ಮಕ್ಕಳ ಕತೆ : ಹಿಟ್ಟಿನ ಬೊಂಬೆಯ ಚೆಂಗಪ್ಪ
ಹಳೇ ಚೆಂಬೂರು ಎಂಬ ಊರಿನಲ್ಲಿ ಗುಂಡಪ್ಪ ಮತ್ತು ಗುಂಡಮ್ಮ ಇರುತ್ತಿದ್ದರು. ಗುಂಡಪ್ಪನಿಗೆ ಮೂವತ್ತು ಎಕರೆ ಹೊಲ ಮೂರು ಜೋಡಿ ಎತ್ತುಗಳು, ಇಪ್ಪತ್ತು ಎಮ್ಮೆಗಳು, ಹತ್ತು ದನಗಳು, ಐದು ಆಡುಗಳು, ಮೂರು ಕುರಿಗಳು ಇದ್ದವು. ಗುಂಡಪ್ಪ ಮುಂಜಾನೆ ನಸುಕಿನಲ್ಲಿ ತನ್ನ ಹೊಲಗಳನ್ನು ನೋಡಿಕೊಳ್ಳಲು ಹೋಗುತ್ತಿದ್ದ. ನಡುಹೊತ್ತಿಗೆ ಅವನ ಹೆಂಡತಿ ಗುಂಡಮ್ಮ ಬಗೆ ಬಗೆಯ ಊಟ ತಿಂಡಿಗಳನ್ನು ಮಾಡುತ್ತಿದ್ದಳು. ಗೆಜ್ಜೆಗಳನ್ನು ಕಟ್ಟಿದ ಎತ್ತಿನ ಬಂಡಿಯಲ್ಲಿ ಕೂತುಕೊಂಡು ಹೊಲಕ್ಕೆ ಬುತ್ತಿಯನ್ನು ತೆಗೆದುಕೊಂಡು ಬರುತ್ತಿದ್ದಳು. ಗುಂಡಪ್ಪನೂ ತನ್ನ ಹೆಂಡತಿಗೆ ಎಲ್ಲ ಅನುಕೂಲ ಇರುವ ದೊಡ್ಡದಾದ ಮನೆಯನ್ನು ಕಟ್ಟಿಸಿದ್ದ. ಗುಂಡಪ್ಪ ಮತ್ತು ಗುಂಡಮ್ಮರಿಗೆ ಒಟ್ಟು ನಾಲ್ಕು ಮಂದಿ ಮಕ್ಕಳು. ಅವರಿಗೆ ಇನ್ನೂ ನಾಲ್ಕು ಮಕ್ಕಳು ಹುಟ್ಟಿದ್ದವು, ಆದರೆ ಹುಟ್ಟಿದ ಕೆಲವು ದಿನಗಳಲ್ಲಿ ಸತ್ತು ಹೋಗಿದ್ದವು. ಬದುಕಿದ ನಾಲ್ಕು ಮಕ್ಕಳನ್ನು ಹೊಲವನ್ನೂ ದನಕರು ಆಡುಕುರಿಗಳನ್ನು ಸಾಕುತ್ತಾ ಗುಂಡಪ್ಪ ಸಿರಿವಂತನಾಗಿದ್ದನು.
ಬೆಲ್ಲಕ್ಕೆ ಇರುವೆ ಹೆಚ್ಚು ಅಂದ ಹಾಗೆ ಗುಂಡಪ್ಪನಿಗೆ ಗೆಳೆಯರು ಅಂತ ಹೇಳಿಕೊಂಡು ಅವನ ಮನೆಯಲ್ಲಿ ಪದೇ ಪದೇ ಊಟಕ್ಕೆ ಬರುವವರ ಎಣಿಕೆ ಹೆಚ್ಚಾಗಿತ್ತು. ಗುಂಡಪ್ಪನೂ ಯಾರಿಗೂ ಕಡಿಮೆಯಿಲ್ಲದಂತೆ ಸಿಕ್ಕ ಸಿಕ್ಕವರನ್ನು ಮನೆಗೆ ಊಟಕ್ಕೆ ಕರೆದು ತರುತ್ತಿದ್ದನು. ಮನೆಯಲ್ಲಿ ಗುಂಡಮ್ಮನಿಗೆ ಮಕ್ಕಳಿಗೆ, ಗಂಡನಿಗೂ ಅತ್ತೆಗೂ ಅಲ್ಲದೇ ಮನೆಗೆ ಯಾವಾಗಲೂ ಬರುತ್ತಿದ್ದ ನೆಂಟರಿಗೂ ಅಡುಗೆ ಮಾಡಿ ಮಾಡಿ ಸಾಕಾಗಿತ್ತು. ಇದರ ಮೇಲೆ ತನ್ನ ಗಂಡ ಸಿಕ್ಕಸಿಕ್ಕವರನ್ನು ಮನೆಗೆ ಕರೆದು ತಂದು ಅವರಿಗೆ ಗಡದ್ದಾಗಿ ಊಟ ಹಾಕಿಸುತ್ತಿದ್ದರಿಂದ ಅವಳಿಗೆ ತಲೆ ಚಿಟ್ಟು ಹಿಡಿಯುವುದು ಬಾಕಿ ಉಳಿದಿತ್ತು. ಒಂದು ಸಲ ಗುಂಡಪ್ಪ ತನ್ನ ನಾಲ್ಕು ನೆಂಟರನ್ನು ಮನೆಗೆ ಕರೆತಂದ. ನೆಂಟರು ಬೇಗ ಮನೆಯಿಂದ ಹೋಗಲಿ ಅಂತ ಗುಂಡಮ್ಮ ಹಾಗಲಕಾಯಿ ಪಲ್ಯ ಮಾಡಿದಳು. ಅವನ ನೆಂಟರು ಅದರ ಮೇಲೆ ಸಕ್ಕರೆ ಉದುರಿಸಿಕೊಂಡು ತಿಂದರು ಆದರೆ ಮನೆ ಬಿಟ್ಟು ಹೋಗಲಿಲ್ಲ. ಮತ್ತೊಂದು ದಿನ ಸೀದು ಹೋದ ರೊಟ್ಟಿಗಳನ್ನು ಉಣ್ಣಲಿಕ್ಕೆ ಕೊಟ್ಟಳು. ಅದಕ್ಕೆ ನೆಂಟರು “ನಮಗೆ ಮೆತ್ತನೆಯ ರೊಟ್ಟಿ ಹಿಡಿಸದು ನಮಗೆ ಕರಕಾದ ರೊಟ್ಟಿಯೇ ಇಶ್ಟ” ಅಂದರು. ಮಗದೊಂದು ದಿನ ಅವರಿಗೆ ತಿನ್ನಲು ಹಸಿ ಬೆಂಡೆಕಾಯಿ ಕೊಟ್ಟಳು. ಅವರು “ನಮ್ಮ ಪಿತ್ತ ಕಡಿಮೆಯಾಗುತ್ತದೆ” ಅಂತ ಹೇಳಿ ಹಸಿ ಬೆಂಡೆ ಕಾಯಿಗಳನ್ನು ಹಾಗೇ ತಿಂದರು. ಆದರೆ ಮನೆ ಬಿಟ್ಟು ಹೋಗಲಿಲ್ಲ. ದಿನೇ ದಿನೇ ಮನೆಗೆ ಬರುವ ನೆಂಟರ ಎಣಿಕೆ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ! ಹೀಗೆ ಒಂದು ಮಳೆಗಾಲದ ದಿನ, ಸೌದೆ ಇಡುವ ಚಪ್ಪರವನ್ನು ಸರಿಯಾಗಿ ಬಿಗಿಯಾಗಿ ಕಟ್ಟಿರಲಿಲ್ಲ. ಹೀಗಾಗಿ ಅದು ಮಳೆ ಗಾಳಿಗೆ ಬಿದ್ದು ಮಳೆ ನೀರೆಲ್ಲ ಕಟ್ಟಿಗೆಗಳ ಮೇಲೆ ಸುರಿದು ತೊಯ್ದು ಹೋಗಿದ್ದವು. ಅಡುಗೆ ಮಾಡುವಾಗ ಹಸಿ ಸೌದೆ ಸರಿಯಾಗಿ ಉರಿಯದೆ ಅಡುಗೆ ಮನೆಯೆಲ್ಲ ಹೊಗೆಯಿಂದ ತುಂಬಿ ಹೋಯ್ತು. ಊದು ಕೊಳವೆಯಿಂದ ಗಾಳಿ ಊದಿ ಊದಿ ಅಡುಗೆ ಮಾಡುತ್ತಿದ್ದ ಗುಂಡಮ್ಮಳ ಸಿಟ್ಟು ಅವಳ ತಲೆಗೆ ಏರಿತ್ತು.
ಗುಂಡಪ್ಪ ಹೊಲಕ್ಕೆ ಹೋಗುತ್ತಿರುವಾಗ ಎದುರಿಗೆ ಅವನ ಹಳೇ ಪರಿಚಯದ ನೆಂಟನೊಬ್ಬ ಬರುತ್ತಿದ್ದ. ಅವನು ಇವನನ್ನು , ಇವನು ಅವನನ್ನು ಗುರುತು ಹಿಡಿದು ಒಬ್ಬರದೊಬ್ಬರ ಕೊರಳಿಗೆ ಬಿದ್ದು ನಗಾಡುತ್ತಾ ಮನೆಗೆ ಬಂದರು. ಗುಂಡಮ್ಮನ ಚಿಕ್ಕ ಮಗಳು ಓಡೋಡಿ ಅಡುಗೆ ಮನೆಗೆ ಬಂದು “ಅಪ್ಪ ಯಾರೋ ನಮ್ಮ ದೂರದ ನೆಂಟನನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ” ಅಂತ ಹೇಳಿದಳು. ಕೆರಳಿ ಕೆಂಡವಾದ ಗುಂಡಮ್ಮ ಇವತ್ತು ಈ ತಡೆಯಿಲ್ಲದ ಊಟ ಉಪಚಾರಕ್ಕೆ ಕೊನೆ ಹಾಡುತ್ತೇನೆ ಅಂತ ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡಳು. ತನ್ನ ನೆಂಟನನ್ನು ಪಡಸಾಲೆಯಲ್ಲಿ ಗುಂಡಪ್ಪ ಕೂರಿಸಿದ. ಕುಶಿಯಿಂದ ಅಡುಗೆ ಮನೆ ಕಡೆಗೆ ಬಂದು ತನ್ನ ಹೆಂಡತಿಗೆ “ಇವತ್ತು ನಮ್ಮ ದೂರದ ನೆಂಟನೊಬ್ಬ ಬಂದಿದ್ದಾನೆ. ಅವನಿಗಾಗಿ ಏನು ಮಾಡುವಿ?” ಅಂತ ಕೇಳಿದ. ಅದಕ್ಕೆ ಅವಳು “ದಿನೇ ದಿನೇ ನೀನು ಕರೆದುಕೊಂಡು ಬರುವ ನೆಂಟರು ಗೆಳೆಯರು ಇವರಿಗೆಲ್ಲಾ ಊಟ ಉಪಚಾರ ಮಾಡಿ ಮಾಡಿ ಸಾಕಾಗಿದೆ, ನನ್ನಲ್ಲಿ ಜೀವ ಇನ್ನೂ ಉಳಿದಿರುವದರಿಂದ ನಿಮ್ಮೆಲ್ಲರಿಗಾಗಿ ಹಾಲ್ಬಾಯಿ ಮತ್ತು ಉದ್ದಿನ ವಡೆ ಮಾಡುತ್ತೇನೆ” ಅಂದಳು. ಇನ್ನಶ್ಟು ಕುಶಿಯಾದ ಗುಂಡಪ್ಪ. ಗುಂಡಮ್ಮ “ನಾಲ್ಕು ತೆಂಗಿನಕಾಯಿ ಸುಲಿದು ಕೊಡು” ಅಂತ ತನ್ನ ಗಂಡನಿಗೆ ಒಯ್ಯಾರದಿಂದ ಹೇಳಿದಳು. ಗುಂಡಪ್ಪ ಅಟ್ಟದ ಮೇಲಿನಿಂದ ತೆಂಗು ಸುಲಿಯುವ ಕತ್ತಿಯನ್ನು, ನಾಲ್ಕು ಒಣ ತೆಂಗಿನಕಾಯಿ ತೆಗೆದುಕೊಂಡು ಹಿತ್ತಲಿನ ಕಡೆ ಹೋಗಿ ಸುಲಿಯ ತೊಡಗಿದ.
ಗುಂಡಮ್ಮ ತನ್ನ ಎಲ್ಲ ನಾಲ್ಕೂ ಮಕ್ಕಳನ್ನು ಅಡುಗೆ ಮನೆಗೆ ಕರೆತಂದಳು. ನಡುವಿನ ಮಗನಿಗೆ ಹೋಗಿ ನೆಂಟನ ಹೆಸರೇನು ಎಂಬುದು ತಿಳಿಕೊಂಡು ಬಾ ಅಂತ ಕಳಿಸಿದಳು. ನಡುವಿನ ಮಗ ಹೊರಗೆ ಹೋಗಿ, ನೆಂಟನಿಗೆ ಅವನ ಹೆಸರನ್ನು ಕೇಳಿ, ತನ್ನ ತಾಯಿಗೆ ಬಂದು ಅವನ ಹೆಸರು ಚೆಂಗಪ್ಪ ಅಂತ ಇದೆ ಅಂದ. ಗುಂಡಮ್ಮ ಒಂದು ದೊಡ್ಡ ಕಂಚಿನ ಗಂಗಾಳದಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಂಡಳು. ಮಕ್ಕಳು “ಏನಮ್ಮಾ ಮಾಡ್ತಾ ಇದ್ದೀಯಾ?” ಅಂತ ಕೇಳಿದವು. ಗುಂಡಮ್ಮ ಗಟ್ಟಿಯಾದ ದನಿಯಲ್ಲಿ ಹೊರಗೂ ಕೇಳಿಹೋಗುವ ಹಾಗೆ “ನಾನು ಇವತ್ತು ತಿನ್ನಲಿಕ್ಕೆ ಚೆಂಗಪ್ಪ ಮಾಡುತ್ತಿದ್ದೇನೆ” ಅಂತ ಕೂಗಿ ಹೇಳಿದಳು. ಇದು ಹೊರಗೆ ಜಗಲಿಯಲ್ಲಿ ಕೂತಿದ್ದ ಚೆಂಗಪ್ಪನಿಗೆ ಕೇಳಿಸಿತು. ಅವನು ಗಮನ ಕೊಟ್ಟು ಅಡುಗೆ ಮನೆ ಕಡೆಗೆ ತನ್ನ ಕಿವಿ ತಿರುಗಿಸಿದ. ಗುಂಡಮ್ಮ ಅಕ್ಕಿಹಿಟ್ಟಿಗೆ ಬಿಸಿನೀರು ಹಾಕಿ ಕಲಸಿದಳು. ಮಕ್ಕಳು “ಅಮ್ಮಾ ಚೆಂಗಪ್ಪ ಮಾಡಲು ಬಿಸಿನೀರು ಹಾಕಬೇಕೆನಮ್ಮಾ?” ಅಂದವು. ಅದಕ್ಕೆ ಗುಂಡಮ್ಮ “ಹೌದು, ಬಿಸಿನೀರು ಹಾಕಿ ಚೆಂಗಪ್ಪ ಮಾಡಿದರೆ ಮೆತ್ತಗೆ ಆಗುತ್ತಾನೆ, ತಣ್ಣೀರು ಹಾಕಿ ಮಾಡಿದರೆ ಗಟ್ಟಿ ಆಗುತ್ತಾನೆ” ಅಂದಳು. ಇದು ಪಡಸಾಲೆಯಲ್ಲಿದ್ದ ಚೆಂಗಪ್ಪನಿಗೆ ಕೇಳಿಸಿತು, ಅವನ ಹಣೆ ಬೆವರತೊಡಗಿತು.
ಇತ್ತ ಹಿತ್ತಲು ಕಡೆಯಿಂದ ಗುಂಡಪ್ಪ ಕೂಗಿ “ಲೋ ಚೆಂಗಪ್ಪ ನಿನಗೆ ಬಿಸಿನೀರು ಬೇಕೋ ತಣ್ಣೀರು ಬೇಕೋ?” ಅಂತ ಕೇಳಿದ. ಚೆಂಗಪ್ಪ ಹೆದರಿಹೋದ, ಏನೂ ಉತ್ತರ ಹೇಳಲಿಲ್ಲ. ಗುಂಡಪ್ಪ ಜಳಕಕ್ಕೆ ನೀರಿನ ಬಗ್ಗೆ ಕೇಳುತ್ತಾ ಇದ್ದಾನೆ ಅಂತ ಚೆಂಗಪ್ಪನಿಗೆ ಗೊತ್ತಾಗಲಿಲ್ಲ! ಅಡುಗೆ ಮನೆಯಲ್ಲಿ ಗುಂಡಮ್ಮ ಕಲಸಿದ ಕಣಕದಿಂದ ತಲೆ, ಕೈಗಳು, ಕಾಲುಗಳು, ದೊಡ್ಡ ಮೂಗು, ಕಣ್ಣುಗಳು, ಕಿವಿಯಿದ್ದ ಮನುಶ್ಯನ ಬೊಂಬೆ ಮಾಡಿದಳು. ಒಂದು ಕಡಾಯಿಯಲ್ಲಿ ಎಣ್ಣೆ ಕಾಯಲು ಇಟ್ಟಳು. ಹಿರಿ ಮಗ “ಅಮ್ಮಾ ಕಡಾಯಿಯಲ್ಲಿ ಎಣ್ಣೆ ಯಾಕೆ ಕಾಯಿಸುತ್ತಾ ಇದ್ದಿಯಾ?” ಅಂತ ಕೇಳಿದ. ಅದಕ್ಕೆ ಗುಂಡಮ್ಮ ಮೊದಲು ಈ ಚೆಂಗಪ್ಪನಿಗೆ ಚೆನ್ನಾಗಿ ಕಾದ ಬಿಸಿ ಬಿಸಿ ಎಣ್ಣೆ ಹಚ್ಚಬೇಕು” ಅಂದಳು. ಗುಂಡಪ್ಪ ಹಿತ್ತಲಿನಿಂದಲೇ “ಲೋ ಚೆಂಗಪ್ಪ ನಿನಗೆ ಬಿಸಿ ಎಣ್ಣೆ ಬೇಕೋ? ಇಲ್ಲವೇ ಹಾಗೇ ಹಚ್ಚಿಕೊಳ್ಳುತ್ತಿಯೋ?” ಅಂತ ಜೋರಾಗಿ ಕೂಗಿ ಕೇಳಿದ. ಅದಕ್ಕೂ ಚೆಂಗಪ್ಪ ಏನೂ ಹೇಳದೆ ಕಲ್ಲಿನಂತೆ ಹಾಗೇ ಕೂತ. ಚೆಂಗಪ್ಪನ ಎದೆ ಡವಡವ ಹೊಡೆದುಕೊಳ್ಳಹತ್ತಿತು.
ಅಡುಗೆ ಮನೆಯಲ್ಲಿ ಗುಂಡಮ್ಮ ಬೊಂಬೆ ಮಾಡುವದನ್ನು ನೋಡಿ ಸಂತಸಪಟ್ಟ ಮಕ್ಕಳು ತಮ್ಮ ತಮ್ಮಲ್ಲೇ ಜಗಳವಾಡತೊಡಗಿದವು. ಚಿಕ್ಕಮಗಳು ಅಳುತ್ತಾ “ಅಮ್ಮಾ ನನಗೆ ಚೆಂಗಪ್ಪನ ತಲೆ ಬೇಕಮ್ಮಾ” ಅಂತ ಹೇಳಿದಳು. ದೊಡ್ಡಮಗ “ಅಮ್ಮಾ ಚೆಂಗಪ್ಪನ ಕೈಕಾಲು ನಾನು ತಿನ್ನುತ್ತೇನಮ್ಮಾ ಅವುಗಳನ್ನು ನನಗೇ ಕೊಡಬೇಕಮ್ಮ” ಅಂದ. ಅದಕ್ಕೆ ಗುಂಡಮ್ಮ “ನಿನ್ನ ಅಪ್ಪ ಬರಲಿ ಅವನಿಗೆ ಕೇಳಿ ನಿನಗೆ ಏನು ಬೇಕೋ ಅದನ್ನು ಕೊಯ್ದು ಕೊಡುತ್ತೇನೆ” ಅಂದಳು. ಮಕ್ಕಳು “ಚೆಂಗಪ್ಪನನ್ನು ನಾನೇ ಪೂರಾ ತಿನ್ನುತ್ತೇನೆ ನಿಮಗೆ ಯಾರಿಗೂ ಕೊಡಲ್ಲ” , “ಚೆಂಗಪ್ಪ ನನಗೇ ಬೇಕು, ನಾನು ಅವನ ಹೊಟ್ಟೆ ತಿನ್ನುತ್ತೇನೆ” ಅಂತ ಬೊಂಬೆ ನೋಡುತ್ತಾ ಜಗಳವಾಡುತ್ತಿದ್ದರು. ಇದನ್ನು ಗಮನ ಕೊಟ್ಟು ಚೆಂಗಪ್ಪ ಕೇಳಿ ಹೌಹಾರಿದ. ಇವತ್ತು ಇವರು ಹೇಗೂ ನನ್ನನ್ನು ಕೊಂದು ತಿನ್ನುವರು. ಇವರ ಕೈಯಿಂದ ನಾನು ತಪ್ಪಿಸಿಕೊಂಡು ಹೋಗಲೇಬೇಕು, ನಾನು ಗುಂಡಪ್ಪನ ಮಾತು ಕೇಳಿ ಅವನ ಜೊತೆ ಇಲ್ಲಿಗೆ ಬರಬಾರದಾಗಿತ್ತು ಅಂತ ಮೇಲೆ ಎದ್ದ.
ನಾನಿಶ್ಟು ಕೂಗಿದರೂ ಕೇಳದ ಚೆಂಗಪ್ಪ ಏನು ಮಾಡುತ್ತಿದ್ದಾನೆ ಅಂತ ಗುಂಡಪ್ಪ ಹಿತ್ತಲ ಕಡೆಯಿಂದ ಪಡಸಾಲೆಗೆ ಬಂದ. ಅವನ ಕೈಯಲ್ಲಿ ತೆಂಗು ಸುಲಿಯುವ ಕತ್ತಿ ಇನ್ನೂ ಹಾಗೇ ಇತ್ತು. ಗುಂಡಪ್ಪ ಮತ್ತೊಂದು ಸಲ “ಲೋ ಚೆಂಗಪ್ಪ ನಿನಗೆ ಬಿಸಿ ನೀರು ಕಾಯಿಸಲೋ ತಣ್ಣೀರೇ ಸಾಕೋ? ನಿನಗೆ ಬಿಸಿ ಎಣ್ಣೆ ಬೇಕೋ ಇಲ್ಲವೇ ಹಾಗೆ ಹಚ್ಚಿಕೊಳ್ಳುತ್ತಿಯೋ?” ಅಂತ ಕೇಳಿದ. ಗುಂಡಪ್ಪನನ್ನೂ ಅವನ ಕೈಯಲ್ಲಿದ್ದ ಕತ್ತಿಯನ್ನು ನೋಡಿದ ಚೆಂಗಪ್ಪ ತನ್ನ ಪಂಚೆಯನ್ನು ಒಂದು ಕೈಯಲ್ಲಿ ಬಿಗಿಯಾಗಿ ಹಿಡುಕೊಂಡು, ಮತ್ತೊಂದು ಕೈಯಿಂದ ಬೊಬ್ಬೆ ಹೊಡೆದು ಕೊಳ್ಳುತ್ತಾ ಸುರಿಯುತ್ತಿದ್ದ ಮಳೆಯಲ್ಲೇ ಕೆಸರನ್ನು ಪಚಪಚನೆ ತುಳಿಯುತ್ತಾ ಓಡಿಹೋದ. ತನ್ನ ನೆಂಟನು ಬರುವಾಗ ಕುಣಿಗೇರಿ(ಅಂದರೆ ಸ್ಮಶಾನ) ಕಡೆಯಿಂದ ಬಂದಿದ್ದನು. ಅದಕ್ಕೆ ಅವನಿಗೆ ದೆವ್ವ ಹಿಡಿದುಕೊಂಡಿದೆ ಅಂತ ತಿಳಿದ ಗುಂಡಪ್ಪ ಅವನ ಹಿಂದೆಯೇ “ಚೆಂಗಪ್ಪ ನಿಲ್ಲೋ, ಚೆಂಗಪ್ಪ ನಿಲ್ಲೋ” ಅಂತ ಕೂಗುತ್ತಾ ಅವನ ಬೆನ್ನಟ್ಟಿದ. ಗುಂಡಪ್ಪ ತನ್ನನ್ನು ಕತ್ತಿ ಹಿಡಿದುಕೊಂಡು ಬೆನ್ನಟ್ಟುವುದನ್ನು ನೋಡಿ ಚೆಂಗಪ್ಪ ಇನ್ನೂ ಜೋರಾಗಿ ಓಡತೊಡಗಿದ. ಮನೆ ಪಡಸಾಲೆಗೆ ಬಂದು ಗುಂಡಮ್ಮ ಇದನ್ನೆಲ್ಲಾ ನೋಡಿ ತನ್ನ ಹಂಚಿಕೆ ಪಲಕೊಟ್ಟಿತು ಅಂತ ಸಮಾದಾನ ಪಟ್ಟುಕೊಂಡಳು. ಅಡುಗೆ ಮನೆಗೆ ಹೋಗಿ ಶಾಂತಿಯಿಂದ ಉದ್ದಿನ ವಡೆ ಮತ್ತು ಹಾಲ್ಬಾಯಿ ಮಾಡಿದಳು.
(ಚಿತ್ರ ಸೆಲೆ: reddit.com)
ಇತ್ತೀಚಿನ ಅನಿಸಿಕೆಗಳು