ಶಣ್ಮುಕಸ್ವಾಮಿ ವಚನಗಳ ಓದು-3ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು
ಹಲವು ದೇಶಕ್ಕೆ ಹರಿದಾಡಿದಡೇನು
ಕಾಲಾಡಿಯಂತಲ್ಲದೆ ನಿಜ ವಿರಕ್ತಿಯಿಲ್ಲ ನೋಡಾ
ಅದೇನು ಕಾರಣವೆಂದೊಡೆ
ತನುವಿನ ಆಶೆಯಾಮಿಷ ಹಿಂಗದಾಗಿ

ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಹ್ವರದಲ್ಲಿರ್ದಡೇನು
ಹಗಲು ಕಣ್ಣು ಕಾಣದ ಗೂಗೆಯಂತಲ್ಲದೆ
ನಿಜ ವಿರಕ್ತಿಯಿಲ್ಲ ನೋಡಾ
ಅದೇನು ಕಾರಣವೆಂದೊಡೆ
ಮನದ ಮಾಯವಡಗದಾಗಿ

ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು
ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜ ವಿರಕ್ತಿಯಿಲ್ಲ ನೋಡಾ
ಅದೇನು ಕಾರಣವೆಂದೊಡೆ
ವಿಷಯ ವ್ಯವಹಾರ ಹಿಂಗದಾಗಿ

ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು
ಕಳ್ಳ ಊರ ಹೊಕ್ಕು ಉಲುಹು ಅಡಗುವನ್ನಬರ
ಮರೆಯಲ್ಲಿ ಕುಳಿತಂತಲ್ಲದೆ ನಿಜ ವಿರಕ್ತಿಯಿಲ್ಲ ನೋಡಾ
ಅದೇನು ಕಾರಣವೆಂದೊಡೆ
ಅಂತರಂಗದ ಘನಗಂಭೀರ ಮಹಾಬೆಳಗಿನ
ಶಿವಸಮಾಧಿಯನರಿಯದ ಕಾರಣ
ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ
ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.

ಯಾವ ಬಗೆಯ ನಡೆನುಡಿಗಳಲ್ಲಿ/ಆಚರಣೆಗಳಲ್ಲಿ ವಿರಕ್ತಿಯು ಇರುವುದಿಲ್ಲ ಎಂಬುದನ್ನು ಗುರುತಿಸಿ ಹೇಳುವುದರ ಜತೆಗೆ, ಯಾವುದೇ ಒಬ್ಬ ವ್ಯಕ್ತಿಯು ವಿರಕ್ತಿಯನ್ನು ಹೊಂದಬೇಕಾದರೆ ತನ್ನ ಮಯ್ ಮನಗಳನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಂಡಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

‘ವಿರಕ್ತಿ’ ಎಂಬುದು ಜನರ ಗಮನವನ್ನು ತನ್ನತ್ತ ಸೆಳೆಯಲು ಇಲ್ಲವೇ ಜನರನ್ನು ಮೆಚ್ಚಿಸಲು ಮಾಡುವ ತೋರಿಕೆಯ ಆಚರಣೆಯಲ್ಲ; ‘ವಿರಕ್ತಿ’ ಎಂದರೆ ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವಂತಹ ಒಳಮಿಡಿತಗಳಲ್ಲಿ , ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು, ತನ್ನನ್ನು ಒಳಗೊಂಡಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿ.

( ಹಲವು=ಬಹು ಬಗೆಗಳು/ಬಹಳ/ಅನೇಕ; ವೇಷ=ಉಡುಗೆ ತೊಡುಗೆ/ಬಟ್ಟೆ/ವಸ್ತ್ರ/ಒಡವೆ; ಧರಿಸು=ಉಡು/ತೊಡು; ಧರಿಸಿ=ತೊಟ್ಟುಕೊಂಡು/ಉಟ್ಟುಕೊಂಡು/ಹಾಕಿಕೊಂಡು; ಹಲವು ವೇಷವ ಧರಿಸಿ=ಬಗೆಬಗೆಯಾದ ಉಡುಗೆ ತೊಡುಗೆಗಳನ್ನು ಹಾಕಿಕೊಂಡು/ಸಿಂಗರಿಸಿಕೊಂಡು; ಭಾಷೆ=ನುಡಿ/ಮಾತು; ಕಲಿ=ತಿಳಿದುಕೊಂಡು/ಅರಿತುಕೊಂಡು; ಹಲವು ಭಾಷೆಯ ಕಲಿತು=ಅನೇಕ ನುಡಿಗಳನ್ನಾಡುವುದರಲ್ಲಿ ಪರಿಣತಿಯನ್ನು/ಕುಶಲತೆಯನ್ನು/ಚತುರತೆಯನ್ನು ಪಡೆದುಕೊಂಡು; ದೇಶ=ನಾಡು/ಸೀಮೆ/ಪ್ರಾಂತ್ಯ; ಹರಿದು+ಆಡಿದಡೆ+ಏನು; ಹರಿ=ತಿರುಗಾಡು/ಸಂಚರಿಸು/ನಡೆದಾಡು/ಪಯಣಿಸು/ಸುತ್ತಾಡು/ಓಡಾಡು; ಆಡಿದಡೆ=ಆಡಿದರೆ; ಏನು=ಯಾಕೆ/ಯಾವುದು/ಪ್ರಯೋಜನವೇನು;

ಕಾಲಾಡಿ+ಅಂತು+ಅಲ್ಲದೆ; ಕಾಲಾಡಿ=ಒಂದೆಡೆ ನಿಲ್ಲದೆ, ಸದಾಕಾಲ ಸಂಚರಿಸುವವನು/ಅಲೆಮಾರಿ/ಏನನ್ನು ಮಾಡದೆ/ಪಡೆಯದೆ/ಹೊಂದದೆ ಕಾಲವನ್ನು ಕಳೆಯುವವನು/ಹಾಳು ಮಾಡುವವನು; ಅಂತು=ಹಾಗೆ/ಆ ರೀತಿ; ಅಂತಲ್ಲದೆ=ಹಾಗಲ್ಲದೆ/ಆ ರೀತಿಯಲ್ಲಿ ಇರದೆ; ನಿಜ=ದಿಟ/ಸತ್ಯ/ವಾಸ್ತವ ; ವಿರಕ್ತಿ+ಇಲ್ಲ; ನೋಡು+ಆ; ನೋಡು=ತಿಳಿ/ಅರಿತುಕೊ; ನೋಡಾ=ವಾಸ್ತವವನ್ನು ಕುರಿತು ಚಿಂತಿಸಿದಾಗ , ದೊರೆಯುವಂತಹ ಅರಿವು;

ಅದು+ಏನು, ಕಾರಣ+ಎಂದೊಡೆ; ಕಾರಣ=ನಿಮಿತ್ತ/ಉದ್ದೇಶ; ಎಂದೊಡೆ=ಎಂದರೆ/ಎನ್ನುವುದಾದರೆ; ಅದೇನು ಕಾರಣವೆಂದೊಡೆ=ಇಂತಹವರಲ್ಲಿ ಏತಕ್ಕೆ ವಿರಕ್ತಿಯಿಲ್ಲವೆಂದರೆ; ತನು=ದೇಹ/ಶರೀರ/ಮಯ್; ಆಶೆ+ಆಮಿಷ; ಆಶೆ=ಬಯಕೆ/ಕಾಮನೆ; ಆಮಿಷ=ಬಯಸಿದ್ದನ್ನು ಪಡೆಯಬೇಕೆಂಬ ಹಂಬಲ; ಹಿಂಗದು+ಆಗಿ; ಹಿಂಗು=ಕಡಿಮೆಯಾಗು/ತಗ್ಗು/ಅಡಗು; ಹಿಂಗದಾಗಿ=ಕಡಿಮೆಯಾಗುವುದಿಲ್ಲ/ಹೋಗುವುದಿಲ್ಲ/ಬಿಡುವುದಿಲ್ಲ ;

ತನ್ನನ್ನು ತಾನು ವಿರಾಗಿಯೆಂದು/ಸರ‍್ವಸಂಗ ಪರಿತ್ಯಾಗಿಯೆಂದು/ದೇವ ಮಾನವನೆಂದು ಅಂದರೆ ಎಲ್ಲ ಬಗೆಯ ಕಾಮನೆಗಳನ್ನು/ಆಸೆಗಳನ್ನು/ಬಯಕೆಗಳನ್ನು ತೊರೆದವನೆಂದು ತೋರಿಸಿಕೊಳ್ಳುವುದಕ್ಕಾಗಿ ಬಹುತರದ ಉಡುಗೆ ತೊಡುಗೆಗಳನ್ನು ತೊಟ್ಟು; ಹಲವು ಬಗೆಯ ನುಡಿಗಳನ್ನು ಚೆನ್ನಾಗಿ ಕಲಿತು, ಜನರನ್ನು ಮಾತುಗಾರಿಕೆಯಿಂದ ಮರುಳುಮಾಡುತ್ತಾ; ಸಿರಿವಂತರನ್ನು ತಮ್ಮೆಡೆಗೆ ಸೆಳೆದುಕೊಂಡು, ಅವರಿಂದ ಎಲ್ಲಾ ಬಗೆಯ ಅನುಕೂಲಗಳನ್ನು ಪಡೆದುಕೊಂಡು, ದೇಶ ದೇಶಾಂತರಗಳಲ್ಲಿ ಸಂಚರಿಸುವುದರಿಂದ ಏನು ತಾನೆ ಪ್ರಯೋಜನ/ಯಾವುದನ್ನು ತಾನೆ ಗಳಿಸಿದಂತಾಗುತ್ತದೆ. ಇಂತಹ ಹೊರಗಣ ನಡೆನುಡಿಯಿಂದ ಯಾವ ಪ್ರಯೋಜನವೂ ಇಲ್ಲ; ಇಂತಹ ವ್ಯಕ್ತಿಗಳು ಜೀವನದಲ್ಲಿ ಯಾವೊಂದು ದುಡಿಮೆಯನ್ನು ಮಾಡದೆ, ಸಮಯವನ್ನು ಹಾಳು ಮಾಡುತ್ತ, ವಿರಕ್ತಿಯ ನೆಪದಲ್ಲಿ ಎಲ್ಲೆಡೆ ತಿರುಗುವ ಸೋಗಲಾಡಿಗಳೇ ಹೊರತು, ಒಳ್ಳೆಯ ವ್ಯಕ್ತಿಗಳಲ್ಲ; ಇಂತಹವರಿಂದ ಸಹಮಾನವರಿಗಾಗಲಿ ಇಲ್ಲವೇ ಸಮಾಜಕ್ಕಾಗಲಿ ಯಾವುದೇ ರೀತಿಯಿಂದಲೂ ಒಳಿತಾಗುವುದಿಲ್ಲ; ನಿಜವಾದ ವಿರಕ್ತಿಯನ್ನು ಹೊಂದಿದ ವ್ಯಕ್ತಿಯು ಮೊದಲು ತನ್ನ ಮಯ್/ಶರೀರ/ದೇಹದಲ್ಲಿ ತುಡಿಯುವ ಕೆಟ್ಟ ಕಾಮನೆಗಳನ್ನು ಹತ್ತಿಕ್ಕಿಕೊಂಡು ಬಾಳುವುದನ್ನು ಅರಿತಿರಬೇಕು ಎಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ;

ಊರ‍್+ಆಶ್ರಯ; ಊರು=ಜನರು ವಾಸಿಸುವ ಹಳ್ಳಿ/ಗ್ರಾಮ/ಪಟ್ಟಣ; ಆಶ್ರಯ=ಆಸರೆ/ಅವಲಂಬನ/ಮೂಲ ನೆಲೆ; ಕಾಡು+ಆಶ್ರಮ; ಕಾಡು=ಮರಗಿಡಬಳ್ಳಿ ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶ; ಆಶ್ರಮ=ಮುನಿಗಳು/ಗುರುಗಳು/ತಪಸ್ವಿಗಳು ನೆಲೆಸಿರುವ ಎಡೆ/ಜಾಗ; ಗಿರಿ+ಗಹ್ವರ+ಅಲ್ಲಿ+ಇರ್ದಡೆ+ಏನು; ಗಿರಿ=ಬೆಟ್ಟ/ಪರ‍್ವತ; ಗಹ್ವರ=ಗವಿ/ಗುಹೆ; ಇರ್ದಡೆ=ಇದ್ದರೆ; ಊರಾಶ್ರಯ ಬಿಟ್ಟು ಕಾಡಾಶ್ರಮ ಗಿರಿಗಹ್ವರದಲ್ಲಿರ್ದಡೇನು=ಜನರು ವಾಸಿಸುತ್ತಿರುವ ಊರನ್ನು ತೊರೆದು ಕಾಡಿನಲ್ಲಿ ರಿಸಿ/ಮುನಿ/ತಪಸ್ವಿಯಾಗಿ ಬಾಳತೊಡಗಿದರೇನು/ಸಂಸಾರದ ಹೊಣೆಗಾರಿಕೆಯನ್ನು ಬಿಟ್ಟು, ಕಾಡಿನಲ್ಲಿ ದೇವರ ಹೆಸರನ್ನು ಜಪಿಸುತ್ತಿರುವುದರಿಂದ ಏನು ತಾನೆ ಪ್ರಯೋಜನ; ಹಗಲು=ಸೂರ‍್ಯನ ಬೆಳಕು ಬುವಿಯಲ್ಲಿ ಹರಡಿರುವ ಸಮಯ; ಕಣ್ಣು ಕಾಣದ=ಕಣ್ಣಿನಿಂದ ನೋಡಲಾಗದ/ಕಣ್ಣು ಕಾಣಿಸಿದ/ಕಣ್ಣನ್ನು ತೆರೆದು ನೋಡಲಾಗದ; ಗೂಗೆ+ಅಂತೆ+ಅಲ್ಲದೆ; ಗೂಗೆ=ಗೂಬೆ/ಒಂದು ಬಗೆಯ ಹಕ್ಕಿ; ಅಂತೆ=ಹಾಗೆ/ ಆ ರೀತಿ/ಬಗೆ; ಗೂಬೆಗೆ ಹಗಲಿನ ವೇಳೆಯೂ ಕಣ್ಣುಗಳು ಕಾಣುತ್ತವೆ. ಆದರೆ ಅದು ರಾತ್ರಿ/ಇರುಳಿನ ವೇಳೆ ಹೆಚ್ಚು ಚಟುವಟಿಕೆಯಿಂದ ಕೂಡಿ , ತನಗೆ ಅಗತ್ಯವಾದ ಆಹಾರವನ್ನು ಪಡೆದುಕೊಳ್ಳುತ್ತದೆ. ಗೂಬೆಗೆ ಹಗಲಿನಲ್ಲಿ ಕಣ್ಣುಕಾಣುವುದಿಲ್ಲವೆಂಬುದು ಜನರ ಒಂದು ಅನಿಸಿಕೆ;

ಮನ=ಮನಸ್ಸು; ಮಾಯ+ಅಡಗದು+ಆಗಿ; ಮಾಯ=ಸೆಳೆತ/ವ್ಯಾಮೋಹ; ಮನದ ಮಾಯ=ಮನದಲ್ಲಿ ಕಾಮನೆಗಳನ್ನು/ಬಯಕೆಗಳನ್ನು/ಆಸೆಗಳನ್ನು ಕೆರಳಿಸಿ ಕಾಡುವ ಒಳಮಿಡಿತಗಳು; ಅಡಗು=ಮರೆಯಾಗು/ತೊಲಗು; ಅಡಗದು=ಬಿಟ್ಟುಹೋಗುವುದಿಲ್ಲ/ತೊಲಗುವುದಿಲ್ಲ/ನಾಶವಾಗುವುದಿಲ್ಲ/ಕಡಿಮೆಯಾಗುವುದಿಲ್ಲ; ಮನದ ಮಾಯವಡಗದಾಗಿ= ಮನದೊಳಗೆ ಮೂಡಿ ಕಾಡುವ ಕೆಟ್ಟ ಕಾಮನೆಗಳನ್ನು/ಬಯಕೆಗಳನ್ನು/ಆಸೆಗಳನ್ನು ಹತ್ತಿಕ್ಕಿಕೊಳ್ಳದೆ/ ಒಳ್ಳೆಯ ನಡೆನುಡಿಗಳಿಂದ ಕೂಡಿ ಬಾಳಬೇಕೆಂಬ ಎಚ್ಚರವನ್ನು ಹೊಂದದೆ ಊರನ್ನು ತೊರೆದು, ಕಾಡನ್ನು ಸೇರಿ, ಜಪತಪಗಳಲ್ಲಿ ತೊಡಗುವುದರಿಂದ ಯಾವುದೇ ಪ್ರಯೋಜನವಿಲ್ಲವೆಂಬುದನ್ನು ಈ ನುಡಿಗಳು ಸೂಚಿಸುತ್ತವೆ;

ಹಸಿವು=ಉಂಡು ತಿಂದು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೆಂಬ ತುಡಿತ; ತೃಷೆ=ಬಾಯಾರಿಕೆ/ನೀರಡಿಕೆ ; ಬಿಟ್ಟು=ತ್ಯಜಿಸಿ/ತೊರೆದು; ಮಾತನ್+ಆಡದೆ; ಮೌನ+ಆಗಿ+ಇರ್ದಡೆ+ಏನು; ಮೌನ=ಮಾತನಾಡದೆ ಸುಮ್ಮನಿರುವುದು; ಮೋಟು=ತುದಿ ಮುರಿದ/ಚಿಕ್ಕದಾಗಿರುವ ಗಿಡಮರದ ಬುಡ; ಗುಲ್ಮಂಗಳ್+ಅಂತೆ+ಅಲ್ಲದೆ; ಗುಲ್ಮ=ಕುರುಚಲು ಗಿಡಗಳ/ಚಿಕ್ಕಮರಗಳ/ಬಳ್ಳಿಹಂಬುಗಳಿಂದ ಹೆಣೆದುಕೊಂಡಿರುವ ಪೊದೆ/ಪೊದರು; ಗುಲ್ಮಂಗಳ್=ಗುಲ್ಮಗಳು ; ಅಂತು+ಅಲ್ಲದೆ; ವಿಷಯ=ಇಂದ್ರಿಯಗಳ ಬಯಕೆ/ಮಯ್ ಮನಗಳಲ್ಲಿ ಉಂಟಾಗುವ ನೂರೆಂಟು ಬಗೆಯ ಕಾಮನೆಗಳು; ವ್ಯವಹಾರ=ಒಡನಾಟ/ವಹಿವಾಟು/ಇತರರೊಡನೆ ಮಾಡುವ ಕೊಳುಕೊಡುಗೆಯ ಕೆಲಸ;

ದೇಹದಲ್ಲಿ ಉಂಟಾಗುವ ನಿಸರ‍್ಗ ಸಹಜವಾದ ಹಸಿವನ್ನು ಮತ್ತು ಬಾಯಾರಿಕೆಯನ್ನು ಹಿಂಗಿಸಿಕೊಳ್ಳದೆ, ಇತರರೊಡನೆ ಒಂದು ಮಾತನ್ನೂ ಆಡದೆ ಸುಮ್ಮನಿದ್ದ ಮಾತ್ರಕ್ಕೆ ವ್ಯಕ್ತಿಯಲ್ಲಿ ವಿರಕ್ತಿಯೆಂಬುದು ಮೂಡುವುದಿಲ್ಲ. ಇಂತಹ ಆಚರಣೆಗಳು ವ್ಯಕ್ತಿಯನ್ನು ಕೆಲಸಕ್ಕೆ ಬಾರದವನನ್ನಾಗಿ/ಸಮಾಜಕ್ಕೆ ಹೊರೆಯಾಗಿ ರೂಪಿಸುತ್ತವೆಯೇ ಹೊರತು, ಕ್ರಿಯಾಶೀಲನನ್ನಾಗಿ ಮಾಡುವುದಿಲ್ಲ. ಬದುಕಿನ ಆಗುಹೋಗುಗಳಿಂದ ದೂರಸರಿಯುವುದು ವಿರಕ್ತಿಯಲ್ಲ; ಮಯ್ ಮನದಲ್ಲಿ ತುಡಿಯುವ ಕಾಮನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ವ್ಯವಹರಿಸುತ್ತಾ, ಬದುಕಿನಲ್ಲಿ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡು, ಸಹಮಾನವರ ಮತ್ತು ಸಮಾಜದ ಏಳಿಗೆಗೆ ನೆರವಾಗುವ ನಡೆನುಡಿಗಳೇ ವಿರಕ್ತಿಯೆಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ.

ನಿದ್ರೆ=ಮಯ್ ಮನಗಳಿಗೆ ಬಿಡುವನ್ನು ನೀಡುವುದಕ್ಕಾಗಿ ಮಲಗುವುದು; ತೊರೆ=ಬಿಡುವುದು/ತ್ಯಜಿಸುವುದು; ನಿದ್ರೆಯ ತೊರೆದು=ನಿದ್ರೆಯನ್ನು ಮಾಡದೆ/ಮಲಗದೆ ; ಕುಳ್+ಇರ್ದಡೆ+ಏನು; ಕುಳ್=ಕುಳಿತುಕೊಂಡು; ಇರ್ದಡೆ=ಇದ್ದರೆ ; ಏನು=ಯಾವುದನ್ನು ತಾನೆ ಪಡೆದಂತಾಗುತ್ತದೆ/ಮಾಡಿದಂತಾಗುತ್ತದೆ; ಕಳ್ಳ=ಪರರ ಒಡವೆ/ವಸ್ತುಗಳನ್ನು ದೋಚುವವನು; ಹೊಕ್ಕು=ನುಗ್ಗಿ/ನುಸುಳಿ/ಒಳಬಂದು; ಉಲುಹು=ಕೂಗು/ದನಿ/ಶಬ್ದ; ಅಡಗು+ಅನ್ನಬರ; ಅಡಗು=ಮರೆಯಾಗು/ತೊಲಗು/ಬಚ್ಚಿಟ್ಟುಕೊಂಡು; ಅನ್ನಬರ=ಅಲ್ಲಿಯ ವರೆಗೆ/ಆ ತನಕ; ಮರೆ+ಅಲ್ಲಿ; ಮರೆ=ಯಾರ ಕಣ್ಣಿಗೂ ಬೀಳದಂತೆ ಅವಿತುಕೊಳ್ಳುವುದು/ಗುಟ್ಟಾಗಿ ಅಡಗಿಕೊಳ್ಳುವುದು/ಬಚ್ಚಿಟ್ಟುಕೊಳ್ಳುವುದು; ಕುಳಿತ+ಅಂತೆ+ಅಲ್ಲದೆ;

ಊರನ್ನು ಹೊಕ್ಕಿದ ಕಳ್ಳನು ರಾತ್ರಿ ಸದ್ದಡಗುವ ಸಮಯದ ತನಕ ಕಾದು, ಅಂದರೆ ಊರಿನ ಜನರೆಲ್ಲರೂ ಮಲಗಿ ನಿದ್ರಿಸುವ ತನಕ ಕಾದು, ಅನಂತರ ಮನೆಗಳಿಗೆ ಕನ್ನಹಾಕಿ ಸಂಪತ್ತನ್ನು ದೋಚುವ ಹಾಗೆ/ಕೆಟ್ಟ ಉದ್ದೇಶದಿಂದ ಕೂಡಿರುವಂತೆ, ವಿರಕ್ತರಂತೆ ನಟಿಸುವ ವ್ಯಕ್ತಿಗಳು ಜನರನ್ನು ವಂಚಿಸುವ ಬಗೆಯನ್ನು ಇಂತಹ ಉಪಮೆ/ರೂಪಕಗಳ ಮೂಲಕ ವಚನಕಾರನು ಕಟುವಾಗಿ ಟೀಕಿಸಿದ್ದಾನೆ;

ಅಂತರಂಗ=ಒಳಗಿನ ಎಡೆ/ಒಳಗಡೆಯಿರುವುದು/ಮನಸ್ಸು; ಘನ=ದೊಡ್ಡದು/ಹಿರಿದಾದುದು; ಗಂಭೀರ=ಗಹನವಾದುದು/ಮಹತ್ತರವಾದುದು; ಮಹಾ=ದೊಡ್ಡದು/ವಿಸ್ತಾರದುದು ; ಬೆಳಗು=ಹೊಳಪು/ಕಾಂತಿ/ಪ್ರಕಾಶ; ಶಿವ+ಸಮಾಧಿ+ಅನ್+ಅರಿಯದ; ಶಿವ=ಈಶ್ವರ/ದೇವರು ; ಸಮಾಧಿ=ಮನಸ್ಸನ್ನು ಒಂದೆಡೆ ನೆಲೆಗೊಳಿಸುವುದು/ಏಕಾಗ್ರತೆ; ಶಿವ ಸಮಾಧಿ=ವ್ಯಕ್ತಿಯು ಒಳ್ಳೆಯ ನಡೆನುಡಿಗಳಲ್ಲಿ ತನ್ನ ಮಯ್ ಮನಗಳನ್ನು ತೊಡಗಿಸಿಕೊಳ್ಳುವುದು; ಅನ್=ಅನ್ನು; ಅರಿ=ತಿಳಿ/ಕಲಿ ; ಅರಿಯದ=ತಿಳಿಯದ/ಕಲಿಯದ;

ಅಂತರಂಗದ ಘನಗಂಭೀರ ಮಹಾಬೆಳಗಿನ ಶಿವ ಸಮಾಧಿ=ನಿಸರ‍್ಗ ಸಹಜವಾಗಿ ಉಂಟಾಗುವ ಒಳಮಿಡಿತಗಳ ಮತ್ತು ವ್ಯಕ್ತಿಯು ಹುಟ್ಟಿ ಬೆಳೆಯುವ ಸಮಾಜದಲ್ಲಿನ ಕಟ್ಟುಪಾಡುಗಳು, ಸಂಪ್ರದಾಯಗಳು ಮತ್ತು ಆಚರಣೆಗಳ ನಡುವೆ ಸಿಲುಕಿರುವ ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು, ತನ್ನ, ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳಬೇಕೆಂಬ ಅರಿವಿನಿಂದ ಕೂಡಿರುವ ನಡೆನುಡಿಗಳಲ್ಲಿ/ವ್ಯಕ್ತಿಯ ಒಳ್ಳೆಯ ಸಾಮಾಜಿಕ ವರ‍್ತನೆಯಲ್ಲಿ ಶಿವ/ಈಶ್ವರ/ದೇವರನ್ನು ಶಿವಶರಣಶರಣೆಯರು ಕಾಣುತ್ತಿದ್ದರು.

ಇಂತು+ಅಪ್ಪ; ಇಂತು=ಈ ರೀತಿ/ಈ ಬಗೆ ; ಅಪ್ಪ=ಆಗಿರುವ/ಕಂಡುಬರುವ ; ಇಂತಪ್ಪ=ಈ ರೀತಿಯಲ್ಲಿರುವ ; ಹೊರ=ಬಹಿರಂಗ; ಹೊರವೇಷ=ಬಹಿರಂಗದಲ್ಲಿ ಕಾಣುವ ಉಡುಗೆತೊಡುಗೆಗಳು ; ಡಂಭಕ=ಮೋಸಗಾರ/ವಂಚಕ/ಸೋಗಲಾಡಿ/ತಳುಕುಬಳುಕಿನವನು/ಒಳಗೊಂದು ಹೊರಗೊಂದು ನಡೆನುಡಿಯುಳ್ಳವನು; ಹೊರವೇಷದ ಡಂಭಕ=ಬಹಿರಂಗದಲ್ಲಿ ವಿರಕ್ತನಂತೆ ಕಾಣಿಸಿಕೊಳ್ಳುತ್ತ, ಅಂತರಂಗದಲ್ಲಿ ತನ್ನ ಮಯ್ ಮನಗಳ ಕೆಟ್ಟ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಮಗ್ನನಾದವನು/ಒಳ್ಳೆಯವನಂತೆ ನಟಿಸುತ್ತಾ , ಜನರ ಕಣ್ಣಿಗೆ ಮಣ್ಣೆರಚಿ, ತನ್ನ ಹಿತವನ್ನು ನೋಡಿಕೊಳ್ಳುವವನು;

ಜೊಳ್ಳು=ಒಳಗೆ ಗಟ್ಟಿಯಾದ ಕಾಳು ಇಲ್ಲದೆ, ಮೇಲೆ ಮಾತ್ರ ಸಿಪ್ಪೆ ಇರುವ ದಾನ್ಯ; ಮನ=ಮನಸ್ಸು ; ಜೊಳ್ಳುಮನದವರು=ಒಳ್ಳೆಯ ಮನಸ್ಸಿಲ್ಲದವರು/ಒಳಿತಿನ ನಡೆನುಡಿಗಳಿಲ್ಲದ ಚಂಚಲಮನದ ವ್ಯಕ್ತಿಗಳು ; ವಿರಕ್ತರ‍್+ಎಂದೊಡೆ; ವಿರಕ್ತ=ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ಬದುಕನ್ನು ನಡೆಸುವವನು ; ಮಚ್ಚರು+ಅಯ್ಯ; ಮಚ್ಚು=ಒಪ್ಪು/ಸಮ್ಮತಿಸು/ಒಲಿ/ಪ್ರೀತಿಸು; ಮಚ್ಚರು=ಒಪ್ಪುವುದಿಲ್ಲ/ಒಲಿಯುವುದಿಲ್ಲ ; ಅಯ್ಯ=ಇತರ ವ್ಯಕ್ತಿಗಳನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಶರಣರು=ಶಿವನಿಗೆ ಒಲಿದವರು/ಸತ್ಯದ ನಡೆನುಡಿಗಳಲ್ಲೇ ಶಿವನನ್ನು ಕಾಣುವವರು; ಅಖಂಡೇಶ್ವರಾ=ಶಿವ/ಈಶ್ವರ/ವಚನಕಾರನ ವಚನಗಳಲ್ಲಿನ ಅಂಕಿತನಾಮ)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: