕೊಂಡಿದೆ. ಅಲಾಯನ್ಜ್ ಅರೇನಾವೇ ಈ ಎರಡು ತಂಡಗಳಿಗೆ ತವರಿನ ಬಯಲು.

ಅಲಾಯನ್ಜ್ ಅರೇನಾದ ವಿಶೇಶವೆಂದರೆ ಈ ಆಟದ ಬಯಲು ಊಸರವಳ್ಳಿಯಂತೆ ಬಣ್ಣ ಬದಲಿಸಿಕೊಳ್ಳುತ್ತದೆ. ಅರೇನಾದ ಹೊರಮೈಯನ್ನು ಗಾಳಿಯಿಂದ ಉಬ್ಬಿಸಬಲ್ಲ ಪ್ಲ್ಯಾಸ್ಟಿಕ್ ಹೊದಿಕೆಗಳಿಂದ(Sheet) ಮಾಡಲ್ಪಟ್ಟಿದ್ದು ಇವುಗಳಲ್ಲಿ ನಮಗಿಶ್ಟದ ಬಣ್ಣದ ಬೆಳಕಿನಿಂದ ಜಗಮಗಿಸಬಹುದು. ಎಪ್.ಸಿ.ಬಾಯರ‍್ನ್ ತಂಡದ ಆಟಗಳು ನಡೆಯುವಾಗ ಕೆಂಪು ಬಣ್ಣ, ಟಿಎಸ್‌ವಿ 1860 ತಂಡದ ಆಟ ನಡೆಯುವಾಗ ನೀಲಿ ಬಣ್ಣ ಮತ್ತು ಜರ‍್ಮನ್ ತಂಡದ ಆಟಗಳು ನಡೆಯುವಾಗ ಬಿಳಿ ಬಣ್ಣದ ಬೆಳಕನ್ನು ಹರಿಸಿ ಆಟಕ್ಕೆ ಹುರುಪೇರಿಸಲಾಗಿರುತ್ತದೆ.

ನೋಡತಕ್ಕ ಇತರೆ ತಾಣಗಳು:

ಮ್ಯೂನಿಕ್ ರೆಸಿಡೆನ್ಸ್-ಇದು ಮ್ಯೂನಿಕ್ ಆಳಿದ ಅರಸು ಮನೆತನಗಳ ಮುಕ್ಯ ಅರಮನೆ. ಅರಮನೆಯ ಒಳಬಾಗದಲ್ಲಿ ಹಲವು ಬಗೆಯ ಅಂದು ಬಳಕೆಯಲ್ಲಿದ್ದ ವಸ್ತುಗಳನ್ನು ಕೂಡಿಡಲಾಗಿದೆ. ಮ್ಯೂನಿಕ್ ರೆಸಿಡೆನ್ಸ್ ಅಲ್ಲದೇ ಊರಿನೆಲ್ಲೆಡೆ ಹರಡಿಕೊಂಡಿರುವ ಬಗೆ ಬಗೆಯ ಒಡವೆಮನೆಗಳತ್ತ ಸುತ್ತಾಡಬಹುದು. ಚರ‍್ಚ್ ನೋಡಲು ಬಯಸುವರಿಗೆ ಹಲವು ಚರ‍್ಚ್‌ಗಳು ಇಲ್ಲುಂಟು.ಮ್ಯೂನಿಕ್‌ನ ಉಸುರಿಮನೆಗೂ(Zoo) ಬೇಟಿಕೊಟ್ಟು ಇಲ್ಲಿರುವ ಉಸುರಿಗಳ ಬಗ್ಗೆ ಅರಿಯಬಹುದು.

ಜರ‍್ಮನಿಗೂ ಬೀಯರ್‌ಗೂ ಬಲು ಹತ್ತಿರದ ನಂಟು. ಜರ‍್ಮನಿಯ ಎಲ್ಲೆಡೆ ಹಲವಾರು ಬ್ರೌಹೌಸ್‌ಗಳು(Brauhaus) ಅಂದರೆ ಬೀಯರ್ ತಯಾರಿಸುವ ಬಟ್ಟಿಗಳು ಕಂಡು ಬರುತ್ತವೆ. ಮ್ಯೂನಿಕ್ ಕೂಡ ಸಾಕಶ್ಟು ಬ್ರೌಹೌಸ್‌ಗಳನ್ನು ಹೊಂದಿದೆ. ಮ್ಯೂನಿಕ್ ‌ನಲ್ಲಿ ನಡೆಯುವ ‘ಅಕ್ಟೋಬರ್‌ ಪೆಸ್ಟ್’(Oktober Fest) ಎಲ್ಲೆಡೆ ಹೆಸರುಗಳಿಸಿದೆ. ಮದ್ಯ ಸೆಪ್ಟೆಂಬರ್‌ನಿಂದ ಅಕ್ಟೋಬರ್ ಮೊದಲವಾರದ ವರೆಗೂ ನಡೆಯುವ ಅಕ್ಟೋಬರ್‌ ಪೆಸ್ಟ್‌ನಲ್ಲಿ ಸಿಕ್ಕಾಪಟ್ಟೆ ಬೀಯರ್ ಮಾರಲಾಗುತ್ತದೆ. ಪ್ರತಿವರುಶ ಈ ಜಾತ್ರೆಗೆಂದೇ ಲಕ್ಶಾಂತರ ಮಂದಿ ಜರ‍್ಮನಿ ಮತ್ತು ಬೇರೆ ಬೇರೆ ನಾಡುಗಳಿಂದ ಬಂದು ಸೇರಿರುತ್ತಾರೆ. ಬರೀ ಬೀಯರ್ ಅಲ್ಲದೇ ಕುಣಿತ, ಹಾಡು, ವಾದ್ಯ ಮೇಳಗಳು ಮತ್ತು ಜಾತ್ರೆಯಲ್ಲಿ ಕಂಡುಬರುವ ಬಗೆ ಬಗೆಯ ಜೋಕಾಲಿ ಮುಂತಾದ ಆಟದ ಪೋಟಿಗಳು ಇಲ್ಲಿ ಜರಗುತ್ತವೆ.

ಮ್ಯೂನಿಕ್‌ಗೆ ಹತ್ತಿರದಲ್ಲಿರುವ ನೋಯಿಶ್‌ವಾನ್‌ಸ್ಟೀನ್(Neuschwanstein) ಎಂಬ ಪ್ರಸಿದ್ದ ಕೋಟೆ-ಅರಮನೆಗೆ(Castle) ಹೋಗಿ ಬರಬಹುದು. ಈ ಕಾಸಲ್ ಜಗತ್ತಿನ ಪ್ರಮುಕ 10 ಕಾಸಲ್‌ಗಳಲ್ಲೊಂದು. ಜರ‍್ಮನಿಯ ತುತ್ತತುದಿಯ ಗುಡ್ಡಗಾಡು ಜುಗ್ಸ್‌ಸ್ಪಿಟ್ಜ್(Zugspitze) ಇಲ್ಲವೇ ಮೂರು ಹೊಳೆಗಳು ಸೇರುವ ಅಂದದ ಊರು ಪಸ್ಸೌಗೆ(Passau) ಕೂಡ ಹೋಗಿ ಬರಬಹುದು. ಆಸ್ಟ್ರಿಯಾದ ಸಾಲ್ಜ್‌ಬರ‍್ಗ್‌ಗೆ ಮ್ಯೂನಿಕ್ ‌ನಿಂದ ರೈಲಿನಲ್ಲಿ ಸಾಗಬಹುದು. ಇವೆಲ್ಲವೂ ಮ್ಯೂನಿಕ್ ‌ನಿಂದ 2-3 ಗಂಟೆಗಳಲ್ಲಿ ಪಯಣಿಸ ತಲುಪಬಹುದಾದ ಊರುಗಳು.

(ಮಾಹಿತಿ ಮತ್ತು ಚಿತ್ರ ಸೆಲೆ: muenchen.desacred-destinations.comwikipedia.orgfreegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: