ಸಣ್ಣಕತೆ: ಜೇನುಗೂಡು
– ವೆಂಕಟೇಶ ಚಾಗಿ.
ಆ ದಿನ ಅಪ್ಪ ಅದೇಕೋ ಮಂಕಾಗಿದ್ದರು. ಉತ್ಸಾಹದ ಚಿಲುಮೆಯಂತಿದ್ದ ಅಪ್ಪ ಆ ಗಟನೆಯ ನಂತರ ಮನದಲ್ಲಿ ನೋವಿದ್ದರೂ ಮುಕದಲ್ಲಿ ಕ್ರುತಕ ನಗು ತುಂಬಿಕೊಂಡು ಜೀವಿಸುತ್ತಿದ್ದರು. ಬದುಕಿನಲ್ಲಿ ಸುಕ ದುಕ್ಕಗಳನ್ನು ಸಮನಾಗಿ ಸ್ವೀಕರಿಸಿದ ಅಪ್ಪ ಹಲವಾರು ಕನಸುಗಳನ್ನು ಬಿತ್ತಿ, ಶ್ರಮವೆಂಬ ಬೆವರು ಹರಿಸಿ ದುಡಿಯುತ್ತಿದ್ದರು. ಹಲವಾರು ನನಸುಗಳು ಅಪ್ಪನ ಮನೆ ಬಾಗಿಲಿಗೆ ತಾವಾಗಿಯೇ ಹುಡುಕಿಕೊಂಡು ಬಂದವು. ಆ ನನಸುಗಳೆಲ್ಲವೂ ಅಪ್ಪನ ಒಳಿತಿಗಾಗಿ ಅಲ್ಲ . ಅವೆಲ್ಲವೂ ಅಪ್ಪ ತನ್ನವರ ಒಳಿತಿಗಾಗಿ ಕಂಡ ಕನಸುಗಳ ಪ್ರತಿಪಲದ ನನಸುಗಳೇ ಆಗಿದ್ದವು. ಅಂದು ಆ ಗಟನೆ ನಡೆಯಬಾರದೆಂದು ಎಶ್ಟೋ ಜನರು, ಹಿತೈಶಿಗಳು ಅಂದುಕೊಂಡಿದ್ದರೂ ಅದು ನಡೆದೇ ಹೋಯಿತು. ಇದರಿಂದಾಗಿ ಅಪ್ಪ ಮನದೊಳಗೆ ತುಂಬಾ ನೊಂದುಕೊಂಡಿದ್ದರು.
ಆ ದಿನ ಊರಿನ ಪ್ರಮುಕರ ನಿರ‍್ಣಯದಂತೆ ಆಸ್ತಿಯನ್ನೆ ಮಕ್ಕಳಿಗೆ ಹಂಚಿಕೆ ಮಾಡಲಾಯಿತು ಆದರೆ ಐವತ್ತು ಕುಟುಂಬದ ಯಾವ ಸದಸ್ಯರಿಗೂ ಇದು ಇಶ್ಟವಿರಲಿಲ್ಲ. ಆದರೂ ಅವರಿವರ ಮಾತಿಗೆ ಹಾಗೂ ಮುಂಬರುವ ಯಾವುದೇ ವಾದ-ವಿವಾದಗಳಿಗೆ ಆಸ್ಪದ ಕೊಡಬಾರದು ಎನ್ನುವ ಉದ್ದೇಶಕ್ಕೆ ಮಣಿದು ಆಸ್ತಿಯನ್ನೆಲ್ಲ ಮಕ್ಕಳಿಗೆ ಹಂಚಿ ಎಲ್ಲರನ್ನು ಬಾರವಾದ ಮನಸ್ಸಿನಿಂದ ದೂರ ಕಳಿಸಿದ್ದರು. ಅಶ್ಟು ದಿನದ ನೆನಪುಗಳು ಯಾರಿಗೂ ಸಹ ಮಾಸಿರಲಿಲ್ಲ ಹಾಗೆಯೇ ರಕ್ತಸಂಬಂದದ ಸಂಕೋಲೆಗಳು ಯಾರನ್ನೂ ಬಿಡಿಸಲು ಸಾದ್ಯವಿರಲಿಲ್ಲ . ಆದರೂ ಮನಸ್ಸುಗಳು ಹತ್ತಿರವಾಗಿದ್ದು ದೇಹ ಮಾತ್ರ ದೂರವಾಗಿದ್ದ ಕುಟುಂಬವಾಗಿತ್ತು. ಎಲ್ಲರೂ ಒಂದಾಗಿ ಇದ್ದಾಗ ಅದೆಶ್ಟು ಆತ್ಮೀಯತೆ ಇದ್ದಿತೆಂದರೆ ಒಬ್ಬರ ಕೆಲಸ ಒಬ್ಬರು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಯಾರಿಗೂ ಯಾವುದೇ ರೀತಿಯ ಹೊರೆಯಾಗದಂತೆ ಕಶ್ಟ-ಸುಕಗಳಲ್ಲಿ ಅನ್ಯೋನ್ಯತೆಯಿಂದ ಬದುಕುತ್ತಿದ್ದ ದಿನಗಳು ಇಂದಿಗೂ ಅಪ್ಪನ ಕಣ್ಣ ಮುಂದೆ ಬರುತ್ತವೆ. ಆದರೆ ಕಾಲನ ಆಟಕ್ಕೆ ಯಾರೂ ಬೇರಿಲ್ಲ.
ಸಂಜೆಯ ಹೊತ್ತಿಗೆ ಸ್ವಲ್ಪ ನಿರಾಳವಾಗಿದ್ದ ಅಪ್ಪ ಅಮ್ಮ ಮಾಡಿದ ಕಾಪಿ ಕುಡಿದು, ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೊರಟರು. ಬಾಗಿಲು ತೆರೆಯುತ್ತಿದ್ದಂತೆ ಅಪ್ಪನಿಗೆ ಆಶ್ಚರ‍್ಯ ಕಾದಿತ್ತು . ತನ್ನಿಂದ ದೂರವಾದ ತನ್ನ ಕುಟುಂಬದಿಂದ ದೂರವಾದವರೆಲ್ಲ ತನ್ನ ಕಣ್ಣೆದುರು ಕಂಡಾಗ ಏನು ಮಾಡಬೇಕೆಂಬುದು ತೋಚಲಿಲ್ಲ. ಅಣ್ಣಂದಿರು, ಅಪ್ಪನ ಪ್ರೀತಿಯ ಸೊಸೆಯಂದಿರು, ಎಲ್ಲರೂ ಅಪ್ಪನನ್ನು ಆತ್ಮೀಯತೆಯಿಂದ ಮಾತನಾಡಿಸತೊಡಗಿದರು. ಅಣ್ಣಂದಿರಂತೂ ಅಪ್ಪನ ಕಾಲುಹಿಡಿದು ತಮ್ಮನ್ನು ಯಾವುದೇ ಕಾರಣಕ್ಕೂ ಮನೆಯಿಂದ ದೂರ ಹೋಗದಂತೆ ನೋಡಿಕೊಳ್ಳಲು ಕೇಳಿಕೊಂಡರು. ಹಾಗೆಯೇ ಯಾವ ಮಾತಿಗೂ ಯಾವುದೇ ಜನರ ನುಡಿಗಳಿಗೂ ಬೆಲೆಕೊಡದ ಜೇನುಗೂಡಿನಂತೆ ತಮ್ಮ ಕುಟುಂಬ ಎಂದಿಗೂ ಒಡೆಯಬಾರದು ಎಂದು ಮಾತನಾಡಿಕೊಂಡರು.
ಮಕ್ಕಳ ಈ ಮಾತುಗಳನ್ನು ಕೇಳಿದ ಅಪ್ಪನ ಕಣ್ಣಲ್ಲಿ ಹನಿ ಜಿನುಗಿತು. ತಾನು ಬದುಕಿರುವವರೆಗೂ ತನ್ನ ಕುಟುಂಬ ಎಂದೆಂದಿಗೂ ಜೇನುಗೂಡಿನಂತಿರಬೇಕು ಎನ್ನುವ ಆಸೆ ಮತ್ತೆ ಚಿಗುರಿತು. ಅಪ್ಪ ತನಗಾಗಿ ಕಂಡ ಈ ಒಂದು ಕನಸು ನನಸಾಗುವ ಬರವಸೆಗಳು ಸ್ಪಶ್ಟವಾದವು. ಎಲ್ಲರ ಮನದಲ್ಲಾದ ಬದಲಾವಣೆಗೆ ಕಾರಣವೇ ಅಪ್ಪನ ಆದರ‍್ಶಗಳು. ‘ಜೇನಿನಗೂಡು ನಾವೆಲ್ಲಾ , ಬೇರೆಯಾದರೆ ಜೇನಿಲ್ಲ’ ಎಂಬ ಮಾತಿನಂತೆ ಅಪ್ಪ ಕಟ್ಟಿದ ಈ ಜೇನಿನ ಗೂಡಿನಲ್ಲಿ ಅಜ್ಜ ಅಜ್ಜಿ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದರಿಂದ ಕೂಡಿದ ಅವಿಬಕ್ತ ಕುಟುಂಬದ ಬೇರುಗಳು ಎಲ್ಲರ ಮನದಲ್ಲಿ ಆಳವಾಗಿ ಬೇರೂರಿದ್ದವು.
(ಚಿತ್ರ ಸೆಲೆ: maxpixel.net)
ಕೆಲ ಕಾಲ ಮನದ ಮೂಲೆಯಲ್ಲಿ ಸಣ್ಣ ನೋವು ತುಂಬಿ ಬಂತು. ಸೊಗಸಾದ ಕಥೆ