ಅಂಗಸೋಂಕಿನ ಲಿಂಗತಂದೆಯ ವಚನದ ಓದು
– ಸಿ.ಪಿ.ನಾಗರಾಜ.
ಹೆಸರು: ಅಂಗಸೋಂಕಿನ ಲಿಂಗತಂದೆ
ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: ಹನ್ನೊಂದು
ಅಂಕಿತನಾಮ: ಭೋಗಬಂಕೇಶ್ವರ ಲಿಂಗ
========================================================================
ಮರದೊಳಗಣ ಬೆಂಕಿ
ತನ್ನ ತಾನೇ ಉರಿಯಬಲ್ಲುದೆಶಿಲೆಯೊಳಗಣ ದೀಪ್ತಿ
ಆ ಬೆಳಗ ತನ್ನ ತಾನೇ ಬೆಳಗಬಲ್ಲುದೆಆ ತೆರನಂತೆ ಕುಟಿಲನ ಭಕ್ತಿ ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟ ಹುಸಿಯ ಕಾಣಬಾರದುಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದುಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ ವಿರಕ್ತಿತೂತಕುಂಭದಲ್ಲಿಯ ನೀರು
ಸೂತ್ರ ತಪ್ಪಿದ ಬೊಂಬೆ
ನಿಜನೇತ್ರ ತಪ್ಪಿದ ದೃಷ್ಟಿಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು
ಭೋಗಬಂಕೇಶ್ವರನ ಸಂಗದ ಶರಣನ ಸುಖ.
ವ್ಯಕ್ತಿಯು ಒಳ್ಳೆಯವನು ಇಲ್ಲವೇ ಕೆಟ್ಟವನು ಎಂಬುದನ್ನು ಅವನ ಮಯ್ಯಿನ ಅಂದಚೆಂದ/ಅವನು ತೊಟ್ಟಿರುವ ಉಡುಗೆ-ತೊಡುಗೆ/ಅವನು ಆಡುವ ಬಣ್ಣಬಣ್ಣದ ಮಾತು/ಅವನು ಏರಿ ಕುಳಿತಿರುವ ಗದ್ದುಗೆ/ಅವನು ಹೊಂದಿರುವ ಸಂಪತ್ತಿನಿಂದ ತೀರ‍್ಮಾನಿಸದೆ/ಬೆಲೆ ಕಟ್ಟದೆ/ನಿರ‍್ಣಯಿಸದೆ, ಅವನು ಮಾಡುತ್ತಿರುವ ಒಳ್ಳೆಯ/ಕೆಟ್ಟ ಕೆಲಸಗಳನ್ನು ಒರೆಹಚ್ಚಿ ನೋಡುವುದರ ಮೂಲಕ ಅವನ ವ್ಯಕ್ತಿತ್ವದಲ್ಲಿನ ಒಳ್ಳೆಯತನ/ಕೆಟ್ಟತನವನ್ನು ಗುರುತಿಸಬೇಕು/ತಿಳಿದುಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಈ ವಚನದಲ್ಲಿ ನೀಡಲಾಗಿದೆ.
‘ಒಳ್ಳೆಯ ಕೆಲಸ’ ಎಂದರೆ ವ್ಯಕ್ತಿಯು ಮಾಡುವ ಕೆಲಸವು ಆತನಿಗೆ ಒಳಿತನ್ನು ಉಂಟುಮಾಡುವುದರ ಜತೆಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು. ‘ಕೆಟ್ಟ ಕೆಲಸ’ ಎಂದರೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡು/ಹಾನಿ/ಆಪತ್ತನ್ನು ಉಂಟುಮಾಡುವುದು.
( ಮರ+ಒಳಗಣ; ಮರ=ಕೊಂಬೆರೆಂಬೆಗಳು ಅಗಲವಾಗಿ ಟಿಸಿಲೊಡೆದು ಹರಡಿಕೊಂಡು ಎತ್ತರವಾಗಿ ಬೆಳೆದು ನಿಂತಿರುವ ತರು/ಸಸ್ಯ ; ಒಳಗಣ=ಒಳಗಿರುವ ; ಬೆಂಕಿ=ಉರಿ/ಕಿಚ್ಚು/ಅಗ್ನಿ ; ತನ್ನ=ತನ್ನಲ್ಲಿರುವ/ತನಗೆ ಸೇರಿದ; ತಾನ್+ಏ; ತಾನ್=ತನ್ನದೇ ಆದುದು/ಆಗಿರುವುದು ; ತಾನೇ=ತಾನಾಗಿಯೇ ; ಉರಿಯ+ಬಲ್ಲುದೆ; ಉರಿ=ಕಿಚ್ಚು/ಬೆಂಕಿ/ಅಗ್ನಿ ; ಉರಿಯ=ಉರಿಯಲು/ಹತ್ತಿಕೊಂಡು ದಗದಗನೆ ಬೇಯಲು/ಜ್ವಲಿಸಲು; ಬಲ್ಲ=ತಿಳಿದ/ಅರಿತ/ಕಸುವುಳ್ಳ/ಶಕ್ತಿಯುಳ್ಳ ; ಬಲ್ಲುದೆ=ತಿಳಿದಿದೆಯೇ/ಅರಿತಿದೆಯೇ/ಕಸುವನ್ನು ಹೊಂದಿದೆಯೇ ; ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ=ಬೆಂಕಿ ಬಿದ್ದಾಗ/ತಗುಲಿದಾಗ/ಆವರಿಸಿಕೊಂಡಾಗ ಮಾತ್ರ ಹತ್ತಿಕೊಂಡು ಉರಿಯಬಲ್ಲ ಗುಣ/ಶಕ್ತಿ/ಕಸುವು ಮರದಲ್ಲಿದೆ. ಆದರೆ ಬೆಂಕಿಯ ಸಂಪರ‍್ಕವಿಲ್ಲದೆ ಮರ ತನಗೆ ತಾನೇ ಉರಿಯಲಾರದು.
ಶಿಲೆ+ಒಳಗಣ; ಶಿಲೆ=ಕಲ್ಲು/ಅರೆ/ಬಂಡೆ; ದೀಪ್ತಿ=ಕಾಂತಿ/ಕಿರಣ/ಪ್ರಕಾಶ/ಬೆಳಕು/ರಶ್ಮಿ/ಕದಿರು/ಬೆಂಕಿಯ ಕಿಡಿ; ಆ=ಅಂತಹ/ರೀತಿಯ/ಬಗೆಯ; ಬೆಳಗು+ಅ; ಬೆಳಗು=ಕಾಂತಿ/ಹೊಳಪು/ಪ್ರಕಾಶ/ಕಿರಣ; ಬೆಳಗ=ಕಾಂತಿಯನ್ನು/ಹೊಳಪನ್ನು/ಪ್ರಕಾಶವನ್ನು ; ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೇ ಬೆಳಗಬಲ್ಲುದೆ=ಒಂದು ಕಲ್ಲಿಗೆ ಮತ್ತೊಂದು ಕಲ್ಲು ಜೋರಾಗಿ ಬಡಿದಾಗ/ಡಿಕ್ಕಿ ಹೊಡೆದಾಗ ಬೆಂಕಿಯ ಕಿಡಿ/ಬೆಳಕಿನ ಕಿರಣ ಹೊರಹೊಮ್ಮುತ್ತದೆ. ಆದರೆ ಒಂದು ಕಲ್ಲು ತನಗೆ ತಾನಾಗಿಯೇ ಬೆಂಕಿಯ ಕಿಡಿಯನ್ನಾಗಲಿ ಇಲ್ಲವೇ ಬೆಳಕಿನ ಕಿರಣವನ್ನಾಗಲೀ ಹೊರಸೂಸಲಾರದು;
ತೆರ+ಅಂತೆ; ತೆರ=ರೀತಿ/ಕ್ರಮ/ಬಗೆ; ಅಂತೆ=ಹಾಗೆ/ಆ ರೀತಿಯಲ್ಲಿ/ ಆ ಬಗೆಯಲ್ಲಿ; ಕುಟಿಲ=ಮೋಸಗಾರ/ಕಪಟಿ/ವಂಚಕ/ಕುತಂತ್ರಿ; ಭಕ್ತಿ=ದೇವರನ್ನು ಒಲಿಸಿಕೊಳ್ಳಲು/ದೇವರ ಕರುಣೆಗೆ ಪಾತ್ರರಾಗಲು ವ್ಯಕ್ತಿಯು ಮಾಡುವ ಬಹುಬಗೆಯ ಜಪ ತಪ ಪೂಜೆಯ ಆಚರಣೆಗಳು; ಕುಟಿಲನ ಭಕ್ತಿ=ನಯಗಾರಿಕೆಯ ನಡೆನುಡಿಗಳಿಂದ ಜನರನ್ನು ವಂಚಿಸಲೆಂದು ದೇವರಲ್ಲಿ ಒಲವು ಉಳ್ಳವನಂತೆ/ದೇವರನ್ನೇ ನಂಬಿ ನಡೆಯುವವನಂತೆ ಮಾಡುವ ನಾಟಕ/ಅಂತರಂಗದ ಮನದಲ್ಲಿ ಜನರನ್ನು ವಂಚಿಸುವ ಒಳಮಿಡಿತಗಳನ್ನು ಹೊಂದಿ, ಬಹಿರಂಗದಲ್ಲಿ ಒಳ್ಳೆಯತನದ ಮಾತುಕತೆಗಳನ್ನು ಆಡುತ್ತಾ ,ದೇವರಲ್ಲಿ ಅಪಾರವಾದ ಒಲವು ಉಳ್ಳವನಂತೆ ನಡೆದುಕೊಳ್ಳುವುದು;
ಕಿಸಕುಳ=ನೀಚ/ಕೊಳಕ/ಕೆಟ್ಟ ನಡೆನುಡಿಯುಳ್ಳವನು; ವಿರಕ್ತಿ=ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವಂತಹ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು , ಒಳ್ಳೆಯದನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು, ತನ್ನನ್ನು ಒಳಗೊಂಡಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿ; ಕಿಸುಕುಳನ ವಿರಕ್ತಿ=ಬಹಿರಂಗದಲ್ಲಿ ಒಳ್ಳೆಯ ವ್ಯಕ್ತಿಯಂತೆ ತೋರಿಸಿಕೊಳ್ಳುತ್ತಾ, ಅಂತರಂಗದ ಮನದಲ್ಲಿ ಕೆಟ್ಟ ಒಳಮಿಡಿತಗಳಿಂದ ಕೂಡಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟುವಂತಹ ಉದ್ದೇಶವನ್ನು ಹೊಂದಿರುವುದು;
ಮಥನಿಸಿ+ಅಲ್ಲದೆ; ಮಥನ=ಮಸೆ/ಉಜ್ಜು/ತಾಕು/ಕಡೆಯುವಿಕೆ; ಮಥನಿಸು=ಕಡೆಯುವುದು/ಉಜ್ಜುವುದು/ನಿರಂತರವಾಗಿ ಅತ್ತಿತ್ತ ಮಸೆಯುತ್ತಿರುವುದು; ಅಲ್ಲದೆ=ಹಾಗೆ ಮಾಡದೆ/ಆ ರೀತಿ ಮಾಡದಿದ್ದರೆ; ದಿಟ=ನಿಜ/ಸತ್ಯ/ವಾಸ್ತವ ; ಹುಸಿ=ಸುಳ್ಳು/ಸಟೆ/ನಿಜವಲ್ಲದ್ದು; ಕಾಣ+ಬಾರದು; ಕಾಣ್+ಅ; ಕಾಣ್=ನೋಡು/ತಿಳಿ/ಅರಿ ; ಕಾಣ=ಕಾಣಲು/ತಿಳಿಯಲು/ಅರಿಯಲು ; ಬಾರದು=ಆಗುವುದಿಲ್ಲ;
ಆ ತೆರನಂತೆ ಕುಟಿಲನ ಭಕ್ತಿ ಕಿಸಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟ ಹುಸಿಯ ಕಾಣಬಾರದು=ಯಾವ ರೀತಿ ಮರಕ್ಕೆ ಬೆಂಕಿ ಬಿದ್ದಾಗ ಹತ್ತಿಕೊಂಡು ಉರಿಯುತ್ತದೆಯೋ/ಒಂದು ಕಲ್ಲಿಗೆ ಮತ್ತೊಂದು ಕಲ್ಲು ಜೋರಾಗಿ ಬಡಿದಾಗ ಕಿಡಿಯು ಹೊರಹೊಮ್ಮುತ್ತದೆಯೋ ಅಂತೆಯೇ ಕುಟಿಲನಿಗೆ/ಕಿಸಕುಳನಿಗೆ ಹೊಣೆಗಾರಿಕೆಯುಳ್ಳ ಹುದ್ದೆ/ಕೆಲಸ ದೊರೆತಾಗ, ಅವನು ಅದನ್ನು ದುರುಪಯೋಗಪಡಿಸಿಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಮಾಡುವ ನೀಚತನ/ವಂಚನೆ/ದ್ರೋಹ/ಕ್ರೂರತನದ ನಡೆನುಡಿಗಳಿಂದ ಅವನ ನಿಜವಾದ ವ್ಯಕ್ತಿತ್ವ ಏನೆಂಬುದು ತಿಳಿದುಬರುತ್ತದೆ;
ಸತ್ಯ=ನಿಜ/ದಿಟ/ವಾಸ್ತವ; ಅಸತ್ಯ=ನಿಜವಲ್ಲದ್ದು/ದಿಟವಲ್ಲದ್ದು/ವಾಸ್ತವವಲ್ಲದ್ದು ; ಪ್ರತ್ಯಕ್ಷ=ಕಣ್ಣಿಗೆ ಕಾಣುವುದು/ಗೋಚರಿಸುವುದು/ತಿಳಿದುಬರುವುದು/ನೇರವಾಗಿ ನೋಡಿ ಅರಿಯುವುದು; ಪ್ರಮಾಣಿಸಿದ+ಅಲ್ಲದೆ; ಪ್ರಮಾಣ=ಯಾವುದೇ ಸಂಗತಿಯನ್ನು ಕಾರ‍್ಯ ಕಾರಣದ ಹಿನ್ನೆಲೆಯಲ್ಲಿ ಒರೆಹಚ್ಚಿ ನೋಡಿ ತಿಳಿಯುವುದು/ಯಾವಾಗ-ಎಲ್ಲಿ-ಯಾರಿಂದ-ಯಾವುದರಿಂದ-ಏಕೆ-ಹೇಗೆ ಉಂಟಾಯಿತು ಎಂಬುದೆಲ್ಲವನ್ನೂ ವಾಸ್ತವದ ನೆಲೆಯಲ್ಲಿ ವಿವೇಚಿಸಿ ತಿಳಿಯುವುದು;
ನಿಶ್ಚಯ+ಅನ್+ಅರಿಯ+ಬಾರದು; ನಿಶ್ಚಯ=ಸರಿಯಾದ ನಿಲುವು/ಅಚಲವಾದ ತೀರ‍್ಮಾನ; ಅನ್=ಅನ್ನು ; ಅರಿ=ತಿಳಿ/ಕಲಿ/ಗೊತ್ತುಪಡಿಸಿಕೊಳ್ಳುವುದು ; ಅರಿಯ=ತಿಳಿಯಲು/ಗೊತ್ತುಪಡಿಸಿಕೊಳ್ಳಲು; ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು=ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ ಎಂಬುದನ್ನು ನಾವೇ ಒರೆಹಚ್ಚಿ ನೋಡಿ ತಿಳಿದುಕೊಂಡು, ನಿರ‍್ಣಯವನ್ನು/ನಿಲುವನ್ನು/ತೀರ‍್ಮಾನವನ್ನು ಕಯ್ಗೊಳ್ಳಬೇಕು. ಇತರರ ಹೇಳಿಕೆಗಳನ್ನು ಕುರುಡಾಗಿ ನಂಬಬಾರದು/ಇತರರ ನಂಬಿಕೆಗಳಿಗೆ ಮರುಳಾಗಬಾರದು/ಬಲಿಯಾಗಬಾರದು;
ಗುರು+ಆದಡೂ; ಗುರು=ವಿದ್ಯೆಯನ್ನು ಹೇಳಿಕೊಡುವವನು/ಗುಡ್ಡ(ಶಿಶ್ಯ)ನಲ್ಲಿ ಅರಿವನ್ನು ಮೂಡಿಸಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವವನು/ಓಜ; ಆದಡೂ=ಆದರೂ; ಲಿಂಗ+ಆದಡೂ; ಲಿಂಗ=ಈಶ್ವರ/ಶಿವ/ದೇವರು/ಒಳ್ಳೆಯ ನಡೆನುಡಿಗಳಿಂದ ಬಾಳುವುದನ್ನು ಲಿಂಗದ ಸಂಕೇತವಾಗಿ ಶಿವಶರಣಶರಣೆಯರು ಪರಿಗಣಿಸಿದ್ದರು; ಜಂಗಮ+ಆದಡೂ; ಜಂಗಮ=ವ್ಯಕ್ತಿಗೆ/ಸಹಮಾನವರಿಗೆ/ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ಜನರಿಗೆ ತಿಳಿಯ ಹೇಳುತ್ತಾ , ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರವಾಗಿ ಸಂಚರಿಸುತ್ತಿರುವ ಶಿವಶರಣ;
ಪರೀಕ್ಷೆ=ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಒರೆಹಚ್ಚಿ ನೋಡುವುದು/ಅರಿಯುವುದು/ಗೊತ್ತುಮಾಡುವುದು; ಹಿಡಿಯದ+ಅವನ; ಹಿಡಿ=ಹೊಂದು/ತಾಳು/ಪಡೆ/ತಳೆ/ಗ್ರಹಿಸು; ಅವನ=ಅಂತಹ ವ್ಯಕ್ತಿಯ; ಹಿಡಿಯದವನ=ಗ್ರಹಿಸಿಕೊಳ್ಳದವನ/ತಿಳಿಯದಿರುವವನ/ಹೊಂದದಿರುವವನ; ತೂತ+ಕುಂಭ+ಅಲ್ಲಿಯ; ತೂತು+ಅ; ತೂತು=ಕಂಡಿ/ಬಿಲ/ರಂದ್ರ/ಬಿರುಕು; ತೂತ=ತೂತಾಗಿರುವ/ತೂತು ಬಿದ್ದಿರುವ/ಕಂಡಿ ಬಿಟ್ಟಿರುವ/ಬಿರುಕು ಬಿಟ್ಟಿರುವ; ಕುಂಭ=ಕೊಡ/ಕಳಸ; ತೂತಕುಂಭದಲ್ಲಿಯ ನೀರು=ತೂತಾಗಿರುವ/ಬಿರುಕು ಬಿಟ್ಟಿರುವ ಕೊಡದಲ್ಲಿ ತುಂಬಿಸಿ ಇಟ್ಟಿರುವ ನೀರು ನಿರಂತರವಾಗಿ ಸೋರಿಹೋಗಿ/ತೊಟ್ಟಿಕ್ಕಿ ಕೆಲವೇ ಗಳಿಗೆಗಳಲ್ಲಿ ಕೊಡ ಬರಿದಾಗುತ್ತದೆ;
ಸೂತ್ರ=ಗಾಳಿಪಟವನ್ನು ಮುಗಿಲಿನಲ್ಲಿ ಹಾರಾಡಿಸಲು ಇಲ್ಲವೇ ಬೊಂಬೆಗಳನ್ನು ರಂಗದ ಮೇಲೆ ಕುಣಿಸಲು ಕಟ್ಟುವ ದಾರ/ನೂಲು; ತಪ್ಪು=ಹಾಳಾಗು/ಹದಗೆಡು; ತಪ್ಪಿದ=ಕಿತ್ತುಹೋದ/ತುಂಡಾದ ; ಸೂತ್ರತಪ್ಪಿದ ಬೊಂಬೆ=ಸೂತ್ರ ಕಿತ್ತುಹೋದ ಬೊಂಬೆಯು ಯಾವುದೇ ಬಗೆಯ ಚಲನವಲನಗಳ ಹಿಡಿತಕ್ಕೆ ಸಿಲುಕದೆ ಒಂದೆಡೆ ಬಿದ್ದಿರುತ್ತದೆ; ನಿಜ=ತನ್ನ/ವ್ಯಕ್ತಿಯ; ನೇತ್ರ=ಕಣ್ಣು/ನಯನ; ದೃಷ್ಟಿ=ನೋಟ/ನೋಡುವಿಕೆ/ಕಣ್ಣಿನ ನೋಟ; ನಿಜನೇತ್ರ ತಪ್ಪಿದ ದೃಷ್ಟಿ=ವ್ಯಕ್ತಿಯ ಕಣ್ಣಿನ ಗುಡ್ಡೆಗಳು ಹಿಂಗಿಹೋಗಿ , ನೋಟದ ಕಸುವನ್ನು ಕಳೆದುಕೊಂಡು ಕುರುಡಾಗುವುದು;
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ ವಿರಕ್ತಿ ತೂತಕುಂಭದಲ್ಲಿಯ ನೀರು ಸೂತ್ರ ತಪ್ಪಿದ ಬೊಂಬೆ ನಿಜನೇತ್ರ ತಪ್ಪಿದ ದೃಷ್ಟಿ=ಕುಟುಂಬ/ದುಡಿಮೆ/ಸಾರ‍್ವಜನಿಕ ನೆಲೆಗಳಲ್ಲಿ ಕಂಡು ಬರುವ ಗುರು ಹಿರಿಯರನ್ನು ವ್ಯಕ್ತಿಯು ಒಪ್ಪಿಕೊಂಡು, ಅವರ ನಡೆನುಡಿಗಳನ್ನು ಅನುಸರಿಸಿ ನಡೆಯುವ ಮುನ್ನ , ಗುರು ಹಿರಿಯರೆನಿಸಿಕೊಂಡವರ ವ್ಯಕ್ತಿತ್ವದಲ್ಲಿ ಒಳ್ಳೆಯತನವಿದೆಯೇ? ಅವರ ನಡೆನುಡಿಗಳು ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತೆ ಇವೆಯೇ? ಎಂಬುದನ್ನು ಒರೆಹಚ್ಚಿ ನೋಡಿ ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳದೆ ಅನುಸರಿಸಿದರೆ ತೂತಾದ ಕೊಡದಲ್ಲಿ ತುಂಬಿಸಿ ಇಟ್ಟಿದ್ದ ನೀರು/ಸೂತ್ರದ ಎಳೆಗಳಿಲ್ಲದ ಬೊಂಬೆ/ನೋಟ ಹಿಂಗಿದ ಕಣ್ಣುಗಳು ಇದ್ದರೂ , ಅವು ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬಾರದಂತಾಗುತ್ತವೆಯೋ ಅಂತೆಯೇ ಒಳ್ಳೆಯ ನಡೆನುಡಿಗಳಿಲ್ಲದ ಗುರು ಹಿರಿಯರ ಒಡನಾಟ/ಅನುಸರಣೆ/ಸಹವಾಸದಿಂದ ವ್ಯಕ್ತಿಯ ಜೀವನಕ್ಕೆ ಒಳಿತಾಗುವುದಿಲ್ಲ/ಪ್ರಯೋಜನವಿಲ್ಲ ಎಂಬ ತಿರುಳನ್ನು ಈ ಮೂರು ರೂಪಕಗಳು ಸೂಚಿಸುತ್ತಿವೆ.
ಬೇರು=ಬೂಮಿಯೊಳಗಿರುವ ಮರಗಿಡಗಳ ಬಾಗ/ ಮರಗಿಡಗಳ ತಾಯಿಬೇರು ಬೂಮಿಯೊಳಗಿನ ಮಣ್ಣಿನಲ್ಲಿ ಹೂತಿರುತ್ತದೆ; ಮೇಲ್+ಆದ; ಮೇಲೆ=ಹೊರಗಡೆ/ಹೊರಬಾಗ; ಆದ=ಆಗಿರುವ; ಸಸಿ=ಎಳೆಯ ಗಿಡ/ಪಯಿರು; ಬೇರು ಮೇಲಾದ ಸಸಿ=ನೆಲದ ಒಳಗಡೆ/ಆಳದಲ್ಲಿ ಇರಬೇಕಾಗಿದ್ದ ಬೇರು ಕಿತ್ತುಬಂದು ಬೂಮಿಯ ಮೇಲೆ ಬುಡಮೇಲಾಗಿ ಬಿದ್ದಿರುವ ಪಯಿರು/ಸಸಿ/ಎಳೆಯ ಗಿಡ; ನೀರಿನ+ಆರೈಕೆ+ಉಂಟೆ; ಆರೈಕೆ=ಎಚ್ಚರದಿಂದ ಜೋಪಾನವಾಗಿ ಕಾಪಾಡುವಿಕೆ/ಉಪಚರಿಸುವಿಕೆ; ಉಂಟು+ಎ; ಉಂಟು=ಇದೆ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ=ಬುಡಮೇಲಾಗಿ ಬೂಮಿಯ ಮೇಲೆ ಬಿದ್ದಿರುವ ಪಯಿರಿಗೆ ನೀರನ್ನು ಎರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ನೀರನ್ನು ಹೀರಿಕೊಂಡು ಪಯಿರನ ಬೆಳವಣಿಗೆಗೆ ಕಾರಣವಾಗುವ ತಾಯಿಬೇರು ಈಗ ತಾನಿರಬೇಕಾದ ಎಡೆಯಲ್ಲಿ ಇಲ್ಲ; ಇಂತು=ಈ ರೀತಿಯಲ್ಲಿ/ಈ ಬಗೆಯಲ್ಲಿ ; ಆವ=ಯಾವುದು/ಎಂತಹುದು/ಎಲ್ಲಿಯದು; ಕ್ರೀ+ಅಲ್ಲಿಯೂ; ಕ್ರೀ=ಕ್ರಿಯೆ/ಕೆಲಸ/ಕಾರ‍್ಯ/ಎಸಕ; ಕ್ರೀಯಲ್ಲಿಯೂ=ಕೆಲಸದಲ್ಲಿಯೂ ; ಭಾವ+ಶುದ್ಧ+ಆತ್ಮನ್+ಆಗಿ; ಭಾವ=ಮನದಲ್ಲಿ ತುಡಿಯುವ ಒಳಮಿಡಿತ/ಆಲೋಚನೆ/ಚಿಂತನೆ/ಕಲ್ಪನೆ; ಶುದ್ಧ=ಶುಚಿಯಾದ/ಚೊಕ್ಕಟವಾದ/ಕೊಳೆಯಿಲ್ಲದ; ಆತ್ಮನ್=ಮನಸ್ಸು/ಚಿತ್ತ/ಜೀವ/ಚೇತನ; ಭಾವಶುದ್ಧಾತ್ಮ=ಮನದಲ್ಲಿ ತುಡಿಯುವ ನೂರೆಂಟು ಬಗೆಯ ಒಳಮಿಡಿತಗಳಲ್ಲಿ ಕೆಟ್ಟ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು , ಒಳ್ಳೆಯ ಕಲ್ಪನೆ/ಚಿಂತನೆ/ಆಲೋಚನೆಗಳಿಂದ ತನ್ನ ನಡೆನುಡಿಗಳನ್ನು ರೂಪಿಸಿಕೊಂಡಿರುವವನು; ಬೇಕು=ಅಗತ್ಯವಾಗಿರುವುದು/ಅವಶ್ಯವಿರುವುದು;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು=ಬುಡಮೇಲಾದ ಸಸಿಗೆ ನೀರಿನ್ನು ಎರೆಯುವದರಿಂದ ಯಾವುದೇ ಪ್ರಯೋಜನವಿಲ್ಲ. ಅದೇ ರೀತಿಯಲ್ಲಿ ವ್ಯಕ್ತಿಯು ತಾನು ಮಾಡುವ ಯಾವುದೇ ಬಗೆಯ ಕೆಲಸದಲ್ಲಿ ಒಳ್ಳೆಯ ಉದ್ದೇಶವನ್ನು ಹೊಂದಿರದಿದ್ದರೆ , ಅಂತಹ ಕೆಲಸದಿಂದ ಸಹಮಾನವರಿಗಾಗಲಿ/ಸಮಾಜಕ್ಕಾಗಲಿ ಯಾವೊಂದು ಪ್ರಯೋಜನವೂ ಇಲ್ಲ. ಆದುದರಿಂದ ವ್ಯಕ್ತಿಯು ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ‘ಶುದ್ದಾತ್ಮನಾಗಿರಬೇಕು’ ಎಂದರೆ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಒಳ್ಳೆಯ ಮನಸ್ಸನ್ನು ಹೊಂದಿರಬೇಕು ಎಂಬ ತಿರುಳಿನಲ್ಲಿ ಈ ರೂಪಕದ ನುಡಿಗಳು ಬಳಕೆಯಾಗಿವೆ;
ಭೋಗಬಂಕೇಶ್ವರಲಿಂಗ=ಈಶ್ವರ/ಶಿವ/ದೇವರು/ಅಂಗಸೋಂಕಿನ ಲಿಂಗತಂದೆಯ ವಚನಗಳ ಅಂಕಿತನಾಮ ; ಸಂಗ=ಒಡನಾಟ/ಸಹವಾಸ/ಗೆಳೆತನ; ಶರಣ=ಶಿವನನ್ನು ಒಲಿದವನು; ಸುಖ=ಆನಂದ/ನಲಿವು; ಭೋಗಬಂಕೇಶ್ವರಲಿಂಗ ಸಂಗದ ಶರಣನ ಸುಖ=ಶಿವಶರಣನ ಪಾಲಿಗೆ ಜೀವನದಲ್ಲಿ ನಲಿವು/ಆನಂದ ಎಂಬುದು ಒಳಿತಿನ ನಡೆನುಡಿಗಳಿಂದ ದೊರೆಯುತ್ತದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.)
ಇತ್ತೀಚಿನ ಅನಿಸಿಕೆಗಳು