ಸಿದ್ದರಾಮೇಶ್ವರನ ವಚನಗಳ ಓದು

– ಸಿ.ಪಿ.ನಾಗರಾಜ.

ಶರಣ ಸಿದ್ದರಾಮೇಶ್ವರ, Sharana Siddarameshwara

ಸಿದ್ದರಾಮೇಶ್ವರನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣ. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನಕಾರರ ಹೇಳಿಕೆಗಳನ್ನು ಗಮನಿಸಿ, ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ.

ಹೆಸರು: ಸಿದ್ದರಾಮ/ಸಿದ್ದರಾಮೇಶ್ವರ

ಊರು: ಹುಟ್ಟಿದ ಊರು ಯಾವುದೆಂಬುದು ತಿಳಿದುಬಂದಿಲ್ಲ.

ಕಸುಬು: ಸೊನ್ನಲಿಗೆ/ಸೊನ್ನಲಾಪುರದಲ್ಲಿ ಜನರನ್ನು ಒಗ್ಗೂಡಿಸಿಕೊಂಡು ಸಮುದಾಯದ ಬದುಕಿಗೆ ಒಳಿತನ್ನು ಉಂಟುಮಾಡುವ ಕೆರೆಕಟ್ಟೆ, ಬಾವಿ, ಅರವಟ್ಟಿಗೆ ಮತ್ತು ಇತರ ಕೆಲಸಗಳನ್ನು ಮಾಡುವ ನೇತಾರನಾಗಿದ್ದನು.

ದೊರೆತಿರುವ ವಚನಗಳು: 1965

ವಚನಗಳ ಅಂಕಿತನಾಮ : ಕಪಿಲಸಿದ್ಧಮಲ್ಲಿಕಾರ್ಜುನಾ / ಕಪಿಲಸಿದ್ಧಮಲ್ಲಿಕಾರ್ಜನಲಿಂಗ

=================================================

ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ
ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ
ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ
ನುಡಿಯ ಬ್ರಹ್ಮಂಗಳಿಂದಪ್ಪುದೇನೊ.

ವಾದದಲ್ಲಿ ಎದುರಾಳಿಗಳನ್ನು ಸೋಲಿಸಲೆಂದೇ ತರ‍್ಕ ವಿತರ‍್ಕವನ್ನು ಒಡ್ಡುವ ಕುಶಲತೆಯ ಮಾತುಗಳಿಂದಾಗಲಿ ಇಲ್ಲವೇ ಕೇಳುಗರ ಮನಸೆಳೆಯುವ/ಮನಗೆಲ್ಲುವ ಮೋಡಿಯ ಮಾತುಗಳಿಂದಾಗಲಿ ಯಾವ ಪ್ರಯೋಜನವೂ ಇಲ್ಲ; ಜೀವನದಲ್ಲಿ ಕೇವಲ ಮಾತಿನ ಜಾಣ್ಮೆಯನ್ನು ಮೆರೆಯುವುದರ ಬದಲು, ವ್ಯಕ್ತಿಯು ತಾನಾಡುವ ಮಾತುಗಳಿಗೆ ತಕ್ಕಂತೆ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

‘ಒಳ್ಳೆಯ ಕೆಲಸ‘ ಎಂದರೆ ತನ್ನ ಏಳಿಗೆಗೆ ಮತ್ತು ನೆಮ್ಮದಿಗೆ ನೆರವಾಗುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ಕೆಲಸ.

(ನಡೆ+ನುಡಿ+ಗಳ್+ಒಂದು+ಆದ+ಅವರಿಗೆ+ಒಲಿವೆ; ನಡೆ=ನಡವಳಿಕೆ/ಆಚರಣೆ/ವರ‍್ತನೆ/ಮಾಡುವ ಕೆಲಸ; ನುಡಿ=ಆಡುವ ಮಾತು; ನಡೆನುಡಿಗಳೊಂದಾದವರಿಗೆ=ಆಡುವ ಒಳ್ಳೆಯ ನುಡಿಗಳಿಗೆ ತಕ್ಕಂತೆ ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ/ಇತರರಿಗೆ ಹೇಳುವ ನೀತಿನಿಯಮಗಳ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿರುವವರಿಗೆ; ಒಲ್+ಇ; ಒಲಿ=ಮೆಚ್ಚು/ಒಪ್ಪು/ಬಯಸು/ಸಮ್ಮತಿಸು; ಒಲಿವೆ=ಮೆಚ್ಚಿಕೊಳ್ಳುವೆ/ಒಪ್ಪಿಕೊಳ್ಳುವೆ; ಕಂಡು+ಅಯ್ಯ; ಕಂಡು=ನೋಡಿ/ಕಾಣು ; ಅಯ್ಯ=ಇತರರೊಡನೆ ಒಲವು ನಲಿವಿನಿಂದ ಮಾತನಾಡುವಾಗ ಬಳಸುವ ಪದ; ಕಂಡಯ್ಯ=ಅರಿತು ನೋಡು/ತಿಳಿದು ನೋಡು;

ನುಡಿಯೆ=ಮಾತುಗಳೇ; ಬ್ರಹ್ಮ+ಆದವರ; ಬ್ರಹ್ಮ=ಜಗತ್ತಿನಲ್ಲಿರುವ ಎಲ್ಲಾ ಬಗೆಯ ಜೀವರಾಶಿಗಳ ಹುಟ್ಟಿಗೆ ಕಾರಣನೆಂದು ಜನಸಮುದಾಯವು ನಂಬಿರುವ ದೇವ/ಓದು ಬರಹದಿಂದ ಪಡೆದಿರುವ ತಿಳುವಳಿಕೆ/ಹೆಚ್ಚಿನ ಅರಿವು; ಆದವರ=ಆಗಿರುವವರನ್ನು; ನೀನ್+ಒಲ್ಲೆ+ಅಯ್ಯ; ನೀನು=ದೇವರಾದ ನೀನು; ಒಲ್+ಎ; ಒಲ್ಲೆ=ಒಪ್ಪುವುದಿಲ್ಲ/ಮೆಚ್ಚುವುದಿಲ್ಲ; ನುಡಿಯೆ ಬ್ರಹ್ಮವಾದವರು=ದೇಹವನ್ನು ದಂಡಿಸಿ ಯಾವುದೇ ಒಂದು ಬಗೆಯ ದುಡಿಮೆಯನ್ನು ಮಾಡದೆ, ಕೇವಲ ಮಾತಿನ ಚತುರತೆಯಿಂದಲೇ ಎಲ್ಲರನ್ನೂ ಮರುಳುಮಾಡಿ ವಂಚಿಸುತ್ತಾ, ತಮಗೆ ಬೇಕಾದುದೆಲ್ಲವನ್ನು ಪಡೆದುಕೊಳ್ಳುವ ವ್ಯಕ್ತಿಗಳು/ ಅಕ್ಕರ ವಿದ್ಯೆಯ ಪಾಂಡಿತ್ಯದಿಂದ ಎದುರಾಳಿಗಳನ್ನು ಮಾತಿನ ಕುಶಲತೆಯಿಂದಲೇ ಸೋಲಿಸುವವರು/ಮಾತನ್ನೇ ಬಂಡವಾಳ ಮಾಡಿಕೊಂಡಿರುವವರು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ಪದಕಂತೆ; ನೀನೊಲ್ಲೆ=ದೇವರಾದ ನೀನು ಮೆಚ್ಚುವುದಿಲ್ಲ;

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಕಾಯಕದಲ್ಲಿ ದೇವರನ್ನು ಕಾಣುತ್ತಿದ್ದರು. ಆದುದರಿಂದ ಕಾಯಕವಿಲ್ಲದ ಬರಿ ಮಾತಿನ ಜಾಣ್ಮೆಯಿಂದ/ಅಕ್ಕರ ವಿದ್ಯೆಯ ಪಾಂಡಿತ್ಯವನ್ನು ಮೆರೆಯುವುದರಿಂದ ಸಹಮಾನವರಿಗಾಗಲಿ ಇಲ್ಲವೇ ಸಮಾಜಕ್ಕಾಗಲಿ ಒಳಿತಾಗುವುದಿಲ್ಲವೆಂಬ ನಿಲುವನ್ನು ಹೊಂದಿದ್ದರು.

ಮೃಡ=ಶಿವ/ಈಶ್ವರ; ಮೃಡನೆ=ಶಿವನೇ/ಈಶ್ವರನೇ/ದೇವರೇ; ಕಪಿಲಸಿದ್ಧಮಲ್ಲಿಕಾರ್ಜುನಲಿಂಗ=ವಚನಕಾರನಾದ ಸಿದ್ದರಾಮೇಶ್ವರನ ಮೆಚ್ಚಿನ ದೇವರು/ಸಿದ್ದರಾಮೇಶ್ವರನ ವಚನಗಳ ಅಂಕಿತನಾಮ; ನುಡಿಯ=ಮಾತಿನ; ಬ್ರಹ್ಮಂ+ಗಳ್+ಇಂದ+ಅಪ್ಪುದು+ಏನೊ; ಅಪ್ಪುದು=ಆಗುವುದು/ನೆರವೇರುವುದು/ಉಂಟಾಗುವುದು; ಏನೊ=ಏನು ತಾನೆ/ಯಾವುದು ತಾನೆ; ಅಪ್ಪುದೇನೊ=ಏನಾಗುತ್ತದೆ/ಏನೊಂದು ಆಗುವುದಿಲ್ಲ;

‘ನುಡಿಯ ಬ್ರಹ್ಮ‘ ಎಂಬುದು ‘ಶಬ್ದಬ್ರಹ್ಮ‘ ಎಂಬ ಪದಕ್ಕೆ ಬದಲಾಗಿ ಬಳಸಿರುವ ಒಂದು ನುಡಿಗಟ್ಟಾಗಿದೆ. ಕೇವಲ ಮಾತುಗಾರಿಕೆಯಿಂದಲೇ/ಓದುಬರಹದ ಪಾಂಡಿತ್ಯದಿಂದಲೇ ಲೋಕವನ್ನು ಗೆಲ್ಲಬಲ್ಲನೆಂಬ/ಎಲ್ಲರನ್ನೂ ಮರುಳುಮಾಡುವನೆಂಬ ವ್ಯಕ್ತಿಗಳನ್ನು ಶಬ್ದಬ್ರಹ್ಮರೆಂದು ಕರೆಯಲಾಗುತ್ತಿತ್ತು; ನುಡಿಯ ಬ್ರಹ್ಮಂಗಳಿಂದಪ್ಪುದೇನೊ=ವ್ಯಕ್ತಿಯು ತನ್ನ ನಿತ್ಯಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡದೆ, ಕೇವಲ ಮಾತಿನ ಜಾಣ್ಮೆಯನ್ನು/ಮಾತಿನ ಚತುರತೆಯನ್ನು/ಓದುಬರಹದ ಪಾಂಡಿತ್ಯವನ್ನು ಹೊಂದಿದ್ದರೆ, ಅಂತಹ ಬದುಕಿನಿಂದ ಯಾವ ಪ್ರಯೋಜನವೂ ಇಲ್ಲವೆಂಬ ಇಂಗಿತವನ್ನು ಈ ಸೊಲ್ಲು ಸೂಚಿಸುತ್ತದೆ.)

 

ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ
ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ
ನುಡಿದಂತೆ ನಡೆವ ನಡೆದಂತೆ ನುಡಿವ
ಸದ್ಭಕ್ತಿ ಸದಾಚಾರಯುಕ್ತರ ಮಹಾತ್ಮರ
ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೆ
ಕಪಿಲಸಿದ್ಧ ಮಲ್ಲಿಕಾರ್ಜುನಾ.

ಒಳ್ಳೆಯ ನಡೆನುಡಿಗಳ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಎಡೆಬಿಡದೆ ಆಡುತ್ತಿರಬಹುದು. ಆದರೆ ಆಡಿದ ನುಡಿಗಳಿಗೆ ತಕ್ಕಂತೆ ವ್ಯಕ್ತಿಯು ತನ್ನ ನಿತ್ಯ ಜೀವನದ ಸಾಮಾಜಿಕ ವ್ಯವಹಾರಗಳಲ್ಲಿ ನಡೆದುಕೊಳ್ಳುವುದು ಬಹು ದೊಡ್ಡ ಸವಾಲಿನ/ಜವಾಬ್ದಾರಿಯ ಕೆಲಸವೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

(ನುಡಿ=ಆಡುವ ಮಾತು; ಅದ್ವೈತ+ಅನ್+ಒಂದು; ಅದ್ವೈತ=ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ, ಅವೆರಡೂ ಒಂದೇ ಎಂಬ ನಿಲುವು; ಅನ್=ಅನ್ನು; ಕೋಟಿ=ಒಂದು ನೂರು ಲಕ್ಶ; ವೇಳೆ=ಸಮಯ/ಕಾಲ; ಒಂದು ಕೋಟಿ ವೇಳೆ=ಲೆಕ್ಕಕ್ಕೆ ಸಿಗದಂತೆ ಅನೇಕ ಬಾರಿ/ಎಣಿಕೆಯನ್ನು ಮಾಡಲಾಗದಶ್ಟು ಸಂಕೆಯಲ್ಲಿ/ನಿರಂತರವಾಗಿ/ಸದಾಕಾಲ; ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ=ಜೀವಾತ್ಮ ಪರಮಾತ್ಮ ಒಂದೇ ಎಂಬ ಸಂಗತಿಯನ್ನು ಕುರಿತು ಇಲ್ಲವೇ ನೀತಿನಿಯಮಗಳನ್ನು ಸಾರುವ ದೊಡ್ಡ ದೊಡ್ಡ ಮಾತುಗಳನ್ನು ಸದಾಕಾಲ ಆಡುತ್ತಿರಬಹುದು/ಕೇಳುಗರ ಮನಸೆಳೆಯುವಂತೆ/ಮನಮೆಚ್ಚುವಂತೆ ಆದರ‍್ಶದ ನುಡಿಗಳನ್ನು ನಿರಂತರವಾಗಿ ಆಡುತ್ತಿರಬಹುದು;

ಒಮ್ಮೆ=ಒಂದು ಸಲ/ಒಂದು ಬಾರಿ; ನಡೆ=ನಡವಳಿಕೆ/ಮಾಡುವ ಕೆಲಸ/ಆಚರಣೆ/ವರ‍್ತನೆ; ನಡೆಯಬಹುದೆ=ಆಚರಿಸಿ ತೋರಿಸಲು ಆಗುತ್ತದೆಯೇ/ಮಾಡಲು ಆಗುತ್ತದೆಯೇ; ನಿರ್ಧರ+ಆಗಿ; ನಿರ್ಧರ=ಗಟ್ಟಿತನ/ಒಂದೇ ಮನಸ್ಸು/ಚಂಚಲತೆಯಿಲ್ಲದಿರುವಿಕೆ; ಸದ್ಭಕ್ತಿ=ಒಳ್ಳೆಯ ನಡೆನುಡಿಯಲ್ಲಿ ದೇವರನ್ನು ಕಾಣುವುದು/ಒಳ್ಳೆಯ ನಡೆನುಡಿಗಳಿಂದ ದೇವರನ್ನು ಒಲಿಸಿಕೊಳ್ಳುವುದು; ಸದಾಚಾರ=ತನ್ನನ್ನು ಒಳಗೊಂಡಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ಕೆಲಸ/ಒಳ್ಳೆಯ ನಡೆನುಡಿ; ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಬಕ್ತಿ ಸದಾಚಾರವ=ವ್ಯಕ್ತಿಯು ಜೀವನದಲ್ಲಿ ಒಳ್ಳೆಯದನ್ನು ಮಾಡುತ್ತಾ ಒಳ್ಳೆಯವನಾಗಿ ಬಾಳಬೇಕಾದರೆ ಸದಾಕಾಲ ತನ್ನ ಮಯ್ ಮನಗಳಲ್ಲಿ ತುಡಿಯುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು, ಕೆಟ್ಟದ್ದನ್ನು ಮಾಡಬಾರದೆಂಬ ಎಚ್ಚರದಿಂದ ಕೂಡಿದವನಾಗಿರಬೇಕು ಎಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ;

ನುಡಿದ+ಅಂತೆ; ನುಡಿದ=ಹೇಳಿದ/ಆಡಿದ ಮಾತು; ಅಂತೆ=ಹಾಗೆ/ರೀತಿ; ನಡೆವ=ಜೀವನದಲ್ಲಿ ಕೆಲಸಗಳನ್ನು ಮಾಡುವ/ಆಚರಿಸುವ/ಬಾಳುತ್ತಿರುವ; ನಡೆದ+ಅಂತೆ; ನುಡಿದಂತೆ ನಡೆವ=ವ್ಯಕ್ತಿಯು ತಾನು ಆಡುವ ಆದರ‍್ಶದ ಮಾತುಗಳಿಗೆ ತಕ್ಕಂತೆ ಒಳ್ಳೆಯತನದ ಕೆಲಸಗಳನ್ನು ಜೀವನದಲ್ಲಿ ಮಾಡುವುದು; ನಡೆದಂತೆ ನುಡಿವ=ಜೀವನದಲ್ಲಿ ತಾನು ಮೊದಲು ಒಳ್ಳೆಯತನದ ಕೆಲಸಗಳನ್ನು ಮಾಡಿ, ಅನಂತರ ಅವನ್ನು ಇತರರಿಗೆ ಮಾಡುವಂತೆ ಹೇಳುವುದು;

ಯುಕ್ತ=ಕೂಡಿದ/ಹೊಂದಿದ/ಪಡೆದ; ಸದ್ಭಕ್ತಿ ಸದಾಚಾರಯುಕ್ತರು=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗಳು; ಮಹಾತ್ಮ=ಜನಸಮುದಾಯದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು/ನುಡಿದಂತೆ ನಡೆದು ಲೋಕಕ್ಕೆ ಒಳಿತನ್ನು ಎಸಗಿದವರು; ಪಾದ=ಕಾಲು/ಚರಣ/ಅಡಿ; ಹಿಡಿ=ಮುಟ್ಟು; ಬದುಕಿಸು+ಅಯ್ಯಾ; ಬದುಕಿಸು=ಉಳಿದು ಬಾಳುವಂತೆ ಮಾಡು; ಪ್ರಭು=ಒಡೆಯ/ಯಜಮಾನ; ಕಪಿಲಸಿದ್ಧ ಮಲ್ಲಿಕಾರ್ಜುನಾ=ಈಶ್ವರ/ಶಿವ; ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೆ ಕಪಿಲಸಿದ್ಧ ಮಲ್ಲಿಕಾರ್ಜುನಾ=ಒಳ್ಳೆಯವರ ಜೀವನದಲ್ಲಿನ ನಡೆನುಡಿಗಳನ್ನು ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಬಾಳುವಂತಹ ಅರಿವು ಮೂಡುವಂತಾಗಲಿ ಎಂಬ ಇಂಗಿತವನ್ನು ಈ ಸೊಲ್ಲು ಸೂಚಿಸುತ್ತಿದೆ.)

 

ವೇಷದಲ್ಲಿ ಭಕ್ತನಾದಡೇನು
ವೇಷದಲ್ಲಿ ಮಹೇಶನಾದಡೇನು
ಗುಣವಿಲ್ಲದನ್ನಕ್ಕರ
ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು
ರುಚಿಯಿಂದಲ್ಲದೆ ರೂಪದಿಂದವೆ
ಕಪಿಲಸಿದ್ಧ ಮಲ್ಲಿಕಾರ್ಜುನಾ.

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ಒಳ್ಳೆಯ ನಡೆನುಡಿಗಳನ್ನು ಹೊಂದಿಲ್ಲದ ವ್ಯಕ್ತಿಯು, ದೇವರಲ್ಲಿ ಒಲವು ಉಳ್ಳವನಂತೆ ಬಗೆಬಗೆಯ ಉಡುಗೆ ತೊಡುಗೆಗಳನ್ನು ತೊಟ್ಟುಕೊಂಡು, ಬಹುಬಗೆಯ ಆಚರಣೆಗಳಲ್ಲಿ ತೊಡಗುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ವೇಷ+ಅಲ್ಲಿ; ವೇಷ=ಉಡುಗೆ/ತೊಡುಗೆ/ಒಡವೆ/ವಸ್ತ್ರ/ಅಲಂಕಾರ ಮಾಡಿಕೊಳ್ಳುವುದು/ಸಿಂಗರಿಸಿಕೊಳ್ಳುವುದು; ಭಕ್ತನ್+ಆದಡೆ+ಏನು; ಭಕ್ತ=ಒಳ್ಳೆಯ ನಡೆನುಡಿಗಳಲ್ಲಿ ದೇವರನ್ನು ಕಾಣುವವನು/ಒಳ್ಳೆಯ ನಡೆನುಡಿಗಳಿಂದ ದೇವರನ್ನು ಒಲಿಸಿಕೊಳ್ಳುವವನು; ಆದಡೆ=ಆದರೆ ; ಏನು=ಯಾವುದು; ವೇಷದಲ್ಲಿ ಭಕ್ತನಾದಡೇನು=ನಿತ್ಯದ ಬದುಕಿನ ಸಾಮಾಜಿಕ ವ್ಯವಹಾರದ ನಡೆನುಡಿಗಳಲ್ಲಿ ಒಳ್ಳೆಯವನಾಗಿ ಬಾಳುತ್ತಿರದೆ, ನೋಡುವವರ ಕಣ್ಣಿಗೆ ದೇವರಲ್ಲಿ ಒಲವುಳ್ಳವನಂತೆ ಹೊರನೋಟಕ್ಕೆ ಕಾಣಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ;

ಮಹೇಶನ್+ಆದಡೆ+ಏನು; ಮಹೇಶ=ಶಿವ/ಈಶ್ವರ; ಗುಣ+ಇಲ್ಲದ+ಅನ್ನಕ್ಕರ; ಗುಣ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿ; ಅನ್ನಕ್ಕರ=ಅಲ್ಲಿಯವರೆಗೆ/ಅಲ್ಲಿಯ ತನಕ; ಗುಣವಿಲ್ಲದನ್ನಕ್ಕರ=ಗುಣವಿಲ್ಲದಿರುವ ತನಕ/ ಒಳ್ಳೆಯ ನಡೆನುಡಿಗಳಿರದಿದ್ದರೆ ಯಾವ ರೀತಿಯಲ್ಲಿ ಕಾಣಿಸಿಕೊಂಡರು ಪ್ರಯೋಜನವಿಲ್ಲ;

ಕ್ಷೀರ=ಹಾಲು; ತಕ್ರ=ಮಜ್ಜಿಗೆ; ಭೇದ+ಏನ್+ಉಂಟು; ಭೇದ=ವ್ಯತ್ಯಾಸ/ಅಂತರ/ಬೇರೆ ಬಗೆ/ರೀತಿ; ಉಂಟು=ಇದೆ; ರುಚಿ+ಇಂದ+ಅಲ್ಲದೆ; ರುಚಿ=ಯಾವುದೇ ಬಗೆಯ ಉಣಿಸುತಿನಸುಗಳನ್ನು ಸೇವಿಸಿದಾಗ ನಾಲಗೆಯ ಮೂಲಕ ಉಂಟಾಗುವ ಸಂವೇದನೆ; ರೂಪ+ಇಂದವೆ; ರೂಪ=ಆಕಾರ/ಹೊರನೋಟಕ್ಕೆ ಕಂಡು ಬರುವ ರೀತಿ/ಬಗೆ; ರುಚಿಯಿಂದಲ್ಲದೆ ರೂಪದಿಂದವೆ=ರುಚಿಯಿಂದ ತಿಳಿದು ಬರುತ್ತದೆಯೇ ಹೊರತು ರೂಪದಿಂದಲ್ಲ;

ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು ರುಚಿಯಿಂದಲ್ಲದೆ ರೂಪದಿಂದವೆ=ಹೊರನೋಟಕ್ಕೆ ಹಾಲು ಮತ್ತು ಮಜ್ಜಿಗೆಯ ಬಣ್ಣ ‘ಬೆಳ್ಳಗೆ ಒಂದೇ ರೀತಿಯಲ್ಲಿ ಕಂಡುಬರುತ್ತದೆ. ಆದರೆ ನಾಲಿಗೆಯಿಂದ ಸವಿದಾಗ, ಅವೆರಡರ ರುಚಿ ಬೇರೆ ಬೇರೆಯಾಗಿರುವುದು ತಿಳಿದುಬರುತ್ತದೆ;

ಯಾವುದೇ ವ್ಯಕ್ತಿಗಳನ್ನು ಅವರು ತೊಟ್ಟಿರುವ ಉಡುಗೆ ತೊಡುಗೆಗಳ ಮೂಲಕ ಒಳ್ಳೆಯವರು/ಕೆಟ್ಟವರು ಎಂದು ಅಳೆಯಬಾರದು. ಅವರು ಮಾಡುವ ಕೆಲಸಗಳ ಮೂಲಕ ಅವರ ವ್ಯಕ್ತಿತ್ವವನ್ನು ತಿಳಿಯಬೇಕೆಂಬ ಅರಿವನ್ನು/ಎಚ್ಚರವನ್ನು ಹಾಲು ಮತ್ತು ಮಜ್ಜಿಗೆಯ ಬಣ್ಣ ಮತ್ತು ರುಚಿಯ ರೂಪಕದ ಮೂಲಕ ಸೂಚಿಸಲಾಗಿದೆ; ಕಪಿಲಸಿದ್ಧ ಮಲ್ಲಿಕಾರ್ಜುನಾ=ಶಿವ/ಈಶ್ವರ; )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Shivanna H R says:

    Ivu pratiyobbaru kaliyabekada jeevanada pata

  2. ಸುಭಾಷ್ ಚಂದ್ರ ಗೋಪಿ ಎ ಜಿ says:

    ಉತ್ತಮ ಲೇಖನ.

    ?ಧನ್ಯವಾದಗಳು ?

ಅನಿಸಿಕೆ ಬರೆಯಿರಿ:

%d bloggers like this: