ಕವಿತೆ: ಉತ್ಸವ

ಜ್ಯೋತಿ ಬಸವರಾಜ ದೇವಣಗಾವ.

ಹೇಳಿಕೆ, ಕಾರಣಿಕ, ಬಿಡಿಸಲಾರದ ಒಗಟು
ಅರ‌್ತೈಸಿಕೊಂಡಂತೆ ಅರ‌್ತ
ಒಪ್ಪಿಸಿಕೊಂಡಶ್ಟು ವಿಶಾಲ
ಅರಿತವರು ಮೌನ

ಹರಕೆ ಕುರಿ, ಕೋಣ, ಕೋಳಿ
ಚಪ್ಪರಿಸಲುಂಟು ಕತ್ತು ಸೀಳಿ
ನೆತ್ತರ ಓಕುಳಿಗೆ ನೆಲವೆಲ್ಲ
ಕಮಟು ಗಮಲು, ಜನಕೆ ನಶೆ ಅಮಲು

ಸಾಲ, ಸಂಕಟ, ಯಾವ ಪರಿವೂ ಇಲ್ಲ
ಉತ್ಸವ ಸಾಂಗವಾಗಿ ಪೂರ‌್ಣ
ಮತ್ತೆರಡು ವರ‌್ಶ ಬಡ್ಡಿಗೆ ಜೀತ
ಜೀವ ತೇಯ್ದು ದೀನನಾದ ಬಕ್ತ

ಕರುಳುವ್ವ, ಅರಳಲು ನೀಡದ
ಹಣ ಹರಕೆಗೆ ಕಾಯ್ದಿಟ್ಟು
ಬೆಳಕಾಗಬೇಕಾದ ಅವಳೇ
ಕತ್ತಲಿಗೆ ಸರಿಸಿದಳು
ಇನ್ನೆರಡು ವರುಶ ಕೂಲಿಯಾಳು

ಹರಿದ ಅಂಗಿ, ಸೀರೆ, ಲಂಗ, ಹೊಸತಾದವು
ಚೌಡವ್ವನ ಸೀರೆಯಶ್ಟಲ್ಲ
ಹಬ್ಬದ ನೆಪದಿ ಹೊಟ್ಟೆ ತುಂಬುವಶ್ಟು ಬಾಡೂಟ
ಕೂಲಿಗೆ ವಿರಾಮ, ಆರಾಮ

ಮತ್ತೆಂದು ಬರುವದು ಉತ್ಸವ, ಕನವರಿಕೆ
ಅವ್ವ ಬೆಚ್ಚುವಳು ಕರ‌್ಚು ಹೊಂದಿಸಲು
ಅಪ್ಪ ತಯಾರ್ ಕುಡಿದು ತೇಲುವ ಮೋಜಿಗೆ
ನನಗೋ ಎಲ್ಲವೂ ಬೆರಗು

ಈಗೀಗ, ಬೇಕಿತ್ತಾ ಇದೆಲ್ಲ, ಬಕ್ತಿಯ ಸವಾರಿ
ಮೋಜಿನ ಕುದುರೆ ಮೇಲೆ
ಅನ್ನ ಚಿನ್ನವಾಗಿಲ್ಲ ತ್ರುಣವಾಗಿದೆ
ಬೆನ್ನೇರಿ ಕಲಿ ಕೂತರು ಎಚ್ಚರಿಲ್ಲ

ಪಂಗಡ, ಗರ‌್ಶಣೆ, ಮೇಲಾಟ ಪ್ರದರ‌್ಶನ
ಈ ಕಾಲದ ದೈವವೂ ಮೂಕವೋ
ಅವರಿತ್ತ ಶಾಪದ ಬಾಶೆ ತಿಳಿದಿಲ್ಲವೋ
ರೂಪ ಬದಲಿಸಿ ಶಿಕ್ಶಿಸುತ್ತಿವೆಯೋ

ತಿಳಿವು ಬದಲಾಗಿ, ಅರಿವಿನೆಡೆ
ಎದೆ ಹಾಡ ಜಾಡ ಹುಡುಕಿ
ಗೋಡೆಗಳು ಉರುಳಿ ಹೊಸ ದಿಗಂತದಿ
ಚೈತನ್ಯ ಚಿಮ್ಮಿಬರಲಿ ಹೊಸರಕ್ತಕೆ

ಉತ್ಸವಗಳು ತೋರಣಗಳಾಗಲಿ
ನವ ಮನ್ವಂತರಕ್ಕೆ, ಮೌಡ್ಯವಳಿದು,
ಒಗ್ಗಟ್ಟಬಲ ಹೊಸ ದಾರಿ ಪಯಣಕ್ಕೆ
ಸಾಗುತ್ತಿರಲಿ ಪ್ರಗತಿಯತ್ತ

(ಚಿತ್ರ ಸೆಲೆ: travelbeginsat40.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Jyothi s Desai says:

    ಧನ್ಯವಾದ

ಅನಿಸಿಕೆ ಬರೆಯಿರಿ:

%d bloggers like this: