ಕಡಲ ದಡದ ಬಂಡೆಯ ಮೇಲೊಂದು ಕೋಟೆ – ಸ್ವಾಲೋಸ್ ನೆಸ್ಟ್

– .

ಸ್ವಾಲೋಸ್ ನೆಸ್ಟ್ ನ ಇತಿಹಾಸ ಮೊದಲಾಗುವುದು 1895 ರಿಂದ. ಅಂದು ಇದು ಒಂದು ಸಣ್ಣ ಮರದ ಮನೆಯಾಗಿತ್ತು. ಈ ಮನೆಯನ್ನು ಕಡಿದಾದ ಬಂಡೆಯ ಮೇಲೆ ಕಟ್ಟಲಾಗಿತ್ತು. ಇದನ್ನು ರಶ್ಯಾದ ಜನರಲ್‍ಗಾಗಿ ನಿರ‍್ಮಾಣ ಮಾಡಲಾಗಿತ್ತು ಎನ್ನಲಾಗಿದೆ. ಈ ಪುಟ್ಟ ಮನೆಯನ್ನು “ಕ್ಯಾಸೆಲ್ ಆಪ್ ಲವ್” ಎಂದು ಕರೆಯಲಾಗುತ್ತಿತ್ತು. ಮೊದಲು ಈ ಆಸ್ತಿ, ತ್ಸಾರ್ ಕೋರ‍್ಟಿನ ಡಾಕ್ಕರ್ ಗೆ ಸೇರಿತ್ತು. ಇದು ನಂತರ ಮದ್ಯಕಾಲೀನ ವಾಸ್ತು ಶಿಲ್ಪವಾಗಿ ಬದಲಾವಣೆಗೊಂಡಿದ್ದು ಒಬ್ಬ ವ್ಯಾಪಾರಿಯ ‍ಹೆಂಡತಿ ಕೊಂಡುಕೊಂಡ ನಂತರ. 1911ರಲ್ಲಿ ಬ್ಯಾರನ್ ವಾನ್ ಸ್ಟಿಂಗಲ್ ಎಂಬ ಕೈಗಾರಿಕೋದ್ಯಮಿ ಆ ಸಣ್ಣ ಮನೆಯನ್ನು ಗೋತಿಕ್ ಶೈಲಿಗೆ ಬದಲಾವಣೆ ಮಾಡಿ ಪುನ‍ರ್ ನಿರ‍್ಮಿಸಿದ. ಇಂದು ನಮ್ಮ ಕಣ್ಣೆದುರಿಗೆ ಕಾಣಬರುವುದು ಇದೇ ಕಟ್ಟಡ.

ಈ ಕಟ್ಟಡವನ್ನು ಸ್ವಾಲೋಸ್ ನೆಸ್ಟ್ ಅಂತಲೂ, ಸ್ವಾಲೋಸ್ ನೆಸ್ಟ್ ಕ್ಯಾಸೆಲ್ ಅಂತಲೂ ಕರೆಯುವುದುಂಟು. ಅತ್ಯಂತ ಅಲಂಕಾರಿಕ ಕೋಟೆ ಇದಾಗಿದ್ದು, ಇದು ಕ್ರಿಮಿಯಾನ್ ಪರ‍್ಯಾಯ ದ್ವೀಪದ ಯಾಲ್ಟಾದ ಸನಿಹದಲ್ಲಿದೆ. ನಲವತ್ತು ಅಡಿ ಎತ್ತರದ ಕಡಿದಾದ ಬಂಡೆಯ ತುದಿಯಲ್ಲಿ ನೆಲೆಗೊಂಡಿರುವುದರಿಂದ, ಉಕ್ರೇನ್‍ನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ತಳವಾಗಿದೆ. ರಶ್ಯಾದ ವಾಸ್ತು ಶಿಲ್ಪಿ ಲಿಯೋನಿಡ್ ಶೆರ‍್ವುಡ್ ಇದನ್ನು ವಿನ್ಯಾಸಗೊಳಿಸಿದ್ದಾರೆ. ಈ ಕೋಟೆ ಕೇವಲ 20 ಮೀಟ‍ರ್ ಉದ್ದ ಹಾಗೂ 10 ಮೀಟ‍ರ್ ಅಗಲವಿದೆ. ಶರ‍್ವುಡ್ ಇದನ್ನು ನಿಯೋ ಗೋತಿಕ್ ವಾಸ್ತು ಶಿಲ್ಪದ ವಿನ್ಯಾಸದಲ್ಲಿ ರಚಿಸಿರುವುದರಿಂದ ಇದು ಹೆಸರುವಾಸಿಯಾಗಿದೆ.

ಸ್ವಾಲೋಸ್ ಕ್ಯಾಸೆಲ್ ಅತಿ ಪುಟ್ಟ ಕೋಟೆಯಾದರೂ ಇದು ಉಕ್ರೇನಿನ ಕ್ರಿಮಿಯಾ ಪ್ರದೇಶದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿ, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಮೊದಲ ಮಹಾಯುದ್ದದ ಆರಂಬದೊಂದಿಗೆ, ಅಂದರೆ 1914ರಲ್ಲಿ, ಈ ಕೋಟೆಯನ್ನು ರೆಸ್ಟೋರೆಂಟ್‍ಗೆ ಮಾರಾಟ ಮಾಡಲು ತೀರ‍್ಮಾನಿಸಲಾಯಿತು. ಈ ಕೋಟೆಯನ್ನು ಕೊಂಡುಕೊಂಡು, ರೆಸ್ಟೋರೆಂಟ್ ಪ್ರಾರಂಬಿಸಿದವನ ಸಾವಿನ ನಂತರ ರೆಸ್ಟೋರೆಂಟ್ ಮುಚ್ಚಿ ಹೋಯಿತು. ನಂತರದ ದಿನಗಳಲ್ಲಿ ಈ ಕೋಟೆಯನ್ನು, ಇದರ ಸನಿಹದಲ್ಲೇ ಇದ್ದ ಸಾಗರದ ಸೈನಿಕ ಸಿಬ್ಬಂದಿ ಹಾಗೂ ವಸಾಹತುವಿನ ಜನ ಲೈಬ್ರರಿಯನ್ನಾಗಿಸಿ ಉಪಯೋಗಿಸಿಕೊಂಡರು.

1927ರಲ್ಲಿ ಈ ಬಾಗದಲ್ಲಿ ಬಲವಾದ ಬೂಕಂಪ ಉಂಟಾದರೂ ಈ ಕೋಟೆ ಯಾವುದೇ ರೀತಿಯ ಗಂಬೀರ ಹಾನಿಗೆ ಒಳಗಾಗದೆ ಬದುಕುಳಿಯಿತು. ಇದರ ರಚನೆಗೆ ಯಾವುದೇ ಗಂಬೀರ ಹಾನಿಯಾಗದಿದ್ದರೂ, ಪ್ರವಾಸಿಗರ ಹಿತ ದ್ರುಶ್ಟಿಯಿಂದ, ಇದನ್ನು ಅಪಾಯಕಾರಿ ಕಟ್ಟಡ ಎಂದು ಪರಿಗಣಿಸಿ, ಮುಂದಿನ ನಲವತ್ತು ವರ‍್ಶಗಳ ಕಾಲ ಸಾರ‍್ವಜನಿಕರಿಗೆ ಮುಚ್ಚಲಾಯಿತು. ಇಂದು ಸ್ವಾಲೋಸ್ ನೆಸ್ಟ್ ಅನ್ನು ಸಂಪೂರ‍್ಣವಾಗಿ ನವೀಕರಿಸಿ ಮರುಸ್ತಾಪಿಸಲಾಗಿದೆ. ಅದರೊಂದಿಗೆ ಮತ್ತೆ ರೆಸ್ಟೋರೆಂಟ್ ಸಹ ಪ್ರಾರಂಬವಾಗಿದೆ. ಬವ್ಯವಾದ, ಮನತಣಿಸುವ ಸಮುದ್ರದ ನೋಟವನ್ನು ಹೊಂದಿರುವ ಗೋತಿಕ್ ಶೈಲಿಯ ಈ ಪ್ರಸಿದ್ದ ಇಟಾಲಿಯನ್ ರೆಸ್ಟೋರೆಂಟಿನಲ್ಲಿ ಕುಳಿತು, ಇಟಾಲಿಯನ್ ಊಟದ ಜೊತೆಗೆ ಪ್ರಕ್ರುತಿ ಸೌಂದರ‍್ಯವನ್ನು ಆಸ್ವಾದಿಸುವುದೇ ಅತ್ಯಂತ ಸುಂದರ ಅನುಬವ.

( ಮಾಹಿತಿ ಮತ್ತು ಚಿತ್ರಸೆಲೆ: mybestplace.com, atlasobscura.com, steemit.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks