‘ಬಟಾಲ್ಲಾ ಡೆಲ್ ವಿನೊ’ – ಸ್ಪೇನಿನ ವೈನ್ ಪೆಸ್ಟಿವಲ್
ಪ್ರತಿ ವರ‍್ಶ ಬೇಸಿಗೆಯ ಜೂನ್ 29ರಂದು ಉತ್ತರ ಸ್ಪೈನ್‍ನ ಲಾ-ರಿಯೋಜಾದಲ್ಲಿ ಒಂದು ಸಾಂಪ್ರದಾಯಿಕ ವಿಲಕ್ಶಣ ಹಬ್ಬ ನಡೆಸುವ ಪರಿಪಾಟವಿದೆ. ಅದೇ ಹಾರೋ ವೈನ್ ಪೆಸ್ಟಿವಲ್. ಜೂನ್ 29, ಸಂತ ಸಾನ್ ಪೆಡ್ರೋನ ದಿನ. ಈ ಹಬ್ಬದ ಮೂಲ ಉದ್ದೇಶ ಸ್ತಳೀಯ ವೈನಿನ ಜೊತೆ ಸಾದ್ಯವಾದಶ್ಟೂ ವಿನೋದವನ್ನು ಹಂಚಿಕೊಳ್ಳುವುದು. ವೈನ್ ಕುಡಿಯುವ ಸ್ಪರ‍್ದೆಯಲ್ಲಿ ಪಾಲ್ಗೊಳ್ಳುವುದು ಒಂದಾದರೆ ಎಲ್ಲರಿಗೂ ಅತಿ ಹೆಚ್ಚು ಮನರಂಜನೆ ನೀಡುವುದು ವೈನನ್ನು ಮತ್ತೊಬ್ಬರ ಮೇಲೆ ಎರಚುವ ಆಟ. ವಾಟರ್ ಗನ್‍ಗಳಲ್ಲಿ (ಪಿಚಕಾರಿಗಳು) ವೈನನ್ನು ತುಂಬಿ ಎದುರಿಗೆ ಬಂದವರಿಗೆ ತಮಗೆ ಎರಚಿದವರಿಗೆ ಶೂಟ್ ಮಾಡುವುದು, ಮದ್ಯೆ, ಮದ್ಯೆ ವೈನ್ ಕುಡಿಯುತ್ತಾ ಅದರಲ್ಲೇ ಮುಳುಗುತ್ತಾ ಆನಂದಿಸುವುದು. ಇದನ್ನೇ ‘ಬಟಾಲ್ಲಾ ಡೆಲ್ ವಿನೊ’ ಅಂದರೆ ದ ಬ್ಯಾಟಲ್ ಆಪ್ ವೈನ್ ಅನ್ನುವುದು.
ವೈನನ್ನು ಕುಡಿದು ಸಂತೋಶಪಡುವುದರ ಜೊತೆಗೆ ಪಿಚಕಾರಿಗಳು, ಬಕೆಟ್‍ಗಳು, ಪಾತ್ರೆ ಪಗಡಗಳು, ಮಗ್‍ಗಳಲ್ಲಿ ವೈನ್ ತುಂಬಿ ಎರಚಬಹುದಾದಂತ ಯಾವುದೇ ದಾರಕವಿರಲಿ ಅದನ್ನು ಅಣಿ ಮಾಡಿಕೊಂಡ ಸನ್ನದ್ದರಾಗುತ್ತಾರೆ ಅಲ್ಲಿನ ಜನ. ಇವೇ ವೈನ್ ಯುದ್ದದ ಆಯುದಗಳು. ಅಂದು ಸಶಸ್ತ್ರವಾಗಿ ಆಗಮಿಸುವ ಅವರು ತಮ್ಮನ್ನು ತಾವೇ ವೈನಿನಲ್ಲಿ ತೊಯ್ದುಕೊಳ್ಳುವದಲ್ಲದೆ ಆ ಪ್ರದೇಶದಲ್ಲಿ ಕಂಡುಬರುವ ಎಲ್ಲರಿಗೂ ವೈನಿನ ಅಬಿಶೇಕ ಮಾಡುತ್ತಾರೆ.
“ಬೇಸಿಗೆಯಲ್ಲಿ, ಹವಾಮಾನ ಉತ್ತಮವಾಗಿದ್ದಾಗ, ವೈನನ್ನು ಸುರಿದುಕೊಳ್ಳಿ” ಎಂಬುದು ‘ಬಟಾಲ್ಲಾ ಡೆಲ್ ವಿನೊ’ದ ಗೋಶ ವಾಕ್ಯ. ಸ್ತಳೀಯರು ಉತ್ಸವದ ಅದಿಕ್ರುತ ಪ್ರಾರಂಬಕ್ಕೆ ಕಾಯುವುದಿಲ್ಲ. ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಬಿಸುತ್ತಾರೆ. ಹಾರೋದ ಮೇಯರ್ ಕುದುರೆ ಏರಿ ಆ ದಿನದ ಮರವಣಿಗೆಯ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. ಮಕ್ಕಳು, ಯುವಕರು, ಹಿರಿಯರು, ಮುದುಕರು ಹೀಗೆ ಎಲ್ಲಾ ವಯೋಮಾನದವರು ಈ ಮೆರವಣಿಗೆಯಲ್ಲಿ ಬಾಗವಹಿಸುವುದು ಸಾಮಾನ್ಯ. ಮೇಯರ್ ಸಾರತ್ಯದ ಈ ಮೆರವಣಿಗೆ ಊರಿನ ಪ್ರಮುಕ ರಸ್ತೆಗಳಲ್ಲಿ ಸುತ್ತಾಡಿ ಕೊನೆಗೆ ತಲುಪುವುದು ಬಿಲಿಬಿಯೊ ಕಮರಿಯ ಬಳಿಯ ಸಂತ ಸಾನ್ ಪೆಲಿಸ್ ಡಿ ಬಿಲಿಬಿಯೊ ಆಶ್ರಮಕ್ಕೆ. ಅಲ್ಲಿ ದ್ವಜ ಸಮರ‍್ಪಣೆಯ ನಂತರ ವೈನ್ ಮತ್ತು ಬ್ರೆಡ್‍ನಿಂದ ದೇವರ ಪೂಜೆ ನಡೆಯುತ್ತದೆ. ಪ್ರಸಾದ ಸ್ವೀಕರಣೆಯೊಂದಿಗೆ ಮೆರವಣಿಗೆ ಅಂತ್ಯಗೊಳ್ಳುತ್ತದೆ.
ಈ ಪೆಸ್ಟಿವಲ್‍ನ ದಿನ ದರಿಸಬೇಕಾದ ಉಡುಪಿನ ಬಗ್ಗೆ ಸ್ತಳೀಯರದೇ ಆದ ರೀತಿ ನೀತಿಯಿದೆ. ಪ್ರತಿಯೊಬ್ಬರೂ ಬಿಳಿ ಅಂಗಿ ದರಿಸಬೇಕಿರುವುದು ಕಡ್ಡಾಯ. ಕುತ್ತಿಗೆಗೆ ಕೆಂಪು ಬಣ್ಣದ ಅಂಗವಸ್ತ್ರವನ್ನು ಸುತ್ತಿಕೊಳ್ಳುಬೇಕು. ಜೊತೆಯಲ್ಲಿ ವೈನ್ ತುಂಬಿಸಿದ ಯಾವುದಾದರೂ ದಾರಕವನ್ನು ತರಬೇಕಿದೆ. ಇದಕ್ಕೆ ಸಂಪ್ರದಾಯವಾದಿಗಳು ಬಳಸುವುದು ‘ಬೋಟಾ’ ಎಂಬ ಚರ‍್ಮದಿಂದ ತಯಾರಿಸಿದ ಬಾಟಲ್. ವೈನಿನ ಯುದ್ದ ಸಂತ ಸಾನ್ ಪೆಲಿಸ್ ಡಿ ಬಿಲಿಬಿಯೊ ಆಶ್ರಮದ ಬಳಿ ಸಣ್ಣ ಪ್ರಮಾಣದಲ್ಲಿ ವೈನ್ ಎರೆಚುವಿಕೆಯಿಂದ ಆರಂಬವಾಗುತ್ತೆ. ಇದು ಮುಂದೆ ನಡೆಯುವ ಎರಚುವಿಕೆಯ ಜಳಕು ಮಾತ್ರ.
ಆಶ್ರಮದ ಬಳಿ ಸಣ್ಣ ಪ್ರಮಾಣದಲ್ಲಿ ಆರಂಬವಾಗುವ ಇದು ಕಾಡ್ಗಿಚ್ಚಿನಂತೆ ಎಲ್ಲೆಡೆ ಕ್ಶಣಾರ‍್ದದಲ್ಲಿ ಹರಡುತ್ತದೆ. ವೈನ್ ತುಂಬಿದ ದಾರಕ ಹಿಡಿದ ಸಾವಿರಾರು ಜನ ಸ್ತಳೀಯರು ಹಾಗೂ ಮನರಂಜನೆಗಾಗಿ ಬಂದ ಪ್ರವಾಸಿಗರು ತಮ್ಮ ಮನಸೋಯಿಚ್ಚೆ ಸುತ್ತಲೂ ವೈನನ್ನು ಎರಚಿ ಕುಶಿ ಪಡುತ್ತಾರೆ. ಇಡೀ ಪಟ್ಟಣದ ರಸ್ತೆಗಳನ್ನು ಕೆಂಪಾಗಿಸುತ್ತಾರೆ. ಯಾರ ಮೇಲೆ ಎರಚಬಾರದು ಯಾರ ಮೇಲೆ ಎರಚಬಹುದು ಎಂಬ ವಿವೇಚನೆ ಸಹ ಯಾರ ಮನಸ್ಸಿನಲ್ಲೂ ಸುಳಿಯುವುದಿಲ್ಲ. ಕರುಣೆಗೆ ಇಲ್ಲಿ ಸ್ತಳವಿಲ್ಲ. ದರಿಸಿರುವ ಬಟ್ಟೆ ನೆನೆಯದಂತೆ ಕಾಪಾಡಿಕೊಳ್ಳುವ ಸಾಹಸ ಇಲ್ಲಿ ನಡೆಯುವುದಿಲ್ಲ. ವೈನಿನ ಎರಚಾಟಿಕೆಯಿಂದ ತಪ್ಪಿಸಿಕೊಳ್ಳುವುದು ಅಸಾದ್ಯ. ಈ ವ್ಯರ‍್ತ ಸಾಹಸ ಮಾಡುವುದಕ್ಕಿಂತ ಗುಂಪಿನಲ್ಲಿ ಒಬ್ಬರಾಗಿ ಮ್ರುಗೀಯ ಆನಂದ ಅನುಬವಿಸುವುದು ಉತ್ತಮ.
ಉತ್ಸವಕ್ಕೆ ಸೇರಿದ್ದವರೆಲ್ಲಾ ತೊಯ್ದು ತೊಪ್ಪೆಯಾಗಿ ಸಾಕಪ್ಪಾ ಸಾಕು ಎಂದು ಸುಸ್ತಾಗಿ ವಿಶ್ರಾಮ ಬಯಸುವ ವೇಳೆಗೆ ಮದ್ಯಾಹ್ನವಾಗಿರುತ್ತದೆ. ಅಲ್ಲಿಗೆ ವೈನ್ ಯುದ್ದದ ಪ್ರತಮ ಹಂತ ಅಂತ್ಯ. ಪ್ರತಿ ವರ‍್ಶ ಏನಿಲ್ಲವೆಂದರೂ ಕನಿಶ್ಟ 50000 ಲೀಟರ‍್ನಶ್ಟು ರಿಯೊಜಾನ್ (ಕೆಂಪು ಬಣ್ಣದ ವೈನ್) ವೈನ್ ಈ ಉತ್ಸವದಲ್ಲಿ ಪೋಲಾಗುತ್ತದೆ. ರಸ್ತೆ ರಸ್ತೆಗಳಲ್ಲಿ ದಾರಾಕಾರವಾಗಿ ಹರಿಯುತ್ತದೆ. ಮನುಶ್ಯರು, ಮನೆಯ ಗೋಡೆಗಳು, ಮೋರಿಗಳು ಹಾಗೆಯೇ ಇಡೀ ಪಟ್ಟಣವನ್ನು ಕೆಂಪಾಗಿಸುತ್ತದೆ. ಮೊದಲ ಹಂತದ ನಂತರ ತ್ರುಪ್ತಿ ಹೊಂದಿದವರು, ಸುಸ್ತಾದವರು, ತಮ್ಮ ತೊಯ್ದ ಬಟ್ಟೆಯನ್ನು ಬಸವಳಿದ ದೇಹವನ್ನು ಹೊತ್ತು ಸಾಗುವುದು ಪ್ಲಾಜಾ ಡಿ ಲ ಪ್ಲಾಜ್‍ಗೆ. ಎರಡನೇ ಹಂತದ ಆಚರಣೆಗಾಗಿ. ಎರಡನೇ ಹಂತ ಸಹ ವೈನ್ ಎರಚಾಟದ ಹುಡುಗಾಟಿಕೆಯ ಮುಂದುವರೆದ ಬಾಗವಶ್ಟೆ.
ಅಂದು ಸಂಜೆ ಸ್ತಳೀಯ ಮೈದಾನದಲ್ಲಿ ಅಯೋಜಿಸಲಾಗುವ ಸ್ಪೇನಿನ ಪ್ರಸಿದ್ದ ಬುಲ್ ಪೈಟ್ ಈ ಉತ್ಸವದ ಕೊನೆಯ ಆಚರಣೆ. ಇದು ವೈನ್ ಪೆಸ್ಟಿವಲ್‍ಗೆ ತೆರೆ ಎಳೆಯುತ್ತದೆ. ಸ್ಪೇನಿನಲ್ಲಿ ನಡೆಯುವ ಪ್ರತಿಯೊಂದು ಗಟನೆಗೂ ಐತಿಹಾಸಿಕ ವಿವರಣೆಯಿದೆ. ಅಂತೆಯೇ ‘ಬಟಾಲ್ಲಾ ಡೆಲ್ ವಿನೊ’ದ ಹಿಂದೆ ಸಹ ಒಂದು ಕತೆಯಿದೆ. 13ನೇ ಶತಮಾನದಲ್ಲಿ ಬಿಲಿಬಿಯೊ ಬೆಟ್ಟದ ಮೇಲೆ ಹಾರೋ ಹಾಗೂ ನೆರೆಯ ಮಿರಂಡಾ ಡಿ ಎಬ್ರೊ ನಡುವೆ ಬೂಮಿಯ ಮೇಲಿನ ಹಕ್ಕಿಕಾಗಿ ನಡೆದ ಸಂಗರ‍್ಶವೇ ಇದಕ್ಕೆ ಮೂಲವಂತೆ. ಹತ್ತು ಸಾವಿರ ಜನಸಂಕ್ಯೆ ಹೊಂದಿರುವ ಹಾರೋ ಇರುವುದು ರಿಯೊಜಾ ಆಲ್ಟಾ ಎಂಬಲ್ಲಿ. ದೇಶದ ಶೇಕಡಾ 40ರಶ್ಟು ದ್ರಾಕ್ಶಿ ತೋಟಗಳು ಈ ಪ್ರದೇಶದಲ್ಲೇ ಇದೆ. ಇಲ್ಲಿನ ಬಹುತೇಕ ಬೂಮಿ ದ್ರಾಕ್ಶಿ ಬೆಳೆಗೆ ಮೀಸಲು. ಹಾಗಾಗಿ ಇಲ್ಲಿನ ಜನ ಸಹ ದ್ರಾಕ್ಶಿ ಬೆಳೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಇಲ್ಲಿ ಸ್ತಾಪನೆಯಾಗಿರುವ ವೈನ್ ಮ್ಯೂಸಿಯಂ ಹಾಗೂ ಯತೇಚ್ಚವಾಗಿ ಗಲ್ಲಿ ಗಲ್ಲಿಗಳಲ್ಲಿ ತಲೆಯೆತ್ತಿರುವ ವೈನ್ ಮಾರಾಟ ಕೇಂದ್ರಗಳು ಇಲ್ಲಿನ ಅದಿಕ ದ್ರಾಕ್ಶಿ ಬೆಳೆಗೆ ಸಾಕ್ಶಿ.
(ಮಾಹಿತಿ ಸೆಲೆ: beyondblighty.com, festivalsallaround.com, winefestivalworldwide)
(ಚಿತ್ರ ಸೆಲೆ: wiki)
ಇತ್ತೀಚಿನ ಅನಿಸಿಕೆಗಳು