ಅಣ್ಣ-ತಂಗಿ: ಅವಿನಾಬಾವ ಸಂಬಂದ

– ಅನುಪಮಾ ಜಿ.

ಬಾರತ ದೇಶ ಬಾಂದವ್ಯದ ವಿಶಯದಲ್ಲಿ ಅತ್ಯಂತ ಶ್ರೀಮಂತವಾದ ದೇಶ. ಇಲ್ಲಿಯ ಜನಸಂಕ್ಯೆ ಕೋಟಿಯಿದ್ದರೂ, ಜನರ ನಡುವಿನ ಆತ್ಮೀಯವಾದ ಬಾಂದವ್ಯಕ್ಕೆ ಕೊರತೆ ಇಲ್ಲ. ಏಳಿಗೆಯ ಹಾದಿಯಲ್ಲಿ ಸಾಗುತ್ತಿರುವ ಈ ದೇಶಕ್ಕೆ ರೈತ ಒಂದು ರೀತಿಯ ಶಕ್ತಿಯಾದರೆ, ಮಂದಿಯ ನಡುವಿನ ಸಂಬಂದಗಳು ಅಂದರೆ ಅಣ್ಣ-ತಮ್ಮ, ಬಂದು-ಬಾಂದವರ ಆತ್ಮೀಯತೆ, ಪ್ರೀತಿ ಹಾಗೂ ನಂಬಿಕೆಗಳ ಸಮಾಗಮಗಳು, ಮತ್ತೊಂದು ಬಗೆಯ ಶಕ್ತಿಯಾಗಿದೆ.

ಪ್ರತಿಯೊಬ್ಬ ಮನುಶ್ಯನಿಗೂ ತನ್ನ ಕುಟುಂಬದ ಬಗ್ಗೆ ಪ್ರೀತಿ-ಹೆಮ್ಮೆ ಇರುತ್ತದೆ. ಅದರಲ್ಲೂ ಒಡಹುಟ್ಟಿದವರ ನಡುವೆ ಇರುವ ಪ್ರೀತಿ-ಆತ್ಮೀಯತೆ ಬಹಳ ಹೆಚ್ಚಾಗಿಯೇ ಇರುತ್ತದೆ. ಇಂತಹ ಒಂದು ಅಪರೂಪದ ಅನುಬಂದವೇ ಅಣ್ಣ-ತಂಗಿ ಸಂಬಂದ. ಬಾಲ್ಯದಲ್ಲಿ ಅಣ್ಣ ಮತ್ತು ತಂಗಿಯ ಕಿತ್ತಾಟವನ್ನು ಕಂಡು ಪೋಶಕರಿಗೆ ಇವರೆಂತ ಅಣ್ಣ-ತಂಗಿ ಎನಿಸುವುದು ಸಹಜ. ಆದರೆ ಬರುಬರುತ್ತಾ ಕಡಿಮೆಯಾಗುವ ಈ ಕಿತ್ತಾಟಗಳು, ಅಣ್ಣ-ತಂಗಿಯ ಬಾಂದವ್ಯದ ಸೂಕ್ಶ್ಮತೆ ಮತ್ತು ಸುಂದರತೆಯನ್ನು ಅವರಿಬ್ಬರಿಗೂ ಅರಿವು ಮಾಡಿಸುತ್ತದೆ.

ಅಣ್ಣ-ತಂಗಿ ದೂರಾದಾಗ, ಇನ್ನೊಬ್ಬರ ಅನುಪಸ್ತಿತಿಯು ಒಬ್ಬರು ಇನ್ನೊಬ್ಬರ ಮೇಲಿಟ್ಟಿರುವ ಪ್ರೀತಿಯನ್ನು ತಾನಾಗಿಯೇ ಹೊರಹೊಮ್ಮಿಸುತ್ತದೆ. ನೋವಿನಲ್ಲೂ-ನಲಿವಿನಲ್ಲೂ ತನ್ನ ಅಣ್ಣ ತನ್ನ ಜೊತೆಯಲ್ಲಿ ಇರಬೇಕೆಂದು ತಂಗಿ ಬಯಸುತ್ತಾಳೆ. ಅಣ್ಣ ತನ್ನ ತಂಗಿಗೆ ಯಾವ ಕಶ್ಟಗಳೂ ಬಾರದಂತೆ ಕಾಪಾಡಬೇಕೆಂದು, ಅವಳನ್ನು ಕಣ್ಣರೆಪ್ಪೆಯಂತೆ ಕಾಯಲು ಇಚ್ಚಿಸುತ್ತಾನೆ. ಕೆಲವೊಮ್ಮೆ ಮನಸ್ತಾಪಗಳು ಬರುವುದು ಸಹಜ, ಆದರೆ ಅದನ್ನು ಮೀರಿ ನಿಂತಾಗಲೇ ಈ ಸಂಬಂದದ ಸವಿಯನ್ನು ಸವಿಯಲು ಸಾದ್ಯ.

ತಂಗಿಗೆ ಸಣ್ಣ ಜ್ವರ ಬಂದರೂ ಚಡಪಡಿಸುವ ಅಣ್ಣ, ಸದಾ ಅಣ್ಣನ ಏಳಿಗೆಯನ್ನು ಬಯಸುವ ತಂಗಿ – ಇದೊಂದು ಅಪರೂಪದ ಅವಿನಾಬಾವ ಸಂಬಂದ. ಈ ಸಂಬಂದದ ವಿಶೇಶತೆಯಿಂದಾಗಿ ಈ ಸಂಬಂದಕ್ಕೆ ಒಂದು ಹಬ್ಬವೂ ಇದೆ ಅದೇ “ರಕ್ಶಾ-ಬಂದನ“. ತಾನು ಎಲ್ಲಾ ರೀತಿಯಲ್ಲೂ ತಂಗಿಯನ್ನು ರಕ್ಶಿಸುತ್ತೇನೆನ್ನುವ ಅಣ್ಣ, ಅಣ್ಣನಿಗೆ ಯಾವುದೇ ಕಶ್ಟಗಳು ಎದುರಾಗಬಾರದೆಂದು ತಂಗಿ  ಅಣ್ಣನಿಗೆ ಕಟ್ಟುವ ರಕ್ಶೆಯ ಮಹತ್ವ ತಿಳಿದಾಗಲೇ ಹಬ್ಬದ ಆಚರಣೆಯ ಹಿಂದಿನ ವಿಶಿಶ್ಟತೆ ಮತ್ತು ಪ್ರಾದಾನ್ಯತೆಯ ಅರಿವಾಗುವುದು.

ರಕ್ಶಾ ಬಂದನದ ಪ್ರತೀಕವೇ ಸಹೋದರತೆ. ಜೀವನದಲ್ಲಿ ಕಶ್ಟ-ಸುಕಗಳು ಒಂದು ನಾಣ್ಯದ ಎರಡು ಮುಕಗಳಿದ್ದಂತೆ, ಸೋಲು-ಗೆಲುವು, ನೋವು-ನಲಿವು ಇತ್ಯಾದಿಗಳು ಸೇರಲ್ಪಡುತ್ತವೆ. ಅಕ್ಕರೆಯ ಅಣ್ಣ, ನಲ್ಮೆಯ ತಂಗಿ ಸಹೋದರತೆಯ ಸಾರುವ ಬಂಡಿ. ತಂದೆ ತಾಯಿ ನೆರಳಲ್ಲಿ ಬಾಲ್ಯ ಕಳೆದು ದಿನ ಕಳೆಯುತ್ತಾ ಬಂದಂತೆ ಒಬ್ಬೊಬ್ಬರದು ಒಂದೊಂದು ದಿಕ್ಕು. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ, ತಿಂಡಿ, ಮಾತು ಇವು ಇತ್ತೀಚಿನ ದಿನಗಳಲ್ಲಿ ಅತೀ ವಿರಳ. ಹೀಗಿರುವಾಗ ಅಪರೂಪಕ್ಕೊಮ್ಮೆ ಬೇಟಿಯಾಗಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಶಣ ಸವಿಯುವುದೇ ಅಣ್ಣ ತಂಗಿ ಸಂಬಂದ.

( ಚಿತ್ರ ಸೆಲೆ: coloringkids.org )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.