ಶಣ್ಮುಕಸ್ವಾಮಿ ವಚನಗಳ ಓದು-2ನೆಯ ಕಂತು
– ಸಿ.ಪಿ.ನಾಗರಾಜ.
ಭಾಷೆಗಳ್ಳಗೇಕೊ ಸಹಭೋಜನ
ದ್ವೇಷಗುಣಿಗೇಕೊ ಸಹಭೋಜನ
ವೇಷಧಾರಿಗೇಕೊ ಸಹಭೋಜನ
ಹುಸಿಹುಂಡಗೇಕೊ ಸಹಭೋಜನ
ಮೋಸ ಮರವೆಯಿಂದೆ
ಈಶನೊಡನೆ ಸಹಭೋಜನ ಮಾಡಿದಡೆ
ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ.
ಹೊರನೋಟಕ್ಕೆ ಎಲ್ಲರೊಡನೆ ಒಂದಾಗಿ ಬಾಳುವವನಂತೆ ನಟಿಸುತ್ತಾ, ಒಳಗೊಳಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ವ್ಯಕ್ತಿಗಳ ತೋರಿಕೆ/ಬೂಟಾಟಿಕೆ/ಸೋಗಲಾಡಿತನದ ನಡೆನುಡಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ.
ತೋರಿಕೆ/ಬೂಟಾಟಿಕೆ/ಸೋಗಲಾಡಿತನದ ನಡೆನುಡಿಗಳು ಎಂದರೆ “ವ್ಯಕ್ತಿಯ ಆಡುವುದೇ ಒಂದು, ಮಾಡುವುದೇ ಮತ್ತೊಂದು. ಅಂದರೆ ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತಾ, ಕೈಯಲ್ಲಿ ಕೆಟ್ಟಕೆಲಸಗಳನ್ನು ಮಾಡುತ್ತಿರುವುದು”
( ಭಾಷೆ+ಕಳ್ಳ+ಗೆ+ಏಕೊ; ಭಾಷೆ=ಮಾತು/ನುಡಿ; ಕಳ್ಳ=ಪರರ ಒಡವೆ/ವಸ್ತುಗಳನ್ನು ದೋಚುವವನು; ಕಳ್ಳಗೆ=ಕಳ್ಳನಿಗೆ; ಏಕೊ=ಯಾವುದಕ್ಕಾಗಿ/ಏತಕ್ಕಾಗಿ/ಏನು ತಾನೆ ಪ್ರಯೋಜನ; ಭಾಷೆಗಳ್ಳ=ಕೊಟ್ಟ ಮಾತಿಗೆ ತಪ್ಪಿ ನಡೆಯುವವನು/ಮೋಡಿಯ ಮಾತುಗಳಿಂದ ಜನರನ್ನು ವಂಚಿಸುವವನು/ಮಾತಿನಲ್ಲಿ ಮೊದಲು ಆಸೆ ಹುಟ್ಟಿಸಿ, ಕಡೆಗೆ ಮೋಸ ಮಾಡುವವನು; ಸಹ=ಜೊತೆಯಲ್ಲಿ/ಎಲ್ಲರೊಡನೆ ಬೆರೆತು; ಭೋಜನ=ಊಟ/ಆಹಾರ ಸೇವನೆ/ಉಣ್ಣುವುದು; ಸಹಭೋಜನ=ಇತರರೊಡನೆ ಜತೆಗೂಡಿ ಊಟ ಮಾಡುವುದು; ಸಹಭೋಜನ ಎಂಬ ಈ ಪದವು ಒಂದು ನುಡಿಗಟ್ಟಾಗಿ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ.
ಕನ್ನಡ ನುಡಿಸಮುದಾಯದ ಸಮಾಜವು ಅನೇಕ ಬಗೆಯ ಮತ/ಜಾತಿ/ಲಿಂಗ/ವರ್ಗಗಳ ಹೆಣಿಗೆಯಿಂದ ರಚನೆಗೊಂಡಿದೆ. ಇದರಿಂದಾಗಿ ವ್ಯಕ್ತಿ ವ್ಯಕ್ತಿಗಳ ನಡುವೆ ಬಹುಬಗೆಯ ತಾರತಮ್ಯಗಳಿವೆ. ಮತಗಳ ನಡುವೆ ಹಗೆತನ/ಜಾತಿಗಳಲ್ಲಿ ಮೇಲು-ಕೀಳಿನ ತಾರತಮ್ಯ/ಹೆಣ್ಣುಗಂಡಿನ ನಡುವೆ ಗಂಡಿನ ಮೇಲುಗಯ್/ಬಡವ ಬಲ್ಲಿದರ ನಡುವಣ ಅಂತರಗಳೆಲ್ಲವೂ ಜನರನ್ನು ಮಾನಸಿಕವಾಗಿ ಒಡೆದು ಬೇರೆ ಬೇರೆ ಮಾಡಿದೆ. ಜನರನ್ನು ವಿಂಗಡಿಸಿರುವ ಈ ಎಲ್ಲಾ ಬಗೆಯ ಸಾಮಾಜಿಕ ಸಂಗತಿಗಳನ್ನು ದೂರವಿಟ್ಟು/ಕಡೆಗಣಿಸಿ/ಮರೆತು , “ನಾವೆಲ್ಲ ಕೇವಲ ಮಾನವರು/ನಾವೆಲ್ಲ ಒಂದು” ಎಂಬ ಒಲವು ನಲಿವಿನಿಂದ ಜತೆಗೂಡಿ ಸಮಾನತೆಯಿಂದ ಬಾಳುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿ ಮಾಡುವ ಸಾಂಕೇತಿಕ ಆಚರಣೆಯೇ ‘ಸಹಬೋಜನ’;
ಬಾಶೆಗಳ್ಳಗೇಕೋ ಸಹಭೋಜನ=ಆಡುವ ಮಾತುಗಳಿಗೆ ತಕ್ಕಂತೆ ಒಳ್ಳೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದ ವ್ಯಕ್ತಿಯು ಮಾಡುವ ಸಹಬೋಜನದ ನಾಟಕದಿಂದ/ಕಪಟತನದ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಾಮಾಜಕ ವಾಸ್ತವವನ್ನು ಈ ನುಡಿಗಳು ತಿಳಿಸುತ್ತಿವೆ;
ದ್ವೇಷ+ಗುಣಿ+ಗೆ+ಏಕೊ; ದ್ವೇಷ=ಹಗೆತನ/ಆಕ್ರೋಶವನ್ನು ಕಾರುವುದು/ಸೇಡಿನಿಂದ ಕೂಡಿರುವುದು; ಗುಣ=ನಡತೆ/ನಡವಳಿಕೆ/ವರ್ತನೆ; ಗುಣಿ=ಗುಣವುಳ್ಳವನು; ಗುಣಿಗೆ=ಗುಣವುಳ್ಳವನಿಗೆ; ದ್ವೇಷಗುಣಿ=ಹಗೆತನ/ಮಚ್ಚರ/ಸೇಡು/ಆಕ್ರೋಶದ ನಡೆನುಡಿಗಳಿಂದ ಕೂಡಿ ಜನರಿಗೆ ಕೇಡನ್ನು ಬಗೆಯುವವನು;
ವೇಷ+ಧಾರಿ+ಗೆ+ಏಕೊ; ವೇಷ=ಉಡುಗೆ ತೊಡುಗೆ/ಒಡವೆ/ವಸ್ತ್ರ/ಬಟ್ಟೆ; ಧಾರಿ=ತೊಟ್ಟಿರುವವನು/ಉಟ್ಟಿರುವವನು; ವೇಷಧಾರಿ=ಪ್ರದರ್ಶನ ಕಲೆಗಳಾದ ನಾಟಕ/ಯಕ್ಶಗಾನ/ಬಯಲಾಟಗಳಲ್ಲಿ ಪಾತ್ರವನ್ನು ಮಾಡುವ ನಟ; ವೇಶದಾರಿ ಎಂಬ ಪದವು ಈ ಸನ್ನಿವೇಶದಲ್ಲಿ ಒಂದು ನುಡಿಗಟ್ಟಾಗಿ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ. ವೇಶದಾರಿ ಎಂದರೆ ಕಪಟತನದ/ತೋರಿಕೆಯ ನಡೆನುಡಿಗಳಿಂದ ಜನರನ್ನು ಮರುಳುಮಾಡಿ ವಂಚಿಸುವವನು/ಸಮಯ ಸನ್ನಿವೇಶಕ್ಕೆ ತಕ್ಕಂತೆ ತನ್ನ ನಡೆನುಡಿಗಳನ್ನು ಬದಲಾಯಿಸಿಕೊಳ್ಳುತ್ತ, ಜನರನ್ನು ಮೋಸಗೊಳಿಸುವವನು/ಒಳಗೊಂದು ಹೊರಗೊಂದು ಎನ್ನುವಂತೆ ಮನದೊಳಗೆ ಕೆಟ್ಟ ಉದ್ದೇಶವನ್ನಿಟ್ಟುಕೊಂಡು, ಬಹಿರಂಗದಲ್ಲಿ ತಳುಕಿನ ಮಾತುಗಳಿಂದ ಜನರಿಗೆ ಹಾನಿಯನ್ನುಂಟು ಮಾಡುವವನು/ನಂಬಿಕೆಗೆ ಯೋಗ್ಯನಲ್ಲದ ವ್ಯಕ್ತಿ;
ಹುಸಿ+ಹುಂಡ+ಗೆ+ಏಕೊ; ಹುಸಿ=ಸುಳ್ಳು/ಸಟೆ/ಅಸತ್ಯ ; ಹುಂಡ=ನೀಚ/ಕೇಡಿ/ಹಾಳು ಮಾಡುವವನು/ನಾಶ ಮಾಡುವವನು; ಹುಂಡಗೆ=ಹುಂಡನಿಗೆ; ಹುಸಿಹುಂಡ=ಸುಳ್ಳನ್ನಾಡುವುದರ ಜತೆಗೆ ನೀಚತನದಿಂದ/ಒರಟುತನದಿಂದ/ದಬ್ಬಾಳಿಕೆಯಿಂದ ಎಲ್ಲವನ್ನು ಹಾಳು ಮಾಡುವವನು/ಒಳಿತನ್ನು ನಾಶ ಪಡಿಸುವವನು;
ಮೋಸ=ಕಪಟ/ವಂಚನೆ; ಮರವೆ+ಇಂದ; ಮರವೆ=ಗುಟ್ಟು/ಗೋಪ್ಯ/ರಹಸ್ಯ; ಮೋಸ ಮರವೆ=ನಂಬಿಕೆ ದ್ರೋಹದ ನಡೆನುಡಿ/ನಂಬಿಸಿ ಕತ್ತನ್ನು ಕುಯ್ಯುವಿಕೆ/ಹೊರನೋಟಕ್ಕೆ ಕಾಣದಂತೆ ಒಳಗೊಳಗೆ ಹೀನಕೆಲಸಗಳನ್ನು ಮಾಡುವುದು; ‘ಮರೆಮೋಸ‘ ಎಂಬ ನುಡಿಗಟ್ಟು “ಕೇಡನ್ನು ಬಗೆಯುವುದು“ ಎಂಬ ತಿರುಳಿನಲ್ಲಿ ಕನ್ನಡ ಜನಸಮುದಾಯದ ಮಾತುಕತೆಗಳಲ್ಲಿ ಬಳಕೆಯಲ್ಲಿದೆ;
ಈಶನ್+ಒಡನೆ; ಈಶ=ಒಡೆಯ/ಶಿವ/ಈಶ್ವರ ; ಒಡನೆ=ಜತೆಯಲ್ಲಿ/ಸಂಗಡ/ಒಟ್ಟಿಗೆ; ಮಾಡಿದಡೆ=ಮಾಡಿದರೆ; ಈಶನೊಡನೆ ಸಹಭೋಜನ=ಶಿವ/ಈಶ್ವರ/ಲಿಂಗದ ಪೂಜೆಯ ನೆಪದಲ್ಲಿ ಜನರನ್ನು ಒಗ್ಗೂಡಿಸಿ ಮಾಡುವ ಸಹಭೋಜನ; ಭವ+ಅಲ್ಲಿ; ಭವ=ಪ್ರಪಂಚದ ವ್ಯವಹಾರ/ಜೀವನದಲ್ಲಿನ ಆಗುಹೋಗು; ಭವದಲ್ಲಿ=ಜೀವನದಲ್ಲಿ/ಬದುಕಿನಲ್ಲಿ ನಡೆಯುವ ಪ್ರಸಂಗಗಳಲ್ಲಿ/ವ್ಯವಹಾರಗಳಲ್ಲಿ; ಘಾಸಿ+ಆಗುತ+ಇರ್ಪರು; ಘಾಸಿ=ತೊಂದರೆ/ಹಿಂಸೆ/ನೋವು/ಸಂಕಟ; ಆಗು=ಒದಗಿ ಬರುವುದು/ಜರುಗುವುದು/ನಡೆಯುವುದು; ಇರ್ಪರು=ಇರುವರು;
ಮೋಸ ಮರವೆಯಿಂದ ಈಶನೊಡನೆ ಸಹಭೋಜನ ಮಾಡಿದಡೆ ಭವದಲ್ಲಿ ಘಾಸಿಯಾಗುತಿರ್ಪರು=ಇತ್ತ ನಿಜ ಜೀವನದಲ್ಲಿ ಸುಳ್ಳು, ಕಪಟತನ ಮತ್ತು ನಂಬಿಕೆದ್ರೋಹದ ನಡೆನುಡಿಗಳಿಂದ ಜನರನ್ನು ವಂಚಿಸುತ್ತಾ, ಅತ್ತ ಶಿವನನ್ನು ಒಲಿಸಿಕೊಳ್ಳಲೆಂದು ಪೂಜೆಮಾಡುವುದರ ಮೂಲಕ ಎಲ್ಲರೊಡನೆ ಕೂಡಿ ಬಾಳುವವರಂತೆ ನಟನೆಯನ್ನು ಮಾಡುವವರು, ತಮ್ಮ ಜೀವನದಲ್ಲಿ ಒಳ್ಳೆಯದನ್ನು/ನೆಮ್ಮದಿಯನ್ನು ಹೊಂದಲಾಗದೆ/ಪಡೆಯಲಾಗದೆ ನರಳುತ್ತಿರುತ್ತಾರೆ. ಏಕೆಂದರೆ ಅವರ ನಯವಂಚನೆಯ ನಡೆನುಡಿಗಳೇ ಅವರನ್ನು ನಾನಾ ಬಗೆಗಳಲ್ಲಿ ಗಾಸಿಗೊಳಿಸುತ್ತಿರುತ್ತವೆ ಎಂಬ ಇಂಗಿತವನ್ನು ಈ ವಾಕ್ಯ ಸೂಚಿಸುತ್ತದೆ; ನೋಡು+ಆ; ನೋಡು=ಕಾಣು/ತಿಳಿ ; ನೋಡಾ=ಅರಿತುಕೊ/ತಿಳಿದುಕೊ; ಅಖಂಡೇಶ್ವರಾ=ಶಿವ/ದೇವರು/ವಚನಕಾರನ ವಚನಗಳಲ್ಲಿನ ಅಂಕಿತನಾಮ.)
( ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು