ಚಿಟ್ಟೆಗಳಲ್ಲೊಂದು ಅಪರೂಪದ ಸಂಗತಿ
ಸಾಮಾನ್ಯವಾಗಿ ಮನುಶ್ಯನಂತೆ ಎಲ್ಲಾ ಪ್ರಾಣಿ ಹಾಗೂ ಹಕ್ಕಿಗಳಲ್ಲಿಯು ಕೂಡ ಗಂಡು, ಹೆಣ್ಣು ಎಂಬ ಎರಡು ಲೈಂಗಿಕ (Sexual) ವರ‍್ಗಗಳಿದ್ದು, ಈ ಎರಡರ ಲೈಂಗಿಕ ಗುಣಲಕ್ಶಣಗಳು ಬೇರೆ ಬೇರೆ ಆಗಿರುತ್ತವೆ. ಯಾವುದೇ ಜೀವಿಯು ಸಾಮಾನ್ಯವಾಗಿ ಗಂಡು ಅತವಾ ಹೆಣ್ಣು ಯಾವುದಾದರೂ ಒಂದರ ಲೈಂಗಿಕ ಗುಣಲಕ್ಶಣಗಳನ್ನು ಹೊಂದಿರುತ್ತವೆ. ಮನುಶ್ಯರಲ್ಲಿ ಕೆಲವರು ಗಂಡು, ಹೆಣ್ಣು ಎರಡೂ ಗುಣಲಕ್ಶಣಗಳನ್ನು ಹೊಂದಿರುತ್ತಾರೆ ಎಂಬುದು ತಿಳಿದಿತ್ತು. ಆದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಎಲ್ಲರ ಮೆಚ್ಚಿನ ಬಣ್ಣ ಬಣ್ಣದ ಚಿಟ್ಟೆಗಳಲ್ಲಿ ಕೂಡ ಕೆಲವು, ಗಂಡು – ಹೆಣ್ಣು ಎರಡೂ ಗುಣಲಕ್ಶಣಗಳನ್ನು ಹೊಂದಿರುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
ಚಿಟ್ಟೆಗಳಲ್ಲಿ ಇಗ್ಗುರ‍್ತಿನ (Bisexual) ಗುಣವನ್ನು ಮೊದಲು ಕಂಡುಹಿಡಿದ್ದಿದು ಯಾರು?
ಈ ನೆಲದಲ್ಲಿ ಸುಮಾರು 15000 ರಿಂದ 18000 ಜಾತಿಯ ಚಿಟ್ಟೆಗಳಿದ್ದು, ಇಂಡಿಯಾದಲ್ಲಿ ಸುಮಾರು 1800 ಜಾತಿಯ ಚಿಟ್ಟೆಗಳು ಕಂಡುಬರುತ್ತವೆ. ಒಂದು ದಿನ ಚಿಟ್ಟೆಗಳ ತನ್ನೊಲವಿಗ (volunteer) ಕ್ರಿಸ್ ಜಾನ್ಸನ್ (Chris Johnson) ಅವರು ಡ್ರೆಕ್ಸೆಲ್ ಕಲಿಕೆವೀಡಿನ (Drexel University) ಅಕಾಡೆಮಿ ಆಪ್ ನ್ಯಾಚುರಲ್ ಸೈನ್ಸ್ (Academy of Natural Sciences) ಅಲ್ಲಿನ ವಸ್ತು ಸಂಗ್ರಹಣಾಲಯದಲ್ಲಿ ಅತ್ಯಂತ ಅಸಾಮಾನ್ಯ ಗುಣಲಕ್ಶಣಗಳನ್ನು ಹೊಂದಿರುವ ಚಿಟ್ಟೆಯೊಂದನ್ನು ಕಂಡರು. ಕೆಲವೇ ಗಂಟೆಗಳ ಹಿಂದೆಯೇ ಹುಟ್ಟಿದ ಆ ಚಿಟ್ಟೆ ಆಗತಾನೇ ನಿದಾನವಾಗಿ ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡುತ್ತಿತ್ತು. ಅದರ ಎರಡು ರೆಕ್ಕೆಗಳು ತುಂಬಾ ನಾಟಕೀಯವಾಗಿ ಬೇರೆಯಾಗುತ್ತಿದ್ದವು. ಹಾಗೆಯೇ ಎರಡೂ ಬದಿಯ ರೆಕ್ಕೆಗಳು ಬೇರೆ ಬೇರೆ ಗುಣಲಕ್ಶಣಗಳನ್ನು ಹೊಂದಿದ್ದವು. ಬಲಬದಿಯ ಎರಡು ರೆಕ್ಕೆಗಳು ಕಂದು ಬಣ್ಣದ ಜೊತೆಗೆ ಸ್ವಲ್ಪ ಹಳದಿ ಹಾಗೂ ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿದ್ದು, ಅದು ಹೆಣ್ಣು ಚಿಟ್ಟೆಯ ಲಕ್ಶಣವಾಗಿತ್ತು. ಇನ್ನೂ ಎಡಬದಿಯ ಎರಡು ರೆಕ್ಕೆಗಳು ಗಾಡವಾದ ಹಸಿರು, ನೀಲಿ ಮತ್ತು ಕೆನ್ನೇರಳೆ ಬಣ್ಣವನ್ನು ಹೊಂದಿದ್ದು, ಅದು ಗಂಡು ಚಿಟ್ಟೆಯ ಲಕ್ಶಣವಾಗಿತ್ತು.
ಅನಂತರ ಚಿಟ್ಟೆಗಳ ಅರಿವಿಗರು ಈ ಅಸಾಮಾನ್ಯ ಚಿಟ್ಟೆಯನ್ನು ಆರ‍್ಕ್ ಡ್ಯೂಕ್ ಚಿಟ್ಟೆ ( Archduke butterfly) ಎಂದು ಕರೆದರು. ಇದು ಗೈನ್ಅಂಡ್ರೊಮಾರ‍್ಪೀ (gynandromorphy) ಎಂಬ ಒಂದು ಅಪರೂಪದ ಗೊತ್ತುಪಾಡು ಹೊಂದಿದೆ ಎಂದು ಹೇಳಿದರು. ಚಿಟ್ಟೆಗಳ ಕುರಿತ ಅರಿಮೆಗಾರರ ಪ್ರಕಾರ ಇದು ಪ್ರತಿ 10,000 ಸಾವಿರ ಚಿಟ್ಟೆಗಳ ಪೈಕಿ ಒಂದರಲ್ಲಿ ಕಂಡುಬರುವ ನೈಸರ‍್ಗಿಕ ಆಗುವಿಕೆಯಾಗಿತ್ತು (phenomenon). ಈ ಚಿಟ್ಟೆಯನ್ನು ಲೆಕ್ಸಿಯಾಸ್ ಪರ‍್ಡಾಲಿಸ್ (Lexias pardalis) ಎಂದು ಕೂಡ ಕರೆಯುತ್ತಾರೆ.
ಹಾಗಾದರೆ ಗೈನ್ಅಂಡ್ರೊಮಾರ‍್ಪೀ ಎಂದರೇನು?
ಗೈನ್ಅಂಡ್ರೊಮಾರ‍್ಪೀ ಎಂದರೆ ಗಂಡು ಮತ್ತು ಹೆಣ್ಣು ಎರಡೂ ಗುಣಲಕ್ಶಣಗಳನ್ನು ಒಳಗೊಂಡಿರುವ ಉಸಿರುಗ (organism). ಗೈನ್ಅಂಡ್ರೊಮಾರ‍್ಪ್ ಇದು ಗ್ರೀಕ್ ನುಡಿಯ ಪದವಾಗಿದ್ದು, ಇದರಲ್ಲಿ “ಗೈನೆ” (gyne) ಎಂದರೆ ಹೆಣ್ಣು ಮತ್ತು “ಆಂಡ್ರೊ” (andro) ಎಂದರೆ ಗಂಡು ಎಂದು ಸೂಚಿಸುತ್ತದೆ. ಈ ಪದವನ್ನು ಸಾಮಾನ್ಯವಾಗಿ ಹುಳದರಿಮೆಯಲ್ಲಿ (entomology) ಬಳಸಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ಹೆಂಗಂಡುಮಯ್ಯಿ ಎಂದು ಕರೆಯಬಹುದು.
ಗೈನ್ಅಂಡ್ರೊಮಾರ‍್ಪೀ ಇದಕ್ಕೆ ಕಾರಣವೇನು?
ಸಾಮಾನ್ಯವಾಗಿ ಪ್ರತಿಯೊಂದು ಉಸಿರುಗವು ಲಕ್ಶಾಂತರ ಸೂಲುಗೂಡು (cell) ಗಳಿಂದ ಮಾಡಲ್ಪಟ್ಟಿರುತ್ತದೆ. ಉಸಿರುಗವು 8 ರಿಂದ 64 ಸೂಲುಗೂಡುಗಳ ನಡುವೆ ಇದ್ದಾಗಲೇ ಇರ‍್ಬದಿಯ (Bilateral) ಗೈನ್ಅಂಡ್ರೊಮಾರ‍್ಪೀ ಲಕ್ಶಣಗಳು ಕಂಡುಬರಲು ಆರಂಬಿಸುತ್ತವೆ. ಉಸಿರುಗಗಳ ಆರಂಬಿಕ ಬೆಳವಣಿಗೆಯ ಸಮಯದಲ್ಲಿ ಮಿಟೋಸಿಸ್ (mitosis) ಎಂಬ ಕ್ರಿಯೆಯಿಂದ ಸೂಲುಗೂಡು ಅಲ್ಲಿನ ಲೈಂಗಿಕ ಬಳಿಯೊಯ್ಯುಕಗಳ (chromosomes) ನಕಲುಗಳು ಹುಟ್ಟಿಕೊಳ್ಳುತ್ತವೆ. ಬಳಿಕ ಇದು ಸಾಮಾನ್ಯವಾಗಿ ಒಂದೇ ಬಗೆಯ ಲೈಂಗಿಕತೆ (sexuality) ಹೊಂದಿರುವ ಎರಡು ಬೇರೆ ಬೇರೆ ಸೂಲುಗೂಡುಗಳಾಗಿ ವಿಂಗಡಿಸಲ್ಪಡುತ್ತದೆ. ಆದರೆ ಕೆಲವು ಅಪರೂಪದ ಸಂದರ‍್ಬಗಳಲ್ಲಿ ಇದರಲ್ಲಿನ ಲೈಂಗಿಕ ಬಳಿಯೊಯ್ಯುಕಗಳನ್ನು ಸರಿಯಾಗಿ ವಿಂಗಡಿಸುವುದಿಲ್ಲ. ಆದ್ದರಿಂದ ಉಸಿರುಗದಲ್ಲಿನ ಸೂಲುಗೂಡುಗಳ ಒಂದು ದೊಡ್ಡ ಗುಂಪು ಗಂಡು ಬೆಳವಣಿಗೆಯನ್ನು ಉಂಟುಮಾಡುವ ಲೈಂಗಿಕ ಬಳಿಯೊಯ್ಯುಕಗಳನ್ನು ಹೊಂದಿದ್ದರೆ, ಇನ್ನೊಂದು ದೊಡ್ಡ ಗುಂಪು ಹೆಣ್ಣು ಬೆಳವಣಿಗೆಯನ್ನು ಉಂಟುಮಾಡುವ ಲೈಂಗಿಕ ಬಳಿಯೊಯ್ಯುಕಗಳನ್ನು ಹೊಂದಿರುತ್ತವೆ. ಆದ್ದರಿಂದ ಉಸಿರುಗದಲ್ಲಿ ಗೈನ್ಅಂಡ್ರೊಮಾರ‍್ಪೀ ಲಕ್ಶಣಗಳು ಕಾಣಿಸಿಕೊಳ್ಳುತ್ತವೆ.
ಉದಾರಣೆಗೆ: XY ಸೂಲುಗೂಡು ಅಲ್ಲಿನ ಲೈಂಗಿಕ ಬಳಿಯೊಯ್ಯುಕಗಳು ಮಿಟೋಸಿಸ್ ಕ್ರಿಯೆಯಿಂದ XXYY ಗಳಾಗಿ ನಕಲು ಆಗುತ್ತವೆ. ಬಳಿಕ ಇದು ಸಾಮಾನ್ಯವಾಗಿ ಎರಡು ಬೇರೆ ಬೇರೆ XY ಸೂಲುಗೂಡುಗಳಾಗಿ ವಿಂಗಡಿಸಲ್ಪಡುತ್ತದೆ. ಆದರೆ ಕೆಲವು ಅಪರೂಪದ ಸಂದರ‍್ಬಗಳಲ್ಲಿ ಇದು X ಹಾಗೂ XYY ಸೂಲುಗೂಡುಗಳಾಗಿ ವಿಂಗಡಿಸಲ್ಪಡುತ್ತದೆ. ಇದು ಉಸಿರುಗದ ಆರಂಬಿಕ ಬೆಳವಣಿಗೆಯಲ್ಲಿ ಸಂಬವಿಸಿದರೆ, ಸೂಲುಗೂಡುಗಳ ಒಂದು ದೊಡ್ಡ ಬಾಗವು X ಹಾಗೂ ಇನ್ನೊಂದು ದೊಡ್ಡ ಬಾಗವು XYY ಆಗಿರುತ್ತದೆ. X ಹಾಗೂ XYY ಎರಡು ಬೇರೆ ಬೇರೆ ಲೈಂಗಿಕತೆಯನ್ನು ಬಿಂಬಿಸುತ್ತವೆ, ಆದ್ದರಿಂದ ಉಸಿರುಗವು ಗಂಡು ಹಾಗೂ ಹೆಣ್ಣು ಎರಡೂ ಗುಣಲಕ್ಶಣಗಳನ್ನು ಹೊಂದಿರುತ್ತದೆ.
ಗೈನ್ಅಂಡ್ರೊಮಾರ‍್ಪೀ ಗುಣಲಕ್ಶಣಗಳು ಕಂಡುಬರುವ ಕೆಲವು ಚಿಟ್ಟೆಗಳು
- ಕ್ಯಾಟೋನ್ಪೆಲ್ ನುಮಿಲಿಯಾ (Catonephele numilia) ಜಾತಿಯ ಚಿಟ್ಟೆಈ ಜಾತಿಯ ಚಿಟ್ಟೆಗಳಲ್ಲಿ ಸಾಮಾನ್ಯವಾಗಿ ವಯಸ್ಕ ಹಂತದಲ್ಲಿ ಗೈನ್ಅಂಡ್ರೊಮಾರ‍್ಪೀ ಲಕ್ಶಣಗಳನ್ನು ಕಂಡುಬರುತ್ತವೆ. ಇವುಗಳಲ್ಲಿ ಗಂಡು ಚಿಟ್ಟೆಯ ಎರಡು ರೆಕ್ಕೆಗಳು ಕಪ್ಪು ಬಣ್ಣದಾಗಿದ್ದು, ಅದರ ಮೇಲ್ಮಯ್ಯಲ್ಲಿ ಆರು ಕಿತ್ತಳೆ ಬಣ್ಣದ ಚುಕ್ಕೆಗಳಿರುತ್ತವೆ. ಇನ್ನೂ ಹೆಣ್ಣು ಚಿಟ್ಟೆಯ ಎರಡು ರೆಕ್ಕೆಗಳು ಕಪ್ಪು ಬಣ್ಣದಾಗಿದ್ದು, ರೆಕ್ಕೆಗಳ ನಡುವಿನ ಬಾಗದಲ್ಲಿ ಅಡ್ಡಲಾಗಿ ತಿಳಿ ಹಳದಿ ಬಣ್ಣದ ಪಟ್ಟಿಯಿರುತ್ತದೆ. ಗೈನ್ಅಂಡ್ರೊಮಾರ‍್ಪೀ ಚಿಟ್ಟೆಯಲ್ಲಿ ಒಂದು ರೆಕ್ಕೆಯು ಗಂಡು ಚಿಟ್ಟೆಯ ಲಕ್ಶಣವನ್ನು ಹೊಂದಿದ್ದರೆ, ಇನ್ನೊಂದು ರೆಕ್ಕೆಯು ಹೆಣ್ಣು ಚಿಟ್ಟೆಯ ಲಕ್ಶಣವನ್ನು ಹೊಂದಿರುತ್ತದೆ.
- ಗ್ರೇಟ್ ಮಾರ‍್ಮನ್ (Great Mormon) ಜಾತಿಯ ಚಿಟ್ಟೆಇದನ್ನು ಪ್ಯಾಪಿಲಿಯೊ ಮೆಮ್ನೊನ್ ಚಿಟ್ಟೆ ಎಂದು ಕೂಡ ಕರೆಯುತ್ತಾರೆ. ಇದು ತೆಂಕಣ ಏಶ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಟ್ಟೆಯಾಗಿದ್ದು, ಸ್ವಾಲೋಟೈಲ್ (swallowtail) ಎಂಬ ಕುಟುಂಬಕ್ಕೆ ಸೇರಿದೆ. ಗ್ರೇಟ್ ಮಾರ‍್ಮನ್ ಚಿಟ್ಟೆಯು ಒಟ್ಟು 13 ಉಪ ಜಾತಿಗಳನ್ನು ಹೊಂದಿದ್ದು, ಇದು 4.7 ರಿಂದ 5.9 ಇಂಚು ಉದ್ದವಿರುತ್ತದೆ. ಇದರಲ್ಲಿ ಗಂಡು ಚಿಟ್ಟೆಯು 4 ರೂಪಗಳನ್ನು ಹಾಗೂ ಹೆಣ್ಣು ಚಿಟ್ಟೆಯು 26 ರೂಪಗಳನ್ನು ಹೊಂದಿದೆ. ಗಂಡು ಚಿಟ್ಟೆಯು ಕಡು ನೀಲಿ ಬಣ್ಣ ಹಾಗೂ ಸ್ವಲ್ಪ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಇನ್ನು ಹೆಣ್ಣು ಚಿಟ್ಟೆಯ ರೆಕ್ಕೆಯ ಮೇಲ್ಬಾಗದ ಮುಂದಿನ ಬಾಗವು ಕಂದು ಬಣ್ಣದಿಂದ ಕೂಡಿದ್ದು, ಅದರ ನಡುವೆ ಬೂದು ಬಿಳಿ ಬಣ್ಣದ ಉದ್ದಗೆರೆಗಳು ಹಾದಿ ಹೋಗಿರುತ್ತವೆ. ಹಾಗೆಯೇ ರೆಕ್ಕೆಗಳ ತುದಿಯಲ್ಲಿ ಒಂದು ಕೆಂಪು ಬಣ್ಣದ ತೇಪೆಯಿದೆ. ರೆಕ್ಕೆಗಳ ತೆಳ ಬಾಗವು ನೀಲಿ ಹಾಗೂ ಕಪ್ಪು ಬಣ್ಣವನ್ನು ಹೊಂದಿದ್ದು, ಇದು 5 ರಿಂದ 7 ಹಳದಿ ಅತವಾ ಬಿಳಿ ಬಣ್ಣದ ತೇಪೆಗಳಿಂದ ಕೂಡಿರುತ್ತದೆ.
ಈ ನೆಲದಲ್ಲಿ ಗೈನ್ಅಂಡ್ರೊಮಾರ‍್ಪೀ ನಡುವಳಿಕೆಗಳಿರುವ ಇನ್ನೂ ಹಲವಾರು ಬಗೆಯ ಚಿಟ್ಟಿಗಳಿವೆ. ಇಂತಹ ಎಲ್ಲಾ ಕುತೂಹಲಕಾರಿ ವಿಶಯಗಳಿಗೆ ನಮ್ಮ ಸುಂದರ ಪ್ರಕ್ರತಿಯೇ ಕಾರಣ. ಇದರ ಮಡಲಲ್ಲಿ ಇನ್ನೂ ಏನೇನು ಅಡಿಗಿದೆಯೋ?
(ಮಾಹಿತಿ ಹಾಗೂ ಚಿತ್ರ ಸೆಲೆ: cbsnews.com, ifoundbutterflies.org, kidsbutterfly.org, livescience.com, wiki1, wiki2)
ಇತ್ತೀಚಿನ ಅನಿಸಿಕೆಗಳು