ಕಾಣದ ಕಡಲು
– ವೆಂಕಟೇಶ ಚಾಗಿ.
ಬೇಸಿಗೆ ರಜೆ ಕಳೆದು ಶೈಕ್ಶಣಿಕ ವರ‍್ಶ ಪ್ರಾರಂಬವಾಗಿತ್ತು. ಶಾಲೆಯ ಮುಕ್ಯ ಗುರುಗಳು ಎಲ್ಲ ಶಿಕ್ಶಕರಿಗೂ ತರಗತಿ ಹಾಗೂ ವಿಶಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು ಸಲಹೆ ನೀಡಿದರು. ನನ್ನ ಪಾಲಿಗೆ ಬಂದದ್ದು ನಲಿ-ಕಲಿ ತರಗತಿ. ಅದರಂತೆ ತರಗತಿಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಶ್ರದ್ದೆಯಿಂದ ಕೈಗೊಂಡು, ತರಗತಿಯನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸಿದೆ. ಶಾಲೆ ಪ್ರಾರಂಬವಾಗುತ್ತಿದ್ದಂತೆಯೇ ಪ್ರತಿ ದಿನ ಮಕ್ಕಳು ಹಾಜರಾಗತೊಡಗಿದರು. ನನ್ನ ತರಗತಿ ಸುಗಮವಾಗಿ ನಡೆಯತೊಡಗಿತು.
ಆ ಒಂದು ದಿನ ತರಗತಿಗೆ ಬಂದಾಗ ಎಲ್ಲಾ ಮಕ್ಕಳು ತಮ್ಮ ತಮ್ಮ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಒಬ್ಬ ವಿದ್ಯಾರ‍್ತಿ ಮಾತ್ರ ತನ್ನಶ್ಟಕ್ಕೆ ತಾನೇ ಮಾತನಾಡುತ್ತಾ ಕುಳಿತಿದ್ದ. “ಯಾಕಪ್ಪಾ ಅಲ್ಲಿ ಕುಳಿತಿದ್ದಿಯಾ? ಬಾ, ನಿನ್ನ ಸ್ನೇಹಿತರೊಂದಿಗೆ ಕುಳಿತುಕೊ” ಎಂದು ಮಾತನಾಡಿಸಿದೆ. ಮಕ್ಕಳೆಲ್ಲಾ “ಸಾರ್ , ಅವನಿಗೆ ಕಣ್ಣು ಕಾಣಲ್ಲ ಸರ್. ದಿನಾಲೂ ಅವನು ಅದೇ ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ.” ಎಂದರು. ಮತ್ತೆ ಮುಂದುವರೆಸಿ “ಅವನಿಗೇನೂ ಬರಲ್ಲ ಸರ್ , ಅವ್ನು ತುಂಬಾ ದಡ್ಡ ಸರ್. ಆದರೆ ಚೆನ್ನಾಗಿ ಹಾಡು ಹೇಳ್ತಾನೆ” ಎಂದರು. ಮೂಲೆಯಲ್ಲಿ ಕುಳಿತ ಹುಡುಗನನ್ನು ನಯವಾಗಿ ಮಾತನಾಡಿಸಿದೆ. ಅವನನ್ನು ಮಕ್ಕಳ ಮದ್ಯ ಕೈ ಹಿಡಿದು ಕರೆತಂದು ನಿಲ್ಲಿಸಿ, ನಿನ್ನ ಹೆಸರು ಏನಪ್ಪಾ ಎಂದೆ. ಅದಕ್ಕವನು “ಸರ್, ನನ್ನ ಹೆಸರು ನಾಗರಾಜ ಸರ‍್” ಎಂದ. ಹಾಗೇಯೇ ಅವನ ಕುಟುಂಬದ ಬಗ್ಗೆ ವಿಚಾರಿಸಿದಾಗ, ನಿರರ‍್ಗಳವಾಗಿ ನಾನು ಕೇಳುವ ಪ್ರಶ್ನೆಗಳಿಗೆ ಪಟ್ ಪಟ್ ಎಂದು ಉತ್ತರಿಸಿದ. ಹಾಗೆಯೇ ಕನ್ನಡ ಇಂಗ್ಲಿಶ್ ಮೂಲಾಕ್ಶರಗಳನ್ನು, ವಾರಗಳನ್ನು, ಮಗ್ಗಿಗಳನ್ನು ಸರಾಗವಾಗಿ ಹೇಳಿದ. “ನೀನು ಹಾಡು ಚೆನ್ನಾಗಿ ಹೇಳ್ತಿಯಂತಲ್ಲೋ” ಎಂದಾಗ ಒಂದು ಜನಪದ ಗೀತೆಯನ್ನೂ ಹೇಳಿದ. ಅವನಲ್ಲಿರುವ ಉತ್ಸಾಹ ಕಂಡು ಮೂಕವಿಸ್ಮಿತನಾದೆ. “ಗುಂಪಿನಲ್ಲಿ ಯಾಕೆ ಕುಳಿತುಕೊಳ್ಳಲ್ಲ ನೀನು?” ಎಂದು ಕೇಳಿದಾಗ “ಸಾರ್, ನನ್ನ ದೂಡ್ತಾರೆ ಸರ್, ಏನೇನೋ ಮಾತಾಡ್ತಾರೆ. ಅದ್ಕೆ ನಾನು ಇಲ್ಲಿ ಕೂತಿರ‍್ತೀನಿ ಸರ್” ಎಂದ. ಅವನ ಮನಸ್ತಿತಿಯನ್ನು ಚೆನ್ನಾಗಿ ಅರ‍್ತ ಮಾಡಿಕೊಂಡೆ. ಎರಡು ಕಣ್ಣುಗಳು ಇಲ್ಲದಿದ್ದರೂ, ಕಿವಿಗಳು ಚೆನ್ನಾಗಿ ಕೇಳುತ್ತಿದ್ದವು. ಅವನ ಗ್ರಹಣ ಶಕ್ತಿ ಎಶ್ಟಿತ್ತೆಂದರೆ ಒಂಡೆರಡು ಬಾರಿ ಹೇಳಿದ ಶಬ್ದಗಳನ್ನು ತಕ್ಶಣ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಆದರೆ ಇತರೆ ವಿದ್ಯಾರ‍್ತಿಗಳೊಂದಿಗೆ ಬೆರೆಯುವುದು ಅವನಿಗೆ ಕಶ್ಟವೆನಿಸುತ್ತಿತ್ತು. ಹಿಂದೆ ಆ ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಶಿಕ್ಶಕರ ಬಳಿ ಆ ಮಗುವಿನ ಬಗ್ಗೆ ಚರ‍್ಚಿಸಿದೆ. “ಸರ್, ಅವರ ಮನೆಯಲ್ಲಿ ಬಡತನ. ತಂದೆ ಇಲ್ಲ ತಾಯಿ ಇದ್ದಾಳೆ. ಇವನನ್ನು ವಿಶೇಶ ಶಾಲೆಗೆ ಸೇರಿಸಲು ಹೇಳಿದೆವು. ಆದರೆ ತಾಯಿ ಒಪ್ಪಲಿಲ್ಲ. ಹಿಂದೆ ಈ ಕೆಲಸ ಮಾಡಿದಾಗ ಅವನು ತಾಯಿಯಿಂದ ದೂರ ಇರದೇ ಮತ್ತೆ ಮನೆಗೆ ಬಂದ. ಈಗ ನಮ್ಮಲ್ಲಿ ಇರುವವರೆಗೂ ಅವನಿಗೆ ಸಾದ್ಯವಾದಶ್ಟು ವಿದ್ಯೆ ನೀಡಬೇಕಶ್ಟೆ . ಅವನು ಕಲಿತಶ್ಟು ಕಲಿಯಲಿ. ಅನವ ಬಗ್ಗೆ ಜಾಸ್ತಿ ಗಮನ ಹರಿಸಬೇಡಿ” ಎಂದರು.
ಅವರ ಸಲಹೆ ನನಗೇಕೊ ಸರಿ ಎನಿಸಲಿಲ್ಲ. ಆದರೂ ಅವರು ಆ ವಿದ್ಯಾರ‍್ತಿಗಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ವಿಪಲರಾಗಿದ್ದರು. ಎಲ್ಲ ಮಕ್ಕಳಂತೆ ಅವನೂ ಕಲಿಯಲು ಶಾಲೆಗೆ ಬಂದಿದ್ದಾನೆ. ಅವನಲ್ಲಿರುವ ಪ್ರತಿಬೆಗೆ ಸೂಕ್ತ ಬೆಂಬಲ ನೀಡಬೇಕು ಎಂದೆನಿಸಿತು. ಪ್ರತಿದಿನ ತರಗತಿಯಲ್ಲಿ ಎಲ್ಲಾ ಮಕ್ಕಳೊಂದಿಗೆ ಅವನು ಬೆರೆಯುವಂತೆ ಸಂದರ‍್ಬಗಳನ್ನು ಸ್ರುಶ್ಟಿಸಿದೆ. ಎಲ್ಲ ಚಟುವಟಿಕೆಗಳಲ್ಲೂ ಅವನು ಪಾಲ್ಗೊಳ್ಳತೊಡಗಿದ. ಅವನ ಸ್ಮರಣ ಶಕ್ತಿಗೆ ತಕ್ಕಂತೆ ಕಲಿಕೆಯಲ್ಲಿ ಪ್ರಗತಿ ಸಾದಿಸಿ ಹಿರಿಯ ವಿದ್ಯಾರ‍್ತಿಗಳಿಗೂ ಪ್ರಶ್ನಿಸುವ ಸಾಮರ‍್ತ್ಯ ಅವನಲ್ಲಿ ಬೆಳೆಯಿತು. ಎಲ್ಲ ಮಕ್ಕಳ ದನಿ ಗುರುತಿಸುವಲ್ಲಿ ಎಶ್ಟು ಪರಿಣಿತನಾಗಿದ್ದನೆಂದರೆ, ಯಾರೇ ಮಾತನಾಡಿದರೂ ಅವರ ಹೆಸರನ್ನು ಹೇಳುತ್ತಿದ್ದ. ಲೆಕ್ಕಾಚಾರವನ್ನು ಮನದಲ್ಲೆ ಮಾಡಿ ಪೆನ್ನು ಪುಸ್ತಕ ಹಿಡಿದ ಮಕ್ಕಳಿಗಿಂತ ಮೊದಲೇ ಉತ್ತರ ಹೇಳುತ್ತಿದ್ದ. ಶಾಲೆ ಬಿಡುವ ಮೊದಲು “ಸರ್, ಹೋಮ್ ವರ‍್ಕ್ ಏನು ಸರ್ ?” ಎಂದು ಕೇಳುವ ಮೊದಲ ದನಿ ಅವನದಾಗಿತ್ತು. “ನೀನು ಹೇಗೋ ಹೋಂ ವರ‍್ಕ ಮಾಡ್ತಿಯಾ?” ಎಂದರೆ “ಸರ್, ನಾನು ಹೇಳ್ತಾ ಹೋಗ್ತೇನೆ, ನಮ್ಮ ತಾಯಿ ಬರೆಯುತ್ತಾರೆ ಸರ್. ನೀವು ನಂಗೆ ಜಾಸ್ತಿ ಹೋಂ ವರ‍್ಕ್ ಕೊಡಿ ಸರ್” ಎಂದಾಗ ಅವನ ಮಾತುಗಳು ಮನತಟ್ಟಿದವು. ಅವನಲ್ಲಿರುವ ಕಲಿಯುವ ಆಸಕ್ತಿ, ನಿರ‍್ಬಯ ಅವನ ಬಲವಾವಾಗಿತ್ತು. ದ್ರುಶ್ಟಿ ಇಲ್ಲದಿರುವುದು ಕೊರತೆ ಎನ್ನಿಸಲಿಲ್ಲ. ಸಬೆ ಸಮಾರಂಬಗಳಲ್ಲಿ, ಪ್ರತಿಬಾ ಕಾರಂಜಿ ಮುಂತಾದ ಸ್ಪರ‍್ದೆಗಳಲ್ಲಿ ಅವಕಾಶ ನೀಡಿದಾಗ, ಅವನಿಗೆ ಪ್ರಶಸ್ತಿ ಪಕ್ಕಾ ಇತ್ತು.
ಇಂತಹ ಅನೇಕ ಮಕ್ಕಳು ನಮ್ಮ ಶಾಲೆಗಳಲ್ಲಿ ಇದ್ದಾರೆ. ಅಂಗವಿಕಲತೆ ಮಕ್ಕಳ ಕಲಿಕೆಗೆ ಅಡ್ಡಿ ಆಗಬಾರದಶ್ಟೇ. ಅವಕಾಶಗಳನ್ನು ಅಂತಹ ಮಕ್ಕಳಿಗೆ ನೀಡಿದಾಗ ತಮ್ಮ ಪ್ರತಿಬೆಯನ್ನು ಜಗತ್ತಿಗೆ ತೋರ‍್ಪಡಿಸಲು ಸಾದ್ಯವಾಗುತ್ತದೆ ಅಲ್ಲವೇ? ಹಳ್ಳಿಗಾಡಿನ ಪ್ರದೇಶಗಳು, ಸ್ಲಂ ಗಳು, ಮನೆ ಪರಿಸರದ ಅನಾನುಕೂಲತೆಯಲ್ಲಿ ಬದುಕುವ ಇಂತಹ ಮಕ್ಕಳು ವಿಶೇಶ ಶಾಲೆಗಳಿಗೆ ಪ್ರವೇಶ ಹೊಂದಲು ಅನಿವಾರ‍್ಯ ಕಾರಣಗಳಿಂದ ಸಾದ್ಯವಾಗದೇ ಇರಬಹುದು. ಆದರೆ ಪಾಲಕರು, ಸ್ತಳೀಯ ಶಾಲೆಯ ಶಿಕ್ಶಕರ ಪ್ರೋತ್ಸಾಹ ಇಂತಹ ಮಕ್ಕಳ ಬದುಕಿನಲ್ಲಿ ಆಶಾಕಿರಣವನ್ನೇ ಮೂಡಿಸಬಹುದು.
(ಚಿತ್ರ ಸೆಲೆ: pxhere)
Both of you, inspiration