ಕೈಕೇಯಿಯ ಮನದಾಳದ ಮಾತು
“ಈಗ ಒಂದು ಮಾಸ ಕಳೆಯಿತಲ್ಲವೇ ಕೌಸಲ್ಯಾದೇವಿ ರಾಮ ಕಾಡಿಗೆ ಹೋಗಿ?” ಎಂದು ಸುಮಿತ್ರಾದೇವಿ ತನ್ನ ತಲೆಯ ಮೇಲಿನ ಬಿಳಿ ಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತ ಕೌಸಲ್ಯೆಯನ್ನು ಕೇಳಿದಳು.
“ಹೌದು ಸುಮಿತ್ರಾದೇವಿ, ನನ್ನ ಹೊಟ್ಟೆಯಲ್ಲಿ ಸಂಕಟದ ಬೆಂಕಿ ಕುದಿಯುತ್ತಿದೆ. ಈ ಕೈಕೇಯಿಗೆ ಅದಾವ ಮಂಕು ಬಡೆದಿತ್ತೋ, ನನ್ನ ಮಗ ಸೊಸೆಯನ್ನು ಕಾಡಿಗೆ ಅಟ್ಟಿದಳು. ಅವರ ಜೀವನ ಈಗ ಕುದಿಯುವ ಕಡಲಿನಲ್ಲಿ ಪ್ರಯಾಣ ಮಾಡುತ್ತಿರುವ ಹಾಗೆ ಇದೆ. ಮಹಾರಾಜರ ಪ್ರೀತಿಯ ಮಗ ರಾಮ, ಇನ್ನು ಅವರಿಗೆ ಪಿಂಡ ಪ್ರದಾನ ಕೂಡ ಮಾಡಿಲ್ಲ…. !!”
ಈ ಇಬ್ಬರ ಸಂಬಾಶಣೆಯನ್ನು ಕೇಳುತ್ತ ಅರಮನೆಯ ಕಿಟಕಿಯಿಂದ ಸೂರ‍್ಯಾಸ್ತ ನೋಡುತ್ತಾ ನಿಂತ ಕೈಕೇಯಿ ಯ ಜಡೆ, ಕಟ್ಟದೆ ಹಾಗೆ ಬಿಟ್ಟ ಸೆಣಬಿನಂತ ಬಿಳಿ ಮತ್ತು ಉದ್ದನೆಯ ತುಂಬು ತಲೆಗೂದಲು, ಪಡುವಣ ಗಾಳಿಗೆ ಸೀರೆಯ ಸೆರಗಿನಂತೆ ಹಾರುತ್ತಿದೆ. ತನ್ನ ಹೊಟ್ಟೆಯೊಳಗಿನ ಸಂಕಟ ಕಣ್ಣೀರಾಗಿ ಹೊರಗೆ ಬಂದಾಗ, ತನ್ನ ಸೀರೆಯ ಸೆರಗಿನಿಂದ ಒರೆಸಿಕೊಳ್ಳುತ್ತ,
“ಹೇ ಪರಮೇಶ್ವರ ನನ್ನಿಂದ ಯಾಕೆ ಇಂತಹ ಕೆಲಸ ಮಾಡಿಸಿದೆ, ಆ ಹಾಳು ಗೂನು ಬೆನ್ನಿನ ಮುದುಕಿಯ ಮಾತಿಗೆ ನಾನೇಕೆ ಮರುಳಾದೆ, ರಾಮನು ನನ್ನ ಮಗನೆ ಆಗಿದ್ದನಲ್ಲವೇ, ಈಗ ನನ್ನ ಪಾಲಿಗೆ ಯಾರೂ ಇಲ್ಲ, ಏನೂ ಇಲ್ಲ. ಆ ಹಾಳು ಮಂತರೆಯ ಮಾತು ಕೇಳಿ ನನ್ನ ಮಗ ರಾಮನನ್ನ ಕಾಡಿಗೆ ಅಟ್ಟಿದೆ, ಅವನ ಹಿಂದೆಯೇ ಲಕ್ಶ್ಮಣ ಮತ್ತು ಮೈತಿಲಿ, ಪಾಪ ಅವಳು ಕಶ್ಟವೇಂದರೆ ಏನು ಎಂದು ತಿಳಿಯದ ರಾಜಕುಮಾರಿ, ಮಿತಿಲೆಯ ರಾಜಕುಮಾರಿ, ದರ‍್ಮ ಮತ್ತು ಸತ್ಯದ ಪ್ರತಿರೂಪ, ಆ ಕಾಡಿನಲ್ಲಿ ಅದೆಶ್ಟು ಕಶ್ಟಪಡುತ್ತಿದ್ದಾರೋ… !”
“ಈ ಕಡೆ ಅವರು ಹೋಗುವ ಹೊತ್ತಿಗೆ ವಿದವೆಯ ಪಟ್ಟ ಕಟ್ಟಿಕೊಂಡೆ, ನನ್ನ ಮಗ ಬರತನಿಂದ ದೂರವಾದೆ… ಅಯ್ಯೋ ದೇವರೇ ಯಾರಿಗೆ ಹೇಳಲಿ ನನ್ನ ಈ ಮನಸ್ಸಿನ ತೊಳಲಾಟವನ್ನು, ಎಶ್ಟು ಅತ್ತರೂ, ಎಶ್ಟು ಬಿಕ್ಕಿದರೂ ತೊಳೆದು ಹೋಗುವುದಿಲ್ಲ ನನ್ನ ಈ ಪಾಪ.. ” ಎಂದು ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತ ತನ್ನ ಹೊಟ್ಟೆಯಲ್ಲಿ ಆಗುತ್ತಿರುವ ಸಂಕಟ ಮತ್ತು ತನ್ನ ಮೇಲೆಯೇ ಬರುತ್ತಿರುವ ಸಿಟ್ಟಿಗೆ, ಜೋರಾಗಿ ತನ್ನ ಹಣೆಯನ್ನು ಬಾಗಿಲಿಗೆ ಗುದ್ದಿಕೊಂಡಳು, ಹಣೆಯಿಂದ ರಕ್ತ ಹರಿದು ಬರುತ್ತಿರಲು ಮೂರ‍್ಚೆ ಹೋದ ಕೈಕೇಯಿ ಅಲ್ಲಿಯೇ ಬಿದ್ದಳು.
ತಾನು ಕೂಡ ಇವಳ ಮೇಲೆ ಮುನಿಸಿಕೊಂಡಿರುವೆ ಎನ್ನುವಂತೆ ಸೂರ‍್ಯ ಅಸ್ತಂಗತನಾದ.
ಸೊಗಸಾದ ವಿವರಣೆ. ಹೌದು ಪ್ರಾಯಶ್ಚಿತ್ತವಿಲ್ಲದ ತಪ್ಪೆ ಕೈಕೆಯಿಯದು?