ಮ್ರುದಂಗ ವಾದನ

ರಾಜೇಶ್.ಹೆಚ್.

ಮರಕುಟಿಗ, Woodpecker

ಕೊನೆಗೂ ಬಸ್ಸು ನಿಲ್ದಾಣ ಕಾಣಿಸಿತು. ಬಿಳಿ ಬಣ್ಣದ ಐರಾವತ ಬಸ್ಸು ಸ್ವತಹ ಇಂದ್ರನ ಐರಾವತನಂತೆ ಕಾದಿತ್ತು. ಗಂಟೆ ಹನ್ನೊಂದಾಗಿತ್ತು, ನಾನು ಎಂದಿನಂತೆ ತಡವಾಗಿ ತಲುಪಿದ್ದೆ. ಶುಬ್ರ ಶ್ವೇತ ದಿರಿಸು ತೂಟ್ಟ ನಿರ‍್ವಾಹಕರು ಟಿಕೇಟಿನ ಪಟ್ಟಿ, ನೀಲಿ ಬಣ್ಣದ ಪೆನ್ನು ಹಾಗೂ ಕಪ್ಪು ಸೀಟಿಯನ್ನು ಕೈಯಲ್ಲಿ ಇಂದ್ರನ ವಜ್ರಾಯುದದೆಂತೆ ಹಿಡಿದು ಶತಪತ ತಿರುಗುತ್ತಿದ್ದರು. ಅವರು ಇಂದ್ರನೋ ಇಲ್ಲಾ ಸಾಕ್ಶಾತ್ ಯಮದರ‍್ಮನೋ ತಿಳಿಯದೆ ಅರೆಕ್ಶಣ ತಬ್ಬಿಬ್ಬಾದೆ. ಹಣೆಯಲ್ಲಿ ಮೂಡಿದ ಬೆವರಿನ ಹನಿಯನ್ನು ಕರವಸ್ತ್ರದಿಂದ ಉಜ್ಜಿ ‘ದೇವರೇ, ಇನ್ನೇನು ಕಾದಿದೆಯೋ’ ಎಂದು ಮನಸ್ಸಿನಲ್ಲಿಯೇ ಬಡಬಡಾಯಿಸಿ, ಆಟೋ ಚಾಲಕರಿಗೆ ಬೇಗನೆ ಬಾಡಿಗೆಯನ್ನು ನೀಡಿ ಅವರೆಡೆಗೆ ದೌಡಾಯಿಸಿದೆ. ಮೇಲುಸಿರು ಬಿಡುತ್ತ ಆನ್ಲೈನ ಟಿಕೇಟನ್ನು ನೀಡುತ್ತ ಪೆಚ್ಚಾದ ನಗೆಯನ್ನು ಬೀರಿದೆ. ಅವರಿಗೆ ಅದೇನಾಯಿತೋ ನಾನರಿಯೆ, ಬೈಗುಳ ಸುರಿಮಳೆಯನ್ನು ನಿರೀಕ್ಶಿಸಿದ ನನಗೆ, ಅವರು  ಮಂದಹಾಸವನ್ನು ಬೀರಿ, ಟಿಕೇಟ್ಟನ್ನು ಶಾಂತಚಿತ್ತರಾಗಿ ಪರಿಶೀಲಿಸಿ “ಬೆಂಗಳೂರಿನಲ್ಲಿ ಎಲ್ಲಿ ಮಾರಾಯರೇ?” ಎಂದು ಕೇಳಿದರು. “ವಿಮಾನ ನಿಲ್ದಾಣಕ್ಕೆ ಸಾರ್. ನಿನ್ನೆ ಪ್ಲೈಟ್ ರದ್ದಾಗಿ ಪಜೀತಿಯಾಯಿತು. ಹಣ, ಸಮಯ, ರಜೆ ಎಲ್ಲಾ ಹೋಯಿತು ಮಾರಾಯ್ರೇ. ಗಡಿಬಿಡಿಯಲ್ಲಿ ನನ್ನ ಗೆಳೆಯನೊಬ್ಬ ನಿಮ್ಮ ಬಸ್ಸಿನಲ್ಲಿ ಟಿಕೆಟ್ ಮಾಡಿಸಿ ಕೊಟ್ಟ. ಹಾಗಾಗಿ ಬಚಾವಾದೆ. ನಿಮ್ಮ ಐರಾವತದಲ್ಲಿ ಪಯಣಿಸುವ ಸೌಬಾಗ್ಯ ನನ್ನದಾಯಿತು.” ಎಂದು ನಸು ನಕ್ಕೆ. “ಕೊನೆಗೂ ಹಳೇ ಗಂಡನ ಪಾದವೇ ಗತಿಯಾಯಿತೆನ್ನಿ.” ಎಂದಾಗ ಚಾಲಕರೂ ಸೇರಿ ಎಲ್ಲರೂ ನಕ್ಕರು. ಸದ್ಯ ಬಿಗುವಾದ ವಾತಾವರಣ ತಿಳಿಯಾಯಿತಲ್ಲ ಎಂದು ಸಮಾದಾನವಾಯಿತು.

“ಎಲ್ಲಿ ನಿಮ್ಮ ಲಗೇಜ್ ಕಾಣಿಸುತ್ತಿಲ್ಲ?” ಎಂದು ಕುತೂಹಲದಿಂದ ಕೇಳಿದರು. “ನನ್ನ ಹೆಗಲ ಮೇಲಿದೆಯಲ್ಲ. ಇಶ್ಟೇ ಸಾಕು.” ಎಂದು ನನ್ನ ಹೆಗಲಿಗೇರಿದ್ದ ಬ್ಯಾಕ್ಪ್ಯಾಕ್‍ನತ್ತ ಸನ್ನೆ ಮಾಡಿ ನಕ್ಕೆ. ಅವರು ನಕ್ಕು ಸುಮ್ಮನಾದರು. ಚಾಲಕರಿಗೆ ಹೊರಡುವಂತೆ ಸನ್ನೆ ಮಾಡಿದರು. ಸಾವರಿಸಿಕೊಂಡು ನನ್ನ ಆಸನವನ್ನು ಹುಡುಕಿ ಆಸೀನನಾದೆ. ಚಾಲಕರು ಹೊರಡಲನುವಾಗಿದ್ದಾಗ ಅವರಿಗೆ ಆಪೀಸಿನಿಂದ ಕರೆ ಬಂತು. ಇಂಜಿನ್ ಚಾಲನೆಯಲ್ಲಿಟ್ಟು ಕೆಳಗೆ ಇಳಿದು ಹೊರಹೋದರು. ಹಗಲೊತ್ತಾದ್ದರಿಂದ ಅಶ್ಟೊಂದು ಪ್ರಯಾಣಿಕರಿಲ್ಲದೆ ಬಸ್ಸು ಕಾಲಿಯಾಗಿ ತೋರುತ್ತಿತ್ತು. ನನ್ನ ಪಕ್ಕದ ಸೀಟು ಕಾಲಿಯಾಗಿದ್ದನ್ನು ಕಂಡು ಸಂತಸವಾಯಿತು. ಹಾಯಾಗಿ ನಿದ್ದೆ ಮಾಡಬಹುದೆಂದು ನಿಶ್ಚಿಂತೆಯಾಯಿತು. ನಿಜ ಹೇಳಬೇಕೆಂದರೆ ನನ್ನ ತಲೆ ಸಿಡಿಯುತ್ತಿತ್ತು. ವಿಮಾನ ರದ್ದಾಗುವ ಒಂದು ಸಣ್ಣ ಸುಳಿವನ್ನು ಕೂಡ ವೈಮಾನಿಕ ಕಂಪೆನಿಯವರು ನೀಡಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಅದೆಶ್ಟು ಅನಾನುಕೂಲತೆಯಾಗುತ್ತದೆಂದು ಅವರು ಯೋಚಿಸುವುದೇ ಇಲ್ಲ. ಅವರ ಮೇಲೆ ಕೋರ‍್ಟಿಗೆ ಹೋಗುವಶ್ಟು ತ್ರಾಣ ಜನಸಾಮಾನ್ಯರಲ್ಲಿ ಇರುವುದಿಲ್ಲ. ನನ್ನ ಯೋಚನಾಲಹರಿ ಪ್ರಕ್ಶುಬ್ದ ನದಿಯಂತೆ ವೇಗವಾಗಿ ಸಾಗುತ್ತಲೇ ಇತ್ತು. ಕೇವಲ ಮುಕ್ಕಾಲು ಗಂಟೆಯ ಪಯಣ ಈಗ ಹತ್ತು ಗಂಟೆಯ ಪಯಣವಾಗಿ ಬದಲಾಗಿತ್ತು ಎಂದು ಮನಸ್ಸು ಮುದುಡಿ ಹೋಗಿತ್ತು. ಹವಾನಿಯಂತ್ರಿತ ವಾಹನವಾದ್ದರಿಂದ ಕಿಟಕಿಯ ಗಾಜು ತೆರೆಯುವ ವ್ಯವಸ್ತೆ ಕೂಡ ಇರಲಿಲ್ಲ. ಕಿಟಕಿಯ ಪರದೆಯನ್ನು ಸರಿಸಿ ಹೊರಗೆ ನೋಡಿದೆ.

ಮುಂಗಾರು ಕಳೆದು ಶರದ್ ರುತುವು ಕಾಲಿಟ್ಟಿತ್ತು. ಸುತ್ತಲೂ ಹಚ್ಚ ಹಸಿರಿನ ಪರದೆ, ಹಕ್ಕಿಗಳ ಮುಗಿಲು ಮೇರೆಗೆ ಏರಿದ ಕಲರವ ಮನಸ್ಸಿನ ನಿರಾಶೆಯ ಚಾಯೆ ಅರೆ ಕ್ಶಣದಲ್ಲಿ ಮಂಗಮಾಯವಾಗಿ, ನವೋಲ್ಲಾಸ ಮೂಡಿತು. ತುಂಬಿ ತುಳುಕತೊಡಗಿತು. ಪ್ರಕ್ರುತಿಯ ಮಾಯೆಯೆ ಹಾಗೆ. ನನ್ನ ಚಿಕ್ಕವಯಸ್ಸಿನಲ್ಲಿ ನಾ ಕಂಡಿದ್ದ ಮುಂಗಾರಿನ ಮಳೆಯ ಮಿಂಚು, ಗುಡುಗಿನ ಆರ‍್ಬಟ, ಉಕ್ಕಿ ಹರಿಯುತ್ತಿದ್ದ ಹಳ್ಳ, ತೊರೆಗಳ ನಲಿದಾಟ, ಸದಾ ಜಿನುಗುವ ಹಿಂಗಾರು ಮಳೆ, ಗಗನದಲ್ಲಿ ಮೂಡುವ ಕಾಮನಬಿಲ್ಲು, ಸರಳ ಶಬ್ದಗಳಲ್ಲಿ ವರ‍್ಣಿಸಲಾಗದ ನಿಸರ‍್ಗದ ಅತುಲಿತ ಸೌಂದರ‍್ಯವನ್ನು ಹೇಗೆ ಪದಮಾಲೆಗಳಲ್ಲಿ ವರ‍್ಣಿಸಲಿ?

ಎಲ್ಲಾ ನಗರಗಳಂತೆ ಮಂಗಳೂರಿನ ಹಸಿರು ಪರದೆ ನಿದಾನವಾಗಿ ಮಾಯವಾಗತೊಡಗಿದೆ. ಕೇವಲ ಒಂದು ದಶಕದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿ, ಪ್ರಕ್ರುತಿಯು ತನ್ನ ಶ್ರುಂಗಾರ ವೈಬವಗಳನ್ನು ಕಳೆದು ಬರಡಾಗತೊಡಗಿದ್ದಾಳೆ. ನಾವು ತಂತ್ರಗ್ನಾನದ ದಾಸರಾಗಿ ಬಾಹ್ಯ ಪ್ರಪಂಚದಿಂದ ವಿಮುಕರಾಗಿ ಅಂತರ‍್ದಾನಿಗಳಾಗುತ್ತಾ ಸಾಗಿದ್ದೇವೆ. ಮಹಾನ್ ರುಶಿ ಮುನಿಗಳೆಲ್ಲಾ ಹಲವು ವರುಶಗಳ ಜಪ-ತಪಗಳಿಂದ ಇದನ್ನು ಸಾದಿಸಿದ್ದರೆ ತಂತ್ರಗ್ನಾನ ಕೇವಲ ನಿಮಿಶಗಳಲ್ಲಿ ಸಾರ‍್ವಜನಿಕರನ್ನು ಮಂತ್ರಮುಗ್ದಗೊಳಿಸುವ ಸಿದ್ದಿಯನ್ನು ಪಡೆದಿದೆ. ಜನ ಮರುಳೋ, ಜಾತ್ರೆ ಮರುಳೋ ತಿಳಿಯದಾಗಿದೆ. ಇಂದು ತಂತ್ರಗ್ನಾನವನ್ನು ಅರಿಯದವನು ಅನಕ್ಶರಸ್ತನಾಗಿದ್ದಾನೆ, ಅದರಲ್ಲಿ ಸಂವಹಿಸದವನನ್ನು ದುರುಳನಂತೆ ಕಾಣುವುದು ವಿಪರ‍್ಯಾಸವಲ್ಲದೇ ಇನ್ನೇನು? ಬದಲಾವಣೆ ಜಗದ ನಿಯಮವೇ ಅತವಾ ಬದಲಾವಣೆ ಮಾನವನ ಜಡತೆಯನ್ನು ಹೆಚ್ಚಿಸಲು ಕಂಡುಕೊಂಡಿರುವ ಸಾದನವೇ? ಉತ್ತರವನ್ನು ನಾ ತಿಳಿಯೆನು. ವಾಹನಗಳ ಮತ್ತು ಅವುಗಳ ಪ್ರಪಂಚದ ಅವಿಬಾಜ್ಯ ಅಂಗವಾದ ವಾಯು ಹಾಗೂ ಶಬ್ದ ಮಾಲಿನ್ಯ ಚಂಡ-ಮುಂಡರೆಂತೆ ನಿತ್ಯ ಕಾಡುತ್ತಿವೆ. ಈ ಎಲ್ಲಾ ಯೋಚನಗೆಳ ನಡುವೆ, ಟಕ..ಟಕ..ಟಕ.. ಎಂಬ ಸುಶ್ರಾವ್ಯವಾದ ನಾದ ಲಹರಿಯೊಂದು ನುರಿತ ಮ್ರುದಂಗ ವಾದ್ಯ ಕಲಾವಿದನ ಮ್ರುದಂಗದಿಂದ ಶ್ರುತಿಬದ್ದವಾಗಿ ಹೊರಡಿದಂತೆ ಕೇಳಿ ಬರತೊಡಲಾಗಿ ನನ್ನ ಗಮನ ಅತ್ತ ಸರಿಯಿತು.

ಅದೊಂದು ಪುಟ್ಟ ಮರಕುಟಿಗ. ಅದರ ಕಪ್ಪಾದ ದೇಹ, ಚೊಪಾದ ಕೊಕ್ಕು, ಹೊಳೆಯುವ ಕಂಗಳು, ಹಾಗೂ ಕೆಂಪಾದ ಜುಟ್ಟು ಲಯಬದ್ದವಾಗಿ ಸದ್ದಿನೊಂದಿಗೆ ಅದರುತ್ತಿತ್ತು. ತನ್ನ ಕಾರ‍್ಯದಲ್ಲಿ ತನ್ಮಯವಾಗಿ ಲೋಕದ ಪರಿವೆಯೇ ಇಲ್ಲದೆ ಒಣಗಿದ ಮರದ ಕೊರಡನ್ನು ಮ್ರುದಂಗವಾಗಿ ನುಡಿಸುತ್ತಾ ಮದ್ಯದಲ್ಲಿ ಎಲ್ಲೋ ಕೆಲವೊಂದು ಬಾರಿ ಶ್ರುತಿ ತಪ್ಪಿ ಕರ‍್ಕಶವಾಗಿ ನುಡಿಸುತಿತ್ತು. ಈ ಅಪಶ್ರುತಿಗೆ ಕಾರಣವೇನಿರಬಹುದು? ಅದರ ಮನಸ್ಸಿನಲ್ಲಿ ಉಳಿದ ಯಾವುದೋ ನೋವೋ, ವಿಶಾದವೋ ನಾನರಿಯೆ. ಅತವಾ ಶ್ರುತಿ-ಅಪಶ್ರುತಿಗಳ ಬಂದನ ಅದಕ್ಕಿದೆಯೇ? ಇವು ಮಾನವನ ಸ್ರುಶ್ಟಿಯಲ್ಲವೇ? ಅದರ ನುಡಿತದಲ್ಲಿ ಸಪ್ತ ಸ್ವರಗಳು ರೆಕ್ಕೆ ಬಿಚ್ಚಿ ಹಾರಾಡಿದಂತನಿಸಿ ಸಾಂತ್ವನದ ಮುಗಳ್ನಗು ಮೊಗದಲ್ಲಿ ಮೂಡಿತು. ಸಂತಸದ ಕೇಕೆ, ನಡುವೆ ಮೌನ, ನಂತರ ಗಾಂಬೀರ‍್ಯ ಹೀಗೆ ಸಾಗಿತ್ತು ಅದರ ಸಂಗೀತ ಕಚೇರಿ. ಬಿಡುವಿನಲ್ಲಿ ಆಹಾರಕ್ಕಾಗಿ ಮರದ ತೊಗಟೆಯನ್ನು ಕೆದಕುತ್ತಿತ್ತು. ಅದು ಯಾರ ಒತ್ತೆಯಾಳೂ ಅಲ್ಲ, ಅದಕ್ಕಾವ ಬಂದನವೂ ಇಲ್ಲ. ನನ್ನ ಮನಸ್ಸಿನ ಆಳಕ್ಕಿಳಿದು ಬಾವನೆಗಳ ತೋರಣವನ್ನು ಕೆದಕಿದ್ದು ಸುಳ್ಳಲ್ಲ.

ಅದು ಕೂಡ ನನ್ನಂತೆ ಗಂಡು ಪಕ್ಶಿ ಏನೋ? ಗಂಡೆಂದಾಕ್ಶಣ ನಾ ಹೆಣ್ಣು ದ್ವೇಶಿಯಲ್ಲಾ. ಅದು ಒಂದು ಲಿಂಗ ಮಾತ್ರ. ಸವಾಲು ಎಲ್ಲಾರಿಗೂ ಒಂದೇ. ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದವನು. ಇಲ್ಲಿ ಗಂಡು ಮಕ್ಕಳೇ ಮನೆಯ ಎಲ್ಲಾ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಹಾಗಾಗಿ ಗಂಡು ಕೇವಲ ಸಂಕೇತ ಮಾತ್ರ. ದೂರದ ಕಾಡಿನಲ್ಲಿ, ಗಿಡ ಮರಗಳ ನಡುವಲ್ಲಿ, ತಂದೆ-ತಾಯಿಯ ಅಶ್ರಯದಲ್ಲಿ ಹಾಯಾಗಿ ಬದುಕಿದ್ದ ಈ ಪುಟ್ಟ ಹಕ್ಕಿ ಏಕಾಏಕಿ ಈ ಮಾಯಾ ನಗರಿಗೇಕೆ ಬಂತೋ ನಾನರಿಯೆ. ಪ್ರಾಯಶಹ ತನಗಾಗಿ ಒಂದು ಗೂಡು, ಮಡದಿ, ಮಕ್ಕಳು ಎಂದು ನೂರಾರು ಕನಸ್ಸುಗಳನ್ನು ಹೊತ್ತು ಬಂದಿತ್ತೇನೋ, ಪಾಪ. ಇಲ್ಲಿ ಬಂದು ಬದುಕನ್ನು ಕಂಡು, ಬ್ರಮನಿರಸನಗೊಂಡು, ತಿರುಗಿ ಹೋಗಲಾಗದೆ, ಕೊನೆಗೂ ಒಂದು ಒಣ ಕೊರಡನ್ನು ಹುಡುಕಿ, ಕೊನೆಗೊಂದು ಗೂಡನ್ನು ಕಟ್ಟತೊಡಗಿರಬೆಕು ಪಾಪ. ಪ್ರತಿ ಹೊಸ ಚಿಗುರು ತನ್ನದೇ ಪತ ಕಂಡುಕೊಳ್ಳಬೇಕಾದುದು ಪ್ರಕ್ರುತಿ ನಿಯಮ. ನಮ್ಮ ಬಾಳಿನ ಸಾಮ್ಯತೆ ನನ್ನ ದ್ರುಶ್ಟಿಕೋನದ ದೋಶವೇನೋ ಎಂಬ ಸಂಶಯ ಮೂಡಿ ಕಿರುನಗೆ ಮೂಡಿ ಅದೆಲ್ಲೋ ಮಾಯವಾಯಿತು. ನನಗ್ಯಾಕೆ ಈ ಪರಿಯ ಯೋಚನೆ? ಅದರ ಬಾಳು ನನ್ನ ಬಾಳಿನ ಪಡಿಯಚ್ಚೋ ಇಲ್ಲಾ ಮನಸ್ಸಿನ ಬ್ರಮೆಯೋ ನಾನರಿಯೆ.

“ಇದು ನಗರೀಕರಣದ ಪರಿಣಾಮ ಕಣ್ರಿ. ಮೈಲುಗಟ್ಟಲೆ ಕಾಡುಮೇಡನ್ನು ನಾಶಮಾಡಿ ಐಶಾರಾಮಿ ಕಟ್ಟಡಗಳನ್ನು ಕಟ್ಟಿದ ಪರಿಣಾಮ, ಮಾನವನ ಸ್ವಾರ‍್ತದ ಪರಿಣಾಮ, ಈ ಪ್ರಕ್ರುತಿಯಲ್ಲಿ ದೊಡ್ಡ ಏರುಪೇರಾಗಿದೆ. ನಮ್ಮ ಅಳಿವಿನ ಕಾಲ ಸಮೀಪವಾಗಿದೆ.” ನನ್ನ ಮನಸ್ಸನ್ನು ಯಾರೋ ಓದಿ ಸಂವಾದ ನಡೆಸಿದಂತಾಗಿ ಬೆಚ್ಚಿಬಿದ್ದು ದನಿ ಬಂದೆಡೆಗೆ ತಿರುಗಿ ನೋಡಿದೆ. ಐವತ್ತರ ಆಸುಪಾಸಿನ ಬ್ರುಹತ್ ಕನ್ನಡಕದಾರಿ ಅಪರಿಚಿತ ವ್ಯಕ್ತಿಯೊಬ್ಬರು ನನ್ನೊಂದಿಗೆ ಚಿರಪರಿಚಿತರಂತೆ ಹರಟೆ ಆರಂಬಿಸಿದ್ದರು. ಅಗಲೇ ನನಗರಿವಾದದ್ದು ನಾನು ಬಸ್ಸಿನಲ್ಲಿ ಪಯಣಿಸಿ 4-5 ವರ‍್ಶಗಳೇ ಕಳೆದು ಹೊಗಿದ್ದವು. ವೈಮಾನಿಕ ಪ್ರಯಾಣದಲ್ಲಿ ಹೀಗೆ ಹರಟೆಗಿಳಿಯುವವರ ಸಂಕ್ಯೆ ಕಡಿಮೆ. ಎಲ್ಲರೂ ಹೆಚ್ಚಾಗಿ ಗಂಬೀರ ವದನರು, ಮೌನವಾಗಿರುವುದೇ ಶಿಶ್ಟಾಚಾರ ಎಂಬಂತಿರುವವರು. ಹಾಗಾಗಿ ಸಾಮಾನ್ಯರಂತೆ ಮಾತನ್ನಾಡಿದರೆ ಶಿಶ್ಟಾಚಾರ ಮುರಿದು ಬೀಳಬಹುದು ಎಂಬ ಬಯದಿಂದ ನಾನು ಕೂಡ ಒಂದೋ ಸಾಹಿತ್ಯದಲ್ಲಿ ಅತವಾ ಮೊಬೈಲಿನಲ್ಲಿ ಮುಳುಗಿಹೋಗಿಬಿಡುತ್ತಿದ್ದೆ. ಅಚಾನಕ್ಕಾಗಿ ಮಾತಿಗಿಳಿದ ಈ ಮಹಾನುಬಾವರು ನನ್ನೆದೆಯಲ್ಲಿ ಕಾಲಗರ‍್ಬದಲ್ಲಿ ಹೂತುಹೋಗಿದ್ದ ಒಂದು ತಂತಿಯನ್ನು ಮೀಟಿದ್ದರು. ಅನುದ್ದೇಶಿತ ಸಂಬಾಶಣೆ ಎಂಬ ಮಾನವ ಸಹಜ ಕಲೆಗೆ ಮರುಜೀವ ನೀಡಿದ್ದರು. ಅಶ್ಟು ವರ‍್ಶಗಳ ನಂತರ ಪ್ರತಮ ಬಾರಿಗೆ, ಆ ಮರಕುಟಿಗನಂತೆ, ಯಾವುದೇ ಪ್ರತಿಬಂದವಿಲ್ಲದೆ ಸ್ವಚ್ಚಂದವಾಗಿ ಮಾತಿಗಿಳಿದೆನು.

“ಎತ್ತ ಕಡೆಗೆ ತಮ್ಮ ಪಯಣ?” ಗಡುಸಾದ ದನಿಯಲ್ಲಿ ಪ್ರಶ್ನಾರ‍್ತಕ ಚಿಹ್ನೆಯನ್ನಿಟ್ಟರು. “ಬೆಂಗಳೂರಿಗೆ.” ಎಂದಶ್ಟೆ ನುಡಿದೆ. “ಏನ್ರೀ ನಿಮ್ಮ ಬಾಯಿಯಲ್ಲಿ ಮುತ್ತನ್ನು ತುಂಬಿಸಿಟ್ಟುಕೊಂಡಿದ್ದೀರಾ? ಮಾತಾಡ್ರೀ. ಮಾತು ಮಾನವ ಕುಲದ ಬೂಶಣ.” ಎಂದು ಮನತುಂಬಿ ನಕ್ಕು ಬಿಟ್ಟರು.” ನಾನು ಮಂಗಳೂರಿಗೆ ಕಳೆದ 30 ವರ‍್ಶಗಳಿಂದ ವಾರಕ್ಕೆ 3 ದಿನ ಓಡಾಡುತ್ತಿದ್ದೇನೆ. ಬೆಂಗಳೂರು ಶರವೇಗದಲ್ಲಿ ಬದಲಾಗುತ್ತಿದ್ದರೂ ಇಲ್ಲಿನ ಜನ ಬದಲಾಗಲಿಲ್ಲ. ಆದರೆ ಕಳೆದ ಕೆಲವು ವರ‍್ಶಗಳಲ್ಲಿ ಇದು ಬದಲಾದ ಪರಿ ಅಚ್ಚರಿ ಮೂಡಿಸಿದೆ. ಬದಲಾವಣೆ ಜಗದ ನಿಯಮ ಅಲ್ವೆನ್ರಿ?” ನಾನು ಮೌನವಾಗಿ ಸಮ್ಮತಿಸಿದೆ.

“ನೀವು ಹೊರಗಡೆ ಅದೇನೋ ಗಮನ ಕೊಟ್ಟು ನೋಡುತ್ತಾ ಇದ್ದಿರಿ. ಅದೇನದು? ಸುಮ್ಮನೆ ಕುತೂಹಲ ಅಶ್ಟೇ. ಬೇಜಾರು ಮಾಡ್ಕೋಬೇಡಿ.”

“ಓ..ಅದಾ. ನಾನು ಅಲ್ಲಿ ಮರವೇರಿ ಕುಳಿತಿರುವ ಮರಕುಟಿಗ ಪಕ್ಶಿಯನ್ನು ನೋಡುತ್ತಿದ್ದೆ.” ಅಂದೆ

“ನೀವು ಆ ಮರಕುಟಿಗನಂತೆ ಈ ನಾಡಿನಲ್ಲಿ ಉಳಿದಿರುವ ಅಪರೂಪದ ಪ್ರಾಣಿ.” ಅಂದರು. ನನಗರ‍್ತವಾಗಲಿಲ್ಲ. ಬಸ್ಸು ನಿದಾನವಾಗಿ ಚಲಿಸತೊಡಗಿತು. ಆ ಪಕ್ಶಿಯನ್ನೊಮ್ಮೆ ಮರೆಯಾಗುವ ಮುನ್ನ ಕಣ್ತುಂಬಾ ನೋಡಿಕೊಂಡೆ.

“ಹೌದೇ? ಅದು ಹೇಗೆ ಹೇಳುತ್ತೀರಿ?”ಎಂದು ಕುತೂಹಲದಿಂದ ಕೇಳಿದೆ.

“ಈಗ ನೋಡಿ ಯಾರೂ ತಲೆ ಎತ್ತಿ ನೋಡುತ್ತಿಲ್ಲ. ಎಲ್ಲಾರೂ ಮೊಬೈಲಿನಲ್ಲಿ ಮಗ್ನರಾಗಿ ಹೋಗಿದ್ದಾರೆ. ಸುತ್ತಲಿನ ಪರಿವೆಯೇ ಇಲ್ಲಾ. ಇದು ಈಗಿನ ನವೀನ ಪ್ರಪಂಚ. ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ಮಾನವ ಸಂಬಂದಗಳು ವಿನಾಶದಂಚಿಗೆ ಸಾಗುತ್ತಿದೆ ಎಂದನಿಸುತ್ತಿದೆ. ನಾನು ಮುಂಚೆ ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಅದು ನಮ್ಮೆಲ್ಲರ ಪಯಣವಾಗಿರುತ್ತಿತ್ತು. ಆದರೆ ಈಗ 10-12 ಗಂಟೆಗಳ ಪಯಣ ಅತ್ಯಂತ ತ್ರಾಸದಾಯಕವೆನಿಸುತ್ತದೆ. ಒಂಟಿತನ, ಮೌನ ನನ್ನಂತ ಹಳೆ ಕಾಲದ ಮಂದಿಗೆ ಚಿತ್ರಹಿಂಸೆ ನೀಡುತ್ತಿದೆ. ಅಂತದ್ದರಲ್ಲಿ ನೀವು ನವಚೈತನ್ಯ ಮೂಡಿಸಿದಿರಿ. ಪ್ರಕ್ರುತಿಯಲ್ಲಿನ ನಿಮ್ಮ ಆಸಕ್ತಿ, ಎಲ್ಲವೂ ನಮ್ಮ ಯುವಕರಲ್ಲಿ ಕಳೆದು ಹೋಗಿಲ್ಲ ಎಂಬ ನಂಬಿಕೆ ನೀಡಿತು. ನಿಮ್ಮನ್ನು ಮಾತನಾಡಿಸುವ ಮನಸ್ಸಾಯಿತು. ತಮ್ಮ ಹೆಸರೇನು? ಯಾವ ಊರು?” ಎಂದು ಕೂತೂಹಲದಿಂದ ಕೇಳಿದರು.

“ನಾನು ನಿಮಗಿಂತ ವಯಸ್ಸಿನಲ್ಲಿ ತುಂಬಾನೇ ಚಿಕ್ಕವನು. ನಮ್ಮ ಹೆಸರು, ಊರು ಇಂತ ವಿಶಯಗಳು ಇಲ್ಲಿ ಅಪ್ರಸ್ತುತ ಎಂದು ತಮಗನಿಸುವುದಿಲ್ಲವೆ? ನಮ್ಮ ನಡುವಿನ ಸಂಬಾಶಣೆ ಅಶ್ಟೇ ಮುಕ್ಯ ಅಲ್ಲವೇನು?” ಎಂದು ಪಾಟಿ ಸವಾಲನ್ನು ಹಾಕಿದೆ.

” ಹೌದು ಸ್ವಾಮಿ! ತಂತ್ರಗ್ನಾನ ಮಾನವನ ಸ್ರುಶ್ಟಿ, ಅದರೆ ಈಗಿನ ಪರಿಸ್ತಿತಿ ನೋಡಿದರೆ, ಮಾನವ ತಂತ್ರಗ್ನಾನದ ಸ್ರುಶ್ಟಿಯೇನೋ ಎಂಬ ಸಂಶಯ ಬರದು, ಮಾನವರಿಗೆ ಮಾನವರ ಮೇಲೆ ನಂಬಿಕೆಯ ಕೊರತೆ. ಇದು ಈಗಿನ ಕಾಲದ ದೊಡ್ಡ ಪಿಡುಗು.” ಎಂದು ಜೋರಾಗಿ ಒಮ್ಮೆ ನಕ್ಕು ಬಿಟ್ಟರು.

ಅವರ ಮಾತಿನಲ್ಲಿ ಸತ್ಯಾಂಶ ಇರುವುದು ನನಗರಿವಿದ್ದರೂ ನಾನು ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.

“ಸಂಬಾಶಣೆ ಎಂಬುದು ಎರಡು ಜೀವಿಗಳ ನಡುವೆ ನಡೆಯುವ ಆತ್ಮೀಯ ಸಂವಹನ. ಇಲ್ಲಿ ಸೋತವರಾರೂ ಇಲ್ಲ, ಗೆದ್ದವರೂ ಇಲ್ಲ.” ಎಂದೆ.

“ನಿಜ. ಆದರೆ ಸಂಬಾಶಣೆಗೆ ಹಲವು ಮುಕ, ಮಜಲುಗಳಿವೆ. ಸಂದರ‍್ಬಕ್ಕೆ ತಕ್ಕಂತೆ ಅಕ್ಶರಗಳಿಗೆ ರೆಕ್ಕೆ ಪುಕ್ಕ ದೊರೆತು, ಮಾನವನ ತುಟಿಗಳ ನಡುವೆ ಹರದಾಡಿ, ಪದಗಳಾಗಿ, ಪದಮಾಲೆಗಳು ವಾಕ್ಯಗಳಾಗಿ, ವಾಕ್ಯಗಳು ಗದ್ಯ-ಪದ್ಯಗಳಾಗಿ ಮಾರ‍್ಪಾಡಾಗುತ್ತವೆ. ತದನಂತರ ಅವು ನಮ್ಮ ಮಾನಸದೊಳಗೆ ಇಳಿದು ನಮ್ಮನ್ನು ಔನ್ನತ್ಯದಿಂದ ಪತನ, ಪತನದಿಂದ ಔನ್ನತ್ಯದೆಡೆಗೆ ಕೊಂಡೊಯ್ಯಬಲ್ಲ ಅಪರಿಮಿತ ಶಕ್ತಿಯನ್ನು ಹೊಂದುತ್ತವೆ. ಪುಟ್ಟ ಗುಬ್ಬಿಯಿಂದ ಹಿಡಿದು, ರಣಹದ್ದುಗಳಾಗಿ ಮಾರ‍್ಪಾಡಾಗುವ ಸಾಮರ‍್ತ್ಯ ಹೊಂದಿವೆ. ಸಂಬಾಶಣೆ, ಪದಮಾಲೆ, ಪದಗಳ ಶಕ್ತಿಯನ್ನು ತಪ್ಪಾಗಿ ಅರ‍್ತೈಸಿಕೊಳ್ಳಬೇಡ; ಅವು ಇತಿಹಾಸಗಳ ದಿಕ್ಕನ್ನೇ ಬದಲಿಸಿವೆ.” ಅವರು ಗದ್ಗದಿತರಾದರು. ಅವರ ಈ ಮಾತಿಗೆ ಅವಕ್ಕಾಗುವ ಸರದಿ ನನ್ನದು. ನನ್ನ ಗಲಿಬಿಲಿ ಕಂಡು ಅವರು ಮನಸ್ಸುಪೂರ‍್ತಿ ನಕ್ಕು ಬಿಟ್ಟರು. ಮುಗುಳ್ನಗೆ ತಂಗಾಳಿಯೊಡನೆ ನನ್ನ ತುಟಿಗಳನ್ನು ಸವರಿ ಹೋಯಿತು.

“ಈ ಊರಿನ ನಕ್ಶೆ ಬದಲಿಸುವುದರಲ್ಲಿ ನನ್ನ ಪಾತ್ರವೂ ಕೂಡ ಇದೆ. ಇದರಿಂದ ನನ್ನ ಮನದಲ್ಲಿ ವಿಶಾದವಿದೆ. ಅಂದು ನಾನು ಹಣ ಸಂಪಾದನೆ ಮಾಡುವ ಹುಚ್ಚು ನಾಗಾಲೋಟದಲ್ಲಿ ನನ್ನಿಂದಾಗುತ್ತಿದ್ದ ಅನ್ಯಾಯದ ಅರಿವೇ ಆಗಲಿಲ್ಲ. ನಾವುಗಳು ಅದೆಶ್ಟು ಸ್ವಾರ‍್ತಿಗಳಲ್ಲವೇನು? ಅಂದು ನನ್ನ ಅಗತ್ಯಗಳನ್ನು ಪೂರೈಸಬೇಕಿತ್ತು. ಹಾಗಾಗಿ ನಾನು ಕಾಂಟ್ರ್ಯಾಕ್ಟ್ ತಗೊಂಡು ನಾಡನ್ನು ಸಿಮೆಂಟ್ ಕಾಡನ್ನಾಗಿ ಸ್ರುಶ್ಟಿಸುವ ಕೆಲಸದಲ್ಲಿ ಬಾಗೀದಾರನಾದೆ. ನನ್ನ ಬಾವನವರು ದೊಡ್ಡ ಬಿಲ್ಡರ್. ಹಾಗಾಗಿ ನನಗೆ ಎಲ್ಲಾ ಕೆಲಸಗಳು ಸುಲಬವಾಗಿ ದೊರೆಯುತಿತ್ತು. ದುಡಿದೆ, ಹಣದ ರಾಶಿ ಹಾಕಿದೆ. ಆದರೆ ಯಾರಿಗೋಸ್ಕರ ಮಾಡಿದೆನೋ ಅವರು ನನ್ನ ಅರಮನೆಯನ್ನು ತೊರೆದು ಹಕ್ಕಿಯಂತೆ ತಮ್ಮ ಸ್ವಂತ ಗೂಡನ್ನು ಕಟ್ಟಲು ಹಾರಿ ಹೋದರು. ನಾನು ಮಂಗಳೂರು, ಹಾಸನ ಹಾಗೂ ಬೆಂಗಳೂರಿನಲ್ಲಿ ಕಟ್ಟಿದ ಬವ್ಯ ಬಂಗಲೆಗಳಲ್ಲಿ ಇಂದು ಬಾಡಿಗೆದಾರರು ವಾಸಿಸುತ್ತಿದ್ದಾರೆ. ನನ್ನ ಮಕ್ಕಳಿಗೆ ಅದರಲ್ಲಿರುವ ಯೋಗವಿಲ್ಲ. ನನ್ನ ಅರ‍್ದಾಂಗಿ ಕಳದ ವರ‍್ಶವಶ್ಟೆ ಪರಲೋಕದ ಪಾಲಾದಳು. ಇಂದು ನನ್ನ ಕರ‍್ಮವಶ್ಟೆ ನನ್ನ ಸಂಗಾತಿ. ನಾವು ನಮ್ಮ ಜೀವನವನ್ನು ಪ್ರೀತಿಸಬೇಕು. ನಾನು ನನ್ನ ಬಾಳನ್ನು ಸಂಪೂರ‍್ಣವಾಗಿ ಬಾಳಿದ್ದೆ ಅಂತ ಅಂದುಕೊಂಡಿದ್ದೆ. ಅದರೆ ಜೀವನದ ಅರ‍್ತ ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ಅಂದು ನನಗೆ ಕುಶಿ ಕೊಡುತ್ತಿದ್ದ ವಿಶಯಗಳು ಇಂದು ಗೌಣವಾಗಿ ತೋರುತ್ತದೆ. ನನಗೆ ಅರಿವಾದ ಸತ್ಯವನ್ನು ಕೇಳಲು ಆಸಕ್ತಿಯುಳ್ಳವರಿಗೆ ಮಾತ್ರ ತಿಳಿಸುವೆ. ಆದರೆ ಕೇಳುಗರಿಗೆ, ನನಗೆ ಬೇಕಾದುದೆಲ್ಲಾ ಪಡೆದುಕೊಂಡ ಮೇಲೆ ಇಂದೇಕೆ ನಾನು ಸಂತನಂತೆ ಮಾತನ್ನಾಡುತ್ತಿರುವೆ ಅಂತ ಅನಿಸಬಹುದು. ಅದು ಕೂಡ ನಿಜವೇ. ಆದರೆ ಸತ್ಯದ ಪರಿಬಾಶೆ ಕಾಲಕ್ಕೆ ತಕ್ಕಂತೆ  ಬದಲಾಗುತ್ತದೆ” ಎಂದು ದೀರ‍್ಗ ನಿಟ್ಟುಸಿರು ಬಿಟ್ಟರು.

“ಎಂದಾದರೂ ನಿನಗೆ ಏನಾದರೂ ಸಹಾಯ ಬೇಕಾದರೆ ನನ್ನ ವಿಸಿಟಿಂಗ್ ಕಾರ‍್ಡು ಇಟ್ಟುಕೋ.” ಎಂದು ಒತ್ತಾಯಪೂರ‍್ವಕವಾಗಿ ಕೈಗಿತ್ತರು.”ನೀನೇನ್ ಮಾಡುತ್ತಿರುವೆ? ಮದುವೇ ಆಯಿತೆ?” ಹೀಗೆ ಅವರ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವಶ್ಟರಲ್ಲಿ ಬೇಸತ್ತು ಹೋಗಿದ್ದೆ. ಆ ಮರಕುಟಿಗ ನನ್ನ ತಲೆಗೆ ನೇರವಾಗಿ ಕುಟ್ಟುತ್ತಿರುವಂತೆ ಬಾಸವಾಗುತ್ತಿತ್ತು. ಹಿರಿಯರೆಂಬ ಗೌರವ ಒಂದೇ ನಾನು ಮೌನಿಯಾಗಿರಲು ಕಾರಣವಾಗಿತ್ತು. ಅವರ ಜೊತೆಗಿನ ಸಂಬಾಶಣೆಯಲ್ಲಿ ಒಂದೆಂತೂ ಸ್ಪಶ್ಟವಾಗಿ ಗೋಚರವಾಗುತಿತ್ತು, ಒಂಟಿತನ ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಕಾಡಿಯೇ ಕಾಡುತ್ತದೆ. ಅಶ್ಟೈಶ್ವರ‍್ಯವಿದ್ದರೂ ಅದು ಅವರ ಒಂಟಿತನವನ್ನು ಅಳಿಸಲು ಶಕ್ತವಾಗಿರಲಿಲ್ಲ. ಕೊಂಚ ಸಮಯ ನಮ್ಮಿಬ್ಬರ ನಡುವೆ ಮೌನ ಆವರಿಸಿತು.

ತದನಂತರ “ಆ ಮರಕುಟಿಗ ಕೂಡ ನನ್ನ ಮಕ್ಕಳೆಂತೆ ತನ್ನ ತಂದೆ ತಾಯಿಯರನ್ನು ತೊರೆದು ಬಂದಿರಬಹುದಲ್ಲಾ?” ಎಂದರು. ಅವರ ವ್ಯಾಕ್ಯಾನ ಕೇಳಿ  ನಾನು ದಂಗಾದೆ. ನಮ್ಮಿಬ್ಬರ ದ್ರುಶ್ಟಿಕೋನದಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ನೋಡುವ ವಸ್ತು ಒಂದೇ ಆಗಿದ್ದರೂ ದ್ರುಶ್ಟಿಕೋನ ಬಿನ್ನವಾಗಿತ್ತು. ಬಸ್ಸು ಸಕಲೇಶಪುರ ದಾಟಿತ್ತು. ಗಂಟೆ ಅದಾಗಲೇ 1 ಆಗಿತ್ತು. ನಿರ‍್ವಾಹಕರು”ಊಟಕ್ಕೆ 15 ನಿಮಿಶ ಇದೆ. ಇನ್ನು 4 ಗಂಟೆಗೆ ಚಹಾ ಕುಡಿಯೋದಕ್ಕೆ ನಿಲ್ಲಿಸೋದು.” ಎಂದಾಗ ಎಲ್ಲರೂ ಲಗುಬಗನೆ ಇಳಿದು ಊಟ ಮುಗಿಸಿದೆವು.

ನಂತರವೇ ಗಮನಕ್ಕೆ ಬಂದದ್ದು, ಹೊಟೇಲು ಇದ್ದದ್ದು ಮಲೆನಾಡಿನ ಒಂದು ರಮ್ಯ ತಾಣದ ನಡುವಿನಲ್ಲಿ. ಅ ವಿಹಂಗಮ ನೋಟದ ಸೊಬಗನ್ನು ನೋಡುತ್ತಾ ನಿಂತಿದ್ದ ನನಗೆ ಮತ್ತೆ ಕೇಳಿಸಿದ್ದು ಟಕ..ಟಕ..ಟಕ.. ಎಂಬ ನಾದ. ಆದರೆ ಈಗ ಆ ಮ್ರುದಂಗ ವಾದನದಲ್ಲಿ ಮೊದಲಿನ ಮಾದುರ‍್ಯ ಮಾಯವಾಗಿತ್ತು. ಆ ಮರಕುಟಿಗ ಸಮೀಪದಲ್ಲೆಲ್ಲೋ ಇದೆ. ಆ ನಾದ ಬಂದ ಹಾದಿಯಲ್ಲಿ ಈ ನಿಸರ‍್ಗದ ಮ್ರುದಂಗವಾದಕನನ್ನು ಹುಡುಕುತ್ತಾ ಹೊರಟೆ. ಸ್ವಲ್ಪ ದೊರ ಸಾಗಿದ ನಂತರ ಹರಿದ ಚಡ್ಡಿಯನ್ನು ದರಿಸಿದ ಮಕ್ಕಳು ಅದನ್ನು ಪಂಜರದೊಳಗೆ ಬಂದಿಸಿಟ್ಟಿದ್ದು ಕಾಣಿಸಿತು. ನಾನು 1000 ರೂಪಾಯಿಯನ್ನು ನೀಡಿ ಅದನ್ನು ಕರೀದಿಸಿದೆ. ಪ್ರಾಯಶಹ ಇಶ್ಟೊಂದು ದುಡ್ಡನ್ನು ತಮ್ಮ ಜೀವಮಾನದಲ್ಲಿ ಕಂಡಿರದ ಆ ಕಂದಮ್ಮಗಳು, ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ವಿಚಾರಿಸಿದಾಗ, “ಹೊಟ್ಟೆ ಪಾಡು” ಎಂದು ಸನ್ನೆ ಮಾಡಿದವು.

ಈಗ ಆ ಮ್ರುದಂಗವಾದಕ ನನಗೆ ಸ್ಪಶ್ಟವಾಗಿ ಕಾಣಿಸುತಿತ್ತು. ಅದೇ ಕಪ್ಪಾದ ದೇಹ, ಚೂಪಾದ ಕೊಕ್ಕು, ಹೊಳೆಯುವ ಕಂಗಳು, ಹಾಗೂ ಕೆಂಪಾದ ಜುಟ್ಟು. ಒಂದು ಕ್ಶಣ ನಮ್ಮ ಕಣ್ಣುಗಳು ಸಂದಿಸಿದವು. ಅದು ನನ್ನ ಬಿಂಬವೋ, ಇಲ್ಲಾ ನಾನದರ ಬಿಂಬವೋ? ತಿಳಿಯದಾದೆ. ಅದರ ಪಂಜರವನ್ನು ತೆರೆದು ಹಾರಲು ಬಿಟ್ಟೆ. ಅದು ನನ್ನನ್ನೂಮ್ಮೆ ದಿಟ್ಟಿಸಿ ನೋಡಿ, ರೆಕ್ಕೆ ಅಗಲಿಸಿ, ಆಗಸದತ್ತ ಹಾರಿ, ಒಂದು ವಿಶಾಲವಾದ ಮರದ ಕೊಂಬೆಯಲ್ಲಿ ಕುಳಿತು ಮತ್ತೆ ನಿಶ್ಚಿಂತೆಯಿಂದ ಮ್ರುದಂಗವಾದನದಲ್ಲಿ ಮುಳುಗಿ ಹೋಯಿತು. ಈ ಅನಿರೀಕ್ಶಿತ ವಿದ್ಯಮಾನದಿಂದ ಅಚ್ಚರಿಗೊಂಡ ಕಂದಮ್ಮಗಳು ನನ್ನೆಡೆಗೆ ಪ್ರಶ್ನಾರ‍್ತಕ ದ್ರುಶ್ಟಿಯಿಂದ ನೋಡಿದಾಗ,”ಎಲ್ಲಕ್ಕಿಂತ ಪ್ರಿಯವಾದುದು ಸ್ವಾತಂತ್ರ್ಯ-ನಿಮಗೆ ಬಡತನದಿಂದ, ಈ ಹಕ್ಕಿಗೆ ನಿಮ್ಮ ಪಂಜರದಿಂದ, ನನಗೆ ನನ್ನಿಂದ.” ಎಂದೆ. ನಿರ‍್ವಾಹಕರು ಜೋರಾಗಿ ಸೀಟಿ ಬಾರಿಸಿದಾಗಲೇ ನಾನು ಬೂಮಿಗೆ ಮರಳಿ ಬಂದದ್ದು. ಓಡಿ ಹೋಗಿ ಬಸ್ಸನ್ನೇರಿ ಕುಳಿತೆ ಮೌನವಾಗಿ.

“ನೀನೇಕೆ ಹಾಗೆ ಮಾಡಿದೆ?” ಆ ಮಹಾಶಯರು ಕೇಳಿದರು.

“ನೀವು ನಿಮ್ಮ ಬಂಗಾರದ ಪಂಜರದಲ್ಲಿ ಇರುವ ಹಕ್ಕಿಗೆ, ಅದರಲ್ಲಿರಲು ಒಪ್ಪಿಗೆ ಇದೆಯಾ ಎಂದು ಎಂದಾದರೂ ಕೇಳಿದ್ದೀರಾ?”ಎಂದೆ. ಕೂಂಚ ಗಲಿಬಿಲಿಯಾದರೂ ಅವರ ತುಟಿಯಲ್ಲೊಂದು ಕಿರುನಗೆ ಮೂಡಿ, ಮೌನಕ್ಕೆ ಶರಣಾದರು. ಮರಕುಟಿಗನ ಮ್ರುದಂಗವಾದನ ಮಾತ್ರ ನನ್ನ ಹ್ರುದಯದಲ್ಲಿ ಮೊಳಗುತ್ತಾ ನನ್ನ ಮನಸ್ಸಿನೊಳಗಿರುವ ದ್ವಂದ್ವವನ್ನು ಅಳಿಸುತ್ತಾ ಸಾಗಿತ್ತು.

( ಚಿತ್ರ ಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. Poornima says:

    Wowww….well written… thumbaa chennagidhe

  2. Rajesh H says:

    ತುಂಬಾ ಧನ್ಯವಾದಗಳು. ಓದುಗುರು ಇದ್ದರೆ ಲೇಖಕರು

  3. Sumanth Kumbargere Nagraj says:

    A touching story. Made me wonder about the different thoughts people can have on the same woodpecker!

ಅನಿಸಿಕೆ ಬರೆಯಿರಿ:

%d bloggers like this: