ವಿಶ್ವದ ಮಿನಿಯೇಚರ್ ಸ್ಮಾರಕಗಳು

– ಕೆ.ವಿ.ಶಶಿದರ.

ಸ್ಮಾರಕಗಳ ನಿರ‍್ಮಾಣದಲ್ಲಿ ಅನೇಕಾನೇಕ ವೈವಿದ್ಯತೆಗಳನ್ನು ಕಾಣಬಹುದು. ಒಂದು ಅತಿ ಎತ್ತರದ ಸ್ಮಾರಕವಾದಲ್ಲಿ ಮತ್ತೊಂದು ಅತಿ ಎತ್ತರದ ದುರ‍್ಗಮ ಪ್ರದೇಶದಲ್ಲಿ ಸ್ತಾಪಿಸಿದ್ದಿರಬಹುದು. ಒಂದಕ್ಕಿಂತ ಒಂದು ವಿಬಿನ್ನವಾಗಿ, ಆಕರ‍್ಶಕವಾಗಿ, ಜನಮನ ಸೂರೆಗೊಳ್ಳುವಂತಹ ಸ್ಮಾರಕಗಳು ವಿಶ್ವದಾದ್ಯಂತ ರಾರಾಜಿಸುತ್ತಿವೆ. ಹಲವಾರು ಸ್ಮಾರಕಗಳು ಮಾನವನ ಕಲ್ಪನಾ ಶಕ್ತಿಗೆ, ಯೋಚನಾ ಲಹರಿಗೆ, ಬುದ್ದಿಮತ್ತೆಗೆ, ಕೌಶಲ್ಯತೆಗೆ, ತಾಂತ್ರಿಕತೆಗೆ ಹಿಡಿದ ಕನ್ನಡಿ.

ದೈತ್ಯ ಸ್ಮಾರಕಗಳಲ್ಲಿ 87 ಮೀಟರ್ ಎತ್ತರದ ರಶ್ಯಾದಲ್ಲಿನ ‘ದಿ ಮದರ್ ಕಾಲ್ಸ್’, 92 ಮೀಟರ್ ಎತ್ತರದ ತಾಯ್ಲೆಂಡಿನ ‘ಗ್ರೇಟ್ ಬುದ್ದ’, 100 ಮೀಟರ್ ಎತ್ತರದ ಜಪಾನಿನ ‘ಸೆನ್‍ಡೈ ಡೈಕಾನ್ನಾನ್’ಗಳು ಮುಗಿಲು ಮುಟ್ಟುವಶ್ಟು ಎತ್ತರ ಹೊಂದಿದ್ದು ತಮ್ಮ ವಿಶೇಶತೆಯಿಂದ ವಿಶ್ವದ ಗಮನವನ್ನು ಸೆಳೆದಿವೆ.

ಅತಿ ಪುಟ್ಟ ಸ್ಮಾರಕಗಳೂ ಸಹ ಅದೇ ದಾಟಿಯಲ್ಲಿ ವಿಶ್ವದ ಗಮನ ಸೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಪುಟ್ಟ ಸ್ಮಾರಕಗಳು ತಮ್ಮ ಎತ್ತರವನ್ನು ಆದಶ್ಟು ಕಡಿಮೆಗಿಡಲು ಸ್ಪರ‍್ದೆಗೆ ಇಳಿದಿವೆ. ವಿಶ್ವದಾದ್ಯಂತ ಹರಡಿರುವ 4 ಸೆಂಟಿಮೀಟರ್‍ನಿಂದ 40 ಸೆಂಟಿಮೀಟರ್ ಎತ್ತರದ ಅತಿ ಕುಬ್ಜ ಸ್ಮಾರಕಗಳ ವಿಶೇಶತೆ ಹಾಗೂ ಅದರ ನಿರ‍್ಮಾಣದ ಹಿಂದಿರುವ ಕತೆಯನ್ನು ಕಾಣುವ ಬನ್ನಿ.

‘ದಿ ಮಾನ್ಯುಮೆಂಟ್ ಟು ದ ಪ್ರಾಗ್ ಟ್ರಾವ್ಲರ‍್’ – ರಶ್ಯಾ

ವಿಶ್ವದಲ್ಲೇ ಅತಿ ಪುಟ್ಟ ಸ್ಮಾರಕ ಎಂಬ ಹೆಗ್ಗಳಿಕೆಯನ್ನು ಹಾಗೂ ದಾಕಲೆಯನ್ನು ಹೊಂದಿರುವುದು ‘ದಿ ಮಾನ್ಯುಮೆಂಟ್ ಟು ದ ಪ್ರಾಗ್ ಟ್ರಾವ್ಲರ‍್’. ರಶ್ಯಾದ ಟಾಮ‍ಸ್ಕ್ ನಗರದಲ್ಲಿರುವ ನುಣುಪಾದ ಕಲ್ಲಿನ ಬಂಡೆಯ ಮೇಲೆ ವಿರಾಜಮಾನವಾಗಿರುವ ಕಂಚಿನ ಕಪ್ಪೆಯ ಸ್ಮಾರಕವಿದು. 2013ರಲ್ಲಿ ಟಾಮಸ್ಕ್ ನಗರದ ಒಂದು ಹೋಟೇಲಿನ ಪ್ರವೇಶ ದ್ವಾರದ ಬಳಿ ಸ್ತಾಪನೆಯಾದ ಕಪ್ಪೆಯ ಈ ಕಂಚಿನ ವಿಗ್ರಹ ಕೇವಲ 44 ಮಿಲಿಮೀಟರ್ ಎತ್ತರವಿದೆ. ಇದರ ಸ್ರುಶ್ಟಿಕರ‍್ತ ಓಲೆಗ್ ಕಿಸ್ಲಿಟ್‍‍ಸ್ಕಯ್.

ರಶ್ಯಾದ ಸುಪ್ರಸಿದ್ದ ಲೇಕಕ ವಿ.ಎಮ್. ಗಾರ್‍ಶಿನ್ ಬರೆದಿದ್ದ, ದೇಶದಲ್ಲಿ ಪ್ರಸಿದ್ದವಾದ ಪ್ರಾಗ್ ಟ್ರಾವ್ಲರ್ ಕತೆ ಈ ಮಿನಿಯೇಚರ್ ಸ್ಮಾರಕವನ್ನು ವಿನ್ಯಾಸ ಮಾಡಲು ಪ್ರೇರಣೆ. ಕೊಳದಲ್ಲಿನ ರೆಂಬೆಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಮೇಲಕ್ಕೆ ಹಾರಿದ ಕೊಕ್ಕರೆ, ಆ ರೆಂಬೆಯನ್ನು ತನ್ನ ಹಲ್ಲಿನಿಂದ ಕಚ್ಚಿ ಬಿಗಿಯಾಗಿ ಹಿಡಿದು ಪ್ರಾಣ ಬಯದಿಂದ ತತ್ತರಿಸುತ್ತಾ ನೇತಾಡುತ್ತಿದ್ದ ಕಪ್ಪೆ, ಇಂತಹ ಅಪರೂಪದ ಅತಿವಿರಳ ದ್ರುಶ್ಯವನ್ನು ಕಂಡ ಜನ ಕೊಕ್ಕರೆಯನ್ನು ಹಾಡಿ ಹೊಗಳಲು, ಅದನ್ನು ಸಹಿಸಲಾಗದ ಕಪ್ಪೆ ಮಾತಾಡಲು ಬಾಯಿ ತೆರೆದಾಗ ನೆಲಕ್ಕೆ ಅಪ್ಪಳಿಸಿ ಬಿದ್ದು ಪ್ರಾಣ ಕಳೆದುಕೊಂಡಿತು. ಈ ಪ್ರಸಿದ್ದ ಕತೆಯೇ ‘ದಿ ಮಾನ್ಯುಮೆಂಟ್ ಟು ದ ಪ್ರಾಗ್ ಟ್ರಾವ್ಲರ‍್’ಗೆ ಸ್ಪೂರ‍್ತಿ.

ಚಿಜಿಕ್ ಪೈಜಿಕ್ ಹಕ್ಕಿಯ ಸ್ಮಾರಕ – ರಶ್ಯಾ

‘ದಿ ಮಾನ್ಯುಮೆಂಟ್ ಟು ದ ಪ್ರಾಗ್ ಟ್ರಾವ್ಲರ‍್’ಗೂ ಮುನ್ನ ವಿಶ್ವದ ಅತಿ ಪುಟ್ಟ ಸ್ಮಾರಕ ಎಂಬ ಕ್ಯಾತಿ ಇದ್ದದ್ದು ರಶ್ಯಾದ ಸೈಂಟ್ ಪೀಟರ‍್ಸ್‍ಬರ‍್ಗ್ ಎಂಬ ನಗರದಲ್ಲಿನ ಹನ್ನೊಂದು ಸೆಂಟಿಮೀಟರ್ ಎತ್ತರದ ಹಕ್ಕಿಯ ವಿಗ್ರಹದ ಸ್ಮಾರಕಕ್ಕೆ. ರಶ್ಯಾದ ಜಾನಪದದಿಂದ ಪ್ರೇರಿತವಾಗಿ ಸ್ತಳಿಯರಿಂದ ‘ಚಿಜಿಕ್ ಪೈಜಿಕ್’ ಎಂದು ಕರೆಯಿಸಿಕೊಳ್ಳುವ ಈ ಪುಟ್ಟ ಹಕ್ಕಿಯ ಸ್ಮಾರಕವಿರುವುದು ಪಾಂಟಂಕ ನದಿಯ ಅಣೆಕಟ್ಟಿನ ಕಟ್ಟೆಯ ಮೇಲೆ. ಸೈಂಟ್ ಪೀಟರ‍್ಸ್‍ಬರ‍್ಗ್ ನಗರದ ಸುತ್ತಲೂ ಹಬ್ಬಿರುವ ಅನೇಕ ಸ್ಮಾರಕಗಳ ಮುಂದೆ ಕುಬ್ಜವಾಗಿರುವ ಈ ಸ್ಮಾರಕ ಬಹುತೇಕ ಪ್ರವಾಸಿಗರಿಗೆ ಗೋಚರಿಸುವುದಿಲ್ಲ.

ಈ ಪುಟ್ಟ ಸ್ಮಾರಕದ ಹಿಂದೆ ಸ್ತಳೀಯ ಸಂಪ್ರದಾಯವೊಂದು ಮನೆ ಮಾಡಿದೆ. ಬಕ್ತಾದಿಗಳು ಅರ‍್ಪಿಸುವ ನಾಣ್ಯ ಅಣೆಕಟ್ಟಿನ ಗೋಡೆಯ ಮೇಲಿರುವ ಹಕ್ಕಿಯ ವಿಗ್ರಹದ ವೇದಿಕೆಯ ಮೇಲೆ ನಿಂತಲ್ಲಿ ಅವರಿಗೆ ಅದ್ರುಶ್ಟ ಕುಲಾಯಿಸಿದಂತೆ ಎಂಬ ನಂಬಿಕೆಯಿದೆ. ಬಹುತೇಕ ನಾಣ್ಯಗಳು ವೇದಿಕೆಯ ಮೇಲೆ ನಿಲ್ಲದೆ ನೀರಿನಲ್ಲಿ ಬೀಳುವುದು ಸಾಮಾನ್ಯ.

ಹಾಸ್ಯದ ಸಂಗತಿಯೆಂದರೆ ಜನಸಾಮಾನ್ಯರಿಗೆ ಅದ್ರುಶ್ಟದ ವರವನ್ನು ನೀಡುವ ಈ ಪುಟ್ಟ ಹಕ್ಕಿಗೇ ಅದ್ರುಶ್ಟ ಕೋತ ಆಗಿದೆ. ಈ ಪುಟ್ಟ ಹಕ್ಕಿಯ ವಿಗ್ರಹವು ಮೂರ‍್ನಾಲ್ಕು ಬಾರಿ ಕಳ್ಳತನವಾಗಿದೆಯಂತೆ.

ಜಾರ‍್ನ್‍ಪೊಕೆ – ದ ಐರನ್ ಬಾಯ್, ರಶ್ಯಾ

ರಶ್ಯಾದಿಂದ ಹೊರಗೆ ಅತ್ಯಂತ ಪುಟ್ಟ ಸ್ಮಾರಕವಿರುವುದು ಸ್ವೀಡನ್ ದೇಶದಲ್ಲಿ. ಸ್ವೀಡನ್ ರಾಜದಾನಿಯ ಹಳೆಯ ಬಡಾವಣೆ ಗ್ಯಾಮ್ಲ ಸ್ಟಾನ್‍ನಲ್ಲಿರುವ ಸ್ಟಾಕ್‍ಹೋಮ್ ಪ್ಯಾಲೆಸ್‍ನಿಂದ ಹಲವು ಮೀಟರ್ ದೂರದಲ್ಲಿ ಪಿನ್ನಿಶ್ ಚರ‍್ಚ್ ಇದೆ. ಇದರ ಹಿಂದಿನ ಅಂಗಳದಲ್ಲಿ ಸ್ತಾಪಿತವಾಗಿರುವ 15 ಸೆಂಟಿಮೀಟರ್ ಎತ್ತರದ ‘ಜಾರ‍್ನ್‍ ಪೊಕೆ‘ ಅತವಾ ‘ದ ಐರನ್ ಬಾಯ್’ಗೆ ಅತ್ಯಂತ ಪುಟ್ಟ ಸ್ಮಾರಕ ಎಂಬ ಗೌರವ ಸಲ್ಲುತ್ತದೆ.

ಪುಟ್ಟು ಹುಡುಗನೊಬ್ಬ ತನ್ನ ಎರಡೂ ಕೈಗಳನ್ನು ಮೊಣಕಾಲಿನ ಸುತ್ತಾ ಸುತ್ತಿರುವಂತೆ ಇರುವ ಈ ಕಲಾಕ್ರುತಿ 1954ರಲ್ಲಿ ಲಿಸ್ ಎರಿಕ್‍ಸನ್‍ನಿಂದ ರಚಿಸಲ್ಪಟ್ಟಿತು. ಅದರೂ ಸಹ ಇದು ಉದ್ಗಾಟನೆಯಾಗಿದ್ದು 1967ರಲ್ಲಿ. ಇದು ಸ್ತಾಪನೆಯಾದಾಗ ಇದನ್ನು ‘ಲಿಟಲ್ ಬಾಯ್ ಹೂ ಲುಕ್ಸ್ ಅಟ್ ದ ಮೂನ್’ ಎಂದು ಹೆಸರಿಸಲಾಗಿತ್ತು. ಅಲ್ಲಿನ ನಿವಾಸಿಗಳು ಮಾತ್ರ ತಮ್ಮ ಬಾಶೆಯಲ್ಲಿ ಇದನ್ನು ಜಾರ‍್ನ್‍ ಪೊಕೆ ಎಂದೇ ಗುರುತಿಸಿದರು.

ಈ ಐರನ್ ಬಾಯ್‍ಗೆ ವರ‍್ಶ ಪೂರ‍್ತಿ ವಿವಿದ ರೀತಿಯ ಹಾಸ್ಯಾಸ್ಪದವಾದ ಉಡುಗೊರೆಗಳು ಹರಿದು ಬರುತ್ತದೆ. ಚಳಿಗಾಲದಲ್ಲಿ ಈ ಪುಟ್ಟ ಬಾಲಕನ ತಲೆಗೆ ಕ್ಯಾಪ್, ಕುತ್ತಿಗೆಗೆ ಮಪ್ಲರ್ ಹೊಚ್ಚಿ ಸ್ವೆಟರ್ ಹಾಕಲಾಗುತ್ತದೆ. ಇದನ್ನು ನೋಡ ಬರುವ ವೀಕ್ಶಕರು ಹಲವು ಬಾರಿ ನಾಣ್ಯಗಳನ್ನು, ಹಣ್ಣುಗಳನ್ನು ಹಾಗೂ ವಿದ ವಿದವಾದ ತಿಂಡಿಗಳನ್ನು ಬಾಲಕನಿಗೆ ಸಮರ‍್ಪಿಸುವುದೂ ಉಂಟು. ಅತ್ಯಂತ ಪ್ರತ್ಯೇಕವಾಗಿ, ಜನರ ದ್ರುಶ್ಟಿಯಿಂದ ದೂರವೇ ಉಳಿದಿರುವ ‘ದ ಐರನ್ ಬಾಯ್’ ಅನ್ನು ಸ್ತಳೀಯ ಮಾರ‍್ಗದರ‍್ಶಿಗಳು ಸ್ಟಾಕ್‍ಹೋಮ್‍ನ ರಹಸ್ಯ ಸ್ಮಾರಕ ಎಂದು ಬಣ್ಣಿಸುತ್ತಾರೆ.

ದ ಟೂ ಮೈಸ್ ಈಟಿಂಗ್ ಚೀಸ್ – ಲಂಡನ್

ಲಂಡನ್ನಿನ ಈಸ್ಟ್ ಚೀಪ್ ಪಿಲ್ಪಾಟ್‍ಲೇನ್‍ನ ಕಟ್ಟವೊಂದರಲ್ಲಿರುವ ‘ಎರಡು ಇಲಿಗಳು ಚೀಸ್‍ಗಾಗಿ (ಹಾಲಿನಿಂದ ತಯಾರಿಸಲಾದ ಕಾದ್ಯ) ಕಿತ್ತಾಡುತ್ತಿರುವ’ ದ್ರುಶ್ಯ ಲಂಡನ್‍ನಲ್ಲಿರುವ ಅತಿ ಪುಟ್ಟ ಸ್ಮಾರಕ.

ಇದರ ಹಿಂದೆ ಅಡಕವಾಗಿರುವ ಕತೆಯ ಅನುಸಾರ, ಹಾಲಿ ಸ್ಮಾರಕವಿರುವ ಕಟ್ಟಡದ ನಿರ‍್ಮಾಣದ ವೇಳೆ ಇಬ್ಬರು ಅನನ್ಯ ಸ್ನೇಹಿತರ ನಡುವೆ ಸಣ್ಣ ಜಗಳ ಪ್ರಾರಂಬವಾಯಿತು. ಜಗಳಕ್ಕೆ ಮೂಲ ಕಾರಣ ಒಬ್ಬ ಕೆಲಸಗಾರನ ಬುತ್ತಿಯಲ್ಲಿದ್ದ ಬ್ರೆಡ್ ಹಾಗೂ ಚೀಸ್ ಕಾಲಿಯಾಗಿದ್ದುದು. ತನ್ನ ಸ್ನೇಹಿತನೇ ಈ ಕೆಲಸ ಮಾಡಿರುವುದು ಎಂಬ ಬ್ರಮೆಯ ಮೇಲೆ ಒಬ್ಬ ಇನ್ನೊಬ್ಬನ ಜೊತೆ ಜಗಳ ಪ್ರಾರಂಬಿಸಿದ. ಕಟ್ಟಡದ ಅಟ್ಟಣೆಯ ಮೇಲೆ ಶುರುವಾದ ಮಾತಿನ ಚಕಮಕಿ ಕೈ ಕೈ ಮಿಸಲಾಯಿಸುವ ಹಂತ ತಲುಪಿತು. ಒಬ್ಬರನ್ನೊಬ್ಬರು ತಳ್ಳಾಡುವ ಬರಾಟೆಯಲ್ಲಿ ಇಬ್ಬರೂ ಆಯತಪ್ಪಿ ಮೇಲಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡರು. ಆದರೆ ದಿಟವಾಗಿ ಆ ಚೀಸ್ ಅನ್ನು ತಿಂದಿದ್ದು ಅಲ್ಲಿ ಸಂಸಾರ ಮಾಡುತ್ತಿದ್ದ ಇಲಿಗಳು.

ಮರಣಹೊಂದಿದ ಸಹದ್ಯೋಗಿಗಳ ನೆನಪಿಗಾಗಿ ಅವರ ಸಾವಿಗೆ ಮೂಲ ಕಾರಣವಾದ ಇಲಿಗಳು ಹಾಗೂ ಬುತ್ತಿಗಾಗಿ ಕೆಲಸಗಾರರು ಕಿತ್ತಾಡಿದ್ದನ್ನು ಬೆಸೆದು, ‘ಎರಡು ಇಲಿಗಳು ಚೀಸಿಗಾಗಿ ಕಿತ್ತಾಡುತ್ತಿರುವಂತಹ’ ಸ್ಮಾರಕವನ್ನು ಸಾಂಕೇತಿಕವಾಗಿ ಕೆಲಸಗಾರರು ಕಟ್ಟಿರಬಹುದು ಎಂಬುದು ಬಹು ಜನರ ಅನಿಸಿಕೆ. 1862ರಲ್ಲಿ ಈ ಪುಟ್ಟ ಸ್ಮಾರಕ ಸ್ತಾಪಿತವಾಯಿತು ಎನ್ನಲಾಗಿದೆ.

ದೈತ್ಯ ಸ್ಮಾರಕಗಳ ನಿರ‍್ಮಾಣದಲ್ಲಿ ಕೆತ್ತನೆ, ಆಕಾರದ ಬಗ್ಗೆ ಸ್ಪಶ್ಟತೆ, ನಿರ‍್ದಿಶ್ಟ ಸ್ತಳಕ್ಕೆ ಸಾಗಿಸುವ ತಾಂತ್ರಿಕತೆ, ಸ್ತಾಪಿಸಲು ಎತ್ತಿ ನಿಲ್ಲಿಸಲು ಬೇಕಿರುವ ನಿಪುಣತೆ ಪ್ರಾಮುಕ್ಯತೆ ಪಡೆಯುತ್ತವೆ. ಅದರೆ ಪುಟ್ಟ ಸ್ಮಾರಕಗಳ ನಿರ‍್ಮಾಣದಲ್ಲಿ ಈ ಎಲ್ಲಾ ತಾಂತ್ರಿಕತೆಗಿಂತ ಮಿಗಿಲಾಗಿ ಕೌಶಲತೆಗೆ ಹೆಚ್ಚು ಪ್ರಾಮುಕ್ಯತೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, yvision.kz, gbtimes.com, vsuete.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: