ಎತ್ತರದ ಹಿಮ್ಮಡಿಯ ಮೆಟ್ಟುಗಳ ಇತಿಹಾಸ!
– ಕೆ.ವಿ.ಶಶಿದರ.
ಎತ್ತರದ ಹಿಮ್ಮಡಿಯ ಮೆಟ್ಟುಗಳಿಗೆ (High-heeled footwear) ಸ್ತ್ರೀಯರ ಬೆಡಗು-ಬಿನ್ನಾಣದ (Fashion) ಲೋಕದಲ್ಲಿ ಬಹಳ ಮಹತ್ವದ ಪಾತ್ರವಿದೆ. ಮಹಿಳೆಯರ ‘ಕ್ಯಾಟ್ ವಾಕ್’ಗೆ ಹೈ ಹೀಲ್ಡ್ ಪಾದರಕ್ಶೆಗಳು ಅತ್ಯಂತ ಸೂಕ್ತವಾದುದು ಎಂಬ ಅನಿಸಿಕೆಯಿದೆ. ಹೈ ಹೀಲ್ಡ್ ಪಾದರಕ್ಶೆಗಳಲ್ಲಿ ಅನೇಕ ಬಗೆಗಳಿದ್ದು, 1 ಇಂಚಿಂದ 8 ಇಂಚಿನವರೆವಿಗೂ ಹಿಮ್ಮಡಿಯನ್ನು ಎತ್ತರಿಸುವ ಮೆಟ್ಟುಗಳಿರುತ್ತವೆ ಎಂಬುದು ಬಲ್ಲವರ ಅಂಬೋಣ. ಇಂತಾ ಪಾದರಕ್ಶೆಗಳನ್ನು ಮರದಿಂದ ಮಾಡಲಾಗುತ್ತಿದ್ದು, ಅವುಗಳಿಗೆ ಬೇಕಾದ ಒನಪು ಒಯ್ಯಾರವನ್ನು ನೀಡುವುದೇ ಅತ್ಯಂತ ತ್ರಾಸಿನ ಕೆಲಸ. ಹಾಗಾಗಿ ಎತ್ತರ ಹೆಚ್ಚಾದಂತೆ ಅದಕ್ಕನುಗುಣವಾಗಿ ಮೆಟ್ಟುಗಳ ಮಾರುಕಟ್ಟೆ ದರವೂ ಸಹ ಏರುತ್ತದೆ!
ಆದರೆ ಈ ಪಾದರಕ್ಶೆಗಳನ್ನು ಮೊದಲು ದರಿಸಲು ಪ್ರಾರಂಬಿಸಿದ್ದು ಪುರುಶರೆಂಬುದು ಹೆಚ್ಚು ಮಂದಿಗೆ ತಿಳಿದಿಲ್ಲ. ಒಂಬತ್ತನೇ ಶತಮಾನದಲ್ಲಿ ಪರ‍್ಶಿಯಾದ ಸಿಪಾಯಿಗಳು ಕುದುರೆ ಸವಾರಿ ಮಾಡುವಾಗ ರಿಕಾಪಿನಿಂದ ಕಾಲು ಜಾರುವುದನ್ನು ತಪ್ಪಿಸಲು ಈ ಮೆಟ್ಟುಗಳನ್ನು ಬಳಸಿದ ಮೊದಲಿಗರು. ಉದ್ದನೆಯ ಹಿಮ್ಮಡಿಯ ಮೆಟ್ಟುಗಳು, ರಿಕಾಪಿನಿಂದ ಕಾಲು ಜಾರದಂತೆ ಮಾಡಿ ಕುದುರೆಯನ್ನು ಬಹಳ ವೇಗವಾಗಿ ಚಲಿಸಲು ಅವರಿಗೆ ಅನುಕೂಲ ಕಲ್ಪಿಸಿತ್ತು. ಪರ‍್ಶಿಯನ್ ರಾಯಬಾರಿಗಳ ಗುಂಪು ಯೂರೋಪಿಗೆ ಬಂದಾಗ ಅವರೊಡನೆ ಈ ಹೊಸ ಬೆಡಗೂ ಸಹ ಕಾಲಿಟ್ಟಿತು. ಮುಂದಿನ ದಿನಗಳಲ್ಲಿ ಈ ಪಾದರಕ್ಶೆಗಳು ಯೂರೋಪಿನಲ್ಲಿ ಅಂತಸ್ತಿನ ಕುರುಹಾಗಿ ಮಾರ‍್ಪಟ್ಟಿತು. ಪುರುಶರು ಈ ಮೆಟ್ಟುಗಳನ್ನು ಶ್ರೀಮಂತಿಕೆಯ ಪ್ರದರ‍್ಶನಕ್ಕೆ ಮತ್ತು ಎತ್ತರವಾಗಿ ಕಾಣಲು ಬಳಸುತ್ತಿದ್ದರು.
ಪ್ರಾನ್ಸಿನ ರಾಜ ಲೂಯೀಸ್ XIV ಕುಳ್ಳನಾಗಿದ್ದ. ಗಿಡ್ಡತನ ಆತನ ಅಹಮಿಕೆಗೆ ಪೆಟ್ಟು ನೀಡಿತ್ತು. ತಾನು ಎತ್ತರವಾಗಿರುವಂತೆ ಕಾಣಲು ರಾಜ 4 ಇಂಚು ಎತ್ತರದ ಹಿಮ್ಮಡಿಯ ಪಾದರಕ್ಶೆಗಳನ್ನು ಉಪಯೋಗಿಸುತ್ತಿದ್ದ. ಮುಂದಿನ ದಿನಗಳಲ್ಲಿ ಕೆಂಪು ಬಣ್ಣದ ಮೆಟ್ಟುಗಳನ್ನೇ ದರಿಸುವ ಪರಿಪಾಟ ಬೆಳೆಸಿಕೊಂಡ. ಇದು ಪ್ರಾನ್ಸಿನಲ್ಲಿ ಅಂತಸ್ತಿನ ಕುರುಹಾಯಿತು. ಉನ್ನತ ದರ‍್ಜೆಗೆ ಸೇರಿದ ಪುರುಶರು ಮಾತ್ರ ಇದನ್ನು ದರಿಸಲು ಪರವಾನಗಿ ಪಡೆದರು. ಸಮಾಜದಲ್ಲಿ ತಾವು ಪುರುಶರಿಗೆ ಸರಿ ಸಮಾನರು ಎಂಬುದನ್ನು ತೋರಿಸುವ ಸಲುವಾಗಿ ಮಹಿಳೆಯರೂ ಇಂತಾ ಮೆಟ್ಟುಗಳನ್ನು ದರಿಸುವುದನ್ನು ರೂಡಿಸಿಕೊಂಡರು. ಕ್ರಮೇಣ ಎತ್ತರದ ಹಿಮ್ಮಡಿಯ ಮೆಟ್ಟುಗಳು ಮಹಿಳೆಯರ ಬೆಡಗಿನ ಪ್ರಮುಕ ಬಾಗವಾಯಿತು.
ಇಂದು ಬಹುತೇಕ ಹೆಣ್ಣುಮಕ್ಕಳು ಇಂತಹ ಪಾದರಕ್ಶೆಗಳನ್ನು ಮೆಟ್ಟುವುದು ಕಂಡುಬರುತ್ತದೆ. ನಿರಂತರವಾಗಿ ಇದನ್ನು ದರಿಸುವುದರಿಂದ ಅನೇಕ ತೊಂದರೆಗಳಿಗೆ ಇದು ಕಾರಣವಾಗುತ್ತದೆ ಎಂಬುದು ಡಾಕ್ಟರುಗಳ ಅನಿಸಿಕೆ.
- ಉದ್ದನೆಯ ಹಿಮ್ಮಡಿಯ ಮೆಟ್ಟುಗಳನ್ನು ಸಾಮಾನ್ಯವಾಗಿ ಮರದಿಂದ ಮಾಡಲಾಗಿರುತ್ತದೆ. ನಡೆದಾಡುವಾಗ ದೇಹದ ಮೆತ್ತೊತ್ತನ್ನು(shock absorber) ಅದು ಹೀರಿಕೊಳ್ಳುವುದಿಲ್ಲ. ಹಾಗಾಗಿ ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಕೀಲು ನೋವಿಗೆ ಕಾರಣವಾಗುತ್ತದೆ.
- ಹಿಮ್ಮಡಿ ಎತ್ತರದಲ್ಲಿರುವುದರಿಂದ, ಮುಂದಕ್ಕೆ ಜಾರದಿರಲು ಪಾದದ ಮುಂಬಾಗವನ್ನು ಬಲವಂತವಾಗಿ ಹಿಡಿದಿಡಬೇಕಾಗುತ್ತದೆ. ಇದರಿಂದ ಮುಂಗಾಲಿನ ಮೇಲೆ ಅತಿ ಹೆಚ್ಚು ಒತ್ತಡ ಬೀಳುತ್ತದೆ. ಇದರ ಪರಿಣಾಮ ಬೆನ್ನುಹುರಿಯ ಮೇಲಾಗಿ ಅದರ ನೋವಿಗೂ ಸಹ ಕಾರಣವಾಗುವ ಸಾದ್ಯತೆ ಹೆಚ್ಚಿದೆ.
- ಹೈ ಹೀಲ್ಡ್ ಪಾದರಕ್ಶೆ ದರಿಸಿ ಓಡಾಡುವಾಗ ಅತಿ ಎಚ್ಚರಿಕೆ ಅಗತ್ಯ. ಇಡೀ ದೇಹದ ಹೊರೆ ಅ್ಯಂಕಲ್ ಮೇಲೆ ಇದ್ದು, ನಡೆಯುವಾಗ ಕಾಲು ಹೊರಳಿದರೆ ಅತಿ ಹೆಚ್ಚಿನ ಹಾನಿಯಾಗಿ ನಡೆಯುವುದೇ ದುಸ್ತರವಾಗುವ ಸಾದ್ಯತೆ ಇದೆ.
ಯಾವುದೇ ಪ್ಯಾಶನ್ ಪ್ರಕ್ರುತಿದತ್ತ ದೇಹದ ಅಂಗ ರಚನೆಗೆ ಪೂರಕವಾಗಿರಬೇಕೆ ಹೊರತು, ಅದನ್ನು ಬದಲಿಸುವ, ಅದಕ್ಕೆ ಮಾರಕವಾಗಿರುವಂತಿರಬಾರದು ಅಲ್ಲವೇ?
( ಮಾಹಿತಿ ಸೆಲೆ: factsc.com )
ಇತ್ತೀಚಿನ ಅನಿಸಿಕೆಗಳು