ಚೆನ್ನಬಸವಣ್ಣನ ವಚನದ ಓದು
– ಸಿ.ಪಿ.ನಾಗರಾಜ.
ಹೆಸರು: ಚೆನ್ನಬಸವಣ್ಣ
ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: 1776
ವಚನಗಳ ಅಂಕಿತನಾಮ: ಕೂಡಲಚೆನ್ನಸಂಗಯ್ಯ / ಕೂಡಲಚೆನ್ನಸಂಗಮದೇವ
==========================================
ನಿಷ್ಠೆಯುಳ್ಳಾತಂಗೆ ನಿತ್ಯ ನೇಮದ ಹಂಗೇಕೆ
ಸತ್ಯವುಳ್ಳಾತಂಗೆ ತತ್ವ ವಿಚಾರದ ಹಂಗೇಕೆ
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ
ಭಾವಶುದ್ಧವುಳ್ಳವಂಗೆ ಹೂವಿನ ಹಂಗೇಕೆ
ಕೂಡಲಚೆನ್ನಸಂಗಯ್ಯಾ
ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ
ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗೆ ದೇವರನ್ನು ಪೂಜಿಸುವ ಇಲ್ಲವೇ ದೇವರ ಇರುವಿಕೆಯ ಬಗೆಗಿನ ಸಂಗತಿಗಳನ್ನು ಮನನ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. “ಒಳ್ಳೆಯ ನಡೆನುಡಿ“ ಎಂದರೆ ಜೀವನದಲ್ಲಿ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಹ ನಡೆನುಡಿಗಳನ್ನು ಹೊಂದಿರುವುದು.
( ನಿಷ್ಠೆ+ಉಳ್ಳ್+ಆತಂಗೆ; ನಿಷ್ಠೆ=ಒಳ್ಳೆಯ ನಡೆನುಡಿಗಳಲ್ಲಿ ಗಟ್ಟಿಯಾದ/ಬಲವಾದ ನಂಬಿಕೆಯನ್ನು ಇಟ್ಟುಕೊಂಡು ಪ್ರಾಮಾಣಿಕತನದಿಂದ ಬಾಳುವುದು; ಉಳ್ಳ್/ಉಳ್=ಇರು/ಹೊಂದು/ಪಡೆ; ಆತಂಗೆ=ಅಂತಹ ವ್ಯಕ್ತಿಗೆ/ಅವನಿಗೆ; ನಿತ್ಯ=ಪ್ರತಿ ದಿನ/ಯಾವಾಗಲೂ ಇರುವ/ನಿರಂತರವಾದ/ದಿನವೂ ಮಾಡುವ; ನೇಮ=ಹೀಗೆಯೇ ಇರಬೇಕು/ಮಾಡಬೇಕು/ನಡೆದುಕೊಳ್ಳಬೇಕು ಎಂಬ ಕಟ್ಟಲೆ/ನಿಯಮ/ಆಚರಣೆ; ನಿತ್ಯನೇಮ=ದೇವರನ್ನು ಒಲಿಸಿಕೊಳ್ಳಲು/ದೇವರ ಕರುಣೆಗೆ ಪಾತ್ರರಾಗಲು ಪ್ರತಿದಿನವೂ ಜಪ/ತಪ/ಪೂಜೆ/ಉಪವಾಸ/ಜಾಗರಣೆ ಮುಂತಾದ ಆಚರಣೆಗಳನ್ನು ಚಾಚೂತಪ್ಪದೆ ನಿರಂತರವಾಗಿ ಮಾಡುತ್ತಿರುವುದು; ಹಂಗು+ಏಕೆ; ಹಂಗು=ಆಶ್ರಯ/ನಂಟು/ಅಗತ್ಯ/ಅವಶ್ಯಕತೆ/ಅವಲಂಬನೆ; ಏಕೆ=ಯಾತಕ್ಕಾಗಿ/ಯಾವುದಕ್ಕಾಗಿ; ಹಂಗೇಕೆ=ಅವಲಂಬಿಸಬೇಕಾದ/ಆಶ್ರಯಿಸಬೇಕಾದ/ಮಾಡಬೇಕಾದ ಅಗತ್ಯವಿಲ್ಲ;
ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ=ಜೀವನದ ವ್ಯವಹಾರಗಳಲ್ಲಿ ಸಹಮಾನವರ ಒಲವು ನಲಿವು ನಂಬಿಕೆಗೆ ಪಾತ್ರನಾಗಿ ಪ್ರಾಮಾಣಿಕತನದ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ ಯಾವುದೇ ಬಗೆಯ ಜಪ ತಪ ಪೂಜೆಗಳ ಮೂಲಕ ದೇವರನ್ನು ಪೂಜಿಸಬೇಕಾದ ಅಗತ್ಯವಿಲ್ಲ;
ಸತ್ಯ+ಉಳ್ಳ್+ಆತಂಗೆ; ಸತ್ಯ=ದಿಟ/ನಿಜ/ವಾಸ್ತವ; ತತ್ವ=ನಿಯಮ/ಸೂತ್ರ/ದೇವರ ಇರುವಿಕೆಯ ರೀತಿಯನ್ನು ಕುರಿತ ಚಿಂತನೆ/ಕಲ್ಪನೆ/ಸಂಗತಿ; ವಿಚಾರ=ಯಾವುದು ಸರಿ-ಯಾವುದು ತಪ್ಪು / ಯಾವುದು ನಿಜ/ಯಾವುದು ಸಟೆ / ಯಾವುದು ಕಲ್ಪಿತ-ಯಾವುದು ವಾಸ್ತವ ಎಂಬುದನ್ನು ಕುರಿತು ಮಾಡುವ ಆಲೋಚನೆ/ವಿವೇಚನೆ/ವಿವೇಕ;
ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ=ದಿನನಿತ್ಯದ ಜೀವನದಲ್ಲಿ ಕೆಟ್ಟದ್ದನ್ನು/ಸುಳ್ಳನ್ನು/ಕಪಟತನದ ನಡೆನುಡಿಗಳನ್ನು ಬಿಟ್ಟು, ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಚೆನ್ನಾಗಿ ಅರಿತುಕೊಂಡು ಒಳ್ಳೆಯತನದಿಂದ ಬಾಳುತ್ತಿರುವ ವ್ಯಕ್ತಿಗೆ ದೇವರ ಬಗ್ಗೆ ಕೇವಲ ಮಾತಿನ ಆಡಂಬರಕ್ಕಾಗಿ ಮಾಡುವ ತರ‍್ಕ ಇಲ್ಲವೇ ಒಣಚರ‍್ಚೆಗಳ ಅಗತ್ಯವಿರುವುದಿಲ್ಲ. ಏಕೆಂದರೆ ಜನಸಮುದಾಯಕ್ಕೆ ಒಳಿತನ್ನು ಮಾಡುವ ವ್ಯಕ್ತಿಯ ನಡೆನುಡಿಗಳು ದೇವರ ವಿಚಾರಕ್ಕಿಂತಲೂ ದೊಡ್ಡದಾಗಿರುತ್ತವೆ;
ಅರಿವು+ಉಳ್ಳ್+ಆತಂಗೆ; ಅರಿವು=ತಿಳಿವಳಿಕೆ/ವಿವೇಕ/ಎಚ್ಚರ; ಅಗ್ಘವಣಿ=ದೇವರ ವಿಗ್ರಹದ ಮೇಲೆ ಸುರಿಯುವ/ಹಾಕುವ ನೀರು. ದೇವರನ್ನು ಪೂಜಿಸುವಾಗ ನಿತ್ಯವೂ ವಿಗ್ರಹದ ಮೇಲೆ ನೀರನ್ನು ಎರೆದು ಮಾಡುವ ಒಂದು ಬಗೆಯ ಆಚರಣೆ;
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ=ಜೀವನದಲ್ಲಿ ಇತರರಿಗೆ ಒಳಿತನ್ನು ಮಾಡಬೇಕೆ ಹೊರತು ಯಾವುದೇ ಬಗೆಯಿಂದಲೂ ಕೆಡುಕನ್ನು ಮಾಡಬಾರದು ಎಂಬ ಎಚ್ಚರದಿಂದ ಬಾಳುವ ವ್ಯಕ್ತಿಯ ಪಾಲಿಗೆ ಅರಿವಿನ ನಡೆನುಡಿಯೇ ದೇವರಿಗೆ ಮಾಡುವ ಮಜ್ಜನವಾಗಿರುತ್ತದೆ(ಮಜ್ಜನ=ಸ್ನಾನ/ನೀರನ್ನು ಎರೆಯುವುದು);
ಮನ+ಶುದ್ಧ+ಉಳ್ಳ್+ಅವಂಗೆ; ಮನ=ಮನಸ್ಸು/ಚಿತ್ತ; ಶುದ್ಧ=ಶುಚಿಯಾಗಿರುವುದು/ಮಡಿಯಾಗಿರುವುದು/ಚೊಕ್ಕಟವಾಗಿರುವುದು; ಮನಶುದ್ಧವುಳ್ಳವನು=ಮನದಲ್ಲಿ ಮೂಡುವಂತಹ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ , ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಮಾತ್ರ ಕಯ್ಗೊಂಡು , ತನ್ನ ಮನಸ್ಸನ್ನು ಸದಾ ಕಾಲ ಹತೋಟಿಯಲ್ಲಿಟ್ಟುಕೊಂಡು ಬಾಳುತ್ತಿರುವವನು; ಮಂತ್ರ=ದೇವತೆಗಳನ್ನು ಒಲಿಸಿಕೊಳ್ಳುವುದಕ್ಕಾಗಿ ಇಲ್ಲವೇ ದೇವತೆಗಳ ಕರುಣೆಗೆ ಪಾತ್ರರಾಗುವುದಕ್ಕಾಗಿ, ಅವರ ಶಕ್ತಿ ಮತ್ತು ಪವಾಡಗಳನ್ನು ಹೊಗಳಿ ಕೊಂಡಾಡುವಂತಹ ನುಡಿ/ಶ್ಲೋಕ/ಸ್ತುತಿ;
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ=ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ರೀತಿಯಲ್ಲಿ ಬಾಳುತ್ತಿರುವ ವ್ಯಕ್ತಿಗೆ ಯಾವುದೇ ದೇವರನ್ನು/ದೇವತೆಯನ್ನು ಗುಣಗಾನ ಮಾಡಬೇಕಾದ ಅಗತ್ಯವಿರುವುದಿಲ್ಲ;
ಭಾವ+ಶುದ್ಧ+ಉಳ್ಳ್+ಅವಂಗೆ; ಭಾವ=ಮನದಲ್ಲಿ ಮೂಡುವ ಒಳಮಿಡಿತ/ಸಂವೇದನೆ/ಚಿಂತನೆ/ಆಲೋಚನೆ; ಭಾವಶುದ್ಧ=ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಹಂಬಲ/ಆಲೋಚನೆ/ಚಿಂತನೆಗಳಿಂದ ಕೂಡಿರುವುದು; ಹೂವು=ಕುಸುಮ/ಅರಳು;
ಭಾವಶುದ್ಧವುಳ್ಳವಂಗೆ ಹೂವಿನ ಹಂಗೇಕೆ=ಒಳ್ಳೆಯ ಮನಸ್ಸಿನಿಂದ ಕೂಡಿ ಎಲ್ಲರಿಗೂ ಒಳಿತನ್ನು ಮಾಡುವಂತಹ ವ್ಯಕ್ತಿಯು ದೇವರಿಗೆ ಹೂವನ್ನು ಮುಡಿಸಿ ಪೂಜಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಅವನ ಒಳ್ಳೆಯತನದಿಂದ ಕೂಡಿದ ಮನಸ್ಸೇ ದೇವರಿಗೆ ನಿತ್ಯವೂ ನೀಡುವ ಹೂವಾಗಿರುತ್ತದೆ;
ಕೂಡಲಚೆನ್ನಸಂಗ+ಅಯ್ಯ; ಕೂಡಲು=ಎರಡು ನದಿ/ಹೊಳೆ/ತೊರೆಗಳು ಜತೆಗೂಡುವ ಜಾಗ/ನೆಲೆ; ಚೆನ್ನ=ಸುಂದರ/ಸೊಗಸು/ಚೆಲುವು; ಸಂಗ=ಶಿವ/ಈಶ್ವರ; ಅಯ್ಯ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ; ಕೂಡಲಚೆನ್ನಸಂಗಯ್ಯ=ಎರಡು ನದಿಗಳು ಜತೆಗೂಡುವ ನೆಲೆಯಲ್ಲಿರುವ ಶಿವಲಿಂಗ/ಈಶ್ವರ;
ನಿಮ್ಮನ್+ಅರಿದ+ಆತಂಗೆ; ನಿಮ್ಮನ್=ದೇವರನ್ನು/ಶಿವನನ್ನು/ಕೂಡಲಚೆನ್ನಸಂಗಯ್ಯನನ್ನು; ಅರಿದ=ತಿಳಿದ;ಅರಿದಾತಂಗೆ=ತಿಳಿದವನಿಗೆ; ನಿಮ್ಮ=ದೇವರ/ಶಿವನ/ಕೂಡಲಚೆನ್ನಸಂಗಯ್ಯನ;
ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ=ಶಿವಶರಣಶರಣೆಯರ ಪಾಲಿಗೆ ದೇವರು ಇಲ್ಲವೇ ಶಿವನು ಮರ/ಮಣ್ಣು/ಕಲ್ಲಿನ ವಿಗ್ರಹದ ರೂಪದಲ್ಲಿರಲಿಲ್ಲ. ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನೇ ಅವರು ದೇವರೆಂದು ತಿಳಿದಿದ್ದರು/ಅರಿತಿದ್ದರು/ನಂಬಿದ್ದರು. ಆದುದರಿಂದಲೇ ದೇವರನ್ನು ಪೂಜಿಸುವ ಬಹುಬಗೆಯ ಆಚರಣೆಗಳು ಮಾನವನ ಒಳ್ಳೆಯ ಬದುಕಿಗೆ ಅಗತ್ಯವಾದ/ಪೂರಕವಾದ ಸಂಗತಿಗಳಾಗಿ ಅವರಿಗೆ ಕಂಡುಬರಲಿಲ್ಲ.
ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗೆ ದೇವರ ಒಲುಮೆ ಇಲ್ಲವೇ ಕರುಣೆಯ ಹಂಗಿಲ್ಲ/ಅಗತ್ಯವಿಲ್ಲ ಎನ್ನುವ ದಿಟ್ಟತನದ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು)
( ಚಿತ್ರ ಸೆಲೆ: lingayatreligion.com )
ಸಕತ್ ವಿವರಣೆ
ಅತ್ಯುತ್ತಮ ವಿವರಣೆ