ಬಸವಣ್ಣನ ವಚನಗಳ ಓದು – 7ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯಾ.

ವ್ಯಕ್ತಿಯು ಆಡುವ ನುಡಿ/ಮಾತು ಕೇಳುಗರ ಮನಕ್ಕೆ ಅರಿವು ಮತ್ತು ಆನಂದವನ್ನು ನೀಡುವಂತಿದ್ದು, ವ್ಯಕ್ತಿಗಳ ನಡುವಣ ನಂಟನ್ನು ಪರಸ್ಪರ ಒಲವು ನಲಿವಿನಿಂದ ಬೆಸೆದು, ನೆಮ್ಮದಿಯಿಂದ ಎಲ್ಲರೂ ಜೊತೆಗೂಡಿ ಬಾಳುವುದಕ್ಕೆ ನೆರವಾಗುವಂತಿರಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ನುಡಿ=ಮಾತು/ಸೊಲ್ಲು; ನುಡಿದಡೆ=ಮಾತನಾಡಿದರೆ/ಏನನ್ನಾದರೂ ಹೇಳಿದರೆ; ಮುತ್ತು=ದುಂಡನೆಯ ಆಕಾರವುಳ್ಳ ಒಂದು ಬಗೆಯ ವಸ್ತು/ನವರತ್ನಗಳಲ್ಲಿ ಒಂದು ಬಗೆಯದು;

“ವಜ್ರ/ವೈಡೂರ‍್ಯ/ಗೋಮೇದಕ/ಪುಶ್ಯರಾಗ/ನೀಲ/ಮರಕತ/ಮಾಣಿಕ್ಯ/ಹವಳ/ಮುತ್ತು”ಎಂಬ ಒಂಬತ್ತು ಬಗೆಯ ವಸ್ತುಗಳನ್ನು ನವರತ್ನಗಳೆಂದು ಕರೆಯುತ್ತಾರೆ ; ಹಾರ+ಅಂತೆ+ಇರಬೇಕು; ಹಾರ=ಮಾಲೆ/ಸರ; ಅಂತೆ=ಹಾಗೆ/ಆ ರೀತಿಯಲ್ಲಿ/ಆ ಬಗೆಯಲ್ಲಿ ; ಮುತ್ತಿನ ಹಾರ=ಬಿಡಿ ಬಿಡಿ ಮುತ್ತುಗಳನ್ನು ದಾರದ ಎಳೆ ಇಲ್ಲವೇ ಚಿನ್ನ ಬೆಳ್ಳಿ ಮುಂತಾದ ಲೋಹದ ತಂತಿಗೆ ಪೋಣಿಸಿ ಕಟ್ಟಿರುವ ಮಾಲೆ/ಸರ;

ಮಾಣಿಕ್ಯ=ಕೆಂಪು ಹರಳು/ಕೆಂಪು ಬಣ್ಣದ ರತ್ನ/ನವರತ್ನಗಳಲ್ಲಿ ಒಂದು; ದೀಪ್ತಿ+ಅಂತೆ+ಇರಬೇಕು; ದೀಪ್ತಿ=ಬೆಳಕು/ಕಾಂತಿ/ಕಿರಣ/ರಶ್ಮಿ; ಮಾಣಿಕ್ಯದ ದೀಪ್ತಿ=ಮಾಣಿಕ್ಯದ ಕಾಂತಿ;

ಸ್ಫಟಿಕ=ಬಿಳಿಯ ಬಣ್ಣದ ಕಾಂತಿಯಿಂದ/ಕಿರಣಗಳಿಂದ/ಹೊಳಪಿನಿಂದ ಕೂಡಿರುವ ಒಂದು ಬಗೆಯ ಹರಳು; ಸಲಾಕೆ+ಅಂತೆ+ಇರಬೇಕು; ಸಲಾಕೆ=ಸರಳು/ಈಟಿ/ಒಂದು ತುದಿಯಲ್ಲಿ ಮೊನೆಯುಳ್ಳ ಹತಾರ; ಸ್ಫಟಿಕದ ಸಲಾಕೆ=ಹರಳಿನಿಂದ ಹೊರಹೊಮ್ಮುತ್ತಿರುವ ಕಿರಣಗಳು ಮೊನೆಯುಳ್ಳ ಹತಾರದಂತೆ ನೋಡುವ ಕಣ್ಣುಗಳಿಗೆ ಕೋರಯಿಸುತ್ತಿರುತ್ತವೆ;

“ಮುತ್ತಿನ ಹಾರ/ಮಾಣಿಕ್ಯದ ದೀಪ್ತಿ/ಸ್ಫಟಿಕದ ಸಲಾಕೆ”- ಈ ಮೂರು ವಸ್ತುಗಳು ಉಪಮೆಯಾಗಿ/ರೂಪಕವಾಗಿ ಬಳಕೆಯಾಗಿವೆ.

ನುಡಿದಡೆ ಮುತ್ತಿನ ಹಾರದಂತಿರಬೇಕು/ಮಾಣಿಕ್ಯದ ದೀಪ್ತಿಯಂತಿರಬೇಕು/ಸ್ಫಟಿಕದ ಸಲಾಕೆಯಂತಿರಬೇಕು=ಮುತ್ತಿನ ಹಾರದ ಸೊಗಸು/ಮಾಣಿಕ್ಯದ ಕಾಂತಿ/ಸ್ಪಟಿಕದ ಕಿರಣಗಳು ನೋಡುವವರ ಕಣ್ಮನಗಳನ್ನು ತಣಿಸುತ್ತವೆ ಮತ್ತು ಅವನ್ನು ಒಡವೆಯನ್ನಾಗಿ ತೊಟ್ಟಿರುವ ವ್ಯಕ್ತಿಗಳ ಅಂದಚೆಂದವನ್ನು ಇಮ್ಮಡಿಗೊಳಿಸಿ ಕಂಗೊಳಿಸುವಂತೆ ಮಾಡುತ್ತವೆ. ಈ ಮೂರು ಬಗೆಯ ವಸ್ತುಗಳ ಚೆಲುವಿನಂತೆಯೇ ವ್ಯಕ್ತಿಯು ಆಡುವ ಮಾತುಗಳು/ನುಡಿಗಳು ಆಡಿದವನಿಗೂ ಮತ್ತು ಕೇಳಿದವರಿಗೂ ಅರಿವು/ಆನಂದವನ್ನು ನೀಡಿ ಒಳಿತನ್ನುಂಟುಮಾಡುವಂತಿರಬೇಕು.

ಲಿಂಗ=ಶಿವ/ಈಶ್ವರ/ದೇವರು/ಶಿವಶರಣಶರಣೆಯರು ಒಳ್ಳೆಯ ನಡೆನುಡಿಗಳ ಆಚರಣೆಯಲ್ಲಿ ದೇವರನ್ನು ಕಾಣುತ್ತಿದ್ದರು; ಮೆಚ್ಚು=ಒಪ್ಪು/ಸಮ್ಮತಿಸು/ಹೊಗಳು/ಕೊಂಡಾಡು/ಒಲಿ; ಅಹುದು+ಅಹುದು+ಎನಬೇಕು; ಅಹುದು=ಯಾವುದೇ ಒಂದು ಸಂಗತಿಯನ್ನು/ವಿಚಾರವನ್ನು ಸರಿಯಾಗಿದೆ/ದಿಟವಾಗಿದೆ/ಸತ್ಯವಾಗಿದೆ ಎಂದು ಒಪ್ಪಿಗೆಯನ್ನು ಸೂಚಿಸುವುದು; ಎನಬೇಕು=ಎಂದು ಹೇಳಬೇಕು/ನುಡಿಯಬೇಕು ;

ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು=ವ್ಯಕ್ತಿಯು ಆಡುವ ನುಡಿಗಳು ತನಗೆ ಒಳಿತನ್ನು ಉಂಟುಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಿರಬೇಕು. ಬೇರೆ ಬೇರೆ ಮತ/ಜನಾಂಗ/ಜಾತಿ ಸಮುದಾಯಗಳಿಂದ ಕೂಡಿರುವ ಸಮಾಜದಲ್ಲಿ ಎಲ್ಲರೊಡನೆ ಹೊಂದಿಕೊಂಡು ಬಾಳುವಂತಹ ಒಲವು ನಲಿವಿನಿಂದ ಕೂಡಿದ ಒಳ್ಳೆಯ ಮಾತುಗಳನ್ನಾಡಬೇಕು. ಆಡುವ ಮಾತುಗಳು ಕೇಳುಗರ ಮನಸ್ಸನ್ನು ಗಾಸಿಗೊಳಿಸುವಂತೆ ಇಲ್ಲವೇ ಇತರರ ವ್ಯಕ್ತಿತ್ವವನ್ನು ಅಲ್ಲಗಳೆಯುವಂತೆ/ಕಡೆಗಣಿಸುವಂತೆ ಇರಬಾರದು ಎಂಬ ಎಚ್ಚರವನ್ನು/ಅರಿವನ್ನು ವ್ಯಕ್ತಿಯು ಹೊಂದಿರಬೇಕು. ಆಗ ವ್ಯಕ್ತಿಯು ಆಡಿದ ಮಾತುಗಳಿಗೆ ಒಂದು ಬೆಲೆ ಬರುತ್ತದೆ ಎಂಬ ತಿರುಳಿನಲ್ಲಿ ಈ ವಾಕ್ಯ ಬಳಕೆಯಾಗಿದೆ.

ದಿನನಿತ್ಯದ ಮಾತುಕತೆಗಳಲ್ಲಿ ಯಾರಾದರೂ ಒಂದು ಕೆಟ್ಟ ಮಾತನ್ನಾಡಿದಾಗ “ಹೀಗೆಲ್ಲಾ ಮಾತನಾಡಬೇಡ. ನಾಲ್ಕು ಜನ ಮೆಚ್ಚುವಂತಹ/ದೇವರು ಒಪ್ಪುವಂತಹ ಮಾತನ್ನಾಡು”ಎಂದು ಎಚ್ಚರಿಕೆಯನ್ನು ನೀಡುವ ಪ್ರಸಂಗಗಳು ಕನ್ನಡ ನುಡಿಸಮುದಾಯದಲ್ಲಿ ಕಂಡುಬರುತ್ತವೆ;

ನುಡಿ+ಒಳಗೆ+ಆಗಿ; ಒಳಗೆ=ಸೇರಿಕೊಂಡು/ಆವರಿಸಿಕೊಂಡು; ನಡೆಯದೆ+ಇದ್ದಡೆ; ನಡೆ=ನಡವಳಿಕೆ/ಆಚರಣೆ/ವರ‍್ತನೆ ; ನಡೆಯದೆ=ಆಚರಿಸದೆ/ವರ‍್ತಿಸದೆ/ಮಾಡದೆ; ಇದ್ದಡೆ=ಇದ್ದರೆ ; ನುಡಿಯೊಳಗಾಗಿ ನಡೆಯದಿದ್ದಡೆ=ವ್ಯಕ್ತಿಯ ತಾನು ಆಡುವ ಸತ್ಯ/ನೀತಿ/ನ್ಯಾಯದ ನುಡಿಗಳಿಗೆ ತಕ್ಕಂತೆ ತನ್ನ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡದಿದ್ದರೆ/ಆಡುವುದೇ ಒಂದು ಮಾಡುವುದೇ ಮತ್ತೊಂದಾದರೆ/ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತ ಕಯ್ಯಲ್ಲಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ;

ಕೂಡಲಸಂಗಮದೇವನ್+ಎಂತು+ಒಲಿವನ್+ಅಯ್ಯಾ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ ; ಒಲಿ=ಒಪ್ಪು/ಸಮ್ಮತಿಸು/ಅಂಗೀಕರಿಸು/ಮೆಚ್ಚು; ಒಲಿವನ್=ಮೆಚ್ಚುವನು/ಒಪ್ಪುವನು; ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ;

ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ=ಒಳ್ಳೆಯ ನುಡಿಗಳನ್ನಾಡುವಂತೆಯೇ ಒಳ್ಳೆಯ ಕೆಲಸಗಳನ್ನು ಮಾಡದಿದ್ದರೆ, ಅಂತಹ ವ್ಯಕ್ತಿಯನ್ನು ದೇವರು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ದೇವರನ್ನು ಒಲಿಸಿಕೊಳ್ಳಲು/ಮೆಚ್ಚಿಸಿಕೊಳ್ಳಲು ಮಾಡುವ ಎಲ್ಲಾ ಬಗೆಯ ಪೂಜೆ/ಆಚರಣೆ/ವ್ರತಗಳಿಗಿಂತಲೂ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳೇ ದೊಡ್ಡದು ಎಂಬ ನಂಬಿಕೆಯನ್ನು/ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು ;

ಉಪಮೆ ಎಂದರೆ ಹೋಲಿಕೆ. ಕವಿಯು ತಾನು ಹೇಳಬೇಕಾದ ಸಂಗತಿಯನ್ನು ಓದುಗರಿಗೆ/ಕೇಳುಗರಿಗೆ ಚೆನ್ನಾಗಿ ಮನದಟ್ಟು ಮಾಡಲೆಂದು ಮತ್ತೊಂದು ವಸ್ತು/ಪ್ರಸಂಗದೊಡನೆ ಹೋಲಿಸುವುದನ್ನು ಉಪಮೆಯೆಂದು ಕರೆಯುತ್ತಾರೆ.

ಮತ್ತೊಂದು ವಸ್ತು/ಪ್ರಸಂಗದೊಡನೆ ಜತೆಗೂಡಿಸುವುದನ್ನು/ಸಮೀಕರಿಸುವುದನ್ನು ರೂಪಕ/ಶಬ್ದಚಿತ್ರವೆಂದು ಕರೆಯುತ್ತಾರೆ.

ನೂರನೋದಿ ನೂರ ಕೇಳಿ ಏನು
ಆಸೆ ಬಿಡದು ರೋಷ ಪರಿಯದು
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ
ಜಾತಿ ಡಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.

ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಳ್ಳದ ಮತ್ತು ಮನದಲ್ಲಿ ಒಳ್ಳೆಯ ಉದ್ದೇಶವನ್ನು ಹೊಂದಿರದ ವ್ಯಕ್ತಿಯು ಕಲಿಯುವ ಅಕ್ಕರದ ವಿದ್ಯೆಯಿಂದ/ಆಡುವ ಮಾತಿನಿಂದ/ಮಾಡುವ ಆಚರಣೆಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ನೂರ್+ಅನ್+ಓದಿ; ನೂರು=ಅಂಕಿಯನ್ನು ಸೂಚಿಸುವ ಪದ/ಹತ್ತನ್ನು ಹತ್ತರಿಂದ ಗುಣಿಸಿದಾಗ ಬರುವ ಮೊತ್ತ; ಅನ್=ಅನ್ನು; ಓದು=ಲಿಪಿರೂಪದಲ್ಲಿರುವ ಬರಹದಲ್ಲಿನ ಸಂಗತಿಗಳನ್ನು/ವಿಚಾರಗಳನ್ನು ಕಣ್ಣಿನ ಮೂಲಕ ನೋಡಿ ತಿಳಿದುಕೊಳ್ಳುವುದು; ನೂರ=ನೂರನ್ನು; ಕೇಳು=ಆಲಿಸು/ಇತರರು ಆಡುವ ಮಾತುಗಳನ್ನು ಕಿವಿಯ ಮೂಲಕ ಆಲಿಸಿ ಗ್ರಹಿಸಿಕೊಳ್ಳುವುದು; ಏನು=ಯಾವುದು;

ನೂರನೋದಿ=ವಿಚಾರಗಳನ್ನು/ಸಂಗತಿಗಳನ್ನು ತಿಳಿಸುವಂತಹ ನೂರಾರು ಬಗೆಯ/ಹಲವು ರೀತಿಯ ಪುಸ್ತಕಗಳನ್ನು/ಹೊತ್ತಿಗೆಗಳನ್ನು ಓದುವುದರಿಂದ ಬರುವ ಅರಿವು/ತಿಳುವಳಿಕೆ/ವಿವೇಕ/ಪಾಂಡಿತ್ಯ;

ನೂರ ಕೇಳಿ=ಸತ್ಯ/ನೀತಿ/ನ್ಯಾಯದ ನಡೆನುಡಿಗಳನ್ನು ಕುರಿತು ಗುರುಹಿರಿಯರು ಆಡುತ್ತಿರುವ ನೂರಾರು ಬಗೆಯ/ಹಲವು ರೀತಿಯ ಮಾತುಗಳನ್ನು ಕೇಳುವುದರಿಂದ ಬರುವ ಅರಿವು/ತಿಳುವಳಿಕೆ; ಆಸೆ=ಬಯಕೆ/ಹಂಬಲ;

ಆಸೆಯಲ್ಲಿ ಎರಡು ಬಗೆಗಳಿವೆ.

1) ಒಳ್ಳೆಯ ಆಸೆ=ಇತರರಿಗೆ ಹಾನಿಯನ್ನುಂಟಾಗದ ರೀತಿಯಲ್ಲಿ ತನ್ನ ಮನದ ಬಯಕೆಯನ್ನು ಈಡೇರಿಸಿಕೊಳ್ಳುವುದು.

2) ಕೆಟ್ಟ ಆಸೆ= ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಇತರರಿಗೆ ಹಾನಿ/ಸಾವು/ನೋವು/ಸಂಕಟವನ್ನುಂಟುಮಾಡುವುದು;

ಬಿಡು=ತೊರೆ/ತ್ಯಜಿಸು; ರೋಷ=ಸಿಟ್ಟು/ಕೋಪ/ಆಕ್ರೋಶ; ಪರಿ=ಬಿಡು/ತ್ಯಜಿಸು/ಇಲ್ಲವಾಗು; ಆಸೆ ಬಿಡದು=ಕೆಟ್ಟ ಆಸೆಗಳು ಬಿಟ್ಟುಹೋಗುವುದಿಲ್ಲ; ರೋಷ ಪರಿಯದು=ಸಿಟ್ಟುಸೆಡವುಗಳು ಇಲ್ಲವಾಗುವುದಿಲ್ಲ;

ನೂರನೋದಿ ನೂರ ಕೇಳಿ ಏನು ಆಸೆ ಬಿಡದು ರೋಷ ಪರಿಯದು= ನೂರಾರು ಬಗೆಯ/ಹಲವು ರೀತಿಯ ವಿಚಾರಗಳನ್ನು/ಸಂಗತಿಗಳನ್ನು ಒಳಗೊಂಡ ಹೊತ್ತಿಗೆಗಳನ್ನು/ಬರಹಗಳನ್ನು ಓದುವುದರಿಂದ ಮತ್ತು ಗುರುಹಿರಿಯರು ಆಡಿದ ಮಾತುಗಳನ್ನು ಕೇಳಿ ಪಡೆದ ಅರಿವಿನಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಇತರರಿಗೆ ಕೇಡನ್ನು ಬಗೆಯುವ ಕೆಟ್ಟ ಆಸೆಯನ್ನು ಬಿಟ್ಟು ಮತ್ತು ಮನದಲ್ಲಿ ಕೆರಳುವ ಕೋಪತಾಪವನ್ನು ಹತ್ತಿಕ್ಕಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬಾಳುವುದನ್ನು ಕಲಿಯದಿದ್ದರೆ, ಅಂತಹ ಅರಿವಿನ ಗಳಿಕೆಯಿಂದ ಯಾವ ಪ್ರಯೋಜನವೂ ಇಲ್ಲ.

ಏಕೆಂದರೆ ವ್ಯಕ್ತಿಯು ತಾನು ಪಡೆದ ಅರಿವಿನಿಂದ ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡದಿದ್ದಾಗ , ಓದು ಎಂಬುದು ಇತರರ ಮುಂದೆ ತೋರಿಸಿಕೊಳ್ಳುವ ಪಾಂಡಿತ್ಯವಾಗುತ್ತದೆಯೇ ಹೊರತು, ಅದರಿಂದ ಯಾರಿಗೂ ಏನೊಂದು ಬಗೆಯಲ್ಲಿಯೂ ಪ್ರಯೋಜನವಾಗುವುದಿಲ್ಲವೆಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ; ’ ಪಾಂಡಿತ್ಯ ‘ ಎಂದರೆ ವ್ಯಕ್ತಿಯು ತಾನು ಓದಿ/ಕೇಳಿ ತಿಳಿದಿರುವ ನುಡಿಗಳನ್ನು ಮತ್ತೆ ಮತ್ತೆ ಅದೇ ರೀತಿಯಲ್ಲಿ ಉಚ್ಚರಿಸುತ್ತಿರುವುದು;

ಮಜ್ಜನಕ್ಕೆ+ಎರೆದು; ಮಜ್ಜನ=ಸ್ನಾನ/ಜಳಕ/ಮಯ್ ತೊಳೆಯುವಿಕೆ; ಎರೆ=ಸುರಿ/ಹೊಯ್ಯು; ಎರೆದು=ಸುರಿದು/ಹೊಯ್ದು; ಮಜ್ಜನಕ್ಕೆರೆ=ದೇವರ ವಿಗ್ರಹವನ್ನು ತೊಳೆಯುವುದಕ್ಕಾಗಿ ನೀರು/ಹಾಲು/ಜೇನು ಮುಂತಾದುವನ್ನು ಸುರಿಯುವುದು/ದೇವರ ಪೂಜೆಯಲ್ಲಿನ ಒಂದು ಆಚರಣೆ; ಫಲ+ಏನು; ಫಲ=ಪ್ರಯೋಜನ/ಉಪಯೋಗ/ಪರಿಣಾಮ;

ಮಜ್ಜನಕ್ಕೆರೆದು ಫಲವೇನು=ವ್ಯಕ್ತಿಯು ಒಳ್ಳೆಯ ನಡೆನುಡಿಗಳನ್ನು ತನ್ನ ದಿನನಿತ್ಯದ ಜೀವನದಲ್ಲಿ ಆಚರಿಸದೆ ಮಾಡುವ ದೇವರ ಪೂಜೆಯಿಂದ/ಆಚರಣೆಯಿಂದ ಯಾವ ಪ್ರಯೋಜನವೂ ಇಲ್ಲ; ಮಾತು+ಅಂತೆ; ಮಾತು=ನುಡಿ/ಸೊಲ್ಲು; ಅಂತೆ=ಹಾಗೆ/ಆ ರೀತಿ/ಆ ಬಗೆ; ಮನ+ಇಲ್ಲದ; ಮನ=ಮನಸ್ಸು; ಮನವಿಲ್ಲದ=ಮನಸ್ಸಿನಲ್ಲಿ ಇಲ್ಲದ ;

ಮಾತಿನಂತೆ ಮನ=ಸಾಮಾಜಿಕ ವ್ಯವಹಾರದಲ್ಲಿ/ಸನ್ನಿವೇಶದಲ್ಲಿ ವ್ಯಕ್ತಿಯು ಇತರರೊಡನೆ ತಾನು ಆಡುವ ಒಳ್ಳೆಯ ಮಾತುಗಳಂತೆಯೇ , ತನ್ನ ಮನಸ್ಸಿನಲ್ಲಿಯೂ ಒಳ್ಳೆಯ ಉದ್ದೇಶ/ಆಲೋಚನೆ/ಚಿಂತನೆಗಳನ್ನು ಹೊಂದಿರುವುದು;

ಜಾತಿ=ಗುಂಪು/ವರ‍್ಗ/ರೀತಿ/ಬಗೆ; ಡಂಬ=ಮೋಸ/ವಂಚನೆ/ಬೂಟಾಟಿಕೆ/ಸೋಗಿನ ನಡೆನುಡಿ; ಡಂಬರು=ವಂಚಕರು/ಮೋಸಗಾರರು/ಒಳಗೊಂದು ಹೊರಗೊಂದು ಬಗೆಯ ನಡೆನುಡಿಯುಳ್ಳ ತಳುಕಿನ ವ್ಯಕ್ತಿಗಳು;

ಜಾತಿ ಡಂಬರು=ಜನರಿಗೆ ಮೋಸಮಾಡುವುದರಲ್ಲಿ/ಜನರನ್ನು ವಂಚಸುವುದರಲ್ಲಿ/ಕಪಟತನದ ನಡೆನುಡಿಗಳಲ್ಲಿ ನಿಪುಣರು/ಅತಿ ನೀಚ ವ್ಯಕ್ತಿಗಳು;

ಮಾತಿನಂತೆ ಮನವಿಲ್ಲದ ಜಾತಿ ಡಂಬರು=ಮನದೊಳಗೆ ಕೆಟ್ಟ ಉದ್ದೇಶ/ಕಾಮನೆ/ಬಯಕೆಗಳಿಂದ ಕೂಡಿ, ಮಾತಿನಲ್ಲಿ ಸತ್ಯ/ನೀತಿ/ನ್ಯಾಯದ ನುಡಿಗಳನ್ನಾಡುತ್ತಾ ಜನರನ್ನು ವಂಚಿಸುತ್ತಿರುವ ತಳುಕುಬಳುಕಿನ/ವಂಚನೆಯ/ಸೋಗಲಾಡಿತನದ ವ್ಯಕ್ತಿಗಳು;

ನೋಡಿ=ಕಂಡು; ನಗು=ಆನಂದ ಉಂಟಾದಾಗ ಮಯ್ ಮನದಿಂದ ಹೊರಹೊಮ್ಮುವ ಒಳಮಿಡಿತ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ಮಾತಿನಂತೆ ಮನವಿಲ್ಲದ ಜಾತಿ ಡಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ=ಸಹಮಾನವರನ್ನು ಮತ್ತು ಸಮಾಜವನ್ನು ವಂಚಿಸುವ ನಯವಂಚಕರು ಅದೇ ಸಮಯದಲ್ಲಿ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಇಂದಲ್ಲ ನಾಳೆ ಎಂದಾದರೂ ಒಂದು ದಿನ ಇವರ ಕಪಟತನದ ನಡೆನುಡಿಗಳು ಬಯಲಾಗಿ ಜನಸಮುದಾಯದ ಅಪಹಾಸ್ಯಕ್ಕೆ/ಅಣಕಕ್ಕೆ/ತಿರಸ್ಕಾರದ ವ್ಯಂಗ್ಯಕ್ಕೆ/ನಗೆಪಾಟಲಿಗೆ ಇಂತಹ ವ್ಯಕ್ತಿಗಳು ಗುರಿಯಾಗುತ್ತಾರೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: