ಹಡಪದ ಅಪ್ಪಣ್ಣನ ವಚನದ ಓದು
– ಸಿ.ಪಿ.ನಾಗರಾಜ.
ಹೆಸರು: ಹಡಪದ ಅಪ್ಪಣ್ಣ
ಕಾಲ: ಕ್ರಿ.ಶ.1160
ಹೆಂಡತಿ: ಲಿಂಗಮ್ಮ
ದೊರೆತಿರುವ ವಚನಗಳು: 251
ವಚನಗಳ ಅಂಕಿತನಾಮ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ಕಸುಬು: ವೀಳ್ಯವನ್ನು ನೀಡುವುದು. ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯಲ್ಲಿ ಅಪ್ಪಣ್ಣನು ವೀಳ್ಯವನ್ನು ವಿತರಣೆ ಮಾಡುವ ಕಾಯಕವನ್ನು ಮಾಡುತ್ತಿದ್ದುದರಿಂದ , ಈತನನ್ನು ಹಡಪದ ಅಪ್ಪಣ್ಣ ಎಂದು ಕರೆಯುತ್ತಿದ್ದರು. ವೀಳ್ಯ ಎಂದರೆ ಎಲೆ ಅಡಕೆ ಸುಣ್ಣ ಮೊದಲಾದುವುಗಳನ್ನು ಒಳಗೊಂಡ ತಾಂಬೂಲ.
ಹಡಪ ಎಂಬ ಪದಕ್ಕೆ ಎರಡು ಬಗೆಯ ತಿರುಳುಗಳಿವೆ:
ಹಡಪ/ಅಡಪ/ಅಡೆಪ
1) ಎಲೆ ಅಡಕೆಗಳನ್ನು ಇಟ್ಟುಕೊಳ್ಳುವ ಚೀಲ
2) ಗಡ್ಡ ಮೀಸೆ ತಲೆಗೂದಲನ್ನು ಅಂದವಾಗಿ ಕತ್ತರಿಸುವ ಇಲ್ಲವೇ ಕೂದಲನ್ನು ತೆಗೆಯುವ ಕೆಲಸಕ್ಕಾಗಿ ಬಳಸುವ ಸಲಕರಣೆಗಳನ್ನು ಇಟ್ಟುಕೊಳ್ಳುವ ಚೀಲ/ಚಿಕ್ಕ ಪೆಟ್ಟಿಗೆ
========================================================================
ವಂದನೆಗೆ ನಿಲ್ಲಬೇಡ
ನಿಂದೆಗಂಜಿ ಓಡಲಿಬೇಡ
ಹಿಂದು ಮುಂದು ಆಡಲಿಬೇಡ
ಸಂದೇಹಗೊಳಲಿಬೇಡ
ದ್ವಂದ್ವಬುದ್ಧಿಯ ಕಳೆದು ನಿಂದಿರೆ
ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ನಡೆನುಡಿಯನ್ನು ಅಳವಡಿಸಿಕೊಂಡು ಬಾಳಲು ಬೇಕಾದ ರೀತಿನೀತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
( ವಂದನೆ=ಹೊಗಳಿಕೆ/ಕೊಂಡಾಟ/ಸ್ತುತಿ/ನಮನ; ನಿಲ್ಲು=ಇರು/ತಂಗು/ಜೀವಿಸು/ಬದುಕು; ಬೇಡ=ಬೇಕಾಗಿಲ್ಲ/ಸಲ್ಲದು/ಕೂಡದು;
ವಂದನೆಗೆ ನಿಲ್ಲಬೇಡ=ತನ್ನ ಬಗ್ಗೆ ಇತರರು ಆಡುವ ಹೊಗಳಿಕೆಯ ನುಡಿಯನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ , ವ್ಯಕ್ತಿಯ ಮನದಲ್ಲಿ ತಾನು ಇತರರಿಗಿಂತ ಹೆಚ್ಚಾಗಿ ತಿಳಿದವನು/ದೊಡ್ಡವನು/ಒಳ್ಳೆಯವನು ಎಂಬ ಅಹಂಕಾರದ/ಒಣಹೆಮ್ಮೆಯ ಒಳಮಿಡಿತ ಮೂಡುತ್ತದೆ. ಹೊಗಳಿಕೆಯ ಮಾತಿನ ಗುಂಗಿನಲ್ಲಿ ಸಿಲುಕಿದ ವ್ಯಕ್ತಿಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಬದಲು, ಇನ್ನುಳಿದ ಜೀವನದ ಉದ್ದಕ್ಕೂ ತನ್ನನ್ನು ತಾನು ಮೆರೆಸಿಕೊಳ್ಳುವುದರಲ್ಲಿಯೇ ಮಗ್ನನಾಗುತ್ತಾನೆ. ಆದ್ದರಿಂದ ಹೊಗಳಿಕೆಯ ನುಡಿಗಳನ್ನು ಕೇಳಿದಾಗ ವ್ಯಕ್ತಿಯು ಮಯ್ ಮರೆಯಬಾರದು/ಸೊಕ್ಕಬಾರದು;
ನಿಂದೆಗೆ+ಅಂಜಿ; ನಿಂದೆ=ತೆಗಳಿಕೆ/ಬಯ್ಯುವಿಕೆ/ಮೂದಲಿಕೆ; ಅಂಜು=ಹೆದರು/ಹಿಂಜರಿ/ಹಿಮ್ಮೆಟ್ಟು/ಪುಕ್ಕಲುಗೊಳ್ಳು; ಓಡು=ಪಲಾಯನ ಮಾಡು/ಕಾಲುಕೀಳು/ಹೊರಟುಹೋಗು;
ನಿಂದೆಗಂಜಿ ಓಡಲಿಬೇಡ=ಜೀವನದ ಆಗುಹೋಗುಗಳಲ್ಲಿ ಇತರರಿಂದ ನಿಂದೆ/ತೆಗಳಿಕೆ/ಮೂದಲಿಕೆ/ಕಡೆಗಣಿಕೆ/ತಿರಸ್ಕಾರಕ್ಕೆ ಗುರಿಯಾದಾಗ, ನಿನ್ನ ನಡೆನುಡಿಗಳಲ್ಲಿ ತಪ್ಪಾಗಿದ್ದರೆ , ಅದನ್ನು ಒಪ್ಪಿಕೊಂಡು ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಬಾಳು. ಒಂದು ವೇಳೆ ನಿನ್ನಿಂದ ಯಾವ ತಪ್ಪು ಆಗದೆ, ಇತರರು ನಿನಗೆ ತೊಡಕನ್ನು/ಕೇಡನ್ನು/ಅಪಮಾನವನ್ನು ಮಾಡಬೇಕೆಂಬ ಕೆಟ್ಟ ಉದ್ದೇಶದಿಂದ ತೆಗಳುತ್ತಿದ್ದರೆ , ಅದನ್ನು ಲೆಕ್ಕಿಸದೆ/ಕಿವಿಯ ಮೇಲೆ ಹಾಕಿಕೊಳ್ಳದೆ ಗಟ್ಟಿಮನಸ್ಸಿನಿಂದ/ಕೆಚ್ಚಿನಿಂದ ಜೀವನದಲ್ಲಿ ಅಡಿಗಳನ್ನು ಇಡುತ್ತ ಮುಂದೆ ಸಾಗು;
ಹಿಂದೆ=ಹಿಂಬದಿಯಲ್ಲಿ/ಹಿಂದುಗಡೆ; ಮುಂದೆ=ಮುಂಬದಿಯಲ್ಲಿ/ಮುಂದುಗಡೆ; ಆಡಲಿ+ಬೇಡ; ಆಡು=ನುಡಿ/ಹೇಳು;
ಹಿಂದು ಮುಂದು ಆಡುವುದು=ವ್ಯಕ್ತಿಯೊಬ್ಬನು ತಮ್ಮ ಮುಂದಿದ್ದಾಗ, ಅವನೊಡನೆ ಒಲವು ನಲಿವಿನಿಂದ ತುಂಬಾ ಚೆನ್ನಾಗಿ ಮಾತನಾಡುತ್ತ, ಅವನು ಅಲ್ಲಿಂದ ಹೋದನಂತರ , ಇತರರ ಮುಂದೆ ಆತನ ಬಗ್ಗೆ ಕೆಟ್ಟನುಡಿಗಳನ್ನಾಡುವುದು ಸಾಮಾನ್ಯವಾಗಿ ಎಲ್ಲ ವ್ಯಕ್ತಿಗಳ ಜೀವನದಲ್ಲಿಯೂ ಒಂದಲ್ಲ ಒಂದು ಬಾರಿ ಕಂಡುಬರುತ್ತದೆ. ಇದಕ್ಕೆ ಆ ವ್ಯಕ್ತಿಯೊಡನೆ ಹೊಂದಿರುವ ನಂಟು/ಅವನ ಸಾಮಾಜಿಕ ಅಂತಸ್ತು/ಅಂದಿನ ಸಾಮಾಜಿಕ ಸನ್ನಿವೇಶ ಕಾರಣವಾಗಿರುತ್ತದೆ. ಆದರೆ ಈ ರೀತಿ ‘ಮುಂದೊಂದು ಮಾತು, ಹಿಂದೊಂದು ಮಾತನ್ನಾಡುವುದನ್ನೇ’ ಹವ್ಯಾಸವನ್ನಾಗಿ/ಚಟವನ್ನಾಗಿ ಮಾಡಿಕೊಳ್ಳಬಾರದು. ಇದನ್ನೇ ಚಟವನ್ನಾಗಿಸಿಕೊಂಡ ವ್ಯಕ್ತಿಯು ಕೆಲವೇ ದಿನಗಳಲ್ಲಿ ‘ನಂಬಿಕೆಗೆ ಯೋಗ್ಯನಲ್ಲ’ ಎಂಬ ಕೆಟ್ಟಹೆಸರನ್ನು ಪಡೆಯುತ್ತಾನೆ. ಆದುದರಿಂದ ಒಳ್ಳೆಯ ನಡೆನುಡಿಗಳನ್ನು ರೂಪಿಸಿಕೊಳ್ಳುವ ವ್ಯಕ್ತಿಯು ಈ ಬಗೆಯ ಮಾತಿನ ವರ‍್ತನೆಯಿಂದ ದೂರವಿರಬೇಕು ಇಲ್ಲವೇ ಈ ರೀತಿ ಮಾತನಾಡುವುದನ್ನು ಪ್ರಯತ್ನಪೂರ‍್ವಕವಾಗಿ ಬಿಡಬೇಕು;
ಹಿಂದು ಮುಂದು ಆಡಲಿಬೇಡ=ವ್ಯಕ್ತಿಯು ತನ್ನ ಮುಂದೆ ಇದ್ದಾಗ ಒಂದು ರೀತಿ ಮಾತನಾಡುತ್ತಿದ್ದು, ಅವನು ಇಲ್ಲದ ಸಮಯದಲ್ಲಿ ಮತ್ತೊಂದು ಬಗೆಯ ಮಾತನಾಡಬೇಡ;
ಸಂದೇಹ=ಅನುಮಾನ/ಸಂಶಯ; ಸಂದೇಹಗೊಳ್ಳುವುದು=ಸಂಶಯವನ್ನು/ಅನುಮಾನವನ್ನು ಹೊಂದುವುದು. ಕುಟುಂಬದ ನೆಲೆಯಲ್ಲಿ/ದುಡಿಮೆಯ ನೆಲೆಯಲ್ಲಿ/ಸಾರ‍್ವಜನಿಕ ನೆಲೆಯಲ್ಲಿ ಜೀವನದ ಉದ್ದಕ್ಕೂ ವ್ಯಕ್ತಿಗಳೊಡನೆ ನಾವು ವ್ಯವಹರಿಸುವಾಗ/ಒಡನಾಡುವಾಗ/ಜೊತೆಗೂಡಿ ಬಾಳುವಾಗ ಒಬ್ಬರು ಮತ್ತೊಬ್ಬರನ್ನು ನಂಬಬೇಕು. ನಂಬಿಕೆ ಎಂದರೆ ವ್ಯಕ್ತಿಗಳು ಪರಸ್ಪರ ಒಲವನ್ನು ಹೊಂದಿರುವುದು ಮತ್ತು ಒಬ್ಬರಿಗೊಬ್ಬರು ಒಳಿತನ್ನು ಮಾಡುವುದು/ನೆರವಾಗುವುದು. ಇಂತಹ ನಂಬಿಕೆಯಿಂದಲೇ ಮಾನವನ ಬದುಕು ನಡೆಯುತ್ತಿದೆ. ನಾವು ವ್ಯವಹರಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಂಬಿಕೆಯನ್ನು ಕಳೆದುಕೊಂಡು ಅವರ ನಡೆನುಡಿಗಳನ್ನು ಸಂಶಯದಿಂದ/ಅನುಮಾನದಿಂದ ಕಾಣತೊಡಗಿದಾಗ, ವ್ಯಕ್ತಿಗಳ ನಡುವಣ ನಂಟು ಮುರಿದುಬೀಳುತ್ತದೆ ಮತ್ತು ಯಾವೊಂದು ಕೆಲಸಗಳು ಸರಿಯಾಗಿ ನಡೆಯುವುದಿಲ್ಲ.
ಸಂಶಯಗೊಳಲಿ ಬೇಡ=ಜೀವನದಲ್ಲಿ ಎಲ್ಲವನ್ನೂ/ಎಲ್ಲರನ್ನೂ ಸಂಶಯದಿಂದ ಕಾಣುವಂತಹ ಗುಣವನ್ನು ಬೆಳೆಸಿಕೊಳ್ಳಬೇಡ. ಇದರಿಂದ ನಿನಗೂ ಕೇಡಾಗುತ್ತದೆ ಮತ್ತು ನಿನ್ನನ್ನು ಅವಲಂಬಿಸಿದವರಿಗೂ ಹಾನಿಯುಂಟಾಗುತ್ತದೆ. ಏಕೆಂದರೆ ಸಂಶಯದ ನಡೆನುಡಿಯು ವ್ಯಕ್ತಿಯ ಮನದಲ್ಲಿ ಸದಾಕಾಲ ಆತಂಕ/ತಲ್ಲಣ/ಒತ್ತಡಗಳನ್ನು ಉಂಟುಮಾಡಿ ಎಲ್ಲರ ಬದುಕನ್ನು ನರಕಗೊಳಿಸುತ್ತದೆ;
ದ್ವಂದ್ವ=ಎರಡು/ಇಬ್ಬಗೆ/ಬೇರೆ ಬೇರೆಯಾದ ಎರಡು ವಸ್ತು/ಜೀವಿ/ಸಂಗತಿ/ವಿಚಾರ; ಬುದ್ಧಿ=ತಿಳಿವು/ಅರಿವು/ವಿವೇಕ; ದ್ವಂದ್ವ ಬುದ್ಧಿ=ಇಬ್ಬಗೆಯಾದ/ಪರಸ್ಪರ ಎದುರುಬದುರಾದ ಇಲ್ಲವೇ ಬೇರೆ ಬೇರೆಯಾಗಿರುವ ಆಲೋಚನೆ/ಚಿಂತನೆ/ವಿಚಾರಗಳು; ಕಳೆ=ಬಿಡು/ತೊರೆ/ತ್ಯಜಿಸು/ಹೋಗಲಾಡಿಸು/ನಾಶಪಡಿಸು; ನಿಂದಿರೆ=ಇರಲು/ವ್ಯವಹರಿಸಲು;
ದ್ವಂದ್ವ ಬುದ್ಧಿಯ ಕಳೆದು ನಿಂದಿರೆ=ಯಾವುದೇ ಕೆಲಸಕ್ಕೆ ತೊಡಗುವ ಮುನ್ನ ಇಲ್ಲವೇ ಕೆಲಸವನ್ನು ಮಾಡುವಾಗ ‘ಮಾಡುವುದೋ/ಬೇಡವೋ’ – ‘ಒಳಿತಾಗುವುದೋ/ಕೇಡಾಗುವುದೋ’ – ‘ಕೊನೆಮುಟ್ಟುವುದೋ/ಇಲ್ಲವೋ’ ಮುಂತಾದ ಇಬ್ಬಗೆಯ ಒಳಮಿಡಿತಗಳಿಗೆ ಒಳಗಾಗಿ ನರಳಬಾರದು/ತೊಳಲಾಡಬಾರದು. ಕೆಲಸದಲ್ಲಿ ತೊಡಗುವಾಗ ಒಳ್ಳೆಯ ಉದ್ದೇಶವನ್ನು ಹೊಂದಿರಬೇಕು ಮತ್ತು ಅದರ ಆಗುಹೋಗುಗಳನ್ನು ಕುರಿತು ಆಲೋಚಿಸಿ ಸರಿಯಾದ ತೀರ‍್ಮಾನವನ್ನು ತೆಗೆದುಕೊಳ್ಳಬೇಕು. ಆ ಕೆಲಸಕ್ಕೆ ಕಯ್ ಹಾಕಿದ ನಂತರ ಹೆಚ್ಚಿನ ಆಸಕ್ತಿಯನ್ನು ತಳೆದು ಪ್ರಾಮಾಣಿಕತನದಿಂದ ಕಾಲದ ಮಿತಿಯೊಳಗೆ ಒಂದೇ ಮನಸ್ಸಿನಿಂದ ಮಾಡಿ ಮುಗಿಸಬೇಕು. ಈ ರೀತಿ ಕಯ್ಗೊಂಡ ಕೆಲಸಗಳು ಯಾವುದೇ ಬಗೆಯ ಎಡರುತೊಡರುಗಳಿಲ್ಲದೆ ಚೆನ್ನಾಗಿ ನಡೆಯುತ್ತವೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;
ಬಸವಪ್ರಿಯ=ಶಿವಶರಣ ಬಸವಣ್ಣನವರ ಮೆಚ್ಚುಗೆಗೆ/ಒಲವಿಗೆ ಪಾತ್ರನಾದವನು; ಕೂಡಲು=ಎರಡು ನದಿಗಳು ಜತೆಗೂಡುವ ಜಾಗ/ನದಿಗಳ ಸಂಗಮ; ಚೆನ್ನಬಸವಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ; ಬಸವಪ್ರಿಯ ಕೂಡಲ ಚೆನ್ನಬಸವಣ್ಣ=ಹಡಪದ ಅಪ್ಪಣ್ಣನ ವಚನಗಳ ಅಂಕಿತನಾಮ)
( ಚಿತ್ರ ಸೆಲೆ: shivasharaneyaru )
ಇತ್ತೀಚಿನ ಅನಿಸಿಕೆಗಳು