ಕವಿತೆ: ಹುಚ್ಚು
ಹಿರಿಯರೆ ತಮಗೆ ಗೌರವದಿಂದ
ಕೇಳುವೆ ಒಂದು ಪ್ರಶ್ನೆ
ನಮ್ಮ ಬಾಲ್ಯದ ಸವಿರುಚಿ ಅಳಿಸಿ
ದೊಡ್ಡವ್ರ್ನ ಮಾಡ್ತೀರಿ ಸುಮ್ನೆ
ಪಂಡಿತರೆಲ್ಲ ವಾಹಿನಿ ಸೆಳೆತದ
ಟಿಯಾರ‍್ಪಿ ಸುಳಿಯಲಿ ಸಿಕ್ಕು
ಲಯಶ್ರುತಿ ಬಗ್ಗೆ ಕೊಂಡಾಡ್ತಾರ
ಸುಮ್ಮ ಸುಮ್ನೆ ನಕ್ಕು
ತಂದೆ ತಾಯಿಗೆ ಗರಬಡದೈತಿ
ಟೀವಿಲಿ ಮಿಂಚುವ ಹುಚ್ಚು
ಹಾಡುಹಾಡಿ ಡ್ಯಾನ್ಸ ಮಾಡಿ
ಗಳಿಸ್ಬೇಕೆಲ್ಲರ ಮೆಚ್ಚು
ಒಬ್ಬರಂಗೊಬ್ಬರು ಇರೋದೆ ಇಲ್ಲ
ಮಾಡುವುದ್ಯಾಕೆ ಹೋಲ್ಕಿ
ಸ್ವಂತ ಕನಸನು ನನಸು ಮಾಡಿ
ಹತ್ತಿ ಮೆರೆಯಲಿ ಪಾಲ್ಕಿ
ಮಿಡಿಗಾಯ್ ಹರಿದು ಹಿಚುಕಿ ಹಿಚುಕಿ
ಮಾಡಿದರಾಯಿತೆ ಹಣ್ಣು
ಡ್ವಾರಗಾಯ್ ಆಗಿ ಪಾಡಿಗೆ ಬರಲು
ಸಮಯ ಬೇಕು ಇನ್ನು
ಮೊಗ್ಗು ಅರಳಿ ಪಕಳೆ ಹರಡಿ
ಸೂಸಲಿ ಪರಿಮಳ ಗಂದ
ಮೊಗ್ಗನು ಚಿವುಟಿ ಹಿಂಸೆ ಕೊಟ್ಟರೆ
ಹೇಗಾಗುವುದು ಚೆಂದ
(ಚಿತ್ರ ಸೆಲೆ: in.reuters.com)
ಮಕ್ಕಳಿಗಾಗಿ ರಿಯಾಲಿಟಿ ಶೋ ಗಳು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿವೆ,ಅದನ್ನು ಯಾರೂ ಗಮನಿಸುತ್ತಿಲ್ಲ.ಟಿ ಆರ್ ಪಿ ಬೆನ್ನುಬಿದ್ದಿರುವ ಜಡ್ಜಸ್ ಸುಮ್ಮನೆ ಹೊಗಳಿ ಹೊಗಳಿ ಮಕ್ಕಳದಾರಿ ತಪ್ಪಿಸುವಂತಾಗಿದೆ…ಕವನ ಅರ್ಥಪೂರ್ಣವಾಗಿದೆ.
ತುಂಬ ಸಂತೋಷ ಕೊಟ್ಟಿತು. ಎಲ್ಲ ಹೊಸ ವಾತಾವರಣದ ಚಿತ್ರಗಳು; ಹೊಸ ವಾತಾವರಣದ ಚಿಂತನೆಗಳು; ಹೊಸ ಭಾಷೆ ಮತ್ತು ಹೊಸ ಪರಿಭಾಷೆ.
ನನ್ನಿ. ತಮ್ಮ ಸ್ಪಂದನೆಗೆ…