ರೆಕ್ಕೆಯೊಂದಿದ್ದರೆ ಸಾಕೇ..?

– ವೆಂಕಟೇಶ ಚಾಗಿ.

ಕನಸು, Dream

ರಮೇಶ ನನ್ನ ಸ್ನೇಹಿತ‌. ಅವನೊಬ್ಬ ಕನಸುಗಾರ. ತನ್ನ ಬದುಕಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡವನು. ತನ್ನ ಬವಿಶ್ಯದಲ್ಲಿ ತಾನು ಹಾಗೂ ತನ್ನ ಕುಟುಂಬ ಹೇಗೆಲ್ಲಾ ಇರಬೇಕು ಎಂಬುದರ ಕಲ್ಪನಾ ಲೋಕದಲ್ಲಿ ವಿಹರಿಸುವಂತವನು. ತನ್ನ ಕನಸುಗಳನ್ನು ತನ್ನ ಸ್ನೇಹಿತರ ಬಳಿ ಆಗಾಗ ಹೇಳಿಕೊಳ್ಳದೇ ಅವನಿಗೆ ಸಮಾದಾನವಾಗದಿರದು. ಆದರೆ ಅವನು ಕಂಡಂತಹ ಕನಸುಗಳನ್ನು ನನಸಾಗಿಸುವಲ್ಲಿ ವಿಪಲವಾಗಿದ್ದೇ ಹೆಚ್ಚು. ಹೀಗಾದಾಗ ಹತಾಶನಾಗಿ ಮಾನಸಿಕ ಸ್ತೈರ‍್ಯ ಕಳೆದುಕೊಂಡು ಸ್ನೇಹಿತರ ಮುಂದೆ ಅಳುವಂತಹ ಪರಿಸ್ತಿತಿ ಅವನದು.

ಕನಸು ಕಾಣುವುದು ತಪ್ಪೇ?

ಅರೇ, ಕನಸು ಕಾಣುವುದು ತಪ್ಪೇ? ಹಕ್ಕಿಗೆ ರಕ್ಕೆ ಇದ್ದ ಮೇಲೆ ಹಾರುವುದು ತಪ್ಪೇ? ಎನ್ನುವುದು ಸಾರ‍್ವತ್ರಿಕ ಪ್ರಶ್ನೆ. ರಮೇಶನ ಹಾಗೇ ನಾವೂ ಕೂಡಾ ಹಲವಾರು ಕನಸುಗಳನ್ನು ಕಾಣುತ್ತೇವೆ. ನನ್ನ ಜೀವನ ಹೀಗೆ ಇರಬೇಕು ಎಂಬುದನ್ನು ಬಯಸುತ್ತೇವೆ. ಅದಕ್ಕಾಗಿ ಕಶ್ಟ ಪಡುತ್ತೇವೆ. ಆದರೆ ನಾವು ಕಂಡ ಕನಸು, ಬಯಕೆಗಳು ಈಡೇರದೇ ಇದ್ದಾಗ ದುಕ್ಕಿತರಾಗುತ್ತೇವೆ. ಇಶ್ಟು ದಿನ ನಾವು ಕಶ್ಟ ಪಟ್ಟಿದ್ದು ಬೆವರು ಹರಿಸಿದ್ದು ಎಲ್ಲಾ ವ್ಯರ‍್ತವಾಯಿತಲ್ಲ ಎಂದು ಮರುಗುತ್ತೇವೆ. ಎಲ್ಲರದೂ ಇದೇ ಸ್ತಿತಿ ಅಲ್ಲವೇ.

ಇದಕ್ಕೆಲ್ಲಾ ಕಾರಣ ತಂಬಾ ಸಿಂಪಲ್. ಶಸ್ತ್ರಾಸ್ತ್ರ ಗಳಿಲ್ಲದೇ, ಸಾಮರ‍್ತ್ಯವಿಲ್ಲದೇ ಯುದ್ದಕ್ಕಿಳಿಯುವುದು. ಹಾಸಿಗೆ ಇದ್ದಶ್ಟು ಕಾಲು ಚಾಚಬೇಕು ಅಂತಾರಲ್ಲ ಹಾಗೇ. ಕನಸು ಕಾಣುವುದು ತಪ್ಪಲ್ಲ. ಅದು ತುಂಬಾ ಸುಲಬ. ಆದರೆ ಆ ಕನಸನ್ನು ನನಸು ಮಾಡುವುದು ಇದೆಯಲ್ಲಾ ಅದು ತುಂಬಾ ಕಟಿಣ. ನಾನು ಪ್ರದಾನ ಮಂತ್ರಿ ಆಗಬೇಕು ಎನ್ನುವ ಕನಸಿದೆ ಎಂದುಕೊಂಡರೆ ನಾಳೆಯೇ ಪ್ರದಾನ ಮಂತ್ರಿಯಾಗಲು ಸಾದ್ಯವೇ. ಅಕಸ್ಮಾತ್ ಆದರೆ, ಅದು ಚಮತ್ಕಾರವೇ ಸರಿ!

ಕನಸನ್ನು ನನಸು ಮಾಡುವ ಸಾಮರ‍್ತ್ಯ ಬೆಳೆಸಿಕೊಳ್ಳಬೇಕು

ಕೆಎಎಸ್ ಅತವಾ ಐಎಎಸ್ ಪರೀಕ್ಶೆಯಲ್ಲಿ ಪಸ್ಟ್ ರ‍್ಯಾಂಕ್ ಪಡೆಯಬೇಕೆನ್ನುವ ಕನಸೇನೋ ಸರಿ. ಅದಕ್ಕೆ ತಕ್ಕ ಹಾಗೆ ಅಬ್ಯಾಸ ಮಾಡದಿದ್ದರೆ!?. ಕನಸಿಗೆ ತಕ್ಕಂತಹ ಸಾಮರ‍್ತ್ಯವನ್ನು ನಾವು ಬೆಳೆಸಿಕೊಳ್ಳುವುದು ನಮ್ಮ ಮೊದಲ ಕರ‍್ತವ್ಯ. ಅದಕ್ಕೂ ಮೊದಲು ದ್ರುಡ ನಿರ‍್ದಾರ, ದ್ರುಡ ಸಂಕಲ್ಪ ಅತೀ ಮುಕ್ಯ. ಗುರಿಗೆ ತಕ್ಕ ಹಾಗೆ ಶ್ರಮ ಪಡಬೇಕಾಗುತ್ತದೆ. ನೋವುಗಳನ್ನು ಅನುಬವಿಸಬೇಕಾಗುತ್ತದೆ. ಕೊನೆಗೆ ನಾವು ಕಂಡ ಕನಸು ನನಸಾಗುತ್ತದೆ. ಆಗ ಅದರಿಂದ ಸಿಗುವ ಕುಶಿಯೋ ಅದ್ಬುತ. ಇದೇ ಸಿಂಪಲ್ ಲಾಜಿಕ್. ನಿಮ್ಮಿಂದ ಅದು ಸಾದ್ಯವಿಲ್ಲವಾದರೆ ಮನಸ್ಸಿಂದ ತೆಗೆದು ಮನಸ್ಸನ್ನು ಹಗುರವಾಗಿಸಿ. ಮನಸ್ಸಲ್ಲೇ ಇಟ್ಟುಕೊಂಡು ಕೊರಗಬೇಡಿ. ಆಗ ಜೀವನ ಸುಂದರವಾಗಿ ಕಾಣುತ್ತದೆ. ಅದಕ್ಕೆ ಹೇಳುವುದು “ರೆಕ್ಕೆಯೊಂದಿದ್ದರೆ ಸಾಕೇ, ಹಕ್ಕಿಗೆ ಬೇಕು ಬಾನು” ಎಂದು.

(ಚಿತ್ರಸೆಲೆ: marcandangel.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *