ಅದೇ ನಿನ್ನ ಜೀವನದ ಅಂದ ಆನಂದ

– ಡಿ. ಜಿ. ನಾಗರಾಜ ಹರ‍್ತಿಕೋಟೆ.

ಹಳೆಯ ದಿನಗಳು, ಎತ್ತಿನ ಬಂಡಿ

ಅಜ್ಜ ಅಜ್ಜ ಮೊದ್ಲು ನನ್ನ ವ್ಯತೆ ಕೇಳಜ್ಜಾ
ಆಮ್ಯಾಗೆ ನಿನ್ನ ಬಾಳಿನ ಕತೆ ಹೇಳಜ್ಜಾ
ನಾ ಕೆಜಿ ಕೆಜಿ ಬಾರ ಹೊತ್ತು ಮನಿಗೆ ಬರ‍್ವಾಗ ಸುಸ್ತು
ಸಾಲದೆಂಬಂತೆ ಹೋಂ ವರ‍್ಕ್, ಟ್ಯೂಶನ್ ಗಳಿಗೆ ಬೇಸ್ತು

ಕಂತೆ ಕಂತೆ ಬುಕ್ಸ್ ಓದಿ ಉರು ಹೊಡದು ಬರದು
ಹೆಚ್ಚ ಅಂಕ ಗಳಿಸಿದ್ರೆ ನಾ ಬಾರೀ ಬುದ್ದಿವಂತ ಅಂತೆ
ಲಕ್ಶ ಲಕ್ಶ ಸಂಬಳ ತಗಳೋ ದೊಡ್ಡ ಕೆಲಸ
ಗಿಟ್ಟಿಸಿಕೊಂಡ್ರೆ ಅದೇ ದೊಡ್ಡ ಸಾದನೆ ಅಂತೆ

ನಮ್ಮಪ್ಪ ಹೇಳವ್ನೆ… ಮಗಾ ಈ ಜಗತ್ತಿನ ವೇಗಕ್ಕೆ
ಹೆಜ್ಜೆ ಹಾಕ್ತಾ ಓಡ್ಲಿಲ ಅಂದ್ರೆ ಹಿಂದೆ ತಳ್ಬಿಡುತ್ತೆ ಕಣ್ಲಾ
ಸುತ್ತಮುತ್ತ ಇರೋ ಜಗತ್ತಿನ ಜೊತೆ ಬೆರೆಯೋದ ಬಿಟ್ಟು
ನಾವ್ ಹೆಂಗ್ ಓಡೋಣ ನೀನೇ ಹೇಳೋ ಅಜ್ಜಾ

ಏನಂತಾ ಹೇಳ್ಲಿ ಮಗುವೆ ಆ ಸಿಹಿ-ಕಹಿಯ ನಲಿವಾ
ಆಡಂಬರದ ಬದುಕಿಲ್ದಿದ್ರೂ ಸಂಯಮದ ಬದುಕಿತ್ತು
ಮನಸಾರೆ ಆಡ್ಕೊಂಡು ಊರೆಲ್ಲಾ ಸುತ್ಕೊಂಡು
ತುಂಬಿದ ಮನಿಯೊಳಗ ಎಲ್ಲರೊಂದೊಳಗಾಗಿ ಬೆಳುದ್ವಿ

ಹಾರೋ ಹಕ್ಕಿ, ಅರಳೋ ಹೂ, ಬೀಳೋ ಮಳೆರಾಯ
ಗಿಡಮರ ನೋಡನೋಡ್ತಾನೆ ಪರಿಸರಪಾಟ ಕಲಿತ್ವಿ
ಆಟೋಟ ನಾಟಕ ಹಬ್ಬ ಸರ‍್ಕಸ್ ಅಂದ್ರಾ
ಮನಸು ಹಾರಾಡ್ತಿತ್ತೋ ಕೈಕಾಲು ಕುಣಿತಿತ್ತೋ

ಕಲ್ಲದೇವರ ಹಾಳು ಮಂಟಪದ ಮ್ಯಾಗೆ ಕುತ್ಕೊಂಡು
ಈರುಳ್ಳಿ ಉಪ್ಪು ಬೆಲ್ಲದ ಜೊತೆ ಹುಣಸೆಕಾಯಿ ಕಿತ್ಕೊಂಡು
ಗುಂಡಕಲ್ಲಲ್ಲಿ ರುಬ್ಬಿ ಕಡ್ಡಿ ಸಿಕ್ಕಿಸ್ಕೊಂಡು ಸವೀತಿದ್ರೆ
ಈಗಿನ ಲಾಲಿಪಪ್ಪು ಅದ್ರ ಮುಂದೆ ಬೆಪ್ಪು

ಹಬ್ಬದಾಗೆ ಸಂಸ್ಕ್ರುತಿ ಸಂಪ್ರದಾಯಗಳ ಮೆರವಣಿಗೆ
ಹನುಮನ ಗುಡಿಯ ಬಜನೆ, ವೀರಬದ್ರನ ವೀರಗಾಸೆ ಆಗಾಗ್ಗೆ
ಅನ್ನ ಬೆಳೀಯೋ ರೈತ, ಕಮ್ಮಾರ , ಕುಂಬಾರ, ಬಡಗಿ
ಇವರನ ನೋಡ ನೋಡ್ತಾನೆ ಬದುಕೋದ ಕಲಿತ್ವಿ

ಕಟ್ಪೆ, ಕಪಿಲೆ, ದಿನ್ನೆಗಳ ಹೊಲದಾಗೆ ಶೇಂಗಾ, ನವಣೆ, ರಾಗಿ
ಬೆಳುದ್ವಿ, ಜೊತೆಗೆ ನಾವೂನೂ ಬೆಳುದ್ವಿ
ರಾಗಿ ಅಂಬಲಿ ಕುಡ್ಕೊಂಡು ಬೂಮ್ತಾಯ ನಂಬ್ಕೊಂಡು
ಕಶ್ಟ ಇದ್ರೂನೂ ಅಳುಕದಂಗೆ ಜೀವನ ಸಾಗುಸ್ತಿದ್ವಿ

ಊರಾಗ ಹತ್ತಾರು ಜಾತಿ ಇದ್ರೂ ಸಣ್ಣ ಜಗಳ ಆದ್ರೂ
ಅಣ್ತಮ್ಮ ನೆಂಟ ಅಂದ್ಕೋತಾ ಕೆಲಸ ಮಾಡ್ಕೋಡ್ತಿದ್ವಿ
ಬದುಕಾಕೆ ಹೆಚ್ಚು ಕಾಸು ಬೇಕಿರ‍್ಲಿಲ್ಲ, ಬೆಳೆದಿದ್ದ ತಿಂತಿದ್ವಿ
ಸರಳವಾಗಿ ಜೀವಿಸ್ತಿದ್ವಿ, ಜನಪದದಲ್ಲಿ ಮೈಮರೀತಿದ್ವಿ

ನನ್ನ ಹಾರೈಕೆ ಇಶ್ಟೇ ಮಗುವೇ…
ಪ್ರೀತಿ ಸ್ನೇಹ ಆತ್ಮಗೌರವದಿ ಬದುಕೋ
ಕಾಯಕ ಮಾಡ್ಕೋತಾ ಒಂದೊಳ್ಳೆ ಬಾಳ್ವೆ ಕಟ್ಕೋತಾ
ಹಿತಮನುಶ್ಯನಾಗಿ ಬಾಳೋ ಕಂದಾ
ಅದೇ ನಿನ್ನ ಜೀವನದ ಅಂದ ಆನಂದಾ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

6 Responses

  1. Sachin.H.J Jayanna says:

    ಸುತ್ತಮುತ್ತ ಇರೋ ಜಗತ್ತಿನ ಜೊತೆ ಬೆರೆಯೋದ ಬಿಟ್ಟು
    ನಾವ್ ಹೆಂಗ್ ಓಡೋಣ ನೀನೇ ಹೇಳೋ ಅಜ್ಜಾ ನನ್ನ ಫೇವರೈಟ್ ಲೈನ್..‌

  2. Eswar Talvar says:

    ಮನ ಮುಟ್ಟಿತು…..!!

  3. Dg Harthi says:

    ಈಶ್ವರ್ ಹಾಗೂ ಜಯಣ್ಣನವರೇ ಸ್ಪಂದನೆಯ ಹೊನಲು ಸದಾ ಹೀಗೆ ಇರಲಿ…

  4. Dg Harthi says:

    ಹಿಂದೆ ಶಾಲೆ ಅನ್ನೋದು ಬಾಲ್ಯದ ಒಂದು ಭಾಗವಾಗಿತ್ತು. ದುರಂತ ಅಂದ್ರೆ ಇಂದು ಎಷ್ಟೋ ಮಕ್ಕಳ ಬಾಲ್ಯವನ್ನೇ ಇಂದಿನ ಶಾಲಾವ್ಯವಸ್ಥೆ ನುಂಗಿಹಾಕ್ತಾ ಇದೆ….

  5. Thriveni L says:

    ಚೆನ್ನಾಗಿದೆ

  6. ರವಿಚಂದ್ರ ಹರ್ತಿಕೋಟೆ says:

    ಸೊಗಸಾದ ಕವನ… ಇಂದಿನ ಓಡುವಿಕೆಯ ಬರದಲ್ಲಿ ನಾವು ನಮ್ಮ ಮಕ್ಕಳ ಬಾಲ್ಯಕ್ಕೆ ಅರ್ತವೇ ಇಲ್ಲದಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

Eswar Talvar ಗೆ ಅನಿಸಿಕೆ ನೀಡಿ Cancel reply

%d bloggers like this: