ಮನಸ್ಸು – ಬಾವನೆ – ಬದುಕು!

–  ಪ್ರಕಾಶ್‌ ಮಲೆಬೆಟ್ಟು.

ಮನಸು, Mind

ಸಿಸಿಡಿ ದಣಿ ಸಿದ್ದಾರ‍್ತರವರ ದುರಂತ ಅಂತ್ಯ ಏಕೋ ಬಿಟ್ಟು ಬಿಡದೆ ಕಾಡುತಿದೆ. ಅವರ ಪಾರ‍್ತಿವ ಶರೀರ ಕೊಂಡೊಯ್ಯುತ್ತಿದ್ದ ಸಂದರ‍್ಬದಲ್ಲಿ ಕೊಟ್ಟಿಗೆಹಾರ ಪೇಟೆಯ ಜನ ಅಂಗಡಿಗಳನ್ನು ಮುಚ್ಚಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅವರ ಅಂತಿಮ ದರ‍್ಶನ ಪಡೆದದ್ದು ಮಲೆನಾಡಿನಲ್ಲಿ ಅವರಿಗಿರುವ ಜನಪ್ರಿಯತೆಗೆ ಸಾಕ್ಶಿ. ಮಾದ್ಯಮಗಳಲ್ಲಿ ಅವರ ಬಗ್ಗೆ ಸುದ್ದಿ ಬರುತ್ತಿದ್ದಾಗ ‘ಅವರ ವಾಹನ ಚಾಲಕನಿಗೆ ಅವರ ಮನಸಿನ ತಳಮಳ ಅರ‍್ತವಾಗಿದ್ದಿದ್ದರೆ ಅವರು ಬದುಕುತಿದ್ದರೋ ಏನೋ’ ಎಂಬ ಯೋಚನೆ ನನ್ನಲ್ಲಿ ಮೂಡುತ್ತಿರುತ್ತದೆ. ನನ್ನ ಯೋಚನೆಯೇನೋ ಬಾಲಿಶವಾದದ್ದೇ. ಆದರೆ ನಾವು ಇನ್ನೊಬ್ಬರ ಮನಸ್ಸನ್ನು ಅರಿಯಲು ಸಾದ್ಯವಿಲ್ಲ ಅನ್ನೋದು ವಾಸ್ತವದಲ್ಲಿ ಸತ್ಯ ಕೂಡ.

ದೇವರು ನಮಗೆ ಇನ್ನೊಬ್ಬರ ಮನಸನ್ನು ಅರಿಯುವ ಶಕ್ತಿಯನ್ನು ಕೊಟ್ಟಿಲ್ಲ. ನಾವು ನಮ್ಮ ಅಚ್ಚು ಮೆಚ್ಚಿನವರ ಮನಸ್ಸನ್ನು, ಅವರ ಬಾವನೆಯನ್ನು ಎಶ್ಟು ಅರ‍್ತ ಮಾಡಿಕೊಂಡರೂ ಅದು ಪರಿಪೂರ‍್ಣ ಅಲ್ಲ. ಇನ್ನೊಬ್ಬರ ಮನಸ್ಸನ್ನು ಶೇ 100 ರಶ್ಟು ಅರ‍್ತಮಾಡಿಕೊಳ್ಳಲು ಸಾದ್ಯವೇ ಇಲ್ಲ. ಹೀಗಾಗಿ ಕೊನೆತನಕ ನಮ್ಮಿಂದ ಎಶ್ಟು ಸಾದ್ಯವೋ ಅಶ್ಟು ಪ್ರೀತಿಯನ್ನು ಹಂಚಬೇಕು. ಯಾವ ಸಮಯದಲ್ಲಿ, ಯಾವ ರೂಪದಲ್ಲಿ ದೇವರು ಯಾರನ್ನು ಯಾವಾಗ ಕರೆದುಕೊಂಡು ಹೋಗುತ್ತಾನೋ ಅವನೇ ಬಲ್ಲ.

ಮನಸಿನಲ್ಲಿ ಮೂಡುವ ಒಳ್ಳೆಯ ಬಾವನೆಗಳೇ ಸಂಬಂದವನ್ನು ಬೆಸೆಯುತ್ತವೆ ಎಂಬುದನ್ನು ನಾವು ಮರೆಯಬಾರದು. ಮನಸ್ಸನ್ನು ಎಂದಿಗೂ ಏಕಾಂಗಿಯಾಗಿ ಮಾಡಬಾರದು. ಏಕಾಂಗಿ ಮನಸು ತುಂಬಾ ಅಪಾಯಕಾರಿ. ಹಾಗಾಗಿ ನಮ್ಮವರನ್ನು ಅರಿತುಕೊಳ್ಳಲು ನಿರಂತರವಾಗಿ ನಾವು ಪ್ರಯತ್ನ ಪಡಬೇಕು. ನಮ್ಮ ಮಾತು ಇನ್ನೊಬ್ಬರಿಗೆ ನೋವು ತರುತ್ತದೆ ಎಂದರೆ ಅದನ್ನು ಆಡದೇ ಇರುವುದೇ ಲೇಸು. ಆಕಸ್ಮಿಕವಾಗಿ, ಜಗಳಗಳಾದಾಗ ತಾಳ್ಮೆ ಕಳೆದುಕೊಳ್ಳಬಾರದು. ಕೋಪದ ಬರದಲ್ಲಿ ನಾವು ನಮ್ಮ ಮನಸಿನ ಹತೋಟಿಯನ್ನು ಕಳೆದುಕೊಂಡುಬಿಡುತ್ತೇವೆ.

ಒಂದು ಸಣ್ಣ ಕೋಪ, ಜಗಳ, ಅಪನಂಬಿಕೆ, ಮಾತುಗಳನ್ನು ತಪ್ಪಾಗಿ ಅರ‍್ತ್ಯೆಸಿಕೊಳ್ಳುವುದರಿಂದ ಒಂದು ಕುಟುಂಬವೇ ಸರ‍್ವನಾಶವಾಗಿಬಿಡಬಹುದು. ನಾವು ಎಶ್ಟೇ ಪರಿಪೂರ‍್ಣ ವ್ಯಕ್ತಿಯಾಗಲು ಪ್ರಯತ್ನಪಟ್ಟರೂ ಅದನ್ನು ಸಾದಿಸುವುದು ಕಂಡಿತವಾಗಿಯೂ ಸುಲಬವಲ್ಲ. ಕೆಲವೊಮ್ಮೆ, ಮನುಶ್ಯ ಸತ್ತ ಮೇಲೆ ಅವನ ಬಗ್ಗೆ ಒಳ್ಳೊಳ್ಳೆ ಮಾತನಾಡುವರು. ಆದರೆ ಸತ್ತ ಮೇಲೆ ಒಳ್ಳೆ ಮಾತು ಕೇಳಿ ಏನು ಪ್ರಯೋಜನ. ಬದುಕಿರುವಾಗಲೇ ಅನನ್ಯ ವ್ಯಕ್ತಿಯಾಗಿ ಬದುಕಿ ತೋರಿಸಬೇಕು.  ಜೀವನವೆಂಬುದು ಬಾವನೆಗಳ ಸಂಗರ‍್ಶ. ಬಾವನೆಗಳನ್ನು ಮನಸಲಿಟ್ಟುಕೊಂಡು ಕೊರಗುವುದಕ್ಕಿಂತ ಆಪ್ತರೊಡನೆ, ಆತ್ಮೀಯರೊಡನೆ ಹಂಚಿಕೊಂಡರೆ ಎಶ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ಜಗತ್ತು ಸುಂದರ, ಹಾಗೇ ನಮ್ಮ ಮನಸ್ಸು ಕೂಡ ಸುಂದರವಾಗಿರಬೇಕು.

( ಚಿತ್ರಸೆಲೆ : sloanreview.mit.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: