ಕತೆ : ಸಾವನ್ನು ಗೆದ್ದವನು

ಜಿ. ಹರೀಶ್ ಬೇದ್ರೆ.

ಬೂಕಂಪ, Earthquake

( ಬರಹಗಾರರ ಮಾತು : ಒಂದು ಕಾಲ್ಪನಿಕ ಕತೆಯನ್ನುಓದುಗರ ಮುಂದಿಡುವ ಪ್ರಯತ್ನ )

ಕೆಲವು ದಿನಗಳಿಂದ ಮನೆಯಲ್ಲಿ ಯಾವುದೂ ಸರಿಯಿಲ್ಲ, ಎಲ್ಲಾ ವಿಚಾರದಲ್ಲೂ ಕಿರಿಕಿರಿ. ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ತಿಳಿಯುತ್ತಿಲ್ಲ. ಅದಕ್ಕಾಗಿ ಬರುವ ಮಂಗಳವಾರ ಕುಲದೇವತೆ ಬವಾನಿಯ ದರ‍್ಶನಕ್ಕಾಗಿ ತುಳಜಾಪುರಕ್ಕೆ ಹೋಗಿಬರುವುದೆಂದು ನಿರ‍್ದರಿಸಿ, ಅಂದು ಹೋಳಿಯಾಡಲು ಹೋಗಕೂಡದೆಂದು ಕಾರ‍್ತಿಕನಿಗೆ ಅವನ ತಂದೆ ಹೇಳಿದ್ದರು.

ಈಗಿನ ಹುಡುಗ ಕಾರ‍್ತಿಕ್, ದೇವರ ಮೇಲೆ ನಂಬಿಕೆ ಇದ್ದರೂ, ಒಂದು ತಿಂಗಳಿಂದ ಬಡಾವಣೆಯ ಹುಡುಗರನ್ನೆಲ್ಲಾ ತಾನೇ ಕೂಡಿಸಿ, ಅದ್ದೂರಿಯಾಗಿ ಬಣ್ಣದ ಹಬ್ಬವನ್ನು ಆಚರಿಸಬೇಕೆಂದು ತಯಾರಿ ಮಾಡಿದ್ದ. ಈಗ ಇದ್ದಕ್ಕಿದ್ದಂತೆ ತಂದೆ ಬೇಡವೆಂದರೆ ತಪ್ಪಿಸಿಕೊಳ್ಳುವುದು ಹೇಗೆ ಸಾದ್ಯ. ಇವನು ನಡೆಸುತ್ತಿದ್ದ ತಯಾರಿ ಅವನ ಅಮ್ಮನಿಗೆ ಗೊತ್ತಿತ್ತು. ಹಾಗಾಗಿ, ಅಮ್ಮನ ಕಡೆಯಿಂದ ತಂದೆಗೆ ಹೇಳಿಸಿ ತುಳಜಾಪುರಕ್ಕೆ ಹೋಗುವುದನ್ನು ತಪ್ಪಿಸಿಕೊಂಡ.

ಅಂದುಕೊಂಡಂತೆ ಮನೆಯಲ್ಲಿ, ಕಾರ‍್ತಿಕ್ ಹೊರತುಪಡಿಸಿ ಉಳಿದವರೆಲ್ಲರೂ ಸೋಮವಾರವೇ ತುಳಜಾಪುರಕ್ಕೆ ಹೊರಟರು. ಮಂಗಳವಾರ ಮುಂಜಾನೆ ಆರು ಗಂಟೆಯಿಂದಲೇ ಹುಡುಗರ ಬಣ್ಣದ ಆಟ ಶುರುವಾಯಿತು. ತಮ್ಮ ಬಡಾವಣೆಯಶ್ಟೇ ಅಲ್ಲದೆ ತಾನು ಓದುತ್ತಿದ್ದ ಕಾಲೇಜು, ತನ್ನ ಗೆಳೆಯರಿದ್ದ ಜಾಗಕ್ಕೆಲ್ಲಾ ಹೋಗಿ ಬಣ್ಣವನ್ನು ಹಾಕಿ, ಹಾಕಿಸಿಕೊಂಡು, ಕುಣಿದು ಕುಪ್ಪಳಿಸಿ, ಪೋಲೀಸರು ಇನ್ನು ಸಾಕು ಮನೆಗೆ ಹೋಗಿ ಎಂದು ಹೇಳಿದ ಮೇಲೆ ಮನೆಗೆ ಬಂದ.

ಬೇಗ ಸ್ನಾನ ಮುಗಿಸಿಕೊಂಡು ಬಂದು ಮೊಬೈಲಿನಲ್ಲಿ ತೆಗೆದ ಪೋಟೋಗಳನ್ನು ಪೇಸ್ಬುಕ್, ವಾಟ್ಸಾಪ್ ಮುಂತಾದವುಗಳಲ್ಲಿ ಹಾಕಬೇಕೆಂದು ಮೊಬೈಲನ್ನು ಚಾರ‍್ಜಿಗೆ ಇಟ್ಟು ಸೀದಾ ಬಚ್ಚಲಿಗೆ ಹೋದ. ಮೈಮೇಲೆ ಬಿದ್ದ ಬಣ್ಣದ ಪೌಡರ್, ನೀರು ಎಲ್ಲಾ ತಿಕ್ಕಿ ತೊಳೆದುಕೊಳ್ಳುವ ವೇಳೆಗೆ ಸಾಕುಬೇಕಾಯಿತು. ಜೊತೆಗೆ ಬೆಳಿಗ್ಗೆಯಿಂದ ಹೊಟ್ಟೆಗೆ ಏನು ತಿನ್ನದಿದ್ದದ್ದು ನೆನಪಾಗಿ ಹಸಿವು ಕಾಡಲಾರಂಬಿಸಿತು. ಅಡುಗೆಮನೆಗೆ ನುಗ್ಗಿ ತಿನ್ನಲು ಏನಾದರೂ ಸಿಗಬಹುದೆಂದು ಹುಡುಕಾಡಿದರೆ ಏನೂ ಇರಲಿಲ್ಲ. ಆಗಲೇ ಗಂಟೆ ಎರಡೂ ವರೆಯಾಗಿತ್ತು, ತಡಮಾಡಿದರೆ ಹೋಟೆಲಿನಲ್ಲೂ ಏನೂ ಸಿಗದೆಂದು ರೆಡಿಯಾಗಿ ಹೊರಟ.

ಕಾರ‍್ತಿಕ್ ಮನೆ ಇದ್ದದ್ದು ದಾರವಾಡದ ಕುಮಾರೇಶ್ವರ ಬಡಾವಣೆಯ ಮದ್ಯಬಾಗದಲ್ಲಿ. ಅಲ್ಲಿಂದ ಸೀದಾ ಬಂದರೆ, ಬೆಂಗಳೂರು ಪೂನಾ ಹೆದ್ದಾರಿ ಸಿಗುತ್ತದೆ. ಅಲ್ಲೇ ಹತ್ತಿರದಲ್ಲಿ ಹೊಸ ಬಸ್ ನಿಲ್ದಾಣ ಇದ್ದು, ಎದುರಿಗೆ ಆರು ಮಹಡಿಯ ಬ್ರುಹತ್ ಕಟ್ಟಡ ಸಿದ್ದವಾಗುತ್ತಿತ್ತು. ಈಗಾಗಲೇ ಐದು ಮಹಡಿಗಳನ್ನು ಕಟ್ಟುವ ಕೆಲಸ ಮುಗಿದಿತ್ತು. ಮೊದಲೆರಡು ಅಂತಸ್ತುಗಳಲ್ಲಿ ಇದ್ದ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದು ಅಲ್ಲಿ ಮೆಡಿಕಲ್ ಶಾಪ್, ಬಟ್ಟೆ ಅಂಗಡಿಗಳು, ಹೋಟೆಲ್ ಇತ್ಯಾದಿಗಳು ಆರಂಬವಾಗಿದ್ದವು ಹಾಗು ಆರನೇ ಅಂತಸ್ತಿನ ನಿರ‍್ಮಾಣ ಕಾರ‍್ಯ ನಡೆದಿತ್ತು. ಅಲ್ಲಿದ್ದ ಹೋಟೆಲಿಗೆ ಕಾರ‍್ತಿಕ್ ಬಂದಿದ್ದ.

ಆಗಲೇ ಮೂರು ಗಂಟೆಯಾದ್ದರಿಂದಲೋ ಏನೋ ಇವನ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಹೋಟೆಲ್ ನಡೆಸುತ್ತಿದ್ದದ್ದು ಒಬ್ಬ ಮದ್ಯವಯಸ್ಸಿನ ಮಹಿಳೆ. ಹಣೆಗೆ ಕಾಸಗಲದ ಕುಂಕುಮ, ತುರುಬಿಗೆ ಮಲ್ಲೆ ಹೂವನ್ನು ಮುಡಿದು ನೋಡಲು ಅನ್ನಪೂರ‍್ಣೆಯಂತೆ ಇದ್ದರು. ಅವರೇ ಬಂದು ತಿನ್ನಲು ಏನು ಬೇಕೆಂದು ಕೇಳಿ, ಕೊಟ್ಟಿದ್ದರು. ಕಾರ‍್ತಿಕ್ ಊಟಮಾಡಿ ಕೈತೊಳೆದು, ದುಡ್ಡುಕೊಡಲು ಗಲ್ಲಾದ ಬಳಿ ಹೋಗುವಾಗ ಕಟ್ಟಡ ಕಂಪಿಸಿದ ಅನುಬವ. ಏನೆಂದು ಅರಿಯುವ ಮುನ್ನವೇ ಅದೇ ಮಹಿಳೆ ಇವನನ್ನು ಎಳೆದು ಟೇಬಲ್ ಕೆಳಗೆ ದೂಡಿದ ಅನುಬವ. ಕಣ್ಣುಮುಚ್ಚಿ ಬಿಡುವುದರೊಳಗೆ ನಿಂತ ನೆಲಕುಸಿದು ಎಲ್ಲೋ ಹೋದಂತಾಯಿತು. ಇದ್ದಕ್ಕಿದ್ದಂತೆ ಕತ್ತಲಾವರಿಸಿ, ದಟ್ಟವಾದ ದೂಳಿನಿಂದ ಉಸಿರಾಡಲು ತೊಂದರೆಯಾಯಿತು. ಬೂಕಂಪವಾಗಿರಬೇಕೆನೋ ತನ್ನ ಕತೆ ಮುಗಿಯಿತೆಂದುಕೊಂಡು ಇರುವ ಎಲ್ಲಾ ದೇವರನ್ನು ಜಪಿಸತೊಡಗಿದ. ಐದೇ ನಿಮಿಶದಲ್ಲಿ ಇಡೀ ಕಟ್ಟಡವೇ ಕುಸಿದು ಜೀವಂತ ಸಮಾದಿಯಾದಂತಾಯಿತು. ಸ್ವಲ್ಪ ಹೊತ್ತಿನ ಬಳಿಕ ಅಸ್ಪಶ್ಟವಾಗಿ ಜನರ ನರಳಾಟ, ಕೂಗಾಟ ಕೇಳುತ್ತಿತ್ತು. ಇದರಿಂದಾಗಿ ಕಾರ‍್ತಿಕ್ ತಾನು ಸತ್ತಿಲ್ಲ ಬದುಕಿರುವೆನೆಂದುಕೊಂಡ. ಒಮ್ಮೆ ತಾನು ಬದುಕಿರುವೆನೆಂದು ಕಾತ್ರಿಯಾದೊಡನೆ, ಹೇಗಾದರೂ ಮಾಡಿ ತಾನು ಇಲ್ಲಿಂದ ಪಾರಾಗಿ ಹೊರಹೋಗಬೇಕು, ಅಪ್ಪ ಅಮ್ಮನನ್ನು ನೋಡಬೇಕು ಎಂಬ ಆಸೆ ಬಲಿಯತೊಡಗಿತು.

ಆದರೆ ಏನು ಮಾಡುವುದು, ಸಂಪೂರ‍್ಣ ಕತ್ತಲಾವರಿಸಿ ಅಕ್ಕಪಕ್ಕ ಏನಿದೆ ಎಂದು ತಿಳಿಯದ ಪರಿಸ್ತಿತಿ. ಹಾಗೆ ದೈರ‍್ಯಮಾಡಿ ಇದ್ದ ಜಾಗದಿಂದ ಮುಂದೆ ಹೋಗಲು ಕೈಚಾಚಿದರೆ, ಮೇಲಿಂದ ಕುಸಿದ ಕಟ್ಟಡದ ಅವಶೇಶಗಳು ತಾಗಿ ಮತ್ತಶ್ಟು ಕೆಳಗೆ ಬಿದ್ದವು. ಅರೇ ಹೀಗಾದರೆ ಹೊರಹೋಗುವುದು ಹೇಗೆ, ಬದುಕುಳಿಯುವುದು ಹೇಗೆ ಎಂದು ಯೋಚಿಸತೊಡಗಿದ. ಆಗ ಸನಿಹದಲ್ಲೇ ಹೆಣ್ಣು ದ್ವನಿಯೊಂದು ಕೇಳಿಸಿತು. ಬಹುಶಹ ಅದು ಹೋಟೆಲ್ ಹೆಂಗಸಿನದೆ ಇರಬೇಕೆಂದುಕೊಂಡು ಇವನು ಮೇಡಂ ಎಂದು ಕೂಗಿದ. ಅದಕ್ಕೆ ಪ್ರತಿಯಾಗಿ, ನೀವು ಇರುವ ಜಾಗದಲ್ಲೇ ಏನೂ ಮಾಡದೆ ಸುಮ್ಮನಿರಿ, ಇಲ್ಲಿಂದ ಬದುಕಿ ಹೊರಹೋಗುವಿರಿ ಎಂದು ಹೆಣ್ಣು ದನಿ ಉತ್ತರಿಸಿತು. ಅದಕ್ಕಿವನು, ನೀವು ಹೋಟೆಲಿನವರ ಎಂದ.
“ಹೌದು”
“ಇಲ್ಲಿಂದ ಹೊರಹೋಗುವುದು ಹೇಗೆ?”
“ನಿಮ್ಮ ಜೊತೆ ನಾನಿರುವೆ, ಏನೂ ಆಗುವುದಿಲ್ಲ ಸುಮ್ಮನಿರಿ”
“ಎಲ್ಲಿದ್ದಿರಾ….”
“ಇಲ್ಲೇ ಪಕ್ಕದಲ್ಲಿ…”

ಕಾರ‍್ತಿಕ್ ಟೇಬಲ್ ಕೆಳಗೆ ನುಸುಳಿದ್ದರಿಂದ, ಅದರ ಸಮೇತ ಕೆಳಗೆ ಕುಸಿದರೂ, ಮೇಲಿನಿಂದ ಬಿದ್ದ ಯಾವ ವಸ್ತುವೂ ಇವನಿಗೆ ತಾಕದೆ ಆರಾಮವಾಗಿದ್ದ.

ವರುಶದೊಳಗೆ ಕಟ್ಟಡ ನಿರ‍್ಮಾಣ ಕಾರ‍್ಯ ಮುಗಿಸಬೇಕೆಂದು, ಎಲ್ಲಾ ಆದುನಿಕ ಯಂತ್ರಗಳನ್ನು ಬಳಸಿ ಕೆಲಸ ನಡೆದಿತ್ತು. ಆರನೇ ಅಂತಸ್ತಿನ ನಿರ‍್ಮಾಣ ಕಾರ‍್ಯ ಮುಗಿದರೆ ಎಲ್ಲವೂ ಮುಗಿದಂತಾಗಿ, ಬರುವ ಬಸವ ಜಯಂತಿಯಂದು ಅದ್ದೂರಿಯಾಗಿ ಉದ್ಗಾಟನಾ ಕಾರ‍್ಯಕ್ರಮ ಮಾಡಬೇಕೆಂದು ಹಗಲಿರುಳು ಕೆಲಸ ನಡೆಯುತ್ತಿತ್ತು. ಈ ಸಂದರ‍್ಬದಲ್ಲಿಯೇ ಕೆಳ ಅಂತಸ್ತಿನಲ್ಲಿ ದೊಡ್ಡ ಬಿರುಕು ಕಂಡು, ಅದನ್ನು ಸರಿಮಾಡುವ ಸಲುವಾಗಿ ಅಗೆಯುತ್ತಿರುವಾಗಲೇ ಇಡೀ ಕಟ್ಟಡ ಕುಸಿದು, ನೂರಾರು ಜನರು ಅದರ ಅವಶೇಶಗಳ ಅಡಿಯಲ್ಲಿ ಸಿಲುಕಿದ್ದರು.

ಈ ಗಟನೆಯಾದ ಹತ್ತೇ ನಿಮಿಶದಲ್ಲಿ ಇಡೀ ದಾರವಾಡದ ಜನ ಅಲ್ಲಿ ನೆರೆದಿದ್ದರು. ಸುದ್ದಿ ತಿಳಿದು, ಪೋಲೀಸರು, ಆಗ್ನಿಶಾಮಕ ದಳದವರು, ಅಂಬೂಲೆನ್ಸಿನವರು ಗಟನಾಸ್ತಳಕ್ಕೆ ತಲುಪಲು ಪರದಾಡುವಂತಾಗಿ, ಜನರನ್ನು ಚದುರಿಸಲು ಲಾಟಿ ಪ್ರಹಾರ ಮಾಡಬೇಕಾಯಿತು. ತಕ್ಶಣವೇ, ನುರಿತ ಪೊಲೀಸ್ ದಳದವರು ರಕ್ಶಣಾ ಕಾರ‍್ಯಕ್ಕೆ ಬಂದರು. ಇವರೊಂದಿಗೆ ಸ್ತಳೀಯ ವೈದ್ಯರೂ ಬಂದರು.

ಒಳಗೆ ಸಿಲುಕಿದ್ದ ಕಾರ‍್ತಿಕನಿಗೆ, ಹಗಲು ಇರಳು ತಿಳಿಯದಂತ ಪರಿಸ್ತಿತಿ. ಆಗಾಗ ಯಾರಾದರೂ ಕೂಗಿಕೊಂಡ ದ್ವನಿ, ಮೇಲುಗಡೆ ಯಾರೋ ಸರಿದಾಡಿದಂತ ಅನುಬವವಾಗುತ್ತಿತ್ತು. ಏನೇ ಆದರೂ ಅವನು ಎದ್ದು ನಿಲ್ಲುವಂತಿರಲಿಲ್ಲ. ಕುಳಿತಲ್ಲಿಯೆ ಕಾಲು ಚಾಚುವುದು, ಮಡಚುವುದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ತೀರಾ ಅಸಹನೀಯವೆನಿಸಿದಾಗ ಮೇಡಂ ಎಂದು ಕೂಗುತ್ತಿದ್ದ. ಆಗ ಅವರು ‘ಏನು’ ಎಂದು ಮಾತನಾಡಿಸುತ್ತಿದ್ದರು. ಅವರ ದನಿ ಕೇಳುತ್ತಿದ್ದರಿಂದ ಸ್ವಲ್ಪಮಟ್ಟಿನ ನೆಮ್ಮದಿ ಅವನಿಗಿತ್ತು.

ಒಂದು ಹೊತ್ತಿನಲ್ಲಿ ತುಂಬಾ ಹಸಿವೆನಿಸಿದಾಗ, ಮೇಡಂ ಹಸಿವು ಎಂದ. ಅದಕ್ಕವರು, ನಿಮ್ಮ ಎಡಗೈ ಸ್ವಲ್ಪ ಮುಂದೆ ಚಾಚಿ ಅಲ್ಲಿ ಕವರ್ ಇದೆ. ಅದರಲ್ಲಿ ಬ್ರೆಡ್ ಇದೆ ತೆಗೆದು ತಿನ್ನಿ ಎಂದರು. ಇವನು ಹಾಗೆ ಮಾಡಿದಾಗ, ಅವರು ಹೇಳಿದ ಕವರ್ ದೊರೆತು, ಹೊಟ್ಟೆ ತುಂಬಿಸಿಕೊಂಡ. ನೀರೂ ಅದೇ ರೀತಿ ಸಿಕ್ಕಿತು. ಕೇಳುವಾಗ, ತಿನ್ನುವಾಗ ಏನೂ ಅನಿಸದ್ದು ತಿಂದಾದ ಮೇಲೆ, ತಾನು ಹಾಗೆ ಅವರನ್ನು ಕೇಳಿದ್ದು ಸರಿಯೇ, ಈ ಕತ್ತಲಲ್ಲೂ ಅವರಿಗೆ ಹೇಗೆ ಕಾಣಿಸಿತೆಂದು ಆಶ್ಚರ‍್ಯವಾಯಿತವನಿಗೆ. ಅದರ ಬಗ್ಗೆ ಯೋಚಿಸುವಾಗಲೇ ತಲೆಯ ಮೇಲೆ ಗರ್ ಎನ್ನುವ ಶಬ್ದ, ಅಶ್ಟು ದೂರದಲ್ಲಿ ಏನೋ ಬಾರವಾದ ವಸ್ತುಗಳು ಬಿದ್ದಂತ ಸದ್ದು.

ಹೀಗೆ ಹೊತ್ತು ಹೊತ್ತಿಗೆ ಏನೋ ವಿಚಿತ್ರವಾದ ಸದ್ದುಗಳು ಕೇಳಿ ಬರುತ್ತಿದ್ದವು. ಹೀಗಿರುವಾಗಲೂ ಯಾವಾಗ ನಿದ್ದೆ ಮಾಡಿದನೋ, ಯಾವಾಗ ಎಚ್ಚರವಿದ್ದನೋ ಅವನಿಗೆ ತಿಳಿಯದಂತ ಪರಿಸ್ತಿತಿ. ಆಗಾಗ ಏನೋ ಕತ್ತರಿಸುವ, ಅವಶೇಶಗಳನ್ನು ಸರಿಸುವ, ಎಸೆಯುವ ಸದ್ದಿನ ಜೊತೆ ಮನುಶ್ಯರು ಮಾತನಾಡಿಕೊಂಡ ಅಸ್ಪಶ್ಟ ದನಿ ಕೇಳುತ್ತಿತ್ತು. ಅಲ್ಲದೆ ದೂಳು ಜಾಸ್ತಿಯಾದ ಅನುಬವ ಆಗುತ್ತಿತ್ತು. ಏನೇ ಆದರೂ, ಹೊರಬರಲು ದೇವರನ್ನು ಪ್ರಾರ‍್ತಿಸುವುದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ಒಮ್ಮೆ ನೀರು ಜಿನುಗಿ ಕುಳಿತ ಜಾಗ ಒದ್ದೆಯಾದ ಅನುಬವ. ಮತ್ತೊಮ್ಮೆ ತಂಪಾದ ಗಾಳಿ ಬಂದ ಅನುಬವ.

ಹೀಗೆ ಚಿತ್ರವಿಚಿತ್ರ ಪರಿಸ್ತಿತಿಯ ಸಂದರ‍್ಬದಲ್ಲಿ, ನೆತ್ತಿಯ ಮೇಲೆ ಯಾರೋ ಓಡಾಡಿದಂತಾಯಿತು. ಆಗಲೇ, ಟೇಬಲನ್ನು ಸಾದ್ಯವಾದಶ್ಟು ಜೋರಾಗಿ ಅಲ್ಲಾಡಿಸು ಎಂದು ಆಕೆ ಇವನಿಗೆ ಹೇಳಿದಳು. ಆಕೆ ಹೇಳಿದಂತೆಯೇ ಟೇಬಲನ್ನು ಅಲ್ಲಾಡಿಸತೊಡಗಿದ. ಮೊದಲಿಗೆ ಅದರ ಮೇಲೆ ಏನೇನೋ ವಸ್ತುಗಳು ಬಿದ್ದಿದ್ದ ಕಾರಣ ಕಶ್ಟವಾಯಿತು. ನಂತರ ಅದರ ಮೇಲಿದದ್ದು ಆಚೆ ಇಚೆ ಬಿದ್ದ ಮೇಲೆ ಜೋರಾಗಿ ಆಡಿಸಲು ಸಾದ್ಯವಾಯಿತು. ಆಗ ಯಾರೋ ಒಬ್ಬರು, ‘ಇಲ್ಲಿ ಬನ್ನಿ ಇಲ್ಲಿ ಜನರಿದ್ದ ಹಾಗಿದೆ’ ಎಂದು ಕೂಗಿದಂತಾಯಿತು. ನಂತರ ನಿದಾನವಾಗಿ ಅವನ ಮೇಲಿದ್ದ ವಸ್ತುಗಳನ್ನು ತೆರವುಗೊಳಿಸುತ್ತಿರುವುದು ಅನುಬವಕ್ಕೆ ಬಂತು. ಕೊನೆಗೆ ಯಾವುದೋ ಒಂದು ಕಡೆಯಿಂದ ಬೆಳಕು ಕಂಡಿತು. ಅದನ್ನು ನೋಡಿದೊಡನೆ ಅವನ ಸಂತೋಶಕ್ಕೆ ಪಾರವೇ ಇರಲಿಲ್ಲ. ಅವನಿಗೇ ತಿಳಿಯದಂತೆ ಜೋರಾಗಿ ‘ತ್ಯಾಂಕ್ಸಪ್ಪಾ ದೇವರೇ’ ಎಂದು ಕೂಗಿದ. ಇದು ಮೇಲಿದ್ದವರಿಗೂ ಹುರುಪು ತಂದಿತು. ಅವರು ಮತ್ತಶ್ಟು ಶ್ರದ್ದೆಯಿಂದ, ಒಂದು ಬದಿಯಿಂದ ಅಡ್ಡವಿದ್ದ ವಸ್ತುಗಳನ್ನು ತೆರವುಗೊಳಿಸುತ್ತಾ, ಆಗಾಗ ಕೂಗಿ ಇವನ ಇರುವಿಕೆಯನ್ನು ದ್ರುಡಪಡಿಸಿಕೊಂಡು, ಕಾರ‍್ತಿಕನಿಗೂ ಸಲಹೆಗಳನ್ನು ನೀಡುತ್ತಾ ತುಂಬಾ ಹುಶಾರಾಗಿ, ಅವನಿಗೇನೂ ಆಗದಂತೆ ಹೊರತಂದರು. ಜೀವಂತವಾಗಿ ಕಾರ‍್ತಿಕನ್ನನ್ನು ನೋಡಿದ ಜನ ಜೋರಾಗಿ ಚಪ್ಪಾಳೆ ತಟ್ಟುತ್ತಾ, ಶಿಳ್ಳು ಹೊಡೆಯುತ್ತ ಸ್ವಾಗತಿಸಿದರು.

ಇದ್ದಲೇ ಇದ್ದ ಕಾರಣ, ಅವನಿಗೆ ನಡೆಯಲು ಆಗುತ್ತಿರಲಿಲ್ಲ. ಅದಕ್ಕಾಗಿ ರಕ್ಶಣಾ ಸಿಬ್ಬಂದಿಯವರು ಆಸ್ಪತ್ರೆಯ ಸ್ಟ್ರೆಚರಿನಲ್ಲಿ ಇವನನ್ನು ಹೊತ್ತು ತಂದರು. ಅಲ್ಲಿಯೇ ಇದ್ದ ಡಾಕ್ಟರರು ಮೊದಲ ಚಿಕಿತ್ಸೆ ನೀಡಿದರು. ಈ ಸಂದರ‍್ಬದಲ್ಲಿ, ‘ನಿಮ್ಮ ಜೊತೆ ಮತ್ತೆ ಯಾರಾದರೂ ಇದ್ದರೇ?’ ಎಂದಾಗ, ತಕ್ಶಣವೇ ಹೋಟೆಲ್ ಮಹಿಳೆಯ ನೆನಪಾಗಿ ವಿಶಯ ತಿಳಿಸಿದ. ಅಲ್ಲಿಂದ ಸೀದಾ ಅಂಬುಲೆನ್ಸಿನಲ್ಲಿ ಅವನ್ನನ್ನು ಹೆಚ್ಚಿನ ಚಿಕೆತ್ಸೆಗಾಗಿ ಆಸ್ಪತ್ರೆಗೆ ಕರೆತಂದರು.

ಎರಡು ದಿನಗಳ ನಂತರ ಆಸ್ಪತ್ರೆಯಿಂದ ಕಾರ‍್ತಿಕ್ ಬಿಡುಗಡೆಗೊಂಡು ಮನೆಗೆ ಬಂದ. ಇದು ಅವನ ಮರುಜನ್ಮವಾಗಿತ್ತು. ಊರಿಗೆ ಹೋದ ತಂದೆ ತಾಯಿ ಮನೆಗೆ ಬಂದಾಗ, ಇವನು ಎಲ್ಲಿ ಹೋದ, ಏನಾದ ತಿಳಿಯದೆ ಒದ್ದಾಡುತ್ತಿದ್ದರು. ಯಾವುದೇ ಕಾರಣಕ್ಕೂ ತಮ್ಮ ಮಗ ಕಟ್ಟಡದ ಅವಶೇಶಗಳಲ್ಲಿ ಸಿಲುಕಿರದಿರಲಿ, ಎಲ್ಲೇ ಇದ್ದರೂ ಆರೋಗ್ಯವಾಗಿ ಹಿಂದಿರುಗಲಿ ಎಂದು ಬೂಮಿಯಲ್ಲಿರುವ ಎಲ್ಲಾ ದೇವರಿಗೂ ಬೇಡಿಕೊಂಡಿದ್ದರು. ಆಸ್ಪತ್ರೆಯಿಂದ ಕರೆ ಬಂದು, ಮನೆಯವರೆಲ್ಲಾ ಅಲ್ಲಿಗೆ ಹೋಗಿ ಇವನ ಮುಕ ನೋಡುವವರೆಗೂ ಯಾರಿಗೂ ಸಮಾದಾನವಿರಲಿಲ್ಲ. ಮನೆಗೆ ಬಂದಮೇಲಂತೂ ಅವರ ಸಂತೋಶಕ್ಕೆ ಮಿತಿಯೇ ಇರಲಿಲ್ಲ.

ಕಾರ‍್ತಿಕ್ ಮನೆಗೆ ಬಂದ. ಬಂದು-ಬಳಗದವರು, ಗೆಳೆಯರು, ಪರಿಚಯಸ್ತರು, ಪರಿಚಯ ಇಲ್ಲದವರು ಬಂದು ಮಾತನಾಡಿಸಿ ಹೋಗುತ್ತಿದ್ದರು. ಎಲ್ಲರಿಗೂ ಅವನ ಅನುಬವ ಕೇಳುವ ಕುತೂಹಲ. ಹಾಗಾಗಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇವನಿಗೂ, ಮನೆಯವರಿಗೂ ಹೇಳಿಹೇಳಿ ಸಾಕಾಗಿಹೋಗಿತ್ತು. ಕತ್ತಲು ಹಾಗೂ ದೂಳಿನಲ್ಲಿ ಸಿಲುಕಿ ನಲುಗಿದ್ದ ಅವನಿಗೆ ವಿಶ್ರಾಂತಿಯ ಅವಶ್ಯಕತೆ ಇತ್ತು. ಆದರೆ ಬಂದುಹೋಗುವ ಜನರಿಂದ ಅದು ಸಾದ್ಯವಾಗಿರಲಿಲ್ಲ.

ಅಂದು ಬೆಳಿಗ್ಗೆ ಇನ್ನೂ ಎಂಟು ಗಂಟೆಯ ಸಮಯ, ಯಾರೋ ಬಂದು ಬಾಗಿಲು ಬಡಿದರೆಂದು ನೋಡಿದರೆ ಟಿವಿ ಚಾನಲಿನವರು ಇವನ ಸಂದರ‍್ಶನಕ್ಕಾಗಿ ಬಂದಿದ್ದರು. ಅವರಿಗೆ ಇಲ್ಲವೆನ್ನಲು ಸಾದ್ಯವೇ. ಸರಿ, ಸಂದರ‍್ಶನ ಆರಂಬವಾಗಿ, ‘ಅಲ್ಲಿಗೆ ಏಕೆ ಹೋಗಿದ್ದಿರಿ? ಆ ದಿನ ಏನಾಯಿತು? ಏನು ಮಾಡಿದಿರಿ?’ ಮುಂತಾಗಿ ಕೇಳುತ್ತಾ, ಮ್ರುತದೇಹದ ಜೊತೆ ಎರಡು ರಾತ್ರಿ, ಎರಡು ಹಗಲು ಕಳೆದಿರಲ್ಲಾ ಅದರ ಬಗ್ಗೆ ಹೇಳಿ ಎಂದಾಗ, ಇವನ ಎದೆ ದಸಕ್ ಎಂದಿತು. ಏಕೆಂದರೆ, ಮನೆಯವರು, ಇತರರು ಯಾರೂ ಕಾರ‍್ತಿಕನಿಗೆ ಈ ವಿಶಯ ತಿಳಿಸಿರಲಿಲ್ಲ. ಈ ವಿಚಾರ ತಿಳಿದು ಅವನಿಗೆ ತಲೆತಿರುಗಿದ ಅನುಬವ. ಸಂದರ‍್ಶನ ಹೇಗೆ ಮುಗಿಸಿದನೋ ಅವನಿಗೇ ಗೊತ್ತಿಲ್ಲ. ಅವರು ಹೋಗುತ್ತಿದ್ದಂತೆ, ಮನೆಯವರಿಗೆ ಕೇಳಿ ಗಟನೆ ಆದ ದಿನದಿಂದ ಇಲ್ಲಿನವರೆಗಿನ ಪೇಪರುಗಳನ್ನು ಓದತೊಡಗಿದ. ಇವನು ಸಿಕ್ಕ ಮಾರನೇ ದಿನ “ಸಾವನ್ನು ಗೆದ್ದು ಬಂದ ಮ್ರುತ್ಯುಂಜಯ” ಎಂಬ ಶೀರ‍್ಶಿಕೆಯಲ್ಲಿ ಪೋಟೋ ಸಮೇತ ವಿಶಯ ಪ್ರಕಟವಾಗಿತ್ತು. ಇವನ ಪೋಟೋ ಅಡಿಯಲ್ಲೇ ಮತ್ತೊಂದು ಪೋಟೋ ಕೂಡ ಪ್ರಕಟವಾಗಿತ್ತು. ಅದು ಆ ಹೋಟೆಲ್ ಹೆಂಗಸಿನದು! ‘ಮ್ರುತದೇಹದ ಜೊತೆ ಕಾರ‍್ತಿಕರವರು ಅರಿಯದೆ ಎರಡು ರಾತ್ರಿ, ಎರಡು ಹಗಲನ್ನು ಕಳೆದು ಪವಾಡ ರೀತಿಯಲ್ಲಿ ಬದುಕಿಬಂದಿದ್ದಾರೆ’ ಎಂಬ ವಿಚಾರ ಪ್ರಕಟವಾಗಿತ್ತು. ಟಿ ವಿ ಯವರು ಕೇಳುವವರೆಗೂ ಇವನಿಗೆ ಆ ಮಹಿಳೆ ಸತ್ತ ವಿಚಾರವಾಗಲಿ, ಮ್ರುತದೇಹದೊಂದಿಗೆ ಇದ್ದದ್ದಾಗಲಿ ಗೊತ್ತೇ ಇರಲಿಲ್ಲ. ಇಲ್ಲಿಯವರೆಗೂ ಅವನು, ತನ್ನನ್ನು ಕಾಪಾಡಿದ್ದು ಆ ಮಹಿಳೆಯೇ ಎಂದು ನಂಬಿದ್ದ.

ಈಗ ಈ ವಿಶಯ ತಿಳಿದು, ‘ಕಟ್ಟಡ ಕುಸಿದಾಗಿನಿಂದ ತಾನು ಹೊರ ಬರುವವರೆಗೆ ದೈರ‍್ಯ ತುಂಬಿ ಕಾಪಾಡಿದ ಹೆಣ್ಣು ಯಾರು? ಹಸಿದ ಹೊಟ್ಟೆಗೆ ಅನ್ನವ ಕೊಟ್ಟು, ಜೀವಕ್ಕೆ ಆಪಾಯವಾಗದಂತೆ ಟೇಬಲ್ ಕೆಳಗೆ ತಳ್ಳಿ, ಬ್ರೆಡ್ ನೀರು ಕೊಟ್ಟು, ಹೊರಬರಲು ಸಹಾಯ ಮಾಡಿದ ಆ ಹೆಣ್ಣು ಮತ್ತು ದನಿ ಹೋಟೆಲ್ ಮಹಿಳೆಯದೋ? ಅತಾವ ಕುಲದೇವತೆ ಬವಾನಿಯದೋ?’ ತಿಳಿಯದೆ ಯೋಚಿಸುತ್ತಲೇ ಇದ್ದಾನೆ!

( ಚಿತ್ರಸೆಲೆ : voanews.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: