ಸೆಲ್ಪಿ ಗೀಳು

–  ಅಶೋಕ ಪ. ಹೊನಕೇರಿ.

ಸೆಲ್ಪಿ, ತನ್ನಿ, selfie

ಸೆಲ್ ಪೋನ್ ಆವಿಶ್ಕಾರ ಆದಂದಿನಿಂದ ಜನರು ಸೆಲ್ ಪೋನ್ ಕೊಳ್ಳುವ ಬರಾಟೆಗೇನು ಕೊರತೆಯಾಗಿಲ್ಲ. ಮೊದಲು ಮೊಬೈಲ್ ಪೋನ್ ಪರಸ್ಪರ ಮಾತನಾಡಲು ಮಾತ್ರ ಬಳಕೆಯಾಗುತಿತ್ತು. ಹಾಗೆ ಬಳಕೆಯಾಗಿದ್ದೆ ತಡ ಲ್ಯಾಂಡ್ ಲೈನ್ ಟೆಲಿಪೋನ್‌ಗಳು ಮಗ್ಗಲು ಮಲಗಿದವು. ಈ ಮೊಬೈಲ್ ಪೋನ್ ಮೇಲೆ ಹೊಸ ಹೊಸ ಪ್ರಯೋಗಗಳು ಮಾಡಿ. ಆಂಡ್ರಾಯ್ಡ್ ಸೆಟ್ ತಯಾರಿಸುವುದರೊಂದಿಗೆ ಅದನ್ನು ಉನ್ನತ ದರ‍್ಜೆಗೆ ಏರಿಸಿದ್ದರಿಂದ ಕ್ಯಾಮರ ಕಂಪನಿಗಳು, ರೇಡಿಯೋ ಕಂಪನಿಗಳು, ಟೇಪ್ ರೆಕಾರ‍್ಡರ್ ಕಂಪನಿಗಳು, ಬಹುತೇಕ ನೆಲಕಚ್ಚಿದವು. ಈ ಹೊಸ ಹೊಸ ಮೊಬೈಲ್ ಸೆಟ್ಟಲ್ಲಿ ನೀವು ಲ್ಯಾಪ್‌ಟಾಪ್‌ನಲ್ಲಿ, ಕಂಪ್ಯೂಟರ್‌ನಲ್ಲಿ ಮಾಡುವ ಬಹುತೇಕ ಕೆಲಸಗಳನ್ನು ನೀವು ನೆಟ್‌ವರ‍್ಕ್ ಸಿಗುವ ಸ್ತಳದಲ್ಲಿ ಕುಳಿತು, ನಿಂತು ಮಾಡಿಕೊಳ್ಳಬಹುದು. ಆದ್ದರಿಂದ ಈ ಮೊಬೈಲ್ ಪೋನ್ ಎಂಬುದು ಈ ಶತಮಾನದ ಅದ್ಬುತ ಮಾಯ ಪೆಟ್ಟಿಗೆ ಎಂದರು ಅತಿಶಯೋಕ್ತಿಯಿಲ್ಲ.

ಹೇಗೆ ಮೊಬೈಲ್ ಪೋನ್ ಸೆಟ್ ಬಳಸಿ ಹೊಸ ಹೊಸ ಆಪ್‌ಗಳು ಬಳಸಿ ನೀವು ಮೊಬೈಲ್ ಪೋನ್ ಸೆಟ್‌ಅನ್ನು ರಂಗಿತರಂಗದಂತೆ ರಂಗು ರಂಗಾಗಿ ಬಳಸಬಹುದೋ… ಹಾಗೆ ಅದರಲ್ಲೊಂದು ಆಯ್ಕೆ ಕ್ಯಾಮರಾ ಬಳಕೆಯೂ ಅಶ್ಟೆ ಜನಪ್ರಿಯವಾಗಿದೆ. ಕುಂತಲ್ಲಿ, ನಿಂತಲ್ಲಿ, ಮಲಗಿದಲ್ಲಿ, ನೀವು ಯಾವುದೇ ಬಂಗಿಯಲ್ಲೆ ಇದ್ದು ಮೊಬೈಲ್ ಕ್ಯಾಮರವನ್ನು ಯಾವುದೇ ಕೋನದಲ್ಲಿ ಬಳಸಿ ಪೋಟೋ ತೆಗೆಯುವಶ್ಟು ಸರಳ ಕ್ಯಾಮರ ತಾಂತ್ರಿಕತೆ ಇದರಲ್ಲಿ ಹುದುಗಿದೆ. ಮೊದಮೊದಲು ಬಂದ ಕ್ಯಾಮರಗಳಲ್ಲಿ ಎದುರಿಗೆ ನಿಂತವರ ಅತವಾ ನಮ್ಮ ಎದುರಿಗಿರುವುದನ್ನು ಪೋಟೋ ಕ್ಲಿಕ್ಕಿಸಬಹುದಿತ್ತು ಆದರೆ ತದ ನಂತರ ಬಂದ ಮೊಬೈಲ್ ಸೆಟ್ ಗಳಲ್ಲಿ ನಿಮ್ಮ ಬಂಗಿಯನ್ನು ನೀವೆ ಕ್ಲಿಕ್ಕಿಸಿಕೊಳ್ಳುವ ‘ಸೆಲ್ಪಿ’ ತಾಂತ್ರಿಕತೆ ಅಬಿವ್ರುದ್ದಿಗೊಂಡು ಅದೊಂದು ಹೊಸ ಟ್ರೆಂಡನ್ನೆ ಜನರಲ್ಲಿ ಅದರಲ್ಲೂ ಯುವಕ ಯುವತಿಯರಲ್ಲಿ ಹುಟ್ಟು ಹಾಕಿತು ಎಂಬುದು ನಮಗೂ ನಿಮಗೂ ತಿಳಿದ ವಿಶಯ.

ಒಬ್ಬೊಬ್ಬರೆ ಇದ್ದಾಗ ಮೂತಿಯನ್ನು ಊ…. ಎಂದು ಮಾಡಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದು. ಆಆ…ಎಂದು ಮೂತಿ ಅಗಲಿಸಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದು. ಮತ್ತು ಮನಸ್ಸಲ್ಲಿ ಏನೋ ಕಾತರತೆ, ಕುಶಿ, ದುಕ್ಕ ದುಮ್ಮಾನ ಇದೆಯೋ ಅದೆಲ್ಲ ಸೆಲ್ಪಿಯಿಂದ ಒಂದು ರೀತಿಯ ಬಾವತರಂಗಗಳಾಗಿ, ತರ ತರ ಮುಕ ಬಾವದ ಬಂಗಿಗಳಾಗಿ ಹೊರಬಂದು ಸೆಲ್ಪಿ ಕ್ಲಿಕ್ಕಿಸಿಕೊಳ್ಳತೊಡಗಿದವು. ಇದು ಒಂದು ರೀತಿಯಲ್ಲಿ ವೈಜ್ನಾನಿಕ ಸತ್ಯ ಇದ್ದರೂ ಇರಬಹುದು ಇದರ ಬಗ್ಗೆ ಮನೋತಜ್ನರಲ್ಲಿ ಸಲಹೆ ಪಡೆದುಕೊಂಡರೆ ಉತ್ತರ ಸಿಗಬಹುದು.

ಆದರೆ ಸೆಲ್ಪಿಯ ಗೀಳು ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ಅತಿರೇಕಕ್ಕೆ ಹೋಗಿದೆ ಎಂದರೆ ತಪ್ಪಿಲ್ಲ. ಈ ಸೆಲ್ಪಿ ತೆಗೆಯುವ ಜೋಶ್ ನಲ್ಲಿ ತಮ್ಮನ್ನು ತಾವೇ ಅಪಾಯಕ್ಕೆ ಒಡ್ಡಿಕೊಳ್ಳುವುದಿದೆ. ಕೆಲವೊಮ್ಮೆ ಮಾರಾಣಾಂತಿಕವಾಗಿದ್ದು ಇದೆ. ಕೆಲವರು ಪ್ರಾಣವನ್ನು ತೆತ್ತಿದ್ದಾರೆ. ಅಂದರೆ ಸೆಲ್ಪಿಯ ಹುಚ್ಚಾಟದಲ್ಲಿ ತಮ್ಮನ್ನು ತಾವು ಮರೆತು ಬೆಟ್ಟದ ಅಂಚಿಗೆ ಸೆಲ್ಪಿ ತೆಗೆಯಲು ಹೋಗಿ ಜಾರಿ ಬಿದ್ದು ಮರಣ ಹೊಂದಿದ್ದಾರೆ. ರೇಲ್ವೆ ಹಳಿಯ ಪಕ್ಕದಲ್ಲಿ ಸೆಲ್ಪಿ ತೆಗೆಯುವ ಬರಾಟೆಯಿಂದ ವೇಗವಾಗಿ ಚಲಿಸುವ ಟ್ರೇನ್ ಡಿಕ್ಕಿ ಹೊಡೆದು ಮರಣ ಹೊಂದಿದ್ದಾರೆ. ಹೀಗೆ ಸೆಲ್ಪಿಯ ಹುಚ್ಚಾಟ ಒಂದೇ.‌.. ಎರಡೇ!?

ಏನೆ ಇರಲಿ ಯಾವುದೆ ಆಗಲಿ ಅತಿಯಾದರೆ ‘ಅಮ್ರುತವೂ ವಿಶವೇ’. ಅವಿಶ್ಕಾರಗಳು ಯಾವುದೇ ಇರಲಿ ಅವು ಮನುಕುಲದ ಒಳಿತಿಗಾಗಿಯೇ ಆವಿಶ್ಕಾರ ಮಾಡಲಾಗುತ್ತದೆ. ಆದರೆ ಬಳಸುವ ನಾವು ಒಳ್ಳೆಯದಕ್ಕಾಗಿಯೇ, ಅತಿ ನಾಜೂಕಿನಿಂದ ಎಚ್ಚರಿಕೆಯಿಂದ ಬಳಸಿದರೆ ಅದು ಮನಕುಲದ ಕಲ್ಯಾಣಕ್ಕೆ ಉಪಯೋಗವಾಗುತ್ತದೆ. ಎಚ್ಚರ ತಪ್ಪಿ ಹೊಸ ಹೊಸ ಆವಿಶ್ಕಾರದ ತಂತ್ರಜ್ನಾನಗಳನ್ನು ಬಳಕೆಮಾಡಿದಲ್ಲಿ ಅದು ವಿನಾಶಕ್ಕೆ ನಾಂದಿಯಾಗುತ್ತದೆ.

ನೀವು ಸೆಲ್ಪಿ ಕ್ಲಿಕ್ಕಿಸಿಕೊಳ್ಳಿ, ನಿಮ್ಮ ಗೆಳೆಯ ಗೆಳತಿಯರೊಡನೆಯೂ ಕ್ಲಿಕ್ಕಿಸಿಕೊಳ್ಳಿ, ನಕ್ಕು ನಲಿಯುತ್ತ, ಚೇಶ್ಟೆ ಮಾಡುತ್ತ, ಹಾಡುತ್ತ, ಕುಣಿಯುತ್ತ ಹೇಗಾದರೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳಿ, ಆದರೆ… ಮೈ ಮೇಲಿನ ಎಚ್ಚರ ಮಾತ್ರ ತಪ್ಪಬೇಡಿರಿ ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಜೈ ಸೆಲ್ಪಿ!!!?

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: