ಪರ್ಡಿನೆಂಡ್ ಚೆವಾಲ್ – ಪ್ರಾನ್ಸ್ ನ ಸಾಂಸ್ಕ್ರುತಿಕ ಹೆಗ್ಗುರುತಿನ ಸ್ರುಶ್ಟಿಕರ್ತ
– ಕೆ.ವಿ.ಶಶಿದರ.
ಪರ್ಡಿನೆಂಡ್ ಚೆವಾಲ್ – ಈತ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ. ಜಗತ್ಪ್ರಸಿದ್ದ ಕ್ರೀಡಾಪಟುವಾಗಿರಲಿಲ್ಲ. ನೋಬಲ್ ಪ್ರಶಸ್ತಿ ಪುರಸ್ಕ್ರುತನಾಗಿರಲಿಲ್ಲ. ವಿಗ್ನಾನ ಲೋಕ ಬೆರಗುಗೊಳ್ಳುವ ಸಂಶೋದನೆ ಮಾಡಿರಲಿಲ್ಲ. ದೇಶಕ್ಕಾಗಿ ಶತ್ರುಗಳ ಎದುರು ಹೋರಾಡಿ ವೀರಮರಣ ಹೊಂದಿರಲಿಲ್ಲ. ಆದರೂ 1986ರಲ್ಲಿ ಪ್ರಾನ್ಸ್ ಸರ್ಕಾರ ಈತನ ನೆನೆಪಿಗಾಗಿ ಅಂಚೆ ಚೀಟಿ ಒಂದನ್ನು ಹೊರತಂದಿತು. ಹಾಗಾದರೆ ಯಾರೀತ? ಪ್ರಾನ್ಸ್ ಈತನ ಬಾವಚಿತ್ರದ ಅಂಚೆಚೀಟಿ ಬಿಡುಗಡೆ ಮಾಡಲು ಈತನು ಮಾಡಿದ ಗನ ಕಾರ್ಯವಾದರೂ ಏನು?
ಚೆವಾಲ್ ಪ್ರಾನ್ಸ್ನ ಸಾಂಸ್ಕ್ರುತಿಕ ಹೆಗ್ಗುರುತಾದ, ವಿಶ್ವ ವಿಕ್ಯಾತ ವಾಸ್ತು ಶಿಲ್ಪಿಗಳಿಂದ ಸೈ ಎನಿಸಿಕೊಂಡ ‘ಪ್ಯಾಲೇಸ್ ಐಡಿಯಲ್’ನ (Palais idéal) ಸ್ರುಶ್ಟಿಕರ್ತ. ಪ್ರೆಂಚ್ ಪಟ್ಟಣವಾದ ಚಾರ್ಮ್ಸ್-ಸುರ್-ಎಲ್ ಹೆರ್ಬಸ್ಸೆ ( Charmes-sur-l’Herbasse) ಎಂಬಲ್ಲಿ 1836ರ ಏಪ್ರಿಲ್ 19ರಂದು ಪರ್ಡಿನೆಂಡ್ ಚೆವಾಲ್ ಜನಿಸಿದ. ಕಲಿಕೆಯಲ್ಲಿ ಆಸಕ್ತಿಯಿರಲಿಲ್ಲ. ಆದ ಕಾರಣ ತನ್ನ 13ನೇ ವಯಸ್ಸಿನಲ್ಲೇ ಶಾಲೆ ತೊರೆದ. ಜೀವನೋಪಾಯಕ್ಕಾಗಿ ಬೇಕರಿಯಲ್ಲಿ ಕೆಲಸ ಹುಡುಕಿಕೊಂಡ. ಮದುವೆಯ ನಂತರ ತನ್ನ 32ನೇ ವಯಸ್ಸಿನಲ್ಲಿ ಚೆವಾಲ್ ತನ್ನ ಪತ್ನಿಯೊಂದಿಗೆ ಹೌಟೆರೈವ್ ಪಟ್ಟಣಕ್ಕೆ ವಲಸೆ ಬಂದ. ಅಲ್ಲಿ ಓಲೆಕಾರನಾಗಿ ತನ್ನ ವ್ರುತ್ತಿ ಜೀವನವನ್ನು ಪ್ರಾರಂಬಿಸಿದ. ಇದೇ ಅವನ ಜೀವನದ ಸಂಕ್ರಮಣದ ಕಾಲವಾಯಿತು.
ಪರ್ಡಿನೆಂಡ್ ಚೆವಾಲ್ 1879ರಲ್ಲಿ ತಾನೇ ಹೇಳಿಕೊಂಡಂತೆ ‘ಪ್ಯಾಲೇಸ್ ಐಡಿಯಲ್’ ಬಗ್ಗೆ ಚಿಕ್ಕಂದಿನಲ್ಲೇ ಕನಸು ಕಂಡಿದ್ದನಂತೆ. ಇದರ ಬಗ್ಗೆ ಯಾರ ಬಳಿಯಲ್ಲಾದರೂ ಹೇಳಿಕೊಂಡರೆ ಅವರೆಲ್ಲಿ ನಕ್ಕು ನನ್ನ ಕನಸಿಗೆ ತಣ್ಣೀರೆರಚುತ್ತಾರೋ ಎಂಬ ಸಂಕೋಚದಿಂದ ಹಂಚಿಕೊಂಡಿರಲಿಲ್ಲವಂತೆ. ತಾನು ಕಂಡ ಕನಸು ಬಹುತೇಕ ಮರೆತಿದ್ದ ಚೆವಾಲ್, ಹದಿನೈದು ವರ್ಶಗಳ ತರುವಾಯ ಅಂಚೆದಾರನ ಕಾರ್ಯ ನಿಮಿತ್ತ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಎಡವಿ ಬೀಳುವಂತಾಯ್ತು. ನಿಂತು ತಾನು ಎಡವಿದ್ದ ಸ್ತಳವನ್ನು ಪರಿಶೀಲಿಸಿದಾಗ, ಅಲ್ಲಿ ವಿಚಿತ್ರ ಆಕಾರದ ಕಲ್ಲು ಕಂಡಿತು. ಕುತೂಹಲದಿಂದ ಅದನ್ನು ಹೆಕ್ಕಿ ಜೇಬಿನಲ್ಲಿ ಇಳಿಬಿಟ್ಟ.
ಮತ್ತೆ ಮರುದಿನ ಅದೇ ಸ್ತಳದಲ್ಲಿ ಇನ್ನೂ ಹಲವಾರು ವಿಚಿತ್ರ ಆಕಾರದ ಕಲ್ಲುಗಳು ಇರುವುದು ಕಂಡಿತು. ಅವೆಲ್ಲವನ್ನು ಸಂಗ್ರಹಿಸಿದ. ಆ ಕಲ್ಲುಗಳು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದು ಕಾಲಕ್ರಮೇಣ ವಾತಾವರಣದಿಂದ ಗಟ್ಟಿಯಾಗಿ, ವಿಚಿತ್ರ ಆಕಾರದ ಕಲ್ಲುಗಳಾಗಿವೆ ಎಂದು ಆತ ವಿವರಿಸಿದ್ದಾನೆ. ಪ್ರಕ್ರುತಿಯ ಶಿಲ್ಪಕಲೆಯಿಂದ ಚೆವಾಲ್ ಪ್ರಬಾವಿತನಾದ. ‘ಇಂತಹ ಕಲಾಕ್ರುತಿಯನ್ನು ಯಾವುದೇ ಮನುಶ್ಯನು ಹುಟ್ಟುಹಾಕಲು ಸಾದ್ಯವಿಲ್ಲ. ಪ್ರಕ್ರುತಿಯು ಶಿಲ್ಪಿಯಾದರೆ, ತಾನು ವಾಸ್ತು ಶಿಲ್ಪಿ’ ಎಂದು ನಿಶ್ಚಯಿಸಿ ಇವುಗಳ ಮೂಲಕ ತನ್ನ ಕನಸಿಗೆ ಮೂರ್ತ ರೂಪ ಕೊಡಲು ನಿರ್ದರಿಸಿದ.
ದಿನನಿತ್ಯ ತಾನು ಕ್ರಮಿಸುವ 25 ಕಿಲೋಮೀಟರ್ ಮಾರ್ಗದಲ್ಲಿ ಲಬಿಸುತ್ತಿದ್ದ ಚಿತ್ರ ವಿಚಿತ್ರ ಆಕಾರದ ಕಲ್ಲುಗಳನ್ನು ಸಂಗ್ರಹಿಸಿ ತರಲು ಬಂಡಿಯ ಸಹಾಯ ಪಡೆದ. ಹಗಲಿನಲ್ಲಿ ತನ್ನ ಕಾಯಕ ಹಾಗೂ ಕಲ್ಲಿನ ಸಂಗ್ರಹಣೆಯನ್ನು ಮುಂದುವರೆಸಿದ ಚೆವಾಲ್ ರಾತ್ರಿ ಸಮಯವನ್ನು ತನ್ನ ಕನಸಿನ ಅರಮನೆ ನಿರ್ಮಿಸಲು ಮುಡಿಪಾಗಿಟ್ಟ. ರಾತ್ರಿಯ ಕತ್ತಲನ್ನು ಹೋಗಲಾಡಿಸಲು ಸೀಮೆ ಎಣ್ಣೆಯ ಬುಡ್ಡಿ ದೀಪ ಬಳಸುತ್ತಿದ್ದ.
ತನ್ನ ಕನಸಿನ ಅರಮನೆಯನ್ನು ನಿರ್ಮಿಸಲು ಚೆವಾಲ್ ತೆಗೆದುಕೊಂಡ ಅವದಿ 33 ವರ್ಶ. ಅದರಲ್ಲಿ ಮೊದಲ 20 ವರ್ಶ ಆತ ತನ್ನ ಅರಮನೆಯ ಸುತ್ತು ಗೋಡೆಯನ್ನು ನಿರ್ಮಿಸಿದ. ನಿರ್ಮಾಣದಲ್ಲಿ ಕಲ್ಲುಗಳನ್ನು ಜೋಡಿಸಲು ಆತ ಬಳಸಿದ್ದು ಸಿಮೆಂಟ್, ಕಂಬಿಗಳು, ಸುಣ್ಣ ಮತ್ತು ಗಾರೆಯನ್ನು. ಊಹಿಸಲಾಗದ ಎಲ್ಲಾ ಶೈಲಿಯ ಮಿಶ್ರಣ ವಾಸ್ತು ಶಿಲ್ಪವನ್ನು ಆತನ ಅರಮನೆಯ ನಿರ್ಮಾಣದಲ್ಲಿ ಕಾಣಬಹುದು. ಅರಮನೆಯ ಪ್ರತಿಯೊಂದು ಗೋಡೆಯ ಮೇಲೂ ಚೆವಾಲ್ ತನ್ನದೇ ಆದ ಶಾಸನಗಳನ್ನು ಕೆತ್ತಿದ್ದಾನೆ. ಇದರೊಂದಿಗೆ ಮಹಾ ಮಹಿಮರಾದ ಬುದ್ದ ಮತ್ತು ಕ್ರಿಸ್ತನ ಹೇಳಿಕೆಗಳೂ ಜಾಗ ಪಡೆದಿವೆ.
ತಾನು ಕಟ್ಟಿದ ಅರಮನೆಯಲ್ಲೇ ತನ್ನ ಸಮಾದಿಯನ್ನ ಬಯಸಿದ್ದ ಚೆವಾಲ್!
ಅರಮನೆಯೊಳಗೆ ಒಂದು ಮಸೀದಿ ಮತ್ತು ವರ್ಜಿನ್ ಮೇರಿಯ ಒಂದು ದೇವಾಲಯವಿದೆ. ಈ ಕೋಟೆಯ ಒಳಗೆ ಓಡಾಡಲು ಹಾಗೂ ಹೊರ ಹೋಗಲು ಸಾಕಶ್ಟು ದಾರಿಗಳಿವೆ. ಮೆಟ್ಟಿಲುಗಳು, ಕಾರಂಜಿಗಳು, ಮನಸ್ಸಿಗೆ ಮುದ ಕೊಡುವ ಶಿಲ್ಪಗಳಿಂದ ಅಲಂಕ್ರುತವಾಗಿದೆ. ಈಜಿಪ್ಟಿನ ದೇವರುಗಳು, ಕ್ಯಾತೋಲಿಕ್ ಸಂತರ ಶಿಲ್ಪಗಳು ಇದರಲ್ಲಿದೆ. ತಾನು ನಿರ್ಮಿಸಿದ ಈ ಅದ್ಬುತ ಅರಮನೆಯಲ್ಲೇ ತನ್ನನ್ನು ಸಮಾದಿ ಮಾಡಲು ಸ್ತಳೀಯ ಅದಿಕಾರಿಗಳಲ್ಲಿ ಆತ ಮಾಡಿದ ಮನವಿ ಪುರಸ್ಕ್ರುತವಾಗಲಿಲ್ಲ.
‘ಲೆ ಪ್ಯಾಲೇಸ್ ಐಡಿಯಲ್’ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾದ ವಾಸ್ತು ಶಿಲ್ಪದ ಮೇರುಕ್ರುತಿ. ಇದಕ್ಕಾಗಿ ಅಂಚೆದಾರ ಪರ್ಡಿನ್ಯಾಂಡ್ ಚೆವಾಲ್ ವ್ಯಯಿಸಿದ್ದು ತನ್ನ ಜೀವಮಾನದ ಅತ್ಯಮೂಲ್ಯ 33 ವರ್ಶಗಳನ್ನು! ತನ್ನ ಜೀವಿತಾವದಿಯ ಕೊನೆಯವರೆಗೂ ಚೆವಾಲ್ ತನ್ನ ಅರಮನೆಯನ್ನು ನೋಡಲು ಬರುವ ಪ್ರವಾಸಿಗರನ್ನು ಬಹಳ ಸಂತೋಶದಿಂದ ಹೆಮ್ಮೆಯಿಂದ ಬರಮಾಡಿಕೊಳ್ಳುತ್ತಿದ್ದ. ಅವರುಗಳಿಗೆ ತನ್ನ ಮೇರು ಕ್ರುತಿಯ ಇಂಚಿಂಚನ್ನು ಬೇಸರವಿಲ್ಲದೆ ಪರಿಚಯಿಸುತ್ತಿದ್ದ. ಎಲ್ಲಾ ಮುಗಿದ ನಂತರ ಅವರೊಡನೆ ಲೋಕಾಬಿರಾಮವಾಗಿ ಹರಟುತ್ತಿದ್ದ.
ಸತ್ತ ನಂತರ ಚೆವಾಲ್ ತನ್ನದೇ ಅರಮನೆಯಲ್ಲಿ ಸಮಾದಿಯಾಗಲು ಬಯಸಿದ್ದ. ಪ್ರಾನ್ಸಿನ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲದ ಕಾರಣ ಅವನಿಗೆ ಅನುಮತಿ ನಿರಾಕರಿಸಲಾಯಿತು.
ಹತಾಶೆ ಎಂಬುದು ಅವನಲ್ಲಿರಲಿಲ್ಲ. ತಾನಿದ್ದ ಪಟ್ಟಣ ಹೌಟೆರೈವ್ನ ಸ್ಮಶಾನದಲ್ಲಿ ತನ್ನ ಸಮಾದಿಯನ್ನು ನಿರ್ಮಿಸಲು ಪ್ರಾರಂಬಿಸಿದ. ಅದಕ್ಕಾಗಿ ಆತ ಮತ್ತೆ ಎಂಟು ವರ್ಶ ಏಕಾಂಗಿಯಾಗಿ ಶ್ರಮಿಸಿದ. ತನ್ನದೇ ಸಮಾದಿಯ ನಿರ್ಮಾಣ ಮುಗಿದ ಒಂದು ವರ್ಶದ ತರುವಾಯ 1924ರ ಆಗಸ್ಟ್ 19ರಂದು ತನ್ನ 88ನೇ ವಯಸ್ಸಿನಲ್ಲಿ ಚೆವಾಲ್ ಇಹಲೋಕ ತ್ಯಜಿಸಿದ. ಚೆವಾಲ್ನನ್ನು ಅವನೇ ಕಟ್ಟಿಕೊಂಡಿದ್ದ ಸಮಾದಿಯಲ್ಲಿ, ಸಮಾದಿ ಮಾಡಲಾಯಿತು.
ಪ್ರಾನ್ಸಿನ ಸಾಂಸ್ಕ್ರುತಿಕ ಸಚಿವಾಲಯವು 1969ರಲ್ಲಿ ಚೆವಾಲ್ನ ಈ ಶ್ರೇಶ್ಟ ನಿರ್ಮಾಣವನ್ನು ಹಾಗೂ ಸ್ಮಶಾನದಲ್ಲಿದ್ದ ಅವನ ಸಮಾದಿಯನ್ನು ಐತಿಹಾಸಿಕ ಸ್ಮಾರಕ ಎಂದು ಗೋಶಿಸಿತು. ವಿಶ್ವ ಸಾಂಸ್ಕ್ರುತಿಕ ಪ್ರಪಂಚದ ದಿಗ್ಗಜರಾದ ಪ್ಯಾಬ್ಲೋ ಪಿಕಾಸೊ ಮತ್ತು ಆಂಡ್ರೆ ಬ್ರೆಟನ್ ಈ ಗೋಶಣೆಗೆ ಕಾರಣಕರ್ತರು.
“ನಿಮ್ಮ ವಯಸ್ಸು ಎಶ್ಟು ಎಂಬುದು ಮುಕ್ಯವಲ್ಲ, ಜೀವನದಲ್ಲಿ ಏನಾದರೂ ಸಾದಿಸಬೇಕಾದಲ್ಲಿ, ಮೊದಲು ಸಾದಿಸುವ ಚಲವಿರಬೇಕು, ದೈರ್ಯವಾಗಿ ಮುನ್ನುಗ್ಗಬೇಕು, ನಿರಂತವಾಗಿ ಹಾಗೂ ಕಶ್ಟಪಟ್ಟು ದುಡಿಯಲು ಸಿದ್ದರಿರಬೇಕು, ಹಾಗಿದ್ದಲ್ಲಿ ಕಂಡಿತ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುತ್ತದೆ” – ಪರ್ಡಿನೆಂಡ್ ಚೆವಾಲ್
ಪರ್ಡಿನೆಂಡ್ ಚೆವಾಲ್ ನ ಮೇಲಿನ ಮಾತುಗಳು ಎಲ್ಲಕಾಲಕ್ಕೂ ಅನ್ವಯಿಸುತ್ತದಲ್ಲವೇ?
( ಮಾಹಿತಿಸೆಲೆ: unusualplaces.org, wikipedia, atlasobscura.com, viola.bz )
( ಚಿತ್ರಸೆಲೆ: unusualplaces.org, wikipedia )
ಇತ್ತೀಚಿನ ಅನಿಸಿಕೆಗಳು