‘ಲಕ್ಕಿ ನಾಟ್ ಬ್ರಿಡ್ಜ್’- ಚೀನಾದ ಚೆಂದದ ಸೇತುವೆ!

– ಕೆ.ವಿ.ಶಶಿದರ.

ಲಕ್ಕಿ ನಾಟ್ ಬ್ರಿಡ್ಜ್ Lucky Knot Bridge

ಮನೆಯಿಂದ ಹೊರಹೋಗುವವರಿಗೆಲ್ಲಾ ಸಾಮಾನ್ಯವಾಗಿ ತಲೆ ತಿನ್ನುವುದು ರಸ್ತೆಯಲ್ಲಿನ ಟ್ರಾಪಿಕ್ ಜಾಮ್‍ಗಳು. ಟ್ರಾಪಿಕ್‍ನ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಕಚೇರಿ/ಸ್ಕೂಲು ತಲುಪುವ ಬರವಸೆ ಬಹುತೇಕ ಮಂದಿಗೆ ಕಡಿಮೆ. ಇದು ಬಾರತ ಅತವಾ ಮುಂದುವರೆಯುತ್ತಿರುವ ಒಂದೆರಡು ದೇಶದ ನಗರಗಳಲ್ಲಿನ ಜನರ ಪಾಡಲ್ಲ. ವಿಶ್ವದ ಬಹುತೇಕ ನಗರಗಳಲ್ಲಿ ಕಂಡುಬರುವ ಸಾಮಾನ್ಯ ನೋಟ.

ಇದಕ್ಕೆ ಬಗೆಹರಿಕೆಯಾಗಿ ಚೀನಾದ ಚಂಗ್ಶಾ ನಗರದಲ್ಲಿ ಅಕ್ಟೋಬರ್ 2016ರಲ್ಲಿ ರಾಶ್ಟ್ರಕ್ಕೆ ಅರ‍್ಪಿತವಾದ ಕಾಲ್ನಡಿಗೆಗಾಗಿ ಕಟ್ಟಿದ ಸೇತುವೆಯು, ನಾಗರೀಕರಿಗೆ ವಿನೋದವನ್ನು ನೀಡುವುದರ ಜೊತೆಗೆ, ಹರಿಯುವ ನದಿಯನ್ನು ದಾಟಲು ಸಹಕಾರಿಯಾಗಿ ದೊಡ್ಡ ಸಮಸ್ಯೆಯೊಂದನ್ನು ನೀಗಿಸಿರುವುದು ಅಲ್ಲಿನ ಜನರ ಮನಕ್ಕೆ ತ್ರುಪ್ತಿ ತಂದ ವಿಶಯ.

ಚೀನಾದ ಸರೋವರಗಳ ಜಿಲ್ಲೆ ಚಂಗ್ಶಾದಲ್ಲಿ ಕಟ್ಟಿರುವ ಈ ಪಾದಚಾರಿಗಳ ಸೇತುವೆಯನ್ನು ‘ಲಕ್ಕಿ ನಾಟ್ ಬ್ರಿಡ್ಜ್’(lucky knot bridge) ಎನ್ನುತ್ತಾರೆ. ಈ ಸೇತುವೆ ಪ್ರಮುಕವಾಗಿ ಚಂಗ್ಶಾ ನಗರದಲ್ಲಿ ಹರಿಯುವ ಡ್ರಾಗನ್ ಕಿಂಗ್ ಹಾರ‍್ಬರ್ ನದಿಗೆ ಅಡ್ಡಲಾಗಿ ಕಟ್ಟಿದ್ದರೂ ಇದರಡಿಯಲ್ಲಿ ರಸ್ತೆ ಹಾಗೂ ಉದ್ಯಾನವನಗಳೂ ಸೇರಿವೆ. 185 ಮೀಟರ್‍ನಶ್ಟು (607 ಅಡಿ) ಉದ್ದವಿದ್ದು 24 ಮೀಟರ್ (79 ಅಡಿ) ಎತ್ತರಕ್ಕೆ ಏರಿಳಿಯುವಂತೆ ರಚಿಸಿರುವ ಈ ಸೇತುವೆಯು ನೋಡುಗರ ಕಣ್ಣಿಗೆ ವಿಚಿತ್ರವಾಗಿ ಕಂಡರೂ ಅತ್ಯಾಕರ‍್ಶಕವಾಗಿದೆ. ವಿನ್ಯಾಸ ಸಹ ಗೊಜಲು ಗೊಜಲಾಗಿ ಕಂಡುಬರುತ್ತದೆ.

ಚೀನೀಯರ ಸ್ತಳೀಯ ಸಂಸ್ಕ್ರುತಿ ಹಾಗೂ ಜಾನಪದ ಕಲೆಯ ಸೊಗಡನ್ನು ಮೇಳೈಸಿ ಈ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ

ಈ ಪಾದಚಾರಿ ಸೇತುವೆಯ ರೂವಾರಿಗಳು ನೆಕ್ಸ್ಟ್ ಆರ‍್ಕಿಟೆಕ್ಟ್ಸ್, ಅಂಸ್ಟರ್‍ಡ್ಯಾಮ್, ನೆದರ್‍ಲ್ಯಾಂಡ್. ಡಚ್‍ನಲ್ಲಿ ಬೇರೂರಿರುವ ಈ ಸಂಸ್ತೆಯು 2013ರಲ್ಲಿ ನೆದರ್‍ಲ್ಯಾಂಡ್‍ನಲ್ಲಿ ಕಟ್ಟಿದ ಮೆಲ್ಕ್ ವೆಗ್‍ಬ್ರಿಡ್ಜಿನ ಆಕರ‍್ಶಕ ವಿನ್ಯಾಸದ ಆದಾರದ ಮೇಲೆ, ಡ್ರಾಗನ್ ಕಿಂಗ್ ಹಾರ‍್ಬರ್ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲು ಕರೆದ ಗ್ಲೋಬಲ್ ಟೆಂಡರ್‍ನಲ್ಲಿ ಪಾಲ್ಗೊಳ್ಳುವಂತೆ ಕರೆನೀಡಲಾಯಿತು. ನೆಕ್ಸ್ಟ್ ಆರ‍್ಕಿಟೆಕ್ಟ್ಸ್ ಸಂಸ್ತೆ ತನ್ನ ಪ್ರಾದೇಶಿಕ ಕಚೇರಿಯನ್ನು ಬೀಜಿಂಗ್‍ನಲ್ಲಿ ಹೊಂದಿದ್ದು ಇದಕ್ಕೆ ಪೂರಕವಾಯಿತು. ಈ ಡಚ್ಚರ ಬಳಿ ಹೇರಳ ಜ್ನಾನ, ಅನುಬವ ಹಾಗೂ ನೀರಿನ ನಿರ‍್ವಹಣೆಯಲ್ಲಿ ತಾಂತ್ರಿಕ ನೈಪುಣ್ಯತೆ ಇತ್ತು. ಇದಕ್ಕೆ ಚೀನೀಯರ ಸ್ತಳೀಯ ಸಂಸ್ಕ್ರುತಿ ಹಾಗೂ ಜಾನಪದ ಕಲೆಯ ಸೊಗಡನ್ನು ಮೇಳೈಸಿ ಈ ಹೊಸ ವಿನ್ಯಾಸವನ್ನು ರೂಪಿಸಲಾಯಿತು.

ನೆಕ್ಸ್ಟ್ ಆರ‍್ಕಿಟೆಕ್ಟ್ಸ್ ಸಿದ್ದಪಡಿಸಿದ್ದ ಅಂಕುಡೊಂಕುಗಳಿಂದ ಕೂಡಿದ, ಏರಿಳಿತವನ್ನು ತನ್ನ ಉದ್ದಗಲಕ್ಕೂ ಹೊಂದಿರುವ ವಿನೂತನ ‘ಲಕ್ಕಿ ನಾಟ್’ನ ವಿನ್ಯಾಸ ಒಪ್ಪಿಗೆ ಪಡೆಯಿತು. ಈ ಆದಾರದ ಮೇಲೆ 2013ರಲ್ಲಿ ಈ ಸೇತುವೆಯ ನಿರ‍್ಮಾಣಕ್ಕೆ ಸಂಬಂದಿಸಿದ ಪ್ರಾದಿಕಾರದಿಂದ ಪರವಾನಗಿಯನ್ನು ಸಂಸ್ತೆ ಗಿಟ್ಟಿಸಿತು.

ಸ್ಪರ‍್ದೆಯಲ್ಲಿ ಗೆದ್ದ ಸೇತುವೆಯ ವಿನ್ಯಾಸ ‘ಲಕ್ಕಿ ನಾಟ್’ನ ಮೂಲತಹ ಚೀನಾ ದೇಶದ ಜಾನಪದ ಶ್ರುಂಗಾರ ಕಲೆಯಿಂದ ಆಯ್ದ ಒಂದು ಎಳೆ. ಜಾನಪದ ಕಲೆಯಲ್ಲಿರುವ ಒಂದು ವಿಶೇಶವಾದ ಗಂಟಿನ ಎಳೆಯನ್ನು ದಾಟುದಾರಿಯ ಅವಶ್ಯಕತೆಗೆ ತಕ್ಕಂತೆ ಸೂಕ್ತ ಬದಲಾವಣೆ ಮಾಡಿ ವಿನ್ಯಾಸವನ್ನು ರಚಿಸಲಾಯಿತು. ಈ ತರಹದ ಗಂಟು ಚೀನೀಯರಿಗೆ ಅದ್ರುಶ್ಟ ಹಾಗೂ ಏಳಿಗೆಯ ಸಂಕೇತ.

‘ಲಕ್ಕಿ ನಾಟ್ ಬ್ರಿಡ್ಜ್’ನ ವಿಶೇಶತೆಯಿರುವುದು ಅದರ ವಿನ್ಯಾಸದಲ್ಲಿ. ಇದೇ ಇದರ ಪ್ರಸಿದ್ದಿಯ ಮೂಲ ಕಾರಣ. ವಿವಿದ ಸಂಸ್ಕ್ರುತಿ, ಚರಿತ್ರೆ, ತಾಂತ್ರಿಕತೆ, ಕಲೆ, ಅವಿಶ್ಕಾರ, ವಾಸ್ತುಶಿಲ್ಪ ಹಾಗೂ ಬೆರಗುಗೊಳಿಸುವ ನೋಟ ಎಲ್ಲವನ್ನೂ ನಾಜೂಕಾಗಿ ಬೆಸೆದು ಅತ್ಯಾಕರ‍್ಶಕವಾಗಿರುವಂತೆ ವಿನ್ಯಾಸಗೊಳಿಸುವುದರೊಂದಿಗೆ ಪಾದಚಾರಿಗಳಿಗೆ ಹತ್ತಿಳಿಯಲು ಎಲ್ಲೂ ಆಯಾಸವಾಗದಂತೆ ರಚಿಸಿರುವುದನ್ನು ನಾವು ಇಲ್ಲಿ ಕಾಣಬಹುದು.

ಲಕ್ಕಿ ನಾಟ್ ಬ್ರಿಡ್ಜ್ ನ ಆಕಾರ ‘ಮೊಬಿಯಸ್ ರಿಂಗ್’ನ ತತ್ವ ಹಾಗೂ ಚೀನೀಯರ ಗಂಟು ಹಾಕುವ ಕಲೆಯ ಆದಾರದ ಮೇಲೆ ರಚನೆಯಾಗಿದೆ.

ಏನಿದು ‘ಮೊಬಿಯಸ್ ರಿಂಗ್’?

ಒಂದು ಉದ್ದನೆ ಹಾಳೆಯ ಪಟ್ಟಿಯನ್ನು ತೆಗೆದುಕೊಂಡು ಅದರ ಒಂದು ತುದಿಯನ್ನು 180 ಡಿಗ್ರಿ ತಿರುಗಿಸಿ, ಬಳಿಕ ಎರಡು ತುದಿಗಳನ್ನೂ ಅಂಟಿಸಿದಲ್ಲಿ ರಚನೆಯಾಗುವ ಆಕ್ರುತಿಯನ್ನು ಮೊಬಿಯಸ್ ರಿಂಗ್ ಎನ್ನುತ್ತಾರೆ. ಲಕ್ಕಿ ನಾಟ್ ಬ್ರಿಡ್ಜ್ ವಿನ್ಯಾಸವನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ ಅದಕ್ಕೂ ಹೆಣ್ಣುಮಕ್ಕಳು ಪ್ರತಿನಿತ್ಯ ಉದ್ದ ಕೂದಲಿಗೆ ಹಾಕಿಕೊಳ್ಳುವ ಜಡೆಗೂ ಹೆಚ್ಚಿನ ಸಾಮ್ಯತೆ ಇರುವುದು ಸ್ಪಶ್ಟವಾಗಿ ಕಂಡುಬರುತ್ತದೆ.

ಈ ಪಾದಚಾರಿ ಸೇತುವೆಯು ಮೂರು ದೊಡ್ಡ ದೊಡ್ಡ ಅಲೆಗಳು ಒಂದರ ಪಕ್ಕ ಒಂದಿರುವಂತೆ ಕಾಣುತ್ತದೆ. ಈ ಮೂರು ಅಲೆಗಳಿಂತಿರುವ ದಾರಿಗಳು ಕೆಲವು ಕಡೆಗಳಲ್ಲಿ ತಾಕುತ್ತವೆ, ಅಂತಹ ಜಾಗದಲ್ಲಿ ಒಂದು ಅಲೆಯಿಂದ ಇನ್ನೊಂದು ಅಲೆಗೆ ಹೋಗಲು ದಾಟುದಾರಿಗಳನ್ನು ಮಾಡಲಾಗಿದೆ. ಇದರ ಮೇಲೇರಿ ಹೋಗುವಾಗ ನದಿಯ ಉದ್ದಗಲ, ಪಕ್ಕದಲ್ಲೇ ಹರಿಯುವ ಮೆಯಿಕ್ಸಿ ಸರೋವರದ ಸೊಬಗು, ಚಂಗ್ಶಾ ನಗರ ವಿಹಂಗಮ ನೋಟ, ಸುತ್ತಮುತ್ತ ಆವರಿಸಿರುವ ಪರ‍್ವತ ಶ್ರೇಣಿಗಳ ಕಣ್ಮನ ಸೆಳೆಯುವ ಪ್ರಕ್ರುತಿ ಸೌಂದರ‍್ಯ ಎಲ್ಲರನ್ನೂ ಸೆಳೆಯುವುದರ ಜೊತೆಗೆ ಮುದ ನೀಡುವುದರಲ್ಲಿ ಸಂದೇಹವಿಲ್ಲ.

ಈ ಸೇತುವೆಯ ಅಲಂಕಾರಕ್ಕಾಗಿ ಹಚ್ಚಿರುವ ಕೆಂಪು ಬಣ್ಣ ಚೀನಾ ದೇಶದ ಸಂಸ್ಕ್ರುತಿಯಲ್ಲಿ ಸಂತೋಶ ಹಾಗೂ ಏಳಿಗೆಯ ಸಂಕೇತ. ರಾತ್ರಿಯ ವೇಳೆ ಎಲ್‍ಇಡಿ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಈ ಕೆಂಪು ಸೇತುವೆಯ ಮೇಲೆ ನಡೆದಾಡುತ್ತಾ ಜಗಮಗಿಸುವ ಚಂಗ್ಶಾ ನಗರದ ಸೊಬಗಿನ ನೋಟವನ್ನು ನೋಡುವುದೇ ಒಂದು ರೋಚಕ ಅನುಬವ.

(ಮಾಹಿತಿ ಸೆಲೆ: lonelyplanet.com, nextarchitects.com, inhabitat.com )
(ಚಿತ್ರ ಸೆಲೆ: lonelyplanet.com, wiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: