ಆಶಾಡದ ನೆನಪುಗಳು
ಆಶಾಡ ತಿಂಗಳಲ್ಲಿ ಜೋರಾಗಿ ಬೀಸುವ ಕುಳಿರ‍್ಗಾಳಿಗೆ ಮೈನಡುಕ ಹತ್ತುತ್ತದೆ. ಇದರ ಜೊತೆಗೆ ಆಶಾಡದಲ್ಲಿ ಹುಯ್ಯುವ ಮಳೆಗೆ ನೆನೆದರಂತು ದೇಹವೆಲ್ಲ ತಕ ತಕ ಕುಣಿಯುತ್ತ, ಬೆಚ್ಚಗಿರಲು ಬಯಸುತ್ತದೆ. ಆಗ ಬಿಸಿ ಬಿಸಿ ಕಾಪಿ, ಚಹಾ ಹೀರಲು ಅವಕಾಶ ಸಿಕ್ಕರಂತು ಆಹಾ…ಸ್ವರ‍್ಗ ಸುಕ.
ಬಹುಶಹ ಮಲೆನಾಡಿನ ಆಶಾಡ ಮಾಸವನ್ನು ಎದುರಿಸಿದವರು ಗಟ್ಟಿಗರು, ಅವರು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಬದುಕುತ್ತಾರೆ ಎಂದರೆ ಅತಿಶಯವಲ್ಲ. ಮಲೆನಾಡಿನ ಆಶಾಡ ಮಾಸ ಅನುಬವಿಸಿದವರಿಗೆ ಮಾತ್ರ ಅದರ ತೀವ್ರತೆ ಗೊತ್ತಾಗುತ್ತದೆ. ಒಂದೇ ಸಮನೆ ಬೀಸುವ ಗಾಳಿ, ಹುಯ್ಯುವ ಮಳೆ, ಎಲ್ಲೆಲ್ಲೂ ನೀರು.. ನೀರು..!! ಆದರೆ ನಾಲ್ಕು ದಶಕಗಳ ಹಿಂದಿನ ಆಶಾಡದ ತೀವ್ರತೆ ಈಗ ಮಲೆನಾಡಿನಲ್ಲೂ ಉಳಿದಿಲ್ಲ ಬಿಡಿ. ಅಶ್ಟರಮಟ್ಟಿಗೆ ನಾವು ಮನುಜರು ನಮ್ಮ ಸ್ವಾರ‍್ತಕ್ಕೆ ಕಾಡು ಕಡಿದು ಕಾಪಿ ತೋಟ, ರಬ್ಬರ್ ತೋಟ, ಅಡಿಕೆ ತೋಟ, ಮೋಜು ಮಸ್ತಿಗೆ ರೆಸಾರ‍್ಟ್ ಗಳನ್ನು ಮಾಡಿ ಕಾಡು, ಮಲೆಗಳನ್ನು ಬೋಳುಗುಡ್ಡ ಮಾಡಿದ್ದೇವೆ. ಅದರ ಪರಿಣಾಮ ಕೇರಳ, ಕೊಡಗಿನಲ್ಲಿ ಕಳೆದ ವರ‍್ಶ ಏನಾಯ್ತು ಎಂದು ನೀವೆಲ್ಲ ಬಲ್ಲಿರಿ…?!
ಇರಲಿ, ಇಂದಿಗೆ 4೦-5೦ ವರುಶಗಳ ಹಿಂದಿನ ಮಲೆನಾಡಿನ ಆಶಾಡ ಮಾಸವನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ. ಮಲೆನಾಡು ಎಂದರೇನೆ ಕುಗ್ರಾಮಗಳ ಬೀಡು, ಅಲ್ಲೊಂದು ಇಲ್ಲೊಂದು ಮನೆ. ಅವು ಮಳೆಗಾಲ ಬಂದಾಗ ಒಂದಕ್ಕೊಂದು ಸಂಪರ‍್ಕ ಕಳೆದುಕೊಂಡು ಹಲವು ತಿಂಗಳುಗಳ ಕಾಲ ಒಂಟಿಯಾಗಿಬಿಡುತಿದ್ದವು. ಆಶಾಡ ಮಾಸದಲ್ಲಿ ರೈತ ಗದ್ದೆಯನ್ನು ಉಳುವಾಗ ಹುಯ್ಯುವ ಮಳೆಗೆ ಕಂಬಳಿಯನ್ನು ಮಡಿಕೆ ಮಾಡಿ ತಲೆಮೇಲಿಂದ ನೀಳವಾಗಿ ಬೆನ್ನಿನ ಮೇಲೆ ಹೊದ್ದು ತನ್ನ ಎತ್ತುಗಳನ್ನು ಹುರಿದುಂಬಿಸುವ ಸಲುವಾಗಿ ಓಹೋsss…ಹೋsss… ಹೈಯ್ಯ… ಹೈಯ್ಯ… ಎಂದು ಬಾರುಕೋಲು ಹಿಡಿದು ರಾಗವಾಗಿ ಹಾಡುತ್ತ ಬತ್ತದ ಗದ್ದೆ ಉಳುಮೆ ಮಾಡುತ್ತಿದ್ದುದೇ ಒಂದು ಚಂದ.
ಇನ್ನು ಹೆಂಗಳೆಯರೆಲ್ಲ ಗೊರಬು (ಮಳೆಯಿಂದ ರಕ್ಶಿಸಿಕೊಳ್ಳಲು ಬೆತ್ತದ ಮೇಲೆ ಮುತ್ತುಗದ ಎಲೆಯನ್ನು ಜೋಡಿಸಿ ತಯಾರಿಸಿದ ಬುಟ್ಟಿಯಾಕಾರದ ಸಾದನ) ಹೊದ್ದು ಹದ ಮಾಡಿದ ಗದ್ದೆಯಲ್ಲಿ ಬತ್ತದ ಸಸಿಯನ್ನು ನಾಟಿ ಮಾಡುತ್ತಾ, ನಾಟಿ ಮಾಡುವಾಗ ಆಯಾಸ ಗೊತ್ತಾಗದಿರಲೆಂದು ನಾಟಿಯ ಹಾಡನ್ನು ಒಂದಿಬ್ಬರು ಹಾಡುವುದು, ಅದಕ್ಕೆ ಉಳಿದವರು ದನಿಗೂಡಿಸುವುದು, ಇಂತಹ ಇಂಪಾದ ಗಾನ ಪ್ರಕ್ರುತಿಯ ಮಡಿಲಿಂದ ಹರಿದು ಬರುತಿದ್ದರೆ ಕೇಳುವ ನಮಗೆ ಮೈ ಮರೆಯುತ್ತಿದ್ದುದು ಸಹಜ. ವಿರಾಮದಲ್ಲಿ ಹಳ್ಳಿ ಮನೆಯ ಬೇಯಿಸಿದ ಅಕ್ಕಿ ಕಡುಬು, ಸಾರು, ಜೊತೆಗೆ ಹಾಲು ಹಾಕದ ಬಿಸಿ ಬಿಸಿ ಕಾಪಿ ಮೈಯಾಳುಗಳಿಗೆ ಸಮಾರಾದನೆಯಾಗುತ್ತಿತ್ತು. ಅದರ ಗಮಲು ನಿಮ್ಮನ್ನು ಬಾಯಿ ಸವರಿಕೊಳ್ಳದಂತೆ ಮಾಡದೆ ಇರದು. ಪೂರ‍್ಣ ಗದ್ದೆ ನಾಟಿಯಾದ ಮೇಲೆ ಎತ್ತ ಕಣ್ಣು ಹಾಯಿಸಿದರೂ ಹಸಿರೋ ಹಸಿರು. ಪ್ರಕ್ರುತಿಯ ಆರಾದಕರು ಅಂತಾ ಹಸಿರಿನ ನೋಟದಿಂದ ಕಣ್ಣು ಕೀಳುವುದೇ ಇಲ್ಲ.
ರೈತ ಬರ‍್ರನೆ ಬೀಸುವ ಆಶಾಡದ ಗಾಳಿಗೆ ಮೈಯೊಡ್ಡಿ ಮಳೆಯಲ್ಲಿ ನೆಂದು ಗದ್ದೆ ಕೆಲಸ ಮಾಡುತ್ತಿರುವಾಗ ಆತ “ಆಶಾಡ ಗಾಳಿ ಬೀಸಿ ಬೀಸಿ ಹೊಡೆವಾಗ ಹೇಸಿ ನನ್ನ ಜನ್ಮ ಹೆಣ್ಣಾಗಬಾರದಿತ್ತೆ” ಎಂಬ ಜನಪದದ ಸಾಲನ್ನು ಗುನುಗುತ್ತಾನೆ. ಕಾರಣ ಆಶಾಡ ಮಾಸದ ಕುಳಿರ‍್ಗಾಳಿ ನಡುಕ ಹುಟ್ಟಿಸುವುದರಿಂದ ಮಹಿಳೆಯರು ಕಟ್ಟಿಗೆ ಒಲೆ ಮುಂದೆ ಅಡುಗೆ ಮಾಡುತ್ತಾ ಬೆಚ್ಚಗಿರುತ್ತಾರೆ. ಚಳಿಗೆ ದೇಹ ಬೆಚ್ಚಗಿರಲು ಬಯಸುವುದು ಸಹಜ. ಹಾಗಾಗಿ ರೈತ ತಾನು ಹೆಣ್ಣಾಗಿ ಹುಟ್ಟಿದ್ದಿದ್ದರೆ ಒಲೆ ಮುಂದೆ ಬೆಚ್ಚಗೆ ಇರಬಹುದಿತ್ತು ಎಂಬ ಬಯಕೆ ವ್ಯಕ್ತಪಡಿಸುತ್ತಾನೆ.
ಆಶಾಡ ಮಾಸದಲ್ಲಿ ಹಲಸಿನ ಹಣ್ಣಿನ ಗಮಲು ಮಲೆನಾಡಿನ ಎಲ್ಲೆಡೆ ಪಸರಿಸಿರುತ್ತದೆ. ಹಲಸಿನ ತೊಳೆ, ಹಲಸಿನ ವಿವಿದ ಕಾದ್ಯಗಳು ಆಶಾಡದ ವಿಶೇಶ ತಿನಿಸುಗಳು, ಸುಟ್ಟ ಹಲಸಿನ ಬೀಜ, ಬೇಯಿಸಿದ ಹಲಸಿನ ಬೀಜ – ಆಹಾ, ತಿನ್ನುವ ಅದರ ಮಜಾನೇ ಬೇರೆ. ಬಸಲೆ(ಳೆ) ಸೊಪ್ಪಿನ ಸಾರು, ಕೆಸುವಿನ ಪತ್ರೊಡೆ. ಅರಿಶಿಣ ಎಲೆಯ ಕಡಬು ಇವೆಲ್ಲ ಮಲೆನಾಡಿನ ಆಶಾಡದ ವಿಶೇಶ.
ಕಾಡು ನಾಶದಿಂದ ಈಗ ಆಶಾಡದ ತೀವ್ರತೆ ಕಮ್ಮಿಯಾಗಿದೆ. ಆದರೂ, ಆಶಾಡಕ್ಕೆ ಆಶಾಡನೇ ಸಾಟಿ. ಆಶಾಡದ ಚಳಿ-ಮಳೆಯನ್ನು ಸಹಿಸಿಕೊಳ್ಳುವುದೂ ಒಂದು ವಿಶೇಶ ಅನುಬವವೇ ಸೈ!
( ಚಿತ್ರಸೆಲೆ : kannadadunia.com )
ಸೂಪರ್