ಮಾಗಿಯ ಚಳಿ – ಒಂದು ಅನುಬವ
ಮಾಗಿಯ ಚಳಿ ಗಡ ಗಡ ನಡುಗಿಸಿಯೇ ಬಿಡುತ್ತದೆ. ಮುಂಜಾನೆ ಮಂಜು ದಟ್ಟವಾಗಿ ಹರಡಿಕೊಂಡು ಒಬ್ಬರ ಮುಕ ಒಬ್ಬರಿಗೆ ಕಾಣಿಸದಂತಿರುತ್ತದೆ. ಬಚ್ಚಲ ಮನೆಯ ಹಂಡೆ ಒಲೆ ಬೆಂಕಿ ಕಾಯಿಸಲು ಮಕ್ಕಳಲ್ಲಿ ಪೈಪೋಟಿ. ನಾನು ಮಾತ್ರ ಇವರ ಸಹವಾಸವೇ ಬೇಡ ಎಂದು ಮನೆಯ ಮುಂದಿನ ಮರದಿಂದುರಿದ ದರುಗನ್ನು ಗುಡಿಸಿ ಗುಡ್ಡೆ ಮಾಡಿ ಬೆಂಕಿ ಹಚ್ಚಿಯೇ ಬಿಟ್ಟೆ. ಆದರೆ ಮಂಜಿಗೆ ದರುಗು ನೆನೆದು ಹಸಿಯಾಗಿದ್ದರಿಂದ ಬರೀ ಹೊಗೆ.
ಬೆಂಕಿ ಹತ್ತಿಕೊಂಡ ಬಾಗದಲ್ಲಿ ಎಲೆಯ ಮೇಲಿನ ಮಂಜು ಜಾರಿ ಚೊರ ಚೊರ ಸದ್ದು ಮಾಡಿತು. ಅಂತೂ ಇಂತು ಹರ ಸಾಹಸ ಮಾಡಿ ಬಹಳ ಹೊತ್ತಿನ ಮೇಲೆ ದಗದಗ ಉರಿಯಿತು. ಚಳಿಗೆ ಕಾಯಿಸಿಕೊಂಡ ಮೈ ಹಿತವಾಗತೊಡಗಿತು. ಬೆಳಿಗ್ಗೆ ಎದ್ದು ಮೆತ್ತಗೆ ಗದ್ದೆ ಕಡೆ ಕಾಕನ ಅಂಗಡಿಯ ಕಡೆ, ಶೆಟ್ಟರ ಬವ್ಯೊಪೇತ ಗುಡಿಸಲ ಹೊಟೇಲ್ ಕಡೆ ಹೊರಟವರಿಗೆ ನನ್ನ ದರುಗಿನ ಬೆಂಕಿ ತಂಗು ನಿಲ್ದಾಣ. ನೋಡ ನೋಡುತ್ತಲೆ ಬೆಂಕಿಯ ಸುತ್ತ ಸುತ್ತುವರಿದ ಪ್ರಜಾಪತಿಗಳು ಬೆಂಕಿ ಹಚ್ಚಿದ ನನ್ನನ್ನೆ ಹೊರನೂಕಿದ್ದರು!
ಇದರ ನಡುವೆ ನಮ್ಮ ಸಾಕು ನಾಯಿಗೂ ಚಳಿ ಕಾಯಿಸುವ ಉಮೇದು. ಜನರ ಕಾಲ ನಡುವೆ ಮೂತಿ ತೂರಿಸಿ ಚಳಿ ಕಾಯಿಸುವ ಇರಾದೆ. ಹಿತ್ತಲಿನ ಅಡಿಗೆ ಮನೆಯಿಂದ ಅಮ್ಮನೇ ಕಾಪಿ ಬೀಜ ಸ್ವತಹ ಕುಟ್ಟಿ ಮಾಡಿದ ಪುಡಿಯಿಂದ ಕಾಪಿ ತಯಾರಿಸೋ ಗಮಲು ನನ್ನ ಮೂಗಿಗೆ ಬಡಿಯತೊಡಗಿತು. ಮೊದಲೇ ಬೆಂಕಿಯ ಗುಂಪಿನಿಂದ ಹೊರಬಿದ್ದಿದ್ದ ನಾನು ಅಮ್ಮನ ಕೈ ಕಾಪಿ ಕುಡಿಯಲು ಅಡಿಗೆ ಮನೆಗೆ ಓಡಿದೆ. ಬಿಸಿ ಬಿಸಿ ಒಂದು ಗುಟುಕು ಕಾಪಿ ಒಳ ಹೋಗುತ್ತಿದ್ದಂತೆ ಆಹಾ ಸ್ವರ್ಗ ಸುಕ!! ಮೈಯೆಲ್ಲ ರೋಮಾಂಚನ. ಗದಗುಟ್ಟುವ ಚಳಿಗೆ ಕಾಪಿ ಹೀರುತ್ತಿದ್ದಂತೆ, ದಿಟ್ಟ ಸೈನಿಕನಂತೆ ದೇಹ ನೆಟ್ಟಗಾಯ್ತು. ಅಮ್ಮನ ಕೈಯಿಯ ಕಾಪೀಗೆ ಆ ವೀರತ್ವವಿದೆ!
ಆದ್ದರಿಂದ ಬೆಳಗಿನ ಚಳಿಗೆ ಎದೆ ಸೆಟೆಸಿ ನಿಲ್ಲಬೇಕೆಂದರೆ ಮಲೆನಾಡಿನ ಮನೆಯಲ್ಲಿ ತಯಾರಿಸಿದ ಕಾಪಿ ಪುಡಿಯ ಕಾಪಿಯನ್ನು ಕುಡಿದೇ ನೋಡಬೇಕು ನೀವು! ಇದರೊಡನೆ ಅಕ್ಕಿಯ ಬಿಸಿ ಬಿಸಿ ಹಬೆಗಡುಬು ಕಾಯಿ ಚಟ್ನಿ ಇದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಗ್ನ. ನಾನಂತು ಮಲೆನಾಡಿನ ನಮ್ಮೂರಿಗೆ ಹೋದಾಗಲೆಲ್ಲ ಇದನ್ನು ಅನುಬವಿಸಿಯೇ ತೀರುತ್ತೇನೆ.
ನೀವೂ…… ಅವಕಾಶ ಇದ್ದರೆ…… ಪ್ರಯತ್ನಿಸಿ…..
ಇದರ ಅನುಬವದಿಂದ ಮನುಶ್ಯ ಜನ್ಮ ಸಾರ್ತಕವೆನಿಸುತ್ತದೆ! 🙂
( ಚಿತ್ರ ಸೆಲೆ: travelingrabbi.com )
ಇತ್ತೀಚಿನ ಅನಿಸಿಕೆಗಳು