ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್
– ಕೆ.ವಿ.ಶಶಿದರ.
ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ ಕುರುಹಾಗಿ ಅಸಾಮಾನ್ಯ ವಿಗ್ರಹಗಳಾದ ಶ್ರವಣಬೆಳಗೊಳದ ಗೊಮ್ಮಟ, ಚೀನಾದಲ್ಲಿನ ಅತಿ ಎತ್ತರದ ಬುದ್ದನ ವಿಗ್ರಹಗಳು ತಲೆಯೆತ್ತಿವೆ. ಅದಕ್ಕೆ ವ್ಯತಿರಿಕ್ತವಾಗಿ ಅಕ್ಕಿ ಕಾಳಿನ ಮೇಲೆ ತಾಜ್ ಮಹಲ್ ಬರೆದಿರುವುದು, ಬೆಂಕಿ ಕಡ್ಡಿ ಉಪಯೋಗಿಸಿ ನಿರ‍್ಮಿಸಿರುವ ಐಪೆಲ್ ಟವರ್, ಹಲವು ಮಿನಿಯೇಚರ್ ಸ್ಮಾರಕಗಳು, ಬ್ರುಹದಾಕಾರದ ಮರಗಳನ್ನು ಪುಟ್ಟ ಕುಂಡಗಳಲ್ಲಿ ಬೆಳೆಯುವುದು ಇಂತಹ ಹಲವು ಉದಾರಹಣೆಗಳಿವೆ.
ಪುಟ್ಟ ಪುಟ್ಟ ಕುಂಡದಲ್ಲಿ ದೊಡ್ಡ ಮರಗಳ ಪ್ರತಿಕ್ರುತಿಯನ್ನು ಬೆಳೆಯುವ ಈ ಕಲಾವಂತಿಕೆಯ ಹವ್ಯಾಸ ಪ್ರಾರಂಬವಾಗಿದ್ದು ಚೀನಾದ ತೋಟಗಾರಿಕಾ ಪದ್ದತಿಯಿಂದ. ಜಪಾನಿನ ಜೆನ್ ಸನ್ಯಾಸಿಗಳು ಇದನ್ನು ಮತ್ತೆ ಅಬಿವ್ರುದ್ದಿ ಪಡಿಸಿದರು ಎನ್ನುತ್ತದೆ ಇತಿಹಾಸ. ಇಂತಹ ಚಿಕಣಿ ಮರಗಳನ್ನು ಬೋನ್ಸಾಯಿ ಮರ ಎನ್ನುತ್ತಾರೆ.
ಏನಿದು ಬೋನ್ಸಾಯಿ ಮರ?
‘ಬೋನ್ಸಾಯಿ‘ ಅಪ್ಪಟ ಜಪಾನಿ ಬಾಶೆಯ ಪದ. ಇದರ ಅರ‍್ತ ತಟ್ಟೆಯಲ್ಲಿ ಗಿಡ ನೆಡುವುದು (tray planting) ಎಂದು. ಸಾವಿರಾರು ವರ‍್ಶಗಳಿಂದಲೂ ಈ ಕಲೆ ಚಾಲ್ತಿಯಲ್ಲಿದೆ. ಬೋನ್ಸಾಯಿ ಮರವನ್ನು ಬೆಳೆಯುವ ಮೂಲ ಉದ್ದೇಶ ನೈಸರ‍್ಗಿಕವಾಗಿ ಬ್ರುಹದಾಕಾರವಾಗಿರುವ ಮರವನ್ನು ಚಿಕಣಿ ರೂಪದಲ್ಲಿ ಪ್ರತಿನಿದಿಸುವುದಾಗಿದೆ. ಇದು ಮರದ ತಳಿಯನ್ನು ಕುಬ್ಜ ರೂಪಗೊಳಿಸುವುದಲ್ಲ. ವಾಸ್ತವವಾಗಿ ಯಾವುದೇ ಮರವನ್ನು ಬೋನ್ಸಾಯಿ ರೂಪದಲ್ಲಿ ಬೆಳೆಯಬಹುದು ಎಂಬುದು ಅದರ ಪ್ರವರ‍್ತಕರ ಅಬಿಪ್ರಾಯ. ದೊಡ್ಡ ದೊಡ್ಡ ಮರಗಳು ಬೆಳೆಯಲು ಅವಶ್ಯವಿರುವ ವಾತಾವರಣ ಬೋನ್ಸಾಯಿ ಮರ ಬೆಳೆಯಲು ಸಹ ಬೇಕು.
ಬೋನ್ಸಾಯಿ ಒಂದು ಅಪರೂಪದ ಮಾನವ ಪ್ರಯತ್ನ
ಬೋನ್ಸಾಯಿ ವಿದಾನದಲ್ಲಿ ಬೆಳೆದ ಚಿಕಣಿ ಸಸ್ಯದಲ್ಲಿ ಬವ್ಯವಾದ ಜೀವನ ಇದೆ. ಇದು ಒಂದು ರೀತಿಯ ಕಾಸ್ಮಿಕ್ ಸ್ರುಶ್ಟಿ. ತನ್ನ ತನವನ್ನು ಕಳೆದುಕೊಳ್ಳದೆ ಲಬ್ಯವಿರುವ ಅತಿ ಕಡಿಮೆ ಜಾಗದಲ್ಲಿ ದೊಡ್ಡ ಮರದ ಸಕಲ ಚರ‍್ಯೆಯನ್ನು ಹೊಂದಿ ಬೆಳೆಯುವ ಈ ಮರಗಳು ಮಾನವನ ಅತಿ ಆಸೆಗೆ, ದುರಾಸೆಗೆ ಹಿಡಿದ ಕನ್ನಡಿಯಲ್ಲದೆ ಮತ್ತೇನು? ಇರುವುದರಲ್ಲೇ ಹೊಂದಿಕೊಂಡು, ತನ್ನತನವನ್ನು ಕಳೆದು ಕೊಳ್ಳದೆ ಬಾಳಬಹುದು ಎಂಬ ಸತ್ಯವನ್ನು ಇಡೀ ಮಾನವ ಕುಲಕ್ಕೆ ನಿಶ್ಚಲ, ಮೂಕ ವ್ರುಕ್ಶ ತೋರಿಸಿಕೊಟ್ಟ ಅತ್ಯುನ್ನತ ಪಾಟ ಇದು!
ಮೈಸೂರಿನಲ್ಲಿದೆ ಬೋನ್ಸಾಯಿ ಉದ್ಯಾನವನ
ಮೈಸೂರು ಪ್ರಶಾಂತ ವಾತಾವರಣದ ಸುಂದರ ನಗರ. ವಿಶಾಲವಾದ ರಸ್ತೆಗಳು, ಇಕ್ಕೆಲಗಳಲ್ಲಿ ತಂಪೀಯುವ ಮರಗಿಡಗಳು, ಕಣ್ಮನ ಸೆಳೆಯುವ ಅರಮನೆಗಳು ಇದರ ಮೆರುಗನ್ನು ಮತ್ತೂ ಹೆಚ್ಚಿಸಿದೆ. ದೊಡ್ಡ ದೊಡ್ಡ ಮರಗಳ ಪುಟ್ಟ ಪುಟ್ಟ ಆಕ್ರುತಿಗಳನ್ನು ಹೊಂದಿರುವ ಉದ್ಯಾನವನ ಮೈಸೂರು ನಗರದಲ್ಲಿದೆ. ಅದೇ ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್. ಮೈಸೂರಿಗೆ ಪ್ರವಾಸ ಬಂದ ಯಾರಾದರೂ ಈ ಬೋನ್ಸಾಯಿ ಗಾರ‍್ಡನ್ ನೋಡದೆ ಹಿಂದಿರುಗಿದರೆ ಅವರು ಮೈಸೂರು ನಗರವನ್ನು ಪೂರ‍್ಣ ನೋಡಿಲ್ಲ ಎಂದೇ ಅರ‍್ತ. ಅಂತಹ ಉತ್ಕ್ರುಶ್ಟ ಮರಗಳ ಸಂಗ್ರಹ ಹೊಂದಿರುವ ಏಕೈಕ ಉದ್ಯಾನವನ ಇದು.
ಈ ಉದ್ಯಾನವನದಲ್ಲಿ ದೇಶ ವಿದೇಶಗಳಲ್ಲಿ ಬೆಳೆಯುವ ಬೋನ್ಸಾಯಿ ಮರಗಳ ಅದ್ಬುತ ಸಂಗ್ರಹವಿದೆ. ಇದಿರುವುದು ಪವಿತ್ರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸ್ತಾಪಿಸಿದ ಅವದೂತ ದತ್ತ ಪೀಟದ ಒಂದು ಬಾಗದಲ್ಲಿ. ಪ್ರಕ್ರುತಿ ಪ್ರೇಮಿಗಳ ನೆಚ್ಚಿನ ತಾಣ. ಶೈಕ್ಶಣಿಕ ಪ್ರವಾಸಕ್ಕೂ ಉತ್ತಮ ಸ್ತಳ ಈ ಉದ್ಯಾನವನ.
ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್‍ನ ಇತಿಹಾಸವನ್ನು ಪರಿಶೀಲಿಸಿದಾಗ ದತ್ತ ಪೀಟದ ಸ್ವಾಮೀಜಿ ಇದನ್ನು ತಮ್ಮ ಮೈಸೂರು ಆಶ್ರಮದ ಒಂದು ಬಾಗವಾಗಿ 1986ರಲ್ಲಿ ಸ್ತಾಪಿಸಿದರು. ಸ್ವಾಮೀಜಿಗಳು ಇದನ್ನು ಒಂದು ಅತೀಂದ್ರಿಯ ಉದ್ಯಮವಾಗಿ ಕಂಡರು.
ಅತಿ ಸಣ್ಣ ಯೋಜನೆಯಾಗಿ ಪ್ರಾರಂಬವಾದ ಬೋನ್ಸಾಯಿ ಉದ್ಯಾನವನ ವೇಗವಾಗಿ ಬೆಳೆದು ಇಂದು ನಾಲ್ಕು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಂದು ಇದು ಆಶ್ರಮದ ಪ್ರಮುಕ ಆಕರ‍್ಶಣೆಯೂ ಹೌದು. ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್‍ನ ಪ್ರದಾನ ಆಕರ‍್ಶಣೆಯೆಂದರೆ ಇಲ್ಲಿರುವ ನೂರಾರು ವಿವಿದ ಚಿಕಣಿ ಮರಗಳು. ಎಲ್ಲವನ್ನು ಮನಸೆಳೆಯುವಂತೆ ಜೋಡಿಸಲಾಗಿದೆ. ಆದ್ಯಾತ್ಮಿಕ ನಂಬಿಕೆಗೆ ಅನುಗುಣವಾಗಿ ಸ್ವಾಮೀಜಿ ಈ ಉದ್ಯಾನವನವನ್ನು ಬೆಳಸಿದ್ದಾರೆ.
ಬಾರತೀಯ ಸಂಪ್ರದಾಯದ ಪ್ರತಿಬಿಂಬಿ ಕಿಶ್ಕಿಂದಾ ಗಾರ‍್ಡನ್
ಬೋನ್ಸಾಯಿ ಮರಗಳನ್ನು ಜೋಡಣೆ ಮಾಡಿರುವ ರೀತಿ ಗಮನಿಸಿದರೆ ಅದು ಬಾರತೀಯ ಸಂಪ್ರದಾಯನ್ನು ಪ್ರತಿಬಿಂಬಿಸುವಂತಿದೆ. ರಾಶಿ ವನದ ಗುಂಪಿನಲ್ಲಿ ಬಾರತೀಯ ರಾಶಿಚಕ್ರ ವ್ಯವಸ್ತೆಯೊಂದಿಗೆ ಸಂಪರ‍್ಕ ಹೊಂದಿರುವ ಸಸ್ಯಗಳು ಸೇರಿವೆ. ರಾಗ ವನದಲ್ಲಿ ಬಾರತದ ಶಾಸ್ತ್ರೀಯ ಸಂಗೀತದೊಂದಿಗೆ ಸಂಬಂದಿಸಿದ ಸಸ್ಯಗಳು ಒಳಗೊಂಡಿದೆ. ಮುಂದಿನದು ನಕ್ಶತ್ರ ವನ, ಬಾರತೀಯ ಸಾಂಪ್ರದಾಯಿಕ ಜೋತಿಶ್ಯ ಶಾಸ್ತ್ರದಲ್ಲಿನ ಇಪ್ಪತ್ತೇಳು ನಕ್ಶತ್ರಗಳು ಇಲ್ಲಿ ಪ್ರತಿನಿದಿಸಲ್ಪಟ್ಟಿದೆ. ಪಂಚಾಯತನ ವನದಲ್ಲಿ ಮಾತ್ರುದೇವತೆಯ ಪರಿಕಲ್ಪನೆಗೆ ನಿಕಟವಾದ ಐದು ಸಸ್ಯಗಳ ಉದ್ಯಾನವಿದೆ. ಅಂತಿಮವಾಗಿ ಕಾಣುವುದು ಸಪ್ತರ‍್ಶಿ ವನ. ಇದರಲ್ಲಿ ಬಾರತೀಯ ಸಪ್ತ (ಏಳು) ರುಶಿಗಳಿಗೆ ಸಂಬಂದಿಸಿದ ಏಳು ಸಸ್ಯಗಳಿವೆ.
ಈ ರೀತಿಯ ಗುಂಪುಗಳ ಜೊತೆಗೆ ಇಲ್ಲಿ ಜಿಂಕೆ ಪಾರ‍್ಕ್ ಸಹ ಇದೆ. ದೊಡ್ಡ ಮಣ್ಣಿನ ಸ್ತೂಪವಿದ್ದು ಪ್ರತಿದಿನ ಇದಕ್ಕೆ ಪೂಜೆ ಪುನಸ್ಕಾರ ನಡೆಯುತ್ತದೆ.
ದೇಶ-ವಿದೇಶಗಳಿಂದ ತಂದ ಪುಟಾಣಿ ಗಿಡಗಳು ಇಲ್ಲಿವೆ
ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್‍ನಲ್ಲಿ ನಾಲ್ಕುನೂರಾ ಐವತ್ತಕ್ಕೂ ಹೆಚ್ಚು ಪುಟಾಣಿ ಮರಗಳಿವೆ. ಎಲ್ಲವೂ ಇಲ್ಲಿಯೇ ಬೆಳಸಿದ್ದಲ್ಲ. ಜಗತ್ತಿನ ವಿವಿದ ದೇಶದಿಂದ ತಂದ ಹಲವು ಚಿಕಣಿ ವ್ರುಕ್ಶಗಳು ಇದರಲ್ಲಿ ಸೇರಿದೆ. ಬ್ರೆಜಿಲ್‍ನ ಮಳೆ ಮರ, ಬೋಗನ್‍ವಿಲ್ಲೇ, ಬಾರತದ ಯೂಕ್ಲಿಪ್ಟಸ್ ಅರಣ್ಯ, ಬಗೇಶ್ರೀ, ಸಾಗರ್ ಡಿವಿಡಿವಿ, ಇಂಡೋನೇಶ್ಯಾದ ಅನಕಾರ‍್ಡಿಯಮ್ ಆಕ್ಸಿಡೆನ್ ಟೇಲ್, ಆಸ್ಟ್ರೇಲಿಯಾದ ಪಿಕಸ್ ಮೈಕ್ರೋಕಾರ‍್ಪಾ, ಚೀನಾದ ಜಿಯೋಮಿಟ್ರಿ ಮರ ಇವೇ ಮುಂತಾದ ಚಿಕಣಿ ಮರಗಳನ್ನು ಇಲ್ಲಿ ಕಾಣಬಹುದು.
ಇಲ್ಲಿರುವ ಹಲವಾರು ಮರಗಳನ್ನು ಪೀಟದ ಸ್ವಾಮಿಗಳು ಔಶದ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಉದ್ಯಾನವನದಲ್ಲಿ ಅತ್ಯಂತ ಉಪಯುಕ್ತ ಮರಗಳಿದೆ. ಅವುಗಳಲ್ಲಿ ಒಂದು ವರ‍್ಶದಿಂದ ಎರಡು ನೂರು ವರ‍್ಶ ಹಳೆಯ ಮರಗಳೂ ಸೇರಿವೆ.
ಉದ್ಯಾನವನಕ್ಕೆ ಕಿಶ್ಕಿಂದಾ ಎಂಬ ಹೆಸರು ಬರಲು ಕಾರಣ
ಈ ಉದ್ಯಾನವನಕ್ಕೆ ಕಿಶ್ಕಿಂದಾ ಎಂಬ ಹೆಸರು ಬರಲು ಎರಡು ಕಾರಣಗಳನ್ನು ಉಲ್ಲೇಕಿಸಬಹುದು. ಕಿಶ್ಕಿಂದಾ ವನ ಸುಗ್ರೀವನ ತಾಯಿಯ ಸಹೋದರ ನಿರ‍್ಮಿಸಿದ್ದ ಎಂದು ಪುರಾಣಗಳಲ್ಲಿ ಉಲ್ಲೇಕವಿದೆ. ಇದು ಒಂದು ಪರ‍್ವತದ ಹೆಸರೂ ಹೌದು. ಕಿಶ್ಕಿಂದಾ ಎಂದರೆ ಓಣಿ ಎನ್ನುವ ಅರ‍್ತ ಸಹ ಇದೆ. ಅತಿ ಚಿಕ್ಕ ಜಾಗದಲ್ಲಿ ಈ ಉದ್ಯಾನವನವನ್ನು ಪ್ರಾರಂಬಿಸಿದ ಹಿನ್ನೆಲೆಯಲ್ಲಿ ಈ ಹೆಸರು ಸೂಕ್ತ ಎನಿಸಿರಬೇಕು.
ಕಿಶ್ಕಿಂದಾ ಮೂಲಿಕಾ ಬೋನ್ಸಾಯಿ ಗಾರ‍್ಡನ್ ಹಿಂದೂ ದೇವತೆಗಳ ಸಣ್ಣ ಸಣ್ಣ ವಿಗ್ರಹಗಳಿಂದ ಅಲಂಕರಿಸಲ್ಪಟ್ಟಿವೆ. ಇದರಲ್ಲಿ ಶ್ರೀರಾಮ, ಸೀತೆ, ಲಕ್ಶ್ಮಣ, ಆಂಜನೇಯ, ದತ್ತಾತ್ರೇಯ, ಲಕ್ಶ್ಮೀನರಸಿಂಹ ಮತ್ತು ವಿನಾಯಕನ ವಿಗ್ರಹಗಳಿವೆ. ಇದರೊಂದಿಗೆ ಜನಾಕರ‍್ಶಣೆಗಾಗಿ ಮೂರು ಬುದ್ದಿವಂತ ಮಂಗಗಳು, ನಗುವ ಬುದ್ದನ ವಿಗ್ರಹ ಸಹ ಇದೆ. ಇಲ್ಲಿ ಒಂದು ಪುಟ್ಟ ಪುಶ್ಕರಣಿ ಇದ್ದು ಇದರಲ್ಲಿ ತೇಲಾಡುವ ಚೆಂಡುಗಳನ್ನು ಅಲಂಕಾರಿಕವಾಗಿ ಇರಿಸಲಾಗಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, karnataka.com, sgslinks.com, puttugoli.in, sgsbonsai.org)
Well written. Informative.