ಕವಿತೆ: ದೇವರು ತಪ್ಪು ಮಾಡಿದ

– ವೆಂಕಟೇಶ ಚಾಗಿ.

ಅರಿವು, ದ್ಯಾನ, Enlightenment

ದೇವರು ನಿನಗೆ ಮಾತು ಕೊಟ್ಟು
ತಪ್ಪು ಮಾಡಿದ
ಮಾತಿನಲ್ಲಿ ಮನೆ ಕಟ್ಟಿದೆ
ಮಾತಿನಿಂದ ದೇವರ ಬಣ್ಣಿಸಿದೆ
ಮಾತಿನಲೆ ಕೆಡಕು ಮಾಡಿದೆ
ಮಾತಿನಿಂದ ಮಾತು ಕೊಟ್ಟೆ
ಕೊಟ್ಟ ಮಾತನು ತಪ್ಪಿ ನಡೆದು
ನೀನು ತಪ್ಪು ಮಾಡಿದೆ

ದೇವರು ನಿನಗೆ ಬುದ್ದಿ ಕೊಟ್ಟು
ತಪ್ಪು ಮಾಡಿದ
ಬುದ್ದಿಯಿಂದ ಅಬಿವ್ರುದ್ದಿ ಎಂದೆ
ಬುದ್ದಿ ಕಲಿತು ಬುದ್ದಿ ಹೇಳಿದೆ
ಬುದ್ದಿಯುಳ್ಳವರಿಗೆ ಬದ್ದನಾದೆ
ಬುದ್ದಿಯಿಂದಲೇ ಸುದ್ದಿಯಾದೆ
ಕೆಡಕು ಬುದ್ದಿಯ ತುಂಬಿಕೊಂಡು
ನೀನು ತಪ್ಪು ಮಾಡಿದೆ

ದೇವರು ನಿನಗೆ ನಗು ಕೊಟ್ಟು
ತಪ್ಪು ಮಾಡಿದ
ನಗುವ ಸಮಯದಿ ನಗಲಿಲ್ಲ
ನಗುವವರ ಕಂಡು ಸಹಿಸಲಿಲ್ಲ
ನೀ ನಕ್ಕು ಪರರ ನಗಿಸಲಿಲ್ಲ
ನಗುವ ಜಗವ ಕಟ್ಟಲಿಲ್ಲ
ಕೊನೆಗೆ ಕುಹಕ ನಗೆಯ ಬೀರಿ
ನೀನು ತಪ್ಪು ಮಾಡಿದೆ

ದೇವರು ನಿನಗೆ ಸ್ವರ‍್ಗ ಕೊಟ್ಟು
ತಪ್ಪು ಮಾಡಿದ
ಸ್ವರ‍್ಗವಲ್ಲದ ಸ್ವರ‍್ಗ ಕಟ್ಟಿದೆ
ಹಸಿರ ಅಳಿಸಿ ಹಸಿರು ಬಳಿದೆ
ಉಸಿರು ಕೆಡಿಸಿ ಹೆಸರು ಪಡೆದೆ
ಕಡಲ ಕಡೆದು ಒಡಲು ಹರಿದೆ
ದರೆಯ ಸ್ವರ‍್ಗವ ನರಕ ಮಾಡಿ
ನೀನು ತಪ್ಪು ಮಾಡಿದೆ

ದೇವರು ನಿನಗೆ ಮನವ ಕೊಟ್ಟು
ತಪ್ಪು ಮಾಡಿದ
ಕೆಡಕು ಮನದ ಒಡೆಯನಾದೆ
ಸ್ವಾರ‍್ತ ಮನದ ಬಂದಿಯಾದೆ
ಹಗಲುಗನಸಲಿ ಸಿಲುಕಿ ನರಳಿದೆ
ಅಶಾಂತ ಸುಳಿಗೆ ಜಗವು ಸಿಲುಕಿದೆ
ಹಿರಿಯರ ಹಿತನುಡಿಗಳ ಮರೆತು
ನೀನು ತಪ್ಪು ಮಾಡಿದೆ

ಚಿತ್ರ ಸೆಲೆ:  mindfulmuscle.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: