ಆಯ್ದಕ್ಕಿ ಲಕ್ಕಮ್ಮನ ವಚನಗಳ ಓದು
– ಸಿ.ಪಿ.ನಾಗರಾಜ.
ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ ಲಕ್ಕಮ್ಮನ ಬಗ್ಗೆ ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ.
ಹೆಸರು: ಆಯ್ದಕ್ಕಿ ಲಕ್ಕಮ್ಮ.
ಊರು: ಅಮರೇಶ್ವರ ಗ್ರಾಮ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ.
ಗಂಡ: ಆಯ್ದಕ್ಕಿ ಮಾರಯ್ಯ.
ಕಸುಬು: ಆಯ್ದಕ್ಕಿ ಮಾರಯ್ಯನು ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯ ಅಂಗಳದಿಂದ ಆಯ್ದುಕೊಂಡು ತಂದ ಅಕ್ಕಿಯಿಂದ ಉಣಿಸುತಿನಸುಗಳನ್ನು ತಯಾರಿಸಿ ಶಿವಶರಣಶರಣೆಯರಿಗೆ ದಾಸೋಹ ಮಾಡುವುದು.
ದೊರೆತಿರುವ ವಚನಗಳ ಸಂಕ್ಯೆ: 25
ವಚನಗಳ ಅಂಕಿತನಾಮ : ಮಾರಯ್ಯ ಪ್ರಿಯ ಅಮರೇಶ್ವರಲಿಂಗ
===================================================
ಆಯ್ದು ತಂದ ಅಕ್ಕಿಯಿಂದ ತಿನಸುಉಣಿಸುಗಳನ್ನು ತಯಾರು ಮಾಡಿ, ಪ್ರತಿದಿನ ತಮ್ಮ ಮನೆಗೆ ಬರುವ ಶಿವಶರಣಶರಣೆಯರಿಗೆ ದಾಸೋಹ ಮಾಡುವುದನ್ನೇ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ದಂಪತಿಗಳು ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು. “ದಾಸೋಹ” ಎಂದರೆ ಜಂಗಮರ ಸೇವೆಯನ್ನು ಮಾಡುವುದು/ಹಸಿದು ಬಂದವರಿಗೆ ಅನ್ನವನ್ನು ನೀಡುವುದು.
ಬತ್ತ/ರಾಗಿ ಮುಂತಾದ ಬೆಳೆಗಳನ್ನು ಕುಯ್ದು, ಅರಿಗಳನ್ನು ಒಣಗಿಸಿ, ಹೊರೆಗಳನ್ನು ಕಟ್ಟುವಾಗ ಹೊರೆಯಿಂದ ಕಳಚಿಕೊಂಡು ಹೊಲಗದ್ದೆಗಳಲ್ಲಿ ಬಿದ್ದಿರುವ ತೆನೆಯನ್ನು “ಅಕ್ಕಲು” ಎಂದು ಕರೆಯುತ್ತಾರೆ. ಇಂತಹ ತೆನೆಗಳನ್ನು ಬಡವರು ಆಯ್ದುಕೊಂಡು ತಂದು ತಮ್ಮ ಹೊಟ್ಟೆಪಾಡನ್ನು ನೀಗಿಸಿಕೊಳ್ಳುತ್ತಾರೆ. ಈ ರೀತಿ ಬಿದ್ದಿರುವ ತೆನೆಗಳನ್ನು ಆಯ್ದುಕೊಳ್ಳುವ ಕೆಲಸವನ್ನು “ಅಕ್ಕಲಾಯುವುದು” ಎನ್ನುತ್ತಾರೆ. ಚೆಲ್ಲಾಡಿ ಬಿದ್ದಿರುವ ಅಕ್ಕಿಯನ್ನು ಆಯ್ದು ತರುವುದು ಇದನ್ನೇ ಹೋಲುವಂತಹ ಒಂದು ಕಸುಬು ಆಗಿರಬಹುದು.
ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಗೆ ನಾಡಿನ ಎಲ್ಲಾ ಕಡೆಗಳಿಂದಲೂ ಬರುತ್ತಿದ್ದ ಸಾವಿರಾರು ಮಂದಿ ಶಿವಶರಣಶರಣೆಯರಿಗೆ ಪ್ರತಿನಿತ್ಯವೂ ದಾಸೋಹ ನಡೆಯುತ್ತಿತ್ತು. ಅಂತಹ ಸಮಯದಲ್ಲಿ ಅಲ್ಲಲ್ಲಿ ಹರಡಿಕೊಂಡಂತೆ ನೆಲದ ಮೇಲೆ ಚೆಲ್ಲಾಡಿ ಬಿದ್ದಿರುತ್ತಿದ್ದ ಅಕ್ಕಿಯನ್ನು ಆಯ್ದು ತರುತ್ತಿದ್ದ ಮಾರಯ್ಯನಿಗೆ ಆಯ್ದಕ್ಕಿ ಮಾರಯ್ಯನೆಂಬ ಹೆಸರು ಬಂದಿತ್ತು. ಅಮರೇಶ್ವರ ಗ್ರಾಮದವರಾದ ಈ ದಂಪತಿಗಳು ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಮಾಡುತ್ತಿದ್ದ ಸಾಮಾಜಿಕ ಒಳಿತಿನ ಕೆಲಸಗಳ ಸುದ್ದಿಯನ್ನು ಕೇಳಿ, ತಮ್ಮ ಊರನ್ನು ಬಿಟ್ಟು ಕಲ್ಯಾಣಕ್ಕೆ ಬಂದು ನೆಲಸಿದ್ದರು. ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರ ಕುಟುಂಬದಲ್ಲಿ ಒಂದು ದಿನ ನಡೆದ ಪ್ರಸಂಗವೊಂದರ ಚಿತ್ರಣವು ಈ ಕೆಳಕಂಡ 4 ವಚನಗಳಲ್ಲಿ ರೂಪುಗೊಂಡಿದೆ.
1) ಬಸವಣ್ಣನವರ ಮಹಾಮನೆಯ ಅಂಗಳದಿಂದ ಎಂದಿನಂತೆ ಅಕ್ಕಿಯನ್ನು ಆಯ್ದು ತರಲು ಹೋಗಬೇಕಾಗಿದ್ದ ಮಾರಯ್ಯನು ಅಂದು ಹೋಗಿರಲಿಲ್ಲ. ಆಗ ಲಕ್ಕಮ್ಮನು ತನ್ನ ಗಂಡನಿಗೆ ಅಲ್ಲಿಗೆ ಹೋಗಿಬರಬೇಕಾಗಿರುವುದನ್ನು ನೆನಪಿಸುತ್ತಾಳೆ.
ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ಬೇಗ ಹೋಗು ಮಾರಯ್ಯಾ.
( ಕಾಯಕ=ದುಡಿಮೆ/ಕಸುಬು/ಕೆಲಸ; ನಿಂದು+ಇತ್ತು; ನಿಂದು=ನಡೆಯದೆ/ಮುಂದುವರಿಯದೆ/ಮುಂದೆ ಸಾಗದೆ; ಇತ್ತು=ಇರುವುದು; ನಿಂದಿತ್ತು=ನಿಂತುಹೋಗಿದೆ; ಹೋಗು+ಅಯ್ಯಾ; ಹೋಗು=ತೆರಳು/ನಡೆ; ಅಯ್ಯಾ=ವ್ಯಕ್ತಿಗಳನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಕೆಯಾಗುವ ಪದ ; ಎನ್ನ+ಆಳ್ದನೆ; ಎನ್ನ=ನನ್ನನ್ನು; ಆಳ್=ಗಂಡಸು; ಆಳ್ದನ್=ಗಂಡ/ಪತಿ; ಆಳ್ದನೆ=ಆಳುತ್ತಿರುವವನೆ/ಒಡೆಯನೆ;
ಭಾವಶುದ್ಧ+ಆಗಿ; ಭಾವ=ಮನಸ್ಸಿನ ಒಳಮಿಡಿತ/ಮನದ ಇಂಗಿತ/ಮನದ ಆಶಯ/ಮನದೊಳಗೆ ಮೂಡುವ ಸಂಗತಿಗಳು/ಸಂವೇದನೆಗಳು; ಶುದ್ಧ=ಮಡಿ/ಶುಚಿ/ಚೊಕ್ಕಟ/ನಿರ‍್ಮಲ; ಭಾವಶುದ್ಧ=ಒಳ್ಳೆಯ ಒಳಮಿಡಿತಗಳಿಂದ ಕೂಡಿದ ಮನಸ್ಸು/ಒಳಿತನ್ನು ಮಾಡಬೇಕೆಂಬ ಇಂಗಿತದಿಂದ ಕೂಡಿರುವ ಮನಸ್ಸು; ಭಾವಶುದ್ಧವಾಗಿ=ಒಳ್ಳೆಯ ಮನಸ್ಸಿನಿಂದ/ಉದ್ದೇಶದಿಂದ ಕೂಡಿ; ಮಹಾ=ದೊಡ್ಡ/ಹಿರಿಯ; ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಪೂಜಿಸುವವನು/ಶಿವನಿಗೆ ಒಲಿದವನು; ಮಹಾಶರಣ=ಬಸವಣ್ಣನವರನ್ನು ‘ಮಹಾಶರಣ’ ಎಂಬ ಹೆಸರಿನಿಂದ ಇತರರು ಕರೆಯುತ್ತಿದ್ದರು/ಹೆಸರಿಸಿದ್ದರು; ತಿಪ್ಪೆ=ದನಕರುಗಳ ಸಗಣಿಗಂಜಲವನ್ನು ಮತ್ತು ಕಸಕಡ್ಡಿಗಳನ್ನು ಹಾಕುವ ಜಾಗ/ಗುಂಡಿ; ತಪ್ಪಲ=ತೊಪ್ಪಲು/ಸೊಪ್ಪು/ಮರಗಿಡಗಳ ಎಲೆಚಿಗುರು; “ತಿಪ್ಪೆಯ ತಪ್ಪಲು” ಎಂಬ ಪದಕಂತೆಯು “ಮನೆಯ ಮುಂದಣ ಅಂಗಳ/ಬಯಲಾಗಿರುವ ಎಡೆ/ತೆರೆದ ಜಾಗ” ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಅಕ್ಕಿ=ಬತ್ತದ ಹೊಟ್ಟನ್ನು ತೆಗೆದ ನಂತರ ದೊರೆಯುವ ಕಾಳು; ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿ=ಬಸವಣ್ಣನವರ ಮಹಾಮನೆಯ ಅಂಗಳದಲ್ಲಿ ಹರಡಿಕೊಂಡಂತೆ ಬಿದ್ದಿರುವ ಅಕ್ಕಿ; ತಂದು=ತೆಗೆದುಕೊಂಡು ಬಂದು/ಆಯ್ದುಕೊಂಡು ಬಂದು; ನಿಶ್ಚೈಸಿ=ನಿಶ್ಚಯಿಸಿ/ತೀರ‍್ಮಾನಿಸಿ/ಗೊತ್ತುಮಾಡಿಕೊಂಡು; ನಿಶ್ಚೈಸಿ ಮಾಡಬೇಕು=ಮೊದಲೇ ಗೊತ್ತುಪಡಿಸಿಕೊಂಡಿರುವ ಕೆಲಸವನ್ನು ಮಾಡಬೇಕಾಗಿದೆ;
ಮಾರಯ್ಯ=ಆಯ್ದಕ್ಕಿ ಲಕ್ಕಮ್ಮನ ಗಂಡನ ಹೆಸರು; ಪ್ರಿಯ=ನಲ್ಲ/ಒಲವುನಲಿವಿನಿಂದ ಕೂಡಿರುವ ವ್ಯಕ್ತಿ; ಅಮರ+ಈಶ್ವರ; ಅಮರ=ಸಾವಿಲ್ಲದವನು/ದೇವತೆ; ಈಶ್ವರ=ಶಿವ/ಒಡೆಯ; ಅಮರೇಶ್ವರ=ಅಮರೇಶ್ವರ ಎಂಬ ಊರಿನಲ್ಲಿದ್ದ ಲಿಂಗದ ಹೆಸರು/ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳ ಮೆಚ್ಚಿನ ದೇವರ ಹೆಸರು; ಆಯ್ದಕ್ಕಿ ಲಕ್ಕಮ್ಮನು ” ಮಾರಯ್ಯಪ್ರಿಯ ಅಮರೇಶ್ವರಲಿಂಗ ” ಎಂಬುದನ್ನು ತಾನು ರಚಿಸಿದ ವಚನಗಳಲ್ಲಿ ಅಂಕಿತನಾಮವನ್ನಾಗಿ ಬಳಸಿದ್ದಾಳೆ)
2) ದಾಸೋಹಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಅಕ್ಕಿಯನ್ನು ಆಯ್ದುಕೊಂಡು, ಅಕ್ಕಿಯ ದೊಡ್ಡ ಗಂಟನ್ನು ಹೊತ್ತು ಮನೆಗೆ ಬಂದ ಮಾರಯ್ಯನನ್ನು ಕಂಡು ಅಚ್ಚರಿ ಹಾಗೂ ಆತಂಕದಿಂದ ಲಕ್ಕಮ್ಮನು ಶಿವಶರಣರಾದವರು ಈ ಬಗೆಯಲ್ಲಿ ಆಸೆಯ ಸೆಳೆತಕ್ಕೆ ಒಳಗಾಗಬಾರದೆಂಬ ಎಚ್ಚರಿಕೆಯನ್ನು ನೀಡುತ್ತಾಳೆ.
ಆಸೆಯೆಂಬುದು ಅರಸಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.
( ಆಸೆ+ಎಂಬುದು; ಆಸೆ=ವ್ಯಕ್ತಿಯ ಒಲವು ನಲಿವಿಗೆ ಕಾರಣವಾಗುವ ಎಲ್ಲವನ್ನೂ ಹೆಚ್ಚುಹೆಚ್ಚಾಗಿ ಪಡೆಯಬೇಕೆಂಬ ಒಳಮಿಡಿತ/ಬಯಕೆ; ಎಂಬುದು=ಎನ್ನುವುದು; ಅರಸಂಗೆ+ಅಲ್ಲದೆ; ಅರಸಂಗೆ=ಅರಸನಿಗೆ; ಅರಸ=ರಾಜ/ದೊರೆ/ಆಳುವವನು/ಒಡೆಯ; ಅಲ್ಲದೆ=ಹೊರತುಪಡಿಸಿ; ಶಿವಭಕ್ತರಿಗೆ+ಉಂಟೆ; ಭಕ್ತ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು , ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು; ಶಿವಭಕ್ತ=ಶಿವನನ್ನು ಪೂಜಿಸುವವನು/ಒಳ್ಳೆಯ ನಡೆನುಡಿಗಳಲ್ಲಿ ಶಿವನನ್ನು ಕಾಣುವವನು; ಉಂಟೆ=ಇರುತ್ತದೆಯೇ/ಇರುವುದೇ; ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ= ನಾಡಿಗೆ ಅರಸನಾದವನು ಸದಾಕಾಲ ನಾಡಿನ ಎಲ್ಲೆಗಳನ್ನು ವಿಸ್ತರಿಸುವ/ಇತರರನ್ನು ಸದೆಬಡಿದು ಚಿನ್ನಬೆಳ್ಳಿನಗನಾಣ್ಯಗಳನ್ನು ಒಟ್ಟುಗೂಡಿಸಿ ತನ್ನ ಬೊಕ್ಕಸದ ಸಂಪತ್ತನ್ನು ಹೆಚ್ಚುಮಾಡಿಕೊಳ್ಳುವ ಒಳಮಿಡಿತಗಳಿಂದ ಕೂಡಿರುತ್ತಾನೆ. ಆದುದರಿಂದ ಆಸೆಯೆಂಬುದು ಅರಸನಿಗೆ ಸಹಜವಾದ ಒಳಮಿಡಿತ. ಆದರೆ ಸಹಮಾನವರೊಡನೆ ಹಂಚಿ ಉಣ್ಣಬೇಕೆಂಬ/ಎಲ್ಲರ ಒಳಿತಿನೊಡನೆ ತನ್ನ ಒಳಿತನ್ನು ಕಾಣಬೇಕೆಂಬ ಒಳಮಿಡಿತಗಳಿಂದ ಕೂಡಿರುವ ಶಿವಶರಣರಿಗೆ ತಾನೊಬ್ಬನೇ ಎಲ್ಲವನ್ನೂ ಪಡೆದುಕೊಳ್ಳಬೇಕೆಂಬ ಆಸೆಯು ಇರಬಾರದು ಎಂಬ ತಿರುಳನ್ನು ಈ ಸೊಲ್ಲು ಒಳಗೊಂಡಿದೆ;
ರೋಷ+ಎಂಬುದು; ರೋಶ=ಸಿಟ್ಟು/ಕೋಪ/ಆಕ್ರೋಶ; ಯಮದೂತರಿಗೆ+ಅಲ್ಲದೆ; ಯಮ=ಜಗತ್ತಿನಲ್ಲಿರುವ ಮಾನವ ಜೀವಿಗಳ ಪ್ರಾಣವನ್ನು ಕೊಂಡೊಯ್ದು , ಅವರು ತಮ್ಮ ಜೀವನದಲ್ಲಿ ಮಾಡಿರುವ ತಪ್ಪು/ಒಪ್ಪುಗಳಿಗೆ ತಕ್ಕಂತೆ ನರಕದಲ್ಲಿ ದಂಡನೆ ಇಲ್ಲವೇ ಸ್ವರ‍್ಗದಲ್ಲಿ ನಲಿವನ್ನು ನೀಡುವ ದೇವತೆ. ಈ ರೀತಿ ಒಬ್ಬ ದೇವತೆಯು ಮತ್ತೊಂದು ಲೋಕದಲ್ಲಿ ಇದ್ದಾನೆ ಎಂಬುದು ಜನಮನದಲ್ಲಿರುವ ಒಂದು ನಂಬಿಕೆಯಾಗಿದೆ; ದೂತ=ಸೇವಕ/ಆಳು; ಯಮದೂತ=ಯಮನ ಆದೇಶಕ್ಕೆ ತಕ್ಕಂತೆ ಜಗದ ಜೀವಿಗಳ ಮಯ್ಯಲ್ಲಿರುವ ಪ್ರಾಣವನ್ನು ಸೆಳೆದು , ಯಮನ ಬಳಿಗೆ ಪ್ರಾಣವಾಯುವನ್ನು ಕೊಂಡೊಯ್ಯುವ ಸೇವಕ/ಆಳು; ಅಜಾತರಿಗೆ+ಉಂಟೆ; ಅಜಾತ=ಶಿವ/ಈಶ್ವರ/ಹುಟ್ಟುಸಾವಿಲ್ಲದವನು; ಉಂಟೆ=ಇದೆಯೇ/ಇರುವುದೇ?; “ಅಜಾತರಿಗುಂಟೆ” ಎಂಬ ಪದಕಂತೆಯು ಒಳ್ಳೆಯ ನಡೆನುಡಿಗಳನ್ನುಳ್ಳ ವ್ಯಕ್ತಿಗಳಲ್ಲಿ ಎಲ್ಲಾ ಬಗೆಯ ಕೇಡುಗಳಿಗೆ/ತಪ್ಪುಗಳಿಗೆ ಕಾರಣವಾಗುವಂತಹ ಸಿಟ್ಟು/ಸಿಡುಕು/ಕೋಪದ ಒಳಮಿಡಿತಗಳು ಇರುವುದಿಲ್ಲವೆಂಬ ತಿರುಳನ್ನು ಹೊಂದಿದೆ;
ಈಸು+ಅಕ್ಕಿ+ಆಸೆ; ಈಸು=ಈ ಪ್ರಮಾಣದ/ಇಶ್ಟೊಂದು/ಈಪಾಟಿ; ನಿಮಗೆ+ಏಕೆ; ಈಶ್ವರನು+ಒಪ್ಪ; ಈಶ್ವರ=ಶಿವ/ದೇವರು; ಒಪ್ಪು=ಸಮ್ಮತಿಸು/ಮೆಚ್ಚು; ಒಪ್ಪ=ಒಪ್ಪುವುದಿಲ್ಲ/ಮೆಚ್ಚುವುದಿಲ್ಲ; ಈಶ್ವರನೊಪ್ಪ=ಶಿವಶರಣಶರಣೆಯರ ಪಾಲಿಗೆ ವ್ಯಕ್ತಿಯು ಮಾಡುವ ಶಿವನ ಪೂಜೆ/ವ್ಯಕ್ತಿಯು ಶಿವನಲ್ಲಿಟ್ಟಿರುವ ಒಲವು ಎಂಬುದು ಸಾಮಾಜಿಕವಾದ ಒಳ್ಳೆಯ ನಡೆನುಡಿಗಳಿಂದ ಕೂಡಿದ ವರ‍್ತನೆಯಾಗಿತ್ತು. ಯಾವ ಬಗೆಯ ಕಾಯಕವು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದೋ ಅಂತಹುದನ್ನು ಮಾತ್ರ ಶಿವನು ಒಪ್ಪುತ್ತಾನೆ. ಸಮಾಜಕ್ಕೆ ಒಳಿತನ್ನು ಮಾಡದ/ಕೇಡನ್ನು ಬಗೆಯುವ/ಹಾನಿಮಾಡುವ ಯಾವುದೇ ಕಾಯಕವನ್ನು ಶಿವನು ಒಪ್ಪುವುದಿಲ್ಲವೆಂಬ ನಿಲುವು ಶಿವಶರಣೆಶರಣೆಯರಲ್ಲಿತ್ತು; ದೂರ=ಸೇರದುದು/ಹೊರತಾದುದು ; ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ=ಅತಿಯಾಸೆಯಿಂದ ಮಾಡುವ ಯಾವುದೇ ಬಗೆಯ ಕೆಲಸವನ್ನು ದೇವರು ಒಪ್ಪುವುದಿಲ್ಲ/ಸ್ವೀಕರಿಸುವುದಿಲ್ಲ)
3) ಆಸೆಯ ಸುಳಿಗೆ ಸಿಲುಕಿ ತನ್ನ ಗಂಡನು ಮಾಡಿರುವ ಕೆಲಸವನ್ನು ‘ತಪ್ಪು’ ಎಂದು ಗುರುತಿಸಿ ಹೇಳುವುದರ ಜತೆಗೆ, ಗಂಡನು ಮಾಡಿರುವ ತಪ್ಪನ್ನು ತಿದ್ದಿ ಸರಿಪಡಿಸುವುದಕ್ಕಾಗಿ, ಅವನು ಹೆಚ್ಚಾಗಿ ತಂದಿರುವ ಅಕ್ಕಿಯನ್ನು ಮತ್ತೆ ಕೊಂಡುಹೋಗಿ ಬಸವಣ್ಣನವರ ಮಹಾಮನೆಯ ಅಂಗಳದಲ್ಲೇ ಸುರಿದು ಬರುವಂತೆ ಲಕ್ಕಮ್ಮನು ಸೂಚಿಸುತ್ತಾಳೆ.
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ
ಇದು ನಿಮ್ಮ ಮನವೊ ಬಸವಣ್ಣನ ಅನುಮಾನದ ಚಿತ್ತವೊ
ಈ ಮಾತು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ
ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ.
(ಒರ‍್+ಮನ=ಒರ‍್ಮನ/ಒಮ್ಮನ; ಒರ‍್=ಒಂದು; ಮನ=ಮನಸ್ಸು; ಒಮ್ಮನ=ಚಂಚಲತೆಯಿಲ್ಲದೆ ಅಂದರೆ ಅತ್ತಿತ್ತ ತುಯ್ದಾಡದೆ ಮನಸ್ಸಿನಲ್ಲಿ ತಳೆಯುವ ಒಂದೇ ಬಗೆಯ ನಿಲುವು/ತೀರ‍್ಮಾನ; ಮೀರಿ=ದಾಟಿ/ಕಡೆಗಣಿಸಿ; ಇಮ್ಮನದ+ಅಲ್ಲಿ; ಇರ‍್+ಮನ=ಇರ‍್ಮನ/ಇಮ್ಮನ; ಇರ‍್=ಎರಡು; ಇಮ್ಮನ=ಯಾವುದೇ ಒಂದು ಕೆಲಸವನ್ನು ಮಾಡುವುದೋ ಬೇಡವೋ ಎಂಬ ತೊಳಲಾಟದಿಂದ ಕೂಡಿದ ಮನಸ್ಸು/ಮನದಲ್ಲಿ ಮೂಡುವ ಇಬ್ಬಗೆಯ ಒಳಮಿಡಿತಗಳು; ತಂದಿರಿ=ತೆಗೆದುಕೊಂಡು ಬಂದಿರುವಿರಿ; ಇದು ನಿಮ್ಮ ಮನವೊ=ಈ ಕೆಲಸವನ್ನು ನೀವು ಉದ್ದೇಶಪಟ್ಟು ಮಾಡಿರುವಿರೋ;
ಅನುಮಾನ=ಸಂದೇಹ/ಸಂಶಯ/ಅಪನಂಬಿಕೆ; ಚಿತ್ತ=ಮನಸ್ಸು/ಉದ್ದೇಶ; ಬಸವಣ್ಣನ ಅನುಮಾನದ ಚಿತ್ತವೊ=ಬಸವಣ್ಣನವರು ನಿಮ್ಮ ನಡೆನುಡಿಯನ್ನು ಒರೆಹಚ್ಚಿ ನೋಡಲೆಂದು ಇಂತಹ ಕೆಲಸವನ್ನು ಮಾಡಿದ್ದಾರೆಯೋ ಅಂದರೆ ಹೆಚ್ಚು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲುವಂತೆ ಮಾಡಿ, ನಿಮ್ಮ ಮನದಲ್ಲಿ ಆಸೆಯೆಂಬುದು ಹತೋಟಿಯಲ್ಲಿ ಇರುವುದೋ/ಇಲ್ಲವೋ ಎಂಬುದನ್ನು ತಿಳಿಯಲೆಂದು ಬಸವಣ್ಣನವರೇ ಹೂಡಿರುವ ಹುನ್ನಾರ ಇದಾಗಿರಬಹುದೇ ಎಂಬ ತಿರುಳನ್ನು ಈ ಸೊಲ್ಲು ಒಳಗೊಂಡಿದೆ ;
ಈ ಮಾತು=ಈ ಬಗೆಯ ನುಡಿಗಳು/ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ತಂದಿರುವೆನೆಂಬ ನುಡಿಗಳು; ಸಲ್ಲು=ತಕ್ಕುದಾಗಿರು/ಯೋಗ್ಯವಾಗಿರು; ಸಲ್ಲದ=ತಕ್ಕುದಲ್ಲದ/ಯೋಗ್ಯವಲ್ಲದ/ಒಪ್ಪಿಗೆಯಾದ/ಸಮ್ಮತವಲ್ಲದ; ಬೋನ=ಅನ್ನ/ಆಹಾರ; ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ=ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆದು ಸಂಪಾದಿಸಿದ ಸಂಪತ್ತಿನಲ್ಲಿ ಮಾಡುವ ಯಾವುದೇ ಬಗೆಯ ದೇವರ ಪೂಜೆ/ಜಂಗಮರ ಸೇವೆ/ದಾನದ ಕೆಲಸಗಳನ್ನು ದೇವರು ಮೆಚ್ಚುವುದಿಲ್ಲ/ಒಪ್ಪಿಸಿಕೊಳ್ಳುವುದಿಲ್ಲ; ಅಲ್ಲಿಯೇ=ಎಲ್ಲಿಂದ ಆಯ್ದು ತಂದಿರುವಿರೋ ಆ ಜಾಗದಲ್ಲಿಯೇ ಅಂದರೆ ಬಸವಣ್ಣನವರ ಮಹಾಮನೆಯ ಅಂಗಳದಲ್ಲಿಯೇ; ಸುರಿ=ಚೆಲ್ಲು/ಹಾಕು; ಸುರಿದು ಬನ್ನಿ=ಹಾಕಿ ಬನ್ನಿರಿ)
4) ಈ ಮೊದಲು ನೀವು ಪ್ರತಿನಿತ್ಯವೂ ಬಸವಣ್ಣನವರ ಮನೆಯ ಅಂಗಳದಿಂದ ದಾಸೋಹಕ್ಕೆ ಬೇಕಾಗುವಶ್ಟು ಅಕ್ಕಿಯನ್ನು ಆಯ್ದು ತರುತ್ತಿದ್ದುದು ನಮಗೆ ಸಾಕಾಗುತ್ತಿತ್ತು ಮತ್ತು ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತಿತ್ತು. ನಮ್ಮಂತೆಯೇ ಆಯ್ದಕ್ಕಿಯಿಂದ ಶಿವಶರಣಶರಣೆಯರ ದಾಸೋಹ ಮಾಡುವವರ ಪಾಲಿಗೆ ದೊರೆಯಬೇಕಾಗಿದ್ದ ಅಕ್ಕಿಯನ್ನು ಹೆಚ್ಚಿನ ಆಸೆಗೆ ಒಳಗಾಗಿ ನಾವು ತಂದು ಬಳಸುವುದು ಸರಿಯಲ್ಲ. ಹೆಚ್ಚಾದ ಅಕ್ಕಿಯನ್ನು ಅಲ್ಲಿಯೇ ಹಾಕಿಬನ್ನಿರೆಂದು ಮಾರಯ್ಯನಿಗೆ ಲಕ್ಕಮ್ಮನು ಸೂಚಿಸುತ್ತಾಳೆ.
ಸಂದಣಿಗೊಂಡು ಮನ ಹರುಷದಿಂದ
ಬಸವಣ್ಣನ ಅಂಗಳಕ್ಕೆ ಹೋಗಿ
ತಿಪ್ಪೆಯ ತಪ್ಪಲಲ್ಲಿ ಬಿದ್ದಿದ್ದ ತಂಡುಲವ ಕಟ್ಟಿಕೊಂಡು
ಎಯಿದಾಗಿ ತರಲು ಎಯಿದಾಗಿ ಬಂದಿತ್ತಲ್ಲಾ
ನಮಗೆ ಎಂದಿನಂದವೆ ಸಾಕು
ಮತ್ತೆ ಕೊಂಡು ಹೋಗಿ ಅಲ್ಲಿಯೆ ಸುರಿ
ಮಾರಯ್ಯಪ್ರಿಯ ಅಮರೇಶ್ವರಲಿಂಗ ಕೊಟ್ಟ
ಕಾಯಕವೆ ಸಾಕು ಮಾರಯ್ಯಾ.
( ಸಂದಣಿ+ಕೊಂಡು; ಸಂದಣಿ=ಸಡಗರ/ಉತ್ಸಾಹ/ಹುಮ್ಮಸ್ಸು/ಹುರುಪು; ಕೊಂಡು=ಹೊಂದಿ/ಪಡೆದು/ಕೂಡಿ; ಸಂದಣಿಗೊಂಡು=ಸಡಗರದಿಂದ/ಉತ್ಸಾಹದಿಂದ ಕೂಡಿ; ಮನ=ಮನಸ್ಸು; ಹರುಷದ+ಇಂದ; ಹರುಷ=ಆನಂದ/ಹಿಗ್ಗು/ಉಲ್ಲಾಸ; ಅಂಗಳ=ಮನೆಯ ಮುಂದಿರುವ ದೊಡ್ಡದಾಗ ಜಾಗ/ಬಯಲು/ತೆರೆದ ಆವರಣ ; ತಿಪ್ಪೆಯ ತಪ್ಪಲು+ಅಲ್ಲಿ; ತಿಪ್ಪೆಯ ತಪ್ಪಲು=ಮನೆಯ ಮುಂದಣ ಅಂಗಳ/ಬಯಲಾಗಿರುವ ಜಾಗ/ತೆರೆದ ಜಾಗ; ಬಿದ್ದು+ಇದ್ದ; ಬಿದ್ದಿದ್ದ=ಬಿದ್ದಿರುವ; ತಂಡುಲ=ಅಕ್ಕಿ; ಕಟ್ಟಿಕೊಂಡು=ಸಂಗ್ರಹಿಸಿಕೊಂಡು; ಎಯಿದು+ಆಗಿ; ಎಯ್ದು=ಪಡೆ/ಹೊಂದು/ಸೇರು/ಚೆನ್ನಾಗಿ/ಪೂರ‍್ತಿಯಾಗಿ/ಅತಿಶಯವಾಗಿ; ಎಯಿದಾಗಿ ತರಲು=ಪಡೆದುಕೊಂಡು ತರುತ್ತಿದ್ದಾಗ; ಬಂದಿತ್ತು+ಅಲ್ಲಾ; ಅಲ್ಲಾ=ಅಲ್ಲವೇ; ಎಯಿದಾಗಿ ಬಂದಿತ್ತಲ್ಲಾ=ಎಲ್ಲವೂ ಚೆನ್ನಾಗಿತ್ತಲ್ಲವೇ;
ಎಂದಿನ+ಅಂದವೆ; ಎಂದಿನ=ಪ್ರತಿದಿನದಂತೆ/ಎಲ್ಲಾ ದಿನಗಳಂತೆ; ಅಂದ=ರೀತಿ/ಬಗೆ; ಎಂದಿನಂದವೆ ಸಾಕು=ಈ ಮೊದಲು ಪ್ರತಿನಿತ್ಯ ನಮಗೆ ಬೇಕಾದಶ್ಟನ್ನು ಮಾತ್ರ ತರುತ್ತಿದ್ದುದೇ ನೆಮ್ಮದಿಯಾಗಿತ್ತು; ಮತ್ತೆ=ತಿರುಗಿ/ಮರಳಿ; ಕೊಂಡು ಹೋಗಿ=ತೆಗೆದುಕೊಂಡು ಹೋಗಿ; ಅಲ್ಲಿಯೆ=ಬಸವಣ್ಣನವರ ಮಹಾಮನೆಯ ಅಂಗಳದಲ್ಲಿಯೆ; ಸುರಿ=ಹಾಕು/ಚೆಲ್ಲು/ಹರಡು; ಕಾಯಕ=ಕಸುಬು/ಕೆಲಸ)
( ಚಿತ್ರ ಸೆಲೆ: lingayatreligion.com )
ಕನ್ನಡ್ ಪದ್ಗಳ ಒಳ್ಳೆ ಮಾಹಿತಿ..??
Excellent job and thank you ,this helped me a lottttttttttttttt…………….