ಬಸವಣ್ಣನ ವಚನಗಳ ಓದು – 5ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಕಾಲಲಿ ಕಟ್ಟಿದ ಗುಂಡು
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇಂತಪ್ಪ
ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ
ಕೂಡಲಸಂಗಯ್ಯಾ.

ಇತ್ತ ನಿಸರ‍್ಗದ ನೆಲೆಯಲ್ಲಿ ಒಂದು ಪ್ರಾಣಿಯಾಗಿ, ಅತ್ತ ಸಾಮಾಜಿಕ ನೆಲೆಯಲ್ಲಿ ಒಬ್ಬ ಮಾನವ ಜೀವಿಯಾಗಿ ಬಾಳುತ್ತಿರುವ ವ್ಯಕ್ತಿಯ ಮಯ್ ಮನದ ತೊಳಲಾಟವನ್ನು ಈ ವಚನದಲ್ಲಿ ಹೇಳಲಾಗಿದೆ.

‘ನಿಸರ‍್ಗದ ನೆಲೆ‘ ಎಂದರೆ ಜೀವಿಗಳು ಹುಟ್ಟಿ ಬೆಳೆದು ಬಾಳಿ ಅಳಿಯುತ್ತಿರುವ ಜಗತ್ತು/ಪ್ರಪಂಚ/ಲೋಕ. ‘ಸಾಮಾಜಿಕ ನೆಲೆ‘ ಎಂದರೆ ಮಾನವ ಸಮುದಾಯವು ಕಟ್ಟಿಕೊಂಡಿರುವ ಜಾತಿ, ಮತ, ಕುಟುಂಬ, ವಿದ್ಯೆ, ಕಾನೂನು. ಆಡಳಿತ ಮುಂತಾದ ಸಾಮಾಜಿಕ ಒಕ್ಕೂಟಗಳು.

( ಕಾಲ್+ಅಲ್+ಇ; ಕಾಲು=ನಡೆಯಲು ಬಳಸುವ ಅಂಗ/ಮೊಣಕಾಲಿನಿಂದ ಪಾದದವರೆಗಿನ ಅಂಗ; ಕಾಲಲಿ=ಕಾಲಿನಲ್ಲಿ; ಕಟ್ಟು=ಬಿಗಿದು/ತೊಡಿಸು; ಕಟ್ಟಿದ=ಬಿಗಿದಿರುವ/ತೊಡಿಸಿರುವ; ಗುಂಡು=ದುಂಡಗೆ ಮತ್ತು ದಪ್ಪಗಿರುವ ಕಲ್ಲು/ದೊಡ್ಡ ಕಲ್ಲು; ಕೊರಳ್+ಅಲಿ; ಕೊರಳ್/ಕೊರಳು=ಕತ್ತು/ಕುತ್ತಿಗೆ; ಕೊರಳಲಿ=ಕತ್ತಿನಲ್ಲಿ/ಕುತ್ತಿಗೆಯಲ್ಲಿ; ಬೆಂಡು=ಜೋಳದ ದಂಟು/ಸೋರೆಕಾಯಿಯ ಒಣಗಿದ ಬುಂಡೆ/ನೀರಿನಲ್ಲಿ ಮುಳುಗದೆ ಮೇಲೆ ಮೇಲೆ ತೇಲುವ ದಂಟು/ಈಜುಗಾರರು ಬಳಸುವ ಬುರುಡೆ; ತೇಲ್+ಅಲ್+ಈಯದು; ತೇಲ್/ತೇಲು=ನೀರಿನಲ್ಲಿ ಮುಳುಗದೆ ಮೇಲೆಯೇ ಇರುವುದು/ಚಲಿಸುವುದು; ತೇಲಲು=ನೀರಿನ ಮೇಲೆಯೇ ಇರಲು/ಚಲಿಸಲು; ಈ=ಕೊಡು/ಅವಕಾಶವನ್ನು ನೀಡು; ಈಯದು=ಕೊಡುವುದಿಲ್ಲ/ಬಿಡುವುದಿಲ್ಲ;

ಕಾಲಲಿ ಕಟ್ಟಿದ ಗುಂಡು ಕೊರಳಲಿ ಕಟ್ಟಿದ ಬೆಂಡು ತೇಲಲೀಯದು ಗುಂಡು ಮುಳಗಲೀಯದು ಬೆಂಡು=ಒಬ್ಬ ವ್ಯಕ್ತಿಯ ಕಾಲಿಗೆ ಅತ್ತ ದೊಡ್ಡ ಕಲ್ಲೊಂದನ್ನು ಬಿಗಿದು ಕಟ್ಟಿ, ಇತ್ತ ಅವನ ಕೊರಳಿಗೆ ಬೆಂಡನ್ನು ಬಿಗಿದು ನೀರಿನಿಂದ ತುಂಬಿರುವ ಆಳವಾದ ಕೊಳ/ಕೆರೆಯೊಳಕ್ಕೆ ಅವನನ್ನು ಎಸೆಯಲಾಗಿದೆ. ಕಾಲಲ್ಲಿ ಕಟ್ಟಿರುವ ದೊಡ್ಡ ಕಲ್ಲಿನ ಗುಂಡು ಅವನ ಮಯ್ಯನ್ನು/ದೇಹವನ್ನು ನೀರಿನ ಒಳಕ್ಕೆ ಎಳೆದುಕೊಳ್ಳುತ್ತಿದ್ದರೆ, ಕೊರಳಿಗೆ ಕಟ್ಟಿರುವ ಬೆಂಡು ಅವನ ಮಯ್ಯನ್ನು ನೀರಿನೊಳಗೆ ಮುಳುಗಲು ಬಿಡದೆ ಮೇಲಕ್ಕೆ ಎಳೆಯುತ್ತಿದೆ. ಇತ್ತ ಬದುಕಲು ಬಿಡದೆ, ಅತ್ತ ಸಾಯಲು ಬಿಡದೆ ಗುಂಡು/ಬೆಂಡುಗಳು ಅವನ ಮಯ್ಯನ್ನು ತಮ್ಮತ್ತ ಸೆಳೆಯುತ್ತಿರುವ ಈ ಪ್ರಸಂಗವನ್ನು ನಿಸರ‍್ಗ ಮತ್ತು ಸಮಾಜದ ನೆಲೆಗಳ ನಡುವೆ ಬಾಳುತ್ತಿರುವ ವ್ಯಕ್ತಿಯ ಮಯ್ ಮನದ ತೊಳಲಾಟವನ್ನು ನಿರೂಪಿಸಲು ಒಂದು ರೂಪಕವಾಗಿ ವಚನಕಾರನು ಚಿತ್ರಿಸಿದ್ದಾನೆ.

ಹೊಟ್ಟೆಯ ಹಸಿವು ಮತ್ತು ಮಯ್ಯಿನ ಕಾಮದ ಒಳಮಿಡಿತಗಳು ವ್ಯಕ್ತಿಯನ್ನು ಜೀವನದ ಉದ್ದಕ್ಕೂ ನಿರಂತರವಾಗಿ ಕಾಡುತ್ತಿರುತ್ತವೆ. ಅಂತೆಯೇ ವ್ಯಕ್ತಿಯು ಹುಟ್ಟಿ ಬೆಳೆದು ಬಾಳುತ್ತಿರುವ ಸಮಾಜದ ಕಟ್ಟುಪಾಡುಗಳು/ಸಂಪ್ರದಾಯಗಳು/ಆಚರಣೆಗಳು ಮತ್ತು ಆಡಳಿತದ ಕಾನೂನುಗಳು ಅವನನ್ನು ‘ಹೀಗೆ ಮಾಡಬೇಕು/ಹೀಗೆ ಮಾಡಬಾರದು‘ ಎಂದು ನಿಯಂತ್ರಿಸುತ್ತಿವೆ. ನಿಸರ‍್ಗ ಸಹಜವಾದ ಹಸಿವು, ಕಾಮದ ಸೆಳೆತ ಮತ್ತು ಮಾನವ ನಿರ‍್ಮಿತ ಕಟ್ಟುಪಾಡುಗಳ ನಡುವೆ ಸಿಲುಕಿರುವ ವ್ಯಕ್ತಿಯು ಸದಾಕಾಲ ಇಬ್ಬಗೆಯ ತುಯ್ದಾಡುವಿಕೆಯಲ್ಲಿ ಒದ್ದಾಡುತ್ತಿರುತ್ತಾನೆ. ಒಂದು ಕಡೆ ಮಯ್ಯಿನ/ದೇಹದ ಕಾಮನೆಯು ತನ್ನ ಬಯಕೆ/ಆಸೆಯನ್ನು ಪೂರಯಿಸಿಕೊಳ್ಳಲು ಹಂಬಲಿಸುತ್ತಿದ್ದರೆ, ಮತ್ತೊಂದೆಡೆ ಅದನ್ನು ಬಂದ ಹಾಗೆಯೇ ಹರಿಯಬಿಡದಂತೆ ಸಮಾಜದ ಕಟ್ಟಲೆಗಳು ತಡೆಹಿಡಿದಿವೆ . ಆದುದರಿಂದಲೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದ ಅನೇಕ ಸನ್ನಿವೇಶಗಳಲ್ಲಿ ‘ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ನ್ಯಾಯ/ಯಾವುದು ಅನ್ಯಾಯ‘ ಎಂಬುದನ್ನು ಸರಿಯಾಗಿ ನಿರ‍್ಣಯಿಸಲಾಗದೆ, ಇಬ್ಬಗೆಯ ಸಂಕಟಕ್ಕೆ ಒಳಗಾಗಿ ತೊಳಲಾಡುತ್ತ, ಒಳಿತು ಕೆಡುಕಿನ ಒಳಮಿಡಿತಗಳಿಂದ ಪರಿತಪಿಸುತ್ತಿರುತ್ತಾನೆ ಎಂಬ ತಿರುಳನ್ನು ಈ ರೂಪಕವು ಸೂಚಿಸುತ್ತಿದೆ.

ಇಂತು+ಅಪ್ಪ; ಇಂತು=ಈ ರೀತಿ/ಬಗೆ; ಅಪ್ಪ=ಆಗಿರುವ; ಇಂತಪ್ಪ=ಈ ರೀತಿಯಲ್ಲಿರುವ/ಬಗೆಯಲ್ಲಿರುವ; ಸಂಸಾರ=ಬದುಕು/ಬಾಳು/ಲೋಕದ ಜೀವನ; ಶರಧಿ=ಕಡಲು/ಸಮುದ್ರ/ಸಾಗರ; ಸಂಸಾರಶರಧಿ=ಮಾನವರ ಬದುಕಿನಲ್ಲಿ ಉಂಟಾಗುವ ಏರಿಳಿತಗಳಿಗೆ ಮತ್ತು ಒಲವು ನಲಿವು ಸಾವು ನೋವಿನಿಂದ ಕೂಡಿದ ಆಗುಹೋಗುಗಳಿಗೆ/ಪ್ರಸಂಗಗಳಿಗೆ ಮೊದಲಿಲ್ಲ ಕಡೆಯಿಲ್ಲ. ಆದ್ದರಿಂದ ಒಂದೇ ನೋಟದಲ್ಲಿ ತುದಿ ಮೊದಲನ್ನು ಕಾಣಲಾಗದ ಸಾಗರದ ವಿಸ್ತಾರಕ್ಕೆ/ಆಳಕ್ಕೆ ಮಾನವರ ಜೀವನವನ್ನು ಹೋಲಿಸುತ್ತಾರೆ; ‘ಸಂಸಾರಶರಧಿ‘ ಎನ್ನುವ ಪದರೂಪವು ಈ ಬಗೆಯ ತಿರುಳಿನಲ್ಲಿ ಒಂದು ನುಡಿಗಟ್ಟಾಗಿ ಬಳಕೆಯಲ್ಲಿದೆ;

ದಾಂಟು=ಹಾರು/ನೆಗೆ/ಜಿಗಿ; ದಾಂಟಿಸಿ=ದಾಟಿಹೋಗುವಂತೆ ಮಾಡಿ/ಜಿಗಿದು ಪಾರಾಗುವಂತೆ ಮಾಡಿ; ಕಾಲ+ಅಂತಕ; ಕಾಲ=ಯಮ; ಅಂತಕ=ಕೊಂದವನು/ವಿನಾಶಕ; ಕಾಲಾಂತಕ=ಶಿವ/ಈಶ್ವರ/ಯಮನನ್ನು ಕೊಂದವನು; ಕಾಯ್=ಕಾಪಾಡು/ಉಳಿಸು/ಸಲಹು; ಕೂಡಲಸಂಗ+ಅಯ್ಯಾ; ಕೂಡಲಸಂಗ=ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ. ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಯ್ಯಾ=ಜೀವನದಲ್ಲಿ ಕೆಟ್ಟ ನಡೆನುಡಿಗಳಿಗೆ ಬಲಿಯಾಗದೆ , ಅರಿವು ಮತ್ತು ಎಚ್ಚರದ ನಡೆನುಡಿಗಳಿಂದ ಬಾಳುವಂತೆ ಮಾಡು ಎಂದು ವ್ಯಕ್ತಿಯು ಶಿವನಲ್ಲಿ ಮೊರೆಯಿಡುತ್ತಿದ್ದಾನೆ.)

ತನಗೆ ಮುನಿವರಿಗೆ
ತಾ ಮುನಿಯಲೇಕಯ್ಯಾ
ತನಗಾದ ಆಗೇನು
ಅವರಿಗಾದ ಚೇಗೆಯೇನು
ತನುವಿನ ಕೋಪ
ತನ್ನ ಹಿರಿಯತನದ ಕೇಡು
ಮನದ ಕೋಪ
ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು
ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು
ಕೂಡಲಸಂಗಮದೇವಾ.

ಜೀವನದ ಆಗುಹೋಗುಗಳಲ್ಲಿ ನಾನಾ ಕಾರಣಗಳಿಂದಾಗಿ ವ್ಯಕ್ತಿಯ ಮಯ್ ಮನದಲ್ಲಿ ಮೂಡುವ/ಕೆರಳುವ ಕೋಪವನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದು ಒಳ್ಳೆಯದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ತನಗೆ=ವ್ಯಕ್ತಿಗೆ; ಮುನಿ=ಸಿಟ್ಟಾಗು/ಕೋಪಗೊಳ್ಳು; ತನಗೆ ಮುನಿವರಿಗೆ=ತನ್ನ ನಡೆನುಡಿಗಳನ್ನು ಕಂಡು ಕೋಪಗೊಳ್ಳುವ ವ್ಯಕ್ತಿಯ ಬಗ್ಗೆ; ತಾ=ತಾನು/ವ್ಯಕ್ತಿಯು; ಮುನಿ+ಅಲ್+ಏಕೆ+ಅಯ್ಯಾ; ಮುನಿಯಲ್=ಸಿಟ್ಟುಗೊಳ್ಳುವುದು/ಕೋಪಗೊಳ್ಳುವುದು; ಏಕೆ=ಯಾವುದಕ್ಕಾಗಿ; ಅಯ್ಯಾ=ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ=ತನ್ನ ಬಗ್ಗೆ ಕೋಪಗೊಂಡು ಕೆಟ್ಟ ರೀತಿಯಿಂದ ನಡೆದುಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ತಾನೂ ಅದೇ ಬಗೆಯಲ್ಲಿ ಕೋಪಗೊಳ್ಳುವುದರಿಂದ ಏನು ತಾನೆ ಪ್ರಯೋಜನ. ಅಂದರೆ ಇಬ್ಬರೂ ಕೋಪಗೊಳ್ಳುವುದರಿಂದ ಆ ಸನ್ನಿವೇಶದಲ್ಲಿ ಉಂಟಾಗಿರುವ ತೊಡಕು/ಸಮಸ್ಯೆ/ಗೊಂದಲ ತಂತಾನೇ ನಿವಾರಣೆಯಾಗುವುದಿಲ್ಲ;

ತನಗೆ+ಆದ; ಆಗು+ಏನು; ಆಗು=ದೊರಕುವುದು/ಒದಗಿ ಬರುವುದು/ಪಾಲಿಗೆ ಬರುವುದು/ಜರುಗುವುದು; ಏನು=ಯಾವುದು; ಅವರಿಗೆ+ಆದ; ಚೇಗೆ+ಏನು; ಚೇಗೆ=ಕೇಡು/ಹಾನಿ;

ತನಗಾದ ಆಗೇನು ಅವರಿಗಾದ ಚೇಗೇಯೇನು=ಕೋಪಗೊಂಡ ವ್ಯಕ್ತಿಯ ಎದುರಾಗಿ ತಾನು ಕೋಪವನ್ನು ಮಾಡಿಕೊಳ್ಳುವುದರಿಂದ ತನಗೆ ಉಂಟಾದ ಒಳಿತೇನು, ಅವರಿಗೆ ಆದ ಕೇಡೇನು. ಅಂದರೆ ಕೋಪಗೊಂಡ ಮಾತ್ರದಿಂದಲೇ ವ್ಯಕ್ತಿಗೆ ಒಳಿತಾಗಲೀ, ಎದುರಾಳಿಗೆ ಕೇಡಾಗಲೀ ತಟ್ಟುವುದಿಲ್ಲ; ತನು=ಮಯ್/ದೇಹ/ಶರೀರ; ಕೋಪ=ಸಿಟ್ಟು/ಮುನಿಸು;

ಕೋಪ ಎಂಬ ಒಳಮಿಡಿತವು ವ್ಯಕ್ತಿಯ ಮಯ್ ಮನದಲ್ಲಿ ಹೇಗೆ ಮೂಡುತ್ತದೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳೇನೆಂಬುದನ್ನು ತಿಳಿದುಕೊಂಡಾಗ, ಕೋಪದ ಜತೆಜತೆಯಲ್ಲಿಯೇ ಒದಗಿ ಬರುವ ಸಂಕಟ/ಬೇಗೆ/ಬವಣೆ/ಸಾವು/ನೋವು ಗಮನಕ್ಕೆ ಬರುತ್ತವೆ. ವ್ಯಕ್ತಿಯು ತಾನು ಆಸೆಪಟ್ಟಿದ್ದನ್ನು ಪಡೆಯುವುದಕ್ಕೆ ಇಲ್ಲವೇ ತಾನು ಮಾಡುವ ಕೆಲಸಕ್ಕೆ ಅಡ್ಡಿ ಆತಂಕಗಳು ಉಂಟಾದಾಗ, ಅದಕ್ಕೆ ಕಾರಣವಾದ ವಸ್ತು/ಜೀವಿ/ವ್ಯಕ್ತಿಯ ಮೇಲೆ ಮರುಗಳಿಗೆಯಲ್ಲಿಯೇ ಮನದಲ್ಲಿ ಮೂಡುವ ಒಳಮಿಡಿತವೇ ಕೋಪ. ಕೋಪದಿಂದ ಕೆರಳಿದ/ಆಕ್ರೋಶಗೊಂಡ/ಉದ್ರೇಕಗೊಂಡ ವ್ಯಕ್ತಿಯು ಕೋಪಕ್ಕೆ ಕಾರಣವಾದ ವಸ್ತು/ಜೀವಿ/ವ್ಯಕ್ತಿಯ ಮೇಲೆ ಹಲ್ಲೆ/ದಾಳಿ ಮಾಡಲು ಮುನ್ನುಗ್ಗುತ್ತಾನೆ. ಈ ದಾಳಿಯು ಮಾತಿನ ರೂಪದ ಬಯ್ಗುಳವಾಗಿರಬಹುದು ಇಲ್ಲವೇ ಹೊಡೆಯುವ ಏಟುಗಳಾಗಿರಬಹುದು. ಹೊಡೆತದಿಂದ ವಸ್ತುಗಳು ಹಾಳಾದರೆ, ಬಯ್ಗುಳ/ಹೊಡೆತ ತಿಂದ ವ್ಯಕ್ತಿಯ ಜತೆಯ ನಂಟು ಮುರಿದುಬೀಳುತ್ತದೆ ಇಲ್ಲವೇ ಆ ವ್ಯಕ್ತಿಯ ಜತೆಯಲ್ಲಿ ಗುದ್ದಾಟ/ಹೊಡೆದಾಟ ನಡೆದು ಹಲವು ರೀತಿಯಲ್ಲಿ ಇಬ್ಬರಿಗೂ ಹಾನಿಯುಂಟಾಗುತ್ತದೆ. ಅರೆಗಳಿಗೆಯ ಕೋಪವು ವ್ಯಕ್ತಿಯ ಬದುಕನ್ನೇ ದುರಂತದತ್ತ ದೂಡಬಲ್ಲದ್ದಾಗಿರುತ್ತದೆ.

ತನ್ನ=ಕೋಪಗೊಂಡ ವ್ಯಕ್ತಿಯ; ಹಿರಿದು=ದೊಡ್ಡದು/ಮಿಗಿಲಾದುದು/ಅತಿಶಯವಾದುದು; ಹಿರಿಯತನ=ದೊಡ್ಡತನ/ವಯಸ್ಸಿನಲ್ಲಿ ಇತರರಿಗಿಂತ ದೊಡ್ಡವನು/ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವ ಗುಣ; ತನುವಿನ ಕೋಪ ತನ್ನ ಹಿರಿಯತನದ ಕೇಡು=ಯಾವುದೇ ಸನ್ನಿವೇಶದಲ್ಲಿ ವ್ಯಕ್ತಿಯು ಕೋಪದಿಂದ ಕೆರಳಿ, ಕೋಪಕ್ಕೆ ಕಾರಣವಾದ ವಸ್ತುವನ್ನು ಒಡೆದು/ತುಳಿದು ಹಾಳುಮಾಡಿದರೆ/ವ್ಯಕ್ತಿಯ ಮಯ್ ಮೇಲೆ ಕಯ್ ಮಾಡಿ ಹಲ್ಲೆಯನ್ನು ನಡೆಸಿ, ಸಾವು

ನೋವುಗಳಿಗೆ ಕಾರಣನಾದರೆ, ಆಗ ಅಂತಹ ವ್ಯಕ್ತಿಯು ತನ್ನ ಒಳ್ಳೆಯತನದ ವ್ಯಕ್ತಿತ್ವಕ್ಕೆ ಕುಂದನ್ನು ತಂದುಕೊಳ್ಳುತ್ತಾನೆ/ ನೋಡುವವರ ಕಣ್ಣಿಗೆ ಮಾನಸಿಕವಾಗಿ ಸಮತೋಲನವನ್ನು ಕಳೆದುಕೊಂಡ ವ್ಯಕ್ತಿಯಾಗಿ ಕಂಡುಬರುತ್ತಾನೆ/ಅವನ

ಹಿರಿಯತನದ ವ್ಯಕ್ತಿತ್ವಕ್ಕೆ ಹಾನಿಯುಂಟಾಗುತ್ತದೆ; ಮನ=ಮನಸ್ಸು/ಚಿತ್ತ; ಅರಿವು=ತಿಳುವಳಿಕೆ/ವಿವೇಕ;

ಮನದ ಕೋಪ ತನ್ನ ಅರಿವಿನ ಕೇಡು=ನಡೆದ ಪ್ರಸಂಗದಿಂದ ಕೆರಳಿದ ವ್ಯಕ್ತಿಯ ತನ್ನ ಮನದೊಳಗೆ ಕೋಪದಿಂದ ಆಕ್ರೋಶಗೊಂಡು ಕುದಿಯತೊಡಗಿದರೆ, ಅದು ಆ ವ್ಯಕ್ತಿಯು ಅರಿವಿಲ್ಲದವನು/ವಿವೇಕವಿಲ್ಲದವನು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಕೋಪ ಬಂದಾಗ, ವ್ಯಕ್ತಿಯು ಅದನ್ನು ಹತೋಟಿಯಲ್ಲಿಟ್ಟುಕೊಂಡು, ಕೋಪಕ್ಕೆ ಕಾರಣವಾದ ವಸ್ತು/ಜೀವಿ/ವ್ಯಕ್ತಿಗಳ ಮೇಲೆ ಹಲ್ಲೆ ಮಾಡದೆ, ಕೋಪಕ್ಕೆ ಕಾರಣವಾದ ಸಂಗತಿಗಳನ್ನು ಗಮನಿಸಿ, ಅದರಲ್ಲಿನ ತಪ್ಪುಗಳನ್ನು ಗುರುತಿಸಿ, ತಪ್ಪು ತನ್ನಿಂದ ಆಗಿದ್ದರೆ ಅದನ್ನು ತಿದ್ದಿ ಸರಿಪಡಿಸಿಕೊಂಡು, ಇತರರಿಂದ ಆಗಿದ್ದರೆ ಅದನ್ನು ಮತ್ತೆ ಮಾಡದಂತೆ ಅವರಿಗೆ ತಿಳಿಯ ಹೇಳಬೇಕು. ಇಂತಹ ಅರಿವಿನ ನಡೆನುಡಿಯಿಂದ ಕೋಪವು ಕರಗಿ/ಇಲ್ಲವಾಗಿ, ಕೋಪದಿಂದ ಉಂಟಾಗಬಹುದಾಗಿದ್ದ ಕೇಡು ತಪ್ಪುತ್ತದೆ. ಆದುದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವ/ನಿವಾರಿಸಿಕೊಳ್ಳುವ ಬಗೆಯನ್ನು ವ್ಯಕ್ತಿಯು ಅರಿತಿರಬೇಕು;

ಮನೆ+ಒಳಗಣ; ಮನೆ=ವ್ಯಕ್ತಿಗಳು ವಾಸಿಸುವ ಜಾಗ/ಬೀಡು; ಒಳಗಣ=ಒಳಗಡೆಯಿರುವ/ಒಳ ಜಾಗದಲ್ಲಿರುವ; ಕಿಚ್ಚು=ಬೆಂಕಿ/ಅಗ್ನಿ/ತಾಪ; ಸುಟ್ಟು+ಅಲ್ಲದೆ; ಸುಡು=ಬೆಂಕಿಯಲ್ಲಿ ಬೇಯಿಸು/ಉರಿಯಲ್ಲಿ ಬೇಯುವಂತೆ ಮಾಡು; ಅಲ್ಲದೆ=ಹಾಗೆ ಮಾಡದೆ; ನೆರೆ=ಪಕ್ಕ/ಮಗ್ಗುಲು/ಸಮೀಪ/ಹತ್ತಿರ; ನೆರೆಮನೆ=ಪಕ್ಕದ ಮನೆ; ಸುಡದು=ಸುಡುವುದಿಲ್ಲ/ಬೆಂಕಿಗೆ ಆಹುತಿ ತೆಗೆದುಕೊಳ್ಳುವುದಿಲ್ಲ;

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು=ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ. ಮನೆಯೊಳಗೆ ಹತ್ತಿಕೊಂಡು ಉರಿಯತೊಡಗಿದ ಬೆಂಕಿಯು ಮೊದಲು ತಾನು ಹತ್ತಿಕೊಂಡ ಜಾಗದಲ್ಲಿದ್ದ ವಸ್ತುಗಳನ್ನು ಮತ್ತು ಮನೆಯನ್ನು ಸಂಪೂರ‍್ಣವಾಗಿ ಸುಟ್ಟು ಕರಕಲು ಮಾಡಿದ ನಂತರವೇ ಪಕ್ಕದ ಮನೆಗೆ ಹಬ್ಬುತ್ತದೆ. ಅಂತೆಯೇ ವ್ಯಕ್ತಿಯ ಮನದೊಳಗೆ ಮೂಡಿದ ಕೋಪದ ಒಳಮಿಡಿತವು ಇತರರ ಬಗ್ಗೆ ಹೊಟ್ಟೆಕಿಚ್ಚಾಗಿ/ಮತ್ಸರವಾಗಿ/ತಿರಸ್ಕಾರವಾಗಿ/ಅಸೂಯೆಯಾಗಿ/ಸೇಡಾಗಿ ರೂಪುಗೊಂಡು ವ್ಯಕ್ತಿಯ ಮಯ್ ಮನವನ್ನೆಲ್ಲಾ ಆವರಿಸಿಕೊಂಡು, ಕೋಪಗೊಂಡ ವ್ಯಕ್ತಿಯ ಬದುಕಿನ ನೆಮ್ಮದಿಯನ್ನು ಹಾಳುಮಾಡುತ್ತದೆ/ಜೀವನಕ್ಕೆ ಮಾರಕವಾಗುತ್ತದೆ/ಸುತ್ತಮುತ್ತಣ ವ್ಯಕ್ತಿಗಳ ಜತೆಯ ನಂಟನ್ನು ಮುರಿಯುತ್ತದೆ. ಕೋಪವೆಂಬುದು ಇತರರಿಗೆ ಕೇಡನ್ನು ಉಂಟುಮಾಡುವುದಕ್ಕಿಂತಲೂ ಹೆಚ್ಚಾಗಿ , ಕೋಪಗೊಂಡ ವ್ಯಕ್ತಿಗೆ ಮಾನಸಿಕವಾಗಿ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ಆದುದರಿಂದ ಕೋಪವನ್ನು ಹತ್ತಿಕ್ಕಿಕೊಂಡು ಬಾಳುವುದು ಒಳಿತೆಂಬ ಅರಿವನ್ನು ಈ ರೂಪಕ ಸೂಚಿಸುತ್ತಿದೆ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks