ಜಾವಾ ಮತ್ತು ಯೆಜ್ಡಿ – ಒಂದು ನೆನಪು

– ಸಚಿನ್ ಎಚ್‌. ಜೆ.

jawa,yezdi, motor bikes, motorcycles, ಜಾವಾ, ಯೆಜ್ಡಿ,

ಇತ್ತೀಚಿಗೆ ಮಹಿಂದ್ರಾ ಕಂಪನಿಯ ‘ಕ್ಲಾಸಿಕ್ ಲೆಜೆಂಡ್ಸ್’ ಅಂಗ ಸಂಸ್ತೆಯು ಜಾವಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಮತ್ತೆ ಹಳೆಯ ಜಾವಾ ಬೈಕುಗಳನ್ನೇ ಹೋಲುವ, ಈಗಿನ ಕಾಲದ ತಂತ್ರಗಾರಿಕೆಯ ಇಂಜಿನ್ನುಗಳನ್ನೊಳಗೊಂಡ ಮೂರು ಮಾದರಿಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ‘ಜಾವಾ’, ‘ಜಾವಾ 42’ ಮತ್ತು ‘ಜಾವಾ ಪೆರಾಕ್’ ಎಂಬ ಮೂರು ಮಾದರಿಗಳು ರಸ್ತೆಗಿಳಿಯಲು ಸಜ್ಜಾಗಿದ್ದು, ಮುಂದಿನ ಜನವರಿಗೆ ಗ್ರಾಹಕರ ಕೈಸೇರಲಿವೆ. ಯೂಟ್ಯೂಬಿನಲ್ಲಿ ಬಿಟ್ಟಿರುವ ವೀಡಿಯೋದಲ್ಲಿ ಹಳೇ ಜಾವಾ ಇಂಜಿನ್ನಿನ ಗರ‍್ಜನೆಯಂತೆಯೇ ಸದ್ದು ಮಾಡಿರುವ ಬೈಕುಗಳು ಬರವಸೆ ಮೂಡಿಸಿವೆ. ಆದರೂ ಹೊಸಕಾಲದ ಈ ಗಾಡಿಗಳು ಹಳೇ ಜಾವಾ ಬೈಕುಗಳಂತೆ ಮತ್ತೆ ರಸ್ತೆಯನ್ನಾಳುವವೇ?

ಜಾವಾ ಬೈಕಿನ ಹುಟ್ಟು ಮತ್ತು ಹಿನ್ನೆಲೆ

1929 ರ ಮಹಾನ್ ಆರ‍್ತಿಕ ಪತನದ (The Great Depression) ಸಮಯದಲ್ಲಿ ಜರ‍್ಮನ್ ಆಟೊಮೋಬೈಲ್ ಕಂಪನಿ ವಾಂಡರರ್‌ನ ಮೋಟಾರ್ ಬೈಕು ವಿಬಾಗ ಮುಚ್ಚುವುದರಲ್ಲಿದ್ದಾಗ, ಪ್ರಾಂಟಿಶೆಕ್ ಜಾನಚೆಕ್ ಎಂಬ ಜೆಕ್ ಇಂಜಿನೀಯರ್ ಈ ವಿಬಾಗವನ್ನು ಕೊಂಡುಕೊಂಡ. ಜಾನಚೆಕ್ ತನ್ನ ಕೊನೆಯ ಹೆಸರಿನ ‘ಜಾ’ ಮತ್ತು ವಾಂಡರರ್ ಮೂಲ ಕಂಪನಿಯ ಹೆಸರಿನಿಂದ ‘ವಾ’ ಸೇರಿಸಿ “ಜಾವಾ” ಎನ್ನುವ ಹೆಸರನ್ನಿಟ್ಟು, ಮೋಟಾರು ಬೈಕಿನ ಕಂಪನಿಯನ್ನು ಹುಟ್ಟು ಹಾಕಿದ. ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುತ್ತಿದ್ದ ಕಂಪನಿ ಅಂದು 500ಸಿಸಿಯ ಒಂದು ಮಾದರಿಯನ್ನು ಬಿಡುಗಡೆ ಮಾಡಿ, ಮುಂದೆ ಹಲವು ದಶಕಗಳ ಕಾಲ ಬೈಕುಗಳ ಜಗತ್ತಿನ ಪಾರುಪತ್ಯಕ್ಕೆ ನಾಂದಿ ಹಾಡಿತ್ತು.

1930 ಮತ್ತು 40ರ ದಶಕಗಳಲ್ಲಿ ಮಹಾಯುುದ್ದದ ಸಮಯದಲ್ಲಿ ಆರ‍್ತಿಕ ಸಂದರ‍್ಬಕ್ಕನುಸಾರವಾಗಿ ಹೊಸ ಬೈಕುಗಳನ್ನು ಬಿಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸಿದ ಜಾವಾ, 50ರ ದಶಕದ ಹೊತ್ತಿಗೆ ಅಗ್ರ ಬೈಕು ತಯಾರಕನಾಗಿ ಹೊರಹೊಮ್ಮಿತ್ತು. ನಂತರದ ದಶಕಗಳಲ್ಲೂ ಸಹ ಉನ್ನತ ಶ್ರೇಣಿಯ ಬೈಕುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು ತನ್ನ ಗ್ರಾಹಕರ ಮೆಚ್ಚುಗೆ ಮತ್ತು ಹೆಮ್ಮೆಗೆ ಪಾತ್ರವಾಗಿತ್ತು. 120 ಕ್ಕೂ ಹೆಚ್ಚು ದೇಶಗಳಿಗೆ ಬೈಕು ರಪ್ತು ಮಾಡುತ್ತಿದ್ದ ಜಾವಾದ ಜನಪ್ರಿಯ ಬೈಕುಗಳಾದ ‘ಜಾವಾ ಪೆರಾಕ್ 340‘ ಮತ್ತು ‘ಜಾವಾ 350 ಕಾಲಿಪೋರ‍್ನಿಯನ್‘ ಬೈಕುಗಳು ಕಾಲಿಪೋರ‍್ನಿಯಾದ ಬೀಚುಗಳಿಂದ ಹಿಡಿದು ನ್ಯೂಜಿಲೆಂಡಿನವರೆಗೂ ಕಾಣಸಿಗುತ್ತಿದ್ದವು. 90ರ ದಶಕದಲ್ಲಿ ಪತನ ಕಂಡ ಕಂಪನಿ 1997ರಲ್ಲಿ ‘ಜಾವಾ ಮೋಟೋ’ ಹೆಸರಿನಲ್ಲಿ ಪುನರುತ್ತಾನಗೊಂಡಿತಾದರೂ ಮೊದಲಿನಂತೆ ಮಾರುಕಟ್ಟೆಯನ್ನು ಪಡೆಯಲು ಯಶಸ್ವಿಯಾಗಿಲ್ಲ.

ಬಾರತಕ್ಕೆ ಬಂದ ‘ಐಡಿಯಲ್ ಜಾವಾ’

ಬಾರತಕ್ಕೆ ಜಾವಾ ಲಗ್ಗೆ ಇಟ್ಟಿದ್ದು 1960ರಲ್ಲಿ ‘ಐಡಿಯಲ್ ಜಾವಾ‘ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಾಗ. ಬಾರತದಲ್ಲಿ ಸ್ಕೂಟರ್ ಮತ್ತು ಬುಲೆಟ್‌ಗಳ ನಡುವೆ ಸ್ಪರ‍್ದಿಸಬೇಕಿದ್ದ ಜಾವಾ, ‘ಪಾರೆವರ್ ಬೈಕ್ ಪಾರೆವರ್ ವಾಲ್ಯೂ‘ ಅನ್ನುವ ಗೋಶಣೆಯೊಂದಿಗೆ ಮೊದಲಿಗೆ ‘ಜಾವಾ 250 ಟೈಪ್ ಎ‘ ಬೈಕನ್ನು ಬಿಡುಗಡೆ ಮಾಡಿತು. ಮೈಸೂರಿನ ಐಡಿಯಲ್ ಜಾವಾ  ಕಾರ‍್ಕಾನೆಯಲ್ಲಿ ತಯಾರಾದ 2 ಸ್ಟ್ರೋಕ್ ಇಂಜಿನ್ನಿನ ಬೈಕು, ಜೋಡಿ ಹೊಗೆಗೊಳವೆಗಳೊಂದಿಗೆ(exhaust pipe) ನೋಡುಗರ ಕಣ್ಣು ಕುಕ್ಕಿಸುವಂತಿತ್ತು. ಜಾವಾ ಯುವಕರ ಅಚ್ಚುಮೆಚ್ಚಿನ ಬೈಕ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. ದಕ್ಶಿಣ ಬಾರತದ ಮಾರುಕಟ್ಟೆಯನ್ನು ಬೇಗನೆ ಆಕ್ರಮಿಸಿದ ಜಾವಾ ಬೈಕುಗಳ ಹಲವು ಮಾದರಿಗಳು ಪ್ರಚಲಿತವಾಗಿದ್ದವು.

ರೋಡಿಗಿಳಿದ ಯೆಜ್ಡಿ

1973ರಲ್ಲಿ ಜಾವಾ ಮತ್ತು ಐಡಿಯಲ್ ಜಾವಾ ಕಂಪನಿಗಳ ನಡುವಿನ ಒಡಂಬಡಿಕೆ ಕೊನೆಗೊಂಡ ಮೇಲೆ, ಐಡಿಯಲ್ ಜಾವಾ ಕಂಪನಿಯ ಚೇರ‍್ಮನ್ನರಾದ ಪರೂಕ್ ಇರಾನಿಯವರು ಇರಾನ್ ಮರುಬೂಮಿಯ ‘ಯಜಡ್’ ಗ್ರಾಮದ ‘ಯಜಡೀ’ ಸಮುದಾಯದ ತಮ್ಮ ಪೂರ‍್ವಜರ ನೆನಪಿನಲ್ಲಿ ಕಂಪನಿಗೆ ‘ಯೆಜ್ಡಿ‘ ಎಂದು ಮರುನಾಮಕರಣ ಮಾಡಿದರು. ಯೆಜ್ಡಿ ಕಂಪನಿ ಮುಂದೆ ಆಯಿಲ್‌ಕಿಂಗ್, ರೋಡ್‌ಕಿಂಗ್, 250 ಸಿಎಲ್-2, 350 ಟ್ವಿನ್, 250 ಡಿಲಕ್ಸ್, 250 ಕ್ಲಾಸಿಕ್, 250 ಮೊನಾರ‍್ಚ್, 175 ಮೊದಲಾದ ಹತ್ತು ಹಲವಾರು ಯಶಸ್ವೀ ಮಾದರಿಗಳನ್ನು ತಯಾರಿಸಿತು. ಯೆಜ್ಡಿ 50 ಜೆಟ್ ಮತ್ತು 60 ಕೋಲ್ಟ್ ಮೊದಲಾದ ಮೊಪೆಡ್ ಮಾದರಿಯ ವಾಹನಗಳೂ ಸಹ ಐಡಿಯಲ್ ಜಾವಾ ಕಾರ‍್ಕಾನೆಯಲ್ಲಿ ತಯಾರಿಸಲ್ಪಟ್ಟು ದೇಶದ ಮೂಲೆ ಮೂಲೆಗಳಲ್ಲಿ ಓಡಾಡಿದವು. ದ್ರುಡತೆಯ ಪ್ರತೀಕವೆಂಬಂತಿದ್ದ ರೋಡ್‌ಕಿಂಗ್ ಮತ್ತಿತರ ಯೆಜ್ಡಿ ಮಾದರಿಗಳು ಅದೆಶ್ಟೋ ರ‍್ಯಾಲಿ-ರೇಸುಗಳಲ್ಲಿ ಮಾಲೀಕರಿಗೆ ವಿಜಯ ತಂದುಕೊಟ್ಟವು.

90 ರ ದಶಕದಲ್ಲಿ ಹೋಂಡಾ ಮತ್ತು ಯಮಹಾ ಹೊರತಂದ 4-ಸ್ಟ್ರೋಕ್, 100 ಸಿಸಿ ಇಂಜಿನ್ ಬೈಕುಗಳು ಹೆಚ್ಚು ಶಕ್ತಿಶಾಲಿ ಮತ್ತು ಇಂದನ ಕ್ಶಮತೆಯುಳ್ಳವೂ ಆಗಿದ್ದರಿಂದ ಯೆಜ್ಡಿಯ ಬೈಕುಗಳು ಹೊಡೆತ ತಿನ್ನಬೇಕಾಯಿತು. ಯೆಜ್ಡಿಯ ಇಂಜಿನೀಯರುಗಳು ಹೊಸ ಸ್ಪರ‍್ದಾತ್ಮಕ ಮಾದರಿಗಳನ್ನು ವಿನ್ಯಾಸಗೊಳಿಸಿದ್ದರಾದರೂ ಇನ್ನೂ ಜನಪ್ರಿಯವಾಗಿಯೇ ಇದ್ದ 175, ಮೊನಾರ‍್ಚ್ ಡಿಲಕ್ಸ್ ಮತ್ತು ರೋಡ್‌ಕಿಂಗ್‌ಗಳು ತಯಾರಿಕೆಯಾಗುತ್ತಿದ್ದವು. ಈ ನಡುವೆ ಕಾರ‍್ಮಿಕ ಸಂಬಂದಿ ತೊಡಕುಗಳಿಂದ ಹೊಸ ಮಾದರಿಗಳು ಬಿಡುಗಡೆ ಕಾಣುವ ಮೊದಲೇ 1996 ರಲ್ಲಿ ಕಾರ‍್ಕಾನೆ ಮುಚ್ಚಿಹೋಯಿತು.

1997 ರಲ್ಲಿ ಪುನರುತ್ತಾನಗೊಂಡ ಅಂತರ‍್ರಾಶ್ಟ್ರೀಯ ‘ಜಾವಾ ಮೋಟೋ‘ ಕಂಪನಿ ಬಾರತದ ಐಡಿಯಲ್ ಜಾವಾ ಪಾಕ್ಟರಿಯನ್ನು ಸಹ ಕೊಂಡುಕೊಂಡು, ಹೊಸ ಮಾದರಿಗಳನ್ನು ಬಿಡುಗಡೆ ಮಾಡಿತಾದರೂ ಮೊದಲಿನ ಜಾವಾ ಯೆಜ್ಡಿಯ ದಿನಗಳನ್ನು ಮರುಕಳಿಸಲು ಯಶಸ್ವಿಯಾಗಲಿಲ್ಲ‌. ಸದ್ರುಡವಾದ ಪೌರುಶಪರಾಕ್ರಮಿಗಳ ನಿಶ್ಟಾವಂತ ವಾಹನಗಳಂತಿದ್ದ ಯೆಜ್ಡಿ ಬೈಕುಗಳಿಗೆ ಬೈಕು ಪ್ರಿಯ ಆರಾದಕರು ಅಂದು ಇದ್ದರು ಇಂದಿಗೂ ಇದ್ದಾರೆ.

ನಮ್ಮ ಯೆಜ್ಡಿಯ ನೆನಪು

ನನ್ನ ಅಪ್ಪ ಜೂನಿಯರ್ ಇಂಜಿನೀಯರ್ ಆಗಿ ನೇಮಕಗೊಂಡ ಎರಡನೇ ವರ‍್ಶ, 1985ರಲ್ಲಿ ಯೆಜ್ಡಿ 250 ಡಿಲಕ್ಸ್‌ಅನ್ನು ಕೊಂಡಿದ್ದರು. ಉಡುಪಿ-ಮಂಗಳೂರಿನಲ್ಲಿ 4 ವರ‍್ಶ ಬ್ಯಾಚಿಲರ‍್ರಾಗಿದ್ದಾಗ ಅಪ್ಪನಿಗೆ ಅವರು ಬಹಳ ಇಶ್ಟಪಟ್ಟು ಕೊಂಡಿದ್ದ ಯೆಜ್ಡಿ ಸಾತ್ ನೀಡಿತ್ತು. ಮದುಗಿರಿಯಿಂದ ರಾತ್ರೋ ರಾತ್ರಿ ಬೈಕಿನಲ್ಲೇ ಆಗುಂಬೆಯ ಮೂಲಕ ಉಡುಪಿಯವರೆಗೆ ಸ್ನೇಹಿತನ ಮದುವೆಗೆ ಹಾಜರಾಗಲು ಒಬ್ಬನೇ ಹೋಗಿದ್ದನ್ನು ಒಮ್ಮೊಮ್ಮೆ ಹೆಮ್ಮಯಿಂದ ನೆನೆಯುತ್ತಾರೆ. ಯುವಕನಾಗಿದ್ದಾಗ ಸಾತ್ ಕೊಟ್ಟ ಸದ್ರುಡ ಯೆಜ್ಡಿ , ಬರು ಬರುತ್ತ ಮುಂದೆ ಸಾಗಿದ ದೂರಕ್ಕಿಂತ ಕುಡಿದ ಪೆಟ್ರೋಲೇ ಹೆಚ್ಚಾಗುತ್ತ ಬಂದಿತ್ತು. ಆಗಾಗ ಶುರು ಆಗಲು ಒಲ್ಲೆ ಎನ್ನುತಿದ್ದ ಯೆಜ್ಡಿಯ ಕಿಕ್ಕರನ್ನು ನಿಮಿಶಗಟ್ಟಲೆ ಹೊಡೆದ ಮೇಲೆ, ಗಮಗಮಿಸುವ ಕಪ್ಪು ಹೊಗೆಯನ್ನು ಹೊರಕೆಮ್ಮಿ ಕೊನೆಗೂ ಸವಾರಿಗೆ ರೆಡಿಯಾಗುತ್ತಿತ್ತು. ಸ್ಪಾರ‍್ಕ್ ಪ್ಲಗ್ಗು, ಸೀಟ್ ಕವರ‍್ರು ಹೀಗೆ ಆರು ತಿಂಗಳಿಗೊಮ್ಮೆ ಮಾಡಲೇಬೇಕಾದ ಉಪಚಾರ ಇತ್ಯಾದಿ ಕರ‍್ಚುಗಳೆಶ್ಟೇ ಇದ್ದರೂ ಅಪ್ಪನ ಮೊದಲ ಸಂಗಾತಿಯಾದ ಯೆಜ್ಡಿ 2006 ರ ವರೆಗೂ ನಮ್ಮ ಕುಟುಂಬದ ಸದಸ್ಯನಾಗೇ ಇತ್ತು. ಅಪ್ಪನ ಯೆಜ್ಡಿಯ ಟ್ಯಾಂಕಿನ ಮೇಲೆ ಕೂತು, ಮೆತ್ತನೆಯ ಹೊಟ್ಟೆಗೆ ಒರಗಿ ರೌಂಡು ಹೋಗುವಾಗ ಗಾಳಿಯ ಸವಿಯೋದಂದ್ರೆ ಅದೇನೋ ಹೇಳತೀರದ ಮಜಾ ಇರುತಿತ್ತು. ಕನ್ನಂಬಾಡಿ ಕಟ್ಟೆಯ ಮೇಲೆ ನಿಶೇದ ಹೇರುವ ಮೊದಲು ಹಲವು ಬಾರಿ ನಾವು ಮತ್ತು ನಮ್ಮ ಯೆಜ್ಡಿಯ ಸವಾರಿ ನಡೆದಿತ್ತು.

ಯೆಜ್ಡಿಯೊಂದಿಗಿನ ಒಡನಾಟವೋ ಏನೋ ಅಪ್ಪನಿಗೆ ಸೊಂಟನೋವಿನ ತೊಂದರೆ ಜಾಸ್ತಿಯಾಗತೊಡಗಿತ್ತು. ಆಗ ಯೆಜ್ಡಿಯ ಕೊನೆಯ ಉಪಚಾರಕ್ಕೆಂದು 5000 ರುಪಾಯಿಗಳನ್ನು ಕರ‍್ಚು ಮಾಡಿದಾಗ ಅದಕ್ಕೆ ಕುಶಿಯಾಗಿತ್ತೇನೋ. ಕೆಲವೇ ದಿನಗಳಲ್ಲಿ ಮನೆ ಬಿಡಬೇಕೆಂದು ಗೊತ್ತಿರಲಿಲ್ಲ‌ ಅದಕ್ಕೆ ಪಾಪ. ಬೇರೆಯವರ ಮನೆ ಸೇರಿದಾಗ ಅದೆಶ್ಟು ಬಾರಿ ದುಕ್ಕಿಸಿತ್ತೋ ನಮ್ಮ ಯೆಜ್ಡಿ. ಆದರೆ ಅದನ್ನು ಮಾರಿದ್ದು ಮಾಡಿದ ಕರ‍್ಚಿಗಿಂತ ಕಡಿಮೆ ಬೆಲೆಗೆ ಅಂತ ನೆನಸಿಕೊಂಡಾಗ ನನಗೆ ಆಗುವ ಹೊಟ್ಟೆ ಉರಿ ಆ ಯೆಜ್ಡಿಗೆ ಸಮಾದಾನ ತರುತ್ತಿತ್ತು ಅಂತ ಒಮ್ಮೊಮ್ಮೆ ಅನಿಸುತ್ತದೆ.

ಅದು ಮೊಬೈಲುಗಳಿಲ್ಲದ ಕಾಲ, ಮೆಸೇಜು ಕರೆಗಳೂ ಇಂದಿನಶ್ಟು ಸಲೀಸಿರಲಿಲ್ಲ. ಒಮ್ಮೊಮ್ಮೆ ರಾತ್ರಿ ಹೊತ್ತು ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಹೊತ್ತಾದರೂ ಅಪ್ಪ ಬರಲಿಲ್ಲವೆಂದು ಆತಂಕದಿಂದ ಕಾಯುತ್ತಿದ್ದಾಗ, ದೂರದಿಂದ ಅಪ್ಪನ ಆಗಮನದ ಗೋಶಣೆ ಮಾಡುತ್ತಿದ್ದ ಯೆಜ್ಡಿಯ ಎಂಜಿನ್ನಿನ ಡುಗುಡುಗು ಗರ‍್ಜನೆ ನೆಮ್ಮದಿ ತರುತ್ತಿತ್ತು. ಬೇರೆ ಯಾವುದೇ ಬೈಕಿಗೂ ಆ ವಿಶಿಶ್ಟ ಸದ್ದು ಮಾಡುವ ಸಾಮರ‍್ತ್ಯ ಇರಲಿಲ್ಲ. ಸಿಗಾರ್ ಪೈಪಿನಂತಿದ್ದ ಹೊಗೆಗೊಳವೆಗಳು, ಕಡ್ಡಿಗಾಲಿಗಳು (spoke wheels), ಟಂಗ್ಸ್ಟನ್ ಪಿಲಮೆಂಟಿನ ಹಳದಿ ಬಣ್ಣದ ಹೆಡ್ ಲ್ಯಾಂಪು, ಕಪ್ಪು ಬಣ್ಣದ ಟ್ಯಾಂಕು ಮತ್ತು ಕರಿಯ ಕಬ್ಬಿಣದ ಚಾಸಿಯನ್ನೊಳಗೊಂಡ ಕಟ್ಟು ಮಸ್ತಾದ ಆಳಿನಂತಿದ್ದ ನಮ್ಮ ಯೆಜ್ಡಿಯ ನೆನಪು ಆಗಾಗ ಬರುತ್ತದೆ. ಒಳಗಡೆ ನಿಲ್ಲಿಸುವಾಗ ಅಂಗಳದ ತುಂಬ ತುಂಬುತ್ತಿದ್ದ ಪೆಟ್ರೋಲಿನ ಗಮಗಮ ನೀಡುತ್ತಿದ್ದ ಮುದ, ಆ ಸಂಬ್ರಮ ಕ್ಶಣಗಳು ಮನದಲ್ಲಿ ಮರುಕಳಿಸಿದಾಗ ನಮ್ಮ ಹಳೇ ಯೆಜ್ಡಿಯ ನೆನಪು ತುಂಬಿ ಬರುತ್ತದೆ. ಕಳೆದು ಹೋದ ಬಾಲ್ಯದೊಂದಿಗೆ ಯೆಜ್ಡಿ ಮತ್ತು ಅದರ ಗತಕಾಲದ ವೈಬವದ ಸಂತೋಶದ ದಿನಗಳು ಇಂದು ಬರಿಯ ನೆನಪಾಗಿ ಉಳಿದಿವೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, thebetterindia.comyoutube.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. grsprasanna says:

    ಬಹಳ ಸುಂದರ ಲೇಖನ. ತಿಳಿಯದ ವಿಷಯಗಳ ಅರಿವಾಯಿತು

  2. Sachin.H.J Jayanna says:

    ಧನ್ಯವಾದಗಳು ಪ್ರಸನ್ನ ಅವರೇ, ಮಾಹಿತಿ ಸೆಲೆಯಲ್ಲಿ ಒಂದು ಯೂ ಟ್ಯೂಬ್ ಲಿಂಕ್ ಇದೆ. ಆ ವೀಡಿಯೋ ಶುರುವಿನಲ್ಲಿ ಇಂಜಿನ್ ಸದ್ದು ಬರುತ್ತದೆ. ಯೆಜ್ಡಿ ಬೈಕಿನ ಸೌಂಡು ಹೆಂಗೆ ಬರುತ್ತೆ ಅಂತ ಗೊತ್ತಾಗತ್ತೆ 🙂

ಅನಿಸಿಕೆ ಬರೆಯಿರಿ: