ಅಳುವ ಮದುವೆ – ಚೀನಾದಲ್ಲಿರುವ ಸಾಂಪ್ರದಾಯಿಕ ಆಚರಣೆ

– ಕೆ.ವಿ.ಶಶಿದರ.

ಅಳುವ ಮದುವೆ Crying Marriage

ಮದುವೆ ಕಾಲಾನುಕಾಲದಿಂದ ಎಲ್ಲಾ ಜಾತಿ, ದರ‍್ಮ, ಸಂಸ್ಕ್ರುತಿಗಳಲ್ಲಿ ಬೆಳೆದು ಬಂದಿರುವ ಒಂದು ಸಂಪ್ರದಾಯ. ಅವರವರ ನಿಶ್ಟೆಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಮದುವೆ ನಡೆಯುವ, ನಡೆಸುವ ರೀತಿ-ರಿವಾಜುಗಳಲ್ಲಿ ಬಹಳಶ್ಟು ವ್ಯತ್ಯಾಸಗಳನ್ನು ಕಾಣಬಹುದು. ಮದುವೆ ಎಂಬುದು ಸಂಬ್ರಮದ, ಸಂತೋಶದ ಸಮಾರಂಬ. ಬಂದನಗಳ ಬೆಸುಗೆ ಇದರ ಪ್ರಮುಕ ದ್ಯೇಯ.

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಅನೇಕ ಪ್ರದೇಶಗಳಲ್ಲಿ ಮದುವೆ ಸಂಪ್ರದಾಯ ಬೇರೆಲ್ಲೆಡೆಗಿಂತ ತೀರ ಬೇರೆಯಾಗಿದೆ. ಅದೇ ‘ಅಳುವ ಮದುವೆ’.

ಇತಿಹಾಸವನ್ನು ಕೆದಕಿ ನೋಡಿದರೆ ಈ ಸಂಪ್ರದಾಯ 20ನೇ ಶತಮಾನದ ಮೊದಲ ದಶಕದಲ್ಲೂ ಆಚರಣೆಯಲ್ಲಿತ್ತು ಎಂದು ತಿಳಿದು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಆದರೂ ‘ತುಜಿಯಾ’ ಪಂಗಡದ ಜನರು ಇಂದೂ ಸಹ ಈ ಸಂಪ್ರದಾಯವನ್ನು ಮದುವೆಯ ಅಗತ್ಯ ಬಾಗವೆಂದೇ ಪರಿಗಣಿಸುವುದು ಮಾತ್ರವಲ್ಲ ಆಚರಿಸುತ್ತಾರೆ ಕೂಡ.

ಅಳುವ ಮದುವೆ ಸಂಪ್ರದಾಯ ಹಲವು ಪ್ರಾಂತ್ಯಗಳಲ್ಲಿ ಒಂದೇ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಹಳೆ ತಲೆಮಾರಿನ ಹಿರಿಯರ ಪ್ರಕಾರ ಮದುಮಗಳು ಮದುವೆಯ ಸಮಾರಂಬದಲ್ಲಿ ಅಳುವುದು ಕಡ್ಡಾಯ. ಹಾಗೇನಾದರೂ ಅಳದಿದ್ದಲ್ಲಿ ಮದುಮಗಳನ್ನು ಬೆಳಸಿದ ರೀತಿಯ ಬಗ್ಗೆ ನೆರೆಹೊರೆಯವರು ಹಗುರವಾಗಿ ಆಡಿಕೊಳ್ಳುವುದು ಸಾಮಾನ್ಯ. ಸಂಸ್ಕ್ರುತಿ ಹೀನ ಎಂದು ಹೀಯಾಳಿಸುವುದೂ ಉಂಟು. ಅಂತಹ ಮದುಮಗಳು ನಗೆಪಾಟಲಿಗೆ ಈಡಾಗುತ್ತಿದ್ದುದು ಹೌದು. ಮದುವೆ ಸಮಾರಂಬದಲ್ಲಿ ಮದುಮಗಳು ಅಳದಿದ್ದಲ್ಲಿ ಅಳುವಂತೆ ಮಾಡಲು ಆಕೆಯ ತಾಯಿ ಮಗಳಿಗೆ ಹೊಡೆಯುವ ಪ್ರಕರಣಗಳೂ ಹೇರಳವಾಗಿದ್ದವು.

ಕ್ರಿಸ್ತ ಪೂರ‍್ವ 475-221 ಕಾಲದಲ್ಲಿನ ಐತಿಹಾಸಿಕ ದಾಕಲೆಗಳಂತೆ ಜಾವೋ ರಾಜ್ಯದ ರಾಜಕುಮಾರಿ ಯಾನ್ ರಾಜ್ಯದ ರಾಜಕುಮಾರನನ್ನು ಮದುವೆಯಾಗಿ, ಆ ರಾಜ್ಯದ ರಾಣಿಯಾಗಿ ಮುಂದಿನ ಜೀವನವನ್ನು ಸಾಗಿಸಲು ಗಂಡನ ಮನೆ ಸೇರಬೇಕಿತ್ತು. ಆಗ ರಾಜಕುಮಾರಿಯ ತಾಯಿ, ಮಗಳ ಅಗಲಿಕೆಯ ನೋವನ್ನು ತಾಳಲಾರದೆ ಆಕೆಯ ಕಾಲುಗಳನ್ನು ಹಿಡಿದು ಆಳುತ್ತಾ ಆದಶ್ಟು ಬೇಗ ಹಿಂದಿರುಗುವಂತೆ ಬೇಡಿದಳಂತೆ. ತಾಯಿ ಅತ್ತಾಗ ಆಕೆಯ ಜೊತೆ ಮಗಳೂ ಅಳುವುದು ಸಾಮಾನ್ಯ. ಹಾಗಾಗಿ ರಾಜಕುಮಾರಿ ತುಂಬಾ ಅತ್ತಳಂತೆ. ಇದೇ ಅಳುವ ಮದುವೆ ಸಂಪ್ರದಾಯದ ಮೂಲ ಎಂದು ಪ್ರಾಸಂಗಿಕವಾಗಿ ಸ್ತಳೀಯರು ಸೂಚಿಸುವುದುಂಟು.

ಮದುವೆ ಮುಂಚಿನ ಒಂದು ತಿಂಗಳ ಕಾಲ, ದಿನಕ್ಕೆ ಒಂದು ಗಂಟೆ ತಪ್ಪದೇ ಅಳುತ್ತಾರೆ!

ಈ ಸಂಪ್ರದಾಯವನ್ನು ಪಶ್ಚಿಮ ಸಿಚುವಾನ್ ಪ್ರಾಂತ್ಯದಲ್ಲಿ ‘ಜುವೊ ಟಾಂಗ್’ ಎನ್ನುತ್ತಾರೆ. ಜುವೊ ಟಾಂಗ್ ಅಂದರೆ ‘ಹಜಾರದಲ್ಲಿ ಕುಳಿತು’ ಎಂಬ ಹುರುಳು ಬರುತ್ತದೆ. ಸಾಮಾನ್ಯವಾಗಿ ಮದುವೆ ದಿನಕ್ಕೆ ಒಂದು ತಿಂಗಳ ಮೊದಲು ಅಳುವುದಕ್ಕಾಗಿಯೇ ನಿಗದಿಪಡಿಸಿದ ಹಜಾರದಲ್ಲಿ ಅಳುವ ಪ್ರಕ್ರಿಯೆಯನ್ನು ಮದುಮಗಳು ಆರಂಬಿಸುತ್ತಾಳೆ. ಮುಸ್ಸಂಜೆ ಹರಿದು ರಾತ್ರಿ ಪ್ರಾರಂಬವಾಗುತ್ತಿದ್ದಂತೆ ಹಜಾರಕ್ಕೆ ಬಂದು ಕುಳಿತು ಸಾಂಪ್ರದಾಯಿಕ ಕೆಲಸವನ್ನು ಪ್ರಾರಂಬಿಸುತ್ತಾಳೆ. ಸುಮಾರು ‘ಒಂದು ಗಂಟೆ’ ಕಾಲ ಏಕಾಂಗಿಯಾಗಿ ಅಳುತ್ತಾಳೆ. ಈ ಕಾರ‍್ಯಕ್ರಮ ತಪ್ಪದೇ ಹತ್ತು ದಿನಗಳ ಕಾಲ ಸಾಗುತ್ತದೆ.

ಹತ್ತು ದಿನಗಳ ಬಳಿಕ ಮದುಮಗಳ ಜೊತೆ ಆಕೆಯ ತಾಯಿಯೂ ಸೇರಿ ಹಜಾರದಲ್ಲಿ ಅಳುವುದರಲ್ಲಿ ಪಾಲ್ಗೊಳ್ಳುತ್ತಾಳೆ. ತಾಯಿ ಮಗಳ ಅಳುವ ಕಾರ‍್ಯಕ್ರಮವು ಮತ್ತೆ ಹತ್ತು ದಿನಗಳ ಕಾಲ ನಡೆಯುತ್ತದೆ. ಎರಡನೆಯ ಹತ್ತು ದಿನಗಳು ಕಳೆದ ಬಳಿಕ ಮದುಮಗಳು ಮತ್ತು ಆಕೆಯ ತಾಯಿಯ ಜೊತೆ ಅಜ್ಜಿಯೂ ಸಹ ಜೊತೆಗೂಡುವುದು ಸಂಪ್ರದಾಯ. ಮೂರು ತಲೆಮಾರಿನವರೂ ಜೊತೆ ಸೇರಿ ಮುಂದಿನ ಹತ್ತು ದಿನಗಳ ಕಾಲ ಅಳುವ ಕಾರ‍್ಯವನ್ನು ಮುಂದುವರೆಸುತ್ತಾರೆ. ಮದುಮಗಳಿಗೆ ಅಕ್ಕ ತಂಗಿಯರಾಗಲಿ, ದೊಡ್ಡಮ್ಮ ಚಿಕ್ಕಮ್ಮಂದಿರುಗಳಾಗಲಿ ಇದ್ದಲ್ಲಿ ಅವರುಗಳು ಅಳುವ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ.

ಹೇಗೆ ಬೇಕೋ ಹಾಗೆ ಅಳಬಹುದು. ಹಾಡೂ ಹಾಡಬಬಹುದು!

ಅಳುವಿನಲ್ಲಿ ವೈವಿದ್ಯತೆಯನ್ನು ಮೆರೆಯುವುದು ಮದುಮಗಳ ಜಾಣ್ಮೆಗೆ ಹಿಡಿದ ಕನ್ನಡಿ. ಬಗೆಬಗೆಯ ಪದಗಳನ್ನು ಬಳಸಿ ವಿಬಿನ್ನ ರೀತಿಯಲ್ಲಿ ಮನಮುಟ್ಟುವಂತೆ ಅಳಲು ಈ ವೇದಿಕೆಯನ್ನು ಆಕೆ ಪೂರ‍್ಣವಾಗಿ ಬಳಸಿಕೊಳ್ಳಬಹುದು. ತನ್ನದೇ ಆದ ಶೈಲಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡಬಹುದು. ಮದುವೆಯ ಬಗ್ಗೆ ಬೇಸರವಿದ್ದಲ್ಲಿ ಹಾಡಿನ ಮೂಲಕ ಹೊರಹಾಕಬಹುದು. ಮದುವೆ ದಳ್ಳಾಳಿಯನ್ನು ಮನಸ್ಸಿಗೆ ಬಂದಂತೆ ನಿಂದಿಸಬಹುದು. ಈ ಸಮಯದಲ್ಲಿ ಆಕೆ ಬಳಸುವ ಪದಗಳಿಗಾಗಲಿ ರೀತಿ-ರಿವಾಜಿಗಾಗಲಿ ಯಾವುದೇ ನಿರ‍್ಬಂದ ಇರುವುದಿಲ್ಲ, ಇದನ್ನು ‘ಅಳುವ ಮದುವೆಯ ಹಾಡು'(Crying Marriage Song) ಎನ್ನುತ್ತಾರೆ.

ಇಂತಹ ಮದುವೆ ಸಮಾರಂಬದಲ್ಲಿ ಅತಿ ದುಕ್ಕಕರ ಪದಗಳ ಬಳಕೆ ಸಾಮಾನ್ಯ. ಮದುವೆಯ ಶುಬಸಮಾರಂಬದಲ್ಲಿ ದುಕ್ಕಕರ ಪದಗಳ ಬಳಕೆ ಮದುವೆ ಕಾರ‍್ಯಕ್ರಮದ ಸಂತೋಶವನ್ನು ಹೆಚ್ಚಿಸುವ ಹಾಗೂ ಮದುವೆಯ ಬಂದನವನ್ನು ಗಟ್ಟಿಗೊಳಿಸುವ ಬಗೆ ಎಂದು ಆ ಪಂಗಡದ ಹಿರಿಯ ಸಂಪ್ರದಾಯವಾದಿಗಳ ನಂಬಿಕೆ!

ಚೀನಾದ ಈ ಸಮಾಜದವರು ಹೆಣ್ಣುಮಕ್ಕಳನ್ನು ಬೆಳಸುವಾಗ ಮುಂದಿನ ಜೀವನಕ್ಕೆ ಅವಶ್ಯವಿರುವ ಸದ್ಗುಣ ಹಾಗೂ ವಿದೇಯತೆಗಳನ್ನು ಬಹಳವಾಗಿ ಮನಸ್ಸಿಗೆ ತುಂಬುವುದು ಪದ್ದತಿ. ಈ ವಿದೇಯತೆಯೇ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ಸಮಯದಲ್ಲಿ ಯಾವುದೇ ಅಬಿಪ್ರಾಯವನ್ನು ವ್ಯಕ್ತಪಡಿಸದಂತೆ ನಿರ‍್ಬಂದ ಹಾಕುತ್ತಿತ್ತು. ವದುವಿನ ಪೋಶಕರು ಹಾಗೂ ಮದುವೆಯ ದಳ್ಳಾಳಿಯ ತೀರ‍್ಮಾನವೇ ಕೊನೆ. ಮದುವೆ ದಳ್ಳಾಳಿಗಳೇ ಅಳುವ ಮದುವೆಯ ಪ್ರಮುಕ ಸೂತ್ರದಾರಿಗಳು. ಅಳುವ ಮದುವೆಯ ಹೆಣ್ಣುಮಕ್ಕಳು ಇಂತಹ ದಳ್ಳಾಳಿಗಳನ್ನು ತಮ್ಮ ಮನಸೋ ಇಚ್ಚೆ ತೆಗಳುವುದುಂಟು. ಅವರುಗಳಿಗೆ ಇದು ಸಾಮಾನ್ಯ. ಇವಾವುದಕ್ಕೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಈ ರೀತಿಯ ಬೈಗುಳಗಳಿಂದ ತಮ್ಮ ಅದ್ರುಶ್ಟವನ್ನು ಬದಲಿಸಲು ಸಾದ್ಯವಿಲ್ಲ ಎಂಬುದು ಅವರಿಗೆ ಗೊತ್ತು. ಆದ ಕಾರಣ ದಳ್ಳಾಳಿಗಳು ತಮ್ಮ ಕೆಲಸಕ್ಕೆ ಯಾವುದೇ ಕೊರತೆ ಬರದಂತೆ ನಡೆಸಿಕೊಂಡು ಹೋಗುವುದನ್ನು ಅಬ್ಯಾಸ ಮಾಡಿಕೊಂಡಿದ್ದಾರೆ.

(ಮಾಹಿತಿ ಸೆಲೆ: chinadaily.com, eteacherchinese.com )
(ಚಿತ್ರ ಸೆಲೆ: en.hubei.gov.cn )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: