ಎಂದೆಂದಿಗೂ ಅವಳು ತಂದೆಗೆ ಪುಟ್ಟ ಮಗಳು

ಪ್ರಶಾಂತ. ಆರ್. ಮುಜಗೊಂಡ.

ಅದೊಂದು ದಿನ ತಂದೆ ತನ್ನ ಎಲ್ಲ ಕೆಲಸವನ್ನು ಮುಗಿಸಿ 4 ವರುಶದ ಮಗಳನ್ನು ಹಾಸಿಗೆಯಲ್ಲಿ ಮಲಗಿಸಿ ತಾನೂ ಮಲಗಿಕೊಂಡನು. ನಡುರಾತ್ರಿ ಮಗು ಅಳಲು ಪ್ರಾರಂಬಿಸಿತು. ಕೆಲಸದ ಕಾರಣದಿಂದ ಅದಾಗಲೆ ದಣಿದಿದ್ದ ತಂದೆಗೆ ಮಗಳನ್ನು ಸಮಾದಾನ ಮಾಡುವಶ್ಟು ತಾಳ್ಮೆ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮುಂಗೋಪದಿಂದ ತನ್ನ ಹಾಸಿಗೆಯಿಂದ ಎದ್ದು, ಮಗಳಿರುವ ಕಡೆ ನಡೆದು ಮಗಳನ್ನು ಕೇಳಿದ, “ಯಾಕೆ ಅಳುತ್ತಿರುವೆ, ಏನ್ ಬೇಕು?”. ಮಗಳು ಉತ್ತರಿಸಿದಳು, “ಅಪ್ಪ ನಾನು ನಿನಗೊಂದು ಮುತ್ತು ಕೊಡಬೇಕು ಅದಕ್ಕೆ ಅಳುತ್ತಿದ್ದೀನಿ. ನೀ ಬಳಿಗೆ ಬರಲಿ ಅಂತ”.

ಮಗಳ ಈ ಉತ್ತರಕ್ಕೆ ತಂದೆಯ ಕೋಪ ಕರಗಿ, ಬದುಕಿನ ಬಗ್ಗೆ ಅವನಿಗಿದ್ದ ದ್ರುಶ್ಟಿಕೋನವೆ ಬದಲಾಯಿತು. ಜೀವನದಲ್ಲಿ ಮುಕ್ಯ ಎಂದುಕೊಂಡಂತಹ ದುಡಿಮೆ, ವ್ಯವಹಾರ ಇವುಗಳಗಿಂತ ಮಿಗಿಲಾಗಿರುವುದು ಮಗಳ ಪ್ರೀತಿ ಎಂದು ಅವನಿಗೆ ಅನಿಸಿತು.

ಎಲ್ಲರಿಗಿಂತ ಮಿಗಿಲಾದ ಪ್ರೀತಿ ಎಂದರೆ ಅದು ಅಪ್ಪ ಮತ್ತು ಮಗಳ ಪ್ರೀತಿ ಎಂದು ನನ್ನ ಅನಿಸಿಕೆ. ಮಗಳ ಮೇಲೆ ಅಪ್ಪ ತೋರಿಸುವದಕ್ಕಿಂತ ಹೆಚ್ಚು ಪ್ರೀತಿಯನ್ನು ಮಗಳು ತನ್ನ ತಂದೆಯ ಮೇಲೆ ತೋರಿಸುವವಳು. ಅಪ್ಪ ಮಗಳ ಬಲವಾದ ಬಾಂದವ್ಯ ಮಗಳ ಮುಂದಿನ ಜೀವನದ ಮೇಲೆ ಅಪಾರ ಪರಿಣಾಮ ಬೀರುವುದು. “ತಂದೆಯಂತೆ ಮಗ” ಎನ್ನುವ ಮಾತಿದೆ. ಮಗನ ಮೇಲೆ ತಂದೆಯ ಬಲವಾದ ಪ್ರಬಾವ ಹೇಗೆ ಬಿರುವುದೋ, ಅದೇ ತರಹ ಮಗಳ ಮೇಲೆ ಕೂಡ ತಂದೆಯ ಪ್ರಬಾವ ಬಲವಾಗಿ ಇರುವುದು.

ಅಪ್ಪನ ಪ್ರಬಾವದಿಂದ ಮಗಳ ಆತ್ಮಗೌರವ, ವಿಶ್ವಾಸ ಬೆಳೆಯುವುದಲ್ಲದೇ ಪುರು‌ಶರ ಮೇಲಿನ ಅಬಿಪ್ರಾಯ ಕೂಡ ರೂಪುಗೊಳ್ಳುವುದು. ಈಗಿನ ದಿನಗಳಲ್ಲಿ ತಂದೆ ಕೂಡ ಅಮ್ಮನಶ್ಟೇ ಸಮನಾದ ಆರೈಕೆ ಮಾಡುವುದನ್ನು ಕಾಣಬಹುದು.

ತಂದೆಯು ಮಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಮಗಳು ಮಾನಸಿಕ ಒತ್ತಡಕ್ಕೊಳಗಾದಾಗ ಬೆನ್ನಹಿಂದೆ ನಿಂತು ಅವಳನ್ನು ಪ್ರೋತ್ಸಾಹಿಸುವನು. ಮಗಳ ಜೀವನದ ಪ್ರತಿ ಹೆಜ್ಜೆಯಲ್ಲಿ, ಪ್ರತಿ ಕ್ಶಣದಲ್ಲೂ, ಎಚ್ಚರದಿಂದ ಅವಳೊಡನೆ ಸಾಗುತ್ತ ಅವಳ ಬಾವನೆಗಳನ್ನು ಸೂಕ್ಶ್ಮವಾಗಿ ಗಮನಿಸುತ್ತ, ಅವಳ ವಿಚಾರಗಳನ್ನು ಕೇಳಲು ತನ್ನ ಸಮಯವನ್ನು ತೆಗೆದಿಡುವನು. ಮಗಳ ಹಲವಾರು ಹವ್ಯಾಸಗಳಲ್ಲಿ ತಂದೆ ಆಸಕ್ತಿಯನ್ನು ತೋರಿಸುವನು. ತಂದೆಯ ಈ ರೀತಿಯ ನೇರ ಪಾಲ್ಗೊಳ್ಳುವಿಕೆ ಹಾಗು ಪ್ರೋತ್ಸಾಹವು ಮಗಳಲ್ಲಿ ವಿಶ್ವಾಸವನ್ನು ಮತ್ತು ಸ್ವಂತ ಸಾಮರ‍್ತ್ಯವನ್ನು ಹೆಚ್ಚಿಸುವುದು.
ಮಗ ಏನಾದರು ತಪ್ಪು ಮಾಡಿದಾಗ ತಂದೆ, ಇನ್ನೊಮ್ಮೆ ಮಾಡಬೇಡ ಅಂತ ಹೇಳಿ ಅದನ್ನು ಅಲ್ಲಿಗೆ ನಿಲ್ಲಿಸುವನು. ಅದೇ ಮಗಳು ತಪ್ಪು ಮಾಡಿದಾಗ ಅವಳಿಗೆ ತಿಳುವಳಿಕೆ ಹೇಳುವ ಪರಿ ಬೇರೆಯೇ ಇರುವುದು. ಮಗಳಿಗೆ ತಿಳುವಳಿಕೆ ಹೇಳುವಾಗ ಮಾತಿನಲ್ಲಿನ ತಲ್ಲಣ ಮತ್ತು ಬಾವನೆಯ ನಂಬಲಾಗದ ಮಟ್ಟಗಳು ಅಲ್ಲಿರುವುವು. ಮಗಳು ಬೆಳೆದು, ಮದುವೆ ಆಗಿ ಗಂಡನ ಮನೆಗೆ ಹೋದರೂ ತಂದೆಗೆ ತನ್ನ ಮಗಳ ಜೊತೆ ಕಳೆದ ಹೊತ್ತು, ಅವಳ ಬಾಲ್ಯ, ತುಂಟತನ, ಅವಳು ಮನೆತುಂಬ ಓಡಾಡಿದ ಆ ಪುಟ್ಟ ಪುಟ್ಟ ಹೆಜ್ಜೆಗಳ ನೆನಪುಗಳು, ಅವಳ ಆಟಿಗೆಯ ಸಾಮಾನುಗಳು ಪ್ರತಿಯೊಂದು ನೆನಪಾಗಿ ಅವೆಲ್ಲವೂ ಮರಳಿ ಮತ್ತೊಮ್ಮೆ ನಡೆದರೆ ಎಶ್ಟು ಚೆಂದ ಎಂಬ ಕಲ್ಪನೆಯಲ್ಲೇ ಮುಳುಗಿರುವನು. ಅವಳು ಎಶ್ಟೇ ಬೆಳೆದು ದೊಡ್ಡವಳಾದರೂ ಅವಳು ಯಾವಾಗಲೂ ಅವನಿಗೆ “ಪುಟ್ಟ ಮಗಳು”.

(ಚಿತ್ರ ಸೆಲೆ: freegreatpicture.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.