ಕವಿತೆ: ವೀರಯೋದನ ಮಡದಿ ನಾನು
ಇನ್ನಾದರೂ ಸರಿಯೆ ಬರಬಾರದೆ ನೀವು
ಒಡಲು ಕೊರಗಿ ಜ್ವಾಲಾಗ್ನಿಯಾಗಿಹುದು
ಕಣ್ಣುಗಳು ಸೊರಗಿ ಬಳಲಿ ಹೋಗಿಹವು
ವೀರಯೋದನ ಮಡದಿ, ವೀರಾಂಗನೆ ನಾನು
ಕಾಯುತಲೆ, ಕರೆಯುತಲೆ ಸೋತು ಹೋಗಿಹೆ ನಾನು
ನಮ್ಮ ಕಂದನ ನೆನಪು ಇದೆಯಾ ಇನಿತಾರು
ಅವನ ಅಳುವಿಗುತ್ತರ ಇದೆಯಾ ನಿಮ್ಮಲ್ಲಿ
ಹೊಸ ಸಂಜೆ, ಹೊಸ ಬಾನು, ಹೊಸದೀ ನಿರೀಕ್ಶೆ
ದಿನದಿನವು ತಳಮಳವು ನೀ ನೀಡದೆ ಉತ್ತರವು
ದಿನದಿನವು ತಳಮಳವು ನೀ ನೀಡದೆ ಉತ್ತರವು
ಕೈ ಕಟ್ಟಿ ಕುಳಿತರೇನು ಆಳುವ ದೊರೆಗಳು
ಬೆಲೆ ಇಲ್ಲವೇನು ಸುರಿಸಿದಾ ನೆತ್ತರಿಗೆ
ಮಾತಾಡದು ಕಂದ, ಮಾತಾಡವು ಗೋಡೆ, ಕಂಬಗಳು
ಯಾರೇನು ಅಂದರೇನು? ನೀನೆ ಏನೆನ್ನದೆ
ಬೇಗ ಬರುವೆಂದು ನೀ ಹೇಳಿ ಹೋಗಿದ್ದೆ
ನೆನಪಿದೆಯಾ ನಿನಗೆ ನಿನ್ನ ಮಾತು
ನೆನಪಿದೆಯಾ ನಿನಗೆ ನಿನ್ನ ಮಾತು
ಕಣ್ಣ ಹನಿಗಳನೆ ಹೆಪ್ಪುಗಟ್ಟಿಸಿ ನಾನು
ಕಾದು ಕುಳಿತಿರುವೆ ನಿನ್ನ ಸ್ವಾಗತಕೆ
ರಣರಂಗದಲ್ಲಿ ಶತ್ರುಗಳ ಸಂಹರಿಸಿ
ದ್ರುಶ್ಟಿಯಾಯಿತೆ ನಿನಗೆ, ಏಕೊ ಅನುಮಾನ
ಮತ್ತೆ ಬರುತಲಿದೆ ಬೀಮನಮಾವಾಸ್ಯೆ
ವ್ರತವ ಕಟ್ಟಿಸಲು ಬಂದುಬಿಡು ಸಾಕು
ಮತ್ತೆ ಕರಿಮೋಡ ಕವಿಯುತಿದೆ ಬಾನಲ್ಲಿ
ಮತ್ತೆ ಬಾವಗಳ ಸುಳಿವು ನನ್ನಲ್ಲಿ
ಮತ್ತೆ ಬಾವಗಳ ಸುಳಿವು ನನ್ನಲ್ಲಿ
( ಚಿತ್ರ ಸೆಲೆ: battlefield.fandom.com/wiki )
ತುಂಬ ಮನಮುಟ್ಟುವ ಕವನ?