ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ
ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ. ( 1116 – 101 )

ಓದು=ಕಲಿ/ಲಿಪಿರೂಪದ ಬರಹದಲ್ಲಿನ ವಿಚಾರಗಳನ್ನು ತಿಳಿಯುವುದು; ಓದಿಸುವ+ಅಣ್ಣಗಳ್+ಎನ್ನ; ಓದಿಸುವ=ವಿದ್ಯೆಯನ್ನು ಕಲಿಸುವ/ಅಕ್ಕರದ ಉಚ್ಚಾರ ಮತ್ತು ಬರಹವನ್ನು ಹೇಳಿಕೊಡುವ; ಅಣ್ಣ=ವಯಸ್ಸಿನಲ್ಲಿ ಹಿರಿಯವನು; ಅಣ್ಣಗಳು=ಗುರುಗಳು; ಎನ್ನ=ನನ್ನನ್ನು; ಮಾತು+ಆಡ; ಮಾತು=ನುಡಿ/ಸೊಲ್ಲು; ಆಡು=ಉಚ್ಚರಿಸು/ಹೇಳು; ಮಾತಾಡ=ಮಾತನ್ನಾಡಲು; ಕಲಿಸಿದರ್+ಅಲ್ಲದೆ; ಕಲಿ=ಅರಿ/ತಿಳಿ; ಕಲಿಸು=ತಿಳಿಯುವಂತೆ ಹೇಳು/ಅರಿಯುವಂತೆ ತರಬೇತಿಯನ್ನು ನೀಡು;

ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರು=ಅಕ್ಕರದ ಓದು ಬರಹವನ್ನು ಹೇಳಿಕೊಟ್ಟ ಗುರುಗಳು ಮಾತನಾಡುವ ಕಲೆಯಲ್ಲಿ ನನ್ನನ್ನು ಪರಿಣತನನ್ನಾಗಿ ಮಾಡಿದರು. ಅಂದರೆ ಕೇಳುವವರ ಮನ ಸೆಳೆಯುವಂತೆ, ಮನ ಮೆಚ್ಚಿಸುವಂತೆ ಮತ್ತು ಅವರನ್ನು ಮರುಳುಗೊಳಿಸುವಂತೆ ಮಾತನಾಡುವುದರಲ್ಲಿ ನಾನು ಜಾಣನಾದೆನು; ಅಲ್ಲದೆ=ಅದನ್ನು ಬಿಟ್ಟು/ಹೊರತು ಪಡಿಸಿ;

ಮನ=ಮನಸ್ಸು; ಕಲಿಸಲ್+ಇಲ್ಲ+ಅಯ್ಯಾ; ಕಲಿಸಲಿಲ್ಲ=ಹೇಳಿಕೊಡಲಿಲ್ಲ/ಅರಿಯುವಂತೆ ಮಾಡಲಿಲ್ಲ; ಅಯ್ಯಾ=ಮತ್ತೊಬ್ಬ ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಮನಕ್ಕೆ ಮಾತಾಡ ಕಲಿಸುವುದು=ವ್ಯಕ್ತಿಯು ತನ್ನ ಮನದಲ್ಲಿ ತುಡಿಯುವ ಒಳಮಿಡಿತಗಳಲ್ಲಿ ಯಾವುದು ಕೆಟ್ಟದ್ದು/ಯಾವುದು ಒಳ್ಳೆಯದು ಎಂಬುದನ್ನು ಒರೆಹಚ್ಚಿನೋಡಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಬಾಳಬೇಕೆಂಬ ಅರಿವು ಮತ್ತು ಎಚ್ಚರವನ್ನು ಹೊಂದುವುದು.

ವ್ಯಕ್ತಿಯು ತನ್ನ ಕಣ್ಣ ಮುಂದಿನ ನಿಸರ‍್ಗದಲ್ಲಿನ ಆಗುಹೋಗುಗಳನ್ನು ಅರಿತುಕೊಂಡು, ತಾನು ಬಾಳುತ್ತಿರುವ ಸಮಾಜದ ಆಚರಣೆಗಳಲ್ಲಿ ಒಟ್ಟು ಜನಸಮುದಾಯದ ಹಿತಕ್ಕೆ ಯಾವುದು ನೆರವಾಗುತ್ತದೆ/ಯಾವುದು ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ಮನದಲ್ಲಿ ಚಿಂತಿಸಿ ನೋಡಿ, ಜನಸಮುದಾಯವು ನೆಮ್ಮದಿಯಿಂದ ಕೂಡಿಬಾಳುವುದಕ್ಕೆ ನೆರವಾಗುವ ಆಚರಣೆಗಳನ್ನು ಒಪ್ಪಿಕೊಂಡು, ಕೇಡನ್ನು ಬಗೆಯುವ ಆಚರಣೆಗಳನ್ನು ತೊರೆದು ಬಾಳಬೇಕೆಂಬ ವಿವೇಕವನ್ನು ಹೊಂದುವುದು;

ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ=ವ್ಯಕ್ತಿಯು ತನ್ನ ಮನದಲ್ಲಿ ಮೂಡುವ ಒಳಿತು ಕೆಡುಕಿನ ಸಂಗತಿಗಳನ್ನು ಒರೆಹಚ್ಚಿ ನೋಡಿ, ಕೆಡುಕನ್ನು ತೊರೆದು, ಒಳ್ಳೆಯತನದಿಂದ ಬಾಳಬೇಕೆಂಬುದನ್ನು ಕಲಿಸಲಿಲ್ಲ.

ಕುಲಮದವಳಿಯದನ್ನಕ್ಕ
ಶರಣನಾಗಲೇಕೆ? (869 – 78)

ಕುಲ+ಮದ+ಅಳಿಯದ+ಅನ್ನಕ್ಕ; ಕುಲ=ಜಾತಿ/ಮತ/ವಂಶ/ಮನೆತನ; ಮದ=ಸೊಕ್ಕು/ಗರ‍್ವ/ಹೆಮ್ಮೆ;

“ಕುಲಮದ” ಎಂದರೆ ವ್ಯಕ್ತಿಯು ತಾನು ಹುಟ್ಟಿ ಬೆಳೆದು ಬಾಳುತ್ತಿರುವ ಜಾತಿ/ಮತ/ವಂಶ/ಮನೆತನವು ಮೇಲಿನದು/ದೊಡ್ಡದು/ಪವಿತ್ರವಾದುದು ಎಂಬ ತಿಳಿಗೇಡಿತನದ ಒಳಮಿಡಿತಕ್ಕೆ ಒಳಗಾಗಿ, ಸಮಾಜದಲ್ಲಿರುವ ಇನ್ನಿತರ ಜಾತಿ/ಮತ/ವಂಶ/ಮನೆತನಕ್ಕೆ ಸೇರಿದ ಜನಸಮುದಾಯವನ್ನು ಕೀಳೆಂದು ಕಡೆಗಣಿಸಿ, ಸೊಕ್ಕಿನಿಂದ ಕೊಬ್ಬಿ ಮೆರೆಯುವ ನಡೆನುಡಿ.

ಇನ್ನಿತರ ಜಾತಿ/ಮತಗಳಿಗೆ ಸೇರಿದ ವ್ಯಕ್ತಿಗಳು ವಿದ್ಯೆಯನ್ನು ಪಡೆದು, ಅರಿವನ್ನು ಹೊಂದಿ, ಒಳ್ಳೆಯ ಗದ್ದುಗೆಯನ್ನೇರಿ, ಆಸ್ತಿಪಾಸ್ತಿ, ಹಣಕಾಸನ್ನು ಸಂಪಾದಿಸಿ ಸಮಾಜದಲ್ಲಿ ತಲೆಯೆತ್ತಿ ಬಾಳುವುದನ್ನು ಕುಲಮದವುಳ್ಳ ವ್ಯಕ್ತಿಗಳು ಸಹಿಸುವುದಿಲ್ಲ.

ಇದಕ್ಕಾಗಿ ಜಾತಿ/ಮತ/ದೇವರ ಹೆಸರಿನಲ್ಲಿ ಇಲ್ಲಸಲ್ಲದ/ಸುಳ್ಳಿನಿಂದ ಕೂಡಿದ/ಕಟ್ಟುಕತೆಯ ಸಂಗತಿಗಳನ್ನು ಹರಡುತ್ತಾ, ನೂರೆಂಟು ಬಗೆಯ ಜಾತಿ/ಮತಗಳಿಂದ ಹೆಣೆದುಕೊಂಡು ರೂಪುಗೊಂಡಿರುವ ಸಮಾಜದ ಜನಸಮುದಾಯಗಳ ಮನದಲ್ಲಿ ಪರಸ್ಪರ ಅನುಮಾನದ/ಅಪನಂಬಿಕೆಯ/ಹಗೆತನದ ಬೆಂಕಿ ಹತ್ತಿ ಉರಿಯುವಂತೆ ಮಾಡುತ್ತಾ, ಸಮಾಜದಲ್ಲಿನ ಜನತೆಯು ಒಗ್ಗಟ್ಟಿನಿಂದ ಜತೆಗೂಡಿ ನೆಮ್ಮದಿಯಿಂದ ಬದುಕನ್ನು ನಡೆಸದಂತಹ ಹುನ್ನಾರಗಳನ್ನು ಹೂಡುತ್ತಿರುತ್ತಾರೆ;

ಅಳಿ=ಇಲ್ಲವಾಗು/ನಾಶವಾಗು; ಅನ್ನಕ್ಕ=ವರೆಗೆ/ತನಕ; ಅಳಿಯದನ್ನಕ್ಕ=ಇಲ್ಲವಾಗುವ ವರೆಗೆ/ನಾಶವಾಗುವ ತನಕ;

ಶರಣನ್+ಆಗಲು+ಏಕೆ; ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಒಲಿದವನು/ಶಿವನನ್ನು ಪೂಜಿಸುವವನು; ಶರಣನಾಗಲು=ಶಿವನನ್ನು ಒಲಿಯುವ/ಪೂಜಿಸುವ ವ್ಯಕ್ತಿಯಾಗಲು; ಏಕೆ=ಏನು ತಾನೆ ಪ್ರಯೋಜನ;

ಕುಲಮದದ ಕೆಟ್ಟ ನಡೆನುಡಿಗಳನ್ನು ಬಿಟ್ಟು ಬಾಳದೆ, ಕೇವಲ ಶರಣನ ಉಡುಗೆ ತೊಡುಗೆಗಳನ್ನು ಹಾಕಿಕೊಂಡು, ತನ್ನನ್ನು ಶಿವಶರಣನೆಂದು ಹೇಳಿಕೊಳ್ಳುವುದರಿಂದ ಪ್ರಯೋಜನವಿಲ್ಲ. ವ್ಯಕ್ತಿಯು ಶರಣನಾಗಬೇಕಾದರೆ, ಅವನ ನಡೆನುಡಿಗಳು ಒಳ್ಳೆಯ ರೀತಿಯಲ್ಲಿರಬೇಕು.

ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ? (284-32)

ಕೆಲ=ಪಕ್ಕ/ಬದಿ/ಮಗ್ಗಲು/ನೆರೆ/ಸಮೀಪ; ಶುದ್ಧನ್+ಆದೆನ್+ಅಲ್ಲದೆ; ಶುದ್ಧ=ಚೊಕ್ಕಟ/ಶುಚಿ/ಕೊಳಕಿಲ್ಲದಿರುವುದು; ಶುದ್ಧನ್=ಒಳ್ಳೆಯ ನಡೆನುಡಿಯುಳ್ಳವನು; ಆದೆನ್=ಆಗಿರುವೆನು;

ಕೆಲಕ್ಕೆ ಶುದ್ಧನಾದೆನ್=ಬಹಿರಂಗದಲ್ಲಿ ನೋಡುವವರ ಕಣ್ಣಿಗೆ ಒಳ್ಳೆಯ ನಡೆನುಡಿಯುಳ್ಳವನಂತೆ ಕಾಣಿಸಿಕೊಳ್ಳುತ್ತೇನೆ; ಅಲ್ಲದೆ=ಅದನ್ನು ಹೊರತುಪಡಿಸಿ/ಅದನ್ನು ಬಿಟ್ಟು; ಎನ್ನ=ನನ್ನ; ಮನ=ಮನಸ್ಸು/ಚಿತ್ತ; ಶುದ್ಧನ್+ಆಗೆನ್+ಏಕೆ+ಅಯ್ಯಾ; ಆಗೆನು=ಆಗಿರುವುದಿಲ್ಲ; ಏಕೆ=ಇದಕ್ಕೆ ಕಾರಣವೇನು;

ಎನ್ನ ಮನಕ್ಕೆ ಶುದ್ಧನಾಗೆನ್=ನನ್ನ ಅಂತರಂಗದ ಮನದಲ್ಲಿ ನೂರೆಂಟು ಬಗೆಯ ಕೆಟ್ಟ ಒಳಮಿಡಿತಗಳು ಸದಾಕಾಲ ತುಡಿಯುತ್ತಿರುತ್ತವೆ. ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ಆಲೋಚನೆ/ಚಿಂತನೆ/ಸಂಗತಿಗಳಿಂದ ನನ್ನ ಮನ ತುಂಬಿರುತ್ತದೆ;

ವ್ಯಕ್ತಿಯು ತನ್ನ ನಡೆನುಡಿಯಲ್ಲಿನ ತಪ್ಪುಒಪ್ಪುಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುವಾಗ, ಈ ಬಗೆಯ ತಾಕಲಾಟಗಳಿಗೆ ಒಳಗಾಗುತ್ತಾನೆ. ಹೊರಗಿನ ತನ್ನ ನಡೆಗೂ ಒಳಗಿನ ತನ್ನ ಮನದ ಒಳಮಿಡಿತಗಳಿಗೂ ಇರುವ ಅಂತರವನ್ನು ಕಂಡು ಚಿಂತಿತನಾಗಿ, ತನ್ನನ್ನು ತಾನು ಸರಿಪಡಿಸಿಕೊಂಡು ಬಾಳಲು ಪ್ರಯತ್ನಿಸುವ ಹಂತದಲ್ಲಿ ಈ ಬಗೆಯ ಆಲೋಚನೆಗಳು ಮನದಲ್ಲಿ ಮೂಡುತ್ತವೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: