ಕಬ್ಬಿನ ಹಾಲು ಹಾಗೂ ಬೆಲ್ಲದ ಸಿಹಿನೆನಪುಗಳು!

– ಮಾರಿಸನ್ ಮನೋಹರ್.

ಕಬ್ಬಿನ ಹಾಲು, Sugarcane

ಗರಗರ ತಿರುಗುವ ಗಾಣದ ಉಕ್ಕಿನ ಗಾಲಿಗಳ ನಡುವೆ ತೂರಿಕೊಂಡು ಹಿಂಡಿ ಹಿಪ್ಪೆಯಾಗಿ, ಸವಿಯಾದ ಸಿಹಿ ಕಬ್ಬಿನ ಹಾಲನ್ನು ಕುಡಿಯಲು ನಾನು ಓಡುತ್ತೇನೆ! ಹೈಸ್ಕೂಲಿನಲ್ಲಿ ಇದ್ದಾಗ ಮನೆಗೆ ಹಿಂದಿರುಗುವ ಹಾದಿಯಲ್ಲಿ ಕಬ್ಬಿನ ಹಾಲು ತೆಗೆಯುವ ವ್ಯಾಪಾರಿ ಗಾಣಗಳಿದ್ದವು. ಸಾಲಾಗಿ ಇಟ್ಟಿದ್ದ ಗಾಜಿನ ಉದ್ದನೆಯ ತೆಳ್ಳನೆಯ ಗ್ಲಾಸುಗಳಲ್ಲಿ ಕಬ್ಬಿನ ಹಾಲನ್ನು ಕುಡಿಯುವುದು ಸಗ್ಗಸುಕ.

ಹಾಲು ತೆಗೆಯುವವನು ಮೊದಲು ಕಬ್ಬಿನ ಗಳುಗಳನ್ನು ಸಿವುಡಿನಿಂದ ತೆಗೆದು ಅವುಗಳ ಮೇಲಿನ ಒಣ ವಾಡಿಯನ್ನು (ಒಣಗಿದ ಎಲೆ) ಕುಡಗೋಲು ಇಲ್ಲವೇ ಕಮ್ಮಕತ್ತಿಯಿಂದ ಚಕಚಕನೇ ಸವರುತ್ತಿದ್ದ. ನಾನು ನೋಡಿದ ಹಾಗೆ ಎಲ್ಲಾ ಕಬ್ಬಿನಹಾಲಿನ ಬಂಡಿಗಳು ಸೀಮೆಎಣ್ಣೆ ಜನರೇಟರಿನಿಂದಲೇ ಓಡುತ್ತಿದ್ದವು. ಪಟ್ ಪಟ್ ಪಟ್ ಎನ್ನುತ್ತಾ ಜನರೇಟರ್ ಚಾಲೂ ಆಗಿ ಗಾಣವನ್ನು ತಿರುಗಿಸುತ್ತಿತ್ತು, ಅಲ್ಲಿ ನಿಂತಾಗ ಕಬ್ಬಿನ ಸಕ್ಕರೆಯ ವಾಸನೆ, ಆ ಸೀಮೆಎಣ್ಣೆ ಹೊಗೆ ವಾಸನೆ ಎರಡೂ ಉರಿಬಿಸಿಲಿನೊಂದಿಗೆ ಕೂಡಿಕೊಂಡು ‘ಏನೋ ಒಂತರಾ’ ಅನುಬವ ಕೊಡುತ್ತಿದ್ದವು.

ಗಾಣ ತಿರುಗಲು ಶುರುವಾದೊಡನೆ ಅದರ ನಡುವಿನ ಹಲ್ಲುಗಳಿದ್ದ ರೋಲರ್ ಗಳು ಕಬ್ಬುಗಳನ್ನು ನೋಡಿ “ಬನ್ನಿ, ಬನ್ನಿ ಈವಾಗ ನಿಮ್ಮನ್ನು ಅಜ್ಜಿಬಜ್ಜಿ ಮಾಡುತ್ತೇವೆ” ಅನ್ನೊ ಹಾಗೆ ತಿರುಗುತ್ತಿದ್ದವು. ಹಾಲು ತೆಗೆಯುವವನು ಕಬ್ಬಿನ ಗಳುಗಳನ್ನು ತನ್ನ ಕಾಲಿನ ಮೇಲೆ ಬಡಿದು ‘ಲಟಕ್’ ಅಂತ ಮುರಿದು ಎರಡು ತುಂಡು ಮಾಡಿ ಅವುಗಳನ್ನು ಆ ಹಲ್ಲಿನ ರೋಲರ್ ಗಳಲ್ಲಿ ತೂರಿಸುತ್ತಿದ್ದ ಆವಾಗಲೇ ನನಗೆ ‘ಹಿಂಡಿ ಹಿಪ್ಪೆಯಾಗು’ ಅನ್ನುವ ಗಾದೆಯ ಪ್ರಾಕ್ಟಿಕಲ್ ಡೆಮೊಂಸ್ಟ್ರೇಶನ್ ಆಗಿದ್ದು.

ಕಬ್ಬು ರೋಲರ್ ಗಳ ನಡುವೆ ಹೋಗಿ ಸಿಕ್ಕಿಬೀಳುತ್ತಲೇ ಅದರಿಂದ ಕಬ್ಬಿನ ಹಾಲು ಸುರಿದು ಅದರ ಕೆಳಗಿನ ತಟ್ಟೆಯಲ್ಲಿ ಬಿದ್ದು, ಹರಿಯುತ್ತಾ ಅದರ ಕೊನೆಗೆ ಇಟ್ಟಿದ್ದ ಸ್ಟೀಲ್ ಬೋಗುಣಿಯನ್ನು ಸೇರುತ್ತಿತ್ತು. ಕಬ್ಬಿನ ಹಾಲಿಗಾಗಿ ಕಾದು ಕುಳಿತಿರುತ್ತಿದ್ದ ನಮಗೆ ಆಗ ಕುಶಿಯೋ ಕುಶಿ. ಸ್ಕ್ರೂಡ್ರೈವರಿನಂತಹ ಒಂದು ಚೂಪಿನಿಂದ ಮಂಜುಗಡ್ಡೆಯ ಗಟ್ಟಿಯನ್ನು ಕೆರೆದು ಕೆರೆದು ಬರ್ಫು ತೆಗೆದು ಅವನ ವಟ್ಟ (ಹೊಲಸು) ಕೈಗಳಿಂದ ಬಾಚಿ ಗ್ಲಾಸುಗಳಿಗೆ ಇಶ್ಟಿಶ್ಟೇ ಹಾಕುತ್ತಿದ್ದ.

ಬರ್ಫು (ಐಸ್) ಹಾಕಿದ ಮೇಲೆ ಅವನು ಆ ಹಾಲನ್ನು ಸೋಸಿ ತನ್ನ ಸ್ಟೀಲ್ ಜಗ್ಗಿಗೆ ಹಾಕಿಕೊಂಡು ನಮ್ಮ ನಮ್ಮ ಗ್ಲಾಸುಗಳಿಗೆ ಮೇಲಿಂದ, ಬಿಲ್ಡ್ ಅಪ್ ಕೊಡುವ ಹಾಗೆ, ಸುರಿಯುತ್ತಿದ್ದ, ನಾವು ನಮ್ಮ ಗ್ಲಾಸನ್ನು ಎತ್ತಿಕೊಂಡು ಆಗಲೇ ಕರಗಲು ಶುರುವಾಗಿದ್ದ ಬರ್ಫಿನ ಜೊತೆ ಕುಡಿಯುತ್ತಿದ್ದೆವು. ಕೆಲವು ಸಲ ಹಾಲು ತೆಗೆಯುವವನು ಕಬ್ಬಿನ ಜೊತೆಗೆ ನಿಂಬೆಹಣ್ಣು ಹಾಗೂ ಹಸಿಶುಂಟಿ ಹಾಕಿ ನುರಿಸಿ ಹಾಲು ತೆಗೆಯುತ್ತಿದ್ದ ಅದರ ರುಚಿ ಮತ್ತು ಕಂಪು ತುಂಬಾ ಚೆನ್ನಾಗಿರುತ್ತಿತ್ತು. ಕೆಲವೊಮ್ಮೆ ನಾವು ಕಬ್ಬಿನ ಹಾಲನ್ನು ಅರ್ದ ಕುಡಿದಾದ ಮೇಲೆ ಅವನಿಗೆ ಬರ್ಪನ್ನು ಹಾಕಲು ಹೇಳುತ್ತಿದ್ದೆವು, ಯಾಕೆ ಅಂದರೆ ಮೊದಲೇ ತುಂಬಾ ಮಂಜುಗಡ್ಡೆ ಹಾಕಿಕೊಂಡರೆ ಅವನು ಹಾಲು‌ ಸುರಿವಾಗ ಕಬ್ಬಿನ ಹಾಲು ಕಡಿಮೆ ಹಿಡಿಯುತ್ತೆ ಅಂತ ಆಮೇಲೆ ಹಾಕಿಕೊಳ್ಳುತ್ತಿದ್ದೆವು!

ಒಂದು ಸಲ ಸ್ಕೂಲು ಬಿಟ್ಟಾದ ಮೇಲೆ ನಮಗೆ ನಮ್ಮ ಗೆಳೆಯ ‘ಪಾರ್ಟಿ’ ಕೊಡಲು ಕಬ್ಬಿನ ಗಾಣಕ್ಕೆ ಕರೆದೊಯ್ದ. ಅಲ್ಲಿ ಎಂದಿನಂತೆ ನಮ್ಮ‌ ಗ್ಲಾಸುಗಳಿಗೆ ಕಬ್ಬಿನ ಹಾಲು ಸುರಿದಾದ ಮೇಲೆ ಅವನು ಇದೂ ತುಂಬಾ ಚೆನ್ನಾಗಿರುತ್ತೆ ಅಂತ ‘ಕಾಲಾ ನಮಕ್ ಚಾಟ್ ಮಸಾಲಾವನ್ನು’ ಎಲ್ಲರಿಗೂ ಹಾಕಿದ, ಗೊತ್ತಿಲ್ಲದ ನಾವು ಗಟಗಟನೆ ಕುಡಿದೆವು. ತುಂಬಾ ಕೆಟ್ಟ ರುಚಿ ಕೊಟ್ಟ ನಮಗೆ ಅದು ಹಿಡಿಸಲಿಲ್ಲ, ಅವನು ಗಹಗಹಿಸಿ ನಗುತ್ತಿದ್ದ. ಮರುದಿನ ಸ್ಕೂಲಿಗೆ ಹೋಂವರ್ಕ್ ಮಾಡದೇ ಬಂದು ಯಾರಿಗೂ ಗೊತ್ತಾಗದೆಂದು ತೆಪ್ಪಗೆ ಕುಳಿತಿದ್ದ ಅವನನ್ನು, ಇಂಗ್ಲಿಶ್ ಸರ್ ಗೆ ಹಿಡಿದುಕೊಟ್ಟು ಅವನ “ಕಾಲಾ ನಮಕ್ ಹಾಲಿನ” ರುಣ ತೀರಿಸಿದೆವು.

ಆಲೆಮನೆ ಇಲ್ಲವೇ ಗಾಣದ ಮನೆಯಲ್ಲಿ ಬೆಲ್ಲವಾಗುವ ಕಬ್ಬಿನ ಹಾಲು!

ಬಡಗಣ ಕರ್ನಾಟಕದಲ್ಲಿ ‘ಗಾಣದ ಮನೆ’ ಅಂದರೆ ತೆಂಕಣ ಕರ್ನಾಟಕದಲ್ಲಿ ‘ಆಲೆಮನೆ’ ಅನ್ನುತ್ತಾರೆ. ದೊಡ್ಡ ಕಡಾಯಿಯಲ್ಲಿ ದಾರಾಕಾರ ಕಬ್ಬಿನ ಹಾಲು ಸುರಿದು ದೊಡ್ಡ ದೊಡ್ಡ ಕಟ್ಟಿಗೆಯ ಇಲ್ಲವೇ ಉಕ್ಕಿನ ಹುಟ್ಟುಗಳಿಂದ ಹಾಲನ್ನು ತಿರುವುತ್ತಾ ಕುದಿಸುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಅದರ ದೊಡ್ಡ ಬಾವಿಯಂತಹ ಒಲೆಯ ಒಂದು ಕೊನೆಯಲ್ಲಿ ಹೊಗೆ ಹೊರ ಹೋಗಲು ಚಿಮಣಿಯಿರುತ್ತದೆ. ಬೆಲ್ಲದ ಗಾಣದ ಮನೆಯ ‘ಟರ್ಮಿನಾಲಜಿ’ ಯಲ್ಲಿ ಆ ಒಲೆಯನ್ನು ‘ಬಟ್ಟಿ’ ಅನ್ನುತ್ತಾರೆ.

ಕಬ್ಬಿನ ಹಾಲಿನಿಂದ ತಾಳೆಯ ನೀರಾದಿಂದ ಬೆಲ್ಲ ತಯಾರಿಸುವುದು ಇಂಡಿಯಾದ ತುಂಬಾ ಹಳೆಯ ಟೆಕ್ನಾಲಜಿ ಹಾಗೂ ಕಲೆ. ತಾಳೆಯ ನೀರಾದಿಂದ ಬೆಲ್ಲವನ್ನು ಬಂಗಾಳ, ಬಾಂಗ್ಲಾದೇಶದ ಕಡೆಯಲ್ಲಿ ತೆಗೆಯುತ್ತಾರೆ. ಕಬ್ಬಿನ ಹಾಲು ಕುದಿದು ಕುದಿದು ಗಟ್ಟಿಯಾಗುತ್ತಾ ಬೆಲ್ಲವಾಗುವುದಕ್ಕೆ ತುಂಬಾ ಹೊತ್ತು ಬೇಕಾಗುತ್ತದೆ ಅದಕ್ಕೆ ನಾನು ಇಲ್ಲಿಯವರೆಗೂ ಹಾಲು ಬೆಲ್ಲವಾಗುವ ಕಂಪ್ಲೀಟ್ ಪ್ರೋಸೆಸ್ ನೋಡಲಾಗಿಲ್ಲ.

ಬೆಲ್ಲವಾಗುವುದಕ್ಕಿಂತ ಸ್ವಲ್ಪ ಮುಂಚೆ ಜಿಗುಟುಬೆಲ್ಲ ತಯಾರಾಗುತ್ತದೆ ಅದು ಬೆಲ್ಲಕ್ಕಿಂತ ರುಚಿಯಾಗಿರುತ್ತದೆ, ಕಬ್ಬನ್ನು ಕಡಾಯಿಯಲ್ಲಿ ಅದ್ದಿದಾಗ ಜಿಗುಟು ಬೆಲ್ಲ ಅದಕ್ಕೆ ಮೆತ್ತಿಕೊಳ್ಳುತ್ತದೆ ಆಗ ತಿನ್ನಲು ಕೊಡುತ್ತಾರೆ. ಕರಾವಳಿ ಬಾಗದ ಆಲೆಮನೆಗಳಲ್ಲಿ ಬಿಸಿ ಜಿಗುಟು ಬೆಲ್ಲದಲ್ಲಿ ಕರಿ ಗೋಡಂಬಿ ಹಣ್ಣುಗಳ ಸರವನ್ನು ಅದ್ದಿ ತಿನ್ನಲು ಕೊಡುತ್ತಾರೆ. ಜಿಗುಟು ಬೆಲ್ಲ ಅಚ್ಚುಗಳಲ್ಲಿ ಹಾಕಿ ತಣಿಯಲು ಬಿಡುತ್ತಾರೆ ಆಗ ಮಾರುಕಟ್ಟೆಗೆ ಒಯ್ಯಬಹುದಾದ ಕಮರ್ಶಿಯಲ್ ಬೆಲ್ಲ ತಯಾರಾಗುತ್ತದೆ.

(ಚಿತ್ರ ಸೆಲೆ: wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: