ಪ್ರಕ್ರುತಿ ಉಳಿಸಿದರೇನೆ ಸುಂದರ ಈ ಜಗ
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).
ಹಸಿರು ಹೊದ್ದು, ಉಸಿರು ನೀಡೋಮರವ ಕಡಿದು
ಮೇಜು ಕುರ‍್ಚಿಯ ಮಾಡಿ, ಕಿಟಕಿ, ಬಾಗಿಲ ರೂಪ ನೀಡಿ
ತಮ್ಮಿಶ್ಟದಂತೆ ಹಾರಾಡುತ್ತಿದ್ದ ಗಿಣಿ, ನವಿಲು, ಕೊಕ್ಕರೆಗಳ
ಹಿಡಿದು ತಂದು ಪಂಜರದಲಿ ಇಟ್ಟು, ಸಾಕುವವರು ನಾವು
ಬುಸುಗುಡುವ ಹಾವು ಹೊಟ್ಟೆ ಕೆಳಗಿನ ಬೆಲ್ಟ್ ಆಯಿತು
ಚಂಗನೆ ಹಾರಿ ಬೇಟೆ ಆಡುವ ಹುಲಿಯ ತಂದು
ಸಲಾಕೆಯಲಿ ಬಂದಿಸಿದೆವು
ಅದರ ಉಗುರು ಕುತ್ತಿಗೆಯಲಿ ರಾರಾಜಿಸುತಿದೆ
ಗೀಳಿಡುತ್ತಿದ್ದ ಬಲಶಾಲಿ ಆನೆಗಳು
ಕೂಡ ಸಣ್ಣ ಗುಂಡಿಗೆ ಬಲಿಯಾಗಿವೆ
ಅದರ ದಂತದಿಂದ ಅಮೂಲ್ಯವಸ್ತುಗಳಾಗುತಿವೆ
ಸಿಡಿಲಬ್ಬರದ ಸಿಂಹಗಳು ತಣ್ಣಗೆ ನಿಂತಿವೆ
ಗೋಡೆ ಮೂಲೆಯಲ್ಲಿ ಬಿಟ್ಟ ಕಣ್ಣು ಬಿಟ್ಟಂತೆ
ಹುಲ್ಲ ತಿಂದು ಬಯದಿ ಬದುಕುವ ನಿರುಪದ್ರವಿ ಜಿಂಕೆ ಕೂಡ
ಪ್ರಾಣ ಬಿಡುತಿದೆ, ಕೊಂಬುಗಳು ಗೋಡೆಯಲ್ಲಿ ನೇತಾಡುತಿವೆ
ಕೊಂಬು ಹೊತ್ತ ಗೇಂಡಾಮ್ರುಗ ಸಾಯುತಿದೆ
ಮನುಶ್ಯನ ಆಯಸ್ಸು ಹೆಚ್ಚಿಸುವುದಕ್ಕಾಗಿ
ಎತ್ತರದ ಜಿರಾಪೆ ಸಾಯುತಿದೆ ಮೋಜಿನ ಬೇಟೆ ಆಟಕ್ಕೆ
ಕೋತಿಗಳು ಪ್ರಾಣ ಬಿಡುತಿವೆ
ಮನುಶ್ಯನ ಪ್ರಯೋಗಾಲಯದಲ್ಲಿ ಹೊಸ ಆವಿಶ್ಕಾರಕ್ಕಾಗಿ
ಜೇನು ಹೀರಿ ಬದುಕುವ ಹುಳಗಳು ಸಾಯುತಿವೆ, ಹೂ ಇಲ್ಲದೆ
ಸಣ್ಣಪುಟ್ಟ ಪಕ್ಶಿಗಳು ಕ್ಶೀಣಿಸುತ್ತಿವೆ, ಗೂಡು ಕಟ್ಟಲು ಜಾಗ ಇಲ್ಲದೆ
ಕರಡಿ, ಮೊಸಳೆಗಳ ಚರ‍್ಮ ಉಪಯೋಗವಾಗುತ್ತಿದೆ
ನಡಗುವ ನಮ್ಮ ಮೈಯ ಬೆಚ್ಚಗಿಡಲು
ಚಿರತೆಗಳು ಸಾಯುತಿವೆ ನಗರಕ್ಕೆ ಬಂದು
ಬೀಗುತಿಹರು ನಮ್ಮವರು ಅವನ್ನು ಕೊಂದು
ಇಶ್ಟೆಲ್ಲ ಮಾಡಿ, ಅಮಾಯಕನಂತೆ ಇರುವವನೆ ಮನುಜ
ಪ್ರಕ್ರುತಿ ಉಳಿಸದೆ ಇದ್ದರೆ ಅಪಾಯ ಬರುವುದು ಸಹಜ
ಬೇಗ ತಿಳಿದು ಪ್ರಕ್ರುತಿ ಉಳಿಸಿದರೇನೆ ಸುಂದರ ಈ ಜಗ
(ಚಿತ್ರ ಸೆಲೆ: pixabay.com)
ಅರ್ಥಪೂರ್ಣವಾದ ಕವಿತೆ
ಧನ್ಯವಾದ ಗಳು