ಸಣ್ಣಕತೆ: ತಾಯಿ

– ವೆಂಕಟೇಶ ಚಾಗಿ.

ತಾಯಿ, ಅಮ್ಮ, mother

ರಸ್ತೆಯ ಮೇಲೆ ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು, ತಂಪಾದ ಗಾಳಿಯಿಂದ ಪ್ರಯಾಣ ಹಿತವೆನಿಸುತ್ತಿತ್ತು. ರಸ್ತೆ ಪಕ್ಕದ ಮರ-ಗಿಡ, ಮನೆಗಳು ಎಲ್ಲಾ ಹಿಂದಕ್ಕೆ ಓಡುತ್ತಿದ್ದವು. ಮನಸ್ಸು ಮಾತ್ರ ನಿಶ್ಚಲವಾಗಿತ್ತು. ಕಣ್ಣುಗಳು ತದೇಕಚಿತ್ತದಿಂದ ಹೊರಜಗತ್ತನ್ನು ನೋಡುತ್ತಿದ್ದವು. ಅವಳ ಜೀವನದಲ್ಲಿ ನಡೆದ ಹಲವು ಗಟನೆಗಳು ಮನದ ಮೇಲೆ ಬೀರಿದ ಪರಿಣಾಮ ಅಶ್ಟಿಶ್ಟಲ್ಲ. ಡ್ರೈವರ್ ತನ್ನದೇ ಆದ ಯೋಚನಾಲಹರಿಯಲ್ಲಿ ಕಾರ್ ಚಲಾಯಿಸುತ್ತಿದ್ದ. ಮುಂದೆ ಕಾಣುತ್ತಿದ್ದ ಎಶ್ಟೋ ದ್ರುಶ್ಯ ಗಳು ಕಣ್ಣೆದುರು ಬಂದು ಹಾಗೇ ಮರೆಯಾಗುತ್ತಿದ್ದವು. ತಾನು ತೆಗೆದುಕೊಂಡ ನಿರ‍್ದಾರ ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಆ ನಿರ‍್ದಾರ ಮಾತ್ರ ಅವಳಿಗೆ ಸರಿ ಎನಿಸಿತ್ತು. ಸಾಗುವ ದಾರಿ ಇನ್ನೂ ಇದೆ, ಅದಕ್ಕಾಗಿ ದ್ರುತಿಗೆಡದೆ ಸಾಗಬೇಕು ಅಲ್ಲವೇ…?

***

ಬಡತನದಲ್ಲಿ ಬೆಳೆದು ಬಂದ ಸರಿತಾ, ಕಶ್ಟಪಟ್ಟು ಓದಿ ಸರಕಾರಿ ನೌಕರಿ ಪಡೆದು, ಹೆತ್ತವರಿಗೆ ಬಾರವಾಗದಂತೆ ಸ್ವಾವಲಂಬಿಯಾಗಿ ಬದುಕುತ್ತಿರುವವಳು. ತಂದೆ-ತಾಯಿ ವಯಸ್ಸಿಗೆ ಬಂದ ಮಗಳಿಗೆ ಇಶ್ಟವಾಗುವ ಹುಡುಗನನ್ನೇ ಹುಡುಕಿ ಮದುವೆ ಮಾಡಿದ್ದರು. ಹೆಸರು ಮನೋಹರ, ಸರಕಾರಿ ನೌಕರ. ನೋಡಲು ಸಾದಾರಣನಾದರೂ ಒಳ್ಳೆಯ ನಡತೆ, ಇರುವುದರಲ್ಲೇ ತ್ರುಪ್ತಿಯಿಂದ ಜೀವನ ನಡೆಸುವ ಮನೋಬಾವ ಮನೋಹರನದು. ಇಬ್ಬರ ಜೋಡಿ ಸುಂದರವಾಗಿತ್ತು. ಬುದ್ದಿವಂತಿಕೆಯಿಂದ ಸಂಸಾರದ ಬಂಡಿಯನ್ನು ಎಳೆಯುತ್ತಿದ್ದರು.

ಕಾಲ ಉರುಳಿದಂತೆ ಮುದ್ದಾದ ಎರಡು ಮಕ್ಕಳಾದುವು. ಒಬ್ಬ ಮಹೇಶ್ ಇನ್ನೊಬ್ಬ ಮೋಹನ್. ಹೆಣ್ಣು ಮಗು ಬೇಕೆಂಬ ಬಯಕೆಗೆ ದಂಪತಿಗಳು ಮೂರನೆಯ ಮಗು ಹೆತ್ತರು. ಅವಳೇ ರಾದಾ. ಸ್ವಲ್ಪ ಕಶ್ಟವಾದರೂ ಮೂವರು ಮಕ್ಕಳಿಗೂ ಉತ್ತಮ ವಿದ್ಯಾಬ್ಯಾಸ ಕೊಡಿಸಿದ್ದರು. ಇಬ್ಬರೂ ಗಂಡು ಮಕ್ಕಳು ಒಳ್ಳೆಯ ಕೆಲಸಕ್ಕೆ ಸೇರಿಕೊಂಡಿದ್ದೂ ಆಯ್ತು. ಮಗಳು ರಾದಾಳನ್ನು ಒಳ್ಳೆಯ ಮನೆತನಕ್ಕೆ ಮದುವೆ ಮಾಡಿ ಕೊಟ್ಟರು.

ಕಾಲ ಕಳೆಯುತ್ತಿದ್ದಂತೆ ಮನೋಹರ ಹ್ರುದಯಾಗಾತದಿಂದ ಇಹಲೋಕ ತ್ಯಜಿಸುತ್ತಾನೆ. ಬಾಳ ನೌಕೆಯಲಿ ಸರಿತಾ ಈಗ ಏಕಾಂಗಿ. ಆದರೂ ದ್ರುತಿಗೆಡದೇ ಜೀವನವನ್ನು ದೈರ‍್ಯದಿಂದ ಮುನ್ನೆಡುಸುವ ಚಲ ಅವಳದು. ತನ್ನೆರಡು ಗಂಡು ಮಕ್ಕಳು ವಯಸ್ಸಿಗೆ ಬಂದಿರುವುದರಿಂದ ಅವರಿಗೆ ಮದುವೆ ಮಾಡಬೇಕೆನ್ನುವ ಹಂಬಲ. ಸೊಸೆಯಂದಿರು ಮನೆಗೆ ಬರಬೇಕು, ಇಳಿವಯಸ್ಸಿನ ಕಾಲವನ್ನು ಮೊಮ್ಮಕ್ಕಳೊಂದಿಗೆ ಕಳೆಯಬೇಕು, ತನ್ನ ಮನೆ ಒಂದು ನಂದನವನವಾಗಬೇಕು, ಒಂದು ತುಂಬು ಸಂಸಾರದ ಮನೆ ತನ್ನದಾಗಬೇಕು ಎಂಬ ಬಯಕೆ ಅವಳದು. ತಾಯಿ ಸೊಸೆಯಂದಿರನ್ನು ಹುಡುಕುವದಕ್ಕೂ ಮೊದಲೇ ಮಹೇಶ್ ಮತ್ತು ಮೋಹನ ತಮ್ಮ ಜೋಡಿಗಳನ್ನು ಹುಡುಕಿಕೊಂಡಿದ್ದಾಗಿತ್ತು. ಸರಿತಾ ಮಕ್ಕಳ ಇಚ್ಚೆಗೆ ವಿರೋದ ವ್ಯಕ್ತಪಡಿಸದೇ ಸಂತೋಶದಿಂದ ಮದುವೆಗೆ ಒಪ್ಪಿಕೊಂಡಳು. ತಾಯಿಯಾಗಿ ಮಕ್ಕಳ ಸಂತೋಶವೇ ತನ್ನ ಸಂತೋಶ ಎಂದುಕೊಂಡಳು. ತಾನು ಸಂಪಾದಿಸಿದ ಹಣವನ್ನೆಲ್ಲಾ ಇಬ್ಬರೂ ಗಂಡು ಮಕ್ಕಳ ಮದುವೆಗೆ ಕರ‍್ಚು ಮಾಡಿದಳು.

ಕೆಲವು ದಿನಗಳ ಕಾಲ ಮಕ್ಕಳು-ಸೊಸೆಯಂದಿರೊಂದಿಗೆ ಚೆನ್ನಾಗಿ ನಡೆದ ಸಂಸಾರದಲ್ಲಿ ದಿನಗಳು ಉರುಳಿದಂತೆ ವೈಮನುಸ್ಸು, ಜಗಳಗಳು ಪ್ರಾರಂಬವಾಗಿ, ಮನೆ ಅಶಾಂತಿಯ ಗೂಡಾಯಿತು. ಸರಿತಾ ಯಾರ ಪರವಾಗಿ ಮಾತನಾಡಿದರೂ ಅದು ಇನ್ನೊಬ್ಬರಿಗೆ ಎದುರಾಗಿ ಮಾತಾಡಿದಂತೆ ಕಾಣುತ್ತಿತ್ತು. ಸೊಸೆಯಂದಿರ, ಅಣ್ಣ-ತಮ್ಮಂದಿರ ಜಗಳದಲ್ಲಿ ಸರಿತಾಳ ಪಾಡು ಹೇಳತೀರದಂತಾಯಿತು. ಹಲವು ಬಾರಿ ಉಪವಾಸ ಮಲಗುವ ಪರಿಸ್ತಿತಿ ಬಂದೊದಗಿತು. ಮಕ್ಕಳು ಸೊಸೆಯಂದಿರು ಮಾತ್ರ ತಮ್ಮ ಸ್ವಾರ‍್ತಕ್ಕೆ ತಾಯಿಯನ್ನು ಏಕಾಂಗಿಯಾಗಿಸಿದರು. ಹಿರಿಯ ಮಗ ಮಹೇಶ ನೆಮ್ಮದಿಯ ಸಂಸಾರದ ಜೀವನಕ್ಕಾಗಿ ಬೇರೆ ಮನೆ ಮಾಡಿಕೊಂಡನು. ಸರಿತಾ ಮನೆ ಎರಡಾಗುವುದನ್ನು ತಡೆಯಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ. ಕಿರಿಯ ಮಗನ ಜೊತೆಗೆ ಕಾಲ ಕಳೆಯಬೇಕಾಯಿತು. ಮೊದ ಮೊದಲು ಬೇರೆ ಮನೆ ಮಾಡಿದ್ದರೂ ಹಿರಿಯ ಮಗ ತಾಯಿಯ ಯೋಗಕ್ಶೇಮ ವಿಚಾರಿಸಲು ಬರುತ್ತಿದ್ದ. ಆದರೆ ಕಾಲ ಕಳೆದಂತೆ ದೂರವಾಗತೊಡಗಿದ.

ಇತ್ತ ಚಿಕ್ಕ ಸೊಸೆ ಅತ್ತೆಯನ್ನು ನೋಡಿಕೊಳ್ಳುವ ವರಸೆಯೇ ಬದಲಾಗತೊಡಗಿತು. ಸಣ್ಣ ಪುಟ್ಟ ವಿಚಾರಗಳಲ್ಲೂ ಸರಿತಾಳೊಂದಿಗೆ ಮನಸ್ತಾಪ ಮಾಡಿಕೊಳ್ಳುತ್ತಿದ್ದಳು. ಚಿಕ್ಕ ಮಗ ತನ್ನ ಹೆಂಡತಿಗೆ ಬುದ್ದಿವಾದ ಹೇಳಲಾಗದೇ ಅಣ್ಣನ ದಾರಿ ಹಿಡಿದನು. ತಾನೇ ಬೇರೆ ಕಡೆ ವರ‍್ಗಾವಣೆ ಮಾಡಿಸಿಕೊಂಡು ಬೇರೊಂದು ದೂರದ ಊರಿಗೆ ತೆರಳಿ ವಾಸ ಪ್ರಾರಂಬಿಸಿದನು. ಇಬ್ಬರು ಗಂಡು ಮಕ್ಕಳು ತನ್ನಿಂದ ದೂರವಾದರೂ ಸರಿತಾ ಏಕಾಂಗಿಯಾಗಿ ಅದೇ ಮನೆಯಲ್ಲಿ ವಾಸ ಮಾಡತೊಡಗಿದಳು.

ತಾಯಿಯಾಗಿ ತಾನು ಮಾಡಬೇಕಾದ ಕರ‍್ತವ್ಯಗಳನ್ನು ಸರಿತಾ ನಿಶ್ಟೆಯಿಂದ ಕೈಗೊಂಡಿದ್ದಳು. ಇಳಿವಯಸ್ಸಿನಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಿದ್ದ ಸರಿತಾ ಏಕಾಂಗಿಯಾಗಿ ಬದುಕಬೇಕಾಯಿತು. ತಪ್ಪು ತನ್ನದೇನಾ ಅತವಾ ವಿದಿಯ ಆಟವಿರಬಹುದಾ? ಎಂಬ ಪ್ರಶ್ನೆಗಳಿಗೆ ಉತ್ತರ ಕೊನೆಗೂ ಸರಿತಾಳಿಗೆ ಸಿಗಲೇ ಇಲ್ಲ. ತಾನು ಏಕಾಂಗಿಯಾಗಿ ಬದುಕುತ್ತಿದ್ದರೂ ಮಕ್ಕಳು ಮನೆಗೆ ಕರೆಯುವುದಿರಲಿ, ನೋಡಲು ಬರುವುದನ್ನೂ ನಿಲ್ಲಿಸಿದರು. ಮನೆಗೆ ಬಂದ ಸೊಸೆಯಂದಿರಾದರೂ ತಾಯಿಯಂತೆ ಕಾಣಬೇಕಾಗಿದ್ದ ಸರಿತಾಳನ್ನು ಆ ಬಾವನೆಯಿಂದ ಕಾಣಲೇ ಇಲ್ಲ.

ದಿನಗಳೆದಂತೆ ಏಕಾಂಗಿತನ ಕಾಡತೊಡಗಿತು. ತಾನು ಇಲ್ಲಿಯವರೆಗೂ ಮಕ್ಕಳಿಗಾಗಿಯೇ ಬದುಕಿದ್ದು. ಮಕ್ಕಳಿಗಾಗಿಯೇ ಜೀವನ ಸವೆಸಿದ್ದಾಗಿದೆ. ಆದರೆ, ಮುಂದಿನ ದಿನಗಳನ್ನು ಒಬ್ಬಂಟಿಯಾಗಿ ಕಳೆಯಬಾರದು ಎಂದು ಸರಿತಾ ಒಂದು ನಿರ‍್ದಾರ ತೆಗೆದುಕೊಂಡಳು.

***

ಕಾರು ನಿದಾನವಾಗಿ ಸಾಗುತ್ತಿತ್ತು. ಜೀವನದ ಗಟನೆಗಳು ಹಾಗೆಯೇ ಕಣ್ಣೆದುರು ಬರುತ್ತಿದ್ದವು. ಹೌದು ತಾನು ತೆಗೆದುಕೊಂಡ ನಿರ‍್ದಾರ ಸೂಕ್ತವಾಗಿದೆ ಎಂಬ ಸಂಕಲ್ಪ ದ್ರುಡವಾಗಿತ್ತು. ಕಾರು ಗೇಟಿನ ಬಳಿ ಬರುತ್ತಿದ್ದಂತೆಯೇ ಗೆಳತಿ ಮದುಮತಿ ಆಲಿಂಗಿಸಿ ಬರಮಾಡಿಕೊಂಡಳು. ತುಂಬಾ ವರ‍್ಶಗಳ ಸ್ನೇಹ ಅವರಿಬ್ಬರದು. ತಮ್ಮ ಬದುಕಿನ ಸುಕ ದುಕ್ಕಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು. ಇಂದಿನ ಅವರ ಬೇಟಿ ವಿಶೇಶವಾಗಿತ್ತು. ಸರಿತಾಳಿಗೆ ದೈರ‍್ಯದ ಮಾತುಗಳನ್ನು ಹೇಳಿ, “ನೀನು ಇಲ್ಲಿಯವರೆಗೂ ನಿನ್ನ ಮಕ್ಕಳಿಗೆ ತಾಯಿಯಾಗಿದ್ದೆ. ಇನ್ನು ಮುಂದೆ ಇಲ್ಲಿನ ಅನಾತ ಮಕ್ಕಳಿಗೂ ತಾಯಿಯಾಗು” ಎಂದು ಬರಮಾಡಿಕೊಂಡಳು. ಆ ಮುದ್ದು ಮಕ್ಕಳ ನಗು ಸರಿತಾಳ ನೋವನ್ನೆಲ್ಲಾ ಮರೆಸಿತ್ತು.

(ಚಿತ್ರ ಸೆಲೆ: sparkthemagazine.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V. Shashidhara says:

    ಮನಮಿಡಿಯುವ ಸೊಗಸಾದ ಕಥೆ.

  2. Shivakumar kodihal says:

    ತುಂಬಾ ಮನಮಿಡಿಯುವ ಕಥೆ ಸರ್ ಇವತ್ತಿನ ವಾಸ್ತವಕ್ಕೆ ಹತ್ತಿರವಾಗಿದೆ

ಅನಿಸಿಕೆ ಬರೆಯಿರಿ: