ಟಿಆರ್‌ಪಿ ಹಾಗೂ ಟಿವಿ ಚಾನೆಲ್‌ಗಳು

– ಕೆ.ವಿ.ಶಶಿದರ.

ಟಿವಿ ಹಾಗೂ ಟಿಆರ್‌ಪಿ

ಇತ್ತೀಚಿನ ದಿನಗಳಲ್ಲಿ ಕಾಸಗಿ ಟಿವಿ ವಾಹಿನಿಗಳು ಹಲವು ಬಗೆಯ ರಿಯಾಲಿಟಿ ಶೋಗಳನ್ನು ಹಮ್ಮಿಕೊಂಡಿರುವುದು ಸರಿಯಶ್ಟೆ. ಕನ್ನಡದ ಹಲವು ವಾಹಿನಿಗಳಲ್ಲಿ ಕನ್ನಡ ಕೋಗಿಲೆ, ಮಜಾ ಬಾರತ, ಸೂಪರ್ ಮಿನಿಟ್, ತಕದಿಮಿತ, ಡಾನ್ಸ್ ರಾಜ ಡಾನ್ಸ್, ಸರಿಗಮಪ, ಸೂಪರ್ ದಂಪತಿ, ಪ್ಯಾಟೆ ಹುಡ್ಗ ಹಳ್ಳಿಗ್ ಹೋದ, ಮುಂತಾದವುಗಳು ಇದಕ್ಕೆ ಕೆಲವು ಉದಾಹರಣೆ ಅಶ್ಟೆ. ಇನ್ನೂ ಮುಂದೆ ಹೋದಲ್ಲಿ ವಿಶ್ವದ ಬೇರೆ ಬೇರೆ ದೇಶದಲ್ಲಿನ ಜನಪ್ರಿಯ ಟಿವಿ ಶೋಗಳನ್ನು ತಮ್ಮ ಬಾಶೆಗೆ ಅಳವಡಿಸಿಕೊಂಡು, ತಮ್ಮ ಬಾಶೆಯ ಜನಪ್ರಿಯ ತಾರೆಗಳಿಂದ ಅದನ್ನು ನಡೆಸಿ ಜನಪ್ರಿಯವಾಗುತ್ತಿರುವುದೂ ಕಂಡುಬರುತ್ತಿದೆ. ಕನ್ನಡದ ಕೋಟ್ಯದಿಪತಿ, ಬಿಗ್ ಬಾಸ್ ಇವುಗಳು ಆ ವರ‍್ಗಕ್ಕೆ ಸೇರುತ್ತವೆ. ಇಂತಹ ಶೋಗಳ ಮೂಲ ನಿರ‍್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡು, ಪ್ರದರ‍್ಶಿಸಲು ಅನುಮತಿ ಪಡೆದು, ಪ್ರೇಕ್ಶಕರಿಗೆ ಉಣಬಡಿಸುತ್ತಿರುವುದನ್ನು ಪ್ರತಿ ವಾಹಿನಿಯಲ್ಲೂ ಕಾಣಬಹುದು.

ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಮಾತನಾಡುವಾಗ ‘ಟಿಆರ್‌ಪಿ’ ಪದದ ಬಳಕೆಯನ್ನು ಹೆಚ್ಚಾಗಿ ನೀವು ಕೇಳಿರಬಹುದು. ಈಗ ಹೇಳಿದ ಹಲವು ಕಾರ್ಯಕ್ರಮಗಳು ಹೆಚ್ಚಿನ ಟಿಆರ್‌ಪಿ ಹೊಂದಿವೆ ಎಂಬುದು ನಿಮಗೆ ತಿಳಿದಿರಬಹುದು. ಹಾಗಾದರೆ ಟಿಆರ್‌ಪಿ ಎಂದರೇನು? ಟಿಆರ್‌ಪಿಗೆ ಏಕಿಶ್ಟು ಹೆಚ್ಚುಗಾರಿಕೆ? ಇದನ್ನು ಕಂಡು ಹಿಡಿಯುವ ಬಗೆ ಹೇಗೆ? ಕಾಸಗಿ ಚಾನೆಲ್‍ಗಳಿಗೆ ಇದರಿಂದೇನು ಲಾಬ/ಪ್ರಯೋಜನ? ಇವೇ ನೂರೆಂಟು ಪ್ರಶ್ನೆ ಜನಸಾಮಾನ್ಯರನ್ನು ಕಾಡಿರುವುದು ಸುಳ್ಳಲ್ಲ.

ಟಿಆರ್‌ಪಿ ಅಂದರೆ ‘ಟೆಲಿವಿಶನ್ ರೇಟಿಂಗ್ ಪಾಯಿಂಟ್’. ಟೆಲಿವಿಶನ್‍ನಲ್ಲಿ, ಅದು ಸರ‍್ಕಾರಿ ಒಡೆತನದ ಅತವಾ ಕಾಸಗಿ ವಾಹಿನಿಯೇ ಆಗಿರಬಹುದು, ಪ್ರಸಾರವಾಗುತ್ತಿರುವ ಕಾರ‍್ಯಕ್ರಮದ ಜನಪ್ರಿಯತೆಯನ್ನು ಅಳೆಯುವ ಸಾದನ. ತನ್ಮೂಲಕ ವಾಹಿನಿಯ ಜನಪ್ರಿಯತೆಯ ಅಳತೆಗೋಲೂ ಸಹ. ಜನರ ಇಶ್ಟವಾದ ಕಾರ‍್ಯಕ್ರಮ ಯಾವುದು? ಅದಕ್ಕೆಶ್ಟು ಜನಪ್ರಿಯತೆ ಇದೆ? ಎಂಬುದರ ಸೂಚ್ಯಂಕ ಹಾಗೂ ಆ ವಾಹಿನಿಯ ಜನಪ್ರಿಯತೆಯ ದ್ಯೋತಕ ಕೂಡ ಹೌದು. ಟಿಆರ್‌ಪಿ ನಿರ‍್ಣಯಿಸುವ ಹಾಗೂ ಲೆಕ್ಕಾಚಾರದ ಉದ್ದೇಶಕ್ಕಾಗಿ ಅನುಸರಿಸುವ ದಾರಿ ಅಶ್ಟೇ ರೋಚಕ. ಹಲವು ಸಾವಿರ ವೀಕ್ಶಕರ ಮನೆಯ ಟೆಲಿವಿಶನ್ ಸೆಟ್ಟುಗಳಿಗೆ ಒಂದು ಸಾದನವನ್ನು ಜೋಡಣೆ ಮಾಡುವುದು ಮೊದಲ ಕೆಲಸ. ಇದಕ್ಕಾಗಿ ಟೆಲಿವಿಶನ್ ಮಾಲೀಕರು ಇರುವ ವಿವಿದ ಬೌಗೋಳಿಕ ಮತ್ತು ಜನಸಂಕ್ಯಾ ಕ್ಶೇತ್ರಗಳ ಬಗ್ಗೆ ತಿಳಿದುಕೊಂಡು, ಅವನ್ನು ಆಯ್ಕೆ ಮಾಡಿಕೊಂಡು ಬಳಿಕ ಸಾದನವನ್ನು ಅಳವಡಿಸಲಾಗುತ್ತದೆ. ಇದನ್ನು ಸ್ಯಾಂಪಲ್ ಆಗಿ ಪರಿಗಣಿಸಿ ಮುಂದಿನ ಲೆಕ್ಕಾಚಾರಕ್ಕೆ ಬಳಸಿಕೊಳ್ಳಲಾಗುತ್ತದೆ.

ಟೆಲಿವಿಶನ್ ಮಾಲೀಕರ ಮನೆಯಲ್ಲಿ ಅಳವಡಿಸಿರುವ ಈ ಸಾದನವೇ ‘ಪೀಪಲ್ಸ್ ಮೀಟರ‍್’. ಯಾವುದಾದರೊಂದು ನಿರ‍್ದಿಶ್ಟ ದಿನದಲ್ಲಿ ನೋಡುಗರು ಟೆಲಿವಿಶನ್ ನೋಡುವ ಸಮಯ, ಯಾವ ಯಾವ ವಾಹಿನಿ ಎಶ್ಟು ಹೊತ್ತು, ಯಾವ ಯಾವ ವಾಹಿನಿಯ ಕಾರ‍್ಯಕ್ರಮ ಎಶ್ಟು ಹೊತ್ತು, ಹೀಗೆ ಎಲ್ಲವನ್ನೂ ಅಮೂಲಾಗ್ರವಾಗಿ ದಾಕಲು ಮಾಡುವುದೇ ಈ ಮಾಪಕದ ಕೆಲಸ, ದಿನದ ಆದಾರದ ಮೇಲೆ ದಾಕಲಾದ ವಿವರವನ್ನು, ಲೆಕ್ಕಹಾಕಿ ಮೂವತ್ತು ದಿನದ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳುವ ಕೆಲಸ ಅದನ್ನು ಅಳವಡಿಸಿರುವ ಸಂಸ್ತೆಯದು. ಇದು ಆ ವಾಹಿನಿಯ ಜನಪ್ರಿಯತೆ ಮತ್ತು ಜನ ಮಾನಸದಲ್ಲಿ ಅದರ ಸ್ತಾನವನ್ನು ಸೂಚಿಸುತ್ತದೆ.

ಬಾರತದಲ್ಲಿ INTAM (ಇನ್‍ಟ್ಯಾಮ್-ಇಂಡಿಯನ್ ಟೆಲಿವಿಶನ್ ನೋಡುಗರ ಮಾಪನ) ಈ ಕೆಲಸ ಮಾಡುತ್ತಿರುವ ಸಂಸ್ತೆ. ಇನ್‍ಟ್ಯಾಮ್ ಟಿಆರ್‌ಪಿಯನ್ನು ಲೆಕ್ಕಹಾಕಲು ಎರಡು ವಿದಾನವನ್ನು ಅನುಸರಿಸುತ್ತದೆ.

ಮೊದಲನೆಯದು ಸಲದೆಣಿಕೆಯ (frequency) ಮೇಲ್ವಿಚಾರಣೆ : ಇದರಲ್ಲೂ ಸಹ ಪೀಪಲ್ಸ್ ಮೀಟರನ್ನು ಮನೆ ಮನೆಗಳಲ್ಲಿ ಸ್ತಾಪಿಸಲಾಗುತ್ತದೆ. ಈ ಮಾಪಕ ಮನೆಯ ಕುಟುಂಬ ಸದಸ್ಯರು ನೋಡುವ ವಾಹಿನಿಗಳ ಬಗ್ಗೆ ಎಲ್ಲಾ ದತ್ತಾಂಶಗಳನ್ನು ನಿರಂತರವಾಗಿ ದಾಕಲಿಸುತ್ತದೆ. ನಿಮಗಿದು ತಿಳಿದಿರಲಿ: “ಪೀಪಲ್ಸ್ ಮೀಟರ‍್” ವಿದೇಶದಿಂದ ಆಮದು ಮಾಡಿಕೊಂಡಿರುವ ದುಬಾರಿ ಸಾದನ. ಇದು ವಾಹಿನಿಗಳ ಸಲದೆಣಿಕೆಯನ್ನು ಗಮನಿಸುತ್ತದೆ, ನಂತರ ಅವಶ್ಯಕತೆ ಕಂಡು ಬಂದಾಗ ಡೀಕೋಡ್‌ ಮಾಡುತ್ತೆ (Decode). ಇದರ ಆದಾರದ ಮೇಲೆ ರಾಶ್ಟ್ರೀಯ ದತ್ತಾಂಶವನ್ನು ಸಂಬಂದಿಸಿದ ಸಂಸ್ತೆ ಸಿದ್ದ ಪಡಿಸುತ್ತದೆ. ಇದರ ತಂತ್ರಗಾರಿಕೆಯಲ್ಲಿ ಒಂದು ಕೊರತೆಯಿದೆ. ಅದು ಕೇಬಲ್ ಆಪರೇಟರ್‌ಗಳಿಗೆ ಸಂಬಂದಿಸಿದ್ದು. ಮನೆಗಳಿಗೆ ಸಂಕೇತಗಳನ್ನು ರವಾನಿಸುವ ಮುನ್ನ ವಿವಿದ ವಾಹಿನಿಗಳ ಸಲದೆಣಿಕೆಗಳನ್ನು ಆಗಾಗ್ಗೆ ಬದಲಾಯಿಸುತ್ತಾರೆ. ಇದರ ಹಿಂದಿರುವ ಹುನ್ನಾರ ಬಹಳ ಸಂಕೀರ‍್ಣದ್ದು. ಇಡೀ ಬಾರತದಲ್ಲಿ ಡೌನ್ ಲಿಂಕಿಂಗ್ ಮಾಡುವ ಸಲದೆಣಿಕೆ ಒಂದೇ ಆಗಿದ್ದರೂ, ನಿರ‍್ದಿಶ್ಟ ಸಲದೆಣಿಕೆಯ ಪ್ರಕಾರ ವಾಹಿನಿಗಳನ್ನು ಓದಿದಲ್ಲಿ ದಾರಿ ತಪ್ಪುವ ಸಾದ್ಯತೆ ಹೆಚ್ಚು.

ಎರಡನೆಯ ವಿದಾನದ ತಂತ್ರವು ಹೆಚ್ಚು ವಿಶ್ವಾಸಾರ‍್ಹ. ಇದು ಬಾರತಕ್ಕೆ ಹೊಸದು. ಇದರಲ್ಲಿ ಪಿಕ್ಚರ್ ಮ್ಯಾಪಿಂಗ್ ತಂತ್ರವನ್ನು ಬಳಸಲಾಗಿದೆ. ಈ ತಂತ್ರದಲ್ಲಿ ‘ಪೀಪಲ್ ಮೀಟರ‍್’ ಒಂದು ನಿರ‍್ದಿಶ್ಟ ಟೆಲಿವಿಶನ್‍ನಲ್ಲಿ ನೋಡಲಾಗುವ ಚಿತ್ರದ ಒಂದೊಂದು ಸಣ್ಣ ಬಾಗವನ್ನೂ ನಿರಂತರವಾಗಿ ದಾಕಲಿಸುತ್ತಾ ಹೋಗುತ್ತದೆ. ಇದರೊಡನೆ ಏಜೆಂಟ್ ಸಂಸ್ತೆಯೂ ಸಹ ವಾಹಿನಿಯ ಅಂಕಿಅಂಶಗಳ ಮಾಹಿತಿಯನ್ನು ದಾಕಲಿಸುತ್ತದೆ. ನಂತರ ಸ್ಯಾಂಪಲ್ ಮನೆಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು, ಮುಕ್ಯ ಅಂಕಿ ಅಂಶಗಳ ನಿದಿಯೊಂದಿಗೆ ಹೋಲಿಕೆ ಮಾಡಿ, ರಾಶ್ಟ್ರೀಯ ರೇಟಿಂಗ್ ನಿಗದಿಪಡಿಸಲಾಗುತ್ತದೆ. ಎರಡನೆಯ ವಿದಾನ ಕೊಂಚ ತೊಡಕಿನಿಂದ ಕೂಡಿದ್ದರೂ ಹೆಚ್ಚು ನಂಬಿಕೆಗೆ ಯೋಗ್ಯವಾದ ಹಿನ್ನಲೆಯಲ್ಲಿ ಎಲ್ಲಾ ವಾಹಿನಿಗಳವರೂ ತಾವು ನಡೆಸುವ ಪ್ರತಿ ಕಾರ‍್ಯಕ್ರಮದ ರೇಟಿಂಗ್‍ಗಾಗಿ ಇದನ್ನೇ ಬಳಸಲು ಕೋರುತ್ತಾರೆ.

ಟಿಆರ್‌ಪಿ ಹೆಚ್ಚಾದಶ್ಟೂ, ವಾಹಿನಿ ಹೆಚ್ಚು ಜನಪ್ರಿಯ ಎಂಬ ಸಂದೇಶ ಹೊರ ಬೀಳುತ್ತದೆ. ಜನಪ್ರಿಯತೆ ಹೆಚ್ಚಾದಾಗ ಅದರಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಅನೇಕ ಪ್ರಸಿದ್ದ ನಿರ‍್ಮಾಣ ಸಂಸ್ತೆ ಮತ್ತು ಕಂಪೆನಿಗಳು, ಜಾಹೀರಾತು ನೀಡಲು ದೊಡ್ಡ ದೊಡ್ಡ ಹಣದ ತೈಲಿ ಹಿಡಿದು ಸಾಲು ನಿಲ್ಲುತ್ತಾರೆ. ಕೆಲವೊಂದು ಸಂಸ್ತೆ ಕೆಲವು ಯೋಜನೆಗಳನ್ನು ಪ್ರಾಯೋಜಿಸುತ್ತಾರೆ. ಇದರಿಂದ ವಾಹಿನಿಗಳ ಗಳಿಕೆ ಮೇಲೇರುತ್ತದೆ. ಕರ‍್ಚು-ವೆಚ್ಚವೆಲ್ಲಾ ಪ್ರಾಯೋಜಕರು ವಹಿಸಿಕೊಳ್ಳುವ ಕಾರಣ ವಾಹಿನಿಗಳಿಗೆ ಹಣ ಹರಿದು ಬರುತ್ತದೆ. ಹಾಗಾಗಿ ಹೆಚ್ಚು ಟಿಆರ್‌ಪಿ ಹೊಂದಿರುವ ರಿಯಾಲಿಟಿ ಶೋಗಳಿಗೆ ಹೆಚ್ಚು ಹೆಚ್ಚು ಬೇಡಿಕೆ. ಈ ಕಾರಣಗಳಿಗಾಗಿಯೇ ಹೆಚ್ಚಿನ ಟಿಆರ್‌ಪಿ ಹೊಂದಿರುವ ಕಾರ್‍ಯಕ್ರಮಗಳನ್ನು ನೀಡಲು ವಾಹಿನಿಗಳು ಇನ್ನಿಲ್ಲದ ಕಸರತ್ತನ್ನು ನಡೆಸುತ್ತವೆ.

(ಮಾಹಿತಿ ಸೆಲೆ: timesofindia.indiatimes.com , quora.com)

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sujagan J says:

    ಉತ್ತಮ ಲೇಖನ.?

ಅನಿಸಿಕೆ ಬರೆಯಿರಿ:

%d bloggers like this: