ಮಕ್ಕಳ ಕತೆ : ಗೀಜಗ ಹಕ್ಕಿ ಮತ್ತು ಕೋತಿ

– ಮಾರಿಸನ್ ಮನೋಹರ್.

ಗೀಜಗ, baya weaver

ಅದು ತುಂಬಾ ದಟ್ಟವಾದ ಕಾಡು, ಸೂರ‍್ಯನ ಕಿರಣಗಳು ನೆಲವನ್ನು ಸೋಕುತ್ತಿರಲಿಲ್ಲ. ಮಳೆಗಾಲದ ಒಂದು ದಿನ ದೋ ದೋ ಅಂತ ಮಳೆ ಸುರಿದು ಇಡೀ ಕಾಡೆಲ್ಲ ತೊಯ್ದು ತೊಪ್ಪೆಯಾಗಿತ್ತು. ಎಲ್ಲ ಕಡೆ ನೆರೆ ಬಂದು ಕಾಡಿನಲ್ಲಿ ಹರಿಯುತ್ತಿದ್ದ ತೊರೆ ಹೊಳೆಗಳೆಲ್ಲ ನೀರು ಕೆಸರು ತುಂಬಿ ಹರಿಯುತ್ತಿದ್ದವು. ಕಾಡಿನ ನಟ್ಟನಡುವೆ ನೂರಾರು ಕೋತಿಗಳು ಒಂದು ದೊಡ್ಡ ಆಲದ ಮರದಲ್ಲಿ ಬದುಕುತ್ತಿದ್ದವು. ಆಲದ ಮರ ತುಂಬಾ ದೊಡ್ಡದಾಗಿತ್ತು. ದೂರದಿಂದ ಒಂದು ಚಿಕ್ಕ ಬೆಟ್ಟದ ಹಾಗೆ ಕಾಣಿಸುತ್ತಿತ್ತು. ಅದರ ರೆಂಬೆ ಕೊಂಬೆಗಳು, ಬಿಳಲುಗಳ ಮೇಲೆ ಕೋತಿಗಳು ವಾಸವಾಗಿದ್ದವು.

ಅಂದು ಬಿದ್ದ ದೊಡ್ಡ ಮಳೆಯಿಂದ ಎಲ್ಲ ಕೋತಿಗಳ ಮೈಕೂದಲುಗಳು ತೊಯ್ದು ಅವಕ್ಕೆ ಚಳಿ ಹೊಕ್ಕಿತ್ತು. ಕೈ ಮುಶ್ಟಿಯನ್ನು ಬಿಗಿಯಾಗಿ ಹಿಡಿದುಕೊಂಡು ಒಂದರ ಪಕ್ಕ ಮತ್ತೊಂದು ಕೂತುಕೊಂಡು ಗಡಗಡ ನಡುಗುತ್ತಿದ್ದವು. ಅದೇ ಆಲದ ಮರದ ಪಕ್ಕದಲ್ಲಿ ಇದ್ದ ಹೊಂಗೆ ಮರದಲ್ಲಿ ಒಂದು ಗೀಜಗ ಗೂಡು ಕಟ್ಟಿಕೊಂಡು ಬದುಕುತ್ತಿತ್ತು. ಅದು ತನ್ನ ಗೂಡನ್ನು ತುಂಬಾ ಸುಂದರವಾಗಿ ಹೆಣೆದುಕೊಂಡಿತ್ತು. ಮರದ ತುತ್ತ ತುದಿಯ ಕೊಂಬೆಯ ಕೊನೆಗೆ ತನ್ನ ಗೂಡನ್ನು ಕಟ್ಟಿಕೊಂಡು, ಅಲ್ಲಿ ಸುಕವಾಗಿ ಬದುಕುತ್ತಿತ್ತು. ಅದರ ಗೂಡು ತುಂಬಾ ಬೆಚ್ಚಗೆ ಹಾಗೂ ಬಿಗಿಯಾಗಿ ಇತ್ತು. ಆ ದಿನ ಬಿದ್ದ ದೊಡ್ಡ ಮಳೆಯಲ್ಲಿ ಅದರ ಗೂಡಿಗೆ ಏನೂ ಆಗಿರಲಿಲ್ಲ. ಅದು ಮಳೆಗಾಲಕ್ಕೆ ಬೇಕಾದ ತನ್ನ ಆಹಾರವನ್ನು ಬೇಸಿಗೆ ಕಾಲದಲ್ಲೇ ತನ್ನ ಗೂಡಿನಲ್ಲಿ ತಂದು ಇಟ್ಟುಕೊಂಡಿತ್ತು. ಹೀಗಾಗಿ ಮಳೆಗಾಲದಲ್ಲಿ ಎಲ್ಲಿಯೂ ಹೊರಗೆ ಹೋಗುವ ಅವಶ್ಯಕತೆ ಅದಕ್ಕೆ ಇರಲಿಲ್ಲ.

ಗೀಜಗ ತನ್ನ ಗೂಡಿನಿಂದ ಹೊರಗೆ ಬಂದು ಆಲದ ಮರದ ಕಡೆಗೆ ನೋಡಿತು. ಕೋತಿಗಳಿಗೆ ಚಳಿ ಹೊಕ್ಕಿದ್ದರಿಂದ ಅವು ಗಡಗಡ ನಡುಗುತ್ತಾ ಹಲ್ಲು ಕಡಿಯುತ್ತಿದ್ದವು. ಬಿದ್ದ ಮಳೆಯಿಂದಾಗಿ ಮಿಂಚು ಹುಳಗಳು ಹೊರಗೆ ಎಲ್ಲ ಕಡೆ ಹಾರಾಡುತ್ತಿದ್ದವು. ಆ ಕೋತಿಗಳಲ್ಲೇ ತುಂಬಾ ಬುದ್ದಿವಂತ ಎನಿಸಿಕೊಂಡಿದ್ದ ಮುದುಕ ಕೋತಿಯು ಹರೆಯದ ಕೋತಿಗಳಿಗೆ ಮಿಂಚುಹುಳುಗಳನ್ನು ತೋರಿಸಿತು. ಹರೆಯದ ಕೋತಿಗಳು ಏನು ಮಾಡಬೇಕೆಂದು ತೋಚದೆ ಒಂದಕ್ಕೊಂದು ಪಿಳಿಪಿಳಿ ನೋಡಿಕೊಂಡವು. ಆ ಮುದುಕ ಕೋತಿ “ಅಲ್ಲಿ ಹಾರಾಡುತ್ತಿರುವ ಕೆಂಡಗಳನ್ನು ಹಿಡಿದುಕೊಂಡು ಬನ್ನಿ, ಅದರಿಂದ ಬೆಂಕಿಯನ್ನು ಹಚ್ಚಿಸಿ ಮೈ ಕಾಯಿಸಿಕೊಳ್ಳೋಣ” ಅಂದಿತು. ಕೋತಿಗಳು ನಡುಗುತ್ತಲೇ ಮಿಂಚುಹುಳುಗಳನ್ನು ಹಿಡಿದುಕೊಂಡು ಬಂದವು. ಕಟ್ಟಿಗೆಗಳನ್ನು ಒಟ್ಟಿ ಅವುಗಳ ನಡುವೆ ಮಿಂಚು ಹುಳುಗಳನ್ನು ಹಾಕಿ ಗಾಳಿ ಊದಲು ಮೊದಲು ಮಾಡಿದವು. ಆದರೆ ಬೆಂಕಿ ಹೊತ್ತಿಕೊಳ್ಳಲಿಲ್ಲ.

ಆಗ ಬುದ್ದಿವಂತ ಅನ್ನಿಸಿಕೊಂಡ ಮತ್ತೊಂದು ಮುದುಕ ಕೋತಿ “ಕಟ್ಟಿಗೆಗಳು ಬಿದ್ದ ಮಳೆಯಿಂದ ತೊಯ್ದು ಹೋಗಿವೆ, ಅದಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿಲ್ಲ” ಅಂದಿತು. ಆದರೂ ಗಾಳಿ ಊದುವುದನ್ನು ಮುಂದುವರೆಸಿದವು. ಇದನ್ನು ನೋಡುತ್ತಿದ್ದ ಗೀಜಗನ ಹಕ್ಕಿ ನಕ್ಕುಬಿಟ್ಟಿತು. ಕೋತಿಗಳು ಗೀಜಗ ನಗುವುದನ್ನು ನೋಡಿದವು, ಅವಕ್ಕೆ ಸಿಟ್ಟು ಬಂತು. “ಯಾಕೆ ನಗುತ್ತಾ ಇರುವೆ?” ಎಂದು ಕೇಳಿದವು. ಅದಕ್ಕೆ ಗೀಜಗ “ಮಿಂಚು ಹುಳುಗಳನ್ನು ಕೆಂಡಗಳೆಂದು ತಿಳಿದು, ಅದರಿಂದ ಹಸಿ ಕಟ್ಟಿಗೆಗೆ ಬೆಂಕಿ ಹೊತ್ತಿಸುವುದು ನೋಡಿದ ಮೇಲೆ ಕತ್ತೆಗೂ ನಗು ಬರುತ್ತದೆ” ಅಂದಿತು. ಮೊದಲೇ ಚಳಿಯಿಂದ ನಡುಗುತ್ತಿದ್ದ ಕೋತಿಗಳಿಗೆ ಗೀಜಗನ ಮಾತುಗಳಿಂದ ಸಿಟ್ಟು ನೆತ್ತಿಗೆ ಏರಿತು.

ಬುದ್ದಿವಂತ ಅನ್ನಿಕೊಂಡಿದ್ದ ಎರಡೂ ಕೋತಿಗಳು ಮುಂದೆ ಬಂದು “ಇಶ್ಟು ಕೋತಿಗಳಲ್ಲಿ ನಾವೇ ಬುದ್ದಿವಂತರು, ಚಿಕ್ಕ ಹಕ್ಕಿಯಾದ ನೀನು ನಮಗೇ ಬುದ್ದಿ ಹೇಳಲು ಬರುತ್ತೀಯಾ? ಕಟ್ಟಿಗೆಗಳು ಹಸಿಯಾಗಿವೆ ಅದಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿಲ್ಲ, ಕಟ್ಟಿಗೆ ಒಣಗಿದ್ದರೆ ಇಶ್ಟು ಹೊತ್ತಿಗೆ ಈ ಕೆಂಡಗಳಿಂದ ಬೆಂಕಿ ಹೊತ್ತಿಕೊಂಡಿರುತ್ತಿತ್ತು” ಅಂದವು. ಗೀಜಗನ ಹಕ್ಕಿಗೆ ಇನ್ನೂ ನಗು ಬಂತು. ಅದು “ಇದ್ದದ್ದನ್ನು ಹೇಳಲು ಚಿಕ್ಕವರಾದರೇನು, ದೊಡ್ಡವರಾದರೇನು? ಮೊಂಡರಿಗೆ ಬುದ್ದಿ ಹೇಳುವುದು ಉಸುಕಿನಿಂದ (ಮರಳಿನಿಂದ) ಔಡಲ ಎಣ್ಣೆ ತೆಗೆದಶ್ಟು ಕಶ್ಟಕರ” ಅಂತ ಹೇಳಿತು. ಆಗ ಒಂದು ಕೋತಿ ಗೀಜಗನ ಹಕ್ಕಿಯನ್ನು ಕಚ್ಚಲು ಹೊಂಗೆ ಮರವನ್ನು ಏರಿತು. ಅದು ತನ್ನನ್ನು ಕಚ್ಚಲು ಬರುತ್ತಿದೆ ಅಂತ ತಿಳಿದ ಗೀಜಗ ಹಾರಿ ಹೋಯಿತು. ಗೀಜಗ ಕೈಗೆ ಸಿಗದಿದಿದ್ದಕ್ಕೆ ಕೆರಳಿದ ಕೋತಿ ಅದರ ಗೂಡನ್ನು ಕಿತ್ತು ಬಿಸಾಡಿ ಬಿಟ್ಟಿತು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: