ರುಚಿಯಾದ ಸಿಹಿತಿಂಡಿ ‘ಅತ್ರಾಸ’ (ಕಜ್ಜಾಯ)

– ಕಲ್ಪನಾ ಹೆಗಡೆ.

ಇದು ಬೇರೆ ತಿಂಡಿತರ ಅಲ್ಲಾ. ಪಾಕ ಮಾಡಿಕೊಳ್ಳುವಾಗ ಸರಿಯಾಗಿ ಮಾಡಿಕೊಳ್ಳಬೇಕು. ಸರಿಯಾಗಿ ಬಂದಿಲ್ಲವಾದರೆ ಬಿಸಿ ಎಣ್ಣೆಯಲ್ಲಿ ಅತ್ರಾಸದ ಹಿಟ್ಟು ಪುಡಿ ಪುಡಿಯಾಗಿ ಎಣ್ಣೆಯಲ್ಲಿ ತೇಲ್ತಾ ಇರತ್ತೆ. ಅದಕ್ಕೆ ಮಾಡುವಾಗ ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಗಮನ ಇಟ್ಟು ಮಾಡಿಕೊಳ್ಳಬೇಕು. ಅತ್ರಾಸ ಮಾಡುವ ಬಗೆ ಇಲ್ಲಿದೆ ನೋಡಿ!

ಬೇಕಾಗುವ ಸಾಮಗ್ರಿಗಳು:

1. ಅರ‍್ದ ಕೆ.ಜಿ. ಅಕ್ಕಿ
2. ಕಾಲು ಕೆ.ಜಿ. ಬೆಲ್ಲ
3. 4 ಚಮಚ ಎಳ್ಳು
4. ಅರ‍್ದ ಹೋಳು ಕಾಯಿ ತುರಿ

ಮಾಡುವ ಬಗೆ:

ಮೊದಲು ಅಕ್ಕಿಯನ್ನು ತೊಳೆದು ಒಣಹಾಕಿ ನುಣ್ಣಗೆ ಹಿಟ್ಟು ಮಾಡಿಕೊಳ್ಳಿ. ಆಮೇಲೆ ಬಾಣಲೆಗೆ ಬೆಲ್ಲ ಹಾಕಿ ಕಾಯಿಸಿಕೊಳ್ಳಿ. ಅದಕ್ಕೆ ಹಿಟ್ಟು, ಕಾಯಿತುರಿ, ಎಳ್ಳು ಹಾಕಿ ಸಣ್ಣಉರಿ ಇಟ್ಟು ಸೌಟಿನಿಂದ ಕಲಸಿಕೊಳ್ಳಿ, ಹಿಟ್ಟು ಪಾಕ ಬರುವ ತನಕ ಕಲಸಿ. ಆಮೇಲೆ ಆರಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಣಗೆಯಿಂದ ಲಟ್ಟಿಸಿಕೊಂಡು, ಬಾಣಲೆಯಲ್ಲಿ ಬಿಸಿಯಾದ ಎಣ್ಣೆಗೆ ಬಿಟ್ಟು ಎರಡು ಕಡೆ ತಿರುಗಿಸಿ ಬೇಯಿಸಿ. ಜಾಲಿ ಸೌಟಿನಿಂದ ತೆಗೆದು ಇನ್ನೂಂದು ಸೌಟಿನಿಂದ ಒತ್ತಿ ಎಣ್ಣೆ ತೆಗೆದುಕೊಳ್ಳಿ. ಆಮೇಲೆ ಗಾಳಿಯಲ್ಲಿ ಇಟ್ಟು ಡಬ್ಬದಲ್ಲಿ ಹಾಕಿಡಿ ತಕ್ಶಣ ತಿಂದರೆ ಗಟ್ಟಿಯಾಗಿರತ್ತೆ. 3 ದಿನ ಬಿಟ್ಟರೆ ಮೆತ್ತಗೆ ಆಗಿ ತಿನ್ನಲು ತುಂಬಾ ಚೆನ್ನಾಗಿರತ್ತೆ.

(ಚಿತ್ರ ಸೆಲೆ:  ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: